Homeಮುಖಪುಟದಲಿತ ರೈತರಿಗೆ ಇಡಿ ಸಮನ್ಸ್‌ ಪ್ರಕರಣ: ನಿರ್ಮಲಾ ಸೀತಾರಾಮನ್‌ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS...

ದಲಿತ ರೈತರಿಗೆ ಇಡಿ ಸಮನ್ಸ್‌ ಪ್ರಕರಣ: ನಿರ್ಮಲಾ ಸೀತಾರಾಮನ್‌ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS ಅಧಿಕಾರಿ ಅಮಾನತು

- Advertisement -
- Advertisement -

ತಮಿಳುನಾಡಿನ ಇಬ್ಬರು ದಲಿತ ರೈತರಿಗೆ ಇಡಿ ಸಮನ್ಸ್‌ ನೀಡಿದ್ದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಜಾಗೊಳಿಸುವಂತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದ ತಮಿಳುನಾಡಿನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿಯನ್ನು ನಿವೃತ್ತಿಗೆ ಒಂದು ದಿನ ಮೊದಲು ಕೇಂದ್ರ ಹಣಕಾಸು ಸಚಿವಾಲಯ ಅಮಾನತುಗೊಳಿಸಿದೆ.

ಮಂಗಳವಾರ ಹೊರಡಿಸಿದ ನೋಟಿಸ್‌ನಲ್ಲಿ, ಸಚಿವಾಲಯವು ಜಿಎಸ್‌ಟಿ ಮತ್ತು ಸೆಂಟ್ರಲ್ ಎಕ್ಸೈಸ್, ಚೆನ್ನೈ (ಉತ್ತರ) ಉಪ ಆಯುಕ್ತ ಬಿ ಬಾಲಮುರುಗನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮತಿಯನ್ನು ಪಡೆಯದೆ ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಕೇಳಿಕೊಂಡಿದೆ.

ಬಾಲಮುರುಗನ್ ಅವರ ಅಮಾನತಿಗೆ ಯಾವುದೇ ಕಾರಣವನ್ನು ನೋಟಿಸ್ ಉಲ್ಲೇಖಿಸಿಲ್ಲವಾದರೂ, ಅವರು  ನಿವೃತ್ತರಾಗುವ ಎರಡು ದಿನಗಳ ಮೊದಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಬಾಲಮುರುಗನ್ ಅವರು ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದ ನಾಲ್ಕು ವಾರಗಳ ನಂತರ ಅಮಾನತು ಆದೇಶ ಹೊರಬಿದ್ದಿದೆ.

2020ರಲ್ಲಿ ತನ್ನ ಸಹೋದ್ಯೋಗಿಗಳು ಹಿಂದಿಯನ್ನು ಹೇರತ್ತಿದ್ದಾರೆ ಎಂದು ಆರೋಪಿಸಿ ಸುದ್ದಿಯಾಗಿದ್ದ ಬಾಲಮುರುಗನ್, ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು.

ಬಿಜೆಪಿ ನಾಯಕನ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದ ದಲಿತ ರೈತರಿಗೆ ಇಡಿ ನೊಟೀಸ್‌ ನೀಡಿರುವುದು ಜಾರಿ ನಿರ್ದೇಶನಾಲಯವು ಹೇಗೆ ಬಿಜೆಪಿಯ ವಿಸ್ತೃತ ಅಂಗವಾಗಿದೆ ಎಂಬುದನ್ನು ತೋರಿಸುತ್ತದೆ. ವಾಸ್ತವವಾಗಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಂಡ ನಂತರ ಜಾರಿ ನಿರ್ದೇಶನಾಲಯವನ್ನು ಬಿಜೆಪಿ ನೀತಿ ಜಾರಿ ನಿರ್ದೇಶನಾಲಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.

ಚೆನ್ನೈನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಉಪ ಆಯುಕ್ತ ಹುದ್ದೆಯಲ್ಲಿದ್ದ ಬಾಲಮುರುಗನ್, ನಿರ್ಮಲಾ ಅವರು ಈಡಿಯನ್ನು ಯಶಸ್ವಿಯಾಗಿ ಬಿಜೆಪಿ ನೀತಿ ಜಾರಿ ನಿರ್ದೇಶನಾಲಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಹೇಳಿದ್ದರು. ನಿರ್ಮಲಾ ಸೀತಾರಾಮನ್‌ ಭಾರತದ ಹಣಕಾಸು ಸಚಿವರಾಗಲು ಅನರ್ಹರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ಮಾತನಾಡಿದ್ದ ಬಾಲಮುರುಗನ್,  ರಾಷ್ಟ್ರಪತಿಗಳಿಗೆ ಪತ್ರ ಕಳುಹಿಸಿರುವುದನ್ನು ದೃಢಪಡಿಸಿದ್ದರು ಮತ್ತು ತಾವು ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದು, ಕೃಷಿಯ ಮೂಲಕ ಬದುಕು ಕಟ್ಟಿಕೊಳ್ಳುವ ಕಷ್ಟಗಳನ್ನು ತಿಳಿದಿದ್ದೇವೆ. ಇಡಿ ಅಧಿಕಾರಿ ಅಂಕಿತ್ ತಿವಾರಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು ವೈಯಕ್ತಿಕ ವಿಚಾರ. ರೈತರಿಗೆ ಸಮನ್ಸ್ ಕಳುಹಿಸುವುದು ವೈಯಕ್ತಿಕ ಕಾರ್ಯವಲ್ಲ. ಒಂದು ಸಂಸ್ಥೆಯನ್ನು ಭ್ರಷ್ಟಗೊಳಿಸಲಾಗುತ್ತಿದೆ. ಇಡಿ ಸಂಸ್ಥೆಗೆ ಹಾನಿಯಾಗಿದೆ ಮತ್ತು ಅದಕ್ಕಾಗಿಯೇ ನಾನು ಕೇಂದ್ರ ಹಣಕಾಸು ಸಚಿವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದೇನೆ. ಈ ಪತ್ರ ಬರೆಯುವುದರಿಂದ ಆಗುವ ದುಷ್ಪರಿಣಾಮಗಳು ನನಗೆ ಗೊತ್ತು, ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದನ್ನು ಎದುರಿಸಲು ನಾನು ಸಿದ್ಧ ಎಂದು ಹೇಳಿದ್ದರು.

ಹಿನ್ನೆಲೆ:

ಸೇಲಂ ಜಿಲ್ಲೆಯ ಬಿಜೆಪಿ ನಾಯಕ ಗುಣಶೇಖರ್ ವಿರುದ್ದ ಜಮೀನು ಕಬಳಿಕೆ ಯತ್ನದ ವಿರುದ್ಧ ದೂರು ನೀಡಿದ್ದ ಅತ್ತೂರಿನ ದಲಿತ ಸಮುದಾಯದ ರೈತರಾದ ಕನ್ನೈಯನ್ ಮತ್ತು ಅವರ ಸಹೋದರ ಕೃಷ್ಣನ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತ್ತು.

ಬರೀ 1,000 ಮಾಸಿಕ ಪಿಂಚಣಿಯಲ್ಲಿ ಜೀವನ ಸಾಗಿಸುವ ದಲಿತ ರೈತರನ್ನು ಇಡಿ ಹಿಂಬಾಲಿಸಿದೆ. ಈ ರೈತರು ಬಿಜೆಪಿಯ ಸೇಲಂ ಪೂರ್ವ ಜಿಲ್ಲಾ ಕಾರ್ಯದರ್ಶಿ ಗುಣಶೇಖರ್ ವಿರುದ್ಧ ಭೂಕಬಳಿಕೆ ಯತ್ನದ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಸಮನ್ಸ್‌ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಮಾತನಾಡಿದ ಕನ್ನಿಯನ್ ಮತ್ತು ಕೃಷ್ಣನ್ ಪರ ವಕೀಲರಾದ ಪರ್ವಿನಾ, ಸಮನ್ಸ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ. ಇಬ್ಬರು ಸಹೋದರರಿಗೆ ಪ್ರಕರಣ ಏನೆಂದು ತಿಳಿದಿಲ್ಲ. ಸಮನ್ಸ್‌ನಲ್ಲಿ ಸರಿಯಾದ ದಾಖಲೆಗಳೊಂದಿಗೆ ‘ಇಡಿ’ ಮುಂದೆ ಹಾಜರಾಗುವಂತೆ ಕೇಳುವುದನ್ನು ಹೊರತುಪಡಿಸಿ ಏನನ್ನೂ ಉಲ್ಲೇಖಿಸಲಾಗಿಲ್ಲ. ಭೂ ಕಬಳಿಕೆ ಆರೋಪಕ್ಕೆ ಪ್ರತಿಯಾಗಿ ಈ ಬೆಳವಣಿಗೆ ನಡೆದಿದೆ ಎಂದು ಹೇಳಿದ್ದರು. ಇದಲ್ಲದೆ ಇಡಿ ಸಮನ್ಸ್‌ನಲ್ಲಿ ರೈತರ ಜಾತಿಯನ್ನು ‘ಹಿಂದೂ ಪಲ್ಲರ್‌ಸ್’ ಎಂದು ಉಲ್ಲೇಖಿಸಿತ್ತು. ಇದು ವ್ಯಾಪಕವಾದ ಆಕ್ರೋಶಕ್ಕೆ ಕಾರಣವಾಗಿತ್ತು.

ಬಾಲಮುರಗನ್ ಅವರ ಪತ್ನಿ ದಲಿತ ಪ್ರವೀಣಾ ಇಬ್ಬರು ರೈತರನ್ನು ಪ್ರತಿನಿಧಿಸುವ ವಕೀಲರಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಬಾಲಮುರುಗನ್ ಅವರು, ಈ ಘಟನೆಯು ಜಾರಿ ನಿರ್ದೇಶನಾಲಯವು ಬಿಜೆಪಿಯ ವಿಸ್ತೃತ ಅಂಗವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.

ಇದನ್ನು ಓದಿ: ಇವಿಎಂ ತಯಾರಿಸುವ BEL ಬೋರ್ಡ್‌ಗೆ ಬಿಜೆಪಿ ನಾಯಕರ ನಾಮನಿರ್ದೇಶನ!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ತರಾಟೆಗೆ ತೆಗದುಕೊಂಡ ಎಕ್ಸ್‌ ಬಳಕೆದಾರರು

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದಲ್ಲಿ ಬಿಜೆಪಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್‌...