Homeಅಂಕಣಗಳುಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್' ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-2)

ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-6; ಭಾಗ-2)

- Advertisement -
- Advertisement -

“ಈಬದಲಾವಣೆ ಸಂಭವಿಸಿದ್ದು ಹೀಗೆ: ನಾನು ಮೇರಿಗೆ ಹೇಗಾದರೂ ಸಹಾಯ ಮಾಡಬೇಕೆಂದು ಆಶಿಸಿದ್ದೆ; ಅವಳಿಗೆ ಸ್ವಲ್ಪ ಹಣವನ್ನ ಕೊಡಲು ಹಂಬಲಿಸುತ್ತಿದ್ದೆ, ಆದರೆ ನಾನಲ್ಲಿದ್ದಾಗ ನನ್ನ ಹತ್ತಿರ ಒಂದು ಬಿಡಿಗಾಸೂ ಇರಲಿಲ್ಲ. ಆದರೂ ನನ್ನ ಹತ್ತಿರ ಒಂದು ವಜ್ರದ ಪಿನ್ ಇತ್ತು, ನಾನದನ್ನು ಒಬ್ಬ ಸಂಚಾರೀ ಕಳ್ಳ ವ್ಯಾಪಾರಿಗೆ ಮಾರಿದೆ; ಅದಕ್ಕೆ ಅವನು ನನಗೆ ಎಂಟು ಫ್ರಾಂಕ್‌ಗಳನ್ನು ಕೊಟ್ಟ. ಅದರ ಬೆಲೆ ಕಮ್ಮಿ ಎಂದರೂ ನಲವತ್ತು ಫ್ರಾಂಕ್ ಇತ್ತು.

“ನಾನು ಮೇರಿಯನ್ನು ಏಕಾಂತವಾಗಿ ಭೇಟಿ ಮಾಡಲು ಬಹಳ ದಿನಗಳಿಂದ ಕಾಯುತ್ತಿದ್ದೆ; ಮತ್ತು ಕೊನೆಗೂ ಅವಳನ್ನು ಹಳ್ಳಿಯಿಂದ ಆಚೆಯಲ್ಲಿದ್ದ ಗುಡ್ಡ ಬೆಟ್ಟಗಳ ಬಳಿ ಭೇಟಿಯಾದೆ. ನಾನವಳಿಗೆ ಎಂಟು ಫ್ರಾಂಕ್ ಕೊಟ್ಟು ಈ ಹಣವನ್ನ ಜೋಪಾನವಾಗಿ ಇಟ್ಟುಕೊ, ಕಾರಣ ನನ್ನ ಕೈಲಿ ಇನ್ನೂ ಹೆಚ್ಚು ಹಣವನ್ನ ಕೊಡಲಾಗುವುದಿಲ್ಲ ಎಂದು ಹೇಳಿದೆ. ನಾನು ಅವಳನ್ನು ಚುಂಬಿಸಿ ಅವಳಿಗೆ ಈ ರೀತಿಯಾಗಿ ಹೇಳಿದೆ; ಈ ರೀತಿ ನಾನು ಅವಳನ್ನು ಚುಂಬಿಸಿದ್ದು ಯಾವುದೇ ರೀತಿಯ ದುಷ್ಟ ಉದ್ದೇಶದಿಂದಲ್ಲ, ಅಥವ ನಿನ್ನ ಬಗ್ಗೆ ನನಗೆ ಅನುರಾಗ ಉಂಟಾಗಿದೆ ಎಂದು ಪರಿಗಣಿಸಬಾರದೆಂದು; ನಾನು ಈ ರೀತಿ ನಡೆದುಕೊಂಡಿದ್ದು ಕೇವಲ ನಿನ್ನ ಬಗ್ಗೆ ನನಗಿದ್ದ ಕರುಣೆಗೋಸ್ಕರ, ಕಾರಣ, ನಿನ್ನನ್ನು ನಾನು ತಪ್ಪಿತಸ್ಥೆ ಅಂತ ಪರಿಗಣಿಸುವುದಕ್ಕಿಂತ ಹೆಚ್ಚಾಗಿ ನೀನೊಬ್ಬಳು ನತದೃಷ್ಟೆ ಎಂದು ಪರಿಗಣಿಸಿದ್ದರಿಂದ ಎಂದು ಹೇಳಿದೆ. ನಾನು ಅವಳನ್ನು ಸಮಾಧಾನಪಡಿಸಲು ಹಂಬಲಿಸಿದೆ, ಮತ್ತು ಹೇಗಾದರೂ ಮಾಡಿ ಅವಳನ್ನ ಪ್ರೋತ್ಸಾಹಿಸಲು ಪ್ರಯತ್ನಪಟ್ಟೆ, ಅವಳಿಗೆ ನೀನೇನೂ ಕೀಳಾದ ವ್ಯಕ್ತಿಯಲ್ಲ ಎಂದು ಮನದಟ್ಟು ಮಾಡಿಸಲು, ಅಂದರೆ ಅವಳ ತಾಯಿ ಮತ್ತು ಬೇರೆಯವರುಗಳು ಶ್ರಮಪಟ್ಟು ನೀನು ಕೀಳು ಎಂದು ಸಾಬೀತು ಮಾಡಲು ಪ್ರಯತ್ನಪಟ್ಟಿದ್ದು ಬರೀ ಹುಸಿ ಪ್ರಯತ್ನ ಎಂದು; ಆದರೆ ಅವಳು ನಾನು ಹೇಳಿದ್ದುದನ್ನ ಅರ್ಥ ಮಾಡಿಕೊಂಡಳೆಂದು ನನಗನಿಸಲಿಲ್ಲ. ಅವಳು ನನ್ನ ಮುಂದೆ ನಿಂತುಕೊಂಡಿದ್ದಳು, ತನ್ನ ಬಗ್ಗೆಯೇ ತಾನು ಅವಮಾನಿತಳಾದವಳಂತೆ ಮತ್ತು ವಿಷಣ್ಣತೆಯಿಂದ ಕೂಡಿದ ಕಣ್ಣುಗಳೊಂದಿಗೆ; ಮತ್ತು ನಾನು ನನ್ನ ಮಾತುಗಳನ್ನ ಮುಗಿಸಿದ ತಕ್ಷಣವೇ ಅವಳು ನನ್ನ ಕೈಗಳನ್ನ ಚುಂಬಿಸಿದಳು. ನಾನೂ ಕೂಡ ಅವಳ ಕೈಗಳನ್ನ ಚುಂಬಿಸಿಬಿಡುತ್ತಿದ್ದೆ, ಆದರೆ ಅವಳು ತತ್‌ಕ್ಷಣದಲ್ಲಿ ತನ್ನ ಕೈಗಳನ್ನ ಹಿಂತೆಗೆದುಕೊಂಡಳು. ತಕ್ಷಣ ಇದೇ ಕ್ಷಣದಲ್ಲಿ ಮಕ್ಕಳ ಒಂದು ದೊಡ್ಡ ಪಡೆಯೇ ನಮ್ಮನ್ನು ನೋಡಿತು. (ನಂತರದಲ್ಲಿ ನನಗೆ ತಿಳಿದಿದ್ದು ಮಕ್ಕಳು ನನ್ನ ಮೇಲೆ ನಿಗಾ ಇಟ್ಟಿದ್ದರು ಎನ್ನುವುದು.) ಮತ್ತು ನಮ್ಮನ್ನು ಅಪಹಾಸ್ಯ ಮಾಡುತ್ತಾ, ಅವರೆಲ್ಲರೂ ವಿಷಲ್ ಹೊಡೆಯಲು ಮತ್ತು ಚಪ್ಪಾಳೆ ಹೊಡೆಯಲು ಶುರುಮಾಡಿದರು. ಮೇರಿ ಒಮ್ಮೆಗೇ ಅಲ್ಲಿಂದ ಓಡಿಹೋದಳು; ಮತ್ತು ನಾನು ಅವರ ಬಳಿ ಮಾತನಾಡಲು ಪ್ರಯತ್ನಿಸಿದಾಗ ಅವರೆಲ್ಲಾ ನನ್ನ ಕಡೆಗೆ ಕಲ್ಲುಗಳನ್ನು ಎಸೆಯಲು ಶುರುಮಾಡಿದರು. ಇಡೀ ಹಳ್ಳಿಗೇ ಈ ಸುದ್ದಿ ಅದೇ ದಿನ ಹರಡಿಬಿಟ್ಟಿತು, ಮತ್ತು ಈಗ ಮೇರಿಯ ಪರಿಸ್ಥಿತಿ ಮೊದಲಿಗಿಂತಲೂ ಕೆಟ್ಟದಾಯಿತು. ಮಕ್ಕಳು ಈಗ ಅವಳನ್ನು ರಸ್ತೆಯಲ್ಲಿ ಓಡಾಡಲು ಬಿಡುತ್ತಿರಲಿಲ್ಲ, ಈಗ ಮೊದಲಿಗಿಂತಲೂ ಹೆಚ್ಚಾಗಿ ಅವಳ ಮೇಲೆ ಕೊಳಕು ಪದಾರ್ಥಗಳನ್ನ ಎಸೆದು ಅವಳನ್ನ ಸಿಟ್ಟಿಗೆಬ್ಬಿಸುತ್ತಿದ್ದರು. ಅವಳನ್ನ ಎಲ್ಲರೂ ಒಟ್ಟಿಗೆ ಓಡಿಸಿಕೊಂಡು ಹೋಗುತ್ತಿದ್ದರು. ಅವಳು ತನ್ನ ದುರ್ಬಲ ಶ್ವಾಸಕೋಶದ ಹೊರತಾಗಿಯೂ ಏದುಸಿರುಬಿಡುತ್ತಾ ಓಡಿಹೋಗುತ್ತಿದ್ದಳು. ಅವರು ಅವಳ ಮೇಲೆ ಎಸೆಯುತ್ತಿದ್ದಾಗ ಅವಳನ್ನು ಹೀನಾಮಾನ ಬೈಯ್ಯುತ್ತಿದ್ದರು.

“ಒಮ್ಮೆ ನಾನು ಬಲವಂತವಾಗಿ ಹಸ್ತಕ್ಷೇಪ ಮಾಡಬೇಕಾಯಿತು; ಮತ್ತು ನಂತರ ನನಗೆ ಸಾಧ್ಯವಾದಾಗಲೆಲ್ಲಾ ಮಕ್ಕಳ ಜೊತೆಯಲ್ಲಿ ಪ್ರತಿ ದಿನ ಮಾತನಾಡಲು ಶುರುಮಾಡಿದೆ. ಒಮ್ಮೊಮ್ಮೆ ಅವರು ನಿಂತು ನನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದರು; ಆದರೂ ಮೊದಲಿನಂತೆಯೇ ಮೇರಿಯನ್ನು ಚುಡಾಯಿಸುತ್ತಿದ್ದರು.

“ನಾನವರಿಗೆ ಮೇರಿ ಎಷ್ಟೊಂದು ಅಸಂತೋಷದಿಂದ ಇದ್ದಾಳೆ ಎನ್ನುವುದನ್ನ ತಿಳಿಸಿದೆ, ಮತ್ತು ಸ್ವಲ್ಪ ಸಮಯದ ನಂತರ ಅವರೆಲ್ಲಾ ಅರಿತುಕೊಂಡು ಅವಳನ್ನ ನಿಂದಿಸುವುದನ್ನ ನಿಲ್ಲಿಸಿದರು, ಮತ್ತು ಅವಳು ಸದ್ದಿಲ್ಲದೇ ಓಡಾಡುವಾಗ ಅಡ್ಡಿಪಡಿಸುತ್ತಿರಲಿಲ್ಲ. ಸ್ವಲ್ಪ ಸ್ವಲ್ಪವೇ ನಾನು ಮತ್ತು ಮಕ್ಕಳು ಪರಸ್ಪರ ಸಂಭಾಷಿಸಲು ಪ್ರಾರಂಭಿಸಿದೆವು. ಅವರಿಂದ ನಾನು ಯಾವುದೇ ವಿಷಯವನ್ನೂ ಮುಚ್ಚಿಡುತ್ತಿರಲಿಲ್ಲ. ನಾನವರಿಗೆ ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದೆ. ಅವರು ನಾನು ಹೇಳುವುದನ್ನೆಲ್ಲಾ ಏಕಾಗ್ರತೆಯಿಂದ ಕೇಳಿಸಿಕೊಳ್ಳುತಿದ್ದರು ಮತ್ತು ಸ್ವಲ್ಪ ಸಮಯದಲ್ಲೇ ಮೇರಿಯ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು. ಕೊನೆಗೂ ಅವರಲ್ಲಿ ಕೆಲವರು, ಅವಳು ಎದುರಿಗೆ ಸಿಕ್ಕಾಗಲೆಲ್ಲಾ ವಿನೀತವಾಗಿ ಗುಡ್ ಮಾರ್ನಿಂಗ್ ಹೇಳಲು ಪ್ರಾರಂಭಿಸಿದರು. ಅಲ್ಲಿನ ಪದ್ಧತಿ ಎಂದರೆ ಪರಿಚಯಸ್ಥರಾಗಲೀ ಬಿಡಲಿ ಭೇಟಿ ಮಾಡಿದಾಗ ಗುಡ್ ಮಾರ್ನಿಂಗ್ ಹೇಳಿ ಸೆಲ್ಯೂಟ್ ಹೊಡೆಯುವುದನ್ನು ಜನರು ರೂಢಿಸಿಕೊಂಡಿದ್ದರು. ಮಕ್ಕಳಲ್ಲಿ ಉಂಟಾದ ಈ ರೀತಿಯ ಬದಲಾವಣೆಯಿಂದ ಮೇರಿಗೆ ಎಷ್ಟು ಆಶ್ಚರ್ಯವಾಗಿದ್ದಿರಬಹುದೆಂದು ನಾನು ಕಲ್ಪಿಸಿಕೊಳ್ಳಬಹುದಿತ್ತು.

“ಒಮ್ಮೆ ಇಬ್ಬರು ಪುಟ್ಟ ಹುಡುಗಿಯರು ಸ್ವಲ್ಪ ಆಹಾರವನ್ನು ಎಲ್ಲಿಂದಲೊ ಪಡೆದು ಅವಳಿಗೆ ತೆಗೆದುಕೊಂಡು ಹೋದ ನಂತರ ನನ್ನ ಬಳಿಗೆ ಬಂದು ನನಗೆ ಹೇಳಿದರು. ತಮ್ಮ ಈ ವಿಶ್ವಾಸದ ನಡೆಯಿಂದ ಭಾವುಕಳಾಗಿ ಅವಳು ಕಣ್ಣೀರಿನ ಕೋಡಿ ಹರಿಸಿದಳೆಂದೂ, ಮತ್ತು ಈಗ ಅವಳನ್ನು ತಾವೆಲ್ಲಾ ಬಹಳಷ್ಟು ಪ್ರೀತಿಸುತ್ತೇವೆ ಎಂದು ಹೇಳಿದ್ದಾಗಿ ಅವರು ಹೇಳಿದರು. ಇದೆಲ್ಲದರ ನಂತರ ಬಲು ಬೇಗನೆ ಅವರೆಲ್ಲರೂ ಮೇರಿಯನ್ನು ಇಷ್ಟಪಡಲು ಶುರುಮಾಡಿದರು, ಅದೇ ಸಮಯದಲ್ಲಿ ಅವರೆಲ್ಲರಿಗೂ ನಾನೂ ಕೂಡ ಅಚ್ಚುಮೆಚ್ಚಿನವನಾದೆ. ಅವರೆಲ್ಲಾ ಆಗಾಗ್ಗೆ ನನ್ನ ಬಳಿಗೆ ಬಂದು ಕಥೆ ಹೇಳೆಂದು ಬೇಡಿಕೊಳ್ಳುತ್ತಿದ್ದರು. ನಾನು ಅವರ ಮನಮುಟ್ಟುವಂತೆ ಕಥೆ ಹೇಳಿದೆನೆಂದು ತೋರುತ್ತದೆ, ಕಾರಣ ಅವರು ನಾನು ಹೇಳುವ ಕಥೆಗಳನ್ನು ಕೇಳಲು ಬಹಳ ಇಷ್ಟಪಡುತಿದ್ದರು. ಕೊನೆಗೂ ನಾನು ಸ್ವಾರಸ್ಯಕರಾದವುಗಳನ್ನು ಈ ಮಕ್ಕಳಿಗೆ ತಲುಪಿಸುವುದಕ್ಕೋಸ್ಕರ ಓದಿಕೊಳ್ಳಲು ಪ್ರಾರಂಭಿಸಿದೆ, ಇದು ನಾನಲ್ಲಿದ್ದ ಉಳಿದ ಸಮಯವೆಲ್ಲಾ ಅಂದರೆ ಮೂರುವರ್ಷಗಳ ಕಾಲ ಮುಂದುವರಿಯಿತು. ನಂತರ ಪ್ರತಿಯೊಬ್ಬರೂ, ಪ್ರೊ ಸ್ಕ್ನೀಡರ್ ಕೂಡ ನಾನು ಮಕ್ಕಳಿಂದ ಏನನ್ನೂ ಮುಚ್ಚಿಡದೇ ಇದ್ದ ಕಾರಣಕ್ಕೆ ಕೋಪಗೊಂಡರು; ಈ ರೀತಿಯ ಅವರ ನಿಲುವುಗಳು ಎಷ್ಟು ಮೂರ್ಖತನದಿಂದ ಕೂಡಿದ್ದು ಎಂದು ಆದರೆ ನಾನು ಅವರೆಲ್ಲರ ಗಮನಕ್ಕೆ ತಂದೆ; ಕಾರಣ ಮಕ್ಕಳಿಗೆ ಎಲ್ಲ ವಿಷಯಗಳೂ ಆಗಲೇ ಹೊರಗಿನ ಅನಧಿಕೃತ ಮೂಲಗಳಿಂದ ತಿಳಿದುಬಿಟ್ಟಿರುತ್ತಿತ್ತು, ಅವರು ಅದನ್ನು ಹೊರಗಿನಿಂದ ಕಲಿಯುತ್ತಿದ್ದ ರೀತಿ ಅವರ ಮನಸ್ಸನ್ನು ಬಗ್ಗಡಗೊಳಿಸುತ್ತಿತ್ತು, ಆದರೆ ನಾನು ಕಲಿಸಿದಾಗ ಆ ರೀತಿ ಆಗುತ್ತಿರಲಿಲ್ಲವೆಂದು. ಇದರಲ್ಲಿನ ಸತ್ಯಾಸತ್ಯತೆಯನ್ನು ಒಪ್ಪಿಕೊಳ್ಳುವುದು ಅವರೆಲ್ಲರೂ ಬಾಲ್ಯವನ್ನ ದೊಡ್ಡವರಾದ ಮೇಲೆ ನೆನಪಿಸಿಕೊಂಡಾಗ ಮಾತ್ರ ಎಂದು. ಆದರೆ ಅವರ್‍ಯಾರಿಗೂ ನಾನು ಹೇಳಿದ್ದು ಮನವರಿಕೆಯಾಗಲಿಲ್ಲ.. ನಾನು ಮೇರಿಯನ್ನು ಚುಂಬಿಸಿದ್ದು ಅವಳ ತಾಯಿ ಅಸುನೀಗಿದ ಎರಡುವಾರದ ಹಿಂದೆ; ಪಾದ್ರಿಯು ತನ್ನ ಧರ್ಮೋಪದೇಶವನ್ನ ಮಾಡಿದಾಗ ಮಕ್ಕಳೆಲ್ಲರೂ ನನ್ನ ಕಡೆಗೆ ಇದ್ದರು.

ಇದನ್ನೂ ಓದಿ: ಫ್ಯೋದರ್ ದಾಸ್ತೋವ್‌ಸ್ಕಿಯವರ ’ದ ಈಡಿಯಟ್’ ಅನುವಾದ; ಶತಮೂರ್ಖ (ಅಧ್ಯಾಯ-5; ಕೊನೆಯ ಭಾಗ)

“ಒಬ್ಬ ಪಾದ್ರಿ ಈ ರೀತಿ ಮಾತನಾಡಿದ್ದು ಆ ಹುದ್ದೆಗೇ ಅವಮಾನಕರ ಎಂದು ನಾನವರಿಗೆ ಹೇಳಿದಾಗ, ಮಕ್ಕಳೆಲ್ಲರಿಗೂ ಆ ಪಾದ್ರಿಯ ಮೇಲೆ ಎಲ್ಲಿಲ್ಲದ ಕೋಪ ಬಂದಿತು. ಅವರಲ್ಲಿ ಕೆಲವರು ಹೊಗಿ ಅವನ ಮನೆಗೆ ಕಲ್ಲೆಸೆದು ಕಿಟಕಿ ಗಾಜುಗಳನ್ನ ಒಡೆದು ಹಾಕಿದರು. ಆದರೆ ಅವರನ್ನ ಮುಂದುವರಿಯದಂತೆ ನಾನೇ ಮಧ್ಯದಲ್ಲೇ ತಡೆದಿದ್ದು, ಅದು ಸರಿಯಾದ ಮಾರ್ಗವಲ್ಲ ಅನ್ನುವ ಕಾರಣವನ್ನು ಅವರಿಗೆ ಮನದಟ್ಟು ಮಾಡಿಸಿದೆ, ಆದರೆ ಇಡೀ ಹಳ್ಳಿಗೆ ಮಕ್ಕಳ ಈ ನಡೆಯ ಬಗ್ಗೆ ತಿಳಿದುಬಿಟ್ಟಿತು. ಆದರೆ ಹಳ್ಳಿಯ ಜನರೆಲ್ಲಾ ಮಕ್ಕಳನ್ನು ಹಾಳು ಮಾಡುತ್ತಿದ್ದೇನೆ ಎಂದು ನನ್ನನ್ನು ದೂಷಿಸಲು ಶುರುಮಾಡಿದರು!

“ಮಕ್ಕಳೆಲ್ಲಾ ಮೇರಿಯನ್ನು ಇಷ್ಟ ಪಡಲು ಶುರುಮಾಡಿದ್ದಾರೆ ಎಂದು ಎಲ್ಲರಿಗೂ ಕಂಡುಕೊಂಡರು. ಮತ್ತು ಅವರ ಪೋಷಕರುಗಳಿಗೆ ಭಯಂಕರವಾಗಿ ಹೆದರಿಕೆಯಾಗಲು ಶುರುವಾಗಿ ಎಚ್ಚೆತ್ತುಕೊಂಡರು. ಆದರೆ ಮೇರಿಗೆ ಮಾತ್ರ ಬಹಳ ಸಂತೋಷವಾಗಿತ್ತು. ಮಕ್ಕಳು ಮೇರಿಯನ್ನು ಭೇಟಿಯಾಗುವುದನ್ನು ನಿಷೇಧಿಸಲಾಯಿತು, ಆದರೆ ಅವರು ಊರಿನಿಂದಾಚೆ ದನ ಮೇಯಿಸುವ ಜಾಗಕ್ಕೆ ಅವಳಿಗೆ ಆಹಾರವನ್ನು ಮತ್ತು ಅವಳಿಗೆ ಬೇಕಾದುದ್ದನ್ನ ಕದ್ದುಮುಚ್ಚಿ ತೆಗೆದುಕೊಂಡುಹೋಗಿ ಕೊಡುತಿದ್ದರು; ಮತ್ತು ಅವರೆಲ್ಲಾ ಅಲ್ಲಿಗೆ ಹೊಗಿ ಅವಳನ್ನು ಚುಂಬಿಸಿ ಹೀಗೆ ಹೇಳುತ್ತಿದ್ದರು: ’ನಾವು ನಿನ್ನನ್ನು ಪ್ರೀತಿಸುತ್ತೇವೆ ಮೇರಿ.’ ಹಾಗೆ ಹೇಳಿ ವಾಪಸ್ಸು ಬೇಗಬೇಗ ಹೆಜ್ಜೆ ಹಾಕುತ್ತಾ ಅವರವರ ಮನೆಗಳಿಗೆ ನಡೆದು ಬರುತ್ತಿದ್ದರು. ನನಗೆ ಮೇರಿಯ ಮೇಲೆ ಪ್ರೀತಿ ಉಂಟಾಗಿದೆ ಎಂದು ಅವರೆಲ್ಲಾ ಕಲ್ಪಿಸಿಕೊಂಡಿದ್ದರು; ಮತ್ತು ಇದೊಂದೇ ವಿಷಯದಲ್ಲಿ ನಾನವರಿಗೆ ಮೋಸಮಾಡಿದ್ದು, ಕಾರಣ ಅವರೆಲ್ಲಾ ಅದರಿಂದ ತುಂಬಾ ಉತ್ಸುಕರಾಗಿ ಸಂತೋಷಪಡುತ್ತಿದ್ದುದರಿಂದ. ಮತ್ತು ಆ ಸಮಯದಲ್ಲಿ ಅದೆಂತಹಾ ಆಶ್ಚರ್ಯಕರವಾದ ಸೂಕ್ಷ್ಮತೆ ಮತ್ತು ಮೃದುತ್ವ ಆ ಪುಟ್ಟ ಮಕ್ಕಳಿಂದ ಹೊರಹೊಮ್ಮುತ್ತಿತ್ತು!

“ಸಂಜೆಯ ವೇಳೆ ನಾನು ಜಲಪಾತದ ಬಳಿಗೆ ನಡೆದುಹೋಗುತ್ತಿದ್ದೆ. ಹೊರಗಿನಿಂದ ಕಾಣದಂತಹ ದೊಡ್ಡ ಮರಗಳಿಂದ ಮರೆಯಾಗಿರುವ ಜಾಗವೊಂದು ಅಲ್ಲಿತ್ತು. ಮಕ್ಕಳು ನನ್ನನ್ನು ನೋಡಲು ಈ ಜಾಗಕ್ಕೆ ಬರುವುದು ವಾಡಿಕೆಯಾಗಿತ್ತು. ಅವರ ಪ್ರೀತಿಯ ಗುರು ಕಾಲಿಗೆ ಪಾದರಕ್ಷೆ ಇಲ್ಲದ, ಚಿಂದಿ ಬಟ್ಟೆಯನ್ನು ಧರಿಸಿದ್ದ ಒಬ್ಬಳು ಬಡ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆಂಬುದನ್ನು ಅವರಿಗೆ ಅರಗಿಸಿಕೊಳ್ಳಲಾಗಿರಲಿಲ್ಲ. ಅಂದರೆ, ನೀವು ನಂಬುತ್ತೀರೊ ಇಲ್ಲವೊ, ಅವರೆಲ್ಲಾ ನಿಜವಾಗಲೂ ಹಣವನ್ನ ಅದು ಹೇಗೊ ಸಂಗ್ರಹಿಸಿ, ಅವಳಿಗೆ ಶೂ ಮತ್ತು ಸ್ಟಾಕಿಂಗ್‌ಅನ್ನು ಕೊಂಡುತಂದರು, ಮತ್ತು ಕೆಲವು ಉಡುಪುಗಳನ್ನೂ ಕೂಡ! ನನಗೆ ಅವರದನ್ನೆಲ್ಲಾ ಹೇಗೆ ವ್ಯವಸ್ಥೆ ಮಾಡಿದರು ಅನ್ನುವುದನ್ನು ಅರ್ಥಮಾಡಿಕೊಳ್ಳಲು ಆಗಲೇ ಇಲ್ಲ. ಆದರೆ ಅವರು ಒಟ್ಟಿಗೆ ಸೇರಿ ಅದನ್ನು ನೆರವೇರಿಸಿದ್ದರು. ನಾನವರನ್ನು ಅದರ ಬಗ್ಗೆ ಕೇಳಿದಾಗ ಅವರು ಗಹಗಹಿಸಿ ಜೋರಾಗಿ ನಕ್ಕುಬಿಟ್ಟರು, ಮತ್ತು ಪುಟ್ಟ ಹುಡುಗಿಯರು ಚಪ್ಪಾಳೆ ತಟ್ಟುತ್ತಾ ನನ್ನನ್ನು ಚುಂಬಿಸಿದರು. ನಾನು ಒಮ್ಮೊಮ್ಮೆ ರಹಸ್ಯವಾಗಿ ಮೇರಿಯನ್ನ ನೋಡಲು ಹೋಗುತ್ತಿದ್ದೆ ಕೂಡ. ಅವಳ ಆರೋಗ್ಯ ಈಗ ಬಹಳವಾಗಿ ಹದಗೆಟ್ಟಿತ್ತು, ಮತ್ತು ಅವಳಿಗೆ ನಡೆಯಲೂ ಕೂಡ ಕಷ್ಟಕರವಾಗುತ್ತಿತ್ತು. ಆದರೂ ಅವಳು ದನ ಕಾಯುವವನಿಗೆ ಸಹಾಯ ಮಾಡಲು ಹೋಗುತ್ತಿದ್ದಳು. ಆದರೆ ಈಗ ಅವನಿಗೆ ಸಹಾಯ ಮಾಡಲು ಅವಳ ಕೈಲಿ ಆಗುತ್ತಲೇ ಇರಲಿಲ್ಲ. ಅವಳು ಅಲ್ಲಿ ಒಂದು ಬಂಡೆಕಲ್ಲಿನ ಮೇಲೆ ಇಡೀ ದಿನ ಸುಮ್ಮನೆ ಅಲುಗಾಡದೇ ದನಗಳು ಮನೆಗೆ ಹೋಗುವವರೆಗೂ ಕುಳಿತಿರುತ್ತಿದ್ದಳು. ಅವಳ ಕ್ಷಯರೋಗ ವಿಪರೀತಕ್ಕೆ ಹೋಗಿತ್ತು, ಬಹಳವಾಗಿ ದುರ್ಬಲಗೊಂಡಿದ್ದಳು, ಕಣ್ಣು ಮುಚ್ಚಿಕೊಂಡೇ ಜೋರಾಗಿ ಉಸಿರಾಡುತ್ತಾ ಕುಳಿತಿರುತ್ತಿದ್ದಳು. ಅವಳ ಮುಖ ಈಗ ಅಸ್ಥಿಪಂಜರದಷ್ಟು ತೆಳ್ಳಗಾಗಿತ್ತು, ಮತ್ತು ದೊಡ್ಡದೊಡ್ಡ ಬೆವರಿನ ಹನಿಗಳು ಅವಳ ಬಿಳಿಯ ಹುಬ್ಬಿನ ಮೇಲೆ ಕುಳಿತಿರುತ್ತಿದ್ದವು. ನಾನು ಹೋದಾಗಲೆಲ್ಲಾ ಅವಳು ಇದೇ ರೀತಿ ಕುಳಿರುವುದನ್ನ ಕಾಣುತ್ತಿದ್ದೆ. ನಾನು ಸದ್ದು ಮಾಡದೇ ಅವಳನ್ನು ನೋಡಲು ಹೋಗುತ್ತಿದ್ದೆ, ಆದರೆ ಮೇರಿಗೆ ನಾನು ಬಂದಿದ್ದು ಗೊತ್ತಾಗಿಬಿಡುತ್ತಿತ್ತು, ಅವಳು ತನ್ನ ಕಣ್ಣುಗಳನ್ನು ತೆರೆಯುತ್ತಿದ್ದಳು, ನನ್ನ ಕೈಗಳನ್ನು ಚುಂಬಿಸುವಾಗ ಘೋರವಾಗಿ ನಡುಗುತ್ತಿದ್ದಳು. ನಾನು ನನ್ನ ಕೈಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ, ಕಾರಣ ಅವಳಿಗೆ ಅದನ್ನ ಹಿಡಿದುಕೊಂಡಿರುವುದರಿಂದ ಸಂತೋಷ ಉಂಟಾಗುತ್ತಿತ್ತು. ಮತ್ತು ಅವಳು ಕುಳಿತುಕೊಂಡಲ್ಲೇ ಸದ್ದಿಲ್ಲದೇ ಅಳುತ್ತಿದ್ದಳು. ಕೆಲವು ಬಾರಿ ಮಾತನಾಡಲು ಪ್ರಯತ್ನಿಸುವಳು; ಆದರೆ ಅವಳ ಮಾತನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟಕರವಾಗುತ್ತಿತ್ತು. ಅವಳು ಬಹುತೇಕ ನಾನು ಬಂದಾಗಲೆಲ್ಲ ಉತ್ಸಾಹ ಮತ್ತು ಭಾವಪರವಷತೆಯಿಂದ ಒಬ್ಬಳು ಹುಚ್ಚಿಯು ಆಡುವಂತೆ ಅಡುತ್ತಿದ್ದಳು. ಒಮ್ಮೊಮ್ಮೆ ನನ್ನ ಜೊತೆಯಲ್ಲಿ ಮಕ್ಕಳೂ ಬರುತ್ತಿದ್ದರು; ಮತ್ತು ಅವರು ಬಂದಾಗಲೆಲ್ಲಾ ಸ್ವಲ್ಪ ದೂರದಲ್ಲಿ ನಿಂತು ನಮ್ಮಿಬ್ಬರನ್ನೂ ಯಾರಾದರೂ ಬಂದು ನೋಡಬಹುದೆಂದು ಕಾವಲು ಕಾಯುತ್ತಿದ್ದರು. ಅವರಿಗೆ ಇದು ಬಹಳ ಖುಷಿಕೊಡುವ ಕೆಲಸವಾಗಿತ್ತು.

“ನಾವವಳನ್ನ ಬಿಟ್ಟು ಹೋದಾಗ, ಮೇರಿ ತಕ್ಷಣ ಅವಳು ಮೊದಲಿದ್ದ ಹೀನಾಯ ಪರಿಸ್ಥಿಗೆ ಮರಳಿಬಿಡುತ್ತಿದ್ದಳು, ಮತ್ತು ಕಣ್ಣುಮುಚ್ಚಿಕೊಂಡು ಕೈಕಾಲುಗಳನ್ನ ಅಳ್ಳಾಡಿಸದೇ ಕುಳಿತುಬಿಡುತ್ತಿದ್ದಳು. ಒಂದು ದಿನ ಅವಳಿಗೆ ಎದ್ದು ಹೊರಗೆ ಹೋಗಲು ಆಗಲೇ ಇಲ್ಲ, ಒಬ್ಬಳೇ ತನ್ನ ಖಾಲಿ ಗುಡಿಸಿನಲ್ಲೇ ಇದ್ದಳು; ಮಕ್ಕಳು ತಕ್ಷಣದಲ್ಲೇ ಇದನ್ನ ಅರಿತರು, ಅಂದು ಅವಳು ಹಾಸಿಗೆಯಲ್ಲೇ ಶೋಚನೀಯವಾಗಿ ಮತ್ತು ಅಸಾಹಯಕಳಾಗಿ ಮಲಗಿಕೊಂಡಿರುವಾಗ ಅವರೆಲ್ಲರೂ ಅವಳ ಗುಡಿಸಿಲಿಗೆ ಭೇಟಿಕೊಟ್ಟರು.

“ಎರಡು ದಿನಗಳ ಕಾಲ ಮಕ್ಕಳು ಅವಳನ್ನು ನೋಡಿಕೊಂಡರು, ಮತ್ತು ಹಳ್ಳಿಯ ಜನರಿಗೆಲ್ಲಾ ಮೇರಿ ನಿಜವಾಗಲೂ ಸಾಯುತ್ತಿದ್ದಾಳೆ ಎನ್ನುವುದು ತಿಳಿದಾಗ, ವಯಸ್ಸಾದ ಹೆಂಗಸರುಗಳು ಸರದಿ ಪ್ರಕಾರ ಬಂದು ಅವಳ ಪಕ್ಕದಲ್ಲಿ ಕುಳಿತಿದ್ದು ಅವಳನ್ನ ನೋಡಿಕೊಳ್ಳುತ್ತಿದ್ದರು. ಮತ್ತು ಅವಳ ಬಗ್ಗೆ ಅವರೆಲ್ಲರೂ ಕೂಡ ಕೊನೆಗೂ ವ್ಯಥೆಪಡಲು ಶುರುಮಾಡಿದ್ದರು; ಈ ಎಲ್ಲಾ ಸಂದರ್ಭಗಳಲ್ಲೂ ಅವರು ಅವಳ ವಿಷಯದಲ್ಲಿನ ಮಕ್ಕಳ ನಡವಳಿಕೆಗಳಿಗೆ ಅಡ್ಡಿಪಡಿಸಲಿಲ್ಲ.

“ಒಂದು ರೀತಿಯ ಪ್ರತಿಕೂಲವಾದ ಚಿತ್ತಭ್ರಮೆಯಲ್ಲಿಯೇ ಮೇರಿ ಇಡೀ ಸಮಯ ಇದ್ದಳು; ಅವಳು ಪದೇಪದೇ ಘೋರವಾಗಿ ಕೆಮ್ಮುತ್ತಲೇ ಇದ್ದಳು. ವಯಸ್ಸಾದ ಹೆಂಗಸರು ಮಕ್ಕಳನ್ನು ರೂಮಿನಲ್ಲಿ ಇರಲು ಬಿಡಲಿಲ್ಲ; ಆದರೆ ಅವರೆಲ್ಲಾ ಪ್ರತಿ ಬೆಳಿಗ್ಗೆಯೂ ಆಚೆ ಕಡೆಯಲ್ಲಿನ ಕಿಟಕಿಯ ಪಕ್ಕದಲ್ಲಿ ಬಂದು ಸೇರುತ್ತಿದ್ದರು, ಅದೂ ಒಂದು ಕ್ಷಣಮಾತ್ರ, ’ನಮ್ಮ ಮೇರಿಗೆ ಒಳ್ಳೆಯದಾಗಲಿ’ ಎಂದು ಕೂಗಿಕೊಳ್ಳುತ್ತಿದ್ದರು. ಮತ್ತು ಮೇರಿ ಅದನ್ನ ಕೇಳಿಸಿಕೊಂಡಾಗ, ವಯಸ್ಸಾದ ಹೆಂಗಸರು ಇದ್ದರೂ ಕೂಡ, ತಕ್ಷಣ ಮೆಲ್ಲಗೆ ಕುಳಿತುಕೊಂಡು ಕಿಟಕಿಯಿಂದಾಚೆ ನೋಡಲು ಪ್ರಯತ್ನಿಸುತ್ತಿದ್ದಳು, ಮಕ್ಕಳ ಮಾತುಗಳನ್ನ ಕೇಳಿ ಹರ್ಷಚಿತ್ತಳಾಗುತ್ತಿದ್ದಳು, ಮತ್ತು ಧನ್ಯವಾದಗಳನ್ನ ಹೇಳುವ ರೀತಿಯಲ್ಲಿ ತಲೆಯನ್ನಲ್ಲಾಡಿಸುತ್ತಿದ್ದಳು. ಪುಟ್ಟ ಮಕ್ಕಳು ಸಿಹಿ ತಿನಿಸುಗಳನ್ನ ಮತ್ತು ಇತರ ಒಳ್ಳೆಯ ಖಾದ್ಯಗಳನ್ನು ಅವಳು ತಿನ್ನಲೆಂದು ಅವಳಿಗೆ ತರುತ್ತಿದ್ದರು, ಆದರೆ ಅವಳಿಗೆ ಏನನ್ನೂ ತಿನ್ನಲು ಆಗುತ್ತಿರಲಿಲ್ಲ. ಆ ಮಕ್ಕಳಿಗೆ ಖಂಡಿತವಾಗಿ ಕೃತಜ್ಞತೆಯನ್ನ ಸಲ್ಲಿಸಲೇಬೇಕು, ಏಕೆಂದರೆ ಆ ಮಕ್ಕಳ ಕಾರಣದಿಂದಲೇ ಆ ಹುಡುಗಿ ಸಾಯುವ ಸಮಯದಲ್ಲಿ ಸ್ವಲ್ಪವಾದರೂ ಸಂತೋಷದಿಂದ ಇದ್ದದ್ದು. ಅವಳು ಬಹುತೇಕ ತನ್ನ ಎಲ್ಲಾ ದುಃಸ್ಥಿತಿಯನ್ನೂ ಮರೆತುಬಿಟ್ಟಿದ್ದಳು, ಮತ್ತು ಅವಳ ಅಪರಾಧsವೊಂದಕ್ಕೆ ಸಿಕ್ಕ ಕ್ಷಮಾದಾನದ ಸಂಕೇತ ಅನ್ನುವ ರೀತಿಯಲ್ಲಿ ಅವರೆಲ್ಲರ ಪ್ರೀತಿಯನ್ನು ಸ್ವೀಕರಿಸಿದಳು, ಆದರೂ ಕೂಡ ತಾನೊಬ್ಬಳು ಘೋರವಾದ ಪಾಪಿ ಎಂದು ಪರಿಗಣಿಸುವುದನ್ನು ಅವಳು ನಿಲ್ಲಿಸಲೇ ಇಲ್ಲ. ಅವರೆಲ್ಲಾ ಕಿಟಿಕಿಯ ಬಳಿ ಸಣ್ಣ ಹಕ್ಕಿಗಳು ಪಟಪಟನೆ ಹಾರಾಡುವ ರೀತಿ ಓಡಾಡುತ್ತಿದ್ದರು. ಅವರು ಯಾವಾಗಲೂ ಕೂಗುತ್ತಿದ್ದದ್ದು ’ನಾವು ನಿನ್ನನ್ನು ಪ್ರೀತಿಸುತ್ತೇವೆ ಮೇರಿ!’ ಎಂದು.

“ಅವಳು ಬಹಳ ಬೇಗನೆ ಸತ್ತು ಹೋದಳು; ನಾನಂದುಕೊಂಡಿದ್ದು ಅವಳು ಇನ್ನೂ ಹೆಚ್ಚು ದಿನ ಬದುಕಬಹುದೆಂದು. ಅವಳು ಸಾಯುವ ಹಿಂದಿನ ದಿನ ಅವಳನ್ನು ಕೊನೆಯ ಬಾರಿಗೆ ನೋಡಲು ನಾನು ಹೋಗಿದ್ದೆ, ಸೂರ್ಯ ಮುಳುಗುವುದಕ್ಕಿಂತ ಸ್ವಲ್ಪ ಮುಂಚೆಯೇ. ನನಗನ್ನಿಸಿದ್ದು ಅವಳು ನನ್ನನ್ನು ಗುರುತಿಸಿದಳು ಎಂದು, ಕಾರಣ ಅವಳು ನನ್ನ ಕೈಗಳನ್ನು ಒತ್ತಿದಳು.”

ಕೆ. ಶ್ರೀನಾಥ್

ಕೆ. ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವ್‌ಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...