2021-22 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪಿಯು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಏಪ್ರಿಲ್ 16 ರಿಂದ ಮೇ 4 ರ ವರೆಗೆ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಪಿಯು ಬೋರ್ಡ್ ನಿರ್ಧರಿಸಿದೆ.
ಪಿಯುಸಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಫೆ.1ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು [email protected] ಇ-ಮೇಲ್‌ಗೆ ಕಳುಹಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಅದೇ ರೀತಿ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾ.14 ರಿಂದ 25ರ ವರೆಗೆ ನಡೆಸಲಾಗುವುದು. ಜಿಲ್ಲಾ ಉಪ ನಿರ್ದೇಶಕರ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷೆ ನಡೆಸಬೇಕು ಎಂದು ಇಲಾಖೆ ಸೂಚಿಸಿದೆ. ಫೆ.17ರಿಂದ ಮಾ.25ರ ವರೆಗೆ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ಪ್ರಕಟಿಸಿದೆ.
ಇನ್ನು ಮಾ.28 ರಿಂದ ಏ.13ರ ವರೆಗೆ ಪ್ರಥಮ ಪಿಯು ವಾರ್ಷಿಕ ಪರೀಕ್ಷೆ ನಡೆಸುವಂತೆ ಪಿಯು ಇಲಾಖೆ ನಿರ್ದೇಶಕಿ ಆರ್.ಸ್ನೇಹಲ್ ಆದೇಶಿಸಿದ್ದಾರೆ.
ಇದನ್ನೂ ಓದಿ: ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ’ಜೈ ಭೀಮ್’ ದೃಶ್ಯಗಳು: ಅತ್ಯುನ್ನತ ಗೌರವ ಎಂದ ತಂಡ
2021-22ನೇ ಸಾಲಿನಲ್ಲಿ ಭಾಷಾ ವಿಷಯದಲ್ಲಿ ಕಡಿತಗೊಳಿಸಿರುವ ಶೇ.30 ರಷ್ಟು ಪಠ್ಯಕ್ರಮವನ್ನು ಹೊರತುಪಡಿಸಿ ಉಳಿದ ಶೇ.70 ರಷ್ಟು ಪಠ್ಯಕ್ರಮಕ್ಕೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪಿಯು ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ಐಚ್ಛಿಕ ವಿಷಯಗಳ ಪಠ್ಯಕ್ರಮದಲ್ಲಿ ಯಾವುದೇ ಕಡಿತವಿಲ್ಲದೆ ಶೇ.100 ರಷ್ಟು ಪಠ್ಯಕ್ರಮಕ್ಕೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಐಚ್ಛಿಕ ವಿಷಯಗಳಲ್ಲಿ ಪ್ರಶ್ನೆಪತ್ರಿಕೆ ತಯಾರಿಸುವ ವೇಳೆ ಹೆಚ್ಚು ಸಂಖ್ಯೆಯಲ್ಲಿ ಆಯ್ಕೆ ಪ್ರಶ್ನೆಗಳನ್ನು ನೀಡಿ ವಿದ್ಯಾರ್ಥಿಗಳು ತಮಗೆ ತಿಳಿದಿರುವ ಪ್ರಶ್ನೆಗಳನ್ನು ಆರಿಸಿಕೊಂಡು ಉತ್ತರಿಸುವ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸುಗಳ ದಾಖಲಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಹಿತದೃಷ್ಟಿಯಿಂದ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿತ್ತು. ಅದರಂತೆಯೇ ಜಿಲ್ಲಾ ಉಪ ನಿರ್ದೇಶಕರ ನೇತೃತ್ವದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ, ಪರೀಕ್ಷೆ ನಡೆಸಲಾಗುತ್ತಿದೆ.
II PUC ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ
ಏಪ್ರಿಲ್ 16 – ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
ಏಪ್ರಿಲ್ 18 – ರಾಜ್ಯಶಾಸ್ತ್ರ, ಸಂಖ್ಯಾ ಶಾಸ್ತ್ರ
ಏಪ್ರಿಲ್ 19 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋ ಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್
ಏಪ್ರಿಲ್ 20 – ಇತಿಹಾಸ, ಭೌತಶಾಸ್ತ್ರ
ಏಪ್ರಿಲ್ 21 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್
ಏಪ್ರಿಲ್ 22 – ತರ್ಕಶಾಸ್ತ್ರ, ಬಿಸಿನೆಸ್ ಸ್ಟಡೀಸ್
ಏಪ್ರಿಲ್ 23 – ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ
ಏಪ್ರಿಲ್ 25 – ಅರ್ಥಶಾಸ್ತ್ರ
ಏಪ್ರಿಲ್ 26 – ಹಿಂದಿ
ಏಪ್ರಿಲ್ 28 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಭೂವಿಜ್ಞಾನ, ಗೃಹ ವಿಜ್ಞಾನ
ಏಪ್ರಿಲ್ 29 – ಕನ್ನಡ
ಏಪ್ರಿಲ್ 30 – ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 2 – ಭೂಗೋಳ, ಜೀವಶಾಸ್ತ್ರ
ಮೇ 4 – ಇಂಗ್ಲಿಷ್
ಇದನ್ನೂ ಓದಿ: ಉಡುಪಿ: ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಇನ್ನೂ ಪ್ರವೇಶ ನೀಡದ ಕಾಲೇಜು
ಕೊರೊನಾ ಸಾಂಕ್ರಾಮಿಕದಿಂದ ಶೈಕ್ಷಣಿಕ ವರ್ಷದಲ್ಲಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷಾ ವೇಳಾಪಟ್ಟಿ ಹಿಂದೆ- ಮುಂದೆಯಾಗಿವೆ. ಈ ಪ್ರಕಾರ ಮಾ.28 ರಿಂದ ಏ.11ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಬಳಿಕ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ.