Homeಮುಖಪುಟಕುಂದಗೋಳ, ಚಿಂಚೋಳಿ: ಉಪಚುನಾವಣೆಯ ಉದ್ದಗಲಕ್ಕೂ ಹೊಸ ಸರ್ಕಾರದ ಜಪ!

ಕುಂದಗೋಳ, ಚಿಂಚೋಳಿ: ಉಪಚುನಾವಣೆಯ ಉದ್ದಗಲಕ್ಕೂ ಹೊಸ ಸರ್ಕಾರದ ಜಪ!

ಉಪ ಚುನಾವಣೆಗಳು ಎರಡು ಮಹಾಸಮರಗಳಾಗಿ ಪರಿವರ್ತನೆಗೊಂಡಿವೆ.. ಎರಡು ಸೀಟು ಉಳಿಸಿಕೊಳ್ಳಲು ಮೈತ್ರಿ ಬಣ, ಎರಡು ಜಾಕ್‍ಪಾಟ್ ಹೊಡೆದು, ಆಪರೇಷನ್ ಕಮಲ ತೀವ್ರಗೊಳಿಸಲು ಬಿಜೆಪಿ ಸ್ಪರ್ಧೆಗೆ ಬಿದ್ದಿವೆ.

- Advertisement -
- Advertisement -

|ಪಿ.ಕೆ. ಮಲ್ಲನಗೌಡರ್| 

ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರವನ್ನೆಂದೂ ನೋಡದ, ಬಿಸಿಲ ಬೆಂಗಾಡು ಚಿಂಚೋಳಿಯ ಒಳ ಪ್ರದೇಶಗಳನ್ನೆಂದೂ ಕಂಡಿರದ ರಾಜ್ಯದ ಇತರೆ ಭಾಗದ ರಾಜಕೀಯ ನಾಯಕರೆಲ್ಲ ಈ ಎರಡೂ ಕ್ಷೇತ್ರಗಳಲ್ಲಿ ಟೆಂಟು ಹೊಡೆದಿದ್ದಾರೆ.

ಇವೆರಡು ಚುನಾವಣೆಗಳಿಗೆ ಚುನಾವಣಾ ಆಯೋಗ ಅಧಿಕೃತವಾಗಿ ಉಪ ಚುನಾವಣೆಗಳು ಎಂದಿರಬಹುದು, ಆದರೆ ಈಗವು ಎರಡು ಮಹಾಸಮರಗಳಾಗಿ ಪರಿವರ್ತನೆಗೊಂಡಿವೆ.. ಎರಡು ಸೀಟು ಉಳಿಸಿಕೊಳ್ಳಲು ಮೈತ್ರಿ ಬಣ, ಎರಡು ಜಾಕ್‍ಪಾಟ್ ಹೊಡೆದು, ಆಪರೇಷನ್ ಕಮಲ ತೀವ್ರಗೊಳಿಸಲು ಬಿಜೆಪಿ ಸ್ಪರ್ಧೆಗೆ ಬಿದ್ದಿವೆ.

ಇಲ್ಲಿ ನೆರೆಯುತ್ತಿರುವ ಮೂರೂ ಪಕ್ಷಗಳ ನಾಯಕರು, ಅವರ ಟೀಕೆಗಳು, ಬೈಗುಳಗಳನ್ನು ನೋಡಿದಾಗ, ಇಲ್ಲಿ ಸರ್ಕಾರ ಉಳಿಸಿಕೊಳ್ಳುವ ಮತ್ತು ಕೆಡವುವ ಆಟದಲ್ಲಿ ಈ ಎರಡು ಹಿಂದುಳಿದ ಕ್ಷೇತ್ರಗಳ ನೈಜ ಸಮಸ್ಯೆಗಳೇ ಹಿಂದಕ್ಕೆ ಸರಿದು ಬಿಟ್ಟಿವೆ. ಎರಡೂ ಕ್ಷೇತ್ರಗಳಲ್ಲೂ ತೀವ್ರ ಬರವಿದೆ, ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದೆಲ್ಲದಕ್ಕೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ನೀಡುವುದಿರಲಿ, ಆ ಕುರಿತ ಮಾತೇ ಇಲ್ಲ!

ಕುಸುಮಾ ಶಿವಳ್ಳಿ

ಮೇ 3ರಂದು ಕುಂದಗೋಳದ ಸಂಶಿಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಎಲ್ಲ ರಾಜ್ಯ ನಾಯಕರನ್ನು ಈ ಸಭೆಗೆ ಸೇರಿಸಿತ್ತು. ಕುರುಬರು ಅಧಿಕ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಸಭೆ ನಡೆಯಿತು. ಕುಂದಗೋಳದ ಉಸ್ತುವಾರಿ ಹೊತ್ತಿರುವ ಡಿ. ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್, ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್. ಕೆ. ಪಾಟೀಲ್, ವಿನಯ ಕುಲಕರ್ಣಿ, ಆರ್‍ಬಿ. ತಿಮ್ಮಾಪುರ…. ಹೀಗೆ ದಂಡೇ ನೆರೆದಿತ್ತು. ನಂತರ ಡಿಕೆ ಶಿವಕುಮಾರ್ ಇಲ್ಲೇ ಠಿಕಾಣಿ ಹೂಡಿದರು. ಜೆಡಿಎಸ್‍ನ ಬಸವರಾಜ ಹೊರಟ್ಟಿ, ಕೋನರೆಡ್ಡಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಗೆಲುವಿಗಾಗಿ ಸಕ್ರಿಯರಾಗಿದ್ದಾರೆ. ಇದೆಲ್ಲದರ ಜೊತೆಗೆ ಮಡಿಕೇರಿ ರೆಸಾರ್ಟ್ ವಿಶ್ರಾಮ ಮುಗಿಸಿ, ಮುಂದಿನ ರಾಜಕೀಯ ನಡೆ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕುಸುಮಾ ಶಿವಳ್ಳಿ ಪರ ಪ್ರಚಾರ ಮಾಡಿದ್ದಾರೆ.

ಅತ್ತ ಕಡೆ ಬಿಜೆಪಿಯಂತೂ ತನ್ನೆಲ್ಲ ನಾಯಕರನ್ನೂ ಇಲ್ಲಿಗೆ ತಂದಿದೆ, ತರುತ್ತಿದೆ. ತಮ್ಮ ಖಾಸಾ ಬೀಗ ಎಸ್.ಐ ಚಿಕ್ಕನಗೌಡರೇ ಅಭ್ಯರ್ಥಿಯಾದ್ದರಿಂದ ಯಡಿಯೂರಪ್ಪರಿಗೂ ಇದು ಪ್ರತಿಷ್ಠೆಯ ಹೋರಾಟ. ಅದಕ್ಕಿಂತ ಮುಖ್ಯವಾಗಿ ಅವರಿಗೆ ಶಾಸಕರ ಸಂಖ್ಯೆಯಲ್ಲಿ ಒಂದಂಕಿ ಹೆಚ್ಚಿದರೂ ಅದು ಸಾಧನೆಯೇ. ಏಕೆಂದರೆ 30-60 ಕೋಟಿ ಖರ್ಚು ಮಾಡಲು ರೆಡಿಯಿದ್ದರೂ, ಉಮೇಶ ಜಾಧವ್ ಹೊರತಾಗಿ ಯಾರೂ ಬರದೇ ಇದ್ದುದನ್ನು ನೋಡಿ ಹಲುಬಿರುವ ಅವರು, ಅದಕ್ಕೂ ಹೆಚ್ಚು ಹಣವನ್ನು ಕುಂದಗೋಳ ಮತ್ತು ಚಿಂಚೋಳಿ ಚುನಾವಣೆಗಳಲ್ಲಿ ಹರಿಸಿ ಪ್ಲಸ್ 2 ಮಾಡಿಕೊಳ್ಳಲು ಹೆಣಗುತ್ತಿದ್ದಾರೆ. ಈಶ್ವರಪ್ಪ, ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಧಾರವಾಡದ ಎಲ್ಲ ಬಿಜೆಪಿ ಶಾಸಕರು ಒಂದಿಲ್ಲೊಂದು ದಿನ ಇಲ್ಲಿ ಪ್ರಚಾರ ಮಾಡುತ್ತಲೇ ಇದ್ದಾರೆ.

ಇಲ್ಲಿ ಕ್ರಮವಾಗಿ ಕುರುಬರು, ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ಜಾಸ್ತಿಯಿವೆ. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಕ್ಷೇತ್ರದ ಹೊಣೆಯನ್ನು ಡಿಕೆ ಶಿವಕುಮಾರ್‍ಗೆ ವಹಿಸಲಾಗಿದ್ದು, ಕುರುಬ ಸಮುದಾಯದ ಶಾಸಕ ಎಂ.ಟಿ.ಬಿ ನಾಗರಾಜ್, ಲಿಂಗಾಯತ ಸಚಿವರಾದ ಎಂ.ಬಿ. ಪಾಟೀಲ, ಶಿವಾನಂದ ಪಾಟೀಲರಿಗೂ ಜವಾಬ್ದಾರಿ ನೀಡಲಾಗಿದ್ದು, ವಿನಯ ಕುಲಕರ್ಣಿ ಜೊತೆಗೆ ಜೆಡಿಎಸ್‍ನ ಹೊರಟ್ಟಿ, ಕೋನರೆಡ್ಡಿ ಸಹಿತ ಹುಬ್ಬಳ್ಳಿ ಧಾರವಾಡದ ನಾಯಕರು ಕುಸುಮಾ ಶಿವಳ್ಳಿ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಡಿಕೆಶಿ ಕೇಂದ್ರೀತ!
ಇಲ್ಲಿ ಡಿ.ಕೆ. ಶಿವಕುಮಾರ್‍ಗೆ ಉಸ್ತುವಾರಿ ನೀಡಿದ ಪರಿಣಾಮ ಅವರು ತುಂಬ ಗಂಭೀರವಾಗಿ ತೊಡಗಿಕೊಂಡಿದ್ದಾರೆ. ಕೆಲ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿಯವರು ‘ಧಮ್ಕಿ’ ಹಾಕಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಫೋನೆತ್ತಿಕೊಂಡ ಡಿಕೆಶಿ ಬಿಜೆಪಿಯ ಅನೂಪ್ ಎಂಬ ಯುವ ಮೋರ್ಚ ಕಾರ್ಯದರ್ಶಿಗೆ ಫೋನಾಯಿಸಿ ಅವಾಜ್ ಕೂಡ ಹಾಕಿದ್ದಾರೆ. ಊರೂರು ತಿರುಗಿ ಪ್ರಚಾರ ಮಾಡುತ್ತಿರುವ ಅವರು, ಒಂದೆರಡು ಕಡೆ ಶಿವಳ್ಳಿಯವರನ್ನು ನೆನೆದು ಅತ್ತೂ ಬಿಟ್ಟಿದ್ದಾರೆ. ಈ ನಡುವೆ ಕಾಂಗ್ರೆಸ್‍ನಲ್ಲಿದ್ದ ಭಿನ್ನಮತವನ್ನು ಶಮನ ಮಾಡಿರುವ ಅವರು, ಕೆಲವು ಪ್ರಮುಖ ಸ್ಥಳೀಯ ನಾಯಕರನ್ನು ಬಲೆಗೆ ಹಾಕಿಕೊಂಡಿದ್ದಾರೆ. ಆಗ ಬಜೆಪಿ ಡಿಕೆಶಿಯನ್ನೇ ಗುರಿಯಾಗಿಸಿ ಪ್ರಚಾರ ನಡೆಸಿತು. ಶೆಟ್ಟರ್, ಯತ್ನಾಳ್, ಶ್ರೀನಿವಾಸ ಕೋಟಾ, ಈಶ್ವರಪ್ಪ, ಯಡಿಯೂರಪ್ಪ ಎಲ್ಲ ಮೂರು ದಿನ ಡಿಕೆಶಿ ಆಟ ಇಲ್ಲಿ ನಡೆಯಲ್ಲ ಎಂದು ಎಚ್ಚರಿಸಿದರು. ‘ಈ ಸೀಟು ಗೆಲ್ಲಿಸಿ ಕೊಡಿ, ನಂದೇ ಸರ್ಕಾರ’ ಎಂದೂ ಯಡಿಯೂರಪ್ಪ ಪ್ರಚಾರ ನಡೆಸಿದ್ದಾರೆ! ಎರಡೂ ಕಡೆಯಿಂದ ಪ್ರಚಾರ ಬೈಗುಳದ ಮಟ್ಟವನ್ನೂ ತಲುಪಿದೆ. ಅದರಲ್ಲಿ ಈಶ್ವರಪ್ಪ ಮತ್ತು ಯತ್ನಾಳ್ ತುಂಬ ಲೀಡ್‍ನಲ್ಲಿದ್ದಾರೆ.

ಚಿಂಚೋಳಿ: ಜಾತಿ ಬೆಂಬಲದ ಪಲ್ಲಟ?
ಒಂದು ಕಡೆ, ಪಕ್ಷಾಂತರ ಮಾಡಿದ ಉಮೇಶ ಜಾಧವ ಬಗ್ಗೆ ಜನತೆಗೆ ಸಿಟ್ಟಿದೆ. ಎರಡು ಸಲ ಸತತವಾಗಿ ಕಾಂಗ್ರೆಸ್‍ನಿಂದ ಗೆದ್ದ ಅವರು ಈಗ ಬಿಜೆಪಿಗೆ ಪಲಾಯನ ಮಾಡಿ, ತಮ್ಮ ಮಗನಿಗೆ ಟಿಕೆಟ್ ಕೊಟ್ಟಿದ್ದೂ ಸಾಮಾನ್ಯ ಜನತೆಗೆ ಇಷ್ಟವಾದಂತಿಲ್ಲ. ಆದರೆ ಇನ್ನೊಂದು ಕಡೆ, ಯಡಿಯೂರಪ್ಪಗೆ ಅವಕಾಶ ಸಿಗಬಹುದು ಎಂದು ಲಿಂಗಾಯತರು ಬಿಜೆಪಿ ಬೆಂಬಲಿಸುವ ಹೊರ ಲಕ್ಷಣಗಳು ಕಾಣುತ್ತಿವೆ.

ಹೆಚ್ಚಿನ ಸಂಖ್ಯೆಯಲ್ಲಿರುವ ಲಂಬಾಣಿ ಮತಗಳು ಎರಡೂ ಪಕ್ಷಗಳೂ ಲಂಬಾಣಿ ಅಭ್ಯರ್ಥಿಗಳನ್ನೇ ಹಾಕಿದ ಪರಿಣಾಮ ಇಬ್ಬರಿಗೂ ಸಮನಾಗಿ ಹಂಚಿ ಹೋಗಲಿವೆ.. ಚಿಂಚೋಳಿ ಎಸ್‍ಸಿ ಮೀಸಲು ಕ್ಷೇತ್ರವಾದ ನಂತರ ಮೂರು ಸಲ ಗೆದ್ದವರು, ರನ್ನರ್ ಅಪ್ ಆದವರೂ ಲಂಬಾಣಿ ನಾಯಕರೇ. ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಇತರ ದಲಿತರಿಗೆ ಯಾವ ಪಕ್ಷವೂ ಮಹತ್ವ ನೀಡಿಲ್ಲ. ಖರ್ಗೆ ಕಾರಣದಿಂದ ದಲಿತರು ಕಾಂಗ್ರೆಸ್ ಬೆಂಬಲಿಸುತ್ತ ಬಂದಿದ್ದಾರೆ.

ಈಗ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಲಿಂಗಾಯತರು ಮತ್ತು ಮುಸ್ಲಿಮರ ಮತಗಳು ನಿರ್ಣಾಯಕ.
ಇನ್ನೊಂದು ಪ್ರಮುಖ ಸಮದಾಯವಾದ ಕೋಲಿ ಸಮಾಜದ ಮತ ಸೆಳೆಯಲು ಎರಡೂ ಪಕ್ಷಗಳು ತಂತ್ರಗಳನ್ನು ಹೆಣೆದಿವೆ. ಅದೇ ಸಮುದಾಯದ ಬಾಬುರಾವ್ ಚಿಂಚನಸೂರ್ ಮೂಲಕ ಬಿಜೆಪಿ ಈ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದರೆ, ಕಾಂಗ್ರೆಸ್ ಇಲ್ಲಿ ಮೊನ್ನೆ ಕೋಲಿ ಸಮಾಜದ ಬೃಹತ್ ಸಭೆ ಆಯೋಜಿಸಿ ಸಿದ್ದರಾಮಯ್ಯ, ಖರ್ಗೆಯವರಿಂದ ಪ್ರಚಾರ ನಡೆಸಿದೆ. ವಿ. ಸೋಮಣ್ಣ ಬಿಜೆಪಿಗೆ ಲಿಂಗಾಯತ ಮತಗಳನ್ನು ಸೆಳೆಯಲು ಇಲ್ಲೇ ವಾಸ್ತವ್ಯ ಮಾಡಿದ್ದಾರೆ..

ಕಾಂಗ್ರೆಸ್‍ನ ಲೋಕಲ್ ಸಚಿವರಾದ ಪ್ರಿಯಾಂಕ್ ಖರ್ಗೆ, ರಹಿಂಖಾನ್, ರಾಜಶೇಖರ್ ಪಾಟೀಲ್, ಜೆಡಿಎಸ್ ಸಚಿವ ಕಾಶೆಪ್ಪ ಬಂಡೆಂಪುರ್ ಅಲ್ಲದೇ ಬಳ್ಳಾರಿಯ ಸಚಿವ ತುಕಾರಾಂ ಕೂಡ ಕಾಂಗ್ರೆಸ್ ಅಭ್ಯರ್ಥಿಯ ಪರ ಹಾರ್ಡ್‍ವರ್ಕ್ ಮಾಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಹೆಸರು ಬೇನಾಮ್ ಮಾಡಿಕೊಂಡಿರುವ ಉಮೇಶ್ ಜಾಧವ್ ಈಗ ಮಗನಿಗಾಗಿ ಮತ ಕೇಳಲೂ ನೈತಿಕತೆ ಕಳೆದುಕೊಂಡಿದ್ದಾರೆ.
ಇದೆಲ್ಲದರ ನಡುವೆ ಮತ್ತೆ ಇಲ್ಲಿ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯನ್ನು ಮುನ್ನೆಲೆಗೆ ತಂದು ಕ್ಷೇತ್ರದ ಸಮಸ್ಯೆಗಳನ್ನು ಹಿಂದಕ್ಕೆ ಅಟ್ಟಲಾಗಿದೆ.

ಮೇ 23ರದ್ದೇ ಗುಂಗು!
ವಿಚಿತ್ರ ನೋಡಿ, ಎರಡು ಉಪ ಚುನಾವಣೆಗಳು ಈಗ ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ವಿಷಯದ ಸುತ್ತ ಗಿರಕಿ ಹೊಡೆಯುತ್ತಿರುವುದು! ಇವೆರಡರಲ್ಲೂ ಕಾಂಗ್ರೆಸ್ ಶಾಸಕರೇ ಇದ್ದುದರಿಂದ ಇವೆರಡನ್ನೂ ಗೆದ್ದರೆ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಹಾಗೂ ಮೈತ್ರಿ ಬಣ ತನ್ನ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಂಡಂತೆ. ಇವೆರಡನ್ನು ಸೋತರೂ ಅಂತಹ ಮಹಾನ್ ಗಂಡಾಂತರವೇನೂ ಸಂಭವಿಸಲಿಕ್ಕಿಲ್ಲ.
ಇವೆರಡನ್ನೂ ಗೆದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗ್ಯಾರಂಟಿ ಎಂದು ಯಡಿಯೂರಪ್ಪ ಮತ್ತು ಗ್ಯಾಂಗ್ ನಂಬಿದೆ. ಇವೆರಡನ್ನೂ ಗೆದ್ದು, ಅಲ್ಲಿ ಮತ್ತೆ ಮೋದಿ ಸರ್ಕಾರ ಬಂದರೂ, ಸರ್ಕಾರ ಉರುಳಿಸಲು ಸಾಧ್ಯವಾ? ಅಲ್ಲಿ ಮತ್ತೆ ಮೋದಿ ಸರ್ಕಾರ ಬಂದರೆ ದಂಡುಗಟ್ಟಲೇ ಶಾಸಕರು ಬಿಜೆಪಿ ಕಡೆ ಬರುವರು ಎಂದು ಯಾವ ಆಧಾರದಲ್ಲಿ ಯಡಿಯೂರಪ್ಪ ಟೀಮ್ ನಿರ್ಧರಿಸಿದೆಯೋ? ಇಷ್ಟುದಿನ ಅಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರವಿದ್ದಾಗಲೇ ಬರದ ಶಾಸಕರು ಮುಂದೆ ಬಿಜೆಪಿ ಕಡೆ ಬರುತ್ತಾರಾ?

ಅಲ್ಲಿ ಎನ್‍ಡಿಎ ಮೈತ್ರಿಕೂಟ ಬಂದರೆ ಏನಾಗಬಹುದು? ಮೋದಿಯಂತೂ ಪ್ರಧಾನಿ ಆಗಲಾರರು ಎಂಬ ಪರಿಸ್ಥಿತಿ ಇದೆ. ಎನ್‍ಡಿಎಗೆ ಬೆಂಬಲ ಕೊಡಬಹುದಾದ ಪ್ರಾದೇಶಿಕ ಪಕ್ಷಗಳಂತೂ ಪ್ರಾದೇಶಕ ಪಕ್ಷದ ನೇತೃತ್ವದ ಕರ್ನಾಟಕ ಸರ್ಕಾರವನ್ನು ಕೆಡವುವ ಸಾಹಸಕ್ಕೆ ಬೆಂಬಲಿಸಲಾರವು ಎನ್ನುವ ವಾದವೂ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಮೂರೂ ಪಕ್ಷಗಳೂ ತಮ್ಮ ಶಕ್ತಿಯನ್ನೆಲ್ಲ ಈ ಎರಡು ಉಪ ಚುನಾವಣೆಗಳಿಗೆ ವ್ಯಯಿಸಿವೆ. ಈ ಎರಡು ಕ್ಷೇತ್ರ ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ದಿನೇ ದಿನೇ ಉಲ್ಭಣಗೊಳ್ಳುತ್ತಿದೆ. ಮೂರೂ ಪಕ್ಷಗಳಲ್ಲೂ ಈ ಯಾವ ಕಾಳಜಿಯೂ ಕಾಣುತ್ತಿಲ್ಲ. ಅದು ವರ್ತಮಾನ ರಾಜಕಾರಣದ ದುರಂತವೂ ಅಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...