ಕೊರೊನಾ ಪ್ರಕರಣಗಳು ಏರಿಕೆ ನಡುವೆಯೇ ರಾಜ್ಯದಲ್ಲಿಯೂ ಮಂಕಿಪಾಕ್ಸ್ ಸೋಂಕಿನ ಆತಂಕ ಕಾಣಿಸುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಮಂಕಿಪಾಕ್ಸ್ ನಿರ್ವಹಣೆ ಕುರಿತು ಸಮಗ್ರ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಮೇ 31 ರಂದು ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಎಲ್ಲಾ ಜಿಲ್ಲೆಗಳಲ್ಲೂ ಪಾಲಿಸಲಾಗುತ್ತದೆ ಎಂದು ಆರೋಗ್ಯ ಸಚಿವ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ವಿಶ್ವದ ಹಲವೆಡೆ ಮಂಕಿಪಾಕ್ಸ್ ಸೋಂಕು ಹರಡುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ, ಕಾಯಿಲೆಯ ಮುನ್ಸೂಚನೆ ಕಂಡ ಕೂಡಲೇ ಸ್ಕ್ರೀನಿಂಗ್, ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆ ಬೆಡ್‌ಗಳನ್ನು ಕಾಯ್ದಿರಿಸುವುದು, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಸೇರಿದಂತೆ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದಿದ್ದಾರೆ.
ಇದನ್ನೂ ಓದಿ: ಕೊಲ್ಕತ್ತಾ: ಸರ್ಕಾರಿ ಹುದ್ದೆ ಪಡೆದ ಕಾರಣ ಹೆಂಡತಿಯ ಅಂಗೈ ಕತ್ತರಿಸಿದ ಪತಿ
ವಿಶ್ವದ ಹಲವೆಡೆ ಮಂಕಿಪಾಕ್ಸ್ ಸೋಂಕು ಹರಡುತ್ತಿರುವುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ರಾಜ್ಯದಲ್ಲಿ, ಕಾಯಿಲೆಯ ಮುನ್ಸೂಚನೆ ಕಂಡ ಕೂಡಲೇ ಸ್ಕ್ರೀನಿಂಗ್, ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆ ಬೆಡ್ ಗಳನ್ನು ಕಾಯ್ದಿರಿಸುವುದು, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಸೇರಿದಂತೆ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದೇವೆ. pic.twitter.com/fctAWIHfWY
— Dr Sudhakar K (@mla_sudhakar) June 6, 2022
ಶಂಕಿತ ಪ್ರಕರಣಗಳು ವರದಿಯಾದಾಗ ಅವುಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವ ಸಲುವಾಗಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ 2 ಹಾಸಿಗೆಗಳನ್ನು ಕಾಯ್ದಿರಿಸಲು ಸೂಚಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡದ ಆರೋಗ್ಯ ಅಧಿಕಾರಿಗಳು ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆಗೆ ಸಹಕರಿಸಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಲು ಸೂಚನೆ ನೀಡಲಾಗಿದೆ.
ಶಂಕಿತ ಪ್ರಕರಣಗಳು ವರದಿಯಾದಲ್ಲಿ ಬೆಂಗಳೂರು ಸಾಂಕ್ರಾಮಿಕ ರೋಗ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ ಮತ್ತು ಮಂಗಳೂರಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಶಂಕಿತ ಪ್ರಕರಣಗಳ ಮಾದರಿಯನ್ನು ಸಂಗ್ರಹಿಸಿ ನ್ಯಾಷನಲ್ ಇನ್ಟ್ಟಿಟ್ಯೂಟ್ ಆಫ್ ವೈರಾಲಜಿ ಪುಣೆಗೆ ಕಳುಹಿಸಲು ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಕಣ್ಗಾವಲು ಅಧಿಕಾರಿ ಹಾಗೂ ಯೋಜನಾ ನಿರ್ದೇಶಕರಾಗಿ ಡಾ. ಶ್ರೀನಿವಾಸ ಎನ್ ಅವರನ್ನು ಹಾಗೂ ರಾಜ್ಯ ಮಟ್ಟದ ನೋಡಲ್ ಅಧಿಕಾರಿಯಾಗಿ IDSP ಅವರನ್ನು ನೇಮಿಸಲಾಗಿದೆ.
ಮಂಕಿಪಾಕ್ಸ್ ಸೋಂಕು:
ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಮಂಕಿಪಾಕ್ಸ್ ವೈರಸ್ ಪಾಕ್ಸ್ವಿರಿಡೆ (Poxviridae) ಕುಟುಂಬದಲ್ಲಿ ಆರ್ಥೋಪಾಕ್ಸ್ (Orthopoxvirus) ವೈರಸ್ ಕುಲಕ್ಕೆ ಸೇರಿದೆ. ಆರ್ಥೋಪಾಕ್ಸ್‌ವೈರಸ್ ಕುಲವು ವೆರಿಯೊಲಾ ವೈರಸ್ (ಸಿಡುಬಿಗೆ ಕಾರಣವಾಗುತ್ತದೆ) ಎಂದು ಸಿಡಿಸಿ (Centers for Disease Control and Prevention) ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಮಂಕಿಪಾಕ್ಸ್ ಸಾಮಾನ್ಯವಾಗಿ ಜ್ವರ, ತಲೆನೋವು ಮತ್ತು ಚರ್ಮದ ದದ್ದುಗಳನ್ನು ಒಳಗೊಂಡಿರುವ ರೋಗಲಕ್ಷಣಗಳೊಂದಿಗೆ ಉಂಟಾಗುವ ವೈರಲ್ ಸೋಂಕು. ಈ ಸೋಂಕು 1958 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಮಧ್ಯ ಮತ್ತು ಪಶ್ಚಿಮ ಆಫ್ರಿಕನ್ ದೇಶಗಳಲ್ಲಿನ ಜನರಲ್ಲಿ ಖಾಯಿಲೆ ವರದಿಯಾಗಿದೆ.
ಇದನ್ನೂ ಓದಿ: ಕಾರ್ಕಳ: ಗೋಡ್ಸೆ ಬೋರ್ಡ್ ತೆರವು; ರಸ್ತೆಗೆ ನಾರಾಯಣಗುರುಗಳ ಹೆಸರಿಡುವಂತೆ ಕಾಂಗ್ರೆಸ್ ಆಗ್ರಹ