Homeಕರ್ನಾಟಕಮೈಸೂರು: ಅಲೆಮಾರಿಗಳನ್ನು ಒಕ್ಕಲೆಬ್ಬಿಸಲು ಹೊರಟಿದೆಯೇ ವ್ಯವಸ್ಥೆ?

ಮೈಸೂರು: ಅಲೆಮಾರಿಗಳನ್ನು ಒಕ್ಕಲೆಬ್ಬಿಸಲು ಹೊರಟಿದೆಯೇ ವ್ಯವಸ್ಥೆ?

- Advertisement -
- Advertisement -

“ಅಲೆಮಾರಿಗಳು ಒಂದೆಡೆ ನೆಲೆಸಬಾರದು, ಅವರು ಯಾವಾಗಲೂ ಊರೂರು ಸುತ್ತುತ್ತಾ ಯಥಾಸ್ಥಿತಿಯಲ್ಲಿ ಬದುಕಬೇಕು, ಅವರ ಜೀವನ ಸದಾ ಅತಂತ್ರವಾಗಿರಬೇಕು ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಭಾವಿಸಿದ್ದಾರೆ” ಎಂದು ಮೈಸೂರು ತಾಲ್ಲೂಕಿನಲ್ಲಿ ವಾಸವಿರುವ ಅಲೆಮಾರಿ ಸಮುದಾಯಗಳು ಬೇಸರ ವ್ಯಕ್ತಪಡಿಸುತ್ತಿವೆ. ದಶಕಗಳಿಂದ ಮೈಸೂರು ತಾಲ್ಲೂಕಿನಲ್ಲಿ ಒಂದೆಡೆ ನೆಲೆಸಿರುವ ಅಲೆಮಾರಿಗಳನ್ನು ಕಾಲ್ಚಂಡಿನಂತೆ ಅಧಿಕಾರಿಗಳು ಆಟವಾಡಿಸತೊಡಗಿದ್ದಾರೆ ಎಂಬ ಆರೋಪಗಳು ಬಂದಿವೆ.

ಕಳೆದ ಹದಿನೈದು ದಿನಗಳಿಂದ (ಸೆ.15ರಿಂದ) ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಅಲೆಮಾರಿಗಳು ಹೋರಾಟಕ್ಕೆ ಕುಳಿತ್ತಿದ್ದಾರೆ. ಇವರ ಕೂಗನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಆಲಿಸುತ್ತಿಲ್ಲ ಎಂಬ ದೂರುಗಳು ವ್ಯಕ್ತವಾಗುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅಲೆಮಾರಿಗಳು ಹಾಗೂ ದಲಿತ ಸಂಘರ್ಷ ಸಮಿತಿ ಹೇಳುವುದೇನು?

ಹಕ್ಕಿಪಿಕ್ಕಿ, ದೊಂಬಿದಾಸ, ಶಿಳ್ಳೆಕ್ಯಾತ, ಬುಡುಬುಡುಕೆ ಇತರೆ ಅಲೆಮಾರಿ- ಅರೆ ಅಲೆಮಾರಿ ಸಮುದಾಯದ ಜನರು ಶತಶತಮಾನಗಳಿಂದಲೂ ಒಂದೆಡೆ ನೆಲೆ ನಿಲ್ಲಲಾಗದೆ ಪರದಾಡುತ್ತಿದ್ದಾರೆ. ಇಂತಹ ಸಮುದಾಯಗಳ ಕೆಲವು ಜನರು ಮೈಸೂರಿನ ಹೆಬ್ಬಾಳ ಕೆರೆಯ ಅಂಗಳದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಳ್ಳಲು ಯತ್ನಿಸಿದರು. ಕೆರೆ ಅಭಿವೃದ್ಧಿಪಡಿಸುವ ನೆಪದಲ್ಲಿ ಜಿಲ್ಲಾಡಳಿತ ಅಲೆಮಾರಿಗಳನ್ನು ಒಕ್ಕಲೆಬ್ಬಿಸಿತು. ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಯಿತು. ಇದರ ಫಲವಾಗಿ ಜಿಲ್ಲಾಡಳಿತವು ಮೈಸೂರು ತಾಲ್ಲೂಕಿನ ಶ್ಯಾದನಹಳ್ಳಿ ಗ್ರಾಮದ ಸರ್ವೇ ನಂಬರ್‌ 53ರ ಸರ್ಕಾರಿ ಭೂಮಿಯನ್ನು ಗುರುತಿಸಿ, ಈ ಜನರು ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸಲು ಮೌಖಿಕ ಆದೇಶದೊಂದಿಗೆ ಅವಕಾಶ ಕಲ್ಪಿಸಿತು.

12 ವರ್ಷಗಳ ಹಿಂದೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯವರು ಈ ಅಲೆಮಾರಿಗಳು ವಾಸವಿರುವ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ಎಲ್ಲರಿಗೂ ಪ್ರತ್ಯೇಕವಾಗಿ ನೆಲ ಮಳಿಗೆಗಳನ್ನು ನಿರ್ಮಿಸಿಕೊಡುವುದಾಗಿ ವಾಗ್ದಾನ ನೀಡಿ ಈ ಜನರನ್ನು ಶ್ಯಾದನಹಳ್ಳಿ ಸರ್ವೇ ನಂ. 37ರ ಸರ್ಕಾರಿ ಗೋಮಾಳದ ಖಾಲಿ ಜಾಗಕ್ಕೆ ಸ್ಥಳಾಂತರಿಸಿದ್ದರು. ತದನಂತರ ಜಿಲ್ಲಾಡಳಿತವು ಈ ಜಾಗಕ್ಕೆ ‘ಏಕಲವ್ಯನಗರ’ ಎಂದು ಘೋಷಿಸಿ ಈ ಜನರಿಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ ಸೌಕರ್ಯಗಳನ್ನು ಕಲ್ಪಿಸಿಕೊಟ್ಟು, ಇವರಿಗೆ ಆಧಾರ್‌ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಜಾತಿ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ರೀತಿಯ ದಾಖಲಾತಿಗಳನ್ನು ನೀಡಿತು. ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಿ ಏಕಲವ್ಯ ನಗರದಿಂದಲೇ ಐದು ಜನರು ಸದಸ್ಯರಾಗಿ ಆಯ್ಕೆಯಾಗಲು ಅವಕಾಶ ನೀಡಲಾಗಿದೆ.

ಶ್ಯಾದನಹಳ್ಳಿ ಸರ್ವೇ ನಂ. 37ರ 83.08 (51 ಬಿ.ಖರಾಬು) ಎಕರೆ ವಿಸ್ತೀರ್ಣವುಳ್ಳ ಸರ್ಕಾರಿ ಗೋಮಾಳದ ಪೈಕಿ ನಾಗನಹಳ್ಳಿ ಗ್ರಾಮ ಪಂಚಾಯಿತಿ ಆಶ್ರಯ ನಿವೇಶನಕ್ಕಾಗಿ 5 ಎಕರೆ, ಚರ್ಮ ಕೈಗಾರಿಕಾ ಸಂಸ್ಥೆಗೆ 2 ಎಕರೆ, ವರುಣ ನಾಲೆಗೆ ಸೇರಿದಂತೆ ಒಟ್ಟು 16.06 ಎಕರೆ ಭೂಮಿಯನ್ನು ವಿಲೇವಾರಿ ಮಾಡಿರುವುದಾಗಿ ಉಳಿಕೆ 59.02 ಎಕರೆ ಭೂಮಿಯು ಖಾಲಿಯಿದ್ದು, ಈ ಭೂಮಿಯು ಮೈಸೂರು ನಗರದ 10 ಕಿ.ಮೀ. ವ್ಯಾಪ್ತಿಗೆ ಒಳಪಡುವುದರಿಂದ ಸದರಿ ಭೂಮಿಯು ಸಾರ್ವಜನಿಕ ಉದ್ದೇಶಕ್ಕೆ ಹೊರತುಪಡಿಸಿ ವೈಯಕ್ತಿಕವಾಗಿ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲವೆಂದು ತಹಸೀಲ್ದಾರ್‌ರವರು ಜಿಲ್ಲಾಧಿಕಾರಿಗಳಿಗೆ ನೀಡಿರುವ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಸ್ಥಳೀಯ ಕಂದಾಯ ಇಲಾಖಾಧಿಕಾರಿಗಳು ಭೂ ಮಾಫಿಯಾದವರ ಪ್ರಭಾವ ಮತ್ತು ಆಮಿಷಕ್ಕೊಳಗಾಗಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ 2014ರಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋಮಾಳದ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿದ್ದಾರೆ.

ಈ ಮಧ್ಯೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಕುರಿ, ಕೋಳಿ, ಮೇಕೆ, ಕೋಲೆ ಬಸವ ಇತರೆ ಜಾನುವಾರುಗಳೊಂದಿಗೆ ಏಕಲವ್ಯನಗರದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳನ್ನು ಜೆ-ನರ್ಮ್ ಯೋಜನೆಯಡಿ ನಿರ್ಮಿಸಿರುವ ಕಳಪೆ ಗುಣಮಟ್ಟದ ಬಹುಮಹಡಿ ಕಟ್ಟಡಕ್ಕೆ (ಇಂದಿರಾ ಗಾಂಧಿ ಬಡಾವಣೆ) ಸ್ಥಳಾಂತರಿಸಲು ಪಿತೂರಿ ನಡೆಸಿದ್ದಾರೆ. ಅಲ್ಲದೆ ಕಂದಾಯ ಇಲಾಖಾಧಿಕಾರಿಗಳ ಜೊತೆ ಸೇರಿಕೊಂಡು ಮೇಲಧಿಕಾರಿಗಳಿಗೆ ಸುಳ್ಳು ವರದಿಗಳನ್ನು ನೀಡಿದ್ದಾರೆ.

ಮಳೆಗಾಳಿಗೆ ಬಿದ್ದ ಗುಡಿಸಲುಗಳನ್ನು ಪುನರ್‌ ನಿರ್ಮಾಣ ಮಾಡಿಕೊಳ್ಳುತ್ತಿದ್ದ ಈ ಜನರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಸರ್ಕಾರಿ ಗೋಮಾಳದ ಜಾಗದಲ್ಲಿ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸುತ್ತಿದ್ದಾರೆಂದು ಗ್ರಾಮ ಲೆಕ್ಕಾಧಿಕಾರಿಗಳ ಮುಖಾಂತರ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ. ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಈ ಜನರನ್ನು ಹೆದರಿಸಲಾಗಿದೆ. ಗುಡಿಸಲುಗಳಿಗೆ ಬೆಂಕಿ ಹಚ್ಚುವಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರು ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಇತ್ತೀಚೆಗೆ ಸರ್ಕಾರವು ಅವಕಾಶ ನೀಡಿತ್ತು. ಅದರಂತೆ ಏಕಲವ್ಯನಗರದ ನಿವಾಸಿಗಳು 94 ಸಿ, ಯೋಜನೆಯಡಿ ಆನ್‌ಲೈನ್‌ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ವಾಸದ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕಿದ್ದ ಮೈಸೂರು ತಾಲ್ಲೂಕು ತಹಸೀಲ್ದಾರ್‌, ಭೂ ಮಾಫಿಯಾದವರ ಆಮಿಷಕ್ಕೊಳಗಾಗಿ ಏಕಲವ್ಯನಗರ ನಿವಾಸಿಗಳ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಈ ಜನರನ್ನು ಒಕ್ಕಲೆಬ್ಬಿಸಿ ಅಕ್ರಮ ಖಾತೆದಾರರಿಗೆ ಈ ಜಾಗವನ್ನು ಬಿಟ್ಟುಕೊಡಲು ತುದಿಗಾಲಲ್ಲಿ ನಿಂತಿದ್ದಾರೆ ತಹಸೀಲ್ದಾರ್‌ ನಿಂತಿದ್ದಾರೆ ಎಂದು ಅಲೆಮಾರಿಗಳು ಹಾಗೂ ದಸಂಸ ಮುಖಂಡರು ದೂರಿದ್ದಾರೆ.

ಮಕ್ಕಳು ಭಿಕ್ಷೆ ಬೇಡಬೇಕಾ?

ಅಲೆಮಾರಿ ಸಮುದಾಯದ ಮಹಿಳೆ ಲಕ್ಷ್ಮಮ್ಮ ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಕ್ಕುಪತ್ರವನ್ನು ಕೇಳುತ್ತಿದ್ದೇವೆ. ಅಕ್ಕಪಕ್ಕದವರು ಹೊಡೆಯಲು ಬರುತ್ತಿದ್ದಾರೆ. ಜೆಸಿಬಿ ತಂದು ಒಕ್ಕಲೆಬ್ಬಿಸುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಮಕ್ಕಳು ಶಾಲಾ- ಕಾಲೇಜು ಮೆಟ್ಟಿಲೇರಿದ್ದಾರೆ. ಸಮುದಾಯವನ್ನು ಒಕ್ಕಲೆಬ್ಬಿಸಿದರೆ ನಮ್ಮ ಮಕ್ಕಳು ನಮ್ಮಂತೆಯೇ ಭಿಕ್ಷೆ ಬೇಡಬೇಕಾ?” ಎಂದು ಪ್ರಶ್ನಿಸಿದರು.

“ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮಕ್ಕಳು ಎಂಎಲ್‌ಎ, ಎಂಪಿ ಆಗಬಹುದು; ನಮ್ಮ ಮಕ್ಕಳು ಮಾತ್ರ ಭಿಕ್ಷೆ ಬೇಡಬೇಕಾ? ನಾವೇನು ಅವರ ಆಸ್ತಿ ಕೇಳುತ್ತಿದ್ದೇವೆಯೇ? ಸರ್ಕಾರಿ ಜಾಗದ ಹಕ್ಕು ಪತ್ರವನ್ನಷ್ಟೇ ಕೇಳುತ್ತಿದ್ದೇವೆ. ಹದಿನೈದು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಇವರಿಗೆ ಕಣ್ಣು ಕಾಣಿಸುವುದಿಲ್ಲವೇ? ಮಕ್ಕಳು ಅನ್ನ ನೀರಿಲ್ಲದೇ ಸಾಯುತ್ತಿವೆ. ಇವರಿಗೆ ಕರುಣೆ ಇಲ್ಲವೇ?” ಎಂದು ನೊಂದು ನುಡಿದರು.

“ವೋಟು ಕೇಳಲು ಬರುತ್ತೀರಿ. ನಾವು ವೋಟು ಹಾಕಿದರೆ ಮಾತ್ರ ನೀವು ಎಂಎಲ್‌ಎ, ಎಂಪಿ ಆಗುತ್ತೀರಿ. ವೋಟು ಕೇಳಲು ಬಂದಾಗ ಶಾಸಕ ಜಿ.ಟಿ.ದೇವೇಗೌಡರು, ನಿಮಗೆ ಸುಂದರವಾದ ಮನೆಗಳನ್ನು ಕಟ್ಟಿಸುತ್ತೇವೆ ಎಂದಿದ್ದರು. ಎಲ್ಲಿ ಕಟ್ಟಿಸಿಕೊಟ್ಟಿದ್ದಾರೆ? ನಾವು ಗುಡಿಸಲಿಗೆ ಹಕ್ಕುಪತ್ರ ಕೇಳುತ್ತಿದ್ದೇವೆ ಅಷ್ಟೇ” ಎಂದರು.

ಮೈಸೂರು ಜಿಲ್ಲಾಧಿಕಾರಿ ಹೇಳುವುದೇನು?

ವಿವಾದದ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌, “ಏಕಲವ್ಯನಗರದ ಖಾಸಗಿ ಜಾಗದಲ್ಲಿ ಅಲೆಮಾರಿಗಳು ವಾಸವಿದ್ದಾರೆ. ಹಕ್ಕುಪತ್ರ ಕೊಡಲು ಸಾಧ್ಯವೇ? ಕಳೆದ ಇಪ್ಪತ್ತು ವರ್ಷಗಳಿಂದ ಅಲ್ಲಿ ವಾಸವಿದ್ದರೂ ಖಾಸಗಿ ಜಾಗವನ್ನು ನೀಡಲು ಸಾಧ್ಯವಿಲ್ಲ. ಇದು ಗೋಮಾಳ ಎಂದು ಹೇಳಿದ ತಕ್ಷಣ ಗೋಮಾಳ ಆಗುವುದಿಲ್ಲ” ಎಂದರು.

ಇದನ್ನೂ ಓದಿರಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಕೊನೆಯ ಕ್ಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ!

“ನಾವು ಅಲೆಮಾರಿಗಳೊಂದಿಗೆ ಮಾತನಾಡಿದ್ದೇವೆ. ಅವರ ಮನವಿ ಪತ್ರವನ್ನು ಅಧಿಕಾರಿಗಳು ಸ್ವೀಕರಿಸಿದ್ದಾರೆ. ಆದರೆ ಖಾಸಗಿ ಜಾಗಕ್ಕೆ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ” ಎಂದು ಪ್ರತಿಕ್ರಿಯಿಸಿದರು.

“ಇಷ್ಟು ವರ್ಷಗಳಿಂದ ಖಾಸಗಿ ಜಾಗದಲ್ಲಿ ಅಲೆಮಾರಿಗಳು ವಾಸವಿರಲು ಅವಕಾಶ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆಯೂ ಬರುತ್ತದೆ” ಎಂದಾಗ, “ಇದನ್ನು ತನಿಖೆ ಮಾಡಲು ನೀವು ಪೊಲೀಸರಲ್ಲ. ಇಷ್ಟು ವರ್ಷಗಳಿಂದ ನಾನು ಇಲ್ಲಿರಲಿಲ್ಲ, ನೀವು ಇರಲಿಲ್ಲ. ಖಾಸಗಿ ಜಾಗದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡಿರುವವರನ್ನು ನೀವು ಕೇಳಬೇಕು. ನನ್ನನ್ನು ಕೇಳಿದರೆ ಏನು ಮಾಡಲು ಸಾಧ್ಯ?” ಎಂದು ಪ್ರಶ್ನಿಸಿದರು.

“ಮೊದಲು ಸರ್ಕಾರಿ ಜಮೀನಾಗಿತ್ತು. ಈಗ ಖಾಸಗಿಯವರ ಪರ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಕೋರ್ಟ್ ಆದೇಶಗಳನ್ನು ನಾವು ಉಲ್ಲಂಘಿಸಲು ಆಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...

SIR | ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಸರ್ಕಾರಿ ಸೌಲಭ್ಯ: ಸಿಎಂ

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳು ಹಾಗೂ ಇತರ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿರುವ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಗಂಭೀರ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಕಡ್ಡಾಯವಾಗಿ...

SIR, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು 23 ವಿಪಕ್ಷಗಳಿಂದ ಸಿಜೆಐಗೆ ಜಂಟಿ ಪತ್ರ

ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ...

SIR: ಮತದಾರರ ಅನುಕೂಲಕ್ಕಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದ ಆದೇಶ

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಜೂನ್ 30ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ...

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...