Homeಮುಖಪುಟನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-2

ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-2

- Advertisement -
- Advertisement -

ನರಗುಂದದಲ್ಲಿ ರೈತರ ಬೇಟೆ

ಕಳೆದ ವಾರದಲ್ಲಿ ತಿಳಿಸಿದಂತೆ, ರೈತರ ಮತ್ತು ಅಧಿಕಾರಿ ಗಣ ಹಾಗೂ ಪೊಲೀಸರ ನಡುವಿನ ಘರ್ಷಣೆ, ರೈತರ ಪ್ರತಿಭಟನಾ ಜಾಥಾ, ನರಗುಂದ ತಹಸೀಲ್ದಾರ್ ಕಚೆರಿ ಸುಟ್ಟು ಬೂದಿಯಾದ ಈ ಎಲ್ಲಾ ಘಟನೆಗಳೂ ಮಧ್ಯಾಹ್ನ ಎರಡು ಗಂಟೆಯೊಳಗೆ ಸಂಭವಿಸಿಬಿಟ್ಟವು. ಸರ್ಕಾರವೊಂದರ ತಾಲೂಕು ಮಟ್ಟದ ಪ್ರತಿರೂಪವೆಂದರೆ ತಾಲೂಕು ಕಚೆರಿ ಮತ್ತು ಅಂದು ತಾಲೂಕಿನ ಪೊಲೀಸ್ ಮುಖ್ಯಾಧಿಕಾರಿ ಸಬ್ ಇನ್ಸ್‌ಪೆಕ್ಟರ್. ತಾಲೂಕು ಕಚೆರಿ ಸುಟ್ಟು ಹಾಕಲಾಗಿತ್ತು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹತನಾಗಿದ್ದ. ತಹಸೀಲ್ದಾರ್, ಡಿ.ವೈ.ಎಸ್.ಪಿ, ಇನ್ಸ್‌ಪೆಕ್ಟರ್ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿದ್ದರು. ಸರ್ಕಾರಕ್ಕೆ ತೀವ್ರ ಪೆಟ್ಟಾಗಿತ್ತು.

ಈ ಸುದ್ದಿ ವರದಿಯಾದೊಡನೆ ಮೇಲಿನ ಅಧಿಕಾರಿಗಳು ನರಗುಂದಕ್ಕೆ ಧಾವಿಸತೊಡಗಿದರು. ರಾತ್ರೋರಾತ್ರಿ ಅಂದಿನ ರಾಜ್ಯ ಪೊಲೀಸ್ ಮುಖ್ಯಸ್ಥ (ಆಗ ಐಜಿಪಿ ಎಂದು ಕರೆಯಲಾಗುತ್ತಿತ್ತು) ನರಗುಂದಕ್ಕೆ ಆಗಮಿಸಿದರು.

ಅಂದು ನರಗುಂದದಲ್ಲಿದ್ದ ಸರ್ಕಾರದ ಗೆಜೆಟೆಡ್ ಅಧಿಕಾರಿ ನಾನೊಬ್ಬನೇ. ತಹಸೀಲ್ದಾರ್ ಆಸ್ಪತ್ರೆಯಲ್ಲಿದ್ದರೆ, ಉಳಿದವರು ಪರಾರಿಯಾಗಿದ್ದರು. ಆದ್ದರಿಂದ ಈ ಎಲ್ಲರನ್ನೂ ಭೇಟಿ ಮಾಡಿ ನನಗೆ ಗೊತ್ತಿದ್ದ ವಿಷಯ ಹೇಳಬೇಕಾಯಿತು. ಸೈಕಲ್‌ನಲ್ಲಿಯೇ ಎಲ್ಲ ಓಡಾಟ. ನಮ್ಮ ಡ್ರೈವರ್‌ಗಂತೂ ಹೆದರಿ ಜ್ವರ ಬಂದಂತಾಗಿತ್ತು.

ಐಜಿಪಿ ಬಂದವರೇ ಮಾಡಿದ್ದೇನೆಂದರೆ ರೈತ ಹೋರಾಟದಲ್ಲಿ ಯಾವ ಪಾತ್ರವೂ ವಹಿಸಿರದ ಮತ್ತು ಅಂದಿನ ಆಳುವ ಪಕ್ಷದ ತಾಲೂಕು ನಾಯಕರನ್ನು ಹಿಡಿದುತರಿಸಿದರು. ಆ ನಾಯಕರು ಒಂದು ರೀತಿಯಲ್ಲಿ ನರಗುಂದವನ್ನಾಳುತ್ತಿದ್ದವರು. ತಾಲೂಕಿನ ಜನರಿಗೆ ಇವರ ಬಗ್ಗೆ ಭಯಮಿಶ್ರಿತ ಗೌರವ. ಅಲ್ಲಿಯ ಪೊಲೀಸರಂತೂ ಹೆಚ್ಚಿನವರು ಅವರ ಆಜ್ಞಾಧಾರಕರು.

ಅವರು ’ನಾವು ದಂಗೆಯಲ್ಲೇನೂ ಭಾಗವಹಿಸಿಲ್ಲ, ಸರ್ಕಾರದ ಬೆಂಬಲಿಗರು ನಾವು, ನಮಗೆ ಇಡೀ ತಾಲೂಕೇ ಹೆದರುತ್ತದೆ. ಯಾರೇನು ಮಾಡುತ್ತಾರೆ’ ಎಂಬ ಗತ್ತಿನಲ್ಲೇ ಠಾಣೆಗೆ ಬಂದರು. ಆದರೆ ಐಜಿಪಿ ಅವರಿಗೆ ’ನೀನು ಆಳುವ ಪಕ್ಷದವನಾಗಿದ್ದರೆ ಗೆಣಸು ತಿನ್ನುತ್ತಿದ್ದೆಯಾ, ರೈತರು ಚಳವಳಿಯಲ್ಲಿ ಭಾಗವಹಿಸದಂತೆ ಮಾಡುವುದು ನಿನ್ನ ಕೆಲಸವಾಗಿರಲಿಲ್ಲವೇ?’ ಎಂದು ಪ್ರಶ್ನಿಸಿ ಒದ್ದರಂತೆ ಎಂಬ ಸುದ್ದಿಗಳು ಕೇಳಿಬಂದವು. ಇಂತಹ ಉದಾಹರಣೆಗಳ ಮೂಲಕ ಪೊಲೀಸರಿಗೆ ಹೇಗೆ ಮುಂದಿನ ಕಾರ್ಯಗಳನ್ನು ನಿರ್ವಹಿಸಬೇಕೆಂದು ಪ್ರಾಯೋಗಿಕವಾಗಿ ತೋರಿಸಿ ಐಜಿಪಿ ನಿರ್ಗಮಿಸಿದರು.

ಮರುದಿನ ಮುಖ್ಯಮಂತ್ರಿ ಗುಂಡೂರಾವ್ ನರಗುಂದಕ್ಕೆ ಆಗಮಿಸಿದರು. ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ಪೊಲೀಸ್ ಅಧಿಕಾರಿಗಳು ನನ್ನನ್ನು ವಿನಂತಿಸಿದರು. ಅವರನ್ನು ಸುಟ್ಟುಹೋಗಿದ್ದ ತಾಲೂಕು ಕಚೆರಿ ಸುತ್ತಾಡಿಸಿ, ವಿವರಣೆ ನೀಡಬೇಕಾಯಿತು. ರೈತರ ಸಂಕಟಗಳ ಬಗ್ಗೆ, ಆಕ್ರೋಶದ ಕಾರಣಗಳ ಬಗ್ಗೆ ನಾನು ನೀಡಿದ ವಿವರಣೆಯ ಕಡೆಗೆ ಅವರು ಗಮನವನ್ನೇ ಕೊಡಲಿಲ್ಲ. ಇದರಿಂದ ರೈತರ ಸಮಸ್ಯೆ ಎಷ್ಟು ತೀವ್ರವಾಗಿರಬಹುದು ಎಂದು ಗುಂಡೂರಾಯರು ಮನಗಾಣಲಿಲ್ಲ. ನಾಲ್ಕು ತಿಂಗಳ ಹಿಂದೆಯೇ ತಮ್ಮ ಮುಂದೆ ಪ್ರತಿಭಟನೆ ಮಾಡಿ ರೈತ ನಾಯಕರು ವಿವರಿಸಿದ್ದ ಸಮಸ್ಯೆಗಳನ್ನು ಪರಿಹರಿಸಲು ತಾನು ಗಮನ ಕೊಡದುದರಿಂದ ಈ ದುಸ್ಥಿತಿ ಒದಗಿತು ಎಂಬ ಪಶ್ಚಾತ್ತಾಪವಂತೂ ಬಹುದೂರ. ಬದಲಾಗಿ ’ನಾನು ಇವರನ್ನು ಸುಮ್ಮನೇ ಬಿಡುವುದಿಲ್ಲವೆಂದು’ ಮತ್ತೆ ಗುಡುಗಿದರು. ಪತ್ರಿಕೆಗಳ ಮುಖಪುಟದಲ್ಲಿ ದೊಡ್ಡದೊಡ್ಡ ಅಕ್ಷರಗಳಲ್ಲಿ ಅಚ್ಚಾಯಿತು.

ಈ ಮಾತುಗಳು, ನರಗುಂದದ ರೈತರ ಮೇಲೆ ದೌರ್ಜನ್ಯ ಎಸಗುವುದಕ್ಕೆ ಕೊಟ್ಟ ರಾಜಾಜ್ಞೆಯಂತಿತ್ತು. ಸರ್ಕಾರದ ಉನ್ನತ ವಲಯಗಳಿಗೆ ನರಗುಂದ ಘಟನೆಯಿಂದ ಬಹಳ ಅಪಮಾನವಾಗಿತ್ತು. ಸ್ಥಳೀಯ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಇದನ್ನು ತಮ್ಮ ವಿರುದ್ಧ ಇದ್ದವರ ಮೇಲೆ ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳಲು ಪ್ರಯತ್ನಿಸಿದರು. ನರಗುಂದಕ್ಕೆ ಸಂಬಂಧಿಸಿದ್ದ ಗದಗ್ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ನೇರವಾಗಿಯೇ ಪೊಲೀಸರಿಗೆ ನಿರ್ದೇಶನ ನೀಡಿದ್ದು ಹೀಗೆ: ’ಸರ್ಕಾರಿ ಸಭೆ, ಕಾರ್ಯಕ್ರಮಗಳಲ್ಲಿ ತರಲೆ ಮಾಡುವವರನ್ನು ಪಟ್ಟಿ ಮಾಡಿ. ರೌಂಡ್ ಅಪ್ ಮಾಡಿ ಸರಿಯಾಗಿ ಪಾಠ ಕಲಿಸಿರಿ’ ಎಂದು. ಮುಂದೆ ಅವರು ರಾಜ್ಯದಲ್ಲಿ ಮುಖ್ಯ ಹುದ್ದೆಗಳನ್ನು ಪಡೆದರು ಎಂಬುದು ಬೇರೆ ಮಾತು. ಹೀಗಿತ್ತು ಸರ್ಕಾರಿ ಕಾರ್ಯವೈಖರಿ ಮತ್ತು ಹೀಗೆಯೇ ಇರುತ್ತದೆ ಅಧಿಕಾರಶಾಹಿ ವರ್ತನೆ.

ಇಡೀ ತಾಲೂಕಿನಲ್ಲಿ ಸೆಕ್ಷನ್ 144. ನರಗುಂದ ಪಟ್ಟಣದಲ್ಲಿ ಕರ್ಫ್ಯೂ. ಪೊಲೀಸರ ಜೀಪು, ವ್ಯಾನುಗಳು ಪ್ರತಿ ಗ್ರಾಮಗಳಿಗೂ ಸುತ್ತಾಡತೊಡಗಿದವು. ಮನೆಗಳಲ್ಲಿ ಶೌಚಾಲಯಗಳಿರದ ಆ ಪಟ್ಟಣದ ರೈತರು ಮತ್ತು ನಾಗರಿಕರನ್ನು ಮನೆಗಳಿಂದ ಶೌಚಕ್ಕೆ ಹೊರಗೆ ಹೋಗಲೂ ಬಿಡದೆ ದೌರ್ಜನ್ಯ ಎಸಗಿದರು. ಸಿಕ್ಕಸಿಕ್ಕವರನ್ನು ಹಿಡಿತಂದು ಬಾರಿಸಿದರು.

ಇಂತಹ ಪರಿಸ್ಥಿತಿಯಲ್ಲಿ, ಮುಖ್ಯ ಕಾನೂನು ನಿರ್ವಹಣೆಯಲ್ಲಿ ಅಧಿಕಾರಗಳಿಲ್ಲದ ಕೃಷಿ ಇಲಾಖೆಗೆ ಏನೂ ಪಾತ್ರವಿರಲಿಲ್ಲ. ಸಮಸ್ಯೆ ರೈತರದು, ಕೃಷಿಯದು. ಆದರೆ ಕೃಷಿ ಇಲಾಖೆಗೆ ಯಾವ ಪಾತ್ರವೂ ಇಲ್ಲ! ಅವರ ಮಾತನ್ನು ಕೇಳುವವರಿಲ್ಲ! ಸಲಹೆ ಪಡೆಯುವುದಂತೂ ಬಹು ದೂರ. ಇದು ನಮ್ಮ ಸರ್ಕಾರಗಳ ಆಡಳಿತ ವ್ಯವಸ್ಥೆ.

ಅಧಿಕಾರಿಗಳ, ಪೊಲೀಸರ ಯಾವ ಕ್ರಿಯೆಗಳೂ ನಮ್ಮ ಕಣ್ಣಿಗೆ ಬೀಳುವ ಪ್ರಸಂಗವೂ ಇಲ್ಲ. ಬೇರೆ ಅಧಿಕಾರಿಗಳು ಮಾಡಿದಂತೆ ಮತ್ತು ನನಗೆ ಬಹಳ ಜನ ಸಲಹೆ ಕೊಟ್ಟಂತೆ ನಾನೂ ತಾಲೂಕಿನಿಂದ ಗಾಯಬ್ ಆಗಿಬಿಡಬಹುದಿತ್ತು. ಆದರೆ ಅಲ್ಲಿಯೇ ಉಳಿದುಕೊಂಡಿದ್ದರಿಂದ ಈ ಕೆಲವು ಸಂಗತಿಗಳನ್ನು ತಿಳಿಯಲು ಅವಕಾಶವಾಯಿತು.

ಇಂತಹ ಅಕ್ರಮಗಳು, ಅಮಾಯಕರ ಬಂಧನಗಳು ಗಮನಕ್ಕೆ ಬಂದ ಮೇಲೆ ರೈತರ ಜೊತೆ ಆತ್ಮೀಯ ಸಂಬಂಧ ಇದ್ದವನಾಗಿ ಸುಮ್ಮನಿರಲು ಸಾಧ್ಯವೇ? ಏನು ಮಾಡಬಹುದೆಂದು ಸಾಕಷ್ಟು ಚಿಂತಿಸಿದೆ. ಅಧಿಕಾರಿಗಳಿಗೆ ಮನವರಿಕೆ ಮಾಡಿ ಬಂಧಿಸಲು ಪಟ್ಟಿ ಮಾಡಲ್ಪಟ್ಟವರಲ್ಲಿ ಸಾಧ್ಯವಾದವರನ್ನು ತಪ್ಪಿಸಲು ಪ್ರಯತ್ನಿಸುವುದು. ಉಳಿದವರಿಗೆ ಮಾಹಿತಿ ಕೊಟ್ಟು ತಪ್ಪಿಸಿಕೊಳ್ಳಲು ಹೇಳುವುದು. ಇದಿಷ್ಟೇ ಸಾಧ್ಯ ಎನಿಸಿತು. ನಮ್ಮ ಇಲಾಖೆಯ ನಂಬಿಕಸ್ಥ ಸಿಬ್ಬಂದಿ ಮತ್ತು ರೈತರನ್ನು ಬಳಸಿ ಮಾಹಿತಿ ಜಾಲವೊಂದನ್ನು ರೂಪಿಸಿದೆ. ನನಗೆ ಯಾವ ಸಂಬಂಧ ಇಲ್ಲದಿದ್ದರೂ ಮತ್ತೆಮತ್ತೆ ಪಟ್ಟಣದಲ್ಲಿ ಸುತ್ತುತ್ತಾ ಪೊಲೀಸ್ ಠಾಣೆ, ಕಂದಾಯ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೆ.

ಹಳ್ಳಿಹಳ್ಳಿಗೆ ಹೋಗುತ್ತಿದ್ದ ಪೊಲೀಸರು ಅಲ್ಲಿ ಸಿಕ್ಕ ಗಂಡಸರನ್ನೆಲ್ಲಾ ಹಿಡಿತರುತ್ತಿದ್ದುದರಿಂದ ಹಳ್ಳಿಗಳಲ್ಲಿ ಗಂಡಸರೆಲ್ಲಾ ಮಾಯವಾಗಿಬಿಟ್ಟರು. ಕೇವಲ ಹೆಂಗಸರು, ಮಕ್ಕಳು, ಮುದುಕರು ಮಾತ್ರ ಕಾಣುತ್ತಿದ್ದರು. ಮುಂಗಾರಿನ ಕೃಷಿ ಕೆಲಸಗಳು ಬಹಳ ಬಿರುಸಿನಿಂದ ಸಾಗಬೇಕಾಗಿದ್ದ ಕಾಲದಲ್ಲಿ ಹೊಲಗಳಲ್ಲಿ ಯಾರು ಕಾಣುತ್ತಲೇ ಇರಲಿಲ್ಲ. ಕೃಷಿ ಇಲಾಖೆಯ ನಮಗೆಲ್ಲಾ ಆ ಇಡೀ ತಿಂಗಳು ಅಘೋಷಿತ ದೀರ್ಘ ರಜೆಯಾಗಿತ್ತು.

ಹಳ್ಳಿಗಳ ಗಂಡಸರೆಲ್ಲಾ ಅಡವಿ ಸೇರಿಬಿಟ್ಟಿದ್ದರು. ಸುತ್ತಮುತ್ತಲ ಗುಡ್ಡಗಳ ಮೇಲೆ, ಅಲ್ಲಿಯ ಗುಹೆ, ಪಾಳು ದೇಗುಲಗಳಲ್ಲಿ ವಾಸಿಸುತ್ತಿದ್ದರು. ಅವರಿಗೆ ಮನೆಗಳಿಂದ ಕದ್ದುಮುಚ್ಚಿ ಊಟ ಸರಬರಾಜಾಗುತ್ತಿತ್ತು. ಪತ್ರಿಕೆಗಳ ಮೂಲಕವೂ ಅವರಿಗೆ ಏನು ನಡೆಯುತ್ತಿದೆಯೆಂಬ ಸುದ್ದಿಗಳು ಸಿಗುವುದು ಕೂಡ ಅವರಿಗೆ ಬಹಳ ಕಷ್ಟವಾಗಿತ್ತು.

ಅವರಿಗೆ ಇದೆಲ್ಲ ಒಂದು ರೀತಿ ಅವರ ಹಿರಿಯರು ಹೇಳುತ್ತಿದ್ದ 1942ರ ಕ್ವಿಟ್ ಇಂಡಿಯಾ ಸ್ವಾತಂತ್ರ್ಯ ಹೋರಾಟದ ಅನುಭವಗಳ ಪುನರಭಿನಯವೆನ್ನುವಂತಿತ್ತು. ಆದರೆ ಅದು ಬ್ರಿಟಿಷರ ಕಾಲದ ದೌರ್ಜನ್ಯಗಳ ಕಾಲದ್ದು. ಈಗ ಸ್ವತಂತ್ರ ಭಾರತದಲ್ಲಿ ರೈತರು ತಮ್ಮ ಬದುಕಿಗಾಗಿ ಅವೆ ಕಷ್ಟಗಳನ್ನು, ದೌರ್ಜನ್ಯಗಳನ್ನು ಅನುಭವಿಸುತ್ತಿದ್ದರು. ಎಂತಹ ವಿಪರ್ಯಾಸ!

ಈ ರೈತರು, ರೈತ ಮಹಿಳೆಯರ ವರ್ತನೆ ನೋಡುತ್ತಿದ್ದರೆ ಬಸವರಾಜ ಕಟ್ಟೀಮನಿಯವರ ’ಮಾಡಿ ಮಡಿದವರು’ ಕಾದಂಬರಿ ಮತ್ತು ಅದನ್ನು ಆಧರಿಸಿ ಶಂಕರಪ್ಪನವರು ಮಾಡಿದ ಅದೇ ಹೆಸರಿನ ಕಪ್ಪು ಬಿಳಿ ಸಿನೆಮಾ ನೆನಪಿಗೆ ಬಂತು. ಈ ಜನರು ಉಪಯೋಗಿಸುತ್ತಿದ್ದ ಜವಾರಿ ಬುದ್ಧಿವಂತಿಕೆ ಆಶ್ಚರ್ಯವನ್ನೂ ತರುತ್ತಿತ್ತು.

ಸಾಮಾನ್ಯ ಜನರ ಪಾಡೇ ಹೀಗಾದರೆ ಇನ್ನು ಈ ಚಳವಳಿಯ ಅಧಿನಾಯಕರ ಕತೆ ಏನು? ಅವರ ಮೇಲೆ ಹತ್ತಾರು ವರ್ಷ ಜೈಲುವಾಸವಾಗಬಹುದಾದ ಬಹಳ ಕಠಿಣ ದೇಶದ್ರೋಹದ ಕಲಂಗಳ ಕೇಸುಗಳು, ಇನ್ನೂ ಕೆಲವರ ಮೇಲೆ ಕೊಲೆಯ ಕೇಸುಗಳನ್ನೂ ಜಡಿಯಲಾಗಿತ್ತು.

ಗುಂಡೂರಾವ್

ನರಗುಂದದಲ್ಲಿ ಹೀಗೆ ಸರ್ಕಾರ ರೈತರ ಬೇಟೆಯಾಡುತ್ತಿದ್ದ ಸಮಯದಲ್ಲಿ ಇಡೀ ಕರ್ನಾಟಕದ ಉದ್ದಗಲಕ್ಕೂ ರೈತರು ಭುಗಿಲೆದ್ದಿದ್ದರು.

ರಾಜ್ಯದೆಲ್ಲೆಡೆ ಕಾಡುಕಿಚ್ಚಿನಂತೆ ಹಬ್ಬಿದ ರೈತ ಚಳವಳಿ

ರೈತ ಬಂಡಾಯ ನಡೆದ ನಂತರದ ಏಳು ದಿನಗಳಲ್ಲಿ ನೂರಕ್ಕಿಂತ ಹೆಚ್ಚು ನಗರ, ಪಟ್ಟಣಗಳಲ್ಲಿ ತನ್ನಿಂದತಾನೇ ಚಳವಳಿ ಹಬ್ಬಿಬಿಟ್ಟಿತು. ನಲವತ್ತಕ್ಕೂ ಹೆಚ್ಚು ಕಡೆ ಲಾಠಿ ಚಾರ್ಜ್‌ಗಳು, ಏಳು ಗೋಲಿಬಾರ್‌ಗಳು. ಇಪ್ಪತ್ತು ಜನರ ಹತ್ಯೆ. ಐನೂರಕ್ಕು ಹೆಚ್ಚು ಜನರಿಗೆ ಗಾಯಗಳು. ಮುನ್ನೂರಕ್ಕೂ ಹೆಚ್ಚು ಜನರ ಮೇಲೆ ಬಲವಾದ ಕೇಸುಗಳು.

ರಾಜ್ಯದ ಚರಿತ್ರೆ ಇರಲಿ, ದೇಶದ ಸ್ವಾತಂತ್ರ್ಯಾನಂತರದ ಚರಿತ್ರೆಯಲ್ಲಿ ಎಂದೂ ಕಾಣದ ರೈತರ ಮತ್ತು ಸಾಮಾನ್ಯ ಜನರ ಆಕ್ರೋಶ ಉಕ್ಕಿ ಹರಿಯಿತು. ರೈತರ ಸಮಸ್ಯೆಗಳ ಜೊತೆಗೆ ಬೆಲೆ ಏರಿಕೆ ಕೂಡಾ ಮುಖ್ಯ ಸಮಸ್ಯೆಯಾಗಿ ಜನರನ್ನು ಕಾಡುತ್ತಿತ್ತು.

ಪಕ್ಕದ ತಾಲೂಕಾದ ರೋಣದಲ್ಲಿ ಇದ್ದ ಪ್ರತಿ ಪಟ್ಟಣದಲ್ಲಿಯೂ ಜನ ಯಾವ ಸಂಘಗಳೂ ಇಲ್ಲದೆ ತಮ್ಮಿಂದ ತಾವೇ ಬೀದಿಗಿಳಿದು ಪ್ರತಿಭಟನೆ ಮಾಡಿದರು. ಅಲ್ಲಿಯ ಹೊಳೆ ಆಲೂರು, ಗಜೇಂದ್ರಗಡ, ರೋಣಗಳಲ್ಲಿ, ನೆರೆ ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಬಿಜಾಪುರ ಜಿಲ್ಲೆಯ ಪಟ್ಟಣಗಳಲ್ಲಿ, ಮತ್ತೆ ಮರುದಿನ ರಾಜ್ಯದ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕಗಳ ಇತರ ಪಟ್ಟಣಗಳಿಗೂ ಹೋರಾಟದ ಕಿಚ್ಚು ಹಬ್ಬಿತು. ಹಲವು ನಗರ, ಪಟ್ಟಣಗಳಲ್ಲಿ ಬಂದ್ ಆಚರಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ಈ ಚಳವಳಿಗಳ ಪ್ರಭಾವ ಹೆಚ್ಚು ಕಾಣಲಿಲ್ಲ. ಈಗ ಕೊಪ್ಪಳ ಜಿಲ್ಲೆಗೆ ಸೇರಿರುವ ಗಂಗಾವತಿಯಲ್ಲಿ ಜುಲೈ 27ರಂದು ಹತ್ತಾರು ಸಾವಿರ ಜನರು ಸೇರಿ ಪ್ರತಿಭಟನೆಗಳು ನಡೆದುವು. ಅವರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಬೆಲೆ ಏರಿಕೆಯಿಂದ ಬೇಸತ್ತಿದ್ದ ಅವರು ಅಂಗಡಿಗಳಿಗೆ ನುಗ್ಗಿ ಲೂಟಿ ಮಾಡಿದರು. ಆಗ ಪೊಲೀಸರು ಸಿಕ್ಕಸಿಕ್ಕಲ್ಲಿ ಗುಂಡು ಹಾರಿಸಿದ ಪರಿಣಾಮ ನಾಲ್ಕು ಜನರ ಹತ್ಯೆಯಾಯಿತು.

ಮರುದಿನ ಜುಲೈ 28ರಂದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ದೊಡ್ಡ ಪ್ರತಿಭಟನೆಗಳಾಗಿ ಮತ್ತೆ ಗುಂಡೇಟಿಗೆ ಐದು ಜನ ಬಲಿಯಾದರು. ಯಾದಗಿರಿ, ದ.ಕನ್ನಡದ ಉಜಿರೆ, ಕೋಲಾರ ಜಿಲ್ಲೆಯ ಬಾಗೇಪಲ್ಲಿ, ಶ್ರೀನಿವಾಸಪುರ, ಚಿತ್ರದುರ್ಗಗಳಲ್ಲಿ ಕೂಡಾ ಲಾಠಿ ಚಾರ್ಜ್ ಮತ್ತು ಗುಂಡೇಟುಗಳನ್ನು ಪ್ರಯೋಗಿಸಲಾಯಿತು.

ಜನರ ಸಮಸ್ಯೆಗಳನ್ನು ಆಲಿಸುವುದು, ಅವುಗಳಿಗೆ ತಕ್ಷಣದ ಪರಿಹಾರ ನೀಡಿ ಜನರ ಸಿಟ್ಟನ್ನು ಶಮನಗೊಳಿಸುವ ಬದಲಾಗಿ ಕಾಂಗ್ರೆಸ್ ಸರ್ಕಾರ ರೈತರು ಮತ್ತು ಜನಸಾಮಾನ್ಯರ ಮೇಲೆ ಯುದ್ಧ ಸಾರಿದಂತೆ ಬಲಪ್ರಯೋಗವೆಸಗಿತು.

ಈ ಕ್ರೌರ್ಯ ಇಡೀ ರಾಷ್ಟ್ರದ ಗಮನವನ್ನು ಸೆಳೆದರು ಕೂಡಾ ಇಂದಿರಾಗಾಂಧಿ ಮುಂದಾಳತ್ವದ ಒಕ್ಕೂಟ ಸರ್ಕಾರ ತುಟಿಬಿಚ್ಚಲಿಲ್ಲ. ರೈತರ ಬಹಳಷ್ಟು ಸಮಸ್ಯೆಗಳ ಮೂಲ ಕೇಂದ್ರ ಸರ್ಕಾರವೇ ಆಗಿತ್ತೆಂಬುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಅಷ್ಟೇ ಅಲ್ಲ ಇಷ್ಟೆಲ್ಲಾ ದೌರ್ಜನ್ಯ ನಡೆಸುತ್ತಿದ್ದ ಗುಂಡೂರಾವ್ ಸರ್ಕಾರಕ್ಕೆ ಭದ್ರ ಬೆಂಬಲ ನೀಡಿತು.

ಉಳಿದ ಪಕ್ಷಗಳ ಬಗ್ಗೆ ಗಮನ ಹರಿಸಿದರೆ, ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿದ್ದ ಜನತಾ ಪಕ್ಷದ ನಾಯಕರುಗಳೂ ಕೂಡಾ ಜನರ ಸಂಕಟವನ್ನು ಆಲಿಸಲು ಈ ಯಾವ ಜಾಗಗಳಿಗೂ ಭೇಟಿ ಕೊಡಲಿಲ್ಲ. ಅವರ ಚಟುವಟಿಕೆಯೆಲ್ಲಾ ವಿಧಾನ ಸಭೆಯಲ್ಲಿ ಭಾಷಣಗಳಿಗಷ್ಟೇ ಸೀಮಿತವಾಗಿತ್ತು. ನರಗುಂದ, ನವಲಗುಂದ, ಸೌದತ್ತಿ ರೈತ ಚಳುವಳಿ ತಿಂಗಳುಗಟ್ಟಲೆ ನಡೆದರೂ ಇವರ್‍ಯಾರೂ ಈ ಪ್ರದೇಶಗಳತ್ತ ಮುಖ ಮಾಡಲಿಲ್ಲ. ರೈತರ ಹತ್ಯೆಯಂತಹ ಘಟನೆಗಳಾದ ತಕ್ಷಣವಾದರೂ ಈ ಪ್ರದೇಶಗಳಿಗೆ ಧಾವಿಸಿ ಬರಬೇಕು, ಸಮಸ್ಯೆಗಳನ್ನು ಆಲಿಸಬೇಕು ಎಂಬುದು ಪ್ರಜಾಪ್ರಭುತ್ವದಲ್ಲಿ ಜನ ಪ್ರತಿನಿಧಿಗಳ, ವಿರೋಧ ಪಕ್ಷದ ಬಗೆಗಿನ ಪ್ರಾಥಮಿಕ ನಿರೀಕ್ಷೆ. ಅವು ಯಾವುದನ್ನೂ ಇವರು ಪೂರೈಸಲಿಲ್ಲ. ಅಂದು ವಿರೋಧ ಪಕ್ಷದ ನಾಯಕರಾಗಿದ್ದವರು ಈ ಪ್ರದೇಶಗಳ ನೆರೆಯ ಹುಬ್ಬಳ್ಳಿ ಗ್ರಾಮೀಣದಿಂದ ಆಯ್ಕೆಯಾಗಿದ್ದ ಎಸ್.ಆರ್.ಬೊಮ್ಮಾಯಿಯವರೇ. ಇದು ಜನತಾ ಪಕ್ಷದ ನಿಜ ಸ್ವರೂಪವನ್ನೂ ತೋರಿಸುತ್ತದೆ. ಆದರೆ ರೈತರ, ಜನಸಾಮಾನ್ಯರ ಹೋರಾಟ, ಸಾವು ನೋವುಗಳ ರಾಜಕೀಯ ಫಲವನ್ನು ದೊಡ್ಡ ಪ್ರಮಾಣದಲ್ಲಿ ಪಡೆದು ನಂತರದ ಕಾಲಘಟ್ಟದಲ್ಲಿ ಹಲವು ಬಾರಿ ಅಧಿಕಾರದ ಗದ್ದುಗೆ ಏರಿದ್ದು ಆ ಪಕ್ಷವೇ ಎಂಬುದು ವಿಪರ್ಯಾಸ.

(ಕೃಷಿ ಕಾರ್ಪೊರೆಟೀಕರಣದ ಬಗ್ಗೆ ಲೇಖಕರು ಬರೆಯುತ್ತಿರುವ ಸರಣಿ ಲೇಖನಗಳ ಭಾಗವಾದ ಎರಡು ಕಂತುಗಳ ಈ ಬರಹ ಇದರೊಂದಿಗೆ ಕೊನೆಗೊಂಡಿದೆ. ಮುಂದಿನ ವಾರ: 80 ರ ದಶಕದಲ್ಲಿ ದೇಶವ್ಯಾಪಿ ಹಬ್ಬಿದ ರೈತ ಚಳುವಳಿ)

ಜಿ. ಎನ್. ನಾಗರಾಜ್

ಜಿ. ಎನ್. ನಾಗರಾಜ್
ಸರ್ಕಾರಿ ಅಧಿಕಾರಿಯಾಗಿದ್ದ ಜಿ. ಎನ್. ನಾಗರಾಜ್ 80ರ ದಶಕದ ಕರ್ನಾಟಕದ ರೈತ ಬಂಡಾಯದ ಹೊತ್ತಿನಲ್ಲಿ ನೌಕರಿ ಬಿಟ್ಟು ಪೂರ್ಣಾವಧಿ ಸಂಘಟಕರಾದವರು. ಸಿಪಿಎಂ ಪಕ್ಷದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಆಳವಾದ ಅಧ್ಯಯನ ಮತ್ತು ವಿಶ್ಲೇಷಣೆಯಿಂದ ವಿಚಾರ ಮಂಡಿಸುವವರು.


ಇದನ್ನೂ ಓದಿ: ನರಗುಂದ ರೈತ ಬಂಡಾಯ ಮತ್ತು ಫಸಲುಗಳ ಬೆಲೆ ಪ್ರಶ್ನೆ; ಭಾಗ-1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...