PC: UNChealthcare

ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದ ಗರ್ಭಿಣಿಯೊಬ್ಬರು ಉರಿ ಬಿಸಿಲಿನಲ್ಲಿ ಮೂರು ಕಿಲೋಮೀಟರ್ ದೂರ ನಡೆದುಕೊಂಡು ಹೋಗುವಂತೆ ಮಾಡಿದ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿರುವ ಘಟನೆ ಒಡಿಶಾದ ಮಯೂರ್‌ಭಂಜ್‌ನಲ್ಲಿ ನಡೆದಿದೆ.

ಮಯೂರ್ಭಂಜ್ ಜಿಲ್ಲೆಯ ಶರತ್ ಪೊಲೀಸ್ ಠಾಣೆಯ ಅಧಿಕಾರಿ (Officer-In-Charge) ರೀನಾ ಬಕ್ಸಲ್ ಅವರನ್ನು ಮಾರ್ಚ್ 28 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಮಯೂರ್‌ಭಂಜ್ ಎಸ್‌ಪಿ ಪತ್ರ ಬರೆದು ಆದೇಶಿಸಿದ್ದಾರೆ.

ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಸಹಾಯಕ ಸಬ್ ಇನ್ಸ್‌ಪೆಕ್ಟರ್ ಬಿ.ಡಿ.ದಸ್ಮೋಹಪಾತ್ರ ಅವರಿಗೆ ಹಸ್ತಾಂತರಿಸಲು ರೀನಾ ಬಕ್ಸಲ್ ಅವರಿಗೆ ತಿಳಿಸಲಾಗಿದೆ. ಗರ್ಭಿಣಿ ಮತ್ತು ಆಕೆಯ ಪತಿ , ರೀನಾ ಬಕ್ಸಲ್ ತಮ್ಮನ್ನು ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: `1232 ಕಿ.ಮೀ’ | ಕರಾಳ ಲಾಕ್‌ಡೌನ್‌‌ನಲ್ಲಿ ಕಾರ್ಮಿಕರ ‘ಮಹಾವಲಸೆ’ಯ ಕತೆ ಹೇಳುವ ಸಾಕ್ಷ್ಯಚಿತ್ರ

ಗುರುಬಾರಿ ಎಂಬ ಮಹಿಳೆ ತನ್ನ ಪತಿ ಬಿಕ್ರಮ್ ಬಿರುಲಿಯೊಂದಿಗೆ ಬೈಕ್‌ನಲ್ಲಿ ಆರೋಗ್ಯ ತಪಾಸಣೆಗಾಗಿ ಉದಾಲಾ ಉಪವಿಭಾಗ ಆಸ್ಪತ್ರೆಗೆ ಹೋಗುತ್ತಿದ್ದಾಗ ಅವರನ್ನು ಹೆಲ್ಮೆಟ್ ತಪಾಸಣೆ ವೇಳೆ ಪೊಲೀಸರು ತಡೆದಿದ್ದಾರೆ. ವಾಹನ ಚಲಾಯಿಸುತ್ತಿದ್ದ ಬಿಕ್ರಮ್ ಬಿರುಲಿ ಹೆಲ್ಮೆಟ್ ಧರಿಸಿದ್ದರೆ, ಗರ್ಭಿಣಿ ಗುರುಬಾರಿ ಹೆಲ್ಮೆಟ್ ಧರಿಸಿರಲಿಲ್ಲ.

ಆರೋಗ್ಯ ಪರಿಸ್ಥಿತಿಯ ಕಾರಣ ಪತ್ನಿ ಹೆಲ್ಮೆಟ್ ಧರಿಸಿಲ್ಲ ಎಂದು ಬಿಕ್ರಮ್ ಹೇಳಿದ್ದಾರೆ. ಜೊತೆಗೆ ತಾವು ಆಸ್ಪತ್ರೆಗೆ ಹೋಗುತ್ತಿರುವುದಾಗಿಯೂ ತಿಳಿಸಿದ್ದಾರೆ. ಆದರೆ, ಅಧಿಕಾರಿ ರೀನಾ ಬಕ್ಸಲ್ ಅವರ ಮಾತುಗಳಿಗೆ ಕಿವಿಗೊಡದೆ, ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂಪಾಯಿ ದಂಡ ವಿಧಿಸಿದ್ದಾರೆ.

500 ರೂಪಾಯಿ ದಂಡ ಕಟ್ಟಲು ಬಿಕ್ರಾಮ್ ಅವರನ್ನು ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ರೀನಾ ಬಕ್ಸಲ್ ಒತ್ತಾಯಿಸಿದ್ದಾರೆ. ಗರ್ಭಿಣಿ ಪತ್ನಿಯನ್ನು ಸ್ಥಳದಲ್ಲಿಯೇ ಬಿಟ್ಟು ಪತಿ ದಂಡ ಕಟ್ಟಲು ತೆರಳಿದ್ದಾರೆ. ಇತ್ತ ಗರ್ಭಿಣಿ  ಗುರುಬಾರಿ ಸಹ ಕಾಯಲು ಆಗದೆ ಉರಿ ಬಿಸಿಲಿನಲ್ಲಿಯೇ ಕಾಲ್ನಡಿಗೆಯಲ್ಲಿ ಮೂರು ಕಿಲೋಮೀಟರ್ ಪ್ರಯಾಣ ಮಾಡಿದ್ದಾರೆ.

ಘಟನೆಯ ನಂತರ ತನಿಖಾ ವರದಿಯ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿ, ಶರತ್ ಪೊಲೀಸ್ ಠಾಣೆಯ ಅಧಿಕಾರಿ ರೀನಾ ಬಕ್ಸಲ್  ಅವರನ್ನು ಅಮಾನತುಗೊಳಿಸಿದ್ದಾರೆ.


ಇದನ್ನೂ ಓದಿ: ಪಂಜಾಬ್ ಬಿಜೆಪಿ ಶಾಸಕನ ಮೇಲೆ ಹಲ್ಲೆ ಪ್ರಕರಣ: ನಮ್ಮ ರೈತರು ಭಾಗಿಯಾಗಿಲ್ಲವೆಂದ ರಾಕೇಶ್ ಟಿಕಾಯತ್

LEAVE A REPLY

Please enter your comment!
Please enter your name here