HomeಮುಖಪುಟDo The Right Thing: ಸಿನಿಮಾ ಜಗತ್ತಿಗೆ ಹೊಸ ಪಠ್ಯವೊಂದನ್ನು ಕರುಣಿಸಿದ ಸ್ಪೈಕ್ ಲೀ

Do The Right Thing: ಸಿನಿಮಾ ಜಗತ್ತಿಗೆ ಹೊಸ ಪಠ್ಯವೊಂದನ್ನು ಕರುಣಿಸಿದ ಸ್ಪೈಕ್ ಲೀ

- Advertisement -
- Advertisement -

ನಮ್ಮ ದೇಶದಲ್ಲಿ ಖೈರ್ಲಾಂಜಿಯಂತಹ ದಲಿತರ ಮೇಲಿನ ಅಮಾನುಷ ದೌರ್ಜನ್ಯದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಇವತ್ತಿಗೂ ಇಂತಹ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ. ಆದರೆ ಅವುಗಳ ಬಗ್ಗೆ ವರದಿಗಳು ನಮಗೆ ಸುಲಭವಾಗಿ ತಲುಪುತ್ತಿಲ್ಲ. ಆಕಸ್ಮಾತ್ ತಲುಪಿದರೂ, ಆ ದೌರ್ಜನ್ಯದ ನಿರೂಪಣೆಯೇ ಭ್ರಷ್ಟಗೊಂಡಿರುತ್ತದೆ. ಇನ್ನು ಜಾತಿಗ್ರಸ್ತ, ಜಾತಿ ಶ್ರೇಣಿಕರಣ-ಶ್ರೇಷ್ಠತೆಯ ವ್ಯಸನದ ಪರಿಸರದಲ್ಲಿ ಬೆಳೆದ ಮೆದುಳು ಪೂರ್ಣ ಪೂರ್ವಗ್ರಹಗಳಿಂದ ತುಂಬಿ ಹೋಗಿರುವುದರಿಂದ, ಈ ತರದ ದೌರ್ಜನ್ಯಗಳಿಗೆ ಪ್ರಿವಿಲೆಜ್ ಸಮುದಾಯದ ಸ್ಪಂದನೆ ಮತ್ತಷ್ಟು ಕ್ರೂರವಾಗಿರುತ್ತದೆ. ಪ್ರಗತಿಪರರು ಎನಿಸಿಕೊಂಡ ಸಾಮಾಜಿಕ ಹೋರಾಟಗಾರರ, ವಿದ್ಯಾವಂತರ, ಸಾಹಿತಿಗಳ, ಕಲಾವಿದರ ಸ್ಪಂದನೆ ಅಥವಾ ಅವರ ಆದ್ಯತೆ ಕೂಡ ಹಲವು ಬಾರಿ ಹೇಸಿಗೆ ಹುಟ್ಟಿಸುತ್ತದೆ. ಇನ್ನು ಮೇಲ್ಜಾತಿ ಸಮುದಾಯದವರೇ ತುಂಬಿರುವ ಮಾಧ್ಯಮಗಳನ್ನು ಕೇಳುವಂತೆಯೇ ಇಲ್ಲ. ಇಂತಹ ದೌರ್ಜನ್ಯ ಸಂದರ್ಭದಲ್ಲಿ ಇಂತಹ ಮಾಧ್ಯಮಗಳು ವಿಶೇಷ ಆದ್ಯತೆಯ ಮೇಲೆ ವರದಿ ಮಾಡುವುದಿರಲಿ, ಕನಿಷ್ಠ ಪತ್ರಿಕಾ ಧರ್ಮವನ್ನು ಪಾಲಿಸುವುದಿಲ್ಲ.

ಖೈರ್ಲಾಂಜಿಯನ್ನೆ ಉದಾಹರಿಸಿದ ಕಾರಣವೇನೆಂದರೆ, ಆನಂದ್ ತೇಲ್ತುಂಬ್ಡೆ ಅವರ “ಖೈರ್ಲಾಂಜಿ” ಪುಸ್ತಕ (ಕನ್ನಡ ಅನುವಾದ: ಎಸ್ ಶಿವಸುಂದರ್ ಮತ್ತು ವಿ.ಎಸ್. ಶ್ರೀಧರ್, ಲಂಕೇಶ್ ಪ್ರಕಾಶನ) ದಲಿತರ ಮೇಲೆ ನಡೆದ ದೌರ್ಜನ್ಯ ಮತ್ತು ಅದರ ವಿರುದ್ಧದ ಕಾನೂನು ಹೋರಾಟ ಹಾಗು ಅದರಲ್ಲಾದ ಸೋಲಿನ ಎಲ್ಲಾ ಮಗ್ಗಲುಗಳನ್ನು ಎಳೆಎಳೆಯಾಗಿ ವಿವರಿಸುತ್ತದೆ. ಖೈರ್ಲಾಂಜಿಯಲ್ಲಿ ನಡೆದಂತಹ ದಲಿತ ಸಮುದಾಯದ ಮೇಲಿನ ದೌರ್ಜನ್ಯ ಒಂದು ಪಕ್ಷ ಸ್ವಸ್ಥ ಮನಸ್ಸನ್ನು ನಡುಗಿಸಿಬಿಟ್ಟರೂ, ಇದರ ವಿರುದ್ಧದ ಕಾನೂನು ಹೋರಾಟದಲ್ಲಿ, ದೌರ್ಜನ್ಯಕ್ಕೆ ಒಳಗಾದವರೇ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ಹೇಳುವ ಪರಿಸ್ಥಿತಿಗೆ ದೂಡಲ್ಪಡುವ ಅಸಹಾಯಕ ಪರಿಸ್ಥಿತಿಗೆ ಕಾರಣವಾಗುವ ವ್ಯವಸ್ಥೆ ಎಷ್ಟು ಕ್ರೂರ ಎಂಬುದನ್ನ ವಿವರಿಸಲೂ ಕಷ್ಟ. ನಿಷ್ಪಕ್ಷಪಾತವಾಗಿ ಕರ್ತವ್ಯ ಪಾಲಿಸಬೆಕಾದ ಸಾಂಸ್ಥಿಕ ಅಧಿಕಾರ ಕೇಂದ್ರಗಳಾದ ಪೊಲೀಸ್, ನ್ಯಾಯಾಂಗ, ಪ್ರಭುತ್ವಗಳ ಆಳದಲ್ಲಿರುವ ದಲಿತ ಸಮುದಾಯದ ಮೇಲಿನ ಅಸಹನೆ ಮತ್ತು ದ್ವೇಷದ ಮನಸ್ಥಿತಿಯೇ ಖೈರ್ಲಾಂಜಿ, ಕಂಬಾಲಪಲ್ಲಿಯಂತಹ ಅಸಂಖ್ಯಾತ ಪ್ರಕರಣಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗದೆ ಇರಲು ಮುಖ್ಯ ಕಾರಣ.

Do The Right Thing (1989)

ನ್ಯೂಯಾರ್ಕ್ ನಗರದ ಬೆಡ್‌ಫೋರ್ಡ್ ಸ್ಟಯ್ ಪ್ರದೇಶದಲ್ಲಿ ಆಫ್ರೊ-ಅಮೆರಿಕನ್ ಸಮುದಾಯದವರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ; ಒಂದು ಸುಡು ಬೇಸಿಗೆ ದಿನದ ಅವರ ಬದುಕಿನ ಚಿತ್ರಣ ಮತ್ತು ತಮ್ಮ ಮೇಲಿನ ಜನಾಂಗೀಯ ದ್ವೇಷಕ್ಕೆ ಅವರ ಪ್ರತಿರೋಧದ ದಾಖಲೆಯೇ ಸ್ಪೈಕ್ ಲೀ ನಿರ್ದೇಶನದ Do The Right Thing (1989) ಸಿನಿಮಾದ ಒಂದು ಸಾಲಿನ ಕಥಾ ಹಂದರ. ಆಫ್ರೊ-ಅಮೆರಿಕನ್ ಸಮುದಾಯದ ಈ ಪ್ರದೇಶದಲ್ಲಿ-ಇಟಾಲಿಯನ್ ಅಮೆರಿಕನ್ ವ್ಯಕ್ತಿ ಸಾಲ್ 25 ವರ್ಷಗಳಿಂದ ಪಿಜ್ಜಾ ರೆಸ್ಟೋರೆಂಟ್ ಒಂದನ್ನು ನಡೆಸುತ್ತಿದ್ದಾನೆ. ಇವನ ಇಬ್ಬರ ಮಕ್ಕಳು ಪಿನೊ ಮತ್ತು ವಿಟೊ ಕೂಡ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಲ್ ಸ್ಥಳೀಯ ಮತ್ತು ಆಫ್ರೊ-ಅಮೆರಿಕನ್ ಸಮುದಾಯದ ಮೂಕಿಯನ್ನು ತನ್ನ ರೆಸ್ಟರೆಂಟಿನಲ್ಲಿ ಪಿಜ್ಜಾ ಡಿಲಿವರಿಗಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ.

ಪಾತ್ರಗಳ ಬಗ್ಗೆ ಪ್ರಾರಂಭದಲ್ಲೇ ಪ್ರೇಕ್ಷಕ ಪ್ರಿಜ್ಯುಡೈಸ್ ಆಗದ ರೀತಿ, ಬಹಳ ಸಾಧಾರಣ ರೀತಿಯಲ್ಲಿ ಪ್ರತಿಯೊಂದು ಪಾತ್ರಗಳನ್ನ ಎಸ್ಟಾಬ್ಲಿಷ್ ಮಾಡುತ್ತಾರೆ ಸ್ಪೈಕ್ ಲೀ. ಸಿನಿಮಾದಲ್ಲಿ ವಿಶೇಷವಾದದ್ದು ಏನೂ ಜರುಗುತ್ತಿಲ್ಲ ಅನ್ನುವಷ್ಟರಲ್ಲೇ ಒಂದು ಪ್ರತಿರೋಧದ ಕಿಡಿ ಚಿಮ್ಮುತ್ತದೆ. ಒಮ್ಮೆ, ಮೂಕಿ ಸ್ನೇಹಿತನಾದ ಬಗ್ಗಿನ್ ಔಟ್, ಸಾಲ್‌ನ ರೆಸ್ಟೋರೆಂಟ್‌ನ ಸಾಧಕರ ಗೋಡೆಯಲ್ಲಿ (Wall of Fame) ಬರೀ ಬಿಳಿ ಜನಾಂಗದ ಸಾಧಕರ ಫೋಟೋಗಳಿದ್ದು, ಕಪ್ಪು ಜನಾಂಗದ ಒಬ್ಬ ಸಾಧಕನ ಪೋಟೊ ಕೂಡ ಇಲ್ಲದ್ದು ನೋಡಿ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಅದಕ್ಕೆ ಸಾಲ್ ’ಇದು ನನ್ನ ರೆಸ್ಟೋರೆಂಟ್, ನನಗೆ ಇಷ್ಟ ಬಂದವರ ಫೋಟೋ ಹಾಕಿಕೊಳ್ಳುತ್ತೇನೆ, ಅದನ್ನು ಪ್ರಶ್ನೆ ಮಾಡಲು ನೀನ್ಯಾರು?’ ಎಂದು ದಬಾಯಿಸುತ್ತಾನೆ. ಅದಕ್ಕೆ ಬಗ್ಗಿನ್ ’ಇಲ್ಲಿ ಜನರ ಹಣ ಮಾತ್ರ ಬೇಕು, ಇಲ್ಲಿಯ ಜನರು ಬೇಡ ನಿನಗೆ’ ಎಂದು ಕೇಳುತ್ತಾನೆ. ಈ ಘಟನೆಯ ನಂತರ ಪಾತ್ರಗಳ ನಿಜವಾದ ಮುಖ ಮತ್ತು ಕಾಳಜಿಗಳು ಅನಾವರಣಗೊಳ್ಳುತ್ತಾಹೋಗುತ್ತದೆ. ಇಲ್ಲಿ ಹೊತ್ತಿಕೊಂಡ ಪ್ರತಿರೋಧದ ಕಿಡಿ ಸಿನಿಮಾದ ಅಂತ್ಯದಲ್ಲಿ ಪೊಲೀಸ್ ಅಧಿಕಾರಿ ಕೈಯಲ್ಲಿ ರೆಡಿಯೋ ರಹೀಮ್ ಕೊಲೆಯಾಗುವುದರೊಂದಿಗೆ ಮತ್ತು ಮೂಕಿ ಸಾಲ್‌ನ ರೆಸ್ಟೊರೆಂಟ್‌ಗೆ ಬೆಂಕಿ ಇಡುವುದರೊಂದಿಗೆ ಕೊನೆಯಾಗುತ್ತದೆ.

ಮೂಕಿ ಪಾತ್ರ (ಸ್ವತಃ ಸ್ಪೈಕ್ ಲೀ ಈ ಪಾತ್ರದಲ್ಲಿ ನಟಿಸಿದ್ದಾರೆ) ಕೊನೆಯಲ್ಲಿ ಸಾಲ್‌ನ ರೆಸ್ಟೋರೆಂಟ್‌ಗೆ ಬೆಂಕಿ ಇಡುವ ದೃಶ್ಯ ಜನಾಂಗಿಯ ಕಲಹಕ್ಕೆ ಪ್ರಚೋದಿಸುತ್ತದೆ ಎಂದು ಬಹಳಷ್ಟು ಸಿನಿಮಾ ವಿಮರ್ಶಕರು ಅಸಮಧಾನ ವ್ಯಕ್ತಪಡಿಸುತ್ತಾರೆ. ಸಿನಿಮಾದಲ್ಲಿ ಬಿಳಿಯ ಪೊಲೀಸ್ ಅಧಿಕಾರಿ ಕಪ್ಪು ರೆಡಿಯೊ ರಹೀಮ್‌ನನ್ನು ಉಸಿರುಗಟ್ಟಿ ಸಾಯಿಸಿದ್ದಕ್ಕೆ ಕ್ರೋಧಗೊಂಡು ಮೂಕಿ ಇದನ್ನು ಮಾಡುತ್ತಾನೆ ಎಂದು ಹೇಳುವ ವಿಮರ್ಶಕರು ಇದ್ದಾರೆ. 25 ವರ್ಷದಿಂದ ರೆಸ್ಟೋರೆಂಟ್ ನಡೆಸಿಕೊಂಡು ಬರುತ್ತಿರುವ ಸಾಲ್ ಬಗ್ಗೆ ಅಲ್ಲಿನ ಆಫ್ರೊ-ಅಮೆರಿಕನ್ ಸಮುದಾಯದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಈ ಅಭಿಪ್ರಾಯ ಉಳಿಸಿಕೊಳ್ಳುವುದಕ್ಕೋಸ್ಕರ ಸಾಲ್ ಪ್ರತಿ ದಿನ ಶ್ರಮಿಸುತ್ತಿರುತ್ತಾನೆ. ಇದು ಅವನ ವ್ಯವಹಾರದ ಒಂದು ಭಾಗ ಎಂಬುದು ಬಹಳ ಬೇಗ ಗೊತ್ತಾಗುತ್ತದೆ. ವೈಟ್ ಸುಪ್ರಿಮೆಸಿಯನ್ನೆ ಮೈದುಂಬಿಕೊಂಡಿರುವ, ಕಪ್ಪು ಜನಾಂಗದವರ ಬಗ್ಗೆ ಪೂರ್ವಾಗ್ರಹದ ಕೀಳು ಅಭಿಪ್ರಾಯವಿರುವ, ಜನಾಂಗೀಯ ದ್ವೇಷವನ್ನೇ ಉಸಿರಾಡುವ ಅವನ ಹಿರಿಯ ಮಗ ಪಿನೊವನ್ನು ಪ್ರತಿ ಬಾರಿ ಸಂತೈಸುತ್ತಿರುತ್ತಾನೆ. ಈ ಅಪ್ಪ ಮಕ್ಕಳ ಆಂತರ್ಯ ಬೇರೆ ಎಲ್ಲರಿಗಿಂತ ಕಡಿಮೆ ಕೂಲಿಗೆ ಕೆಲಸ ಮಾಡುವ ಮೂಕಿಗೆ ಚನ್ನಾಗಿ ಗೊತ್ತಿರುತ್ತದೆ. ಕೊನೆಯಲ್ಲಿ ಮೂಕಿ ಸಾಲ್‌ನ ರೆಸ್ಟೋರೆಂಟ್‌ಗೆ ಬೆಂಕಿ ಇಡುವುದು ಇದೇ ಕಾರಣಕ್ಕೆ ಅನಿಸುತ್ತದೆ.

ಇದನ್ನೂ ಓದಿ: ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

1986ರ ಡಿಸೆಂಬರ್ 16ರಂದು ಹಾವರ್ಡ್ ಬೀಚ್ ಹತ್ತಿರದ ಪಿಜ್ಜಾ ರೆಸ್ಟೊರೆಂಟ್ ಒಂದರಲ್ಲಿ ನಾಲ್ಕು ಕಪ್ಪು ಹುಡಗರ ಮೇಲೆ ನಡೆಸಿದ ಜನಾಂಗಿಯ ಹಲ್ಲೆಯ ಘಟನೆ, ಸ್ಪೈಕ್ ಲೀ Do The Right Thing ಸಿನಿಮಾ ಮಾಡಲು ಕಾರಣ. ಈ ಘಟನೆಯಲ್ಲಿ ಗ್ರಿಫಿತ್ ಎಂಬ ಹುಡುಗ ಸಾವನ್ನಪ್ಪುತ್ತಾನೆ. ಉಳಿದ ಮೂವರು ತೀವ್ರ ಹಲ್ಲೆಗೆ ಒಳಗಾಗಿ ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳುತ್ತಾರೆ. ಈ ಪ್ರಕರಣದಲ್ಲಿ ಕೊಲೆ ಅಪಾದನೆ ಮೇಲೆ ಕೆಲವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ಬಹಳಷ್ಟು ಆಪಾದಿತರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ.

ಆಫ್ರೊ-ಅಮೆರಿಕನ್ ನಿರ್ದೇಶಕ ಸ್ಪೈಕ್-ಲೀ ತನ್ನ 32ನೇ ವಯಸ್ಸಿನಲ್ಲಿ ನಿರ್ದೇಶಿಸಿದ Do The Right Thing ಹಾಲಿವುಡ್ ಜಗತ್ತಿನಲ್ಲಿ ಸಂಚಲನವನ್ನೇ ಉಂಟುಮಾಡಿತು. ಭಾರಿ ಚರ್ಚೆಗೆ ಗ್ರಾಸವಾದ ಈ ಸಿನಿಮಾ ಪ್ರಶಂಸೆಗಿಂತ ಟೀಕೆಗೆ ಒಳಗಾಗಿದ್ದೇ ಹೆಚ್ಚು. ಕಾಲಾನಂತರದಲ್ಲಿ ಈ ಸಿನಿಮಾವನ್ನ ಒಂದು ಮೈಲಿಗಲ್ಲಾಗಿ ಗುರುತಿಸಲಾಗಿದೆ. ತೆರೆಕಂಡು ಮೂರು ದಶಕಗಳೇ ಕಳೆದರೂ ಇವತ್ತಿಗೂ ಪ್ರಸ್ತುತವಾಗುತ್ತಿರುವ ಮತ್ತು ಹೆಚ್ಚು ಚರ್ಚೆಗೆ ಒಳಪಡುತ್ತಿರುವ ಹೆಗ್ಗಳಿಕೆ ಹೊಂದಿದೆ.

ವಿಕ್ಟಿಮ್ ಸಮುದಾಯದ ಕಲೆ ಮತ್ತು ಪ್ರಿವಿಲೆಜ್ ಸಮುದಾಯದವರ ವಿಮರ್ಶೆ/ವಿಶ್ಲೇಷಣೆ/ಅಭಿಪ್ರಾಯ

ಬಿಳಿ ಪೊಲೀಸ್ ಅಧಿಕಾರಿಯೊಬ್ಬ ಹಾಡುಹಗಲೆ ನಡುರೋಡಿನಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವ್ಯಕ್ತಿಯ ಕುತ್ತಿಗೆಯನ್ನು ತನ್ನ ಕಾಲಿನಿಂದ ಹಿಸುಕಿ ಸಾಯಿಸಿದ ಘಟನೆ ನಡೆದು ಒಂದು ದಶಕವೂ ಕಳೆದಿಲ್ಲ. ಆ ಕಗ್ಗೊಲೆ ನಡೆದದ್ದು 2020 ಡಿಸೆಂಬರ್ 25. ಆದರೆ Do The Right Thing ಸಿನಿಮಾ ಬಂದು 34 ವರ್ಷ ಕಳೆದರೂ ವಿಮರ್ಶಕರು (ಬಿಳಿ ಜನಾಂಗದ) ಮೂಕಿ ಪಾತ್ರದ ಒಂದು ಸಣ್ಣ ಪ್ರತಿರೋಧವನ್ನು ಉದಾಹರಿಸಿ, ಇದು ’ಜನಾಂಗೀಯ ಕಲಹವನ್ನು ಪ್ರಚೋದಿಸುವುದಿಲ್ಲವೇ’ ಎಂದು ಸ್ಪೈಕ್ ಲೀಯವರನ್ನು ಇವತ್ತಿಗೂ ಕೆಲವು ಸಂದರ್ಶನಗಳಲ್ಲಿ ಪ್ರಶ್ನಿಸುತ್ತಾರೆ. ಅದಕ್ಕೆ ಸ್ಪೈಕ್ ಚಿತ್ರಮಂದಿರದಿಂದ ’ಅರ್ನಾಲ್ಡ್ ಶ್ವಾಜೆನೆಗರ್‌ನ ಸಿನಿಮಾಗಳನ್ನು ನೋಡಿ ಬಂದು ಕೊಲೆ ಮಾಡಿದ ಘಟನೆ ನನಗೆ ನೆನಪಿಲ್ಲ’ ಎಂದು ಬಹಳ ಮಾರ್ಮಿಕವಾಗಿ ಪ್ರತಿಕ್ರಿಯಿಸುತ್ತಾರೆ. ಸ್ಪೈಕ್ ಲೀ ಒಂದು ಸಂದರ್ಶನದಲ್ಲಿ ಹೇಳಿಕೊಂಡ ಹಾಗೆ, 1989ರ ಕಾನ್ಸ್ ಚಿತ್ರೋತ್ಸವದ Palme d’Or ಪ್ರಶಸ್ತಿಯ 7 ಜನ ಜ್ಯೂರಿಗಳಲ್ಲಿ 6 ಜನರಿಗೆ Do The Right Thing ಸಿನಿಮಾ ಹಿಡಿಸಲಿಲ್ಲ. ಜಗತ್ತಿನಲ್ಲೇ ಬಹಳ ಯೋಗ್ಯವಾದ ಸಿನಿಮಾಗಳನ್ನ ಗುರುತಿಸುತ್ತದೆ ಎಂದು ಹೆಸರುವಾಸಿಯಾಗಿರುವ ಚಿತ್ರೋತ್ಸವದ ಜ್ಯೂರಿಗಳ ಮನಸ್ಥಿತಿಯಿದು.

ಅಮೆರಿಕದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಸಿನಿಮಾವನ್ನು ಬೋಧಿಸುವ ಮೆರಿಲಿನ್ ಫೇಬ್ ಅವರು, ಸಿನಿಮಾದ ಇತಿಹಾಸ, ಅದು ಬೆಳೆದು ಬಂದ ದಾರಿ ಮತ್ತು ಅದರ ಸ್ಥಿತ್ಯಂತರಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ Closely Watched Films ಪುಸ್ತಕದಲ್ಲಿ ಜಗತ್ತಿನ ಖ್ಯಾತನಾಮ 15 ಸಿನಿಮಾಗಳಲ್ಲಿನ, ಸಿನಿಮಾ ಕಟ್ಟುವಿಕೆ ಮತ್ತು ಅದರ ತಾಂತ್ರಿಕ ಅಂಶಗಳನ್ನು ಚರ್ಚಿಸಿ ವಿಶ್ಲೇಷಿಸಿದ್ದಾರೆ. ’ಜನಾಂಗೀಯ ದ್ವೇಷವನ್ನೇ ಮೈದುಂಬಿಗೊಂಡಿರುವ ಸಿನಿಮಾ ಇತಿಹಾಸದಲ್ಲಿ ಬಹಳ ದೊಡ್ಡ ಮೈಲಿಗಲ್ಲು Do The Right Thing; ದೃಶ್ಯ ಮಾಧ್ಯಮದ ಹೊಸಹೊಸ ಸಾಧ್ಯತೆಗಳನ್ನು ಅನ್ವೇಷಿಸಿದ, ತಾಂತ್ರಿಕತೆಯನ್ನು ಅಭಿವೃದ್ಧಿಪಡಿಸಿದ, ಸಿನಿಮಾ ಕಟ್ಟುವ ಕಲೆಗೆ ಆದ್ಯಗುರು ಎಂದು ಕರೆಯಲ್ಪಡುವ D W Grifith ನ ‘Birth of Nation’ (2015) ಸಿನಿಮಾ ಒಳಗೊಂಡಂತೆ, ಜನಾಂಗೀಯ ದ್ವೇಷ-ಅದಕ್ಕೆ ಪ್ರತಿರೋಧ, ಸಿನಿಮಾ ಎಂಬ ಕಲೆ ಯಾವುದಕ್ಕೆ ಸ್ಪಂದಿಸಬೇಕು, ಯಾವ ಕಾಲ-ದೇಶದ ಕತೆಗಳನ್ನ ಪ್ರಸ್ತುತಪಡಿಸಬೇಕು, ಯಾರನ್ನು ಹೇಗೆ ಪ್ರತಿನಿಧಿಸಬೇಕು ಎಂಬುದಕ್ಕೆ ಸಿನಿಮಾ ಜಗತ್ತಿಗೆ ಒಂದು ಹೊಸ ಕಣ್ಣೋಟ ನೀಡಿದ ಸಿನಿಮಾ ‘Do The Right Thing’ ಎಂದು ವಿಶ್ಲೇಷಿಸುತ್ತಾರೆ.

ಮೆರಿಲಿನ್ ಅವರ ಐತಿಹಾಸಿಕ ಮಹತ್ವದ 15 ಸಿನಿಮಾಗಳ ಆಯ್ಕೆಯಲ್ಲಿ Do The Right Thing ಇರುವುದು ಅವರ ಆಯ್ಕೆಯ ನಿಷ್ಪಕ್ಷಪಾತ ಹಾಗೂ ಪೂರ್ವಗ್ರಹರಹಿತ ಮನಸ್ಥಿತಯನ್ನು ಸೂಚಿಸುತ್ತದೆ ಮತ್ತು ಈ ಸಿನಿಮಾವನ್ನ ಅವರು ಗ್ರಹಿಸಿದ ರೀತಿಯಲ್ಲೂ ಅದು ತಿಳಿಯುತ್ತದೆ. ಆದರೆ, ಗ್ರಿಫಿತ್‌ನ ‘Birth of Nation’ ಜನಾಂಗೀಯ ದ್ವೇಷವನ್ನೇ ಅಭಿವ್ಯಕ್ತಿಸುವ ಸಿನಿಮಾ ಎಂದು ಕೂಡ ಅವರು ಹೇಳುತ್ತಾರೆ. ಗ್ರಿಫಿತ್ ಈ ಸಿನಿಮಾ ಮುಖಾಂತರ ವೃದ್ಧಿಪಡಿಸಿದ Mise-en-scène, Long Shot, Close Up, Match Cut ನಂತಹ ತಾಂತ್ರಿಕ ಅಂಶಗಳನ್ನು ಬಿಡಿಬಿಡಿ ದೃಶ್ಯಗಳ ಉದಾಹರಣೆಗಳನ್ನು ಮುಂದಿಟ್ಟುಕೊಂಡು ಬಹಳ ವಿವರವಾಗಿ, ಸಾವಕಾಶವಾಗಿ ವಿಶ್ಲೇಷಿಸುತ್ತಾರೆ. ಆದರೆ, ಸ್ಪೈಕ್ ಲೀಯ ಸಿನಿಮಾದಲ್ಲಿನ ತಾಂತ್ರಿಕ ಅಂಶಗಳ ಕುರಿತು ಹೆಚ್ಚು ವಿವರಗಳೇ ಇಲ್ಲ. ಆ ಸಿನಿಮಾ ಮಾತನಾಡುವ ರಾಜಕಾರಣವನ್ನು ಮಾತ್ರ ಹೆಚ್ಚು ಚರ್ಚಿಸುತ್ತಾರೆ. ಆ ಸಿನಿಮಾದ Aesthetic ಅಂಶಗಳ ಬಗ್ಗೆ ಯಾವ ವಿವರಣೆಗಳೂ ಇಲ್ಲ. ಇಲ್ಲಿ ಮೆರಿಲಿನ್ ಅವರನ್ನ ದೂಷಿಸುವುದಕ್ಕಿಂತಲೂ, ಈ ನಿರ್ಲಕ್ಷತೆಗೆ ಏನು ಕಾರಣ ಇರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದ ಭಾಗವಾಗಿಯಷ್ಟೇ ಈ ಪ್ರಶ್ನೆ. 2004ರಲ್ಲಿ ಬಿಡುಗಡೆಗೊಂಡ ಈ ಪುಸ್ತಕಕ್ಕೆ 1989ರಲ್ಲಿ ಬಿಡುಗಡೆಯಾದ Do The Right Thing ಸಿನಿಮಾವನ್ನು ತಾಂತ್ರಿಕವಾಗಿ ವಿಶ್ಲೇಷಿಸಲು ಪರಿಕರಗಳೇ ಇರಲಿಲ್ಲವೇ?

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...