Homeಕರ್ನಾಟಕಭದ್ರಾವತಿ ಸ್ಟೀಲ್ ಫ್ಯಾಕ್ಟರಿ; ತೂತು ಬಿದ್ದ ಹಡಗು

ಭದ್ರಾವತಿ ಸ್ಟೀಲ್ ಫ್ಯಾಕ್ಟರಿ; ತೂತು ಬಿದ್ದ ಹಡಗು

- Advertisement -
- Advertisement -

(ಇದು 2011ರಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಬರಹ. ಭದ್ರಾವತಿಯ ಹೆಮ್ಮೆಯಾಗಿದ್ದ, ಸಾವಿರಾರು ನೌಕರರ ಜೀವನಾಡಿಯಾಗಿದ್ದ, ತನ್ನ ನಿಯಮಿತ ಸೈರನ್ನಿನ ದನಿಯಿಂದಲೇ ಊರಿನವರಲ್ಲಿ ವಿಶಿಷ್ಟ ಕಂಪನ ಮೂಡಿಸುತ್ತಿದ್ದ ಬೃಹತ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್ ಅದು ಆರಂಭಗೊಂಡ 105ನೆಯ ವರ್ಷ, ಸಂಸ್ಥಾಪನಾ ದಿನಾಚರಣೆಯ ದಿನವೇ ಮುಚ್ಚಿ ಹೋಗುವ ಹಾದಿ ಹಿಡಿದಿದೆ. ಎಂಟು ವರ್ಷಗಳ ಕೆಳಗೆ ಭದ್ರಾವತಿಯ ಇಂಥದೇ ಇನ್ನೊಂದು ಕರ್ನಾಟಕದ ಸಾರ್ವಜನಿಕ ವಲಯದ ಬೃಹತ್ ಉದ್ದಿಮೆ ‘ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ)’ ಮುಚ್ಚಿ ಹೋಯಿತು. ಈಗ ಇದರ ಸರದಿ. ಈ ವಿಷಾದದ ಗಳಿಗೆಯಲ್ಲಿ 12 ವರ್ಷಗಳ ಕೆಳಗೆ ಬರೆದ ಲೇಖನವನ್ನು ಕೊಂಚ ಬದಲಾವಣೆಗಳೊಂದಿಗೆ ಹಂಚಿಕೊಳ್ಳುತ್ತಿರುವೆ.)

2011, ಜನವರಿ 11ರಂದು ಭದ್ರಾವತಿಯ ಪ್ರತಿಷ್ಠಿತ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ವಿಐಎಸ್‌ಎಲ್‌ನ ಪ್ರೈಮರಿ ಮಿಲ್ಸ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಎಂಬ ಯುವ ಕಾರ್ಮಿಕ ಅಪಘಾತಕ್ಕೀಡಾಗಿ ಮೃತಪಟ್ಟ. ಥೇಟ್ ಕಬ್ಬಿನ ಗಾಣದಂತಹ ಪ್ರೈಮರಿ ಮಿಲ್ಸ್‌ನಲ್ಲಿ ದಪ್ಪ ಕಬ್ಬಿಣದ ತೊಲೆಗಳು ಹೊಕ್ಕು ತಮ್ಮ ಆಕಾರ, ಸೈಜು ಬದಲಿಸಿಕೊಂಡು ಹೊರಬರುತ್ತವೆ. ಯಂತ್ರದ ಬಾಯಿಗೆ ಕಬ್ಬಿಣದ ತೊಲೆ ನೂಕುವಾಗ ಅಕಸ್ಮಾತ್ ಜಾರಿಬಿದ್ದ ರಾಮಚಂದ್ರನ ದೇಹ ಆಚೆಯಿಂದ ಈಚೆ ಬರುವುದರಲ್ಲಿ ಗಾಣಕ್ಕೆ ಸಿಕ್ಕ ಕಬ್ಬಿನಂತೆ ಅಕ್ಷರಶಃ ಪುಡಿಪುಡಿಯಾಗಿತ್ತು. ಭೀಭತ್ಸವೆಂದರೆ ಇದೇ. ಕ್ಷಣಾರ್ಧದ ಮೈಮರೆವಿಗೆ ಜೀವದಾನ.

ಭದ್ರಾವತಿ ಕಾರ್ಖಾನೆಯ ಬಹುಪಾಲು ಕೆಲಸಗಳು ಮನುಷ್ಯರಿಂದಲೇ ನಡೆಯುವಂಥವು. ಯಂತ್ರಗಳನ್ನು ನಡೆಸುವ, ದಾರಿ ತೋರುವ ಕೆಲಸದಿಂದ ಹಿಡಿದು, ಹರಿವ ದ್ರವ ಕಬ್ಬಿಣಕ್ಕೆ ಕಾಲುವೆ ದಾರಿ ತೋಡುವುದೂ ಮನುಷ್ಯರೇ. ಕೆಲಸದ ಸಮಯದಲ್ಲಿ ಕೊಂಚ ಮೈ ಮರೆತರೂ ಸಾವು ಕಟ್ಟಿಟ್ಟದ್ದು. ಅಪಘಾತ, ಸಾವುನೋವುಗಳು ಸಾಮಾನ್ಯ. ಸೈರನ್ ಕೂಗಿ ಶಿಫ್ಟ್ ಮುಗಿಸಿ ಹೊರಬಿದ್ದ ಮೇಲೆಯೇ ಅಂದಿಗೆ ಬದುಕುಳಿದೆವೆಂಬ ಲೆಕ್ಕ.

‘ನನ್ ಹೆಣ್ತಿ ಬೈತಾಳೆ, ನಿಮಗೇನ್ ಕೆಪ್ಪೇನ್ರಿ? ಎಷ್ಟು ಸಲ ಹೇಳಿದ್ರೂ ಆಂ, ಆಂ ಅಂತೀರ. ಮಾತಿನ ಮೇಲೆ ಗಮನನೇ ಇಲ್ಲ ಅಂತ. ಇಲ್ಲಿ ಇಡೀ ದಿನ ಭರೋ ಅನ್ನೊ ಶಬ್ದ ಕಿವೀಲಿ ಹ್ಯಾಗ್ ತುಂಬಿರುತ್ತೆ ಅಂದ್ರೆ ಸಣ್ಣ ಮಾತು ಕಿವಿ ಮೇಲೆ ಬಿದ್ರೂ ತಲೆಗೇ ಹೋಗಿರಲ್ಲ. ಕಿವಿ ಸೂಕ್ಷ್ಮನ ಕಳಕಂಡ್ ಬಿಟ್ಟವೆ.’

‘ನಮ್ಗೆ ರಾತ್ರಿ ಹಗಲ ಅಂತೇನಿಲ್ಲ ಬಿಡಮ್ಮ, ಎಷ್ಟೊತ್ಗೆ ಮಲಗಿದ್ರೂ ಎಲ್ ಮಲ್ಗಿದ್ರು ಗೊರ್‍ಕೆನೇ. ರಾತ್ರಿ ಶಿಫ್ಟ್ ಮುಗ್ಸಿ ಹೋದೋನು ಬೆಳಿಗ್ಗೆ ಊಟ ಹ್ವಡ್ದು ಮಲಗ್ಬಿಟ್ರೆ ಮತ್ತೆ ಸಂಜೆ ಎದ್ದೊಳದು. ಅಂಥಾ ನಿದ್ದೆ…’

‘ಹೆಣದ ವಾಸನೆ ಅಷ್ಟು ಭೀಕರವಾಗಿರುತ್ತೆ ಅಂತ ಅವತ್ತೇ ಗೊತ್ತಾಗಿದ್ದು. ಈಗೊಂದೈದಾರು ವರ್ಷದ ಕೆಳಗೆ ಒಂದು ರಾತ್ರಿ ಸ್ಟೀಲ್ ಮೆಲ್ಟಿಂಗ್ ಸೆಕ್ಷನ್‌ನಲ್ಲಿ ಬ್ಲಾಸ್ಟ್ ಆಗಿ ಏಳು ಜನ ಸತ್ತೋದ್ರು. ಒಬ್ಬ ಪೂರಾ ಬೆಂದೋಗಿದ್ದ. ನಾನೇ ಡ್ರೈವ್ ಮಾಡ್ತಿದ್ದೆ. ಆಂಬುಲೆನ್ಸ್‌ನಲ್ಲಿ ತಗೊಂಡು ಆಸ್ಪತ್ರೆಗೆ ಹೋಗದ್ರಲ್ಲಿ ಸತ್ತೋದ. ಅವನ ಮೈಯಿಂದ ಬರ್ತಿದ್ದ ಸುಟ್ಟ ವಾಸನೆ, ಅಬ್ಬಾ, ಎಷ್ಟೋ ದಿನುದ್ ತಂಕ ಹೊಟ್ಟೆ ತೊಳೆಸೋದು. ಅಯ್ಯಯ್ಯ, ಭಾರೀ ಕೆಟ್ ಸಾವು.’

ಇಂತಹ ದುರ್ಮರಣಗಳ ನೆನಪಿನಲ್ಲೇ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ನೋಡಬೇಕೆಂದು ಅಲ್ಲಿ ನೌಕರರಾಗಿರುವ ಬಂಧುವಿನೊಡನೆ ಹೋದೆ. ಕಣ್ಣುಕುಕ್ಕುವ ಬೆಳಕು, ಕಿವಿಗಡಚಿಕ್ಕುವ ಸದ್ದು, ಅತಿ ಉಷ್ಣತೆ, ಹೊಗೆ, ಧೂಳಿನ ನಡುವೆ ಒಂದೇ ಸಮ ಆಚೀಚೆ ಓಡಾಡುತ್ತ ಬೆವರಿಳಿಸುವ ಮಾಸಿದ ನೀಲಿ ಸಮವಸ್ತ್ರದ ಜೀವಗಳು. ಅವರ ದುಡಿಮೆ ಎಷ್ಟು ಅಪಾಯಕಾರಿ ಎಂದು ಹೋದಮೇಲೆಯೇ ಗೊತ್ತಾದದ್ದು.

ಕಬ್ಬಿಣದಂತಹ ಗಟ್ಟಿ ಲೋಹವನ್ನೂ ಕರಗಿ ನೀರಾಗಿಸಿ ಹರಿಸಿಬಿಡಬಲ್ಲ ‘ಬ್ಲಾಸ್ಟ್ ಫರ್ನೇಸ್’ ಎಂಬ ಭಯಂಕರ ಶಾಖದ ಕುಲುಮೆಯೆದುರು ಹೋದೆವು. ಸಾಧಾರಣವಾಗಿ ಮನುಷ್ಯರ ಮೈ ಶಾಖ 97 ಡಿಗ್ರಿ ಫ್ಯಾರನ್ ಹೀಟ್ ಇರುತ್ತದೆ. 101, 102 ಡಿಗ್ರಿ ಆದರೆ ಅತಿಜ್ವರ, ಹೌದೇ? ಇಲ್ಲಿ ಫರ್ನೇಸಿನ ಉಷ್ಣತೆ ಎರಡೂವರೆ ಸಾವಿರ ಡಿಗ್ರಿ ಫ್ಯಾರನ್ ಹೀಟ್! ಆ ಅತಿಶಾಖದಲ್ಲಿ ಕಬ್ಬಿಣದ ಅದಿರು ಲೋಹರಸವಾಗಿ ಹರಿಯುತ್ತಿತ್ತು. ಅಲ್ಲಿ ಹತ್ತು ನಿಮಿಷ ಇರುವುದೂ ಕಷ್ಟವಾಯಿತು. ಬರಿಗಣ್ಣಲ್ಲಿ ನೋಡಬೇಡಿ ಎಂದು ಕಾರ್ಮಿಕರೊಬ್ಬರು ತಮ್ಮ ರಕ್ಷಣಾ ಕನ್ನಡಕವನ್ನು ತೆಗೆದುಕೊಟ್ಟರು. ‘ಬೇಡ, ಇನ್ನೇನು ಹೊರಡ್ತೀನಿ, ಹೇಗೆ ಕೆಲ್ಸ ಮಾಡ್ತಿರೋ ಏನೋ’ ಎಂಬ ಸಹಾನುಭೂತಿಯ ಮಾತಿಗೆ, ‘ನಮಿಗೀ ಕೆಲ್ಸಾ ರೂಢಾ ಆಗದೆ. ನಂ ಬಾಡಿನೂ ಈ ಪಿಗೈರನ್ ತರ್‍ಕೆ ಆಗ್ಬಿಟ್ಟದೆ. ಏನ್ಮಾಡನ? ಎಷ್ಟ್ ಮಾಡಿದ್ರೂ ಇಲ್ಲಿ ಕೆಲ್ಸಾ ಮಾಡೋನಿಗೆ ಮೂರಾಣೆ, ಕೆಲ್ಸಾ ನೋಡೋನಿಗೆ ಹದಿನಾರಾಣೆ’ ಎಂದರು.

ಅವರ ಮಾತಿನ ಒಳಾರ್ಥ ಬಡಿದು ಲೋಹರಸ ರಪ್ಪನೆ ಮುಖಕ್ಕೆರಚಿದಂತಾಯಿತು.

ಕಣ್ಣು ಕೋರೈಸುವ ದ್ರವ ಕಬ್ಬಿಣ. ಕಪ್ಪು ಧೂಳು ಮೆತ್ತಿದ, ಸುಟ್ಟು ಹೋದಂತಿರುವ ಜೀವರು. ಅವರ ಜ್ವಾಜಲ್ಯಮಾನ ಕಣ್ಣುಗಳು ಕುಲುಮೆಯ ಬೆಂಕಿಯನ್ನು ಪ್ರತಿಫಲಿಸುತ್ತಿದ್ದವು. ಕಾರ್ಮಿಕರಿಗಿಂತ ಅತಿ ಹೆಚ್ಚು ಸಂಬಳ ಪಡೆವ ಮೇಲಧಿಕಾರಿಗಳನ್ನು ಸಾಕುವ ಭಾರ ಹೆಗಲುಗಳಲ್ಲಿ ಜಡ್ಡುಗಟ್ಟಿತ್ತು. ಭೋರ್ಗರೆಯುವ ಬಿಸಿಗಾಳಿಯ ಶಬ್ದದ ನಡುವೆ ಕಿವಿಯಲ್ಲಿ ಪಿಸುಗಟ್ಟಿದಂತೆ ಕೇಳಿದ ಅವರ ಮಾತು ಕೀಳುಗೊಳಿಸಲ್ಪಟ್ಟ ಮಾನವ ಶ್ರಮದ ಕತೆಯನ್ನು, ಕಾರ್ಖಾನೆಗೆ ಒದಗಿದ ದುಃಸ್ಥಿತಿಯ ಕಾರಣವನ್ನು ಹೇಳುವಂತಿದ್ದವು.

***

ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ ‘ಮೈಸೂರ್ ವುಡ್ ಡಿಸ್ಟಿಲೇಷನ್ ಅಂಡ್ ಐರನ್ ವರ್ಕ್ಸ್’ ಜನವರಿ 18, 1918ರಂದು ಭದ್ರಾವತಿಯಲ್ಲಿ ಆರಂಭವಾಯಿತು. ನಂತರ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಸಹಾ ಯೋಜನೆಯಲ್ಲಿ ಆಸಕ್ತಿ ವಹಿಸಿದರು. ಬೀಡುಕಬ್ಬಿಣ ತಯಾರಿಕೆ ಆರಂಭವಾದಾಗ 1923ರಲ್ಲಿ ‘ಮೈಸೂರ್ ಐರನ್ ವರ್ಕ್ಸ್’ ಆಯಿತು. ಮೊದಲು ಶಿವಮೊಗ್ಗ ಹತ್ತಿರದ ಕುಂಸಿ, ಚಟ್ನಳ್ಳಿಯಿಂದ ಕಬ್ಬಿಣದ ಅದಿರು ಪೂರೈಕೆಯಾಗುತ್ತಿತ್ತು. ಅದಿರು ಕಾಯಿಸುವ ಇಂಧನವಾಗಿ ಇದ್ದಿಲು ಬಳಕೆಯಾಗುತ್ತಿತ್ತು. ಇದ್ದಿಲಿಗಾಗಿ ಮಲೆಕಾಡುಗಳ ಭಾರೀ ಮರಗಳನ್ನು ಕಡಿದು ಸಾಗಿಸಲು 1939ರಲ್ಲಿ ಶಿವಮೊಗ್ಗ-ತಾಳಗುಪ್ಪ ರೈಲು ಮಾರ್ಗ ಹಾಕಿದರು. 1952ರಲ್ಲಿ ವಿದ್ಯುಚ್ಚಾಲಿತ ಯಂತ್ರೋಪಕರಣಗಳು ಬಂದಾಗಿನಿಂದ ಕೋಕ್‌ಅನ್ನು ಇಂಧನವನ್ನಾಗಿ ಬಳಸಲಾಗುತ್ತಿದೆ. ಕಲ್ಲಿದ್ದಲಿನ ಉಪಉತ್ಪನ್ನವಾದ ಕೋಕ್ ಅತಿಶಾಖ ಬಿಡುಗಡೆ ಮಾಡಿ ಆಕ್ಸಿಜನ್ ನೆರವಿನಿಂದ ಬೂದಿ ಉಳಿಸದೇ ಉರಿಯುತ್ತದೆ.

ದಿನಕ್ಕೆ 650-700 ಟನ್ ಕಬ್ಬಿಣ ಉತ್ಪಾದಿಸಬಲ್ಲ, 50 ಅಡಿ ಎತ್ತರದ ಊದು ಕುಲುಮೆಗೆ (ಬ್ಲಾಸ್ಟ್ ಫರ್ನೇಸ್) ಮೇಲಿನಿಂದ ಕೋಕ್ ಮತ್ತು ಅದಿರನ್ನು ಸುರಿಯಲಾಗುತ್ತದೆ. ಕೆಳಭಾಗದಿಂದ 900 ಡಿಗ್ರಿ ಉಷ್ಣಾಂಶದ ಬಿಸಿಗಾಳಿಯನ್ನು ಆಕ್ಸಿಜನ್ ಜೊತೆ ಬೆರೆಸಿ ಹರಿಸುತ್ತಾರೆ. ಒಳಗಿನ ಅದಿರು ಕರಗಿ ಅದರಲ್ಲಿರುವ ಕಬ್ಬಿಣ ದ್ರವ ರೂಪಕ್ಕೆ ಬಂದ ಮೇಲೆ ಕುಲುಮೆಯ ಕೆಳಭಾಗದ ಕಿಂಡಿಯನ್ನು ತೆಗೆಯುತ್ತಾರೆ. ಆಗ ಹೊರಹರಿದು ಬರುವುದು ಚಿನ್ನದ ಬಣ್ಣದ ನಿಗಿನಿಗಿ ಹೊಳೆವ ದ್ರವ ಕಬ್ಬಿಣ. ಅದಾಗಲೇ ರೈಲ್ವೇ ವ್ಯಾಗನ್ನುಗಳಲ್ಲಿ ಬಂದು ಕೆಳಗೆ ಕುಳಿತ ದೊಡ್ಡ ‘ಪಾತ್ರೆ’ಗಳಿಗೆ ದ್ರವ ಕಬ್ಬಿಣವು ಹುಯ್ಯಲ್ಪಡುತ್ತದೆ. ಅದು ಗಟ್ಟಿಯಾಗುವ ಮೊದಲೇ ಬೇರೆಡೆ ಒಯ್ದು ವಿಭಿನ್ನ ಅಳತೆಯ ಅಚ್ಚುಗಳಿಗೆ ಹೊಯ್ಯುತ್ತಾರೆ. ಇದು ‘ಪಿಗ್ ಐರನ್’. ಇದರಲ್ಲಿ 3-4% ಇಂಗಾಲ ಇರುವುದರಿಂದ ಅದು ಪೆಡಸಾಗಿರುತ್ತದೆ.

ಬೀಡು ಕಬ್ಬಿಣದ ಅಚ್ಚು ಬೇರೆಡೆ ಹೋಗುತ್ತದೆ. ಅದನ್ನು ಮತ್ತೆ ಕುಲುಮೆಗಳಲ್ಲಿ ಕಾಯಿಸಿ, ಬೇರೆ ವಸ್ತುಗಳನ್ನು ಸೇರಿಸಿ, ತಣ್ಣಗಾಗಿಸಿ, ಒತ್ತಿ, ಬಡಿದು ನಾನಾ ಆಕಾರದ, 750 ವಿವಿಧ ಗ್ರೇಡ್‌ಗಳ ಕಬ್ಬಿಣವನ್ನು ತಯಾರಿಸುತ್ತಾರೆ. ರೇಲ್ವೆ ಆಕ್ಸೆಲ್, ಫಿರಂಗಿಗಳಿಗೆ ಬಳಸುವ ಕ್ಯಾನನ್, ನಿರ್ಮಾಣ ಸಾಮಗ್ರಿಯ ಕಬ್ಬಿಣದ ತೊಲೆಗಳು, 20 ಎಂಎಂವರೆಗಿನ ಕಬ್ಬಿಣದ ಸರಳು, ಅಚ್ಚುಗಳು ಮುಂತಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಬ್ಬಿಣವನ್ನು ತಯಾರಿಸಿ ಕೊಡುತ್ತಾರೆ.

‘ಅಭಿವೃದ್ಧಿ’ಯ ಮೂಲ ಸರಕೇ ಕಬ್ಬಿಣ. ಅದಿಲ್ಲದೇ ಯಾವ ಅಭಿವೃದ್ಧಿಯನ್ನೂ ಊಹಿಸಲಾರೆವು. ಕಾರ್ಖಾನೆ, ಕಟ್ಟಡ, ಸೇತುವೆ, ವಿಮಾನ, ರೈಲು, ವಾಹನ, ಶಸ್ತ್ರಾಸ್ತ್ರ ಎಲ್ಲದಕ್ಕೂ ಕಬ್ಬಿಣ ಬೇಕೇಬೇಕು. ದೇಶ ‘ಅಭಿವೃದ್ಧಿ’ಯ ಕಡೆಗೆ ಹೋಗತೊಡಗಿದಂತೆ ಕಬ್ಬಿಣದ ಬೇಡಿಕೆಯೂ ಹೆಚ್ಚು. ಆ ದೃಷ್ಟಿಯಿಂದ ಭದ್ರಾವತಿಯ ಕಾರ್ಖಾನೆಗೆ ಈಗ ಕೈತುಂಬ ಕೆಲಸ, ಲಾಭ ಇರಬೇಕಿತ್ತು. ಕಂಪನಿಯು ತನ್ನ ನೌಕರರಿಗೆ ಉಳಿದ್ಯಾವ ರಾಜ್ಯ ಸರ್ಕಾರೀ ಉದ್ಯೋಗಸ್ಥರಿಗೆ ಇಲ್ಲದಷ್ಟು ಸವಲತ್ತುಗಳನ್ನು ನೀಡಿತ್ತು. ಅತಿ ಕಡಿಮೆ ಬಾಡಿಗೆಗೆ ಕಂಪನಿ ಮನೆ, ಉಚಿತ ವಿದ್ಯುತ್, ಯಥೇಚ್ಛ ನೀರು ಪೂರೈಕೆ, ಸುಸಜ್ಜಿತ ಆಸ್ಪತ್ರೆ, ರಜೆ ಸಹಿತ ಅತ್ಯುಚ್ಛ ಮಟ್ಟದ ಚಿಕಿತ್ಸೆ ಪಡೆಯುವ ಸೌಲಭ್ಯ ಒದಗಿಸಿತ್ತು. ಶಿಶುವಿಹಾರದಿಂದ ಪಾಲಿಟೆಕ್ನಿಕ್ ತನಕ ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ತೆರೆದಿತ್ತು. ಸಾರ್ವಜನಿಕ ಆಸ್ಪತ್ರೆ, ಪಾರ್ಕ್, ಒಳಚರಂಡಿ, ಬಡಾವಣೆ, ದೇವಸ್ಥಾನ, ಸಂತೆಮಾಳ, ಸಮುದಾಯ ಭವನ ಮುಂತಾಗಿ ಹತ್ತಾರು ಜನಪರ ಯೋಜನೆಗಳನ್ನು ಹಾಕಿಕೊಂಡಿತ್ತು.

ಇದನ್ನೂ ಓದಿ: ವಿಮಾನ ನಿಲ್ದಾಣ ತೆರೆಯಿತು, ವಿ.ಐ.ಎಸ್.ಎಲ್ ಮುಚ್ಚಿತು

ಆದರೂ ಅದಿರಿನ ಅಭಾವದಿಂದ ‘ವಿಐಎಸ್‌ಎಲ್’ ಮುಚ್ಚುವ ಹಂತ ತಲುಪಿ ಈಗಲೋ ಆಗಲೋ ಮುಳುಗುವ ಹಡಗಿನಂತೆ ಜೀವ ಹಿಡಿದುಕೊಂಡಿದೆ. ಒಂದಾನೊಂದು ಕಾಲದಲ್ಲಿ 13 ಸಾವಿರ ಕಾರ್ಮಿಕರಿಗೆ ಉದ್ಯೋಗ ನೀಡಿದ್ದ, ‘ಆಯುಧ ಪೂಜೆಗೆ ಲೋಡುಗಟ್ಟಲೇ ಲಾರಿಗಳಲ್ಲಿ ಮಂಡಕ್ಕಿ ತರಿಸುತ್ತಿದ್ದ,’ ಭದ್ರಾವತಿ ಎಂಬ ಊರನ್ನು ತನ್ನ ಕಪ್ಪು ಧೂಳಿನ ಸೆರಗಿನಲ್ಲಿ ಮುಚ್ಚಿಟ್ಟುಕೊಂಡ, ಊರಿನ ಬೀದಿಬೀದಿಗಳನ್ನು ಸೈಕಲ್ ತುಳಿದು, ನಡೆದು ಕಾರ್ಖಾನೆ ತಲುಪುವ ಕಾರ್ಮಿಕರಿಂದ ಜೀವಂತವಾಗಿಟ್ಟಿದ್ದ, ಸೈರನ್ ಕೂಗಿನಿಂದ ಜನರನ್ನು ಜಾಗೃತವಾಗಿಟ್ಟಿದ್ದ ವಿಐಎಸ್‌ಎಲ್ ಇಂದು ಮುಚ್ಚುವ ಸ್ಥಿತಿಗೆ ಬಂದಿದ್ದರೆ ಕಾರಣ ಏನು? ಕಬ್ಬಿಣದ ಅದಿರಿಗಾಗಿ ಬೆಟ್ಟಗುಡ್ಡಗಳನ್ನೆಲ್ಲ ಅಗೆದು, ಬರಿದು ಮಾಡಿ, ಊರುಕೇರಿಗಳನ್ನೆಲ್ಲ ಕೆಂಧೂಳಿನಲ್ಲಿ ಮುಳುಗಿಸಿ, ತಾವು ಹೆಲಿಕಾಪ್ಟರಿನಲ್ಲಿ ತಿರುಗುವ ಗಣಿಕುಳಗಳ ಬಗೆಗೆ, ಅವರ ಕುಟಿಲ ರಾಜಕೀಯದ ಬಗೆಗೆ ಎಷ್ಟೊಂದು ಬರೆದೆವು, ಹೋರಾಡಿದೆವು! ಜೈಲಿಗೂ ಕಳಿಸಿದೆವು. ಆದರೆ ಅವರಂಥ ಹತ್ತು ಜನ ಮತ್ತೆ ಹುಟ್ಟಿ ಬಂದರು. ವಿಪರೀತ ಕಬ್ಬಿಣದ ಬೇಡಿಕೆಯಿದ್ದೂ ವಿಐಎಸ್‌ಎಲ್ ನಷ್ಟದಿಂದ ಮುಚ್ಚುವ ಸ್ಥಿತಿಗೆ ಬಂತು.

ಮೈಸೂರರಸರ ಕಾಲದಲ್ಲಿ 1936ರಲ್ಲಿ ಎಂಐಎಸ್‌ಎಲ್ (ಮೈಸೂರ್ ಐರನ್ ಅಂಡ್ ಸ್ಟೀಲ್ ವರ್ಕ್ಸ್) ಇದ್ದದ್ದು 1962ರಲ್ಲಿ ಸರ್ಕಾರೀ ಸ್ವಾಮ್ಯದ ಎಮ್‌ಐಎಸ್‌ಎಲ್ ಆಯಿತು. 1976ರಲ್ಲಿ ಅದರ ಸಂಸ್ಥಾಪಕರಾದ ವಿಶ್ವೇಶ್ವರಯ್ಯನವರ ಹೆಸರನ್ನಿಡಲಾಯಿತು (ವಿಐಎಸ್‌ಎಲ್). 1989ರಲ್ಲಿ ಉಕ್ಕು ಪ್ರಾಧಿಕಾರದ ಒಂದು ಘಟಕವಾಗಿದ್ದಿದ್ದು 1998ರಲ್ಲಿ ಉಕ್ಕು ಪ್ರಾಧಿಕಾರದಲ್ಲಿ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ವಿಲೀನವಾಯಿತು. ಬಳಿಕ ಅದಿರಿನ ಲಭ್ಯತೆಯೇ ದೊಡ್ಡ ಸಮಸ್ಯೆಯಾಯಿತು. ಕುಂಸಿ, ಕೆಮ್ಮಣ್ಣುಗುಂಡಿ, ಕುದುರೆಮುಖ ಗಣಿಗಳೆಲ್ಲ ಬರಿದಾಗಿ ಪರಿಸರ ಸಂರಕ್ಷಣೆಯ ಕಾರಣದಿಂದ ನಿಂತ ಮೇಲೆ ಸರ್ಕಾರಿ ಸ್ವಾಮ್ಯದ ಗಣಿಗಳ ಅದಿರು ದೂರದ ಛತ್ತೀಸ್‌ಗಡದಿಂದ ಬರಬೇಕಾಯಿತು. ಅಲ್ಲಿಂದಿಲ್ಲಿಗೆ ಬರುವುದು ತುಟ್ಟಿಯ ವಿಷಯ. ಇನ್ನು ಬಳ್ಳಾರಿಯ ಕಬ್ಬಿಣದ ಅದಿರು ಖಾಸಗಿ ಗಣಿ ಮಾಲೀಕರಿಗೆ ಹೋದದ್ದರಿಂದ ಅದನ್ನು ಕೊಂಡು ಕಬ್ಬಿಣ ತಯಾರಿಸುವುದೂ ದುಪ್ಪಟ್ಟು ನಷ್ಟ ತರುವ ಸಂಗತಿಯಾಗಿತ್ತು. ಎಂತಹ ವಿಪರ್ಯಾಸ! ಕವಡೆ ಕಿಮ್ಮತ್ತಿಗೆ ತನ್ನ ನೆಲದ ಗಣಿಗಳನ್ನು ಖಾಸಗಿ ಕಂಪನಿಗಳಿಗೆ ಹರಾಜು ಹಾಕಿ ಬಿಲಿಯನಾಧಿಪತಿಗಳನ್ನು ಸೃಷ್ಟಿಸುವ ಸರ್ಕಾರ, ತಾನೇ ಆ ಗಣಿಗಳನ್ನು ನಡೆಸಿದ್ದರೆ ಸಾರ್ವಜನಿಕ ವಲಯದ ಇಂತಹ ಕಾರ್ಖಾನೆಗಳನ್ನು, ಅದನ್ನು ನೆಚ್ಚಿದ ಸಾವಿರಾರು ಕಾರ್ಮಿಕ ಕುಟುಂಬಗಳನ್ನು ಬೀದಿಪಾಲು ಮಾಡುವುದು ತಪ್ಪುತ್ತಿತ್ತು! ಈ ಸೂಕ್ಷ್ಮಗಳು ಫೈಲುಗಳ ಅಂಕಿಸಂಖ್ಯೆಗಳಲ್ಲಿ ಕರಗಿಹೋದ, ಕಮಿಷನ್ನಿನ ಆಧಾರದ ಮೇಲೆ ಲಾಭನಷ್ಟದ ಲೆಕ್ಕಾಚಾರಕ್ಕೆ ಬೀಳುವ ಭ್ರಷ್ಟ ವ್ಯವಸ್ಥೆಗೆ ಹೊಳೆಯದೇ ಇದ್ದಿದ್ದರಿಂದ 4250 ಮನೆಗಳಿದ್ದ, 1660 ಎಕರೆ ಜಾಗವಿರುವ ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ ವಿಐಎಸ್‌ಎಲ್ ಹಾಳು ಸುರಿದು ಮುಚ್ಚುವಂತಾಗಿದೆ.

ಸಾರ್ವಜನಿಕ ವಲಯದ ಉದ್ದಿಮೆಯೊಂದು ಹೀಗೆ ಕಣ್ಮುಚ್ಚುತ್ತಿರುವುದು ಅಪಾರ ವಿಷಾದ ಮೂಡಿಸುತ್ತದೆ. ಹಾಳುಬಿದ್ದ ಅವಶೇಷಗಳ ನಡುವೆ ಬಿಕೋ ಎನ್ನುತ್ತಿರುವ ವಿಐಎಸ್‌ಎಲ್‌ನ ಸಾವಿರಾರು ಎಕರೆ ಕ್ಯಾಂಪಸ್‌ನಲ್ಲಿ ಸುತ್ತಾಡಿದಾಗ ಎಲ್ಲರ ಮನಸ್ಸಿನಲ್ಲಿ ಏಕೆ ಹೀಗಾಯಿತು ಎಂಬ ಪ್ರಶ್ನೆ ಮೂಡುತ್ತದೆ. ಬಹುಶಃ ಒಬ್ಬ ನೌಕರ ಹೇಳಿದಂತೆ ಅದು ಒಡೆದ ಹಡಗು. ‘ಒಂದು ತೂತು ಗುರ್ತಿಸಿ ಮುಚ್ಚುವುದರಲ್ಲಿ ಮತ್ತೆ ನಾಕು ಪತ್ತೆಯಾಗ್ತಾವೆ. ಅದ್ನ ಮುಚ್ಚೋ ಕೆಲಸದಲ್ಲಿ ಹಡಗು ನಡೆಸಕ್ಕೇ ಪುರುಸೊತ್ತಿಲ್ಲದೆ ಮುಳುಗೋಗುತ್ತೆ ಅಷ್ಟೇ.’

ವಿಐಎಸ್‌ಎಲ್ ಮರುಹುಟ್ಟು ಪಡೆಯಲು ಏಕೆ ಸಾಧ್ಯವಾಗಲಿಲ್ಲ? ಕಾರ್ಮಿಕ ಮುಂದಾಳುವೊಬ್ಬರು ಹೇಳಿದ್ದು ಇದು:

‘ಕರ್ನಾಟಕದ ರಾಜಕಾರಣಿಗಳಿಗೆ ಇಚ್ಛಾಶಕ್ತಿನೇ ಇಲ್ಲ. ಈಗ ಎಲ್ಲೂ ಇಲ್ಲಿಯ ತರ ಮನುಷ್ಯರೇ ಕೆಲಸ ಮಾಡೋ ಫರ್ನೇಸ್‌ಗಳಿಲ್ಲ. ಎಲ್ಲ ಮೆಕ್ಯಾನೈಸ್ಡ್. ಕಾಲಕಾಲಕ್ಕೆ ಹೊಸ ಟೆಕ್ನಾಲಜಿ ತರಬೇಕು. ಆಗ ವೆಚ್ಚ ಕಡಿಮೆ ಇರುತ್ತೆ, ಸುರಕ್ಷೆನೂ ಇರುತ್ತೆ. ಇಲ್ಲಿ ಅದಾಗ್ತಾ ಇಲ್ಲ. ಅದಕ್ಕೇ ಕಾರ್ಮಿಕರು ನಾಕು ಕಾಸಿಗೆ ದುಡೀತಿದಾರೆ, ಜೀವ ಬಿಡ್ತಿದಾರೆ. ಮೂರೂವರೆ ಸಾವಿರ ಕೋಟಿ ರೂಪಾಯಲ್ಲಿ ಇಡೀ ಪ್ಲಾಂಟ್ ರಿವೈವ್ ಮಾಡೋ ಅವಕಾಶ ಇತ್ತು, ಆಗಲಿಲ್ಲ. ಯಲಹಂಕದಲ್ಲಿ ರೈಲ್ವೆಯವರ ಅಚ್ಚುಗಾಲಿ ಕಾರ್ಖಾನೆ ಆದಾಗ ಅದಿಲ್ಲಿಗೆ ಬರುತ್ತೆ ಅಂದರು, ಅದೂ ಬರಲಿಲ್ಲ. ವಿಶ್ವೇಶ್ವರಯ್ನೋರ ಹೆಸರಿನ ಬಲದ ಮೇಲೆ ನಡಿತಿದೆ ಅಷ್ಟೇ. ಪಶ್ಚಿಮ ಬಂಗಾಳ, ಯುಪಿ, ಛತ್ತೀಸ್‌ಗಡ ನೋಡಿ. ಒಂದೊಂದು ಪ್ಲಾಂಟ್‌ಗೂ ಸಾವಿರಾರು ಕೋಟಿ ಸ್ಯಾಂಕ್ಷನ್ ಮಾಡಿಸಿಕೊಂಡು ಬರೋ ಎಂಪಿಗಳು ಕಾರ್ಖಾನೆಗಳು ಮುಚ್ಚದಂಗೆ, ಸಾಯದಂಗೆ ನೋಡಿಕೊಂಡಿದಾರೆ. ಆದರೆ ನಮ್ಮ ಎಂಪಿಗಳತ್ರ ಮಾತಾಡಿ ಮಾತಾಡಿ ನಮಗೆ ಸುಸ್ತಾದರೂ ಅವ್ರಿಗೆ ಕಾಳಜೀನೇ ಇಲ್ಲ. ಆಮೇಲೆ ಇಲ್ಲಿ ಕೆಲಸ ಮಾಡಿ ವಿಆರ್‌ಎಸ್ ತಗೊಂಡು ಹೋದ ಆಫೀಸರ್‌ಗುಳೇ ಕರ್ನಾಟಕದ ದೊಡ್ಡದೊಡ್ಡ ಖಾಸಗಿ ಕಂಪನಿಗಳಿಗೆ ಅದಿರು ಪೂರೈಸೋ ವಹಿವಾಟು ನಡೆಸ್ತಾ ಇದ್ದಾರೆ! ಉಂಡ ಮನೆಗಳ ಎಣಿಸೋರು. ದೇವೇಗೌಡರು ಪ್ರಧಾನಮಂತ್ರಿ ಆದಾಗ ‘ಸೇಲ್’ಗೆ ವಹಿಸಿ ಜೀವ ಉಳಿಸಿದರು. ಆಮೇಲೆ ಕೆಲವ್ರು ಪ್ರಯತ್ನ ಮಾಡಿದ್ರು, ಇಲ್ಲ ಅಂತಲ್ಲ. ಆದ್ರೆ ನವೀಕರಣ ಯೋಜನೆಗಳಲ್ಲಿ ಬಹುಪಾಲು ಪೇಪರ್ ಮೇಲೇ ಉಳಿದ್ವು. ಈಗ ಒಂದು ಹೊಸ ಪ್ಲಾಂಟ್ ಹಾಕಿದಾರೆ. ಆ ಬ್ಲೂಮ್ಸ್ ಕ್ಯಾಸ್ಟಿಂಗ್ ಪ್ಲಾಂಟೇ ನಮಗೆ ಅನ್ನ ಕೊಡ್ತಿದೆ. ನಮ್ಮ ಕಾರ್ಖಾನೆ ಈಗ ಉಕ್ಕು ಪ್ರಾಧಿಕಾರದ ಕರುಣೆಯ ಹಂಗಲ್ಲಿ ಅವರು ಹೇಳಿದಷ್ಟು ಕೆಲಸ ಮಾಡಿ ಸಂಬ್ಳ ಕೊಡೊವಷ್ಟು ಪ್ರೊಡಕ್ಷನ್ ಮಾಡಕೊಂಡು ಬದುಕ್ತಿದೆ ಅಷ್ಟೇ.’

***

ಎಲ್ಲವನ್ನು ಖಾಸಗಿಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಿರುವ ಪ್ರಭುತ್ವಗಳಿಗೆ ಸಾರ್ವಜನಿಕ ವಲಯದ ಉದ್ದಿಮೆಯನ್ನು ದಕ್ಷಗೊಳಿಸಿ ಉಳಿಸಿಕೊಳ್ಳುವ ಯೋಚನೆಗಳಿಲ್ಲದೇ ಇಂಥ ಬೃಹತ್ ಉದ್ದಿಮೆಗಳು ಮುಚ್ಚುತ್ತಿವೆ. ಭಾರತವಷ್ಟೇ ಅಲ್ಲ, ವಿಶ್ವದೆಲ್ಲೆಡೆ ಅತಿ ಬೃಹತ್ ಉದ್ದಿಮೆಗಳು; ಒಬ್ಬ ವ್ಯಕ್ತಿ-ಕುಟುಂಬ ನಡೆಸುವ ಖಾಸಗಿ ಉದ್ದಿಮೆಗಳು ಯಶಸ್ವಿಯಾಗಿವೆ. ಸಾರ್ವಜನಿಕ ವಲಯದ ಉದ್ದಿಮೆಗಳು ಒಂದೊಂದೇ ಮುಚ್ಚಿ ಹೋಗುತ್ತಿವೆ. ಕರ್ನಾಟಕದ ಮಟ್ಟಿಗೆ ವಿಐಎಸ್‌ಎಲ್, ಎಚ್‌ಎಂಟಿ, ಐಟಿಐ, ಸೋಪ್ ಕಾರ್ಖಾನೆ ಮೊದಲಾದವೆಲ್ಲ ನಷ್ಟ ಅನುಭವಿಸುತ್ತಿರುವಾಗ, ವಿಶ್ವದ ಮೂಲೆಮೂಲೆಯ ಉತ್ಪನ್ನಗಳು ಹಳ್ಳಿಗಳ ಬೀಡಾ ಹಂಗಡಿಯನ್ನೂ ತಲುಪಿವೆ. ಮಾರಲಾಗದಷ್ಟು ಭಾರೀ ಪ್ರಮಾಣದಲ್ಲಿ ಉತ್ಪಾದಿಸಿ, ತಯಾರಿಕಾ ವೆಚ್ಚ ಅತಿ ಕಡಿಮೆಗೊಳಿಸಿ, ಅತಿ ಕಡಿಮೆ ವೇತನದಲ್ಲಿ ಅಮಾನುಷ ವಾತಾವರಣದಲ್ಲಿ ಕಾರ್ಮಿಕರನ್ನು ದುಡಿಸಿ ಲಾಭ ಕೊಳ್ಳೆಹೊಡೆಯುತ್ತಿವೆ. ಆದರೆ ಹಂಚಿನ ಕಾರ್ಖಾನೆ, ಐಸ್ ಪ್ಲಾಂಟ್‌ಗಳು, ಸಣ್ಣ ಔಷಧ ತಯಾರಿಕಾ ಘಟಕಗಳು, ನೂಲಿನ ಗಿರಣಿಗಳು, ಕೈಮಗ್ಗದಂತಹ ನೂರಾರು ಕಸುಬುಗಳು ಭರಿಸಲಾಗದ ನಷ್ಟದಲ್ಲಿ ಮುಳುಗಿವೆ. ಭಾರೀ ಯಂತ್ರಗಳಿಂದ ರಾಶಿಗಟ್ಟಲೆ ತಯಾರಿಸಿದರಷ್ಟೇ ಉಳಿವು; ಬ್ರಾಂಡೆಡ್ ಆದರಷ್ಟೇ ಲಾಭ; ಖಾಸಗಿಯಾದರಷ್ಟೇ ಗುಣಮಟ್ಟ ಮುಂತಾದ ನುಡಿಗಟ್ಟುಗಳು ಯಶಸ್ಸಿನ ಸೂತ್ರಗಳಾಗಿವೆ.

ಅಮಾನವೀಯ ಶ್ರಮದ ಮೇಲೆ ನಿಂತ ಈ ಯಶಸ್ಸು ನ್ಯಾಯವೇ? ಇದು ದುಡಿಯುವವರಿಗೆ ದುಡಿಮೆಯ ನ್ಯಾಯದ ಪಾಲನ್ನು ನೀಡಿದೆಯೇ? ಅತಿ ಉತ್ಪಾದನೆಯಲ್ಲಿ ತೊಡಗಿ ಸಂಪನ್ಮೂಲಗಳನ್ನೆಲ್ಲ ಬರಿದು ಮಾಡುತ್ತಿರುವ ನಾವು ಬರಲಿರುವ ಪೀಳಿಗೆಗೆ ಉಳಿಸಿ ಹೋಗುತ್ತಿರುವ ನೆಲ, ನೀರು, ಗಾಳಿ ಎಂಥದು? ಹೀಗೆ ನಿಡುಸುಯ್ಯುವ ನಮ್ಮ ನಡುವೆ, ಏದುಸಿರು ಬಿಡುವ ಭೂಮಿಯ ಮೇಲೆ ಹೊಸ ತಲೆಮಾರು ಹೇಗೆ ಬದುಕು ಕಟ್ಟಿಕೊಳ್ಳಲಿದೆ?

ಈ ಹೊತ್ತು ಒಂದು ಚಣ ನಿಂತು ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಬೇಕಿದೆ. ‘ಮಿಕ್ಕುವುದೆಲ್ಲವೂ ವಿಷ’ ಎಂಬ ಬುದ್ಧನನ್ನೂ, ಶ್ರಮವನ್ನು ಮೌಲ್ಯವಾಗಿಸಿದ ಬಸವಣ್ಣ-ಮಾರ್ಕ್ಸ್‌ನನ್ನೂ, ಸರಳತೆಯನ್ನು ಮೌಲ್ಯವಾಗಿಸಿದ ಗಾಂಧಿಯನ್ನೂ, ಘನತೆ-ಆತ್ಮಗೌರವದ ಬದುಕುಗಳನ್ನು ಮತ್ತೊಂದು ಜೀವದ ಬೆಲೆ ತೆತ್ತು ಪಡೆಯಲಾಗದು ಎಂಬ ನ್ಯಾಯಪ್ರಜ್ಞೆಯ ಅಂಬೇಡ್ಕರರನ್ನೂ, ಯಾವುದನ್ನೂ ಹಾಳುಗೆಡವಲೊಪ್ಪದ ಸುಸ್ಥಿರ ಹೆಣ್ಣುಜ್ಞಾನವನ್ನೂ ಮನನ ಮಾಡಿಕೊಳ್ಳುವುದು, ಒಳಗಿಳಿಸಿಕೊಂಡು ಮಾದರಿಯೇ ನಾವಾಗುವುದು ಅಗತ್ಯವಾಗಿದೆ.

ಡಾ. ಎಚ್. ಎಸ್. ಅನುಪಮಾ

ಡಾ. ಎಚ್. ಎಸ್. ಅನುಪಮಾ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯೆ. ಬರೆಯುವಷ್ಟೇ ಚಂದ ಮಾತನಾಡಬಲ್ಲವರು. ಮಾತಿನಲ್ಲೂ, ಬರಹದಲ್ಲೂ ಭರಪೂರ ಮಾಹಿತಿಯ ಹೂರಣ ಜೋಡಿಸುವುದು ವಿಶೇಷ. ಕತೆ, ಕವಿತೆ, ಜೀವನ ಚರಿತ್ರೆಗಳ ಲೇಖಕಿ. ನಾಲ್ಕು ವೈದ್ಯಕೀಯ ಬರಹಗಳ ಸಂಕಲನ, ಮೂರು ಪ್ರವಾಸ ಕಥನ ಪ್ರಕಟ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೆ: ಬಿಜೆಪಿಗೆ ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ ತಲೆ ಬರಹದಲ್ಲಿ ಬಿಜೆಪಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ರಾಹುಲ್‌...