ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನ ತಂಡವು ಗ್ರೂಪ್ 2ರ ಸೂಪರ್ 12ನ ಮೊದಲ ಎರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರಹೋಗುವ ಆತಂಕದಲ್ಲಿತ್ತು. ಆದರೆ ನಂತರ ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರು ಗೆದ್ದು 04 ಅಂಕ ಗಳಿಸಿ ಸೆಮಿಫೈನಲ್ ತಲುಪುವ ಆಸೆ ಜೀವಂತವಾಗಿರಿಸಿಕೊಂಡಿದೆ. ಆದರೆ ಅದು ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಗೆಲುವು ಸಾಧಿಸುವುದು ಮಾತ್ರವಲ್ಲದೆ ಉಳಿದ ಪಂದ್ಯಗಳತ್ತ ನೋಡುತ್ತ ಕೂರಬೇಕಿದೆ. ಗ್ರೂಪ್ ಎರಡರ ಸೆಮಿಫೈನಲ್ ಸಾಧ್ಯತೆಗಳು ಕೆಳಗಿನಂತಿವೆ.
ಗ್ರೂಪ್ ಎರಡರಲ್ಲಿ 6 ತಂಡಗಳಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳಷ್ಟೇ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಸದ್ಯಕ್ಕೆ 6 ಅಂಕ ಗಳಿಸಿರುವ ಭಾರತ ಅಗ್ರಸ್ಥಾನದಲ್ಲಿದೆ. 5 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ 3, ಬಾಂಗ್ಲಾದೇಶ 4, ಜಿಂಬಾಬ್ವೆ 5 ಮತ್ತು ನೆದರ್ಲೆಂಡ್ಸ್ 6ನೇ ಸ್ಥಾನದಲ್ಲಿವೆ.
ಭಾರತದ ಸಾಧ್ಯತೆಗಳು
ಭಾರತವು ತನ್ನ ಕೊನೆಯ ಪಂದ್ಯವನ್ನು ಜಿಂಬಾಬ್ವೆ ತಂಡದ ಎದುರು ನವೆಂಬರ್ 6 ರಂದು ಎದುರಿಸಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದಲ್ಲಿ ಒಟ್ಟು 08 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಭಾರತ ಸೋತರೂ ಕೂಡ ಅದೇ ದಿನ ನಡೆಯುವ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತರೆ ಭಾರತಕ್ಕೆ ಅವಕಾಶವಿದೆ. ಒಂದು ವೇಳೆ ಭಾರತ ಸೋತು, ದಕ್ಷಿಣ ಆಫ್ರಿಕಾ ತಂಡ ಗೆದ್ದಲ್ಲಿ ಬಾಂಗ್ಲಾದೇಶ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಕಡಿಮೆ ಅಂತರದಿಂದ ಸೋಲಿಸಬೇಕೆಂದು ಭಾರತ ಪ್ರಾರ್ಥಿಸಬೇಕಿರುತ್ತದೆ. ಆಗ ನೆಟ್ ರನ್ ರೇಟ್ ಆಧಾರದಲ್ಲಿ ಬಾಂಗ್ಲಾದೇಶಕ್ಕಿಂತ ಹೆಚ್ಚಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಸೆಮಿಫೈನಲ್ ತಲುಪಬಹುದು.
ದಕ್ಷಿಣ ಆಫ್ರಿಕಾ:
4 ಪಂದ್ಯಗಳಿಂದ 5 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ತಂಡವು ತನ್ನ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಗೆಲ್ಲಲೇಬೇಕಿದೆ. ಅಲ್ಲಿ ಸೋತಲ್ಲಿ ಟೂರ್ನಿಯಿಂದ ಹೊರಬೀಳಲಿದೆ. ಅಂತಹ ಸಂದರ್ಭದಲ್ಲಿ ಕೊನೆಯ ಆಸೆಯಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪಂದ್ಯ ಮಳೆಯ ಕಾರಣಕ್ಕೆ ರದ್ದಾದರೆ ರನ್ ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ.
ಪಾಕಿಸ್ತಾನ:
ಪಾಕಿಸ್ತಾನ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದರೂ ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ಎದುರು ಸೋಲುವುದನ್ನು ಕಾಯಬೇಕಿದೆ. ಅಲ್ಲದೆ ಭಾರತವು ಜಿಂಬಾಬ್ವೆ ವಿರುದ್ಧ ಸೋತಲ್ಲಿ ನೆಟ್ ರನ್ ರೇಟ್ ಆಧಾರದಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬಹುದಾಗಿದೆ.
ಬಾಂಗ್ಲಾದೇಶ
ಗ್ರೂಪ್ ಎರಡರಲ್ಲಿ ಅತಿ ಕೆಟ್ಟ ನೆಟ್ ರನ್ ರೇಟ್ ಹೊಂದಿರುವ ಬಾಂಗ್ಲಾದೇಶದ ಸೆಮಿಫೈನಲ್ ಪ್ರವೇಶ ತೀರಾ ಕಠಿಣವಾಗಿದೆ. ಪಾಕಿಸ್ತಾನದ ವಿರುದ್ಧ ದೊಡ್ಡ ಅಂತರದಲ್ಲಿ ಬಾಂಗ್ಲಾದೇಶ ಗೆದ್ದು ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧ ಸೋತಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶಕ್ಕೆ ಸೆಮಿಫೈನಲ್ ಅವಕಾಶ ತೆರೆದುಕೊಳ್ಳುತ್ತದೆ.
ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ತಂಡಗಳು ಹೆಚ್ಚಿನ ಸೋಲು ಕಂಡಿರುವ ಕಾರಣ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿವೆ.
ಇನ್ನು ಗ್ರೂಪ್ 1 ರಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಸೆಮಿಫೈನಲ್‌ಗಾಗಿ ಸೆಣಸಾಟ ನಡೆಸುತ್ತಿವೆ. ಈ ಎಲ್ಲಾ ತಂಡಗಳಿಗೂ ಕಡೆಯ ಪಂದ್ಯ ಬಾಕಿ ಇದ್ದು ಗೆದ್ದ ಎರಡು ತಂಡಗಳು ಸೆಮಿಫೈನಲ್ ತಲುಪಲಿದ್ದಾರೆ. ಒಂದು ವೇಳೆ ಮಳೆ ಬಂದು ಎರಡೂ ಪಂದ್ಯ ರದ್ದಾದರೆ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳಿಗೆ ಸಾಧ್ಯತೆ ಹೆಚ್ಚಾಗಿದೆ.
ನವೆಂಬರ್ 9 ಮತ್ತು 10 ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ‘ನಕಲಿ ಫೀಲ್ಡಿಂಗ್’ ಆರೋಪ