Homeಕರ್ನಾಟಕಜನರು ಸ್ವಾಭಿಮಾನದಿಂದ ಬದುಕಲು ಭೂಮಿ ಕೊಡಿ: ಹೋರಾಟಗಾರ ನಿರ್ವಾಣಪ್ಪ

ಜನರು ಸ್ವಾಭಿಮಾನದಿಂದ ಬದುಕಲು ಭೂಮಿ ಕೊಡಿ: ಹೋರಾಟಗಾರ ನಿರ್ವಾಣಪ್ಪ

ಭೂಮಿ ವಸತಿ ಹಕ್ಕು ವಂಚಿತರ ಹೋರಾಟದ ಮುಖಂಡರಾಗಿರುವ ನಿರ್ವಾಣಪ್ಪ ಅವರ ಸಂದರ್ಶನ

- Advertisement -
- Advertisement -

1988 ರಿಂದ ದಲಿತ, ಕಮ್ಯುನಿಷ್ಟ್‌ ಚಳವಳಿಯಲ್ಲಿ ಜನರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಡಿ. ಎಸ್. ನಿರ್ವಾಣಪ್ಪ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮತ್ತು ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಕೂಡಾ ಆಗಿದ್ದಾರೆ. ಪ್ರಸ್ತುತ ಕೊಡಗಿನ ಸೋಮವಾರಪೇಟೆ ನಿವಾಸಿಯಾಗಿರುವ ಇವರು ಕಳೆದ 32 ವರ್ಷಗಳಿಂದಲೂ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಕೇಂದ್ರ ಸರ್ಕಾರ ಕೊರೊನಾ ಹೆಸರಲ್ಲಿ ಇಡೀ ದೇಶವನ್ನು ಮುಚ್ಚಿದಾಗಲೂ ಒಂದು ವಾರಕ್ಕಿಂತಲೂ ಹೆಚ್ಚು ದಿನ ಮನೆಯಲ್ಲಿರಲು ನನ್ನಿಂದಾಗಲಿಲ್ಲ’ ಎಂದು ಹೇಳುತ್ತಾರೆ. ಅವರು ನಾನುಗೌರಿ.ಕಾಂ ಸಂದರ್ಶನಲ್ಲಿ ಮಾತನಾಡಿದ್ದಾರೆ.

ತಮ್ಮ ಹೋರಾಟಗಳಿಗೆ ಪ್ರಭುತ್ವವು ನೇರವಾಗಿ ಸ್ಪಂದಿಸಿವೆ ಎನ್ನುವುದಕ್ಕಿಂತ ಹೆಚ್ಚಾಗಿ, ನಾವು ಹುಟ್ಟು ಹಾಕಿದ ಜಾಗೃತಿಗಳಿಂದಾಗಿ ಎಚ್ಚೆತ್ತ ಜನರ ಒತ್ತಡದಿಂದ ಸ್ಪಂದಿಸಿದೆಯೆ ಹೊರತು, ಸರ್ಕಾರವೆ ನೇರವಾಗಿ ಸ್ಪಂದಿಸಿರುವುದು ಕಡಿಮೆ ಎಂದು ಅವರು ತಮ್ಮ ಹೋರಾಟದ ಅನುಭವವನ್ನು ಬಿಚ್ಚಿಡುತ್ತಾರೆ. ಇದರಲ್ಲಿ ಸರ್ಕಾರದ ರಾಜಕೀಯ ಹಿತಾಸಕ್ತಿಗಳು ಇದೆ ಎನ್ನಬಹುದು.

ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರಾಗಿರುವ ನಿರ್ವಾಣಪ್ಪ, “ಉಳುವವನೆ ಭೂಮಿಯೊಡೆಯ ಕಾನೂನು ಬಂದು ಇಷ್ಟು ವರ್ಷಗಳಾದರೂ ಮಲೆನಾಡು ಭಾಗಕ್ಕೆ ಹೆಚ್ಚು ಉಪಯೋಗವಾಗಿಲ್ಲ. ಈ ಭಾಗದಲ್ಲಿ ’ಲ್ಯಾಂಡ್ ಲಿಮಿಟೇಷನ್ ಆಕ್ಟ್‌’ ಇಲ್ಲದೆ ಇರುವುದರಿಂದ ಒಬ್ಬ ವ್ಯಕ್ತಿ 500 ರಿಂದ ಸಾವಿರಗಟ್ಟಲೆ ಎಕರೆ ಭೂಮಿಯನ್ನೂ ಇಟ್ಟುಕೊಳ್ಳಬಹುದು” ಎಂದು ಅಸಮಧಾನ ವ್ಯಕ್ತಪಡಿಸುತ್ತಾರೆ.

ಇದರಿಂದಾಗಿ ದೊಡ್ಡ ದೊಡ್ಡ ಭೂಮಾಲಿಕರು ಇವತ್ತಿಗೂ ಇಲ್ಲಿದ್ದಾರೆ. ಒಂದು ಕಾಲದಲ್ಲಿ ಕೊಡಗಿನಲ್ಲಿ ಇಲ್ಲಿನ ಆದಿವಾಸಿ, ದಲಿತರನ್ನು ಸಂತೆಗಳಲ್ಲಿ ಮಾರಾಟ ಮಾಡುವ ಪರಿಸ್ಥಿತಿಗಳು ಇದ್ದವು. ಈಗ ಅಂತಹ ಘಟನೆ ನೇರವಾಗಿ ನಡೆಯದಿದ್ದರೂ ಅದು ಇವತ್ತಿಗೂ ನಡೆಯುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆ ’ಲೈನ್‌ ಮನೆಗಳು’ ಎನ್ನುವ ಅವರು, “ಈ ಲೈನ್ ಮನೆಗಳು ಜೀತದ ಮನೆಗಳಾಗಿದ್ದು, ಅದೊಂದು ರೀತಿಯಲ್ಲಿ ಜೈಲುಗಳು ಇದ್ದಂತೆ. ಅಲ್ಲಿರು ಜನರಿಗೆ ಯಾವುದೆ ಸರ್ಕಾರಿ ಸೌಲಭ್ಯಗಳಿಲ್ಲ. ಇವರಿಗೆ ಕಾರ್ಮಿಕ ಕಾನೂನು ಅನ್ವಯಿಸುವುದಿಲ್ಲ. ಕೊಡಗು ಒಂದರಲ್ಲೇ ಸುಮಾರು ಐವತ್ತು ಸಾವಿರ ಆದಿವಾಸಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಇಲ್ಲಿನ ಭೂಮಾಲಿಕರ ಲೈನ್ ಮನೆಗಳಲ್ಲಿ ಇದ್ದುಕೊಂಡು ಹಿಂದಿನ ತಲೆಮಾರು ಮಾಡಿದ್ದ ಸಾಲವನ್ನು ತೀರಿಸಲಾಗದೆ ಅದನ್ನು ಮುಂದಿನ ತಲೆಮಾರುಗಳಿಗೆ ದಾಟಿಸುತ್ತಾ ಪೂರ್ತಿ ಅಲ್ಲೇ ಕಳೆದು ಹೋಗುತ್ತಿದ್ದಾರೆ. ಅವರಿಗೆ ಆಹಾರ, ಆರೋಗ್ಯ ಸವಲತ್ತುಗಳು ಸರಿಯಾಗಿ ಸಿಗದೇ ಇರುವ ಕಾರಣ ಕೇವಲ 40-50 ಸರಾಸರಿ ಆಯಸ್ಸು ಹೊಂದಿದ್ದು, ದಿನ ದಿನಕ್ಕೂ ಆದಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿದೆ” ಎಂದು ಅವರು ಹೇಳುತ್ತಾರೆ.

ಮೂಲಭೂತ ಹಕ್ಕಾದ ಶಿಕ್ಷಣ ಈ ಆದಿವಾಸಿಗಳ ಮಕ್ಕಳಿಗೆ ಸಿಗುವುದಿಲ್ಲ, ಭೂಮಾಲಿಕರು ಕೂಡಾ ಜೀತಮಾಡಿಕೊಂಡಿರುವ ನಿಮಗೆ ವಿದ್ಯೆ ಯಾಕೆ ಎಂದು ಪ್ರಶ್ನಿಸುತ್ತಾರೆ, 100 ರೂ ಸಾಲ ಪಡೆದರೆ ಸಾಲದ ಪಟ್ಟಿಯಲ್ಲಿ 1000 ರೂ ಬರೆದು ಅವರ ಮೇಲೆ ಸಾಲ ಹೇರುತ್ತಾರೆ. ನಿರಂತರವಾಗಿ ಅವರು ಕೂಡಾ ಸಾಲದಲ್ಲೇ ಮುಳುಗುವಂತೆ ಮಾಡುತ್ತಾರೆ. ಹಾಗಾಗಿ ಭೂ ಒಡೆತನ ಇವತ್ತಿಗೂ ಇಲ್ಲಿನ ಆದಿವಾಸಿಗಳಿಗೆ ಸಿಕ್ಕಿಲ್ಲ, ಉಳುವವನೆ ಭೂಮಿಯೊಡೆಯ ಕಾನೂನು ಇಲ್ಲಿಗೆ ಉಪಯೋಗ ಆಗಿಲ್ಲ ಯಾಕೆಂದರೆ ಕಾನೂನು ರೂಪಿಸುವ ಅಧಿಕಾರ, ಆಡಳಿತ ಎಲ್ಲವೂ ಇಂತಹ ಭೂಮಾಲಿಕರ ಕೈಯ್ಯಲ್ಲಿದೆ ಎಂದು ನಿರ್ವಾಣಪ್ಪ ಆರೋಪಿಸುತ್ತಾರೆ.

ಇದನ್ನೂ ಓದಿ: ಭೂಮಿ ಸ್ವಾಭಿಮಾನದ ಸಂಕೇತ, ಅದು ಆರ್ಥಿಕ ಭದ್ರತೆ ನೀಡಲಿದೆ – ಕುಮಾರ್ ಸಮತಳ ಸಂದರ್ಶನ

ಅಲ್ಪಸ್ವಲ್ಪ ಭೂಮಿ ಇರುವ ರೈತರೆ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗದೆ ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆದರೆ ಪ್ರಸ್ತತ ರಾಜ್ಯದಾದ್ಯಂತ ನಡೆಯುತ್ತಿರುವ ಭೂಮಿ ವಸತಿ ಹಕ್ಕು ವಂಚಿತ ಹೋರಾಟದಿಂದ ತುಂಡು ಭೂಮಿ ಸಿಕ್ಕರೆ ಆಗುವ ಪ್ರಯೋಜನಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ವಾಣಪ್ಪ, “ಈ ಹೋರಾಟ ನಾವು ಹಿಂದಿನಿಂದಲೂ ಮಾಡಿಕೊಂಡು ಬಂದಿರುವಂತದ್ದೆ, ಇದೇನು ಹೊಸ ಹೋರಾಟವಲ್ಲ. ಭೂಮಿ ಕೊಡಿ ಎಂದರೆ ಭೂಮಿಯನ್ನು ಮಾರಾಟಕ್ಕೆ ಕೊಡಿ ಎಂದಲ್ಲ. ಭೂಮಿ ಮಾರಾಟದ ವಸ್ತು ಅಲ್ಲ, ಮಾರಾಟ ವಸ್ತು ಆಗಲೂಬಾರದು. ಅದನ್ನು ಅನ್ನ ಆಹಾರ ಬೆಳೆಯಲು ಕೊಡಿ ಎಂದು ಕೇಳುತ್ತಿದ್ದೇವೆ. ಒಂದು ಕುಟುಂಬಕ್ಕೆ ಮೂರು ಎಕರೆ ಜಮೀನು ಕೊಟ್ಟರೆ ಅವರ ಕುಟುಂಬಕ್ಕೆ ಸಾಕಾಗುವಷ್ಟು ಬೆಳೆಯಲು ಸಾಧ್ಯವಿದೆ. ಅವರೂ ಕೂಡಾ ಸ್ವಾಭಿಮಾನದ ಜೀವನ ಬದುಕಬಹುದು” ಎಂದು ಹೇಳುತ್ತಾರೆ.

ಜನರ ಸ್ವಾಭಿಮಾನದ ಬದುಕಿಗಾಗಿ ನಾವು ಭೂಮಿ ಕೊಡಿ ಎಂದು ಕೇಳುತ್ತೇವೆ. ಆದರೆ ಸಾವಿರಾರು ಎಕರೆ ಭೂಮಿಯಿರುವ ಭೂಮಾಲಿಕರ ಭೂಮಿ ಖರೀದಿಗೆ ಇರುವಂತಹದ್ದು, ಅದನ್ನು ಅವರು ಮಾರಾಟದ ಸರಕನ್ನಾಗಿ ನೋಡುತ್ತಾರೆ. ಈಗ ಯಡಿಯೂರಪ್ಪ ಅವರು ತಂದಿರುವ ಭೂಸುಧಾಣೆ ಕಾಯ್ದೆಯ ತಿದ್ದುಪಡಿಯಲ್ಲಿ ಒಂದು ಕುಟುಂಬ 432 ಎಕರೆ ಭೂಮಿಯನ್ನು ಇಟ್ಟುಕೊಳ್ಳಬಹುದು ಎಂದು ಮಾಡಿದ್ದಾರೆ. ಭೂಮಿಯ ಬೆಲೆ ತುಂಬಾ ಏರಿರುವ ಈ ಸಮಯದಲ್ಲಿ ಬಡವನೊಬ್ಬ ಭೂಮಿಯನ್ನು ಖರೀದಿಸಲು ಸಾಧ್ಯವೆ? ಈ ತಿದ್ದುಪಡಿಯನ್ನು ಉಪಯೋಗಿಸಿ, ಭೂಮಿ ಹೊಂದಿರುವ ರೈತನ ಅಸಹಾಯಕೆಯನ್ನು ಬಳಸಿಕೊಂಡು ಅವರಲ್ಲಿರುವ ಭೂಮಿಯನ್ನು ಕೊಂಡುಕೊಳ್ಳುತ್ತಾರೆ. ನಂತರ ಅದನ್ನು ಮತ್ತೇ ಮಾರಾಟಕ್ಕೆ ಇಡುತ್ತಾರೆ. ಇದು ನಂತರ ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುತ್ತದೆ. ಅನ್ನ ನೀಡುವ ಭೂಮಿಯನ್ನು ಬಹುರಾಷ್ಟ್ರೀಯ ಪಾಲಾದರೆ ನಮಗೆ ಅನ್ನ ಎಲ್ಲಿಂದ ಬರುತ್ತದೆ ಎಂದು ನಿರ್ವಾಣಪ್ಪ ಪ್ರಶ್ನಿಸುತ್ತಾರೆ.

ಒಂದು ಕುಟುಂಬ ಸ್ವಾಭಿಮಾನದಿಂದ ಬದುಕಲು ಬೇಕಾಗಿ ಕನಿಷ್ಠ ಐದು ಎಕರೆ ಭೂಮಿ ಹಾಗೂ ತಮ್ಮದೆ ಆದ ನಿವೇಶನವನ್ನು ಸರ್ಕಾರ ನೀಡಬೇಕು ಎಂಬುವುದು ರಾಜ್ಯದಾದ್ಯಂತ ನಡೆಯುತ್ತಿರುವ ಭೂಮಿ ವಸತಿ ಹಕ್ಕು ವಂಚಿತ ಹೋರಾಟದ ಪ್ರಮುಖ ಹಕ್ಕೋತ್ತಾಯ ಎಂದು ನಿರ್ವಾಣಪ್ಪ ಹೇಳುತ್ತಾರೆ. “ಅಂಕಿಅಂಶಗಳ ಪ್ರಕಾರ ಕರ್ನಾಟಕದ ಜನತೆಯ 50% ಜನರಿಗೆ ಸ್ವಂತ ಮನೆಗಳಿಲ್ಲ. ಈ ಪರಿಸ್ಥಿತಿಯಲ್ಲಿ ದುಡಿಯುವ ಜನರೆ ಹೆಚ್ಚಾಗಿ ಇದ್ದಾರೆ” ಎಂದು ಅವರು ಹೇಳುತ್ತಾರೆ. ಇದಕ್ಕೆ ಕಾರಣ ಭೂಮಿಯ ಕೊರತೆ ಅಲ್ಲ, ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಇದನ್ನೂ ಓದಿ: ಕಾರ್ಮಿಕರು, ರೈತರ ಬದುಕಿನೊಂದಿಗೆ ಚೆಲ್ಲಾಟವಾಡದಿರಿ: ಕಾರ್ಮಿಕ ಮುಖಂಡರ ಒತ್ತಾಯ

ದೇಶ ಕಟ್ಟುವ ರೈತ, ಕಾರ್ಮಿಕರು ವಸತಿ, ಭೂಮಿ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಆದರೆ ಏನೂ ದುಡಿಯದ ಜನರು ಬಡವರನ್ನು ಶೋಷಣೆ ಮಾಡಿಕೊಂಡು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕು ಎಂದು ಅವರು ಹೇಳುತ್ತಾರೆ.

ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ರೈತರಿಗೆ ಮೋಸ ಮಾಡುತ್ತಿದೆ. ಕಾರ್ಮಿಕರ ಕಾನೂನುಗಳನ್ನು ಕಿತ್ತುಹಾಕಿ ಅವರಿಗೂ ಮೋಸ ಮಾಡಲು ಹೊರಟಿದೆ. ಒಟ್ಟಾರೆ ಸಾಮಾನ್ಯ ಜನರು ಮನುಷ್ಯರೆ ಅಲ್ಲ ಎನ್ನುವ ರೀತಿ ಅಮಾನವೀಯವಾಗಿ ಸರ್ಕಾರ ನಡೆದುಕೊಳ್ಳುತ್ತಿದ್ದು ಜೊತೆಗೆ ಕೊರೊನಾ ಹೆಸರಲ್ಲಿ ಜನರನ್ನು ಭಯಭೀತಗೊಳಿಸುತ್ತಾ ಜನವಿರೋಧಿಯಾಗಿ ಮುಂದುವರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, “ಲಾಕ್‌ಡೌನ್‌ ಮಾಡಿ ಜನರನ್ನು ಮನೆಯಲ್ಲಿ ಕೂಡಿ ಹಾಕಿದ್ದು ಮಾತ್ರವಲ್ಲ ಮನಸ್ಸನ್ನು ಕೂಡಾ ಲಾಕ್‌ಡೌನ್ ಮಾಡಿ ಜನವಿರೋಧಿ ಕಾಯ್ದೆ ತರುತ್ತಿದ್ದಾರೆ” ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಕೃಷಿಭೂಮಿ ಇದೆ ಆದರೆ ಅದು ಕೃಷಿಕರಲ್ಲದವರ ಕೈಯ್ಯಲ್ಲಿದೆ ಎಂದು ನಿರ್ವಾಣಪ್ಪ ಬೇಸರ ವ್ಯಕ್ತಪಡಿಸುತ್ತಾರೆ. ಇವತ್ತಿಗೂ ಭೂ ಹೀನರಿಗೆ ಹಂಚುವಷ್ಟು ಕೃಷಿ ಭೂಮಿ ವ್ಯವಸಾಯ ಮಾಡದೇ ಇರುವವರ ಕೈಯ್ಯಲ್ಲಿ ಅಕ್ರಮವಾಗಿ ಇದೆ. ಈ ಅಕ್ರಮ ಭೂಮಿಯನ್ನು ತೆರವುಗೊಳಿಸಿದರೆ ಆ ಊರಿನಲ್ಲಿ ಇರುವ ಭೂಹೀನರಿಗೆ ಭೂಮಿ ಸಿಗುತ್ತದೆ ಎಂದು ಹೇಳುತ್ತಾರೆ.

ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೂ ವಸತಿ, ಭೂಮಿ ಕೊಡುವಷ್ಟು ಭೂಮಿ ರಾಜ್ಯದಲ್ಲಿ ಇದೆ ಆದರೆ ದೇವರಾಜು ಅರಸು ಅವರನ್ನು ಬಿಟ್ಟರೆ ಬೇರೆ ಮುಖ್ಯಮಂತ್ರಿ ಕೂಡಾ ಇದಕ್ಕೆ ಪ್ರಯತ್ನಿಸಿಲ್ಲ. ಯಾವುದೆ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪೋರೇಟ್‌ ಶಕ್ತಿಗಳಿಗೆ ಭೂಮಿ ಕೊಡಲು ಸರ್ಕಾರ ತುದಿಕಾಲಲ್ಲಿ ನಿಲ್ಲುತ್ತದೆ. ಆದರೆ ಬಡವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬೇಕಾಗಿ ಭೂಮಿ ಕೊಡಲು ತಯಾರಿಲ್ಲ ಎಂದು ಅವರು ಅಸಮಧಾನ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಅನ್ಯಾಯವನ್ನು ಸಹಿಸಿಕೊಂಡು ಮೌನವಾಗಿದ್ದರೆ ಅದು ಅಪರಾಧ: ಚಂದ್ರಶೇಖರ್ ಆಝಾದ್ ರಾವಣ್

ದೇವರಾಜು ಅರಸು ಕಾಲದಲ್ಲಿ 2 ಲಕ್ಷ ರುಪಾಯಿ ಆದಾಯ ಇದ್ದವರು ಕೃಷಿ ಭೂಮಿಯನ್ನು ಖರೀದಿಸಬಾರದು ಎಂದ ಕಾನೂನು ತಂದರು. ಇದನ್ನು ಸಿದ್ದರಾಮಯ್ಯ ಸರ್ಕಾರ 25 ಲಕ್ಷಕ್ಕೆ ಏರಿಸಿತು. ಇದರಿಂದಾಗಿ ಹಣ ಇರುವವರೆಲ್ಲರೂ ಮತ್ತಷ್ಟು ಭೂಮಿಯನ್ನು ಖರೀದಿಸುವಂತಾಯಿತು. ಎರಡು ಲಕ್ಷದ ಮಿತಿಯಿರುವಾಗಲೆ ಭೂಮಾಲಿಕರು, ರಾಜಕಾರಣಿಗಳು ಅಕ್ರಮವಾಗಿ ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ಇಟ್ಟುಕೊಂಡಿದ್ದರು. ಇನ್ನು ಸಿದ್ದರಾಮಯ್ಯನವರು ಕಾನೂನಿಗೆ ತಿದ್ದುಪಡಿ ತಂದಾಗ ಭೂಮಾಲಿಕರಿಗೆ ಇನ್ನಷ್ಟು ಉಪಯೋಗ ಆಯಿತು.

ಆದರೆ ಇದೀಗ ಭೂಸುಧಾರಣೆ ಕಾಯ್ದೆಯನ್ನೇ ಕಿತ್ತು ಹಾಕಿ ಕೃಷಿ ಭೂಮಿಯನ್ನು ಯಾರು ಬೇಕಾದರೂ ಕೃಷಿಭೂಮಿಯನ್ನು ಕೊಂಡು ಕೊಳ್ಳಬಹುದು ಎಂಬಂತಾದರೆ ಈಗ ಹಣ ಇರುವವರು ದುಪ್ಪಟ್ಟು ಮೌಲ್ಯ ನೀಡಿ ಭೂಮಿಯನ್ನು ಕಿತ್ತುಕೊಳ್ಳುತ್ತಾರೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡುತ್ತಿಲ್ಲ ಎಂದು ವ್ಯವಸಾಯದಿಂದ ರೋಸಿ ಹೋಗಿರುತ್ತಾರೆ, ಇದನ್ನು ಈ ಬಂಡವಾಳಶಾಹಿಗಳು ರೈತರನ್ನು ಭೂಮಿಯನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಾರೆ. ಮುಂದೊಂದು ದಿನ ಇದೇ ರೈತರು ತಮ್ಮದೆ ಹೊಲದಲ್ಲಿ ಕೂಲಿ ಮಾಡುವ ಪರಿಸ್ಥಿತಿ ಬರುತ್ತದೆ. ಇನ್ನೊಂದು ಕಡೆ ಆಹಾರಕ್ಕೂ ಆಹಾಕಾರ ಬರುತ್ತದೆ ಎಂದು ನಿರ್ವಾಣಪ್ಪ ಹೇಳುತ್ತಾರೆ.

ಹೊಲದಲ್ಲಿ ದುಡಿಯುವಾಗ ಮಹಿಳೆ ಕೂಡಾ ಪುರುಷರಷ್ಟೇ ಕೊಡುಗೆ ನೀಡುತ್ತಾಳೆ ಎನ್ನುವ ಅವರು ಭೂಮಿಯ ಒಡೆತನದಲ್ಲಿ ಮಹಿಳೆಯರಿಗೂ ಸಮಾನ ಹಕ್ಕಿರಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.

ಕೊರೊನಾ ಸಾಂಕ್ರಮಿಕದಿಂದಾಗಿ ಕೆಲಸ ಹುಡುಕಿಕೊಂಡು ನಗರಕ್ಕೆ ವಲಸೆ ಹೋಗಿದ್ದ ಜನರು ವಾಪಾಸು ತಮ್ಮ ಊರಿಗೆ ಬಂದಿದ್ದಾರೆ. ಇದರಿಂದಾಗಿ ಹಳ್ಳಿಗಳಲ್ಲಿ ಅಲ್ಪಸ್ವಲ್ಪ ಕೃಷಿ ಕೂಲಿ ಕಾರ್ಮಿಕರು ಕೂಡಾ ಕೆಲಸ ಕಳೆದು ಕೊಳ್ಳುವಂತಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಉಚಿತ ಅಕ್ಕಿಯನ್ನು ಕೊಡುವ ಬದಲಿಗೆ ಕನಿಷ್ಠ ಒಂದು ಕುಟುಂಬಕ್ಕೆ ಐದು ಎಕರೆ ಭೂಮಿ ನೀಡಿದರೆ ತಮ್ಮ ಕುಟುಂಬಕ್ಕೂ ಬೆಳೆದು, ಉಳಿದ ಆಹಾರವನ್ನು ಕೂಡಾ ಸರ್ಕಾರಕ್ಕೆ ಕೊಡಬಹುದು ಎಂದು ಆಗ್ರಹಿಸಿದ್ದೆವು ಎಂದು ನೆನಪಿಸಿಕೊಂಡರು.

ರಾಜ್ಯದಾದ್ಯಂತ ಪ್ರಾರಂಭವಾಗಿರುವ ’ಭೂಮಿ ವಸತಿ ಹಕ್ಕು ವಂಚಿತರ ಹೋರಾಟ’ದ ಹಿನ್ನಲೆಯಲ್ಲಿ ನಡೆಯುತ್ತಿರುವ ಜಾಥಾದ ಬಗ್ಗೆ ಮಾತನಾಡಿದ ನಿರ್ವಾಣಪ್ಪ, “ಇಂದು ಜನರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರ ಕೊರೊನಾ ಹೆಸರಲ್ಲಿ ಭಯಪಡಿಸುತ್ತಿರುವುದು ಜನರಿಗೆ ತಿಳಿದು ಹೋಗಿದೆ. ಜನರು ಕೊರೊನಾ ಭಯವನ್ನು ಮೀರಿ ಹೋರಾಟಕ್ಕೆ ಬಂದು ಸೇರುತ್ತಿದ್ದಾರೆ. ಅಂತಹಾ ಅನಿವಾರ್ಯ ಸ್ಥಿತಿ ಕೂಡಾ ಇದೆ, ಆದ್ದರಿಂದಲೆ ಜನರು ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಈ ಹೋರಾಟ ಖಂಡಿತಾ ಗೆಲ್ಲುತ್ತದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲಾಕ್‌ಡೌನ್‌ ಶ್ರಮಜೀವಿಗಳ ಬದುಕನ್ನು ದುಸ್ತರಗೊಳಿಸಿದೆ: ಬಡಜನರ ಸ್ಥಿತಿಗತಿ ಬಿಚ್ಚಿಟ್ಟ ಜನಶಕ್ತಿಯ ಅಧ್ಯಯನ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...