Homeಅಂಕಣಗಳುದಕ್ಷಿಣ ಕನ್ನಡ ರೌಂಡ್ ಅಪ್: ಕೇಸರಿ ಕೋಟೆಯಲ್ಲಿ ಹಿಂದುತ್ವದ ಬಣ ಬಡಿದಾಟದ ಪ್ರಯೋಗ!

ದಕ್ಷಿಣ ಕನ್ನಡ ರೌಂಡ್ ಅಪ್: ಕೇಸರಿ ಕೋಟೆಯಲ್ಲಿ ಹಿಂದುತ್ವದ ಬಣ ಬಡಿದಾಟದ ಪ್ರಯೋಗ!

- Advertisement -
- Advertisement -

ಹಿಂದುತ್ವದ ಪ್ರಯೋಗ ಶಾಲೆ, ಬಿಜೆಪಿ ಭದ್ರ ಕೋಟೆ ಎಂಬ “ಕೇಸರಿ ವಿಶೇಷಣ”ಗಳಿಂದ ಗುರುತಿಸಲಾಗುವ ದಕ್ಷಿಣ ಕನ್ನಡದ ಚುನಾವಣಾ ರಣರಂಗದಲ್ಲಿ ಬಿಜೆಪಿ, ಹಿಂದುತ್ವದ ಬಾಣಗಳ ಬತ್ತಳಿಕೆಯ ಭಾರಕ್ಕೆ ಕುಸಿಯುತ್ತಿದೆ. ಹಿಂದೆ ಸೆಟ್ ದೋಸೆಗಳೆಂದೇ ಜನಜನಿತರಾಗಿದ್ದ ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ ಮತ್ತು ಆಸ್ಕರ್ ಫರ್ನಾಂಡಿಸ್‌ರ “ಒಣ ವ್ಯಕ್ತಿತ್ವ ಸಂಘರ್ಷ”ದಲ್ಲಿ ಕಾಂಗ್ರೆಸ್ ಹೇಗೆ ತನ್ನ ಒಜ್ಜೆ ತಾಳಲಾರದೆ ನೆಲಕಚ್ಚಿತ್ತೋ ಅಂತಹದ್ದೇ ಪರಿಸ್ಥಿತಿ ಈಗ ಬಿಜೆಪಿಗೆ ಬಂದಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಯಾವ ಹಿಂದುತ್ವವನ್ನು ಮತ ಧ್ರುವೀಕರಣಕ್ಕೆ ಬಳಸಿ ಬಿಜೆಪಿ ಭರಪೂರು ಎಮ್ಮೆಲ್ಲೆ ಫಸಲು ತೆಗೆಯುತ್ತ ಬಂದಿತ್ತೋ ಈಗ ಆ ಹಿಂದುತ್ವವೆ ತಿರುಗುಬಾಣವಾಗಿದೆ. ಅಧಿಕಾರ-ಎಮ್ಮೆಲ್ಲೆ ಸ್ಥಾನಕ್ಕಾಗಿ ನಡುಬೀದಿಯಲ್ಲಿಯೇ ಹಿಂದುತ್ವದ ಬಣಗಳು ಬಡಿದಾಡುತ್ತಿವೆ; ಬಿಜೆಪಿ-ಸಂಘ ಸಂಘರ್ಷ ಜೋರಾಗುತ್ತಿದೆ.

ಸಂಘ ಪರಿವಾರ ಪ್ರಣೀತ ಹಿಂದುತ್ವ ಧರ್ಮವಲ್ಲ; ಬದಲಿಗೆ ಅದೊಂದು ಲಾಭದಾಯಕ ರಾಜಕೀಯ ಉದ್ಯಮ ಎಂಬುದನ್ನು ಈ ಚುನಾವಣೆ ದಕ್ಷಿಣ ಕನ್ನಡಿಗರಿಗೆ ಮನದಟ್ಟು ಮಾಡುತ್ತಿರುವಂತಿದೆ; ಸಂಘ ಸರದಾರರ ಉಗ್ರ ಭಾಷಣೆಕ್ಕೆ ಮರುಳಾಗಿ ಪೊಲೀಸ್ ಕೇಸು ಮೈಮೇಲೆ ಎಳದುಕೊಂಡು, ಖಾಸಗಿ ಬದುಕಿನಲ್ಲಿ ಕಷ್ಟನಷ್ಟಕ್ಕೆ ಸಿಕ್ಕಿಹಾಕಿಕೊಂಡು “ಹೀರೋ” ಆದವರು ಆರ್ಥಿಕ-ರಾಜಕೀಯ ಪ್ರತಿಫಲ ಕೇಳತೊಡಗಿದ್ದಾರೆ. ಪುತ್ತೂರಿನ ಹಿಂದುತ್ವದ ಫೈರ್ ಬ್ರಾಂಡ್ ಅರುಣ್ ಪುತ್ತಿಲ ಎಮ್ಮೆಲ್ಲೆಯಾಗುವ ಬಯಕೆಯಿಂದ ಕೇಸರಿ ಟಿಕೆಟ್ ಕೇಳಿದ್ದರು; ಹಿಂದುತ್ವದ ಶಕ್ತಿಯಾದ ಬಿಲ್ಲವರಿಗೆ ಮಗ್ಗಲುಮುಳ್ಳಾಗಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಮತ್ತೆ ಅವಕಾಶ ಕೊಡಬೇಡಿ ಎಂದು ಆ ಸಮುದಾಯದ ಕೇಸರಿಗರು ಆಗ್ರಹಿಸಿದ್ದರು. ’ರಿಸ್ಕ್’ ಲೆಕ್ಕಿಸದೆ ಮುನ್ನುಗ್ಗುವ ಹಿಂದುತ್ವ ಗುಂಪುಗಳ ಮೇಲೆ ಹಿಡಿತ ಸಾಧಿಸಿರುವ ಈ ಮುಂದಾಳುಗಳ “ವೇಗ”ಕ್ಕೆ ಸಂಘ ಶ್ರೇಷ್ಠರು ಬೆಚ್ಚಿಬಿದ್ದರು; ಈ “ಉದ್ಧಟ”ರಿಗೆ ಅಧಿಕಾರ ಸಿಕ್ಕರೆ ತಮ್ಮ ಅಸ್ತಿತ್ವಕ್ಕೆ ಸಂಚಕಾರ ಬರಬಹುದೆಂದು ಸಂಘದ ಯಜಮಾನರು ದೂರ ಇಟ್ಟರೆನ್ನಲಾಗುತ್ತಿದೆ.

ಕರಾವಳಿಯ ಸಂಘ ಪರಿವಾರ ಈಗ ಎರಡು ಬಣವಾಗಿ ಒಡೆದಿದೆ. ಒಂದು, ತೆರೆಮರೆಯಲ್ಲಿದ್ದು ಧರ್ಮ-ದೇವರ ಸಂಗತಿಗಳನ್ನು ತಿರುಚಿ ಭಾವೋನ್ಮಾದ ಕೆರಳಿಸಿ ಛೂಬಿಟ್ಟು ಭರ್ಜರಿ ಲಾಭ ಮಾಡಿಕೊಳ್ಳುವ “ಪೂಜ್ಯ”ತಂಡ; ಮತ್ತೊಂದು, “ಧರ್ಮಯುದ್ಧ”ಕ್ಕೆ ನಿಂತು ಸಮಸ್ಯೆ-ಸಂಕಷ್ಟ ಮೈಮೇಲೆ ಎಳೆದುಕೊಳ್ಳುವ ಹುಂಬರ ಪಡೆ. ತಾವೇ ಅಸಲಿ ಹಿಂದುತ್ವವಾದಿಗಳೆಂದು ಎರಡೂ ಬಣಗಳು ಪರಸ್ಪರ ಕೆಸರೆರಚಾಟಕ್ಕಿಳಿದಿರುವುದು ಬಿಜೆಪಿಯನ್ನು ಬಡವಾಗಿಸುತ್ತಿದೆ. ದಕ್ಷಿಣ ಕನ್ನಡದ ಕಡಲ ತಡಿ ಮೊಗವೀರರು ಮತ್ತು ಮಲೆನಾಡಿನ ಬಿಲ್ಲವರ ಹುಡುಗರಿಗೆ ತಮ್ಮನ್ನು ಕಾಲಾಳುಗಳಾಗಿ ಬಳಸಿ ಬಿಸಾಡುವ ಹಿಂದುತ್ವದ ಹುನ್ನಾರ ನಿಧಾನಕ್ಕೆ ಅರ್ಥವಾಗುತ್ತಿದೆ. ಸುಳ್ಯದ ಪ್ರವೀಣ್ ನೆಟ್ಟಾರ್ ಕೊಲೆಯಾದಾಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟಿಲ್ ಮತ್ತು ಸಚಿವ ಸುನೀಲ್‌ಕುಮಾರ್ ಭೇಟಿಕೊಟ್ಟಿದ್ದ ಸಮಯ; ಬಿಜೆಪಿಯ ಹಿಂದುತ್ವದಿಂದ ರೋಸತ್ತ ಹುಡುಗರು ಅವರಿಬ್ಬರು ಬಂದಿದ್ದ ಕಾರನ್ನು ಬುಡಮೇಲು ಮಾಡವಷ್ಟರಮಟ್ಟಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲ ಈಗ ಚನಾವಣಾ ಅಖಾಡದಲ್ಲಿ ಬಿಜೆಪಿಗೆ ತೊಡಕಾಗಿದೆ. ಮತ್ತೊಂದೆಡೆ ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ನಿರ್ಬಂಧಿಸುವಂಥ ಮತ ಧ್ರುವೀಕರಣದ ತಂತ್ರಗಾರಿಕೆ ಬಿಜೆಪಿಗೆ ನಿರೀಕ್ಷಿಸಿದಷ್ಟು ಯಶಸ್ಸು ನೀಡಿದಂತೆ ಕಾಣುತ್ತಿಲ್ಲ. ಪೊಲಿಟಿಕಲ್ ಮೈಲೇಜಿಗಾಗಿ ಕ್ಷುಲ್ಲಕ ಸಂಗತಿಗಳನ್ನು ನೆಪಮಾಡಿಕೊಂಡು ಪರಿವಾರ ಪರಾಕ್ರಮಿಗಳು ಹುಟ್ಟುಹಾಕುತ್ತಿರುವ ಕೋಮು ದಂಗೆಯಿಂದ ಜಿಲ್ಲೆಯ ವಾಣಿಜ್ಯ, ಶೈಕ್ಷಣಿಕ, ಪ್ರವಾಸೋದ್ಯಮ ಘಾಸಿಯಾಗಿ ಉದ್ಯೋಗ ನಷ್ಟವಾಗುತ್ತಿದೆ, ವ್ಯವಹಾರೋದ್ಯಮಕ್ಕೆ ಹಿನ್ನಡೆಯಾಗುತ್ತಿದೆ ಎಂಬ ಆತಂಕ ಜಿಲ್ಲೆಯಲ್ಲಿದೆ.

ಬಿಜೆಪಿ ಜಾತಿ ಲೆಕ್ಕಾಚಾರದ ಟಿಕೆಟ್ ಹಂಚಿಕೆಯೂ ಕೆಲವು ಕ್ಷೇತ್ರದಲ್ಲಿ ಕೈ ಕೊಟ್ಟಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸುಳ್ಯದಲ್ಲಿ ಹಿಂದುಳಿದ ಮತ್ತು ದಲಿತ ವರ್ಗದವರಲ್ಲಿ ವೈಮನಸ್ಸು ಮೂಡಿಸುವಂಥ ಭಾಷಣ ಮಾಡಿದ್ದಾರೆ ಎನ್ನಲಾಗಿರುವುದು, ಪುತ್ತೂರಲ್ಲಿ ದುರ್ಬಲ ಅಭ್ಯರ್ಥಿ ಹಾಕಿ ಬಹುಸಂಖ್ಯಾತ ಅರೆ ಭಾಷೆ ಗೌಡರಿಗೆ ಪ್ರಯೋಜನ ಆಗದಂತೆ ಮಾಡಿರುವುದು ಮತ್ತು ಬೆಳ್ತಂಗಡಿಯಲ್ಲಿ ಬಿಲ್ಲವ ವಿರೋಧಿ ಎಂಬ ಆರೋಪ ಹೊತ್ತವನಿಗೆ ಮತ್ತೆ ಮಣೆ ಹಾಕಿರುವುದು ಬಿಜೆಪಿಗೆ ದುಬಾರಿಯಾಗಿದೆ. ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಎಸ್‌ಡಿಪಿಐ ಮುಸ್ಲಿಮರ ಮತ ವಿಭಜನೆಯನ್ನು ಅವಲಂಬಿಸಿದೆ ಎಂಬ ಗುಮಾನಿಯ ಚರ್ಚೆಗಳು ಜಿಲ್ಲೆಯಲ್ಲಿ ಆಗುತ್ತಿದೆ.

ಅತ್ತ ಕಾಂಗ್ರೆಸ್ ಮುಸ್ಲಿಂ, ಕ್ರಿಶ್ಚಿಯನ್ ಕೋಟಾ ತುಂಬುವ ಕಸರತ್ತು ಪ್ರದರ್ಶಿಸಿದೆ. ಅನಾದಿ ಕಾಲದ ಕ್ರಿಶ್ಚಿಯನ್-ಮುಸ್ಲಿಂ ಕೋಟಾ ಸೂತ್ರದ ಬದಲಿಗೆ ಸೋಷಿಯಲ್ ಇಂಜಿನಿಯರಿಂಗ್ ಮಾಡಿ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣದಲ್ಲಿ ಬಿಲ್ಲವರಿಗೆ ಅವಕಾಶ ಕೊಟ್ಟಿದ್ದರೆ ನಿರಾಯಾಸವಾಗಿ ಗೆಲ್ಲಬಹುದಿತ್ತು. ಇಲ್ಲಿಯ ಹಾಲಿ ಬಿಜೆಪಿ ಶಾಸಕರು ಮತ್ತು ಬಜೆಪಿ ಪಕ್ಷದ ಬಗ್ಗೆ ಜನರಿಗೆ ಸಮಾಧಾನವಿಲ್ಲ. ಚುನಾವಣೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರದಲ್ಲಿ ಕಂಡಬಂದ ಸೋಲು ಗೆಲುವಿನ ಲೆಕ್ಕಾಚಾರ ಇಲ್ಲಿದೆ.

ಮಂಗಳೂರು ದಕ್ಷಿಣ: ಬಣ್ಣಗೆಟ್ಟ ಬಿಜೆಪಿಗೆ ಹಿಂದುತ್ವವೆ ಆಧಾರ

ದಕ್ಕಿಣ ಕನ್ನಡದ ಜಿಲ್ಲಾ ಕೇಂದ್ರ ಮಂಗಳೂರು ಒಳಗೊಂಡಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಳೆಯ ಎದುರಾಳಿಗಳಾದ ಕಾಂಗ್ರೆಸ್‌ನ ಮಾಜಿ ಶಾಸಕ ಜೆ.ಆರ್.ಲೋಬೋ ಮತ್ತು ಬಿಜೆಪಿಯ ಹಾಲಿ ಎಮ್ಮೆಲ್ಲೆ ವೇದವ್ಯಾಸ ಕಾಮತ್ ಮತ್ತೆ ಮುಖಾಮುಖಿಯಾಗಿದ್ದಾರೆ. ಶಾಸಕ ಕಾಮತ್‌ಗೆ ಎಂಟಿ ಇನ್‌ಕಂಬೆನ್ಸ್‌ಯಿದೆ; ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿಲ್ಲ ಎಂಬ ಬೇಸರವಿದೆ; ಆರ್‌ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಕೊಲೆ ಆರೋಪಿ ನರೇಶ್ ಶೆಣೈ ಆಜ್ಞಾನುಸಾರ ಶಾಸಕತ್ವ ನಿಭಾಯಿಸಿದ ಆರೋಪವಿದೆ. ಮಾಜಿ ಶಾಸಕ ಲೋಬೋ ಕೆಲಸಗಾರ, ಸರಳ-ಸಜ್ಜನ ಎಂಬ ಅಭಿಪ್ರಾಯವಿದೆ. ಮಂಗಳೂರು ಕಾರ್ಪೊರೇಷನ್ ಕಮಿಷನರ್ ಮತ್ತು ಅಪರ ಜಿಲ್ಲಾಧಿಕಾರಿಯಾಗಿದ್ದ ಲೋಬೋ ಕ್ಷೇತ್ರದ ನಾಡಿ ಮಿಡಿತ ಬಲ್ಲ ಜನಪರ ಎಂಬ ಇಮೇಜ್ ಇದೆ.

ಆದರೆ ಮಂಗಳೂರು ಆಖಾಡದಲ್ಲಿ ಅಭ್ಯರ್ಥಿಯ ಪ್ರತಿಭೆ, ಹೊಣೆಗಾರಿಕೆಯ ಪ್ರಜ್ಞೆ ಅಥವಾ ಜನರ ಬಗೆಗಿನ ಕಳಕಳಿ ಗೆಲುವಿನ ಮಾನದಂಡ ಆಗುತ್ತಿಲ್ಲ. ಧರ್ಮಾಧಾರಿತ ಮತ ಧ್ರುವೀಕರಣದ ಕ್ಷೇತ್ರವಿದು. ಕಾಂಗ್ರೆಸ್ ಮಂಗಳೂರು ದಕ್ಷಿಣದಲ್ಲಿ 35 ಸಾವಿರದಷ್ಟು ಮತದಾರರಿರವ ಕ್ಯಾಥಲಿಕ್ ಸಮುದಾಯಕ್ಕೆ ಟಿಕೆಟ್ ಕೊಡುವುದು ವಾಡಿಕೆ. ಕ್ಷೇತ್ರದಲ್ಲಿ 40 ಸಾವಿರದಷ್ಟಿರುವ ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಹುರಿಯಾಳನ್ನು ಆಖಾಡಕ್ಕೆ ಇಳಿಸುವುದು ಸಂಪ್ರದಾಯವೆಂಬಂತೆ ಬಿಜೆಪಿ ಪಾಲಿಸಿಕೊಂಡು ಬಂದಿದೆ. ಕಾಂಗ್ರೆಸ್ ಕ್ಯಾಂಡಿಡೇಟಿನ ಧರ್ಮವನ್ನೇ ಬಂಡವಾಳ ಮಾಡಿಕೊಂಡು ಹಿಂದು ಮತ ಕ್ರೋಢೀಕರಣಕ್ಕೆ ಪ್ರಯತ್ನಿಸುವುದು ಸಂಘ ಪರಿವಾರದ ಲಾಗಾಯ್ತಿನ ರಣತಂತ್ರ. ಸಂಘ ಪರಿವಾರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಫೋಬಿಯಾವನ್ನು ನಾಜೂಕಾಗಿ ಬಿತ್ತಿ ಬೆಳೆತೆಗೆಯುತ್ತಿದೆ.

ಸದ್ಯಕ್ಕೆ ಬಿಜೆಪಿ ಮುಂದಿದೆ. ಬಿಜೆಪಿ ವಿರುದ್ಧ ಪ್ರವಹಿಸುತ್ತಿರುವ ಹೈವೋಲ್ಟೇಜ್ ಕರೆಂಟ್ ಹಿಂದುತ್ವವನ್ನು ಮಂದಗೊಳಿಸಿದರಷ್ಟೇ ಗೇಮ್ ಚೇಂಜ್ ಆದೀತು ಎಂದು ಹಿರಿಯ ಪತ್ರಕರ್ತರೊಭ್ಬರು “ನ್ಯಾಯಪಥ”ಕ್ಕೆ ಹೇಳಿದರು.

ಮಂಗಳೂರು: ಗೆಲ್ಲುವ ಕುದುರೆ ಖಾದರ್

ಒಂದು ಉಪಚುನಾವಣೆಯೂ ಸೇರಿದಂತೆ ಸತತ ಆರು ಬಾರಿ ಶಾಸಕನಾಗಿರುವ ಕಾಂಗ್ರೆಸ್‌ನ ಯು.ಟಿ.ಖಾದರ್ ಏಳನೆ ದಿಗ್ವಿಜಯದತ್ತ ದಾಪುಗಾಲು ಹಾಕುತ್ತಿದ್ದಾರೆ ಎಂದು ಅವರ ಕಡು ವಿರೋಧಿಗಳಾದ ಸಂಘಿಗಳು ಮತ್ತು ಎಸ್‌ಡಿಪಿಐಗಳೂ ಹೇಳುತ್ತಾರೆ. ಕ್ಷೇತ್ರದಲ್ಲಿ 80 ಸಾವಿರದಷ್ಟಿರುವ ಮುಸ್ಲಿಂ ಮತಗಳನ್ನು ಎಸ್‌ಡಿಪಿಐಗೆ ವಿಭಜಿಸಲಿದ್ದು ಅದಕ್ಕೆ ಸಂಘ ಪರಿವಾರದ ಹಿಂಬಾಗಿಲಿನ ಬೆಂಬಲವಿದೆ ಎಂಬ ಗಾಳಿ ಸುದ್ದಿಗಳು ಹಾರಾಡುತ್ತಿವೆ; ಎಸ್‌ಡಿಪಿಐ ರಿಯಾಜ್ ಪರಂಗಿಪೇಟೆ ಎಂಬವರನ್ನು ಕಣಕ್ಕಿಳಿಸಿದೆ; ಬಿಜೆಪಿ ಕ್ಷೇತ್ರದ ದ್ವಿತೀಯ ಬಹುಸಂಖ್ಯಾತ ಬಿಲ್ಲವ ಸಮುದಾಯದ ಸತೀಶ್ ಕುಂಪಲರನ್ನು ಸ್ಪರ್ಧೆಗಿಳಿಸಿದೆ.

ಒಂದು ಕಡೆಯಿಂದ ಸಂಘ ಪರಿವಾರ ಮತ್ತೊಂದೆಡೆಯಿಂದ ಎಸ್‌ಡಿಪಿಐ ಖಾದರ್‌ರನ್ನು ಸುತ್ತುವರಿದಿದೆ; ಚುನಾವಣೆಗಳನ್ನು ಎದುರಿಸುವ ಕಲೆ ಕರಗತ ಮಾಡಿಕೊಂಡಿರುವ ಖಾದರ್‌ರನ್ನು ಎದುರಿಸಲು ಎದುರಾಳಿಗಳಿಂದ ಆಗುತ್ತಿಲ್ಲ. ಮತಾಂಧ ದಾಳಿಯನ್ನು ಸೆಕ್ಯುಲರ್ ಅಸ್ತ್ರದಿಂದ ಹಿಮ್ಮೆಟ್ಟಿಸುತ್ತಿರುವ ಖಾದರ್ ಕ್ಷೇತ್ರದ ಸಕಲ ಜಾತಿ, ಧರ್ಮದವರೊಂದಿಗೆ ಸೌಹಾರ್ದ ಸಂಬಂಧ ಹೊಂದಿರುವುದು ಪ್ಲಸ್ ಆಗಿದೆ. ಹಿಜಾಬ್, ಹಲಾಲ್‌ನಂಥ ಮತೀಯ ಭಾವನೆ ಕೆರಳಿಸುವ ಆಟ ನಡೆದಾಗ ಖಾದರ್ ಸಮಸ್ಯೆ ನಿಭಾಯಿಸದ ರೀತಿ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ಅಭಿವೃದ್ಧಿ ಪರ ಕೆಲಸಗಾರ ಎಂಬ ಇಮೇಜಿನ ಖಾದರ್ ಸಲೀಸಾಗಿ ಗೆಲ್ಲುತ್ತಾರೆಂಬ ಮಾತು ಸಾಮಾನ್ಯವಾಗಿದೆ.

ಬಂಟ್ವಾಳ: ಬಿಜೆಪಿ-ಕಾಂಗ್ರೆಸ್‌ಗೆ ಫಿಫ್ಟಿ-ಫಿಫ್ಟಿ ಅವಕಾಶ

ಬಂಟ್ವಾಳದಲ್ಲಿ ಕಾಂಗ್ರೆಸ್‌ನ ಹಳೆ ಹುಲಿ ರಮಾನಾಥ ರೈ ಮತ್ತು ಬಿಜೆಪಿಯ ರಾಜೇಶ್ ನಾಯ್ಕ್ ನಡುವೆ ಮಾಡು ಇಲ್ಲವೆ ಮಡಿ ಹೋರಾಟ ಏರ್‍ಪಟ್ಟಿದೆ. ಇಬ್ಬರೂ ಕ್ಷೇತ್ರದಲ್ಲಿ ಸುಮಾರು 25 ಸಾವಿರದಷ್ಟಿರುವ ದ್ವಿತೀಯ ಬಹುಸಂಖ್ಯಾತ ಬಂಟ ಜಾತಿಗೆ ಸೇರಿದವರು. ಕಳೆದ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ದೋಭಿ ಕಾಯಕ ಮಾಡಿಕೊಂಡಿದ್ದ ಶರತ್ ಮಡಿವಾಳ್‌ರನ್ನು ಮರಳು ಮಾಫಿಯಾ ಕೊಂದಿತೆನ್ನಲಾದ ಘಟನೆಯನ್ನು ಬಿಜೆಪಿ ಮತ ಧ್ರುವೀಕರಣಕ್ಕೆ ಬಳಸಿಕೊಂಡಿತ್ತು. ಅಂದು ದ.ಕನ್ನಡ ಆರೆಸ್ಸೆಸ್ ಸರ್ವೋಚ್ಚ ನಾಯಕರಾಗಿದ್ದ ಕಲ್ಲಡ್ಕ ಪ್ರಭಾಕರ್ ಭಟ್ಟ ಮಂತ್ರಿಯಾಗಿದ್ದ ರಮಾನಾಥ್ ರೈರನ್ನು ಸೋಲಿಸಲು ಟೊಂಕ ಕಟ್ಟಿನಿಂತಿದ್ದರು. ತಮ್ಮ ಒಡೆತನದ ಶಾಲೆಯ ಮಕ್ಕಳ ಊಟದ ಹೆಸರಲ್ಲಿ ಕೊಲ್ಲೂರು ದೇವಳದ ಹುಂಡಿಯಿಂದ ಭಟ್ರು ಕೋಟ್ಯಂತರ ರೂ. ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದುದನ್ನು ಮಂತ್ರಿ ರೈ ಕೈದು ಮಾಡಿಸಿದ್ದರು. ಈ ಘಟನೆಗಳನ್ನು ಸಂಘ ಪರಿವಾರ ಬಳಸಿಕೊಂಡು ಕಾಂಗ್ರೆಸ್‌ನ ರೈ ಹಿಂದು ವಿರೋಧಿ ಎಂಬ ಪುಕಾರನ್ನು ವ್ಯವಸ್ಥಿತವಾಗಿ ಹಬ್ಬಿಸಿತ್ತು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆ: ಬಿಜೆಪಿಯ ಕಳೆಗುಂದಿದ ಹಳೆ ಮುಖಗಳು ವರ್ಸಸ್ ಕಂಗೆಟ್ಟ ಕಾಂಗ್ರೆಸಿಗರು!

ಈಗ ಭಟ್ರಿಗೆ ಬಿಜೆಪಿ ಮತ್ತು ಆರೆಸ್ಸೆಸ್ ಎರಡೂ ಕಡೆ ಮೊದಲಿನ ಪ್ರಾಶಸ್ತ್ಯ-ಮಹತ್ವ ಉಳಿದಿಲ್ಲ; ಹಿಂದುತ್ವದ ಪ್ರಖರತೆ ಕ್ಷೇತ್ರದಲ್ಲಿ ಕಮ್ಮಿಯಾಗಿದೆ. ಶಾಸಕ ನಾಯ್ಕ್ ಕೈಗೆ ಸಿಗುವುದಿಲ್ಲ, ಅಭಿವೃದ್ಧಿ ಮಾಡಲಿಲ್ಲ; ರಮಾನಾಥ್ ರೈ ಬೆಟರ್ ಕೆಲಸಗಾರ ಎಂಬ ಭಾವನೆ ಕ್ಷೇತ್ರದಲ್ಲಿದೆ. ಬಿಜೆಪಿಯ ಒಂದು ವರ್ಗಕ್ಕೆ ನಾಯ್ಕ್ ಬೇಡವಾಗಿದ್ದಾರೆ. ಕಾಂಗ್ರೆಸ್‌ನಲ್ಲೂ ಇಂಥದೆ ಒಳೇಟಿನ ಆಟ ನಡೆಯುತ್ತಿದೆ. ಕ್ಷೇತ್ರದಲ್ಲಿ 35 ಸಾವಿರದಷ್ಟಿದ್ದಾರೆ ಎನ್ನಲಾಗುತ್ತಿರುವ ಬಿಲ್ಲವರ ಹೊಸ ರಕ್ತದ ತರುಣರು ಹಿಂದುತ್ವದ ಮೇನಿಯಾದಲ್ಲಿದ್ದಾರೆ.

ಕಳೆದ ಚುನಾವಣೆ ಸಂದರ್ಭದ ಪರಿಸ್ಥಿತಿಗಿಂತ ತುಂಬಾ ಚೇತರಿಸಿಕೊಂಡಿರವ ರೈ ಅವರನ್ನು ಸೋಲಿಸಲು ಬಿಜೆಪಿ ಸಂಘಟನಾತ್ಮಕ ಪೈಪೋಟಿ ಕೊಡುತ್ತಿದೆ. ಆಡಳಿತ ವಿರೋಧಿ ಭಾವನೆಗಳ ನಡುವೆಯೂ ಬಿಜೆಪಿ ಹಿಂದುತ್ವದ ತಂತ್ರಗಾರಿಕೆಯಿಂದಾಗಿ ಬಿಜೆಪಿ ಅಭ್ಯರ್ಥಿಗೆ ಕತ್ತುಕತ್ತಿನ ಸ್ಪರ್ಧೆ ಕೊಡುವಷ್ಟು ಬಲ ಬಂದಿದೆ ಎನ್ನಲಾಗುತ್ತಿದೆ. ಬಂಟ್ವಾಳದಲ್ಲಿ ಅಂದಾಜು 40 ಸಾವಿರವಿರುವ ಮುಸ್ಲಿಮರ ಮತ ರೈಯತ್ತ ಒಲಿದಂತೆ ಪರಿವಾರ ಸಂಘಟನೆಗಳು ಒಬಿಸಿಗಳನ್ನು ಸೆಳೆಯುವ ಕೇಸರಿ ಬಲೆ ಬೀಸುತ್ತವೆ ಎಂದು ರಣಕಣದ ಜಾತಿ-ಧರ್ಮದ ಸೂತ್ರ-ಸಮೀಕರಣ ಬಲ್ಲವರು ಹೇಳುತ್ತಾರೆ. ಒಟ್ಟಿನಲ್ಲಿ ಬಂಟ್ವಾಳದ ಸಮ ಬಲದ ಸೆಣಸಾಟದಲ್ಲಿ ಫೋಟೋ ಫಿನಿಶ್ ಫಲಿತಾಂಶ ಪಕ್ಕಾ ಎನ್ನಲಾಗಿದೆ. ಅಂತಿಮವಾಗಿ “ಇದು ನನ್ನ ಕೊನೆಯ ಚುನಾವಣೆ” ಎಂದು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುತ್ತಿರುವ ರೈ ಗೆಲ್ಲಬಹುದೆಂಬ ಮಾತು ಕೇಳಿಬರುತ್ತಿದೆ.

ಪುತ್ತೂರು: ಹಿಂದುತ್ವ ವರ್ಸಸ್ ಹಿಂದುತ್ವ ವರ್ಸಸ್ ಹಿಂದುತ್ವ

ಬಿಜೆಪಿಯ ಗಟ್ಟಿ ನೆಲೆ ಎನ್ನಲಾಗುತ್ತಿದ್ದ ಕೋಮು ಸೂಕ್ಷ್ಮ ಪ್ರದೇಶ ಪುತ್ತೂರು ಹಿಂದುತ್ವದ ಎರಡು ಬಣಗಳ ನಕಲಿ-ಅಸಲಿ ಕಚ್ಚಾಟದಿಂದ ರಾಜ್ಯದ ಕುತೂಹಲ ಕೆರಳಿಸಿರುವ ರಣಕಣದಲ್ಲಿ ಒಂದಾಗಿದೆ. ಸಂಘ ಪರಿವಾರದ “ಧರ್ಮ ಯುದ್ಧ”ದ ಮುಂಚೂಣಿಯಲ್ಲಿ ನಿಂತು ಗುಟುರು ಹಾಕುತ್ತಿದ್ದ ಆತ್ಯುಗ್ರ ಹಿಂದುತ್ವವಾದಿ ಎನ್ನಲಾಗುತ್ತಿರುವ ಅರುಣ್‌ಕುಮಾರ್ ಪುತ್ತಿಲ ಕಳೆದೊಂದು ದಶಕದಿಂದ ಕೇಸರಿ ಶಾಸಕನಾಗುವ ಕನಸು ಕಾಣುತ್ತಿದ್ದರು. ಹಾಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಹಿಂದುತ್ವದ ಹುಡುಗರು ಸಂಕಷ್ಟಕ್ಕೆ ಸಿಲುಕಿದಾಗ ಸಹಾಯಕ್ಕೆ ಬರುವುದಿಲ್ಲ, ಮುಸ್ಲಿಮರ ಬಗ್ಗೆ ಮೃದು ಧೋರಣೆ ತಳೆದಿದ್ದಾರೆಂದು ಆರೋಪಿಸಿ ಟಿಕೆಟ್ ತಪ್ಪಿಸುವ ಪ್ರಯತ್ನವನ್ನು ಒಂದು ವರ್ಷದಿಂದ ಕೇಸರಿ ಶಾಲು, ಕಡು ಕೆಂಪು ಕುಂಕುಮದ ಕಟ್ಟರ್ ತಂಡ ವ್ಯವಸ್ಥಿತವಾಗಿ ನಡೆಸಿಕೊಂಡುಬಂದಿತ್ತು.

ಹಿಂದುತ್ವ ಹುಡುಗರ ಕೆಂಗಣ್ಣಿಗೆ ತುತ್ತಾಗಿದ್ದ ಶಾಸಕ ಮಠಂದೂರ್‌ರನ್ನು ಮತ್ತೆ ತನ್ನ ತವರಿನ ಅಖಾಡಕ್ಕೆ ಇಳಿಸುವ ಧೈರ್‍ಯ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟಿಲ್ ಮತ್ತು ಸಂಘ ಸೂತ್ರಧಾರರು ಮಾಡಲಿಲ್ಲ; ಮಠಂದೂರ್‌ಗೆ ಬಿಜೆಪಿ ಟಿಕೆಟ್ ಇಲ್ಲವೆಂದಾದರೆ ಅದು ಹಿಂದುತ್ವದ “ಅಭಿಯಾನ”ದ ಮುಂಚೂಣಿಯಲ್ಲಿರುವ ಅರುಣ್ ಪುತ್ತಿಲರಿಗೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಕೇಸರಿ ಕ್ಯಾಂಡಿಡೇಟೆಂದು ಘೋಷಣೆಯಾಗಿದ್ದು ಕನಸು ಮನಸಿನಲ್ಲೂ ಟಿಕೆಟ್ ಬಯಸದ, ಕ್ಷೇತ್ರದ ಹೊರಗಿನವರಾದ ಸುಳ್ಯ ಮೂಲದ ಜಿಪಂ.ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ!

ಕೆರಳಿದ ಹಿಂದುತ್ವ ಸೈನ್ಯದ ಸೇನಾಧಿಪತಿ ಅರುಣ್ ಪುತ್ತಿಲ ಬಂಡೆದ್ದು ಪಕ್ಷೇತರನಾಗಿ ಬಿಜೆಪಿಗೆ ಸೆಡ್ಡು ಹೊಡೆದರು. ಹಿಂದು ಧರ್ಮರಕ್ಷಕನೆಂದು ಸಂಘ ಶ್ರೇಷ್ಠರಿಂದ ಹೊಗಳಿಸಿಕೊಳ್ಳುತ್ತಿದ್ದ ಪುತ್ತಿಲ ರಾತ್ರಿ ಬೆಳಗಾಗುವುದರಲ್ಲಿ ಹಿಂದುಗಳಿಗೆ ಅನ್ಯಾಯ ಮಾಡಿದ ರೌಡಿ ಎಲಿಮೆಂಟ್, ದೇವಸ್ಥಾನ ಒಂದರಲ್ಲಿ ಅವ್ಯವಹಾರ ನಡೆಸಿದ ವಂಚಕ, ಮುಸ್ಲಿಮರು ಸಾಗಿಸುತ್ತಿದ್ದ ದನ ಹಿಡಿದುಬಿಟ್ಟರೆ ಹಿಂದುತ್ವವಾದಿ ಆಗುತ್ತಾನಾ ಎಂಬಿತ್ಯಾದಿ ಟೀಕೆಗಳು ಶುರುವಾಗಿಬಿಟ್ಟವು! ಇದಕ್ಕೆ ಪ್ರತಿಯಾಗಿ ಪುತ್ತಿಲರ ಪಡೆ ಸಂಘದ ದೊಡ್ಡವರ ಜನ್ಮ ಜಾಲಾಡತೊಡಗಿತು. ಈಗ ಹಿಂದುತ್ವದ ಅಸಲಿ ಅವತಾರ ಪುತ್ತೂರಿನ ನಡು ಬೀದಿಯಲ್ಲಿಯೇ ಅನಾವರಣವಾಗಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಪುತ್ತೂರಲ್ಲಿ ಬಂಟ ಸಮುದಾಯದ ಕಾಂಗ್ರೆಸ್ ಕ್ಯಾಂಡಿಡೇಟ್ ಅಶೋಕ್‌ಕುಮಾರ್ ರೈ, ಪ್ರಥಮ ಬಹುಸಂಖ್ಯಾತ ಅರೆ ಭಾಷೆ ಗೌಡ ಜಾತಿಯ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಮತ್ತು ಶಿವಳ್ಳಿ ಬ್ರಾಹ್ಮಣ ವಂಶದ ಅರುಣ್ ಪುತ್ತಿಲರ ನಡುವೆ ತ್ರಿಕೋನ ಕಾಳಗ ಏರ್‍ಪಟ್ಟಿದೆ. ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದರೆ, ಕಾಂಗ್ರೆಸ್‌ನಲ್ಲಿ ಅಪರೂಪದ ಒಗ್ಗಟ್ಟು ಮೂಡಿದೆ. ಕೈ ಪಾಳೆಯದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ಅಸಮಾಧಾನ ಬಿಟ್ಟು ಅಧಿಕೃತ ಅಭ್ಯರ್ಥಿ ಅಶೋಕ್ ರೈ ಜತೆ ಹೆಜ್ಜೆಹಾಕುತ್ತಿದ್ದಾರೆ. ಸಂಘ ಪರಿವಾರದ ಹಿರಿಯ ಸ್ವಜಾತಿ ಮುಂದಾಳು ಕಲ್ಲಡ್ಕ ಭಟ್ಟರ ವಿರೋಧವನ್ನು ಧಿಕ್ಕರಿಸಿ ಪುತ್ತಿಲರ ಬೆನ್ನಿಗೆ ಬ್ರಾಹ್ಮಣ ಲಾಬಿ ನಿಂತಿದೆ.

ಬಿಜೆಪಿ ಸಾಂಪ್ರದಾಯಿಕ ಓಟ್ ಬ್ಯಾಂಕಾಗಿದ್ದ ಅರೆ ಭಾಷೆ ಗೌಡರ ಮತ ಬಿಜೆಪಿಯ ಆಶಾ, ಕಾಂಗ್ರೆಸ್‌ನ ಅಶೋಕ್ ಮತ್ತು ಜೆಡಿಎಸ್‌ನ ಗೌಡ ವರ್ಗದ ಅಭ್ಯರ್ಥಿ ದಿವ್ಯಪ್ರಭಾ ನಡುವೆ ಮೂರು ಪಾಲಾಗಿ ಹಂಚಿಹೋಗಲಿದೆ; ’ಹಣಾ’ಹಣಿಗೆ ಸಿದ್ಧವಾಗಿರುವ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೈ ಕಲಿ ಅಶೋಕ್ ರೈ ಕಾಂಗ್ರೆಸ್‌ನ ಪರಂಪರಾಗತ ಓಟುಗಳ ಜತೆ ಬಿಜೆಪಿ ಕಡೆಗೆ ಹೋಗುತ್ತಿದ್ದ ಸ್ವಜಾತಿ ಬಂಟರ ಮತಗಳನ್ನು ಏಕಗಂಟಲ್ಲಿ ಪಡೆಯಲಿದ್ದಾರೆ; ಗಣನೀಯವಾಗಿರುವ ಬ್ರಾಹ್ಮಣ ಮತಗಳು ಬಿಜೆಪಿ ಬಂಡುಕೋರ ಪುತ್ತಿಲರಿಗೆ ದಕ್ಕುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಪುತ್ತಿಲ ಬಿಜೆಪಿ ಬುಟ್ಟಿಯಿಂದ ಮತ ತೆಗೆದಷ್ಟೂ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಜಾಸ್ತಿಯಾಗುತ್ತದೆ; ಕಾಂಗ್ರೆಸ್‌ನ ಅಶೋಕ್ ರೈ ಗೆದ್ದು, ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂದು ಕ್ಷೇತ್ರದಲ್ಲಿರುವ ಸೋಲು-ಗೆಲುವಿನ ಸಾಧ್ಯಾಸಾಧ್ಯತೆಗಳ ತರ್ಕಗಳಷ್ಟೇ ಅಲ್ಲ, ಇಂಟೆಲಿಜೆನ್ಸ್ ವರದಿಗಳೂ ಹಾಗೇ ಹೇಳುತ್ತಿವೆ ಎನ್ನಲಾಗಿದೆ.

ಸುಳ್ಯ: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಬೇಗುದಿ

ಸುಳ್ಯದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷ ಒಳಬೇಗುದಿಯಲ್ಲಿ ಬಸವಳಿಯುತ್ತಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅರೆಭಾಷೆ ಗೌಡರದೇ ಪಾರಪತ್ಯ. 30 ವರ್ಷಗಳಿಂದ ಸೋಲುತ್ತಿರುವ ಕಾಂಗ್ರೆಸ್‌ಗೆ ಈ ಬಾರಿ ಅನುಕೂಲಕರ ವಾತಾವರಣವಿತ್ತು. ಸುಳ್ಯದ ಗಡಿಗೆ ಹೊಂದಿಕೊಂಡಿರುವ ಕೊಡಗಿನ ಮಡಿಕೇರಿ ಮುನ್ಸಿಪಾಲಿಟಿಯ ಮಾಜಿ ಅಧ್ಯಕ್ಷ ನಂದಕುಮಾರ್ ಕಾಂಗ್ರೆಸ್‌ನ ದೊಡ್ಡವರು ಕೊಟ್ಟ ಟಿಕೆಟ್ ಭರವಸೆ ನಂಬಿ ವಲಸೆ ಬಂದು ಕೋಟ್ಯಂತರ ರೂ. ಹರಿಸಿ ಒಂದು ವರ್ಷದಿಂದ ಪಕ್ಷ ಸಂಘಟನೆ ಮಾಡತೊಡಗಿದ್ದರು.

ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಬೆಂಗಳೂರಿನಲ್ಲಿ ಗ್ರಾನೈಟ್ ಉದ್ಯಮಿ ಎನ್ನಲಾಗಿರುವ ಕೋಟ್ಯಾಧಿಪತಿ ಕೃಷ್ಣಪ್ಪರನ್ನು “ನೀನೇ ಕಾಂಗ್ರೆಸ್ ಕಪ್ಪು ಕುದುರೆ” ಎಂದು ಅಭಯಕೊಟ್ಟು ಕಳಿಹಿಸಿದರು. ಒಬ್ಬರಿಗೆ ಟಿಕೆಟ್ ಕೊಟ್ಟರೆ ಮತ್ತೊಬ್ಬರು ಮುನಿಸಿಕೊಳ್ಳುವಂಥ ಪರಿಸ್ಥತಿಯನ್ನು ಹೈಕಮಾಂಡ್ ನಾಯಕರೇ ನಿರ್ಮಾಣ ಮಾಡಿದರು. ಕಾಂಗ್ರೆಸ್ ವರಿಷ್ಠರ ವಿವೇಚನಾರಹಿತ ಅವಸರದಿಂದ ಸುಳ್ಯ ಕಾಂಗ್ರೆಸ್‌ನಲ್ಲಿ ಗೊಂದಲ ಸೃಷ್ಟಿಯಾಯಿತು. ಜಿ.ಕೃಷ್ಣಪ್ಪರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದಾಗ ಸಹಜವಾಗಿಯೇ ನಂದಕುಮಾರ್ ಬಣದವರು ತಿರುಗಿಬಿದ್ದರು. ಖುದ್ದು ಡಿಕೆಶಿ ಮಧ್ಯಸ್ಥಿಕೆ ನಡೆಸಿ ತೇಪೆಹಾಕಿದರು. ಈಗ ನಂದಕುಮಾರ್ ಬಣ ತೋರಿಕೆ ಪ್ರಚಾರದಲ್ಲಿ ಭಾಗವಹಿಸುತ್ತಿದೆ. ನಾಯಕರ ಎಡವಟ್ಟಿನಿಂದ ಕಾಂಗ್ರೆಸ್‌ಗೆ ಅವಕಾಶವನ್ನು ಹಾಳುಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂತಹುದ್ದೇ ಒಳಬೇಗುದಿ ಬಿಜೆಪಿಯಲ್ಲೂ ಇದೆ. ಸುಳ್ಯ ಬಿಜೆಪಿ ಮೇಲೆ ಹಿಡಿತ ಸಾಧಿಸಿರುವ ಬಲಾಢ್ಯ ಅರೆಭಾಷೆ ಗೌಡ ಸಮುದಾಯದ ಒಂದು ವರ್ಗಕ್ಕೆ ಹಾಲಿ ಶಾಸಕ ಎಸ್.ಅಂಗಾರ ಬಗ್ಗೆ ಸಮಾಧಾನವಿರಲಿಲ್ಲ. ಸತತ ಆರು ಬಾರಿ ಗೆದ್ದಿರುವ, ಕೆಲವು ತಿಂಗಳುಗಳಿಂದ ಮಂತ್ರಿಯೂ ಆಗಿರುವ ಅಂಗಾರಾಗೆ ಆಡಳಿತ ವಿರೋಧಿ ಅಲೆಯೂ ಅಪ್ಪಳಿಸಲಾರಂಭಿಸಿತ್ತು. ಹೊಸ ಮುಖದ ಅನ್ವೇಷಣೆಗೆ ಇಳಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ಗೆ ಸಿಕ್ಕಿದ್ದು ಆದಿ ದ್ರಾವಿಡ ಪಂಗಡಕ್ಕೆ ಸೇರಿದ ಜಿಪಂ ಮಾಜಿ ಸದಸ್ಯೆ ಕುಮಾರಿ ಭಾಗೀರಥಿ ಮುರುಳ್ಯ. ಭಾಗೀರಥಿ ಹೆಸರು ಘೋಷಣೆ ಆಗುತ್ತಲೇ ಬಿಜೆಪಿಯಲ್ಲಿ ತಲ್ಲಣದ ಕಂಪನಗಳೇಳಹತ್ತಿತು. ಒಂದು ಬಣಕ್ಕೆ ಭಾಗೀರಥಿ ಬೇಡವಾಗಿದ್ದರೆ, ಮತ್ತೊಂದು ಗುಂಪಿಗೆ ಅಂಗಾರರೇ ಬೇಕಿತ್ತು. ಇನ್ನೂ ಕೆಲವರು ಭಾಗೀರಥಿಗಿಂತ ಸಮರ್ಥರಾದವರನ್ನು ಕಡೆಗಣಿಸಿದ್ದೇಕೆ ಎಂದು ಪ್ರಶ್ನಿಸಿದರು.

ಹಾನಿ ತಡೆಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಸಂಘಿ ಶ್ರೇಷ್ಠರು ರಾಜಿ ಸಂಧಾನ ಮಾಡಿದ್ದಾರೆ. ಆದರೆ ಅಭ್ಯರ್ಥಿ ಆಯ್ಕೆ ಮತ್ತು ಆ ನಂತರ ಬಿ.ಎಲ್.ಸಂತೋಷ್ ಮಾಡಿದ ಭಾಷಣ ದಲಿತ ವರ್ಗದಲ್ಲಿ ಒಡಕುಂಟು ಮಾಡುವ ಹುನ್ನಾರ ಎನ್ನಲಾಗುತ್ತಿದೆ. ತೀರಾ ತಳ ಸಮುದಾಯದ ಆದಿ ದ್ರಾವಿಡರಿಗೆ ಈ ಬಾರಿ ಬಿಜೆಪಿ ಅವಕಾಶ ಕೊಟ್ಟಿದೆ ಎಂಬ ಸಂತೋಷ್ ಮಾತು ಕ್ಷೇತ್ರದ ದಲಿತರಲ್ಲಿ ಒಡಕು ಮೂಡಿಸಿದೆ; ಹೀಗಾಗಿ ಆದಿ ದ್ರಾವಿಡೇತರ ಬಹುಸಂಖ್ಯಾತ ಮೊಗೇರ, ಮೇರ, ಮುಂಡಾಲ ಮುಂತಾದ ದಲಿತರ ಒಳಪಂಗಡಗಳು ಬಿಜೆಪಿಯಿಂದ ವಿಮುಖವಾಗುವ ಸಾಧ್ಯತೆಯಿದೆ ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ಹೇಳುತ್ತಾರೆ.

ಇದನ್ನೂ ಓದಿ: ಉಡುಪಿ: ಹಿಂದುತ್ವದ ಹಿತಾನುಭವ ಭ್ರಮನಿರಸನವಾಗುವ ಆತಂಕದಲ್ಲಿ ಕೇಸರಿ ಪಡೆ?!

ಕಾಂಗ್ರೆಸ್ ಕ್ಯಾಂಡಿಡೇಟ್ ಕೃಷ್ಣಪ್ಪರಿಗೆ ವೈಯಕ್ತಿಕ ವರ್ಚಸ್ಸಿದೆ. ಪ್ರಬಲ ಅರೆ ಭಾಷೆ ಗೌಡ ನಾಯಕರು ಕೃಷ್ಣಪ್ಪರ ಹಿಂದಿದ್ದಾರೆ. ಯಾವ ವೈಯಕ್ತಿಕ ಪ್ರಭಾವವೂ ಇಲ್ಲದ ಬಿಜೆಪಿ ಹುರಿಯಳು ಭಾಗೀರಥಿ ಅರೆ ಭಾಷೆ ಗೌಡ ಲೀಡರ್‌ಗಳ ಮರ್ಜಿಗೆ ಕಾಯಬೇಕಾಗಿದೆ. ಆದರೆ ಬಿಜೆಪಿಯಲ್ಲಿ ಎಲ್ಲ ಅಸಮಧಾನ, ವೈಮನಸ್ಸು ತಣ್ಣಗಾಗಿಸುವ ತಾಕತ್ತು ಮೂರು ದಶಕದಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಹಿಂದುತ್ವದ “ಪವಾಡ”ಕ್ಕಿದೆ ಎಂದು ಕ್ಷೇತ್ರದ ಧರ್ಮಕಾರಣದ ಮರ್ಮ ಬಲ್ಲವರು ಹೇಳುತ್ತಾರೆ. ಮತದಾನಕ್ಕೆ ದಿನಗಣನೆ ಶುರುವಾಗಿರುವಂತೆ ಕಾಂಗ್ರೆಸ್-ಬಿಜೆಪಿ ನಡುವಿನ ನೇರ-ನಿಕಟ ಪೈಪೋಟಿ ಕ್ಲೈಮ್ಯಾಕ್ಸ್ ತಲುಪುತ್ತಿದೆ.

ಬೆಳ್ತಂಗಡಿ: ಬಿಜೆಪಿಯ ಪೂಂಜಾಗೆ ಬಿಗಿಯಾಗುತ್ತಿರುವ ಕಣ

ಬಿಜೆಪಿ ಶಾಸಕ ಹರೀಶ್ ಪೂಂಜಾ 2018ರ ಚುನಾವಣೆಗೆ ಕೆಲವೆ ತಿಂಗಳುಗಳಿರುವಾಗ ರೆಡಿಮೇಡ್ ಹಿಂದುತ್ವದ ಮುಂದಾಳಾಗಿ ಬೆಳ್ತಂಗಡಿಯಲ್ಲಿ ಅವತರಿಸಿದ್ದರು. ಬೆಳ್ತಂಗಡಿಯಲ್ಲಿ ಆ ಸಂದರ್ಭದಲ್ಲಿ ಹಿಂದುತ್ವ ಅಬ್ಬರ ಪರಾಕಾಷ್ಠೆ ತಲುಪಿತ್ತು. ಆ ಕಾವನ್ನು ಚುನಾವಣೆಯವರೆಗೆ ಧನ ಬಲದಿಂದ ಮೇಂಟೇನ್ ಮಾಡಿಕೊಂಡು ಬಂದಿದ್ದ ಪೂಂಜಾ ಅನಿರೀಕ್ಷಿತವಾಗಿ ಗೆಲುವು ಕಂಡಿದ್ದರು. ಕೇವಲ 20 ಸಾವಿರದಷ್ಟು ಮತವಿದೆ ಎನ್ನಲಾಗುವ ಬಂಟರ ಸಮುದಾಯದ “ಆಗಂತುಕ” ಶಾಸಕನಾಗಿದ್ದು ಸಂಘ ಪರಿವಾರವನ್ನೇ ಬೆಚ್ಚಿಬೀಳಿಸಿತ್ತು. ಬಿಲ್ಲವರ ಕ್ಷೇತ್ರವೆಂದು ಪರಿಗಣಿತವಾಗಿದ್ದ ಬೆಳ್ತಂಗಡಿಯಲ್ಲಿ ಐದು ಬಾರಿ ಶಾಸಕರಾಗಿದ್ದ ನಿಷ್ಠುರ ಮಾತಿನ, ಜನಪರ ಕೆಲಸಗಾರ ಎಂದು ಪರಿಚಿತರಾಗಿದ್ದ ಪ್ರಭಾವಿ ಬಿಲ್ಲವ ನಾಯಕ ವಸಂತ ಬಂಗೇರ ಸೋಲಲು ಅಂದು ಬಿಲ್ಲವರ ಹೊಸ ತಲೆಮಾರಿನ ಹುಡುಗರು ಹಿಂದುತ್ವದ ಖೆಡ್ಡಾದಲ್ಲಿ ಬಿದ್ದಿದ್ದೇ ಕಾರಣ ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಅಚಾನಕ್ ಎಮ್ಮೆಲ್ಲೆಯಾದ ಪೂಂಜಾ ಹಿಂದುತ್ವ ಹಿಡನ್ ಅಜೆಂಡಾ, ಸ್ವಜಾತಿವಾದ ಮತ್ತು ಫಾರ್ಟಿ ಪರ್ಸೆಂಟ್ ಕಾಮಗಾರಿಯಲ್ಲಿ ನಿರತರಾದರೆಂಬ ಆರೋಪ ಬಲವಾಗಿದೆ. ಬಿಜೆಪಿ ಶಾಸಕ ಪೂಂಜಾರ ಧನ ಬಲದ ಎದುರು ತನ್ನಿಂದ ಸೆಣಸಾಟ ಸಾಧ್ಯವಿಲ್ಲವೆಂದು ಹಿರಿಯ ರಾಜಕಾರಣಿ ಕಾಂಗ್ರೆಸ್‌ನ ವಸಂತ ಬಂಗೇರ ಹಿಂದೆಸರಿದರು. ಈಗ ರಣಕಣದಲ್ಲಿ ಕಳೆದೈದು ವರ್ಷ ಬೆಳ್ತಂಗಡಿಯಲ್ಲಿ ತಾಂಡವವಾಡಿದ್ದ ಭ್ರಷ್ಟಾಚಾರ, ಅವ್ಯವಹಾರ, ಶಾಸಕರ ದುರಹಂಕಾರದ ವರ್ತನೆ, ಆರ್ಥಿಕ ಸಂಪನ್ಮೂಲದ ಮೂಲ ಮುಖ್ಯ ವಿಷಯವಾಗಿದೆ ಎಂದು ಪತ್ರಕರ್ತರೊಬ್ಬರು ಹೇಳುತ್ತಾರೆ.

ಬೆಳ್ತಂಗಡಿಯಲ್ಲಿ ಹಿಂದುತ್ವದ ನಶೆ ಮೊದಲಿನಷ್ಟಿಲ್ಲ; ಕ್ಷೇತ್ರದಲ್ಲಿ 60 ಸಾವಿರದಷ್ಟಿರುವ ಬಿಲ್ಲವ ಮತದಾರ ಸಮೂಹದ ಯುವಕರಿಗೆ “ಧರ್ಮಯುದ್ಧ”ದ ಉಸಾಬರಿ ಸಾಕಾಗಿದೆ. ಬಿಜೆಪಿಯಲ್ಲೂ ಶಾಸಕ ಪೂಂಜಾ ಬಗ್ಗೆ ಸಮಾಧಾನವಿಲ್ಲ. ಸಂಘ ಪರಿವಾರದಲ್ಲಿನ ಮೇಲ್ವರ್ಗದ ಬಣಕ್ಕೆ ಪೂಂಜಾ ಮತ್ತೆ ಶಾಸಕನಾಗುವುದು ಬೇಡವಾಗಿದೆ. ಬಿಜೆಪಿಯ ಕಟ್ಟಾ ಅಭಿಮಾನಿ ಮತದಾರರಾದ ಕೊಂಕಣಿಗರು ಬೇಸರದಲ್ಲಿದ್ದಾರೆ. ಶಾಸಕ ಪೂಂಜಾ ಆಡಳಿತ ವಿರೋಧಿ ಸುಳಿಗೆ ಸಿಲುಕಿದ್ದರೆ, ಬಿಜೆಪಿ ಪರಿವಾರದ ವಿರುದ್ಧ ಅಂಡರ್ ಕರೆಂಟ್ ಇದೆ. ಕಾಂಗ್ರೆಸ್‌ನ ಮಾಜಿ ಶಾಸಕ ವಸಂತ ಬಂಗೇರ, ಹಾಲಿ ಎಮ್ಮೆಲ್ಸಿ-ಡಿಸಿಸಿ ಅಧ್ಯಕ್ಷ ಹರೀಶ್ ಪೂಜಾರಿ ಮತ್ತಿತರ ಪ್ರಭಾವಿ ಬಿಲ್ಲವ ಮುಖಂಡರು, 40 ಸಾವಿರ ಮತದಾರರಿರುವ ಲೆಕ್ಕಾಚಾರದ ಒಕ್ಕಲಿಗ ಸಮುದಾಯದ ಮೇಲೆ ಹಿಡಿತವಿರುವ ಮಾಜಿಮಂತ್ರಿ ಗಂಗಾಧರ ಗೌಡ ಮತ್ತವರ ಮಗ ರಂಜನ್ ಗೌಡರಂಥವರು ಒಂದಾಗಿ ಕಾಂಗ್ರೆಸ್ ಕ್ಯಾಂಡಿಡೇಟ್ ರಕ್ಷಿತ್ ಶಿವರಾಮ್ ಬೆನ್ನಿಗೆ ನಿಂತಿದ್ದಾರೆ.

ಬೆಳ್ತಂಗಡಿಯ ಬಿಲ್ಲವ ಸಮುದಾಯದ “ಹೆರಾಜೆ” ಮನೆತನದ ಮೊಮ್ಮಗ ರಕ್ಷಿತ್ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅಣ್ಣ-ನಿವೃತ್ತ ಪೋಲೀಸ್ ಅಧಿಕಾರಿ ಬಿ.ಕೆ.ಶಿರಾಮ್ ಪುತ್ರ. ಎರಡು ಮೂರು ವರ್ಷದಿಂದ ಬೆಳ್ತಂಗಡಿಯಲ್ಲಿ ನೆಲೆನಿಂತು ಪಕ್ಷ ಸಂಘಟಿಸಿದ್ದ ರಕ್ಷಿತ್ ಬಿಜೆಪಿಯ ಪೂಂಜಾಗೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಇಷ್ಟು ದಿನ ಬಿಜೆಪಿಯ ಪೂಂಜಾ ಜತೆಗಿದ್ದ ಬಿಲ್ಲವರ ಹುಡುಗರೀಗ ಸ್ವಜಾತಿಯ ರಕ್ಷಿತ್ ಕಡೆ ಆಕರ್ಷಿತರಾಗುತ್ತಿದ್ದಾರೆ. ದಿನಕಳೆದಂತೆ ತುರುಸು ತೀವ್ರವಾಗುತ್ತಿದ್ದು ಗೆಲುವಿನ ಸಾಧ್ಯತೆ ಕಾಂಗ್ರೆಸ್-ಬಿಜೆಪಿಗೆ ಸಮನಾಗಿದೆ ಎಂದು ರಣಕಣದ ವಿಶ್ಲೇಷಕರು ತರ್ಕಿಸುತ್ತಾರೆ. ಬಿಜೆಪಿಗೆ ಸಹಾಯವಾಗುವುದನ್ನು ತಪ್ಪಿಸಲು ಮೊದಲಿಗೆ ಮುಸ್ಲಿಂ ಕ್ಯಾಂಡಿಡೇಟ್ ಹಾಕದಿರುವ ನಿರ್ಧಾರವನ್ನು ಜೆಡಿಎಸ್ ಮಾಡಿತ್ತಾದರೂ, ನಂತರ ಅಶ್ರಫ್ ಅಲಿಗೆ ಬಿ-ಫಾರ್ಮ್ ಕೊಟ್ಟಿದೆ.

ಮೂಡುಬಿದಿರೆ: ಗೆಲುವಿನ ಗೆರೆಯ ಸನಿಹದಲ್ಲಿ ಮಿಥುನ್?

2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತ ಕ್ಷಣದಿಂದ ಮೂಡುಬಿದಿರೆಯಲ್ಲಿ ಪ್ರಚಾರ ನಡೆಸುತ್ತಿದ್ದ ಕಾಂಗ್ರೆಸ್‌ನ ಮಿಥುನ್ ರೈ ಮತ್ತು ಬಿಜೆಪಿ ಹುರಿಯಾಳು ಶಾಸಕ ಉಮಾನಾಥ್ ಕೋಟ್ಯಾನ್ ಮುಖಾಮುಖಿಯಾಗಿದ್ದಾರೆ. ಜನತಾ ಪರಿವಾರದ ಹುರಿಯಾಳಾಗಿ ಸ್ವಂತ ವರ್ಚಸ್ಸಿನಿಂದಲೇ ಗೆಲ್ಲುತ್ತಿದ್ದ ಮುಂಡು(ಲುಂಗಿ)-ಹವಾಯಿಯ ಸರಳ ಜನನಾಯಕರಾಗಿದ್ದ ಮಾಜಿ ಶಾಸಕ-ದಿವಂಗತ ಅಮರನಾಥ ಶೆಟ್ಟಿ ಮಗಳು ಅಮರಶ್ರೀ ಜೆಡಿಎಸ್ ಹುರಿಯಾಳು. ಅಪ್ಪನ ಜನಪ್ರಿಯತೆಯ ಎಳ್ಳಷ್ಟೂ ಅಮರಶ್ರೀಗೆ ಇಲ್ಲದಿರುವುದರಿಂದ ಕಾಂಗ್ರೆಸ್-ಬಿಜೆಪಿ ನಡುವೆ ನೇರಾನೇರ ಕಾಳಗವಾಗುತ್ತಿದೆ. 2018ರವರೆಗೆ ಮೂಡುಬಿದಿರೆಯಲ್ಲಿ ಮಾತ್ರ ಬಿಜೆಪಿಗೆ ಗೆಲ್ಲಲಾಗಿರಲಿಲ್ಲ. ಸತತ ನಾಲ್ಕು ಸಲ ಗೆದ್ದಿದ್ದ ಅಭಯಚಂದ್ರ ಜೈನ್ ಸಿಡುಕು ಸ್ವಭಾವದಿಂದ 2018ರ ಚುನಾವಣೆ ಹೊತ್ತಿಗೆ ಕ್ಷೇತ್ರದಲ್ಲಿ ಸಂಬಂಧ ಕೆಡಿಸಿಕೊಂಡಿದ್ದರು; ಅದೇ ಹೊತ್ತಿಗೆ ಕ್ಷೇತ್ರದಲ್ಲಿ ಹಿಂದುತ್ವ ಮುಂಚೂಣಿಯಲ್ಲಿದ್ದ ಬಿಲ್ಲವ ಸಮುದಾಯದ ಹುಡುಗರು ಕೊಲೆಯಾಗಿ ಹೋಗಿದ್ದರು. ಮಾಜಿ ಸಚಿವ ಅಭಯರಿಗೆ ಸುತ್ತಿಕೊಂಡಿದ್ದ ಎಂಟಿ ಇನ್‌ಕಂಬೆನ್ಸ್ ಮತ್ತು ಹಿಂದುತ್ವ ಬಳಸಿಕೊಂಡು ಬಿಜೆಪಿ 2018ರಲ್ಲಿ ಮೊದಲ ವಿಜಯ ಸಾಧಸಿತು ಎನ್ನಲಾಗಿದೆ.

2018ರಲ್ಲಿ ತಾನು ಗೆಲ್ಲುವುದಿಲ್ಲ ಎಂಬುದು ಪಕ್ಕಾ ಆಗಿದ್ದ ಅಭಯ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈಗೆ ಅಭ್ಯರ್ಥಿ ಮಾಡಲು ಪ್ರತಿಯತ್ನಿಸಿದ್ದರು. ಆದರೆ ಕಾಂಗ್ರೆಸ್‌ನ ಟಿಕೆಟ್ ಕಮಿಟಿಯ ಎಡವಟ್ಟಿನಿಂದ ಅನಿವಾರ್ಯವಾಗಿ ಅಭಯರೇ ಅಖಾಡಕ್ಕಿಳಿಯಬೇಕಾಗಿಬಂತು. ಸೋತ ಕೆಲವೇ ತಿಂಗಳುಗಳಲ್ಲಿ ಮಿಥುನ್ ರೈ ತನ್ನ ಉತ್ತರಾಧಿಕಾರಿಯೆಂದು ಅಭಯ್ ಘೋಷಿಸಿದ್ದರು. ಈಗ ಅಭಯ್‌ಗೆ ತಮ್ಮ ಶಿಷ್ಯನನ್ನು ಗೆಲ್ಲಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಂದಾಜು 25 ಸಾವಿರ ಮತವಿರುವ ಸ್ವಜಾತಿ ಬಂಟರ ಮತ್ತು 40 ಸಾವಿರದಷ್ಟಿರುವ ಮುಸ್ಲಿಂ-ಕ್ರಿಶ್ಚಿಯನ್ ಮತಗಳನ್ನು ಏಕಗಂಟಲ್ಲಿ ಪಡೆಯುವ ಭರವಸೆಯಿರುವ ಮಿಥುನ್‌ಗೆ, ಹಿಂದುತ್ವದ ಆರ್ಭಟ ಕಮ್ಮಿಯಾಗಿರುವುದರಿಂದ ಬಿಜೆಪಿಗೆ ಹೋಗುತ್ತಿದ್ದ ಬಿಲ್ಲವರ ಮತದಲ್ಲಿ ಕಾಲು ಭಾಗವಾದರೂ ದಕ್ಕುವ ಸೂಚನೆ ಗೋಚರಿಸುತ್ತಿದೆ; ಹೆಚ್ಚುಕಮ್ಮಿ 50 ಸಾವಿರ ಮತವಿರುವ ಸ್ವಜಾತಿ ಬಿಲ್ಲವರನ್ನು ಬಿಜೆಪಿಯ ಕೋಟ್ಯಾನ್ ನಂಬಿಕೊಂಡಿದ್ದಾರೆ ಎಂದು ಕ್ಷೇತ್ರದ ಜಾತಿ ಸಮೀಕರಣ ಗೊತ್ತಿರುವವರು ಹೇಳುತ್ತಾರೆ.

ಕಾಂಗ್ರೆಸ್ ಪರ ಒಲವು ಗುಪ್ತಗಾಮಿಯಾಗಿದ್ದರೆ, ಬಿಜೆಪಿಗೆ ಬೇಗುದಿ ಬಾಧಿಸುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಶಿಷ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಕೇಸರಿ ಟಿಕೆಟ್ ಆಸೆಯಲ್ಲಿದ್ದರು. ಒಂದು ಹಂತದಲ್ಲಿ ನಳಿನ್, ಶಾಸಕ ಉಮಾನಾಥ ಕೊಟ್ಯಾನ್‌ಗೆ ಕೊಕ್ ಕೊಡುವ ಪ್ರಯತ್ನವನ್ನೂ ಮಾಡಿದ್ದರು; ಆದರೆ ಉಮಾನಾಥ್ ಕೋಟ್ಯಾನ್ ನಳಿನ್‌ರಿಂದಲೆ ಟಿಕೆಟ್ ಖರೀದಿಸಿದರು ಎಂಬ ವರ್ತಮಾನ ಬಿಜೆಪಿ ಪಡಸಾಲೆಯಲ್ಲಿದೆ. ಟಿಕೆಟ್ ಸಿಗದ ಅಸಮಾಧಾನದಲ್ಲಿ ಸುದರ್ಶನ್ ಇದ್ದಾರೆ. ನಳಿನ್‌ಗೂ ಕೋಟ್ಯಾನ್ ಎಂದರೆ ಅಷ್ಟಕ್ಕಷ್ಟೆ; ಕುರುಡು ಕಾಂಚಾಣ ಕುಣಿಯುತ್ತಿರುವ ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ನ ಮಿಥುನ್ ರೈ ಮತ್ತು ಬಿಜೆಪಿಯ ಕೋಟ್ಯಾನ್ ನಡುವೆ ಕತ್ತುಕತ್ತಿನ ಕಾಳಗ ನಡೆಯುತ್ತಿದೆ.ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಕಾಂಗ್ರೆಸ್ ಮುಂದಿದೆ ಎಂಬ ತರ್ಕಗಳು ನಡೆಯುತ್ತಿದೆ.

ಮಂಗಳೂರು ಉತ್ತರ: ಕಾಂಗ್ರೆಸ್‌ಗೆ ಮೂರನೆ ಸ್ಥಾನ?

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಲ್ಲವರು ಮತ್ತು ಮುಸಲ್ಮಾನ ಮತದಾರರು 35-45 ಸಾವಿರದ ಆಸುಪಾಸಿನಲ್ಲಿದ್ದಾರೆಂದು ಹೇಳಲಾಗುತ್ತಿದೆ. ಹಿಂದುತ್ವದ ಸೆಳೆತಕ್ಕೆ ಸುಲಭವಾಗಿ ಸಿಲುಕುವ ಬಿಲ್ಲವರೇ ಇಲ್ಲಿ ಸಂಘಪರಿವಾರಕ್ಕೆ ಶಸ್ತ್ರಾಸ್ತ್ರ. ಪಕ್ಕಾ ಹಿಂದುತ್ವ ಪ್ರಯೋಗ ಶಾಲೆಯಾಗಿರುವ ಸುರತ್ಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಸ್ಲಿಂ ಕೋಟಾ ತುಂಬುವ ಸ್ಟ್ರಾಟಜಿ ಬಿಟ್ಟು ಬಹುಸಂಖ್ಯಾತ ಬಿಲ್ಲವರಿಗೆ ಟಿಕೆಟ್ ಕೊಟ್ಟಿದ್ದರೆ ಬಿಜೆಪಿಯನ್ನು ಸುಲಭವಾಗಿ ಮಣಿಸಬಹುದಿತ್ತು ಎಂದು ಕ್ಷೇತ್ರದ ಧರ್ಮಕಾರಣದ ಮರ್ಮ ಬಲ್ಲವರು ತರ್ಕಿಸುತ್ತಾರೆ. ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದ ಗಡುವಿನವರೆಗೂ ಮಂಗಳೂರು ಉತ್ತರ ಕ್ಷೇತ್ರದ ಮುಸ್ಲಿಂ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ಕಗ್ಗಂಟಾಗಿತ್ತು. ಡಿಕೆಶಿ ಇನಾಯತ್ ಅಲಿ ಎಂಬ ಧನಾಢ್ಯ ಗುತ್ತಿಗೆದಾರನ ಪರ ನಿಂತಿದ್ದರೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಮಾಜಿ ಶಾಸಕ ಮೊಯ್ದೀನ್ ಬಾವಾಗೆ ಅಭ್ಯರ್ಥಿ ಮಾಡಲು ಶತಾಯಗತಾಯ ಹೋರಾಟ ನಡೆಸಿದ್ದರು.

ಅಂತಿಮವಾಗಿ ಡಿಕೆಶಿ ಅನುಯಾಯಿ ಇನಾಯತ್ ಅಲಿಗೆ ಹಸ್ತದ ಬಿ-ಫಾರ್‍ಮ್ ಕೊಡಲಾಯಿತು. ಹತಾಶರಾದ ಮಾಜಿ ಶಾಸಕ ಬಾವಾ ಡಿಕೆಶಿಗೆ ಹಿಡಿ ಶಾಪ ಹಾಕುತ್ತ ಕಣ್ಣೀರಿಟ್ಟು ಜೆಡಿಎಸ್ ಹುರಿಯಾಳಾಗಿದ್ದಾರೆ. ಸಂಘ ಪರಿವಾರದ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಖುಷಿಯಲ್ಲಿದೆ. ಬಿಜೆಪಿಗೆ ಮೊದಲೇ ಹಿಂದುತ್ವದಿಂದ ಹದಗೊಂಡು ಸುಲಭದ ಪಿಚ್‌ನಲ್ಲೀಗ ಮುಸ್ಲಿಂ ಮತ ವಿಭಜನೆಯಾಗಿ ಗೆಲುವು ಮತ್ತಷ್ಟು ನಿರಾಯಾಸವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹಿಂದೆ ಶಾಸಕನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದ ಬಾವಾ ಸೆಕ್ಯುಲರ್ ಮತ್ತು ಕೆಲಸಗಾರ ಎಂದು ಕಟ್ಟರ್ ಹಿಂದುತ್ವವಾದಿಗಳೇ ಒಪ್ಪಿಕೊಳ್ಳುತ್ತಾರೆ; ಮತೀಯ ವಿವಾದಗಳೆದ್ದಾಗಷ್ಟೇ ಅಂತಃಪುರದಿಂದ ಹೊರಬರುತ್ತಿದ್ದ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಕರ್ಮಗೇಡಿ ವ್ಯಾಪಕ ಅಸಮಾಧಾನವಿದೆ. ಆದರೆ ಕೌಬ್ರಿಗೇಡ್ ಮತ್ತು ಅನೈತಿಕ ಪೊಲೀಸ್ ಪಡೆಯ ಬೆನ್ನಿಗೆ ಸದಾ ನಿಲ್ಲುತ್ತಿದ್ದ ಡಾ.ಶೆಟ್ಟಿ ಹಿಂದುತ್ವದ ಕೇಸರಿ ಝೋನ್ ಕಣ್ಮಣಿ.

ಬಿಜೆಪಿ ಹುರಿಯಾಳಿನ ಬಗೆಗಿರುವ ಬೇಸರ, ಅಸಮಾಧಾನವನ್ನು ಅರಗಿಸಿಕೊಳ್ಳುವ ತಾಕತ್ತು ಸ್ಥಳೀಯ ಹಿಂದುತ್ವಕ್ಕಿದೆ: ಮೇಲ್ನೋಟಕ್ಕೆ ತ್ರಿಕೋನ ಕಾಳಗ ಏರ್‍ಪಟ್ಟಂತೆ ಭಾಸವಾಗುತ್ತದೆ. ಆದರೆ ಕ್ಷೇತ್ರದಲ್ಲಿ ನೆಲೆಯಾಗಿರುವ ಧರ್ಮಕಾರಣ, ಜಾತಿ ಸಮೀಕರಣ, ರಣ ತಂತ್ರವಿಲ್ಲದ ಕಾಂಗ್ರೆಸ್‌ನ ದೌರ್ಬಲ್ಯ ಮತ್ತು ಮುಸಲ್ಮಾನರ ಒಲವು ಗಳಿಸಿರುವ ಜೆಡಿಎಸ್ ಹುರಿಯಾಳು ಮೊಯ್ದೀನ್ ಬಾವಾ ಬ್ರದರ್‍ಸ್ ವ್ಯವಸ್ಥಿತ ಪ್ರಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಯ “ಕೆಲಸ ಮಾಡದ ಶಾಸಕ” ಖ್ಯಾತಿಯ ಡಾ.ಭರತ್ ಶೆಟ್ಟಿಗೆ ಅದೃಷ್ಟ ಖುಲಾಯಿಸಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆ ಸ್ಪಷ್ಟವಾಗುತ್ತದೆ ಎಂಬ ರೋಚಕ ಚರ್ಚೆ ಕ್ಷೇತ್ರದ ರಾಜಕೀಯ ಕಟ್ಟೆಯಲ್ಲಿ ಜೋರಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...