Homeಮುಖಪುಟಸುವರ್ಣ ತ್ರಿಭುಜ ಬೋಟ್ ಕರುಣ ಕತೆ! ಓಟಿಗಾಗಿ ಮೀನುಗಾರರ ಬಲಿ ಬಚ್ಚಿಟ್ಟ ಬಿಜೆಪಿ ಭಂಡರು!!

ಸುವರ್ಣ ತ್ರಿಭುಜ ಬೋಟ್ ಕರುಣ ಕತೆ! ಓಟಿಗಾಗಿ ಮೀನುಗಾರರ ಬಲಿ ಬಚ್ಚಿಟ್ಟ ಬಿಜೆಪಿ ಭಂಡರು!!

- Advertisement -
- Advertisement -

| ಶುದ್ದೋದನ |

ಕರಾವಳಿಯಲ್ಲಿ ಮೀನುಗಾರರ ಹೆಣ ಇಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುವ ಸುಖವೇ ಬಿಜೆಪಿ ಭೂಪರು ಕರಗತ ಮಾಡಿಕೊಂಡು ಬಿಟ್ಟಿದ್ದಾರೆ. ಕಳೆದ ಅಸೆಂಬ್ಲಿ ಇಲೆಕ್ಷನ್ ಹೊತ್ತಲ್ಲಿ ಹೊನ್ನಾವರದ ಮೀನುಗಾರರ ಫೊರ ಪರೇಶ್ ಮೆಸ್ತನ ನಿಗೂಢ ಸಾವನ್ನು ಬಳಸಿಕೊಂಡು ಬಿಜೆಪಿಗರು ಬಂಪರ್ ಫಸಲು ಪಡೆದಿದ್ದರು! ಮುಗಿದ ಲೋಕಸಭಾ ಚುನಾವಣೆಯಲ್ಲೂ ಕಾವೇರಿ ಕಮಲಗಳಿಗೆ ಬಡವರ ಜೀವವೇ ಬಂಡವಾಳವಾಗಿತ್ತು; 4 ತಿಂಗಳ ಹಿಂದೆ ಮೀನುಗಾರಿಕೆಗೆಂದು ಹೋಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟಲ್ಲಿದ್ದ ಏಳು ಮಂದಿಯನ್ನು ನೇವಿ ಶಿಪ್ ನುಂಗಿಹಾಕಿದ್ದು ಗೊತ್ತಿದ್ದೂ ಗೊತ್ತಿಲ್ಲದಂತೆ ಮೋದಿ ಮಾಮನ ಸರ್ಕಾರ ಮತ್ತು ಸ್ಥಳೀಯ ಬಿಜೆಪಿ ಪುಡಾರಿಗಳು ನಾಟಕ ನಡೆಸಿದ್ದರು. ಸತ್ಯ ಗೊತ್ತಿದ್ದರೆ ಕರಾವಳಿಯ ತ್ರಿವಳಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಮೀನುಗಾರರ ಮತ ಬಿಜೆಪಿಗೆ ಸಿಗದು ಎಂಬ ಭಯದಿಂದ “ಸರ್ಕಾರ ಅನಾಹುತ” ಮೋದಿ ಪಟಾಲಮ್ ಬುದ್ಧಿಪೂರ್ವಕವಾಗಿ ಮುಚ್ಚಿಟ್ಟಿದ್ದು ಈಗ ಜಗಜ್ಜಾಹೀರಾಗಿ ಹೋಗಿದೆ.

ಮಲ್ಪೆಯ ಚಂದ್ರಶೇಖರ್ ಕೋಟ್ಯಾನ್ ಗೆ ಸೇರಿದ ಸುವರ್ಣ ತ್ರಿಭುಜ ಬೋಟ್ ಉ ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗ, ಮಾಲ್ಪಾನ್ ಸಮುದ್ರ ಪ್ರದೇಶಕ್ಕೆ ಹೋಗಿತ್ತು. ಅದರಲ್ಲಿ ಉಡುಪಿಯ ಇಬ್ಬರು ಮತ್ತು ಉತ್ತರ ಕನ್ನಡದ ಐವರು ಮೀನುಗಾರರಿದ್ದರು. 2018 ರ ಡಿಸೆಂಬರ್ 15-16 ರ ರಾತ್ರಿ ಈ ಬೊಪಟು ಮಾಲ್ಪಾಣ್‍ನಲ್ಲಿ ಮೀನುಗಾರಿಕೆ ನಡೆಸುತ್ತಿತ್ತು. ಅದೇ ವೇಳೆಯಲ್ಲಿ ನೌಕಾಪಡೆಯ ಯುದ್ಧನೌಕೆ ಐಎಂಎಸ್ ಕೊಚ್ಚಿನ್ ಅಲ್ಲಿಂದಲೇ ಹಾದುಹೋಗಿದೆ. ನೌಕಾಪಡೆಯೇ ಒದಗಿಸಿದ ಸದ್ರಿ ಬೃಹತ್ ನೌಕೆಯ ಸಾಗಾಟ ಮಾರ್ಗದ ರೇಖಾಂಶ-ಅಕ್ಷಾಂಶ ದಾಖಲೆಯೇ ಆಗ ಮಾಲ್ಪಾಣ್‍ನಲ್ಲಿ ಅದಿತ್ತೆಬುದ್ದನ್ನು ದೃಢಪಡಿಸುತ್ತದೆ. ಅಚಾನಕ್ ಐಎನ್‍ಎಸ್ ಕೊಚ್ಚಿನ್ ಸುವರ್ಣ ತ್ರಿಭುಜಕ್ಕೆ ಬಡಿದಿದೆ.

ಡಿಕ್ಕಿಯಾಗುವುದು ನೌಕಾಸೇನೆಯ ಅರಿವಿಗೂ ಬಂದಿದೆ. ಐಎನ್‍ಎಸ್ ಕೊಚ್ಚಿನ್ ಸಿಬ್ಬಂದಿ ನೌಸೇನೆಯ ವರಿಷ್ಠರಿಗೆ ಮಾಲ್ಪಾಣ್ ಸಮುದ್ರ ಪ್ರದೇಶದಲ್ಲಾದ ಅವಘಡದ ಬಗ್ಗೆ ವರದಿಯೂ ಮಾಡಿದೆ. ನೌಕಾಪಡೆ ಅಧಿಕಾರಿಗಳು 2018ರ ಡಿಸೆಂಬರ್ 16-17ರ ಆಸುಪಾಸಿನಲ್ಲಿ ಮಹಾರಾಷ್ಟ್ರದ ಸಮುದ್ರದಲ್ಲಿ ಯಾವುದಾದರೂ ಬೋಟಿಗೆ ಹಾನಿಯಾಗಿದೆಯಾ, ಮುಳುಗಡೆಯಾಗಿದೆಯಾ ಎಂದು ವಯರ್‍ಲೆಸ್ ಮೂಲಕ ವಿಚಾರಿಸಿದ್ದಾರೆ. ಒಂದು ಮೂಲದ ಪ್ರಕಾರ ಕಾರವಾರದವರೆಗೂ ಇಂಥದೊಂದು ತನಿಖೆ ನಡೆದಿದೆ. ಆದರೆ ಬೋಟಿಗೆ ಹಾನಿಯಾದ ಮಾಹಿತಿ ನೌಕಾಪಡೆಗೆ ಸಿಗಲಿಲ್ಲ ಡಿಸೆಂಬರ್ 22ರಂದು ಮಲ್ಫೆ ಪೊಲೀಸ್ ಠಾಣೆಯಲ್ಲಿ ಬೋಟು ನಾಪತ್ತೆಯಾಗಿರುವ ದೂರು ದಾಖಲಾಗಿ ಅದು ರಾಷ್ಟ್ರಮಟ್ಟದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಸಿತು.

ಯಥಾ ಪ್ರಕಾರ ಬಿಜೆಪಿಯ ಸೋಕಾಲ್ಡ್ ದೇಶಭಕ್ತರು ಮಲ್ಫೆ ಬೆಸ್ತರ ಬೋಟನ್ನು ಪಾಕಿಸ್ತಾನದ ಇಸ್ಲಾಮಿಕ್ ಭಯೋತ್ಪಾದಕರು ಎಳೆದೊಯ್ದಿದ್ದಾರೆಂಬ ಕಮ್ಯುನಲ್ ಕತೆಕಟ್ಟಿ ಹಬ್ಬಿಸಿದರು. ಅವರ ಕಣ್ಣು ಎದುರಾದ ಲೋಕಸಭಾ ಇಲೆಕ್ಷನ್‍ನಲ್ಲಿ ಬೆಸ್ತರ ಮತ ಬೇಟೆಯ ತಂತ್ರಗಾರಿಕೆ ಮೇಲಿತ್ತು.

ಉಡುಪಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆತ್ತಲೆ ಭಾನ್ಗಡಿ ಕುಖ್ಯಾತಿಯ ಯಶ್‍ಪಾಲ್ ಸುವರ್ಣ ಉಡುಪಿಯಲ್ಲಿ ಬೆಸ್ತರ ಬೃಹತ್ ಪ್ರತಿಭಟನಾ ಸಮಾವೇಶ ಜಮಾಯಿಸಿಯೂಬಿಟ್ಟ. ನೋವಿನಲ್ಲಿದ್ದ ಮೀನುಗಾರರಿಗೆ ಬಿಜೆಪಿ ವಾಚಕರ ಹುನ್ನಾರ ತಿಳಿಯಲಿಲ್ಲ. ಕಣ್ಮರೆಯಾಗಿದ್ದ ಬೆಸ್ತರ ಹುಡುಕಲಾಗದ ಕರ್ಮಗೇಡಿತನ ಕೇಂದ್ರದ ಕೇಸರಿ ಸರ್ಕಾರದ್ದಾದರೂ ಸ್ಥಳೀಯ ಬಿಜೆಪಿ ಬಹಾದ್ದೂರರು ರಾಜ್ಯದ ಮೈತ್ರಿ ಸರ್ಕಾರವನ್ನು ಬಾಯಿಗೆ ಬಂದಂತೆ ಮೂದಲಿಸಿ ಇಲೆಕ್ಷನ್ ಪ್ರಚಾರಕ್ಕೆ ಇಳಿದುಬಿಟ್ಟರು. ರಾಜ್ಯ ಸರ್ಕಾರವೂ ಬೆಸ್ತರ ಹುಡುಕಾಟಕ್ಕೆ ಗಂಭೀರ ಪ್ರಯತ್ನ ನಡೆಸಿತು. ನೌಕಾಪಡೆಯ ಸಹಾಯ ಕೇಳಿತು. ಉಡುಪಿ ಜಿಲ್ಲಾಡಳಿತ ನೌಸೇನೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಿತು. ಮಾಲ್ಪಾಣ್ ತೀರ ಪ್ರದೇಶದಲ್ಲಿ ಸುವರ್ಣ ತ್ರಿಭುಜ ಬೋಟ್‍ನಲ್ಲಿದ್ದ ಕೆಲವು ಸಾಮಾನು ತೇಲಿ ಬಂದಿದೆ ಎಂಬ ಕಾರಣಕ್ಕೆ ಆ ಏರಿಯಾದ ಆಳ ಸಮುದ್ರದಲ್ಲಿ ಮುಳು ತಜ್ಞರ ಇಳಿಸಿ ಶೋಧವೂ ಮಾಡಲಾಯಿತು. ನೌಕಾಪಡೆ ಅಧಿಕಾರಿಗಳು ಜಿಲ್ಲಾ ಎಸ್ಪಿಗೆ ಬರೆದ ಪತ್ರದಲ್ಲಿ ಮಲ್ಪೆಯ ಮೀನುಗಾರಿಕಾ ಬೋಟು ಸಂಚರಿಸುತ್ತಿದ್ದ ಪಥದಲ್ಲೇ ಐಎನ್‍ಎಸ್ ಕೊಚ್ಚಿನ್ ಕೂಡ ಹಾದುಹೋಗಿದೆ ಎಂದು ಸ್ಪಷ್ಟವಾಗೇ ಬರೆದಿದ್ದಾರೆ.

ಆಗಿದ್ದಾದರೂ ಏನು?

ಡಿಸೆಂಬರ್ 13ರಂದು ಸುವರ್ಣ ತ್ರಿಭುಜ ದೋಣಿ ಮಲ್ಪೆ ಬಂದರಿನಿಂದ ಹೊರಟಿತ್ತು. ಎರಡು ದಿನಗಳ ನಂತರ ಅಂದರೆ ಡಿಸೆಂಬರ್ 15ರಂದು ಅದರಲ್ಲಿದ್ದವರ ಸಂಪರ್ಕ ಕಡಿದು ಹೋಗಿತ್ತು. ಡಿಸೆಂಬರ್ 16ರಿಂದಲೇ ಕರ್ನಾಟಕದ ಕರಾವಳಿಯಲ್ಲಿ ಆತಂಕ ತುಂಬಿಕೊಂಡಿತ್ತು.

ಈ ನಡುವೆ ಮೀನುಗಾರ ಸಮುದಾಯ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಒತ್ತಡ ತಂದಿತ್ತು, ಪ್ರತಿಭಟನೆ ನಡೆಸಿತ್ತು. ಕಾಣೆಯಾದ ಮೀನುಗಾರರ ಕುಟುಂಬಗಳ ಕಣ್ಣೀರಿನ ಕಟ್ಟೆಯೊಡೆದಿದ್ದನ್ನು ಮಾಧ್ಯಮಗಳ ಮೂಲಕ ಇಡೀ ರಾಜ್ಯ ನೋಡಿತ್ತು. ಅಂತಿಮವಾಗಿ ನಾಲ್ಕೂವರೆ ತಿಂಗಳ ಮೇಲೆ ತಿಳಿಸಿದ ಈ ಹೈಡ್ರಾಮಾ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಡುವೆ ನಡೆದಿರುವ ಪ್ರಮುಖ ವಿದ್ಯಮಾನದಲ್ಲಿ ಜನವರಿ 16ರಂದು ಉಡುಪಿ ಎಸ್ ಪಿ ಆಗಿರುವ ಲಕ್ಷ್ಮಣ್ ಬಿ ನಿಂಬರ್ಗಿಯವರು ಕಾರವಾರ ನೌಕಾಪಡೆಯ ಅಧಿಕಾರಿಗಳಿಗೆ ಕೆಲವು ಮುಖ್ಯ ಮಾಹಿತಿಗಳನ್ನು ಕೋರಿ ಪತ್ರವೊಂದನ್ನು ಬರೆದಿದ್ದರು. ಇದಕ್ಕೂ ಮುನ್ನ ನೌಕಾ ಕೇಂದ್ರದಿಂದ ಕಾಣೆಯಾದ ಮೀನುಗಾರರು ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದು ಡಿಸೆಂಬರ್ 16, 2018ರಂದು ಎಂದು ನೌಕಾನೆಲೆಯ ಸಿಬ್ಬಂಧಿಗಳ ಪತ್ರದಲ್ಲಿ ಉಲ್ಲೇಖಿಸಿದ್ದನ್ನು  ನಿರಾಕರಿಸಿದ್ದ ಉಡುಪಿ ಎಸ್ ಪಿಯವರು, “ಮೀನುಗಾರರು ತಮ್ಮ ನಡುವೆ ವೈರ್ ಲೆಸ್ ಮೂಲಕ ಸಂಪರ್ಕ ಹೊಂದಿದ್ದು ದಿನಾಂಕ 15-12-18ರ ವರೆಗೆ ಹೊರತು 16-12-18ರ ವರೆಗೆ ಅಲ್ಲ” ಎಂಬುದುನ್ನು ದಾಖಲೆ ಸಮೇತ ದೃಢೀಕರಿಸಿದ್ದರು.

 

ಇದೇ ಪತ್ರದಲ್ಲಿ ಎಸ್ ಪಿಯವರು ಮಹಾರಾಷ್ಟ್ರ ಕರಾವಳಿಯ ರತ್ನಗಿರಿ ಪ್ರದೇಶದಲ್ಲಿ ಕೆಲವು ಮೀನುಗಾರರು 23-12-19ರಂದು ಸಮುದ್ರದಲ್ಲಿ ತೇಲಿಕೊಂಡು ಬಂದ ನಾಲ್ಕಾರು ಕಳೇಬರಗಳನ್ನು ಕಂಡಿದ್ದರ ಬಗ್ಗೆ ಉಲ್ಲೇಖಿಸಿದ್ದರು. ಆದರೆ ಇದುವರೆಗೆ ಆ ಮೃತದೇಹಗಳನ್ನು ಯಾರೂ ವಶಕ್ಕೆ ಪಡೆದುಕೊಂಡ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದರು.

ಈ ಪತ್ರದಲ್ಲಿ ಅವರು ನೌಕಾಪಡೆಗೆ ಕೆಲವು ಮುಖ್ಯ ಮಾಹಿತಿಗಳನ್ನು ತಿಳಿಸಲು ಕೋರಿದ್ದರು. ಈ ಹೊತ್ತಿಗೆ ಐಎನ್ ಎಸ್ ಕೊಚ್ಚಿ ಯುದ್ಧನೌಕೆಯ ಮುಂಭಾಗಕ್ಕೆ ಹಾನಿಯಾಗಿದ್ದು ತಿಳಿದು ಬಂದಿದ್ದ ಕಾರಣ, ಎಸ್ ಪಿ ಲಕ್ಷ್ಮಣ ನಿಂಬರಗಿಯವರು, ದಿನಾಂಕ 14-12-18ರಿಂದ 16-12-18ರ ವರೆಗೆ ಐಎನ್ ಎಸ್ ಕೊಚ್ಚಿ ಯಾವ ಜಾಗದಲ್ಲಿ ಓಡಾಟ ನಡೆಸಿತ್ತು, ಅದಕ್ಕೆ ಹಾನಿಯಾಗಿದ್ದಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿಗಳೇನು, ಐಎನ್ ಎಸ್ ಕೊಚ್ಚಿಗೆ ಹಾನಿ ಸಂಭವಿಸಿದ ನಂತರದಲ್ಲಿ ಸಿಕ್ಕಿದ ಮೀನುಗಾರ ತಂಡಗಳನ್ನು ಮಾತಾಡಿಸಿದಾಗ ತಿಳಿದು ಬಂದ ಮಾಹಿತಿ ಏನು ಇತ್ಯಾದಿ ವಿವರಗಳನ್ನು ನೀಡುವಂತೆ ಪತ್ರದಲ್ಲಿ ಕೇಳಿದ್ದರು.

 

ಉಡುಪಿ ಎಸ್ ಪಿ ಫ್ಯಾಕ್ಸ್ ಮೂಲಕ ಕಳಿಸಿದ್ದ ಈ ಪತ್ರಕ್ಕೆ ನೌಕಾಪಡೆಯ ಅಧಿಕಾರಿಗಳಿಂದ 21-01-19ರಂದು ಪ್ರತ್ಯುತ್ತರ ಬಂದಿತ್ತು. ಅದರಲ್ಲಿ ಐಎನ್ಎಸ್ ಕೊಚ್ಚಿಗೆ ಸಂಭವಿಸಿದ್ದ ಹಾನಿ, ಅದರ ಕಾಲಮಾನ, ಅದು ನಡೆದ ಸ್ಥಳ ಇತ್ಯಾದಿಗಳ ಖಚಿತ ಮಾಹಿತಿಯಿದೆ. ಈ ಮಾಹಿತಿಗಳನ್ನು ನೀಡಿ ಅದೇ ಪತ್ರದಲ್ಲಿ ನೌಕಾಪಡೆಯ ಅಧಿಕಾರಿಗಳು ಕಾಣೆಯಾಗಿರುವ ಸುವರ್ಣ ತ್ರಿಭುಜ ದೋಣಿಗೂ ಐಎನ್ ಎಸ್ ಕೊಚ್ಚಿ ನೌಕೆಗೆ ಆದ ಹಾನಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದರು. ಇದಕ್ಕೆ ಅವರು ನೀಡಿದ್ದು 2 ಕಾರಣಗಳು, ಮಲ್ಪೆಯಲ್ಲಿ ಸಲ್ಲಿಸಿದ್ದ ದೂರಿನ ಪ್ರಕಾರ ಸುವರ್ಣ ತ್ರಿಭುಜದೊಂದಿಗೆ ಕಡೆಯ ಸಂಪರ್ಕ ಸಿಕ್ಕಿದ್ದು ಡಿಸೆಂಬರ್ 16ರಂದು, ಆದರೆ ಐಎನ್ ಎಸ್ ಕೊಚ್ಚಿಗೆ ಹಾನಿ ಸಂಭವಿಸಿದ್ದು ಡಿಸೆಂಬರ್ 15ರಂದು. ಸುವರ್ಣ ತ್ರಿಭುಜ ಕಾಣೆಯಾಗಿದ್ದು ಗೋವಾ ಸಮುದ್ರದಲ್ಲಿ, ಆದರೆ ಐಎನ್ ಎಸ್ ಕೊಚ್ಚಿಗೆ ಹಾನಿಯಾಗಿದ್ದು ಮಹಾರಾಷ್ಟ್ರದ ಮಾಲ್ವನ್ ಕರಾವಳಿ ಸಮೀಪದ

 

ಹೀಗಾಗಿ ಭೌಗೋಳಿಕವಾಗಿ ಭಿನ್ನ ಪ್ರದೇಶಗಳಲ್ಲಿ ಘಟನೆ ನಡೆದ ಕಾರಣ ಹಾಗೂ ಬೇರೆ ಬೇರೆ ಸಮಯಗಳಲ್ಲಿ ಘಟನೆ ನಡೆದ ಕಾರಣ ಐಎನ್ ಎಸ್ ಕೊಚ್ಚಿಗೆ ಆಗಿದ್ದ ಹಾನಿಗೂ ಸುವರ್ಣ ತ್ರಿಭುಜ ಕಾಣೆಯಾದ ಘಟನೆಗೂ ಒಂದಕ್ಕೊಂದು ಸಂಬಂಧವಿಲ್ಲ ಎಂದು ನೌಕಾಪಡೆ ಖಡಾಖಂಡಿತವಾಗಿ ನಿರಾಕರಿಸಿತ್ತು.

ನೌಕಾಪಡೆಯ ಅಧಿಕಾರಿಗಳು ಸುವರ್ಣ ತ್ರಿಭುಜ ದೋಣಿ ಕಾಣೆಯಾಗಿದ್ದಕ್ಕೂ ಐಎನ್ ಎಸ್ ಕೊಚ್ಚಿಗೆ ನಡೆದ ಹಾನಿಯ ಘಟನೆ ನಡೆದ ಸ್ಥಳಕ್ಕೂ ಹೊಂದಾಣಿಕೆ ಆಗುವುದಿಲ್ಲ, ಹಾಗಾಗಿ ಇವೆರಡಕ್ಕೂ ಸಂಬಂಧವಿಲ್ಲ ಎಂದು ನಿರಾಕರಿಸಲು ನೀಡಿರುವ ಕಾರಣಗಳೇ ಈಗ ಎರಡಕ್ಕೂ ಸಂಬಂಧವಿದೆ ಎಂಬುದನ್ನು ಖಚಿತಪಡಿಸಿದೆ.

ಮೊದಲನೆಯಾಗಿ, 21-01-19ರಂದು ಉಡುಪಿ ಎಸ್ ಪಿಯವರಿಗೆ ನೌಕಾಪಡೆಯ ಅಧಿಕಾರಿಗಳು ಬರೆದಿದ್ದ ಈ ಪತ್ರದಲ್ಲಿ ಡಿಸೆಂಬರ್ 15, 2018ರಂದು ಐಎನ್ ಎಸ್ ಕೊಚ್ಚಿ ನೌಕೆಗೆ ಹಾನಿ ಸಂಭವಿಸಿದ್ದ ಸ್ಥಳ ಮಾಲ್ವನ್ ಸಮೀಪದ ಸಿಂದುದುರ್ಗದಲ್ಲಿ ಎಂದು ತಿಳಿಸಿದ್ದರು. (ಅದರ ಖಚಿತ ಜಾಗ 16ಡಿಗ್ರಿ 4 ನಿಮಿಷ 15 ಸೆಕೆಂಡ್ ಉತ್ತರ ಅಕ್ಷಾಂಶ ಹಾಗೂ 73 ಡಿಗ್ರಿ 5 ನಿಮಿಷ 86 ಸೆಕೆಂಡ್ ಪೂರ್ವ ರೇಖಾಂಶ ಎಂದು ತಿಳಿಸಲಾಗುತ್ತದೆ). ಇದು ಸ್ವತಃ ನೌಕಾಪಡೆಯೇ ನೀಡಿರುವ ಖಚಿತ ಮಾಹಿತಿ.

ಈಗ ಮೊನ್ನೆ ಮೇ 2 ನೇ ತಾರೀಖಿನಂದು ಸುವರ್ಣ ತ್ರಿಭುಜ ದೋಣಿಯು ಪತ್ತೆಯಾದ ಜಾಗ ಮಾಲ್ವನ್ ಕರಾವಳಿಯಿಂದ 33 ಕಿಲೋಮೀಟರ್ ನೈರುತ್ಯದಲ್ಲಿ ಎಂದು ನೌಕಾಪಡೆ ತಿಳಿಸಿದೆ. ಈ ಜಾಗವು ಡಿಸೆಂಬರ್ 15ರಂದು ಐಎನ್ ಎಸ್ ಕೊಚ್ಚಿಗೆ ಹಾನಿ ಸಂಭವಿಸಿದ ಅದೇ ಸಿಂದುದುರ್ಗ ಪ್ರದೇಶವಾಗಿರುವುದನ್ನು ನಕ್ಷೆಯ ಮೂಲಕ ತಿಳಿಯಬಹುದಾಗಿದೆ. ಇದರ ಮೂಲಕ ಸ್ಪಷ್ಟವಾಗುವ ಎರಡು ಸಂಗತಿಗಳೇನಂದರೆ, ಈ ಮೊದಲು ಭಾವಿಸಲಾಗಿದ್ದಂತೆ ಸುವರ್ಣ ತ್ರಿಭುಜ ಕಾಣೆಯಾಗಿದ್ದು ಗೋವಾದಲ್ಲಿ ಅಲ್ಲ ಹಾಗೂ ಸುವರ್ಣ ತ್ರಿಭುಜ ಕಾಣೆಯಾದ ಜಾಗ ಮತ್ತು ಐಎನ್ ಎಸ್ ಕೊಚ್ಚಿ ದೋಣಿಗೆ ಹಾನಿಯಾದ ಜಾಗ ಎರಡೂ ಒಂದೇ.

ಎರಡೆನೆಯಾದಾಗಿ, ಎರಡೂ ಘಟನೆಗಳು ನಡೆದ ದಿನಾಂಕ, ಸಮಯ ಕೂಡಾ ಬೇರೆ ಬೇರೆ ಅಲ್ಲ ಎಂಬುದು ಎಸ್ ಪಿ ಲಕ್ಷ್ಮಣ ನಿಂಬರಗಿಯವರು ಡಿಸೆಂಬರ್ 16ರಂದು ನೀಡಿದ ಪ್ರತ್ಯುತ್ತರದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ.

ಇದರ ಅರ್ಥ ಎಂತ ದಡ್ಡರಿಗೂ ತಿಳಿಯುವಂತೆ ಎರಡೂ ಘಟನೆಗಳು ಬೇರೆ ಬೇರೆಯಲ್ಲ; ಬದಲಾಗಿ ಐಎನ್ ಎಸ್ ಕೊಚ್ಚಿ ಮತ್ತು ಸುವರ್ಣ ತ್ರಿಭುಜ ದೋಣಿಗಳ ನಡುವೆ ಡಿಕ್ಕಿಯಾದ ಪರಿಣಾಮವಾಗಿಯೇ ಸುವರ್ಣ ತ್ರಿಭುಜ ದೋಣಿ ನೀರಿನಲ್ಲಿ ಮುಳುಗಿದೆ. ಈ ಸಾಧ್ಯತೆಯನ್ನು ಉಡುಪಿ ಎಸ್ ಪಿಯವರು ಸರಿಯಾಗಿಯೇ ಊಹಿಸಿರುವಂತಿದೆ. ಆದರೆ ನಂತರದಲ್ಲಿ ಈ ನಿಟ್ಟಿನಲ್ಲಿ ತನಖೆ ನಡೆಯದಿರುವುದು ಅಥವಾ ನಡೆದಿದ್ದರೂ ನೌಕಾಪಡೆ ಅದರ ಮಾಹಿತಿ ನೀಡದಿರುವುದು ಮಹಾಪರಾಧವೇ ಸರಿ.

ಮುಚ್ಚಿಟ್ಟಿದ್ದು ಯಾಕೆ?

ಡಿಕ್ಕಿ ಸಂಭವಿಸಿದ ಎರಡು-ಮೂರು ದಿನಗಳಲ್ಲಿ ಮಾಲ್ಪಾಣ್ ಪ್ರದೇಶದ ಮೀನುಗಾರಿಕಾ ಬೋಟ್‍ನವರು ನಾಲ್ಕು ಮೃತ ದೇಹಗಳು ಸಮುದ್ರದಲ್ಲಿ ತೇಲುತ್ತಿದ್ದವೆಂದೂ ಹೇಳಿದ್ದರು. ಇಷ್ಟಾದರೂ ನೌಕಾಪಡೆ ಶೋಧ ತಂಡಕ್ಕೆ ಮಾತ್ರ ಬೋಟ್‍ನ ಅವಶೇಷವಾಗಲೀ, ಮೃತ ಬೆಸ್ತರಾಗಲೀ ಸಿಗಲೇಯಿಲ್ಲ! ಆದರೆ ವಾಸ್ತವ ಸತ್ಯ ನೌಕಾಪಡೆಗೆ ಗೊತ್ತಿತ್ತು. ಆರಂಭದಲ್ಲಿ ಅಪಘಾತವಾಗಿದ್ದನ್ನು ಒಪ್ಪಿಕೊಳ್ಳಲು ನೌಸೇನಾ ಅಧಿಕಾರಿಗಳು ಸಿದ್ಧರಿರಲಿಲ್ಲ. ದೇಶದ ಕಡಲಲ್ಲಿ ಓಡಾಡುವ ಮೀನುಗಾರಿಕಾ ಬೋಟು, ವಾಣಿಜ್ಯ ಹಡಗು, ಪ್ರಯಾಣಿಕ ಹಡಗುಗಳಿಗೆಲ್ಲ ಭದ್ರತೆ ಒದಗಿಸಬೇಕಾದ ನೌಕಾಪಡೆಯ ಹಡಗೇ ಅಪಘಾತ ಮಾಡಿದೆ ಎಂದರೆ ಅದು ಅಕ್ಷಮ್ಯ ಲೋಪ-ದೋಷ. ನೌಕಾಪಡೆಯ ಘನತೆಗೇ ಕುಂದು. ಹಾಗಾಗಿ ಆರಂಭದಲ್ಲಿ ನೌಕಾಪಡೆ ತಲೆತಪ್ಪಿಸಿಕೊಳ್ಳಲು ಹವಣಿಸಿತ್ತು.

ಆದರೆ ಯಾವಾಗ ಪಾಕಿಸ್ತಾನದ ಭಯೋತ್ಪಾದನೆ, ಇಸ್ಲಾಮ್ ಆತಂಕವಾದ, ಒಣ ರಾಷ್ಟ್ರಪ್ರವೆಲ್ಲ ಸುವರ್ಣ ತ್ರಿಭುಜದ ಸುತ್ತ ಗಿರಕಿ ಹೊಡೆಯಲಾರಂಭಿಸಿ ದೇಶದಾಚೆಗೂ ಗುಲ್ಲೆಬ್ಬಿಸಿತೋ ಆಗ ಕೇಂದ್ರದ ರಕ್ಷಣಾ ಇಲಾಖೆಗೆ ‘ಡಿಕ್ಕಿ ಪುರಾಣ’ ವಿವರಿಸಿದೆ. ಐಎನ್‍ಎಸ್ ಕೊಚ್ಚಿನ್‍ನ ತಳಭಾಗಕ್ಕೆ ಅಪಘಾತದಿಂದಾದ ಜಕಮ್ ಬಗ್ಗೂ ಹೇಳಿದೆ. ಮುಂಬೈನಲ್ಲಿ ಕೊಚ್ಚಿನ್ ರಿಪೇರಿ ನಡೆದಿರುಬ ಗುಟ್ಟೂ ರಟ್ಟಾಗಿದೆ! ಅಲ್ಲಿಗೆ, ನೌಕಾಪಡೆ ಯಾವುದನ್ನೂಉಚ್ಚಿಡುವ ಗೋಜಿಗೆ ಹೋಗಲಿಲ್ಲ. ಇದ್ದದ್ದು-ಆದದ್ದು ಸರಿಯಾಗೇ ರಕ್ಷಣಾ ಇಲಾಖೆಯ ಮಂತ್ರಿಣಿ ನಿಮರ್ಲಾ ಸೀತಾರಾಮನ್‍ಗೆ ಅರಹುತ್ತ ಬಂದಿದೆ.

ಆ ವೇಳೆಗೆ ಲೋಕಸಭಾ ಇಲೆಕ್ಷನ್ ಹತ್ತಿರತ್ತಿರ ಆಗಿತ್ತು. ನಿರ್ಮಲಮ್ಮ ಪೇಜಿಕಗೆ ಸಿಲಿಕಿದರು ನೌಕಾಪಡೆಯ ಹಡಗೇ ಪಾಪದ ಮೀನುಗಾರರ ಆಹುತಿ ಪಡೆಯಿತೆಂದರೆ ರಕ್ಷಣಾ ಇಲಾಖೆಯ ಮಂತ್ರಿಣಿಯಾದ ತನ್ನ ಮಾನ ಹರಾಜಾಗುತ್ತದೆ, ಇಡೀ ದೇಶದ ಮೀನುಗಾರರು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹೇಸಿ ತಿರುಗಿ ಬೀಳುತ್ತಾರೆ ಈ ಕರ್ನಾಟಕವಷ್ಟೇ ಅಲ್ಲ ದೇಶದ ಸಾಗರ ತೀರದ ರಾಜ್ಯದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಡ್ಯಾಮೇಜು ಮಾಡುತ್ತದೆಂದು ಕಂಗಾಲು ಬಿದ್ದರು. ನಿರ್ಮಲಮ್ಮ ಉಡುಪಿಗೆ ಓಡೋಡಿ ಬಂದು ಬೆಸ್ತರಿಗೆ ಪೂಸಿ ಹೊಡೆಯಲು ತಿಣುಕಾಡಿದರು. ಮತದಾನ ಮುಗಿಯುವವರೆಗೆ ವೆಸ್ತರ ಬಲಿ ಕತೆ ಹೊರಬರದಂತೆ ವ್ಯವಸ್ಥಿತವಾಗಿ ಮುಚ್ಚಿಹಾಕಿದರು.

ಆದರೆ ಮೀನುಗಾರರಿಗೆ, ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ, ಲೀಡರ್‍ಗಳಿಗೆಲ್ಲ ನೌಕಾಪಡೆಯ ಹಡಗೇ ದುರಂತಕ್ಕೆ ಕಾರಣವೆಂಬುದು ಅರ್ಥವಾಗಿಹೋಗಿತ್ತು. ಮೀನುಗಾರಿಕಾ ಬೋಟು ಹಠಾತ್ ಮುಳುಗುವುದಿಲ್ಲ ಒಂದೇ ತೂಫಾನಿಗೆ ಬೋಟು ಸಿಲುಕಬೇಕು, ಇಲ್ಲವೇ ದೊಡ್ಡ ಯುದ್ದನೌಕೆ ಅಥವಾ ವಾಣಿಜ್ಯ ಹಡಗು ಡಿಕ್ಕಿ ಹೊಡೆದರಷ್ಟೇ ಬೋಟು ಮುಳುಗುತ್ತದೆ. ಆಗ ಮಾತ್ರ ರಕ್ಷಣೆಗೆ ಸಂಪರ್ಕ ಮಾಡಲಿಕ್ಕೂ ಸಾಧ್ಯವಾಗದು. ಯಂತ್ರದಲ್ಲಿ ದೋಷ, ತಾಂತ್ರಿಕ ತೊಂದರೆಯಾದರೆ ಮೊಬೈಲ್ ಅಥವಾ ವೈರ್‍ಲೆಸ್‍ನಿಂದ ದಡದಲ್ಲಿರುವುವವರನ್ನು ಇಲ್ಲವೇ ಸಮುದ್ರದಲ್ಲೇ ಇರುವ ಇತರ ಬೋಟಿನವರನ್ನು ಸಂಪರ್ಕಿಸಲು ಸಮಯಾವಕಾಶ ಇರುತ್ತದೆ; ಲೈಫ್ ಜಾಕೀಟ್ ಹಾಕಲು ಅವಕಾಶ ಸಿಗುತ್ತದೆ.

ಇವೆಲ್ಲ ತರ್ಕ ಕಂಡು ಬಿಜೆಪಿಗರು ಬೆಚ್ಚಿಬಿದ್ದರು. ತಮ್ಮ ಬಣ್ಣ ಬಯಲಾಗುತ್ತದೆಂದು ಕಮರ್ಶಿಯಲ್ ಬೋಟು ಡಿಕ್ಕಿ ಹೊಡೆದು ಅವಘಡವಾಗಿದೆ ಎಂದು ಸಣ್ಣಗೆ ಪುಕಾರು ಎಬ್ಬಿಸಿದರು. ಹೇಗಾದರೂ ಮಾಡಿ ಇಲೆಕ್ಷನ್ ಮುಗಿಯುವ ತನಕ ಸತ್ಯ ಸಮಾಧಿಯಾಗೇ ಇರುವಂತೆ ನೋಡಿಕೊಂಡರು ಮೀನುಗಾರ ಕುಟುಂಬವನ್ನು ವಂಚಿಸುತ್ತಲೇ ಬಂದರು. ಇಡೀ ಬೆಸ್ತ ಸಂಕುಲಕ್ಕೆ ಮೋಸ ಮಾಡಿದರು. ಕಣ್ಮರೆಯಾದ ಬೋಟು-ಬೆಸ್ತರ ಹುಡುಕುವ ನಾಟಕ ಚಾಲೂ ಇಟ್ಟರು. ಬೆಸ್ತರ ಮನೆಗೆ ಬಂದಿದ್ದ ರಕ್ಷಣಾ ಮಂತ್ರಿಣಿ ನಿರ್ಮಲಕ್ಕ ಇಲೆಕ್ಷನ್ ಮುಗಿದ ತಕ್ಷಣ ಸ್ಥಳೀಯ ಮೀನುಗಾರರ ಜತೆ ನೌಕಾಪಡೆಯ ಅಧಿಕಾರಿಗಳು ಮಾಲ್ಪಾಣ್, ರತ್ನಗಿರಿ, ಸಿಂಧುದುರ್ಗ ಸಮುದ್ರ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುವಂತೆ ನೋಡಿಕೊಳ್ಳುತ್ತೇನೆಂದು ಹೇಳಿ ಕಣ್ಕಟ್ಟು ಮಾಡಿಹೋದರು. ಈ ಸುಳ್ಳಿನ ಪ್ರಹಸನಕ್ಕೆ ಕಳೆದ ಮೇ 1ರಿಂದ ಅಂತೂ ಇಂತೂ ತೆರೆಬಿದ್ದಿದೆ!

ನೌಕಾಸೇನೆಗೆ ಸಿಗದ ಅವಶೇಷ ಬಿಜೆಪಿ ಶಾಸಕನಿಗೆ ಸಿಕ್ಕಿದ್ದು ಹೇಗೆ?

ಕಳೆದ ಎಪ್ರಿಲ್ 28ರಂದು ಉಡುಪಿಯ ಹೋಪ್‍ಲೆಸ್ ಶಾಸಕ ರಘುಪತಿ ಭಟ್ಟ, ನೌಕಾಪಡೆಯ ತಂತ್ರಜ್ಞರು, ಮುಳುಗು ತಜ್ಞರು ಮತ್ತು ನಾಪತ್ತೆಯಾಗಿದ್ದ ಬೆಸ್ತರ ಮನೆಯ ಆಯ್ದ ಮಂದಿ ಕಾರವಾರದ ನೌಕಾನೆಲೆಯಿಂದ ಐಎನ್‍ಎಸ್ ನಿರೀಕ್ಷಕ್ ವಾರ್‍ಶಿಪ್‍ನಲ್ಲಿ ಸುವರ್ಣ ತ್ರಿಭುಜ ಹುಡುಕಲು ಮಹರಾಷ್ಟ್ರದ ಮಾಲ್ಪಾಣ್ ಸಮುದ್ರಕ್ಕೆ ಹೋಗಿತ್ತು. ಇಲ್ಲಿಂದಲೇ ಬೆಸ್ರು ಸಂಪರ್ಕ ಕಳೆದುಕೊಂಡದ್ದು, ಐಎನ್‍ಎಸ್ ಕೊಚ್ಚಿನ್ ಇಲ್ಲೇ ಸುವರ್ಣ ತ್ರಿಭುಜಕ್ಕೆ ಡಿಕ್ಕಿ ಹೊಡೆದದ್ದು. ಬರೋಬ್ಬರಿ ಐದು ದಿನ ಈ ತಂಡ ಶೋಧ ನಡೆಸಿದೆ. ಅಂತಿಮವಾಗಿ ಮೇ ಒಂದರಂದು ಮಾಲ್ಪಾಣ್ ತೀರದಿಂದ 33 ಕಿ.ಮೀ ದೂರದ ಸಮುದ್ರದಲ್ಲಿ 64 ಮೀಟರ್ ಆಳದಲ್ಲಿ ಸುವರ್ಣ ತ್ರಿಭುಜದ ಅವಶೇಷ ಪತ್ತೆಯಾಗಿದೆ. ಹಿಂದೆ ಇದೇ ಪ್ರದೇಶದಲ್ಲಿ ನೌಕಾಪಡೆ ತಂತ್ರಜ್ಞರು ಆಧುನಿಕ ತಂತ್ರಜ್ಞಾನವೆಲ್ಲ ಬಳಸಿ ಹುಡುಕಾಟ ನಡೆಸಿದ್ದರು. ಆಗ ಬೋಟಲ್ಲಿ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈಗ ಬಿಜೆಪಿ ಶಾಸಕನ ನೇತೃತ್ವದಲ್ಲಿ ಪತ್ತೆ ತಂಡ ಕಳಿಸಿ ಅವಶೇಷಗಳನ್ನು ಹುಡುಕಿದಂತೆ ನಾಟಕವಾಡಿದರೆ, ಕಳೆದುಹೋಗಿದ್ದ ಹಡಗನ್ನು ಹುಡುಕಿದ್ದು ಬಿಜೆಪಿ ಎಂಬ ಲಾಭ ದಕ್ಕಿಸಿಕೊಳ್ಳಹುದ ಎಂಬ ಲೆಕ್ಕಾಚಾರ ಬೆಜೆಪಿಯದ್ದು.

ವಿಪರ್ಯಾಸವೆಂದರೆ, ಅದೇ ಎಮ್ಮೆಲ್ಲೆ ಭಟ್ಟನನಿಗಾಗಲಿ, ನೌಕಾಪಡೆ ಪ್ರಭೃತಿಗಳಿಗಾಗಲಿ ಒಟ್ಟೇ ಒಬ್ಬ ಕಣ್ಮರೆಯಾದ ಬೆಸ್ತನ ಹುಡುಕಲಾಗಗಿಲ್ಲ!ಬಿಜೆಪಿ ಅತಿರಥ-ಮಹಾರಥರ ದೋಖಾ ದೇಖಾವೆಗಳು ಮೇಲು ನೋಟಕ್ಕೆ ಮೋಜೆನಿದರೂ ಅಮಾನುಷವಾಗಿದೆ. ನಾಲ್ಕೂವರೆ ತಿಂಗಳಿಂದ ಬೆಸ್ತರ ನೊಂದ ಕುಟುಂಬಕ್ಕೆ ವಂಚಿಸುತ್ತಲೇ ಬಂದು ಬಿಜೆಪಿ ಭಂಡರು ಓಟಿಗಾಗಿ ಎಂಥ ಕೀಳು ಕಾರ್ಯಾಚರಣೆಗೂ ಹೇಸರೆಂಬುದು ಸಾಬೀತಾಗಿದೆ. ಹಿಂದೆ ನೌಕಾಪಡೆ ಹುಡುಕಾಟ ನಡೆಸಿದ್ದಲ್ಲೇ ಈಗ ನಾಪತ್ತೆಯಾಗಿದ್ದ ಬೋಟಿನ ಅವಶೇಷ ಸಿಕ್ಕಿರುವುದು ಕೇಂದ್ರದ ಮೋದಿ ಸರ್ಕಾರ, ಆತನ ರಕ್ಷಣಾ ಮಂತ್ರಿಣಿ ನಿರ್ಮಲಾ, ಸ್ಥಳೀಯ ಶಾಸಕ ರಘುಪತಿಭಟ್ಟ ಸಂಸದೆ ಶೋಭಾರ ಅಸಲಿ ಅವತಾರ ಮೀನುಗಾರ ಸಮುದಾಯಕ್ಕೆ ಪರಿಚಯಿಸಿದೆ. ವಾಸ್ತವದಲ್ಲಿ  ನೌಕಾಪಡೆ ರಕ್ಷಣಾ ಇಲಾಖೆ ಕುಟುಂಬಕ್ಕೆ ನೆರವಾಗಬೇಕಿತ್ತು. ಈಗಲಾದರೂ ಕ್ಷಮೆ ಕೇಳಿ ಕಾಣೆಯಾದ ಬೆಸ್ತರ ಕುಟುಂಬಕ್ಕೆ ಪರಿಹಾರ ಕೊಟ್ಟರೆ ಪಾಪ ಪ್ರಾಯಶ್ಚಿತವಾದೀತು.

ಇಲ್ಲದಿದ್ದರೆ ಕೆರಳಿರುವ ಮೀನುಗಾರರು ಸುನಾಮಿಯಂತೆ ಬೀದಿಗಳಿದು ಮೋದಿ ಸರ್ಕಾರಕ್ಕೆ ಅಪ್ಪಳಿಸುವುದು ಗ್ಯಾರಂಟಿ!! ಸಿಕ್ಕ ಬೆಸ್ತರ ಹೆಣವನ್ನು ಮೋದಿ ಬಳಗ ನಾಪತ್ತೆ ಮಾಡಿದೆಯೆಂದು ಮೀನುಗಾರರು ಹಿಡಿಶಾಪ ಹಾಕುತ್ತಿರುವುದು ಬಿಜೆಪಿಯ ಒಟ್ ಬ್ಯಾಂಕ್ ರಾಜಕಾರಣದ ಕ್ರೌರ್ಯಕ್ಕೆ ಸಾಕ್ಷಿಯಂತಿದೆ.

ನೌಕಾಪಡೆಯೇ ಸುವರ್ಣ ತ್ರಿಭುಜ ಬೋಟನ್ನು ಅಕಸ್ಮಾತ್ತಾಗಿ ಆಹುತಿ ಪಡೆದಿರೋದು ಮತ್ತು ಮೊಗವೀರ ಸಮುದಾಯದ ಓಟಿನ ಕಾರಣಕ್ಕಾಗಿ ಬಿಜೆಪಿ ಅದನ್ನು ಚುನಾವಣೆ ಮುಗಿಯುವವರೆಗೂ ಮುಚ್ಚಿಟ್ಟು ಈಗ ಅವಶೇಷಗಳನ್ನು ಅನಾವರಣಗೊಳಿಸುತ್ತಿರುವ ಸಮಸ್ತ ನಾಟಕದ ಸುಳಿವು ಸಿಗುತ್ತಿದ್ದಂತೆಯೇ ಮಾಜಿ ಸಚಿವ ಹಾಗೂ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸುದ್ದಿಗೋಷ್ಠಿ ನಡೆಸಿ ನೇರವಾಗಿ ಕೇಂದ್ರವನ್ನೇ ದೂರಿದ್ದಾರೆ. ಅಷ್ಟು ಮಾತ್ರವಲ್ಲ ಐ.ಎನ್.ಎಸ್ ಕೊಚ್ಚಿ ಹಡಗಿಗೆ ಡಿಕ್ಕಿಯಿಂದ ಉಂಟಾಗಿರುವ ಹಾನಿಯ, ದುರಸ್ಥಿ ಕಾರ್ಯದ ಫೋಟೊಗಳನ್ನ ರಿಲೀಸ್ ಮಾಡಿದ್ದಾರೆ.

ಚಿತ್ರ ಕೃಪೆ: ಮಂಗಳೂರು ನ್ಯೂಸ್

ಆದರೆ ಕೇಂದ್ರ ಸರ್ಕಾರದಿಂದಾಗಲಿ ಅಥವಾ ಈ ಭಾಗದ ಯಾವೊಬ್ಬ ಬಿಜೆಪಿ ಸಂಸದ, ಶಾಸಕನಾಗಲಿ ಅದು ಸುಳ್ಳು ಆರೋಪ ಎಂದು ಕೌಂಟರ್ ಮಾಡುವ ಪ್ರಯತ್ನವೇ ಕಂಡುಬಂದಿಲ್ಲ. ಅಲ್ಲಿಗೆ ಮೀನುಗಾರ ಸಮುದಾಯಕ್ಕೆ ಮಾಡಿದ ಮೋಸವನ್ನು ಬಿಜೆಪಿ ಬಹಿರಂಗವಾಗಿಯೇ ಒಪ್ಪಿಕೊಂಡಂತಾಯಿತ್ತಲ್ಲವೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...