ಉಸೇನ್ ಬೋಲ್ಟ್ ಅಂದರೆ ಕಣ್ಣಮುಂದೆ ಬರೋದು ಆತ ಗೆದ್ದ ಪ್ರಶಸ್ತಿಗಳು, ಪರಿಶ್ರಮವನ್ನು ಸಾರಿ ಸಾರಿ ಹೇಳುವ ಸಾಲುಸಾಲು ದಾಖಲೆಗಳು. ಆದರೆ ಈಗ ಅಮೆರಿಕದ 33 ವರ್ಷದ ಮಹಿಳಾ ಓಟಗಾರ್ತಿ ಅಲ್ಲಿಸನ್ ಫೆಲಿಕ್ಸ್, ಉಸೇನ್ ಬೋಲ್ಟ್ ಅವರ ಎಲ್ಲ ದಾಖಲೆಗಳನ್ನು ಹಿಂದಿಕ್ಕುವ ಮೂಲಕ ಶೇಷ್ಠ ಸಾಧನೆಗೈದಿದ್ದಾರೆ.

ಕತಾರ್‌ನ ದೋಹಾದಲ್ಲಿ ನಡೆದ ಐಎಎಫ್ ವಲ್ರ್ಡ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ 4*400 ಮೀಟರ್ ರಿಲೆ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕಕ್ಕೆ ಫೆಲಿಕ್ಸ್ ಕೊರಳೊಡ್ಡಿದ್ದಾರೆ. ಫೆಲಿಕ್ಸ್ 12ನೇ ವಿಶ್ವ ಚಾಂಪಿಯನ್‍ಶಿಪ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಉಸೇನ್ ಬೋಲ್ಟ್ ಅವರನ್ನು ಹಿಂದಿಕ್ಕಿದರು. ಟೂರ್ನಮೆಂಟ್‍ನ ಕೊನೆಯ ದಿನ ಮತ್ತೊಂದು ಚಿನ್ನವನ್ನು ಗೆಲ್ಲುವುದರೊಂದಿಗೆ ಅವರ ಹೆಸರಿಗೆ 13ನೇ ಚಿನ್ನವನ್ನು ಸೇರಿಸಿದರು. ಈಗಾಗಲೇ ಫೆಲಿಕ್ಸ್, ಹಲವು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದು, ನಾಲ್ಕು ಒಲಿಂಪಿಕ್ ಸ್ಪರ್ಧೆಯಲ್ಲಿ ಒಂಭತ್ತು ಪದಕ ಗೆದ್ದ ಸಾಧನೆ ಅವರದ್ದು.

ಹತ್ತು ತಿಂಗಳ ಹಿಂದೆಯಷ್ಟೇ ಸಿಸೇರಿಯನ್‍ಗೆ ಒಳಗಾಗಿದ್ದ ಫೆಲಿಕ್ಸ್, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ವೇಳೆ ಸಾಕಷ್ಟು ತೊಂದರೆ ಅನುಭವಿಸಿದ್ದರು ಕೂಡ. ಆದರೆ ಅದ್ಯಾವುದೂ ರೋಚಕ ಓಟಕ್ಕೆ ಅಡ್ಡಿಯಾಗಲಿಲ್ಲ. ಆದರೆ ಸಾಧಕಿ ಫೆಲಿಕ್ಸ್‍ಗೆ ಕ್ರೀಡಾಜಗತ್ತಿನಲ್ಲಿ ತಾವು ಕಂಡು, ಅನುಭವಿಸಿದ ತಾರತಮ್ಯ ನೀತಿ ಇನ್ನಿಲ್ಲದಂತೆ ಕಾಡುತ್ತಿತ್ತು. ಸಾಹಸಿ ಮಹಿಳಾ ಆಟಗಾರ್ತಿಯರಿಗೆ ವೇತನ ತಾರತಮ್ಯ ಮಾಡುತ್ತಿರುವ ವಿಷಯ ಹಿಂಸಿಸುತ್ತಿತ್ತು. ಇದನ್ನು ಸ್ವತಃ ಅನುಭವಿಸಿದ್ದ ಫೆಲಿಕ್ಸ್, ವಿಶ್ವದ ಮಹಿಳಾ ಕ್ರೀಡಾಪಟುಗಳಿಗಾಗಿ ಆಗಸ್ಟ್‍ನಲ್ಲಿ ಹೋರಾಟ ನಡೆಸಿದ್ದರು.

ಪ್ರಸಿದ್ಧ ನೈಕ್ ಸಂಸ್ಥೆ, ಗರ್ಭಿಣಿ ಕ್ರೀಡಾಪಟುಗಳು ಮತ್ತು ಹೊಸ ತಾಯಂದಿರಿಗೆ ಅವರ ಸಹವರ್ತಿಗಳಿಗಿಂತ ಕಡಿಮೆ ಸಂಬಳ ನೀಡುತ್ತಿರುವುದನ್ನು ಮನಗಂಡಿದ್ದರು. ನೈಕ್ ಕಂಪನಿಯ ನಿಯಮಾವಳಿಯಂತೆ ಗರ್ಭಿಣಿ ಆಟಗಾರ್ತಿಯರು ಮತ್ತು ತಾಯಂದಿರಿಗೆ ಶೇಕಡಾ 70ಕ್ಕಿಂತ ಕಡಿಮೆ ಹಣ ಪಾವತಿಸಲಾಗುತ್ತದೆ. ನೈಕ್ ಕಂಪನಿಯ ಪ್ರಾಯೋಜಕರಾಗಿದ್ದ ಫೆಲಿಕ್ಸ್, ತಾಯಿಯಾಗಿದ್ದರಿಂದ ಶೇ. 70ಕ್ಕಿಂತ ಕಡಿಮೆ ಸಂಬಳ ಪಾವತಿ ಮಾಡಲಾಗಿತ್ತು. ಈ ಬಗ್ಗೆ ಇತರೆ ಮಹಿಳಾ ಕ್ರೀಡಾಪಟುಗಳ ಗುಂಪಿನೊಂದಿಗೆ ಫೆಲಿಕ್ಸ್ ಚರ್ಚಿಸಿದ್ದರು. ನೈಕ್ ನೀತಿ ಗರ್ಭಧಾರಣೆ ನಂತರ ಕನಿಷ್ಠ 18 ತಿಂಗಳವರೆಗೆ ಪ್ರಾಯೋಜಕರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರುವುದಿಲ್ಲ ಎಂದು ಹೊಸ ನೀತಿ ಹೇಳುತ್ತದೆ ಎಂಬುದನ್ನು ಖಚಿತಪಡಿಸಿಕೊಂಡರು. ನಂತರ ನೈಕ್ ನಿಯಮಾವಳಿಯ ವಿರುದ್ಧ ವೇತನ ತಾರತಮ್ಯದ ವಿರುದ್ಧ ಹೋರಾಟ ಆರಂಭಿಸಿದರು.

ಮಹಿಳಾ ಕ್ರೀಡಾಪಟುಗಳಿಗೆ ಆಗುತ್ತಿರುವ ಅನ್ಯಾಯ ಹಾಗೂ ತಾರತಮ್ಯ ಹೋಗಲಾಡಿಸಲು ಮತ್ತು ಸಮಾನ ವೇತನಕ್ಕಾಗಿ ಹೋರಾಟಗಳು ನಡೆಯುತ್ತಲೇ ಇವೆ. ಇದರಲ್ಲಿ ಮೇಗನ್ ರಾಪಿನೋ ತಂಡ, 2019ರಲ್ಲಿ ನಡೆದ ವಿಶ್ವಕಪ್ ಪ್ರಶಸ್ತಿಯ ಮೊದಲು ಮತ್ತು ನಂತರದ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರ ಫುಟ್ಬಾಲ್ ತಂಡದ ನಡುವೆ ನಡೆದ ವೇತನ ತಾರತಮ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಮಹಿಳಾ ಮತ್ತು ಪುರುಷ ಸಹವರ್ತಿ ಕ್ರೀಡಾಪಟುಗಳ ವೇತನದಲ್ಲಿ ತಾರತಮ್ಯ ಮಾಡುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ವೇತನ ತಾರತಮ್ಯ ಎಲ್ಲಾ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಆದರೆ ಅದು ಕ್ರೀಡಾಜಗತ್ತಿಗೂ ಅಂಟಿಕೊಂಡಿರುವುದು ಶೋಚನೀಯ. ಅದರಲ್ಲೂ ಗರ್ಭಿಣಿ ಹಾಗೂ ತಾಯಂದಿರಾದ ನಂತರ ಕೆಲಸ ಮಾಡುವ ಮಹಿಳೆಯರು, ಕೆಲಸಕ್ಕೆ ಯೋಗ್ಯರಾಗಿರುವುದಿಲ್ಲ ಎಂದೇ ಯೋಚಿಸಲಾಗುತ್ತದೆ. ಆದರೆ ಅಲ್ಲಿಸನ್ ಫೆಲಿಕ್ಸ್ ಇದೆಲ್ಲವನ್ನೂ ಸುಳ್ಳಾಗಿಸಿ ಬಿಟ್ಟರು. ದೋಹಾದಲ್ಲಿ ನಡೆದ ಒಲಿಂಪಿಕ್‍ನಲ್ಲಿ ಗೆಲುವು ಸಾಧಿಸುವ ಮೂಲಕ ತಾಯಿಯಾದ ಬಳಿಕವೂ ಮಹಿಳೆಯರು ಸ್ಟ್ರಾಂಗ್ ಮತ್ತು ಹೆಲ್ತಿ ಅಂಡ್ ಫಿಟ್ ಆಗಿರುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಈಗ ಸಮಾನ ವೇತನಕ್ಕಾಗಿ ನೈಕ್ ಸಂಸ್ಥೆಯ ನಿಯಮಾವಳಿ ವಿರುದ್ಧ ನಡೆಸಿದ ಫೆಲಿಕ್ಸ್ ಹೋರಾಟ ಸಫಲವಾಗಿದ್ದು, ಎಲ್ಲ ಆಟಗಾರ್ತಿ ತಾಯಂದಿರಲ್ಲಿ ಸಂತಸ ತಂದಿದೆ. ಫೆಲಿಕ್ಸ್ ಓಟ ಮತ್ತು ಹೋರಾಟದಲ್ಲಿ ವಿಜಯಿಯಾಗಿದ್ದಾರೆ. ನೈಕ್ ಜಗತ್ತಿನ ಎಲ್ಲ ಮಹಿಳೆಯರಿಗೆ ಭರವಸೆ ನೀಡಿದೆ. ಇನ್ನು ಫೆಲಿಕ್ಸ್ ಈಗ 2020ರ ಬೇಸಿಗೆಯಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್‍ಗಾಗಿ ತಯಾರಿ ನಡೆಸುತ್ತಿದ್ದಾರೆ. 2020ರಲ್ಲೂ ಚಿನ್ನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಮೂಡಿಸಿದ್ದಾರೆ. ಫೆಲಿಕ್ಸ್ ಒಬ್ಬ ಪ್ರತಿಭಾವಂತ ಆಟಗಾರ್ತಿ. ತನ್ನ 18ನೇ ವರ್ಷ ವಯಸ್ಸಿನಲ್ಲೇ ಒಲಿಂಪಿಕ್ ಪದಕ ತಮ್ಮದಾಗಿಸಿಕೊಂಡಿದ್ದರು. ಈಗ ಟೋಕಿಯೋ ಒಲಿಂಪಿಕ್‍ನತ್ತ ಚಿತ್ತ ನೆಟ್ಟಿದ್ದಾರೆ. ಈಗ ಫೆಲಿಕ್ಸ್ ಹೋರಾಟ, ಪ್ರತಿಭೆ ಮತ್ತು ಕ್ರಿಯಾಶೀಲ ಮಹಿಳೆಯರ ದೃಢ ಹೆಜ್ಜೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here