Homeಮುಖಪುಟಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್'

ಒಮ್ಮೆ ನೋಡಲೇಬೇಕಾದ ಸಿನಿಮಾ `ವೈರಸ್’

- Advertisement -
- Advertisement -

ಈಗ ತಿಂಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ತಯಾರಾಗಿ ಬಿಡುಗಡೆಯಾದ ‘ವೈರಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನೇ ಕೇಳಿದ್ದೆ. ಕೆಲವರ್ಷಗಳಿಂದ ಮಲಯಾಳಂನಲ್ಲಿ ಅತ್ಯುತ್ತಮ ಅನ್ನುವಂತಹ ಸಿನಿಮಾಗಳು ತಯಾರಾಗುತ್ತಿರುವ ಕಾರಣವೋ ಏನೋ ‘ವೈರಸ್’ ನನ್ನ ಗಮನ ಸೆಳೆದಿತ್ತು. ಜತೆಗೆ, ವರ್ಷದ ಹಿಂದೆ ಕೇರಳದಲ್ಲಿ ಸುಮಾರು 17 ಜನರ ಸಾವಿಗೆ ಕಾರಣವಾದ ‘ನಿಪಾ’ ವೈರಸ್, ಅದನ್ನು ತಹಬದಿಗೆ ತರಲು ಮಾಡಿದ ಹರಸಾಹಸಗಳ ಕತೆಯೇ ‘ವೈರಸ್’ ಎಂಬುದು ಇನ್ನಷ್ಟು ಕುತೂಹಲ ಕೆರಳಿಸಿತ್ತು. ನೋಡಬೇಕು ಅಂದುಕೊಂಡಿದ್ದೇ ಬಂತು…ದಿನಗಳು ಸರಿದವಷ್ಟೇ. ಥಿಯೇಟರ್‌ನಿಂದ ಸಿನಿಮಾ ತೆಗೆದುಹಾಕಿದ್ದರು. ಆದರೆ, ಎರಡು ದಿನಗಳ ಹಿಂದೆ ಅಮೇಜಾನ್ ಪ್ರೈಮ್ ಅಲ್ಲಿ ಈ ಸಿನಿಮಾ ನೋಡಿದೆ. What a masterpiece! Sheer brilliance at so many levels.

ನಿರ್ದೇಶಕ ಆಶಿಕ್ ಅಬು ನೋಡಲೇಬೇಕಾದ ಸಿನಿಮಾ ಮಾಡಿದ್ದಾನೆ. ಇಡೀ ಸಿನಿಮಾ ನಮ್ಮ ಅಸ್ತಿತ್ವವೇ ಅಸಂಗತ ಅನ್ನುವಂತೆ ಮಾಡುತ್ತಲೇ ಮತ್ತೆ ಭರವಸೆ ನೀಡುತ್ತದೆ. ಯಾಕೆಂದರೆ ಅದೊಂದು ಹೋರಾಟ. ಬದುಕಲು ಹೋರಾಡಲೇಬೇಕೆಂಬ ಸತ್ಯವೇ ಈ ಸಿನಿಮಾದ ಜೀವಾಳ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಮುಖ ಹತ್ತು ಪ್ರಯಾರಿಟಿ ರೋಗಗಳಲ್ಲಿ ‘ನಿಪಾ’ ಕೂಡ ಒಂದು. 2018ರಲ್ಲಿ ಕೇರಳದಲ್ಲಿ ಕಾಣಿಸಿಕೊಳ್ಳುವ ಮುನ್ನ ಜಗತ್ತಿನ ಬೆರಳಣಿಕೆಯಷ್ಟು ಪ್ರದೇಶಗಳಲ್ಲಿ ಮಾತ್ರ ಈ ವೈರಸ್ ಪತ್ತೆಯಾಗಿತ್ತು. ಇದಕ್ಕಿಂತ ಭಯ ಹುಟ್ಟಿಸುವ ಸಂಗತಿ ಎಂದರೆ, ನಿಪಾ ವೈರಸ್ ಗೆ ಯಾವುದೇ ರೀತಿಯ ಸಮರ್ಪಕ vaccination ಆಗಲಿ ಅಥವಾ ಚಿಕಿತ್ಸಾ ವಿಧಾನಗಳಾಗಲಿ ಇಲ್ಲ! ಈ ಸತ್ಯ ಎಂತಹವರ ಜಂಘಾಬಲವನ್ನೇ ಉಡುಗಿಸಿಬಿಡುತ್ತದೆ.

ಅದುಅಲ್ಲದೇ ಇದೊಂದು ಸಾಂಕ್ರಾಮಿಕ ರೋಗ! ಪತ್ತೆ ಹಚ್ಚುವಲ್ಲಿ ಸ್ವಲ್ಪ ತಡವಾಗಿದ್ದರೂ, ಕೆಲಸದಲ್ಲಿ ಕೊಂಚ ಎಡವಿದ್ದರೂ ಕೇರಳದ ಕೋಳಿಕೋಡ್ ನಗರದಲ್ಲಿ ಪತ್ತೆಯಾದ ಈ ವೈರಸ್, ಇಡೀ ಜಿಲ್ಲೆ, ರಾಜ್ಯ, ದೇಶವನ್ನೇ ಸ್ಮಶಾನ ಮಾಡಿಬಿಡುತ್ತಿತ್ತು ಎಂಬ ಸಂಗತಿ ಅತಿಶಯೋಕ್ತಿ ಅಂತೂ ಅಲ್ಲ! ಇಂತಹ ಕಥಾನಕವನ್ನು ಬಹುತೇಕ ಸತ್ಯ ಘಟನೆಗಳು ಹಾಗೂ ಆ ಸಂದರ್ಭದಲ್ಲಿ ಕೆಲಸ ಮಾಡಿದ, ಸಾವಿಗೀಡಾದ, ಬದುಕುಳಿದ ನಿಜಜೀವನದ ವ್ಯಕ್ತಿಗಳನ್ನೇ ಆಧರಿಸಿ ಮೆಹಸಿನ್ ಪರಾರಿ, ಶೆರ್ಫು ಹಾಗೂ ಸುಹಾಸ್ ಅವರುಗಳು ಅತ್ಯುತ್ತಮ ಚಿತ್ರಕತೆ ಕಟ್ಟಿದ್ದಾರೆ. ಅದನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದೇ ಆಶಿಕ್ ಅಬುನ ನಿರ್ದೇಶನ!

ಕೆಲವರ್ಷಗಳ ಹಿಂದೆ ಬಿಡುಗಡೆಯಾಗಿದ್ದ Steven Soderbergh ನಿರ್ದೇಶನದ ‘Contagion’ ಎಂಬ ಹಾಲಿವುಡ್ ಚಲನಚಿತ್ರವನ್ನ ನೆನಪಿಸುತ್ತದೆ ‘ವೈರಸ್’. ಒಂದೇ ವ್ಯತ್ಯಾಸ ಅಂದ್ರೆ, ‘Contagion’ ಹೈಪಾಥಿಸಿಸ್ ಮೇಲೆ ತಯಾರಾಗಿದ್ದು. ಆದರೆ, ವೈರಸ್ ಹಾಗಲ್ಲ. ನೈಜ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಪ್ರತಿ ಹಂತದಲ್ಲೂ ಸೂಕ್ಷ್ಮತೆ ಇರಬೇಕು ಇಲ್ಲದಿದ್ದರೆ ಸಿನಿಮಾದ ಹದ ತಪ್ಪಿಹೋಗುತ್ತದೆ. ಆದರೆ, ವೈರಸ್ ಇಂತಹ ಯಾವ ವೀಕ್‍ನೆಸ್ ನಿಂದಲೂ ಗೌಣವಾಗುವುದಿಲ್ಲ. ಅದೇ ಈ ಸಿನಿಮಾದ ಮೊದಲ ಹೆಗ್ಗಳಿಕೆ.

ರಾಜ್ಯ ಆರೋಗ್ಯ ಸಚಿವೆ, ನಗರದ ಶಾಸಕ, ಆರೋಗ್ಯ ಇಲಾಖೆಯ ನಿರ್ದೇಶಕಿ, ಕೋಳಿಕೋಡ್ ಜಿಲ್ಲೆಯ ಜಿಲ್ಲಾಧಿಕಾರಿ, ಮಣಿಪಾಲ್  virology ಘಟಕದ ತಜ್ಞರು, ವೈದ್ಯರ ತಂಡ, ಕಮ್ಯುನಿಟಿ ಮೆಡಿಸಿನ್‍ನ ವೈದ್ಯೆ, ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು, ಆಸ್ಪತ್ರೆಗಳ ಸಿಬ್ಬಂದಿ, ಅಟೆಂಡರ್‍ಗಳು, ಹೆಣ ಸುಡಲು ಹಾಗೂ ಹೂಳಲು ನೆರವಾಗುವ ಜನ, ಆಂಬುಲೆನ್ಸ್‍ನ ಡ್ರೈವರ್‍ಗಳು… ಹೀಗೇ ಎಲ್ಲರನ್ನೂ ಈ ಸಿನಿಮಾ ಒಳಗೊಳ್ಳುತ್ತದೆ. ಯಾಕೆಂದರೆ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಮುಖ್ಯರಾಗುತ್ತಾರೆ. ಎಲ್ಲರೂ ಜತೆಗೂಡಿ ಇಡೀ ಊರು ಸ್ಮಶಾನವಾಗುವುದನ್ನ ಹೇಗೆ ತಪ್ಪಿಸುತ್ತಾರೆ ಹಾಗೆಯೇ ವೈರಸ್ ಹಬ್ಬಿದ dynamics ಅನ್ನು ಯಾವೆಲ್ಲ ಹರಸಾಹಸಗಳ ಮೂಲಕ ಪತ್ತೆ ಹಚ್ಚುತ್ತಾರೆ ಎಂಬುದನ್ನೇ ಒಂದು ಅದ್ಭುತವಾದ ಥ್ರಿಲ್ಲರ್ ಸಿನಿಮಾ ಆಗಿಸಿದ್ದಾನೆ ಆಶಿಕ್ ಅಬು.

ಇದರ ಮಧ್ಯೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿ ಕೆಲಸ ಮಾಡುವ ಇಬ್ಬರೂ ಹಿರಿಯ ಅಧಿಕಾರಿಗಳು ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದರ ಜತೆಗೆ ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ’ ಸರ್ಕಾರದ ನಿರ್ದೇಶನದಂತೆ ರಾಜಕೀಯ ಮೇಲಾಟಕ್ಕೆ ಪ್ರಯತ್ನಿಸುತ್ತಾರೆ. ಈ ವೈರಸ್ ‘ಭಯೋತ್ಪಾದಕರ ಕೃತ್ಯ’ (ಅರ್ಥಾತ್ ‘biological warfare’) ಇರಬಹುದು, ಆ ನಿಟ್ಟಿನಲ್ಲಿ ತನಿಖೆ ನಡೆಸಲು ಒತ್ತಾಯಿಸುತ್ತಾರೆ. ಜೀವ ಪಣಕ್ಕಿಟ್ಟು ಕೆಲಸ ಮಾಡುವುದಷ್ಟೇ ಅಲ್ಲದೇ ಕೋಳಿಕೋಡ್‍ನಲ್ಲಿ ಕಾರ್ಯನಿರತರಾದ ಎಲ್ಲರಿಗೂ ಈ ಸವಾಲನ್ನೂ ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ‘ಪಾಲಿಟಿಕಲಿ ಕರೆಕ್ಟ್’ ಸಿನಿಮಾ ಆಗುವ ಅಪಾಯದಿಂದ ತಪ್ಪಿಸಿಕೊಂಡು ರಿಯಾಲಿಸ್ಟಿಕ್ ಆಗಿ ನಿಲ್ಲುತ್ತದೆ.

ಇಡೀ ಸಿನಿಮಾದ ಮತ್ತೊಂದು ಜೀವಾಳ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಹಾಗೂ ಸಿನಿಮಾಟೋಗ್ರಫಿ. ಚಿತ್ರಕತೆಗೆ ಪೂರಕವಾಗುವಂತೆ ಸಂಗೀತ ಸಂಯೋಜಿಸುವುದು ಹಾಗೂ ಕ್ಯಾಮೆರಾ ಫ್ರೇಮ್‍ಗಳನ್ನ ಕಟ್ಟುವುದೇ ಒಂದು ಸವಾಲು. ಹಾಗಾಗಿ ಸಿನಿಮಾವನ್ನ ಮತ್ತಷ್ಟು ಉತ್ಕ್ರಷ್ಟವಾಗಿಸುವಲ್ಲಿ ಸುಷಿನ್ ಶ್ಯಾಮ್ ಹಾಗೂ ರಾಜೀವ್ ರವಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ಬಹುತೇಕ ಪ್ರಮುಖ ನಟನಟಿಯರು ಇದರಲ್ಲಿ ತಮ್ಮೆಲ್ಲ ‘ತಾರಾಮೌಲ್ಯ’ ಪಕ್ಕಕ್ಕಿಟ್ಟು ನಟಿಸಿದ್ದಾರೆ. ಹಾಗಾಗಿಯೇ ಸಿನಿಮಾ ಒಂದೇ ಗುಕ್ಕಿನಲ್ಲಿ ನಿಮ್ಮನ್ನು ಹಿಡಿದಿಡುತ್ತದೆ.

ಜಗತ್ತಿನ ಶ್ರೇಷ್ಠ ಲೇಖಕ ಫ್ರೆಂಚ್‍ನ ಅಲ್ಬರ್ಟ್ ಕಾಮುನ  ‘The Plague’ ಕಾದಂಬರಿಗೆ ಈ ಸಿನಿಮಾವನ್ನ ಹೋಲಿಸಿ ಸಾಹಿತ್ಯಪ್ರೇಮಿಗಳು ಅಲ್ಲಲ್ಲಿ ವಿಶ್ಲೇಷಿಸಿದ್ದಾರೆ. ನಿಸ್ಸಂದೇಹವಾಗಿ  ‘The Plague’ ಕಾದಂಬರಿಯ ರೂಪಕವೇ ‘ವೈರಸ್’ ಸಿನಿಮಾದಲ್ಲೂ ಸೂಕ್ಷ್ಮವಾಗಿ ಬಳಕೆಯಾಗಿದೆ. ಕಾಮುನ ಸಾಹಿತ್ಯವನ್ನ ಓದಿದವರಿಗೆ ಎಷ್ಟೋ ವರ್ಷಗಳ ಕಾಲ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಬಹುಶಃ ಸಾಧ್ಯವೇ ಇಲ್ಲವೇನೋ? ಅಸ್ತಿತ್ವವಾದದ ಮೂಲಕವೇ ಮಾನವತಾವಾದವನ್ನ ಎತ್ತಿಹಿಡಿದ ಮಹಾನ್ ಲೇಖಕ ಅಲ್ಬರ್ಟ್ ಕಾಮು. ಕ್ರಿಯೆಗೆ ಯಾವುದೇ ಅರ್ಥವಿಲ್ಲದಿದ್ದರೂ, ಕ್ರಿಯಾತ್ಮಕವಾಗಿದ್ದುಕೊಂಡೇ ಮಾನವೀಯ ಪ್ರಜ್ಞೆಯನ್ನೇ ಉದ್ದೇಶವಾಗಿಸಿಕೊಳ್ಳಬೇಕು ನಾವೆಲ್ಲ ಎಂಬುದೇ ಕಾಮುವಿನ ಒಟ್ಟಾರೆ ಸಾಹಿತ್ಯದ ಮೂಲದ್ರವ್ಯ. ಯಾಕೆಂದರೆ ಆತ ಬದುಕಿದ್ದೇ ಪ್ರಕ್ಷುಬ್ಧ ಕಾಲದಲ್ಲಿ! ನಾಜಿ ವಾದ ಹಾಗೂ ಎರಡನೇ ಮಹಾಯುದ್ಧದ ಸಮಯದಲ್ಲಿ ಯಃಕಶ್ಚಿತ್ ಹುಳುಗಳಂತೆ ಸಾಯುತ್ತಿದ್ದ ಮನುಷ್ಯರ ಜೀವಗಳಿಗೆ ಏನಾದರೂ ಬೆಲೆ ಇದೆಯೇ? ಈ ಪ್ರಶ್ನೆ ವಿಚಿತ್ರ ತೆರನಾದ ಚಡಪಡಿಕೆಗಳು ಹಾಗೂ ಮಾನಸಿಕ ಹಿಂಸೆಗಳಿಗೆ ಅನೇಕರನ್ನ ತಳ್ಳಿದ್ದ ಕಾಲವದು!  “…hopeless hope is what sustains us in difficult moments…”  — ಇದು ಕಾಮು ತನ್ನ ಜರ್ಮನ್ ಗೆಳೆಯನಿಗೆ ಬರೆದ ಪತ್ರದಲ್ಲಿ ಹೇಳುವ ಸಾಲುಗಳು (‘Resistance, Rebellion and Death’  ಎಂಬ ಪ್ರಬಂಧ ಸಂಕಲನ). ‘ವೈರಸ್’ ಸಿನಿಮಾದ ಪ್ರತಿ ಫ್ರೇಮ್ ಹಾಗೂ ಸನ್ನಿವೇಶಗಳು ಇದನ್ನೇ ಮಾರ್ದನಿಸುತ್ತವೆ. ಇಂಗ್ಲಿಷ್ ಸಬ್ ಟೈಟಲ್ಸ್‍ನೊಂದಿಗೆ ಅಮೇಜಾನ್ ಪ್ರೈಮ್‍ನಲ್ಲಿದೆ ‘ವೈರಸ್’ ಸಿನಿಮಾ. ತಪ್ಪದೇ ನೋಡಿ.

  • ವರುಣ್ ನಾಯ್ಕರ್‌

(ಉಪನ್ಯಾಸಕರು, ಯುವ ಬರಹಗಾರರು)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...