Homeಮುಖಪುಟಕಾಶ್ಮೀರದ ದನಿ; ನೆಮ್ಮದಿಯನ್ನು ಮರೀಚಿಕೆಯಾಗಿಸಿರುವ AFSPA

ಕಾಶ್ಮೀರದ ದನಿ; ನೆಮ್ಮದಿಯನ್ನು ಮರೀಚಿಕೆಯಾಗಿಸಿರುವ AFSPA

- Advertisement -
- Advertisement -

ಕಾಶ್ಮೀರದ ದನಿ

ಇದನ್ನು ಬರೆದದ್ದು 2022 ಜನವರಿಯ ಮೊದಲ ದಿನ, ಹೊಸ ವರ್ಷದ ಆರಂಭ ಹಾಗೂ ಕಾಶ್ಮೀರದಲ್ಲಿ ನಮಗೆಲ್ಲ ಅತ್ಯಂತ ಕಡು ಚಳಿಗಾಲ ಶುರುವಾಗುವ ದಿನ. ಈ 40 ದಿನಗಳ ಕೊರೆಯುವ ಕಡುಚಳಿಯ ಅವಧಿಯನ್ನು ಚಿಲ್ಲಾಯಿ ಕಲನ್ ಎಂದು ಕರೆಯುತ್ತೇವೆ. ವಿಶ್ವಾದ್ಯಂತ ಹೊಸ ವರ್ಷ ಎಂದರೆ, ಹೊಸ ಆರಂಭಗಳನ್ನು, ಹೊಸ ನಿರ್ಣಯಗಳನ್ನು ಮತ್ತು ಸಕಾರಾತ್ಮಕ ಭಾವನೆಗಳನ್ನು ಸಾಂಕೇತಿಕವಾಗಿ ಬಿಂಬಿಸುತ್ತದೆ, ಆದರೆ ನನ್ನ ನೆಲವಾದ ಕಾಶ್ಮೀರದಲ್ಲಿ ಈ ಸಮಯ ಒಂದು ರೀತಿಯ ನಿರೀಕ್ಷೆಯ ದ್ಯೋತಕವಾಗಿದೆ. ಬೆಳಗ್ಗೆಯ ಚಳಿಯಲ್ಲಿ ಹೆಪ್ಪುಗಟ್ಟಿದ ನಲ್ಲಿಗಳಿಂದ ನೀರು ಬರುವುದೇ ಎಂಬ ನಿರೀಕ್ಷೆ, ಮರಗಟ್ಟಿರುವ ಕಾಲುಗಳಿಗೆ ಒಂದಿಷ್ಟು ಬಿಸಿಲು ಸಾಂತ್ವನ ನೀಡಬಹುದೇನೋ ಎಂದು ಮಧ್ಯಾಹ್ನದಲ್ಲಿ ಕಾಯುವ ನಿರೀಕ್ಷೆ ಹಾಗೂ ತಣ್ಣನೆ ಕೊರೆಯುವ ಸುದೀರ್ಘ ರಾತ್ರಿಗಳು ಎಲ್ಲರನ್ನು ಸುರಕ್ಷಿತವಾಗಿರಿಸಲಿ ಎಂಬ ಪ್ರಾರ್ಥನೆಯೊಂದಿಗೆ ಕೊನೆಗೊಳ್ಳುತ್ತವೆ. ಹಾಗೂ ಈ ಒಂದು ದಿನವು ನಮಗೆ ಹೇಳುವುದೇನೆಂದರೆ, ವಿಶ್ವದ ಇತರ ಭಾಗಗಳೊಂದಿಗೆ ನಮ್ಮ ಸಾಮ್ಯತೆ ಹೆಚ್ಚೇನಿಲ್ಲ ಎಂದು. ನಮ್ಮ ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು, ಋತುಗಳು, ಹಬ್ಬಗಳೆಲ್ಲ ಜಾಗತಿಕ ಕ್ಯಾಲೆಂಡರ್‌ನಲ್ಲಿ ಇತರರೊಂದಿಗೆ ಸಮನಾದ ದಿನದಂತೆಯೇ ತೋರಿಸಬಹುದು ಆದರೆ ನಮ್ಮ ದೈನಂದಿನ ಜೀವನ ಮತ್ತು ಅನುಭವಗಳು ಅಸಾಮಾನ್ಯವಾದುದ್ದಾಗಿವೆ.

ಕಾಶ್ಮೀರ ಒಂದು ಆಲ್ಮೋಸ್ಟ್ ಭೂಪ್ರದೇಶ ಅಂದರೆ ಬಹುತೇಕ ಮಟ್ಟಿಗೆ ಭೂಪ್ರದೇಶ ಎನ್ನಬಹುದು. ಬಹುತೇಕ ಸ್ವತಂತ್ರ. ಬಹುತೇಕ ಸುರಕ್ಷಿತ. ಬಹುತೇಕ ಶಾಂತಿ. ಬಹುತೇಕ ಖುಷಿ. ಬಹುತೇಕ ಘನತೆಯ ಜೀವನ.
ಈ ’ಬಹುತೇಕ’ಗಳು ಪ್ರಭುತ್ವದ ’ನಿರಂಕುಶ’ ಅಧಿಕಾರದಿಂದ ಆಗಿದ್ದು. ಅದರ ಎಲ್ಲಕ್ಕಿಂತ ಕುಖ್ಯಾತ ಹತ್ಯಾರ ಆರ್ಮ್‌ಡ್ ಫೋರ್ಸಸ್ (ಜಮ್ಮು & ಕಾಶ್ಮೀರ) ಸ್ಪೆಷಲ್ ಪವರ್ಸ್ ಆಕ್ಟ್ (ಎಎಫ್‌ಎಸ್‌ಪಿಎ) 1990 ಹಾಗೂ ಅದಕ್ಕಿಂತ ಮುಂಚೆಯ ಜಮ್ಮು & ಕಾಶ್ಮೀರ ಪಬ್ಲಿಕ್ ಸೇಫ್ಟಿ ಆಕ್ಟ್ (ಪಿಎಸ್‌ಎ) 1978. ಆರ್ಮ್‌ಡ್ ಫೋರ್ಸಸ್ (ಜಮ್ಮು & ಕಾಶ್ಮೀರ) ಸ್ಪೆಷಲ್ ಪವರ್ಸ್ ಆರ್ಡಿನನ್ಸ್ ಅನ್ನು ಆರ್ಮ್‌ಡ್ ಫೋರ್ಸಸ್ (ಜಮ್ಮು & ಕಾಶ್ಮೀರ) ಸ್ಪೆಷಲ್ ಪವರ್ಸ್ ಆಕ್ಟ್ (ಎಎಫ್‌ಎಸ್‌ಪಿಎ) 1990 ಆಗಿ ಕಾನೂನಾತ್ಮಕಗೊಳಿಸಲಾಗಿದ್ದರಿಂದ ಭಾರತೀಯ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ನಾಗರಿಕರನ್ನು ಬಂಧಿಸುವ ಮತ್ತು ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ ’ಕಾನೂನುಬಾಹಿರ ಗುಂಪುಕಟ್ಟುವಿಕೆ’ಯ ಮೇಲೆ ಮಾರಣಾಂತಿಕ ಬಲಪ್ರಯೋಗವನ್ನು ಬಳಸುವ ಅಪರಿಮಿತ ಅಧಿಕಾರ ಬಂದಂತಾಯಿತು.

ತನಗೆ ಸಂಬಂಧವಿಲ್ಲವೆಂದು ಇದನ್ನು ಅಸಡ್ಡೆಯಿಂದ ಕಾಣುವವರಿಗೆ, ಪ್ರಭುತ್ವ ಈ ಕರಾಳ ಕಾನೂನನ್ನು ಬಳಸಿ ’ಶಾಂತಿ’ ಎಂಬ ಮರೀಚಿಕೆಯನ್ನು ಜೀವಂತವಾಗಿರಿಸಿದೆಯಾದರೂ, ಈ ಕಾನೂನಿನ ಅಸಲಿ ಉದ್ದೇಶವು ಭಾರತೀಯ ಸೈನ್ಯದ ಸಬ್‌ಕನ್ವೆನ್ಷನಲ್ ಆಪರೇಷನ್‌ನ ಡಾಕ್ಟ್ರೀನ್‌ನ್ನು ನೋಡಿದರೆ ಗೊತ್ತಾಗುತ್ತದೆ, ಅದು ಹೇಳುವುದೇನೆಂದರೆ, “ಸರಕಾರದೊಂದಿಗೆ ಹೋರಾಟ ಮಾಡುವುದು ’ಗೆಲ್ಲಲಾಗದ’ (ನೋ ವಿನ್) ಪರಿಸ್ಥಿತಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಲು ಈ ಪ್ರಯೋಗವನ್ನು ಬಳಸಬೇಕು ಹಾಗೂ ಸರಕಾರ ವಿರೋಧಿ ನಿಲುವು ಶಾಂತಿ ಮತ್ತು ಸಹಜತೆಯನ್ನು ಮರುಸ್ಥಾಪಿಸಲು ಅಡ್ಡಿಯಾಗುವುದು ಎಂದು ಗೊತ್ತಾಗಬೇಕು”. ಭಿನ್ನಮತವನ್ನು ಹತ್ತಿಕ್ಕುವ ಈ ಮೇಲಿನ ಹೇಳಿಕೆಗೆ ಒಂದು ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿರಬಾರದು  ಎಂಬುದು ಒಂದು ಕಡೆಯಾದರೆ, ಭಾರತೀಯ ಮಹಾ ಪ್ರಜಾಪ್ರಭುತ್ವ ಯಾವ ಮೌಲ್ಯಗಳ ಮೇಲೆ ನಿಂತಿದೆಯೋ ಆ ಮೌಲ್ಯಗಳು ಕಾಶ್ಮೀರದಲ್ಲಿ ಕಾಣಸಿಗುವುದಿಲ್ಲ.

ನಿಮ್ಮ ಟಿವಿ ಪರದೆಗಳಲ್ಲಿ ಕಾಶ್ಮೀರದಲ್ಲಿ ’ಭಯೋತ್ಪಾದಕರ’ನ್ನು ಕೊಂದ ಮತ್ತು ಎನ್‌ಕೌಂಟರ್‌ಗಳ ಸುದ್ದಿಗಳು ಕಂಡುಬರುತ್ತವೆ, ಅದರೊಂದಿಗೆ ಪ್ರತಿನಿತ್ಯ ರಾತ್ರಿ 9ಕ್ಕೆ ಹುಸಿ ರಾಷ್ಟ್ರೀಯವಾದಿ ಸುದ್ದಿನಿರೂಪಕರು ಇದನ್ನು ಹೇಳಿ ಎದೆಬಡಿದುಕೊಳ್ಳುತ್ತಾರೆ, ಆಗ ನೀವು ನಿಮ್ಮ ಕುಟುಂಬದೊಂದಿಗೆ ನಿಜವಾಗಿಯೂ ಸುರಕ್ಷಿತವಾಗಿ ರಾತ್ರಿ ಊಟ ಮಾಡುತ್ತಿರುತ್ತೀರಿ ಹಾಗೂ ಇಂತಹ ತೊಂದರೆಗಳೊಂದಿಗೆ ನಮ್ಮ ಸೈನ್ಯವು ಎಷ್ಟು ಕಷ್ಟಪಡುತ್ತಿದೆ ಎಂದು ಟಿಪ್ಪಣಿ ಮಾಡುತ್ತೀರಿ. ಆದರೆ ಅದೇ ಸಮಯದಲ್ಲಿ, ಈ ’ಅಪಾಯ’ದಿಂದ ಒಬ್ಬ ಸಾಮಾನ್ಯ ಕಾಶ್ಮೀರಿ ವ್ಯಕ್ತಿ ಕೂಡಾ ಸುರಕ್ಷಿತವಾಗಿರಬಹುದು ಎಂದು ಸಂತೋಷಪಡುತ್ತೀರಿ. ಅಲ್ಲಿಯೇ ಇರುವುದು ಸಮಸ್ಯೆ.

ಎಎಫ್‌ಎಸ್‌ಪಿಎ ಮತ್ತು ಅದರಂತಹ ನೀತಿಗಳು ಕೇವಲ ಆಯ್ದ ಒಂದು ವಲಯದ ಜನರಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂಬುದು ಒಂದು ಸುಳ್ಳು. ಇದು ನನ್ನ ರಕ್ಷಣೆಗಾಗಿ ಇದೆ ಎಂಬುದೂ ಸುಳ್ಳು. ಹಾಗೂ ನಾನು ಒಬ್ಬ ಸಾಮಾನ್ಯ ಕಾಶ್ಮೀರಿ ಮುಸ್ಲಿಂ ಮಹಿಳೆಯಾಗಿ ಇದನ್ನು ಹೇಳುತ್ತಿದ್ದೇನೆ. ನಾನು ಆರಂಭದಲ್ಲಿಯೇ ಹೇಳಿದಂತೆ, ನನ್ನ ಸಾಮಾನ್ಯ ಅನುಭವಗಳು ಎಎಫ್‌ಎಸ್‌ಪಿಎನ ಕರಾಳ ಛಾಯೆಯಲ್ಲಿಯೇ ಕಳೆದಿರುತ್ತೇನೆ.

ನನ್ನ ನಿಕಟ ಕುಟುಂಬದಲ್ಲಿ ಇರುವವರು ನಾನು, ನನ್ನ ತಂದೆತಾಯಿ ಮತ್ತು ನನ್ನ ತಮ್ಮ. ನನ್ನ ತಮ್ಮ ಗಡ್ಡ ಬೆಳೆಸಬೇಕೆಂದುಕೊಂಡಿದ್ದಾನೆ ಹಾಗೂ ಅದು ಕಾಶ್ಮೀರದಲ್ಲಿ ಅಷ್ಟೇನು ಒಳ್ಳೆಯ ನಡೆಯಲ್ಲ ಏಕೆಂದರೆ ಆ ಗಡ್ಡವು ಪೊಲೀಸರಿಂದ ಮತ್ತು ಸೈನ್ಯದಿಂದ ಗೊತ್ತುಗುರಿಯಿಲ್ಲದ ತಪಾಸಣೆಗೆ ಎಡೆಮಾಡಿಕೊಡುತ್ತದೆ ಹಾಗೂ ನನ್ನ ತಮ್ಮ ತಾನೊಬ್ಬ ಮೂಲನಿವಾಸಿ, ಅಲ್ಲಿಯೇ ಇರುವ ವ್ಯಕ್ತಿ ಎಂದು ಸಾಬೀತುಪಡಿಸಿದ ಮೇಲೆಯೇ ಅದು ಕೊನೆಗೊಳ್ಳುವುದು. ಇವರೊಂದಿಗೆ ನನಗೆ ಇಬ್ಬರು ಅಂಕಲ್‌ಗಳು, ಮೂವರು ಆಂಟಿಯರು ಹಾಗೂ ಅವರ ಹನ್ನೆರಡು ಮಕ್ಕಳಾದ ನನ್ನ ದಾಯಾದಿಗಳೂ ಇದ್ದಾರೆ. ನನಗೆ ಅಜ್ಜಅಜ್ಜಿಯರೂ ಇದ್ದರು. ನನ್ನ ಅಜ್ಜನಿಗೆ 90ರ ದಶಕದ ಮಧ್ಯದಲ್ಲಿ ಹೃದಯದ ಕಾಯಿಲೆ ಶುರುವಾಯಿತು; ಅದೇ ಸಮಯದಲ್ಲಿ ನನ್ನ ಚಿಕ್ಕಪ್ಪಂದಿರನ್ನು ಸುಖಾಸುಮ್ಮನೇ ನಡುರಾತ್ರಿಯಲ್ಲಿ ಬಂಧಿಸುವ ಕೆಲಸ ಶುರುವಾಗಿದ್ದವು. ಬಂಧಿಸಿ ಅವರನ್ನು ಕೆಲವು ಸಲ ವಾರಗಳ ನಂತರ ಬಿಡುಗಡೆ ಮಾಡಲಾಗುತ್ತಿತ್ತು. ಅವರನ್ನು ಕೆಲವು ಸಲ ಹೊಡೆಯಲಾಗುತ್ತಿತ್ತು, ಕೆಲವು ಸಲ ಹೊಡೆಯದೇ ಬಿಡುಗಡೆ ಮಾಡಲಾಗುತ್ತಿತ್ತು. ಈ ನಮ್ಮ ವಾಸ್ತವವನ್ನು ದೃಢೀಕರಿಸಲು, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ (OHCHR) ವರದಿಗಳು ಬಂದಿವೆ, ಅವುಗಳ ಪ್ರಕಾರ 2018 ಮತ್ತು 2019ರಲ್ಲಿ ಪಿಎಸ್‌ಎ ಅಡಿಯಲ್ಲಿ 18ಕ್ಕೂ ಕಡಿಮೆ ವಯಸ್ಸಿನ ಮಕ್ಕಳನ್ನು ಬಂಧಿಸಲಾಗಿದೆ. 18ಕ್ಕೂ ಕಡಿಮೆ ವಯಸ್ಸಿನ ಮಕ್ಕಳನ್ನು ಪೊಲೀಸ್ ಲಾಕ್‌ಅಪ್‌ಗಳಲ್ಲಿ ಹಲವಾರು ದಿನಗಳ ಮಟ್ಟಿಗೆ ಯಾವುದೇ ಆರೋಪ ದಾಖಲಿಸದೇ ಬಂಧನದಲ್ಲಿ ಇಡಲಾಗಿತ್ತು ಮತ್ತು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ, ಅವರ ಸುಪರ್ದಿಯಲ್ಲಿದ್ದಾಗಲೂ ತಮ್ಮ ಆಹಾರಕ್ಕೆ ಅವರೇ ದುಡ್ಡು ಕೊಡಬೇಕಾಗುವಂತೆ ಮಾಡಿದ್ದು ಆ ವರದಿಗಳಲ್ಲಿ ದಾಖಲಾಗಿದೆ.

ನಾನು ಮುಂಚೆ ಹೇಳುತ್ತಿದ್ದಂತೆ, ನಾನು ನನ್ನ ಕುಟುಂಬದಲ್ಲಿ ಹಿರಿಯ ಮಗಳು; ನಿಮ್ಮೆಲ್ಲರ ಕುಟುಂಬದಂತೆಯೇ ಅದರರ್ಥ ಅನೇಕ ಜವಾಬ್ದಾರಿಗಳಿವೆ. ಕೆಲವನ್ನು ನನಗೆ ವಹಿಸಲಾಗಿದ್ದರೆ ಇನ್ನೂ ಕೆಲವನ್ನು ನಾನೇ ಆಪಾದಿಸಿಕೊಂಡಿರುವಂತಹವು. ತಲೆತಲಾಂತರದಿಂದ ನನಗೆ ಬಳುವಳಿಯಾಗಿ ಬಂದ ದೊಡ್ಡ ಜವಾಬ್ದಾರಿ ಎಂದರೆ ಅದು ಚಿಂತೆ ಹತ್ತಿಕೊಳ್ಳುವುದು ಮತ್ತು ನಾನು ತುಸು ಹೆಚ್ಚೇ ಚಿಂತಾಕ್ರಾಂತಳಾಗುತ್ತೇನೆ.

ನಾನು ಮನೆಯ ದೈನಂದಿನ ಖರ್ಚುಗಳ ಬಗ್ಗೆ ತಲೆ ಕೆಡಿಸಿಕೊಂಡು ಚಿಂತಿಸುತ್ತೇನೆ. ನನ್ನ ತಂದೆತಾಯಿಯ ಆರೋಗ್ಯದ ಬಗ್ಗೆ ಚಿಂತಿಸುತ್ತೇನೆ. ನನ್ನ ಸಹೋದರ ಸಹೋದರಿಯರ ಶಿಕ್ಷಣದ ಬಗ್ಗೆ ಚಿಂತೆ ಹತ್ತಿಕೊಳ್ಳುತ್ತದೆ. ನನ್ನ ಕೆರಿಯರ್ ಬಗ್ಗೆ ಚಿಂತಿಸುತ್ತೇನೆ. ನೀವೂ ಕೂಡ ಇದೆಲ್ಲದರ ಬಗ್ಗೆ ಚಿಂತಾಕ್ರಾಂತರಾಗುತ್ತೀರಿ ಎಂದು ನನಗೆ ಖಚಿತವಾಗಿ ಗೊತ್ತು.

ಆದರೆ ನಾನು ಸ್ವಲ್ಪ ಹೆಚ್ಚೇ ಚಿಂತಾಕ್ರಾಂತಳಾಗುತ್ತೇನೆ. ನನ್ನ ಹಿರಿಯರು ನನಗಿಂತ ಹೆಚ್ಚು ಚಿಂತಿಸುತ್ತಾರೆ. ನಾವು ನನ್ನ ಸಹೋದರರು ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುವ ಬಗ್ಗೆ ಮತ್ತು ಎಂದೂ ಹಿಂತಿರುಗಿ ಬರದೇ ಇರುವುದರ ಬಗ್ಗೆ ಚಿಂತಾಕ್ರಾಂತರಾಗುತ್ತೇವೆ, ನಿಮಗಿದು ಗೊತ್ತೇ? ಜಮ್ಮು ಮತ್ತು ಕಾಶ್ಮೀರ ಕೊಯೆಲಿಷನ್ ಆಫ್ ಸಿವಿಲ್ ಸೊಸೈಟಿಯ (JKCCS) ಪ್ರಕಾರ 2018 ರಲ್ಲಿ ಸುಮಾರು 160 ಸಾಮಾನ್ಯ ಜನರು ಕೊಲ್ಲಲ್ಪಟ್ಟಿದ್ದಾರೆ. (ತೀರ ಇತ್ತೀಚಿನ ಡೇಟಾ ಲಭ್ಯವಿಲ್ಲ.) ಇದು ಒಂದು ದಶಕದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ. ಆದರೆ ಒಕ್ಕೂಟದ ಗೃಹ ಸಚಿವಾಲಯವು ಕೇವಲ 37 ಸಾಮಾನ್ಯ ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.

ನಮಗೂ ಮಕ್ಕಳಿದ್ದಾರೆ. ನಾವು ಅವರ ಬಗ್ಗೆ ಚಿಂತಿಸುತ್ತೇವೆ. ನಾವೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ, ತಮ್ಮ ಭರವಸೆಯ ನೆಲದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲಿ ಎಂದು. ಫುಲ್ವಾಮಾದಲ್ಲಿ ಭಾರತೀಯ ರಕ್ಷಣಾ ಪಡೆಗಳ ಮೇಲೆ 2019ರ ಫೆಬ್ರುವರಿ 14ರಂದು ಒಂದು ಆತ್ಮಹತ್ಯಾ ದಾಳಿಯಾಯಿತು, ಅದು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಯಿತು. ಈ ದಾಳಿಯ ನಂತರ, ಭಾರತದ ವಿವಿಧೆಡೆ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಕಾಶ್ಮೀರಿ ಮುಸ್ಲಿಮರ ಮೇಲೆ ಜನರ ಗುಂಪುಗಳು ದಾಳಿ ಮಾಡಿದ ವರದಿಗಳಾದವು. ಭಾರತದ ಬೇರೆಬೇರೆ ರಾಜ್ಯಗಳಲ್ಲಿ ಇರುವ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳನ್ನು ಬೆದರಿಸುವ, ದೈಹಿಕ ಹಲ್ಲೆ ಮಾಡಿದ ವರದಿಗಳು ಕಂಡುಬಂದವು. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಾರ, ಸಾಮಾನ್ಯ ಕಾಶ್ಮೀರಿಗಳನ್ನು ಅವರ ಅಸ್ಮಿತೆಯ ಕಾರಣಕ್ಕಾಗಿಯೇ ಗುರಿ ಮಾಡಲಾಯಿತು. ಒಂದು ಪ್ರಕರಣದಲ್ಲಿ, ಕೇಂದ್ರ ಸರ್ಕಾರ ನಿಯೋಜಿಸುವ ತ್ರಿಪುರಾದ ರಾಜ್ಯಪಾಲರು ’ಕಾಶ್ಮೀರದ ಎಲ್ಲಾ ವಸ್ತುಗಳಿಗೆ ಬಹಿಷ್ಕಾರ’ ಹಾಕಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದರು. ಅವರ ಮೇಲೆ ಅಥವಾ ಕಾಶ್ಮೀರಿಗಳ ವಿರುದ್ಧ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸಿದ ಇನ್ನಿತರರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಹಾಗಾಗಿ ನಾವು ಚಿಂತಾಕ್ರಾಂತರಾಗುತ್ತೇವೆ. ಹೀಗೆ ಚಿಂತಿಸಲೇಬೇಕಲ್ಲವೇ ನಾವು? ನಮಗೂ ಹೆಣ್ಣುಮಕ್ಕಳು ಮತ್ತು ತಾಯಂದಿರು ಇದ್ದಾರೆ, ಅವರೆಲ್ಲ ತಮ್ಮ ಜೆಂಡರ್ ಕಾರಣಕ್ಕಾಗಿಯೇ ವಿಶ್ವಾದ್ಯಂತ ತಲೆತಲಾಂತರದಿಂದ ಶೋಷಿಸಲಾಗಿದೆ. ಆದರೆ ಇಲ್ಲಿ ಕಾಶ್ಮೀರದಲ್ಲಿ ಅದು ಎರಡು ಪಟ್ಟು. ಅವರು ಕಾಶ್ಮೀರಿಗಳು ಮತ್ತು ಮಹಿಳೆಯರು. ಅವರು ಕಾಶ್ಮೀರಿ ಮಹಿಳೆಯರು, ಅವರನ್ನು ಅವರ ದೈಹಿಕ ರೂಪಕ್ಕೆ ಇಳಿಸಿ, ವಿಕೃತ ಮನಸ್ಸುಗಳ ಬೇಟೆಗೆ ಬಲಿಗಳೂ ಆಗಿದ್ದಾರೆ. ಟೆಲಿಗ್ರಾಫ್ ಪತ್ರಿಕೆಯಲ್ಲಿ ನಿಸ್ಸಿಮ್ ಮನ್ನತುಕ್ಕರೆನ್ ಅವರ ಒಂದು ಬರಹದಲ್ಲಿ ಹೇಳಿದ್ದೇನೆಂದರೆ, ಆರ್ಟಿಕಲ್ 370 ರದ್ದುಗೊಳಿಸಿದ ತಕ್ಷಣ, ಭಾರತದಲ್ಲಿ ಗೂಗಲ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹುಡುಕಾಡಿದ ವಿಷಯವೇನೆಂದರೆ, ’ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗುವುದು’ ಮತ್ತು ’ಕಾಶ್ಮೀರಿ ಹುಡುಗಿಯರು’. ಇವು ಮುಗ್ಧ ಹುಡುಕಾಟಗಳಲ್ಲ, ಇವು ಮಹಿಳಾದ್ವೇಷಿ ಮನಸ್ಥಿತಿ ತೋರಿಸುತ್ತವೆ. ಟಿಕ್‌ಟಾಕ್‌ನಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ಗಂಡಸರು ಕಾಶ್ಮೀರಿ ಮಹಿಳೆಯರನ್ನು ಮದುವೆಯಾಗುವುದಾಗಿ ಹೇಳುವ ವಿಡಿಯೋಗಳು ತುಂಬಿದ್ದವು. ಒಬ್ಬ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಯು ಬಹಿರಂಗವಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೀಗೆ (ಕಾಶ್ಮೀರಿ ಯುವತಿಯರೊಂದಿಗೆ ಮದುವೆಯಾಗಿ ಎಂದು) ಕರೆ ಕೊಟ್ಟಿದ್ದರು. ಅದರೊಂದಿಗೆ ಕಾಶ್ಮೀರದಲ್ಲಿ ಆಸ್ತಿ ಖರೀದಿಸುವ ಮಾತುಗಳೂ ಕೇಳಿಬಂದವು, ಅವೆಲ್ಲ, ಮುಸ್ಲಿಂ ಬಹುಸಂಖ್ಯಾತರಾಗಿರುವ ಕಾಶ್ಮೀರದ ಡೆಮಾಗ್ರಫಿಯನ್ನು ಬದಲಿಸುವ ಇನ್ನೂ ವಿಶಾಲವಾದ ’ರಾಷ್ಟ್ರೀಯತೆ’ಯ ಉದ್ದೇಶದೊಂದಿಗೂ ತಳುಕುಹಾಕಲಾಗಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪುರುಷರನ್ನು ಮತ್ತು ಮಹಿಳೆಯರನ್ನು ಕಾರ್ಡನ್ ಆಂಡ್ ಸರ್ಚ್ (ಸಿಎಎಸ್‌ಒ) ಕಾರ್ಯಾಚರಣೆಗೆ ವಿಧಿಸಲಾಗಿತ್ತು. ಭಾರತೀಯ ಭದ್ರತಾಪಡೆಗಳು 90ರ ದಶಕದ ಆರಂಭದಲ್ಲಿ ನಡೆಸಲು ಶುರು ಮಾಡಿದ ಈ ಮಿಲಿಟರಿ ಕಾರ್ಯತಂತ್ರವನ್ನು ಎಲ್ಲೆಡೆ ಟೀಕಿಸಲಾಗಿತ್ತು ಹಾಗೂ ಅದನ್ನು 2017ರಲ್ಲಿ ಮತ್ತೆ ಕಾಶ್ಮೀರ ಕಣಿವೆಯಲ್ಲಿ ಶುರುಮಾಡಲಾಯಿತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಪ್ರಕಾರ, ಈ ಕಾರ್ಡನ್ ಮತ್ತು ಶೋಧದ ಕಾರ್ಯಾಚರಣೆಗಳು ಹಲವಾರು ದೈಹಿಕ ಬೆದರಿಕೆ ಮತ್ತು ಹಲ್ಲೆ, ಖಾಸಗಿತನದ ಉಲ್ಲಂಘನೆ, ಬೇಕಾಬಿಟ್ಟಿ ಮತ್ತು ಕಾನೂನುಬಾಹಿರ ಬಂಧನ, ಸಾಮೂಹಿಕ ಶಿಕ್ಷೆ ಮತ್ತು ಖಾಸಗಿ ಆಸ್ತಿಯ ಧ್ವಂಸ ಒಳಗೊಂಡು ಈ ರೀತಿಯ ಹಲವಾರು ತರಹದ ಮಾನವ ಹಕ್ಕುಗಳ ಉಲ್ಲಂಘನೆಗೆ ಎಡೆ ಮಾಡಿಕೊಡುತ್ತವೆ. 2018ರಲ್ಲಿ ಈ ಕಾರ್ಡನ್ & ಶೋಧ ಕಾರ್ಯಾಚರಣೆ ಮಾಡುವಾಗ ಸಾಮಾನ್ಯ ಜನರ ಆಸ್ತಿ ನಾಶಪಡಿಸುವ 120 ಪ್ರಕರಣಗಳನ್ನು ಜೆಕೆಸಿಸಿಎಸ್ ದಾಖಲಿಸಿದೆ, ಅದರಲ್ಲಿ 31 ಖಾಸಗಿ ಮನೆಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲಾಗಿದೆ ಎಂದು ಹೇಳಿದೆ. 2019ರ ಮೊದಲ ಮೂರು ತಿಂಗಳಲ್ಲೇ ಖಾಸಗಿ ಆಸ್ತಿಯನ್ನು ನಾಶಪಡಿಸಿದ 18 ಪ್ರಕರಣಗಳು ಬೆಳಕಿಗೆ ಬಂದವು. ಹಾಗಾಗಿ ನಾವು ನಮ್ಮ ಘನತೆ, ನಮ್ಮ ಆತ್ಮಗೌರವ ಹಾಗೂ ನಮ್ಮ ಮೂಲನೆಲೆಗಳನ್ನು ಕಳೆದುಕೊಳ್ಳುವ ಅಂಚಿನಲ್ಲಿದ್ದೇವೆ. ಹಾಗಾಗಿ ನಾವು ಚಿಂತಾಕ್ರಾಂತರಾಗಿದ್ದೇವೆ. ಹೀಗೆ ಚಿಂತಾಕ್ರಾಂತರಾಗುವುದರಿಂದಲೇ ಈ ಎಲ್ಲವನ್ನೂ ನಿಲ್ಲಿಸಬಹುದೆಂಬಂತೆ ಚಿಂತಿಸುತ್ತೇವೆ. ಆದರೆ ಈ ರೀತಿಯ ಅಸಹಾಯಕತೆಯೇ ಈಗ ನಮಗೆ ಉಳಿದಿದ್ದು.

ಒಂದು ಕೆಟ್ಟ ಪರಿಸ್ಥಿತಿಯನ್ನು ಸುಧಾರಿಸಲು ಯಾರಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಅಸಹಾಯಕತೆ ಎಂದು ಕರೆಯಲಾಗುತ್ತದೆ.

ಆದರೆ ನಾವು ಪ್ರಯತ್ನ ಪಟ್ಟಿದ್ದೇವೆ. ನನ್ನ ಅಣ್ಣತಮ್ಮಂದಿರು, ಅಕ್ಕತಂಗಿಯರ, ನನ್ನ ತಂದೆತಾಯಿ, ನನ್ನ ಚಿಕ್ಕಪ್ಪ ದೊಡ್ಡಪ್ಪಂದಿರು- ನನ್ನ ನೆಲದ ನನ್ನ ಜನರು. ನಾವು ನಾಗರಿಕ ಪ್ರತಿಭಟನೆಯನ್ನು ಪ್ರಯತ್ನಿಸಿದ್ದೇವೆ. ಒಎಚ್‌ಸಿಎಚ್‌ಆರ್ ವರದಿಯ ಪ್ರಕಾರ, ಜಮ್ಮು ಕಾಶ್ಮೀರದ ಅಧಿಕಾರಿಗಳು ಶಾಂತಿಯುತವಾಗಿ ಒಂದೆಡೆ ಸೇರಿಕೊಳ್ಳುವ ಸ್ವಾತಂತ್ರದ ಹಕ್ಕನ್ನು ಅಡ್ಡಿಪಡಿಸಲು ಮತ್ತು ಪ್ರತ್ಯೇಕತವಾದಿ ಅಥವಾ ಸ್ವಾತಂತ್ರ್ಯಪರ ನಾಯಕರೊಂದಿಗೆ ಒಡನಾಟವನ್ನು ಅಡ್ಡಿಪಡಿಸಲು ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಆ ನಾಯಕರನ್ನು ಪ್ರತಿಭಟನೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಥವಾ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವುದನ್ನು ಅಥವಾ ನಾಯಕತ್ವ ನೀಡುವುದನ್ನು ತಪ್ಪಿಸಲು ಹಲವಾರು ದಿನಗಳ ಮಟ್ಟಿಗೆ ಗೃಹಬಂಧನದಲ್ಲಿ ಇರಿಸಲಾಗುತ್ತದೆ.

ಇನ್ನೂ ಮುಂದೆ ಹೋಗಿ, 2019ರ ಫೆಬ್ರವರಿ 28ರಂದು, ಒಕ್ಕೂಟ ಸರಕಾರವು ಜಮಾತ್-ಎ-ಇಸ್ಲಾಮಿ ಎಂಬ ಧಾರ್ಮಿಕ-ರಾಜಕೀಯ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿತು. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ 1967ರ ಸೆಕ್ಷನ್ 3(1) ಅಡಿಯಲ್ಲಿ ಈ ನಿಷೇಧ ಹೇರಲಾಯಿತು. ರಾಜ್ಯದಲ್ಲಿ ಶಾಲೆಗಳನ್ನು ಮತ್ತು ಮಸೀದಿಗಳನ್ನು ನಡೆಸುವ ಈ ಜಮಾತ್-ಎ-ಇಸ್ಲಾಮಿ ಸಂಘಟನೆಯನ್ನು ’ಪ್ರತ್ಯೇಕತೆ ಆಂದೋಲನವನ್ನು ಹೆಚ್ಚಿಸುವ’ ಪ್ರಯತ್ನ ಮಾಡಿದ್ದಾರೆ ಎಂದು ಹಾಗೂ ಹಿಜ್‌ಬುಲ್ ಮುಜಾಹಿದೀನ್ ಎಂಬ ಸಶಸ್ತ್ರ ಗುಂಪನ್ನು ರಚಿಸಿ, ಅದಕ್ಕೆ ಬೆಂಬಲ ನೀಡಿದೆ ಎಂದು ಐದು ವರ್ಷಗಳ ಕಾಲ ನಿರ್ಬಂಧ ಹೇರಲಾಯಿತು. ನಿರ್ಬಂಧಕ್ಕೆ 196 ದಿನ ಮುನ್ನ ಜಮಾತ್-ಎ-ಇಸ್ಲಾಮಿಯ 150 ಕ್ಕೂ ಹೆಚ್ಚು ನಾಯಕರನ್ನು ಜಮ್ಮು & ಕಾಶ್ಮೀರದ ಅಧಿಕಾರಿಗಳು ಬಂಧಿಸಿದ್ದರು.

ನಮ್ಮ ಪತ್ರಕರ್ತರೂ ಪ್ರಯತ್ನಿಸಿದ್ದಾರೆ. ನಿಮ್ಮ ಟಿವಿ ಪರದೆಗಳ ಮೇಲೆ ಕಾಣುವ ಹುಸಿ ರಾಷ್ಟ್ರೀಯವಾದಿ ಸಂಕಥನವನ್ನು ಎದುರಿಸುವ ಮತ್ತು ಸತ್ಯವನ್ನು ವರದಿ ಮಾಡುವ ಪ್ರಯತ್ನ ಮಾಡಿದ್ದಾರೆ ಆದರೆ ಅವರೂ ಚಿಂತಾಕ್ರಾಂತರಾಗಿದ್ದಾರೆ. ಒಎಚ್‌ಸಿಎಚ್‌ಆರ್ ವರದಿಯ ಪ್ರಕಾರ, ಕಾಶ್ಮೀರ ಕಣಿವೆಯಲ್ಲಿ ನೆಲೆಸಿದ ಬಹಳಷ್ಟು ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಹೇಳಿದ್ದೇನೆಂದರೆ, ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದ ವೇದಿಕೆಗಳು ಅವರ ಪೋಸ್ಟ್‌ಗಳನ್ನು ತೆಗೆದುಹಾಕಿವೆ ಅಥವಾ ಅವರ ಅಕೌಂಟ್‌ಗಳನ್ನು ಸಸ್ಪೆಂಡ್ ಮಾಡುವಂತಹ ಕ್ರಮಗಳನ್ನು ಕೈಗೊಂಡಿವೆ. ಹಾಗೂ ಯುನೆಸ್ಕೋ ಪ್ರಕಾರ, ಕಾಶ್ಮೀರ ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ಜಾಗವಾಗಿದೆ; 1990ರಿಂದ ಕಣಿವೆಯಲ್ಲಿ 21 ಪತ್ರಕರ್ತರು ಜೀವತೆತ್ತಿದ್ದಾರೆ, ಅದರಲ್ಲಿ ಕೆಲವರು ಕ್ರಾಸ್-ಫೈರ್‌ನಲ್ಲಿ ಬಲಿಯಾಗಿದ್ದಾರೆ ಕೆಲವರನ್ನು ಗುರಿ ಇಟ್ಟು ಕೊಲ್ಲಲಾಗಿದೆ.

ಅನಿರ್ದಿಷ್ಟತೆ ಮತ್ತು ಅಸಹಾಯಕತೆಯ ವಿಷವರ್ತುಲಕ್ಕೆ ಕೊನೆಯದಾಗಿ ಬಲ ಸಿಗುವುದು ಯಾವುದೇ ಶಿಕ್ಷೆ ಆಗುವುದಿಲ್ಲ ಎಂಬ ಭರವಸೆಯಿಂದ. ಈ ಭರವಸೆಯು ಎಎಫ್‌ಎಸ್‌ಪಿಎ ಅನ್ನು ಗಟ್ಟಿಗೊಳಿಸುತ್ತದೆ ಹಾಗೂ ಪ್ರಭುತ್ವದ ಕಾನೂನನ್ನು ನಿರಂತರವಾಗಿ ನೆನಪಿಸುತ್ತಲೇ ಇರುತ್ತದೆ.

ಎಎಫ್‌ಎಸ್‌ಪಿಎನ ಸೆಕ್ಷನ್ 7ರ ಪ್ರಕಾರ, ಭದ್ರತಾ ಪಡೆಗಳ ಸಿಬ್ಬಂದಿಯ ಮೇಲೆ ಭಾರತೀಯ ಸರಕಾರದ ಪೂರ್ವಾನುಮತಿ ಅಥವಾ ’ಸ್ಯಾಂಕ್ಷನ್’ ಇಲ್ಲದೇ ಕಾನೂನು ಕ್ರಮ ಜರುಗಿಸುವುದನ್ನು ನಿಷೇಧಿಸುತ್ತದೆ. ಈ ಕಾನೂನು ಜಾರಿಯಾದ ಸುಮಾರು ಮೂರು ವರ್ಷಗಳಲ್ಲಿ, ಒಕ್ಕೂಟ ಸರಕಾರವು ಭದ್ರತಾ ಪಡೆಯ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಒಂದು ಸಲವೂ ಅನುಮತಿ ನೀಡಿಲ್ಲ. ಹಾಗೂ ಭಾರತೀಯ ಸೈನ್ಯವು ಸೆಕ್ಷನ್ 7ಅನ್ನು ಬಳಸಿಕೊಂಡು ತನ್ನ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸ್ವತಂತ್ರ ಫೆಡರಲ್ ತನಿಖಾ ಸಂಸ್ಥೆಗಳನ್ನೂ  ತಡೆದಿದೆ.

ಮಿಲಿಟರಿ ನ್ಯಾಯಾಲಯಗಳು ವಿಚಾರಣೆ ನಡೆಸಿ, ಅದರಲ್ಲಿ ಸೈನಿಕರು ತಪ್ಪಿತಸ್ಥರೆಂದು ಸಾಬೀತಾಗಿ, ತದನಂತರ ಉನ್ನತ ಮಿಲಿಟರಿ ಟ್ರಿಬ್ಯೂನಲ್‌ನಲ್ಲಿ ದೋಷಮುಕ್ತರನ್ನಾಗಿಸಿ ಬಿಡುಗಡೆ ಮಾಡಿರುವ ಪ್ರಕರಣಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ಭಾರತೀಯ ಸೈನ್ಯವು ಪ್ರತಿರೋಧ ತೋರುತ್ತಿದೆ. 2015ರಲ್ಲಿ ಒಬ್ಬ ವ್ಯಕ್ತಿಯು ಮಾಹಿತಿ ಹಕ್ಕಿನ ಮನವಿಗೆ ಸ್ಪಂದಿಸಿ, ಕೇಂದ್ರೀಯ ಮಾಹಿತಿ ಆಯೋಗವು (Central Information Commission) ವಿಚಾರಣೆಯ ವಿವರಗಳನ್ನು ಬಿಡುಗಡೆ ಮಾಡಬೇಕೆಂದು ಆದೇಶಿಸಿತ್ತು ಆದರೆ ಭಾರತೀಯ ಸೈನ್ಯವು 2017ರಲ್ಲಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಆಯೋಗದ ಆದೇಶವನ್ನು ರದ್ದುಗೊಳಿಸಬೇಕಾಗಿ ಮನವಿ ಮಾಡಿತು. ಈ ಪ್ರಕರಣವನ್ನು ಹಲವಾರು ಬಾರಿ ಮುಂದೂಡಲಾಗಿದೆ.

2010ರಲ್ಲಿ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೂರು ಸಾಮಾನ್ಯ ಜನರನ್ನು ಕೊಲ್ಲಲಾಗಿತ್ತು, ಆಗ ಸೈನ್ಯದ ಕೋರ್ಟ್ ಮಾರ್ಷಲ್‌ನಲ್ಲಿ ಐದು ಭಾರತೀಯ ಸೈನ್ಯದ ಸಿಬ್ಬಂದಿಗಳನ್ನು ತಪ್ಪಿತಸ್ಥರೆಂದು 2014ರ ನವೆಂಬರ್ 12 ರಂದು ತೀರ್ಪು ನೀಡಿತ್ತು. ಆದರೆ ಆರ್ಮಡ್ ಫೋರ್ಸಸ್ ಟ್ರಿಬ್ಯೂನಲ್ 2017 ರಲ್ಲಿ ಅವರ ಜೀವಾವಧಿ ಶಿಕ್ಷೆಯನ್ನು ವಜಾಗೊಳಿಸಿ, ಆ ಐವರಿಗೆ ಜಾಮೀನು ನೀಡಿತು. ಟ್ರಿಬ್ಯೂನಲ್‌ನ ಈ ತೀರ್ಮಾನಕ್ಕೆ ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರ ಸರಕಾರವಾಗಲೀ ಆಕ್ಷೇಪಣೆ ಒಡ್ಡಿಲ್ಲ ಅದನ್ನು ಪ್ರಶ್ನಿಸಿಲ್ಲ.

ಪ್ರತಿದಿನವೂ ಆಗುವ ಮಾನವಹಕ್ಕುಗಳ ಉಲ್ಲಂಘನೆಗಳಲ್ಲಿ ಇವು ಕೆಲವು ಘಟನೆಗಳಷ್ಟೇ. ಆದರೆ ಅವೆಲ್ಲವೂ ಒಂದೇ ದಾರಕ್ಕೆ ಪೋಣಿಸಿಕೊಂಡಿವೆ. ಅದುವೇ ಪ್ರಭುತ್ವದ ಅಸಡ್ಡೆ ಮತ್ತು ಉದಾಸೀನತೆ ಹಾಗೂ ಇದು ತಮ್ಮ ಸಮಸ್ಯೆ ಅಲ್ಲವೆಂಬಂತೆ ಪ್ರಭುತ್ವದಲ್ಲಿರುವ ಇತರ ಜನರ ಅಸಡ್ಡೆಯೂ ಕೂಡ. ಅಪರಾಧಗಳಲ್ಲಿ ಮೌನ ಧರಿಸಿದವನನ್ನು ಅದು ಭಾಗೀದಾರನನ್ನಾಗಿ ಮಾಡುತ್ತದೆ. ಇವೆಲ್ಲವೂ ನಮ್ಮ ನೆಲದಲ್ಲಿ ನಮ್ಮನ್ನು ಚಿಂತಾಕ್ರಾಂತವಾಗಿಸುತ್ತವೆ. ಏಕೆಂದರೆ ನಾಳೆ ನಮ್ಮಲ್ಲೇ ಒಬ್ಬನಿಗೆ ಇದೆಲ್ಲ ಆಗಬಲ್ಲದು. ನಾಳೆಯೂ ಆಗಬಹುದು, ನಾಡಿದ್ದೂ ಆಗಬಹುದು ಅಥವಾ ಇಂದು ಅಥವಾ ಈ ಕ್ಷಣದಲ್ಲೇ ಆಗಬಹುದು. ನಾವು ಕೂಗಾಡುತ್ತೇವೆ, ನಾವು ಪ್ರತಿಭಟಿಸುತ್ತೇವೆ ಹಾಗೂ ಹೋರಾಡುತ್ತೇವೆ. ಒಂದು ದಿನ ನ್ಯಾಯ ದೊರಕಬಹುದು ಎಂಬ ನಂಬಿಕೆಯಲ್ಲಿ. ಏಕೆಂದರೆ ನಂಬಿಕೆ ಎಂಬುದು ಸುಲಭವಾಗಿ ಸಿಗುವುದಿಲ್ಲ, ಅದನ್ನು ಪೋಷಿಸಬೇಕಾಗುತ್ತದೆ.

ನಾವು ಪ್ರತಿನಿತ್ಯ ಚಿಂತಾಕ್ರಾಂತರಾಗಿರುವಾಗಲೇ ನಂಬಿಕೆ, ನಿರೀಕ್ಷೆಗಳನ್ನು ಪೋಷಿಸುತ್ತೇವೆ. ನಮ್ಮದೇ ಆದ ನೆಲದಲ್ಲಿ ಘನತೆಯ, ಸ್ವಾತಂತ್ರದ ಮತ್ತು ಗೌರವದ ಜೀವನಕ್ಕಾಗಿ.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಡಾ. ಶಾರಿಕಾ ಅಮೀನ್

ಡಾ. ಶಾರಿಕಾ ಅಮೀನ್
ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಕ್ಲಿನಿಕಲ್ ಸೈಕಾಲಜಿಸ್ಟ್. ಮಾನಸಿಕ ಅರೋಗ್ಯ ಎಲ್ಲರಿಗೂ ಲಭ್ಯವಾಗಬೇಕು ಎನ್ನುವ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ಸಂಸ್ಥೆಯೊಂದಿಗೆ ಸಂಘರ್ಷಗಳ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೀಮ್ಸ್ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶಾರಿಕಾ ಆಹಾರಪ್ರಿಯರೂ ಕೂಡ.


ಇದನ್ನೂ ಓದಿ: ಸಂವಿಧಾನಕ್ಕೆ ಅಗೌರವ ತೋರುವ ಧಾರ್ಮಿಕ ಸ್ವಾತಂತ್ರ ಹಕ್ಕು ಸಂರಕ್ಷಣಾ ವಿಧೇಯಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ| ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ ಭ್ರೂಣ ಲಿಂಗ ಪತ್ತೆ, ಹತ್ಯೆ: ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ದಂಧೆಯಲ್ಲಿ ತೊಡಗಿದ್ದ ಮೂವರನ್ನು ಪೊಲೀಸರು ಭಾನುವಾರ (ಮೇ 5) ರಾತ್ರಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಪಾಂಡವಪುರದ ಆರೋಗ್ಯ ಇಲಾಖೆಯ ಕ್ವಾಟ್ರಸ್‌ನಲ್ಲೇ...