ರೈತರಿಗೆ ಬೇಕಿರುವುದು ನೀರು, ಬೆಲೆ – ಸಾಲ, ವಿಮೆ

0

ಈ ಹೊತ್ತಿನ ಸುದ್ದಿ ಏನೆಂದರೆ ದೆಹಲಿ ಹಾಗೂ ಬೆಂಗಳೂರಿನಲ್ಲಿರುವ ಘನ ಸರಕಾರಗಳು ಪ್ರವಾಹಪೀಡಿತ ರೈತರ ಹಸಿದ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕೋದಕ್ಕಿಂತ `ಪೀಕು ವಿಮೆ’ (ಅಗ್ರಿಕಲ್ಚರ್ ಇನ್ಷುರನ್ಸ್) ನ ಮೊರೆ ಹೊಗತಾರಂತ.

ಇದು ಹೆಂಗ ಅಂದರ, “ಮೂರು ದಿನದಿಂದ ಕೂಳು ಕಂಡಿಲ್ಲ ಯಪ್ಪಾ, ನಮ್ಮ ಗೋಳು ಕಳಿಯೋ ದೊರಿಯೇ” ಅಂತ ರಾಜಾನ್ನ ಕೇಳಾಕ ಹೋದರ, “ನಿಮ್ಮೂರ ಸಾವುಕಾರನ ಮನಿ ಮಗಳ ಲಗ್ನ ಐತಿ, ಅಲ್ಲಿ ಉಣ್ಣು ಹೋಗರಿ” ಅಂದರಂತ, ಹಂಗ. ನಮ್ಮಿಂದ ಗೆದ್ದ ಹೋದ ಸರಕಾರ ಅನ್ನೋದು ತನ್ನ ಜವಾಬುದಾರಿ ನಿಭಾಯಿಸೋದು ಬಿಟ್ಟು ಬ್ಯಾರೆಯವರ ಮ್ಯಾಲೆ ಹಾಕಿದರ ಮಾಡೋದೇನು? ಏನು ಮಾಡಲಿಕ್ಕೆ ಆಗತೆತಿ? ಏನು ಬರತದ ಅದನ್ನ ನೋಡಿಕೋತ ಹೋಗೋದು, ಅಷ್ಟ.

ಕನ್ನಡಮ್ಮನ ಮೆಚ್ಚಿನ ಮಗನಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರು “ರಾಜ್ಯದ ರೈತನಿಗೆ ಬೇಕಾಗಿದ್ದು ಎರಡೇ- ಒಂದು ನೀರು ಮತ್ತೊಂದು ಬೆಲೆ. ಇಷ್ಟು ಸಿಕ್ಕರೆ ಅವನು ಬೇರೆ ಎಲ್ಲ ನೋಡಿಕೊಳ್ಳುತ್ತಾನೆ”, ಅಂತ ಹೇಳುತ್ತಿದ್ದರು. ಈ ಕಾಲದ ಅಗತ್ಯಗಳಿಗೆ ತಕ್ಕಂಗ ಅದಕ್ಕ ನಾವು `ಸುಲಭ ಸಾಲ’ ಹಾಗೂ `ಬೆಳೆ ವಿಮೆ’ ಅಂತ ಸೇರಿಸಿಗೋಬಹುದು.

ಈ ನಾಲ್ಕನ್ನ ರೈತರಿಗೆ ಕೊಡಲಿಕ್ಕೆ ಯಾವುದಾದರೂ ಬಣ್ಣದ, ಝಂಡಾದ, ಘೋಷಣೆಯ, ಪಕ್ಷದ ಸರಕಾರ ಪ್ರಯತ್ನ ಮಾಡ್ಯಾವೇನು? ಅನ್ನುವ ಪ್ರಶ್ನೆಗೆ ಜೋರು ದನಿಯಿಂದ `ಇಲ್ಲ’ ಅನ್ನೋದ ಉತ್ತರ. ಇವಿಷ್ಟರ ಒಳಗ ರಾಜಕಾರಣಿಗಳ ಹೃದಯಕ್ಕ ಹತ್ತಿರವಾಗಿರೋ ವಿಷಯ ಅಂದರ ನೀರು ಕೊಡುವುದು ಅರ್ಥಾತ್ ನೀರಾವರಿ. ಹಿಂಗಾಗಿ ಅದನ್ನ ಕಡೀಕೆ ನೋಡೋಣ. (ರಾಜಕಾರಣಿಗಳಿಗೆ ಹೃದಯ ಅದ ಏನು ಅಂತ ಕೇಳಬ್ಯಾಡಿರಿ, ಅದು ಬ್ಯಾರೆ ವಿಷಯ).

ಮೊದಲಿಗೆ ಬೆಲೆ. ಇದು ಜಾಗತಿಕ ಸಮಸ್ಯೆ. ದೇಶದಿಂದ ದೇಶಕ್ಕ ಸಾಮಾನು ಹಾಗೂ ಸೇವೆ ತಡೆ ಇಲ್ಲದ ಓಡಾಡಬಹುದು ಅಂತ ಹೇಳಿದ ಮ್ಯಾಲೆ ಇದು ಹೆಚ್ಚಾತು.

ಅದರಾಗೂನು ನಮ್ಮ ದೇಶದಾಗ ಮನಮೋಹನಾಮಿಕ್ಸ್ ಶುರು ಆದಮ್ಯಾಲೆ ಅಂತೂ ಇದು ಇನ್ನೂ ಹೆಚ್ಚಾಗೇದ. ಒಂದು ಕಡೆ ಸಮಸ್ಯೆ ಆದರ ಇನ್ನೊಂದು ಕಡೆನೂ ಹಬ್ಬೋ ಹಂಗ. ಒಂದು ಕಡೆ ಗಾಯ ಆದರ ಅದರ ರಸಾ ಸೋರಿ ಇನ್ನೊಂದು ಕಡೆ ಹುಣ್ಣು ಆಗತದಲ್ಲಾ ಹಂಗ. ಇವೆಲ್ಲಾ ನಮ್ಮ ಬಡ ಬೋರೇಗೌಡನಿಗೆ ತಿಳಿಯಂಗಿಲ್ಲಾ. ಯಾವ ದೇಶದಾಗ ಚುನಾವಣೆಗೆ ಮುಂಚೆ ಹುದ್ದರಿಗಳು ನಮ್ಮ ಚಿನ್ನೆ ಕೈ, ಹೂವು ಅಲ್ಲ. ನಮ್ಮ ಕೈ ಹುಲ್ಲಿನ ಹೊರೆ ಹೊತ್ತ ನಿಮ್ಮಂತಾ ಮಹಿಳೆ, ಕೈ ಅಲ್ಲಾ, ಅಂತ ಪ್ರತಿ ಐದು ವರ್ಷಕ್ಕೊಮ್ಮೆ ಹೇಳಿ ಕೊಡಬೇಕಾಗತದೋ, ಆ ದೇಶದಾಗ “ದಕ್ಷಿಣ ಅಮೇರಿಕಾದಾಗ ಬಹಳ ಸೋಯಾ ಬೆಳದಿದ್ದಕ್ಕ ನಮ್ಮಲ್ಲಿ ರೇಟು ಬಿದ್ದದ” ಅಂತ ಹೇಳಲಿಕ್ಕೆ ಆಗತದೇನು?

ಬ್ಯಾರೆ ಬ್ಯಾರೆ ದೇಶದಾಗ ಇದಕ್ಕ ಬ್ಯಾರೆ ಬ್ಯಾರೆ ಉತ್ತರ ಕಂಡುಕೊಂಡಾರ. ನಮ್ಮಲಿನೂ ಪ್ರಯತ್ನ ನಡದಾವು. ಆದರ ಅವು ಲಾಟರಿ ಇದ್ದಂಗ. ಬಂದರ ಬಂತು, ಹೋದರ ಹೋತು. ಬೀಜ ಬಿತ್ತೋಕ್ಕಿಂತಾ ಮುಂಚೆ ಬೆಳೀ ಬೆಲೆ ತಿಳಕೊಳ್ಳೋ ಹಂಗ ಏನಾದರೂ ಮಾಡಲಿಕ್ಕೆ ಸಾಧ್ಯ ಆದರ ಅದರಂಥಾದು ಮತ್ತೊಂದಿಲ್ಲ. ಇಡೀ ಜಗತ್ತಿಗೇ ಹೊಸ ತಂತ್ರಜ್ಞಾನ ಕೊಡೋ ಐಟೀ ಘಟಗಳು, ಇಪ್ಪತ್ತು- ಮೂವತ್ತು ಉಪಗ್ರಹ ಒಟ್ಟಿಗೇ ಹಾರಿಸುವ ಇಸ್ರೋ, ಹತ್ತು ಸಾವಿರ ಜನ ನೂರು ವರ್ಷದೊಳಗ ಮಾಡೋ ಲೆಕ್ಕಾ ಒಂದು ಕ್ಷಣದಾಗ ಮಾಡೋ ಸುಪರ್ ಕಂಪ್ಯೂಟರ್ ತಯಾರು ಮಾಡಿದ ನಮ್ಮ ವಿಜ್ಞಾನಿಗಳು ಇದನ್ನ ಮಾಡಲಾರರೇನು? ಇಂತಹ ದೊಡ್ಡ ಪ್ರಶ್ನೆಗೆ ಉತ್ತರವನ್ನ ದೊಡ್ಡ ಸ್ಥಾನದಾಗ ಇರೋರು ತಮಗ ತಾವ ಕೇಳಿಕೊಳ್ಳಬೇಕು.

ಇನ್ನು ಸಾಲ. ಯಾವ ದೇಶದಲ್ಲಿ 8.5 ಲಕ್ಷ ಸಹಕಾರಿ ಸಂಸ್ಥೆಗಳು ಮತ್ತ 2,000 ಕ್ಕೂ ಹೆಚ್ಚು ಬ್ಯಾಂಕುಗಳು ಇದ್ದಾವೋ ಆ ದೇಶದಲ್ಲಿ ಸಾಲ ಸುಲಭವಾಗಿರದೇ ಕಷ್ಟವಾಗಿರಬಾರದಿತ್ತು. ಆದರ ಅದು ಹಂಗಿಲ್ಲ. ಯಾಕ? ಎಲ್ಲೆ ತಪ್ಪ ಐತಿ? ಸಹಕಾರಿಗಳ ರಾಜಕೀಕರಣ ಅಥವಾ ರಾಜಕಾರಣಿಗಳ ಸಹಕಾರೀಕರಣದಿಂದಾಗಿ ತಪ್ಪಾಗೇತಿ ಅಂತ ಕೆಲವರು ವಾದಸಾಕ ಹತ್ಯಾರ. ಹೌದೇನು? ಇದರಿಂದ ರೈತರು ದಲ್ಲಾಳಿಗಳ ಕೈಯೊಳಗ ಸಿಗಲಾರದ ಹಂಗ ಮಾಡಿ, ರೈತರಿಗೆ ಬೆಲೆ ಸಿಗಬಹುದು ಅನ್ನೋ ಉದ್ದೇಶದಿಂದ ಶುರು ಮಾಡಿದ ಭಾರತೀಯ ಸರಕು ವಿನಿಮಯ ಕೇಂದ್ರ (ಕಮಾಡಿಟಿಸ್ ಎಕ್ಸಚೇಂಜ್) ಯಾಕ ಬೇಕಾಗಿದ ಕೆಲಸ ಮಾಡವಲ್ಲತು? ಅದು ಭಾರತದ ಸರ್ವ ದಲ್ಲಾಳಿಗಳ ಶಕ್ತಿ ಕೇಂದ್ರ ಆಗಿಬಿಟ್ಟಿದ್ದು ಹೆಂಗ ಅಂತ ಯಾರರ ವಿಚಾರ ಮಾಡಾಕ ಹತ್ಯಾರೇನು?

ಭಾರತದಿಂದ ಹೋದ ತಜ್ಞರು ಇಡೀ ವಿಶ್ವಕ್ಕೆ ಇಂಥಾ ವಿಷಯಗಳ ಬಗ್ಗೆ ಸಲಹೆ ಕೊಡಲಿಕ್ಕೆ ಹತ್ಯಾರ. ಹಂಗಾರ ನಮಗ ಯಾಕ ಕೊಟ್ಟಿಲ್ಲ? ಅವರು ನಮ್ಮ ದೇಶದಾಗ ಯಾಕ ನಿಲ್ಲವಲ್ಲರು? ಇಲ್ಲೇ ನಿಂತವರು ಯಾಕ ನಮಗೇನೂ ಹೇಳವಲ್ಲರು? ಇದರ ಬಗ್ಗೆ ಸಹ ಚರ್ಚೆ ಆಗಬೇಕಾಗೇದ.

ಇನ್ನು ಬೆಳೆ ವಿಮೆ, ಕೃಷಿ ವಿಮೆ ಅಥವಾ ಪೀಕು ವಿಮೆ. ಬೆಳೆ ವಿಮೆ ಅಂತಿದ್ದದ್ದನ್ನ ಕೇಂದ್ರದ ಅಧಿಕಾರಿಗಳು ಕೃಷಿ ವಿಮೆ ಅಂತ ಮಾಡ್ಯಾರ. ಯಾಕೋ ಗೊತ್ತಿಲ್ಲ. ಹಂಗ ಜನತಾ ಜನಾ ಆರ್ ದನಾ ರಿಗೆ ಗೊತ್ತಾಗದಂಥಾವು ಈ ಸರಕಾರದಾಗ ಭಾಳ ಅವ. ಹೋಗಲಿ ಬಿಡರಿ.

ಖರೆ ಅಂದರೆ ಅದು ಪೀಕು ವಿಮೆ. ಅಂದರ ರೈತರ ಹತ್ತರ ರೊಕ್ಕ ಪೀಕಿ ಆಮ್ಯಾಲೆ ಕೇಳಾಕ ಹೋದರ ತೊಗೋರಿ ಈ ಪೀಪೀ, ಊದರಿ ಪುಂಗಿ ಅಂತ ಕೊಡತಾರಲ್ಲಾ ಅದಕ್ಕ.

ರೈತರ ಕಲ್ಯಾಣ ಆಗಬೇಕು ಅಂತ ಮಾಡಿದ ಈ ಸಂಸ್ಥಾ ರೈತರನ್ನು ಬಿಟ್ಟು ವಿಮಾ ಕಂಪನಿಗಳ ಕಲ್ಯಾಣ ಕ್ಕ ನಿಂತು ಬಿಟ್ಟದ್ದು ಯಾಕ?

ಮೊದಲನೇದಾಗಿ ನೂರರಾಗ ಬರೇ ಮೂವತ್ತು ಮಂದಿ ಅಷ್ಟ ವಿಮಾದಾಗ ಬರತಾರ. ಅದೂ ಅವರು ಶೇಕಡಾ ಒಂದು ರೊಕ್ಕ ಕೊಟ್ಟಿದ್ದರ. ಇಲ್ಲಾ ಸಾಲಾ ತೊಗೊಂಡಿದ್ದರ. ಇನ್ನ ಅದರ ಪರಿಹಾರ ಅವರ ನಷ್ಟ ಭರ್ತಿಗೆ ಸಾಕಾಗಂಗಿಲ್ಲ. ಮುಂದಿನ ಪೀಕಿನ ಖರ್ಚು ಕಳಿಲಿಕ್ಕೆ ಅವರಿಗೆ ಸಾಕಾಗತದ ಅಷ್ಟ. ವಿಮಾ ಕಂಪನಿಗಳು ನೂರು ರೂಪಾಯಿ ರೈತರು ಹಾಗೂ ಸರಕಾರದ ಕಡೆ ಇಸಗೊಂಡು 73 ರೂಪಾಯಿ ರೈತರಿಗೆ ಕೊಟ್ಟಾವು. ಅತ್ಯಂತ ಘೋರ ಬರಗಾಲ, ಪ್ರವಾಹದಾಗ ಸಹ ಅವರು ಕೊಡೋ ಮೊತ್ತ ಹೆಚ್ಚಾಗಿಲ್ಲ. ಇನ್ನ ನಮ್ಮ ಸರಕಾರ ಕಣ್ಣೀರಿನ್ಯಾಗ ಕೈ ತೊಳಕೊಂಡು ಗೋವಾಕ್ಕ ದುಡೀಲಿಕ್ಕೆ ಹೊಂಟಿರೋ ನಮ್ಮ ಉತ್ತರ ಕರ್ನಾಟಕದವರಿಗೆ ಅವರ ಬೆಳೆ ನಷ್ಟ ಪರಿಹಾರ ಮಾಡದೇ ಕಂಪನಿಗಳಿಗೆ ಹೇಳಿದರ ಯಾರನ್ನು ಅನ್ನೋಣು, ಯಾರನ್ನ ಬಿಡೋಣು?

ನೀರಾವರಿಯ ಬಗ್ಗೆ ಹೇಳಿದಷ್ಟೂ ಉಳೀತದ. ಅರವತ್ತರ ದಶಕದಾಗ ಇರೋ ಸಂಪನ್ಮೂಲ ಎಲ್ಲಾ ಡ್ಯಾಮುಗಳಿಗೆ ಹಾಕ್ರಿ. ಒಂದು ಸತೆ ನೀರಾವರಿ ಬಂತೂ ಅಂದರ ರೈತರು ಸುಬಧ್ರರಾಗತಾರ, ನಾಡು ಸುಭಿಕ್ಷ ಆಗತದ, ಬಡತನ ಹೋಗಿರತದ, ನಮ್ಮ ಆದಾಯನೂ ಹೆಚ್ಚು ಆಗತದ, ಇದ್ದ ಸಂಪನ್ಮೂಲ ಬ್ಯಾರೆ ಕಡೆ ಹಾಕಬಹುದು, ಅಂತ ನಮ್ಮ ದೇಶದ ಆರ್ಥಿಕ ತಜ್ಞರು ಹಾಗೂ ಪಂಚವಾರ್ಷಿಕ ಯೋಜನೆಗಳ ಕರ್ತಾರರು ನಿರ್ಧಾರ ಮಾಡಿದರಂತ. ಅದಕ್ಕ ಇತರ ಮೂಲಸೌಕರ್ಯಗಳಿಗಿಂತ ನೀರಾವರಿಗೆ ಹೆಚ್ಚಿನ ಬಜೆಟ್ಟಿನ ಬೆಂಬಲ ಸಿಗ್ತು. ಲಗೂ ನಿರ್ಣಯ ತಗೋಳೋ ಅನುಕೂಲ ಇರಲಿ ಅಂತ ಹೇಳಿ ನೀರಾವರಿ ಇಲಾಖೆ ವಿಕೇಂದ್ರೀಕರಣ ಆಗಲಿಲ್ಲ. ಆದರ 50 ವರ್ಷಗಳ ಅಂಧಾದುಂದಿ ಖರ್ಚಿನ ನಂತರ ಏನಾಗೇದ? ನೀರಾವರಿ ಪ್ರದೇಶ ಕೇವಲ 10 ಶೇಕಡಾ ಹೆಚ್ಚಾಗೇದ. ದೊಡ್ಡ ನೀರಾವರಿ ಯೋಜನೆಗಳಿಂದ ಮುಳುಗಡೆ, ಪ್ರವಾಹ ಮುಂತಾದ ಸಮಸ್ಸೆಗಳು ಹೆಚ್ಚಾಗ್ಯಾವು. ಬಡವರ ಬಸಿದ ಸುಂಕದಿಂದ ಕಟ್ಟಿಡ ಡ್ಯಾಮಿನ್ಯಾಗ ಹೂಳು ಹಾಗೂ ಸ್ಥಳೀಯ ರಾಜಕಾರಣಿ ರಾಜ್ಯ- ರಾಷ್ಟ್ರಮಟ್ಟಕ್ಕೆ ಬೆಳೆದ ರಹಸ್ಯದ ಧೂಳು ಮಾತ್ರ ತುಂಬೇದ. ರೈತರು ಅಭದ್ರರಾಗಿ, ನಾಡು ದುರ್ಭಿಕ್ಷ ವಾಗೇ ಉಳಿದದ.

ಸಾವಿರಾರು ಎಕರೆ ಮುಳುಗಿಸಿ ನೂರಾರು ಎಕರೆಗೆ ನೀರು ಹರಿಸುವ ದೊಡ್ಡ ಯೋಜನೆಗಳ ಮೇಲೆ ಕಣ್ಣು ಹರಿಸದೇ ಜಪಾನು ದೇಶದಂಗ ಕಮ್ಮೀ ಖರ್ಚಿನ ಸಣ್ಣಸಣ್ಣ ಯೋಜನೆಗಳನ್ನ, ಸ್ಥಳೀಯ ರೈತರ ಮೆಹರಬಾನಿಕೆಯೊಳಗ ನೀಟಾಗಿ ಮಾಡಿದ್ದರ ಹಳ್ಳೀ ಆರ್ಥಿಕತೆ ಕುಂಡದಾಗ ಹೂಬೆಳೆಸಿದಂಗ ನೀಟಾಗಿ ಇರ್ತಿತ್ತು. ಮರಿ ಪುಢಾರಿಗಳು ತಿಮಿಂಗಿಲುಗಳಾಗುವ ಸಾಧ್ಯತೆ ಕಮ್ಮಿ ಇರ್ತಿತ್ತು. ಆ ಅವಕಾಶ ಕಳಕೊಂಡೇವಿ ಅನ್ನಸಂಗಿಲ್ಲೇನು, ಮನೋಲ್ಲಾಸಿನಿ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here