ಜೂನ್ 5 ವಿಶ್ವ ಪರಿಸರ ದಿನ. ಈ ದಿನವನ್ನು ಸಸಿ ನೆಟ್ಟು ಆಚರಿಸುವುದು ಜಾಗತಿಕವಾಗಿ ಇರುವ ವಾಡಿಕೆಯಾಗಿದೆ. ಆದರೆ, ಇದರ ಹೊರತಾಗಿ ಪರಿಸರಕ್ಕೆ ಅಥವಾ ಭೂಮಿಗೆ ಸವಾಲಾಗಿರುವ ಹವಾಮಾನ ಬದಲಾವಣೆ, ಪ್ಲಾಸ್ಟಿಕ್‌ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ನಾವು ಚರ್ಚಿಸಬೇಕಿದೆ. ಪರಿಹಾರ ಕಂಡುಕೊಳ್ಳಬೇಕಿದೆ.
ಹವಾಮಾನ ಬದಲಾವಣೆ ಭೂಮಿಗೆ ಎದುರಾಗಿರುವ ದೊಡ್ಡ ಸವಾಲು ಎಂಬುವುದು ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಅದನ್ನು ಎದುರಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಾಗತಿಕ ತಾಪಮಾನದ ಜೊತೆಗೇ ಪ್ಲಾಸ್ಟಿಕ್ ಪರಿಸರಕ್ಕೆ ಸವಾಲಾಗಿದೆ. ಈ ಸಂಬಂಧ ಕೆಲವು ಕ್ರಮಗಳನ್ನು ಕೈಗೊಂಡರೂ, ಪ್ಲಾಸ್ಟಿಕ್‌ನ ದುಷ್ಪರಿಣಾಮಗಳ ಆಳವನ್ನು ಜನರು ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ.
‘ಪ್ಲಾಸ್ಟಿಕ್’ ಮಣ್ಣಿನಲ್ಲಿ ಕೊಳೆತು ಹೋಗುವುದಿಲ್ಲ. ಆದ್ದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ಸಾಮಾನ್ಯ ಸಂಗತಿ. ಆದರೆ, ಪ್ಲಾಸ್ಟಿಕ್‌ನ ದುಷ್ಪರಿಣಾಮ ನಾವು-ನೀವು ಊಹಿಸಿದಷ್ಟು ಸರಳವಾಗಿಲ್ಲ. ಅದೊಂದು ದೈತ್ಯ ಸಮಸ್ಯೆ. ಬಹುರೀತಿಯಲ್ಲಿ ಪ್ಲಾಸ್ಟಿಕ್ ಸಮಸ್ಯೆಗಳನ್ನು ನಾವು ವಿವರಿಸಬಹುದು. ಹಾಗಾಗಿಯೇ ವಿಶ್ವಸಂಸ್ಥೆ ಪ್ಲಾಸ್ಟಿಕ್ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಸಮಿತಿ ರಚಿಸಿ ಅಧಿವೇಶನಗಳನ್ನು ಆಯೋಜಿಸುತ್ತಿರುವುದು.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP)ಪ್ರಕಾರ, ಪ್ರತಿದಿನ 2 ಸಾವಿರ ಕಸ ಸಾಗಿಸುವ ಟ್ರಕ್‌ಗಳಷ್ಟು ಪ್ಲಾಸ್ಟಿಕ್‌ಅನ್ನು ಸಾಗರ, ಸರೋವರ, ನದಿ, ಹಳ್ಳ, ಕೊಳ್ಳ, ತೊರೆಗಳಿಗೆ ಸುರಿಯಲಾಗುತ್ತಿದೆ. ಪ್ರತಿವರ್ಷ 19-20 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವು ಜಲಮೂಲಗಳನ್ನು ಸೇರುತ್ತಿದೆ. ಅದು ನೀರನ್ನು ಮಲಿನಗೊಳಿಸುವುದರ ಜೊತೆಗೆ, ಅಲ್ಲಿನ ಜೀವರಾಶಿಗಳ ಸಾವಿಗೆ ಕಾರಣವಾಗುತ್ತಿದೆ. ಆಹಾರ ಸರಪಳಿಯ ಮೇಲೆ ಪರಿಣಾಮ ಬೀರುತ್ತಿದೆ.
ಪ್ಲಾಸ್ಟಿಕ್‌ನಿಂದ ಭೂಮಾಲಿನ್ಯ, ಪರಿಸರದ ಅವನತಿ, ಜಲಚರಗಳ ಸಾವು, ಭೂಮಿಯ ಮೇಲಿನ ವನ್ಯಜೀವಿಗಳ ಸಾವು, ಮೈಕ್ರೋಪ್ಲಾಸ್ಟಿಕ್‌ಗಳ ಉತ್ಪಾದನೆ, ಆರ್ಥಿಕ ವೆಚ್ಚ, ರೋಗ ಹರಡುವಿಕೆ, ಅಂತರ್ಜಲ ಮಟ್ಟದ ಕುಸಿತ, ಗಿಡ-ಮರಗಳ ಬೆಳವಣಿಗೆಗೆ ಅಡ್ಡಿ, ಮಣ್ಣಿನ ಫಲವತ್ತತೆ ಕುಸಿತ, ನೀರಿನ ಹರಿಯುವಿಕೆಗೆ ತಡೆ, ರೋಗಗಳು ಹರಡುವಿಕೆ, ವಿಷಕಾರಿ ಅನಿಲ ಉತ್ಪಾದನೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಜಲಮೂಲಗಳು, ಜಲಚರಗಳ ಮೇಲೆ ಪ್ಲಾಸ್ಟಿಕ್ ಬೀರುತ್ತಿರುವ ದುಷ್ಪರಿಣಾಮ, ಒಟ್ಟಾರೆ ಪ್ಲಾಸ್ಟಿಕ್ ಸಮಸ್ಯೆಯ ಮುಂದುವರಿದ ಭಾಗ. ವಿಶ್ವಸಂಸ್ಥೆ ಈಗ ಈ ವಿಚಾರದಲ್ಲಿ ಹೆಚ್ಚು ಗಮನ ಹರಿಸುತ್ತಿದೆ. ಜಲಮೂಲಗಳಿಗೆ ಪ್ಲಾಸ್ಟಿಕ್ ಸೇರಿದರೆ ಅದು ಕಲುಷಿತಗೊಳ್ಳುತ್ತದೆ, ಜೊತೆಗೆ ಅಮೂಲ್ಯ ನೀರು ಬಳಸಲು ಯೋಗ್ಯವಲ್ಲದಾಗುತ್ತದೆ. ಆ ಜಲಮೂಲದ ಸಾವಿರಾರು ಜೀವಿಗಳು ಸಾಯುತ್ತವೆ, ಇಲ್ಲವೇ ಸಂಕಷ್ಟಕ್ಕೆ ಸಿಲುಕುತ್ತದೆ. ಹರಿಯುವ ನೀರಾದರೆ ಪ್ಲಾಸ್ಟಿಕ್ ಸಿಲುಕಿಕೊಂಡು ತಡೆ ಉಂಟಾಗುತ್ತದೆ. ಇದರಿಂದ ಮಳೆಗಾಲದಲ್ಲಿ ಪ್ರವಾಹ ಕೂಡ ಉಂಟಾಗಬಹುದು. ಹೀಗೆ ಪ್ಲಾಸ್ಟಿಕ್ ಯಾವ ರೀತಿಯೆಲ್ಲೆಲ್ಲಾ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ನಾವು ತಿಳಿದರೆ ಸಮಸ್ಯೆಯ ಆಳ ಇನ್ನಷ್ಟು ಅರಿವಿಗೆ ಬರುತ್ತದೆ.
ಪ್ಲಾಸ್ಟಿಕ್ ದುಪ್ಪರಿಣಾಮವನ್ನು ಮನುಷ್ಯ, ವನ್ಯಜೀವಿ, ಪರಿಸರ ಈ ಮೂರು ವಿಧಗಳಲ್ಲಿ ವಿಂಗಡಿಸಿ ನೋಡಿದಾಗ, ಹಲವು ಬಗೆಯ ಸಮಸ್ಯೆಗಳನ್ನು ನಾವು ಕಾಣಬಹುದು. ಈ ರೀತಿಯೂ ಪ್ಲಾಸ್ಟಿಕ್ ಸಮಸ್ಯೆ ತಂದಿಡಬಹುದೇ? ಎಂದು ನಮಗೆ ನಾವೇ ಪ್ರಶ್ನಿಸುವಷ್ಟು ಆಳವಾಗಿದೆ ಪ್ಲಾಸ್ಟಿಕ್ ಗಂಡಾಂತರ.
ಮಾನವ
ಪ್ಲಾಸ್ಟಿಕ್ ಜಲಮೂಲಗಳ ನೈರ್ಮಲ್ಯವನ್ನು ಹಾಳುಗೆಡವುತ್ತದೆ. ನೀರಿನ ಹರಿಯುವಿಕೆಗೆ ತಡೆಯೊಡ್ಡುತ್ತದೆ. ವಾಣಿಜ್ಯ ಮತ್ತು ಮನರಂಜನಾ ಮೀನುಗಾರಿಕೆಯನ್ನು ಅಡ್ಡಿಪಡಿಸುತ್ತದೆ. ಮೈಕ್ರೋಪ್ಲಾಸ್ಟಿಕ್‌ಗಳು ಮಾನವನ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುತ್ತವೆ. ಪ್ಲಾಸ್ಟಿಕ್‌ನಲ್ಲಿ ಕಂಡುಬರುವ ಅನೇಕ ರಾಸಾಯನಿಕಗಳು ಅಂತಃಸ್ರಾವಕ ವಿಘಟಕಗಳಾಗಿವೆ, ಇದು ಹಾರ್ಮೋನುಗಳ ಅಸಮತೋಲನ, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಅನ್ನು ಸಹ ಉಂಟುಮಾಡಬಹುದು.
ಅಲ್ಲದೆ, ಮೈಕ್ರೋಪ್ಲಾಸ್ಟಿಕ್‌ಗಳು ಬಿಸ್ಫೆನಾಲ್ ಎ (ಬಿಪಿಎ) ಮತ್ತು ಥಾಲೇಟ್‌ಗಳಂತಹ ಹಾನಿಕಾರಕ ರಾಸಾಯನಿಕಗಳನ್ನು ಹೊರಹಾಕಬಹುದು. ಈ ಎರಡೂ ರೀತಿಯ ರಾಸಾಯನಿಕಗಳು ಹಾರ್ಮೋನು ಸಮಸ್ಯೆ ಉಂಟುಮಾಡಬಹುದು. ಬಿಸ್ಫೆನಾಲ್‌ಗಳು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ ಎಂದು ನದಿಗಳ ರಕ್ಷಣೆಯಲ್ಲಿ ತೊಡಗಿರುವ ’ಪೊಟೊಮ್ಯಾಕ್ ರಿವರ್ ಕೀಪರ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಹೇಳುತ್ತದೆ.
ವನ್ಯಜೀವಿ
ಪ್ಲಾಸ್ಟಿಕ್ ಸಮುದ್ರದಂತಹ ಜಲಮೂಲಗಳನ್ನು ಸೇರಿಕೊಂಡರೆ, ಅಲ್ಲಿನ ಸುಮಾರು 86% ಸಮುದ್ರ ಆಮೆಗಳು, 44% ಸಮುದ್ರ ಪಕ್ಷಿಗಳು ಮತ್ತು 43% ಸಮುದ್ರ ಸಸ್ತನಿಗಳು ಪ್ರತಿಕೂಲ ಪರಿಣಾಮವನ್ನು ಎದುರಿಸುತ್ತವೆ. ಪ್ಲಾಸ್ಟಿಕ್‌ನಿಂದ ವನ್ಯಜೀವಿಗಳಿಗೆ ಸಾಮಾನ್ಯ ಅಪಾಯವೆಂದರೆ, ಮಾಲಿನ್ಯಕಾರಕಗಳ ಸೇವನೆ ಮತ್ತು ಸಿಕ್ಕಿಹಾಕಿಕೊಳ್ಳುವಿಕೆ. ಪ್ರಾಣಿಗಳು ಪ್ಲಾಸ್ಟಿಕ್ ಕಣಗಳನ್ನು ಸೇವಿಸಿದಾಗ, ಕಣಗಳು ಅಂಗಹಾನಿಯನ್ನು ಉಂಟುಮಾಡುತ್ತದೆ. ಅವುಗಳ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್‌ಗೆ ದೇಹ ಸಿಲುಕಿ ಅನೇಕ ಜೀವಿಗಳು ನರಕಯಾತನೆ ಅನುಭವಿಸಿ ಸಾಯುತ್ತವೆ. ಕೆಲವೊಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಜಲಚರಗಳು ಸಿಕ್ಕಿಹಾಕಿಕೊಳ್ಳುವ ಪ್ಲಾಸ್ಟಿಕ್ ಬಿಡಿಸಲೆಂದೇ ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಈ ಕುರಿತ ವಿಡಿಯೋಗಳನ್ನು ಗಮನಿಸಿರಬಹುದು.
ಪರಿಸರ
ಪ್ಲಾಸ್ಟಿಕ್ ಪರಿಸರದಲ್ಲಿ ಸೇರಿಕೊಂಡರೆ, ಅದು ಮಣ್ಣಿನಲ್ಲಿ ಹುದುಗಿಹೋಗಬಹುದು. ಆದರೆ, ಕೊಳೆಯುವುದಿಲ್ಲ. ಮರ-ಗಿಡಗಳ ಬೇರನ್ನು ಪ್ಲಾಸ್ಟಿಕ್ ಸುತ್ತಿಕೊಂಡರೆ ಬೆಳವಣಿಗೆ ಕುಂಠಿತವಾಗುತ್ತದೆ. ಹುಲ್ಲಿನಂತಹ ನೆಲದಲ್ಲಿ ಹರಡಿಕೊಳ್ಳುವ ಸಣ್ಣಪುಟ್ಟ ಸಸಿಗಳ ಮೇಲೆ ಪ್ಲಾಸ್ಟಿಕ್ ಬಿದ್ದರೆ, ಸೂರ್ಯನ ಬೆಳಕು ಬೀಳದೆ ಸಸಿಗಳು ಸತ್ತು ಹೋಗಬಹುದು. ಕೇವಲ ಸಸಿ ಸಾಯದೆ ಅದನ್ನು ಅವಲಂಬಿಸಿರುವ ಸಾವಿರಾರು ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ. ಈ ಮೂಲಕ ಪರಿಸರದ ಸಮತೋಲನ ಅಲ್ಲೋಲಕಲ್ಲೋಲವಾಗುತ್ತದೆ. ಪರಿಸರದಲ್ಲಿ ಪ್ಲಾಸ್ಟಿಕ್ ಸೇರಿಕೊಂಡರೆ, ಅದರ ವಿಷಕಾರಿ ಅಂಶಗಳನ್ನು ಸಸಿಗಳು ಹೀರಿಕೊಂಡು ನಾವು ಸೇವಿಸುವ ನೈಸರ್ಗಿಕ ಆಹಾರ ವಿಷವಾಗಿ ಪರಿವರ್ತನೆಯಾಗಬಹುದು.
ವಿಶ್ವ ಆರೋಗ್ಯ ಅಧಿವೇಶನ ಮತ್ತು ಪ್ಲಾಸ್ಟಿಕ್
ಮೇ 2023ರಲ್ಲಿ ಜಿನೀವಾದಲ್ಲಿ ನಡೆದ 76ನೇ ವಿಶ್ವ ಆರೋಗ್ಯ ಅಧಿವೇಶನ (WHA76)ದಲ್ಲಿ, ಪೆರು, ಕೆನಡಾ, ಕೊಲಂಬಿಯಾ, ಈಕ್ವೆಡಾರ್, ಎಲ್ ಸಾಲ್ವಡಾರ್, ಮೆಕ್ಸಿಕೊ, ಮೊನಾಕೊ, ಸ್ವಿಟ್ಜರ್ಲೆಂಡ್, ಉರುಗ್ವೆ, ಮತ್ತು ಯುರೋಪಿಯನ್ ಯೂನಿಯನ್ ಮತ್ತು ಅದರ ಸದಸ್ಯ ರಾಷ್ಟ್ರಗಳು ಮಾನವ ಆರೋಗ್ಯದ ಮೇಲೆ ರಾಸಾಯನಿಕಗಳು, ತ್ಯಾಜ್ಯ ಮತ್ತು ಮಾಲಿನ್ಯದ ಪ್ರಭಾವದ ಕುರಿತು ನಿರ್ಣಯವನ್ನು ಮಂಡಿಸಿದೆ. ಅಂತರ್‌ಸರ್ಕಾರಿ ಒಡಂಬಡಿಕೆ ಸಮಿತಿ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಗಳು ಪ್ಲಾಸ್ಟಿಕ್ ದುಷ್ಪರಿಣಾಮ ತಡೆಯಲು ತೆಗೆದುಕೊಂಡ ಕ್ರಮಗಳನ್ನು ಪುನರುಚ್ಚರಿಸಿದೆ. ಅವುಗಳನ್ನು ಇನ್ನಷ್ಟು ಬಲಪಡಿಸುವಂತೆ ಕೋರಿದೆ.
ಭಾರತ ಮತ್ತು ಪ್ಲಾಸ್ಟಿಕ್
ಜೂನ್ 5, 2018 ವಿಶ್ವ ಪರಿಸರ ದಿನದಂದು, 2022ರ ವೇಳೆಗೆ ಭಾರತವು ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕೊನೆಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಮೂರು ವರ್ಷಗಳ ನಂತರ, ಆಗಸ್ಟ್ 12, 2021ರಂದು, ಗುರುತಿಸಲಾದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ತಿದ್ದುಪಡಿ ನಿಯಮಗಳು- 2021ರ ಅಡಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MOEFCC)ನಿಷೇಧ ಹೇರಿತು. ಜುಲೈ 1, 2022ರಿಂದ ಈ ಆದೇಶ ಜಾರಿಗೆ ಬಂತು. ಮಾಧ್ಯಮಗಳು ಸರ್ಕಾರದ ಆದೇಶವನ್ನು ದೊಡ್ಡದಾಗಿ ಸುದ್ದಿ ಮಾಡಿದವು. ಅಸಲಿಗೆ, ಸರ್ಕಾರ 19 ಆಯ್ದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಮಾತ್ರ ನಿಷೇಧಿಸಿದೆ. ಇನ್ನುಳಿದವು ಈಗಲೂ ಚಾಲ್ತಿಯಲ್ಲಿದೆ. 2021ರ ಆದೇಶದಲ್ಲಿ ಸರ್ಕಾರ ಮೊದಲ ಬಾರಿಗೆ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ವ್ಯಾಖ್ಯಾನಿಸಿದೆ. ಅದರ ಪ್ರಕಾರ, “ಏಕ ಬಳಕೆಯ ಪ್ಲಾಸ್ಟಿಕ್ ಎಂದರೆ, ವಿಲೇವಾರಿ ಮಾಡುವ ಮತ್ತು ಮರುಬಳಕೆ ಪ್ರಕ್ರಿಯೆಗೆ ಒಳಪಡಿಸುವ ಮೊದಲು ಒಮ್ಮೆ ಮಾತ್ರ ಬಳಸುವ ಪ್ಲಾಸ್ಟಿಕ್ ಎಂದಿದೆ. ಇದು ಅತಿ ಸರಳೀಕೃತ ವ್ಯಾಖ್ಯಾನವಾಗಿದೆ, ಏಕೆಂದರೆ ಇದು ಅಗತ್ಯ ಮತ್ತು ಅನಗತ್ಯ ಪ್ಲಾಸ್ಟಿಕ್‌ಗಳ ನಡುವೆ ಅಥವಾ ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ಗಳ ನಡುವೆ ವ್ಯತ್ಯಾಸವನ್ನು ತೋರಿಸಿಲ್ಲ.
ಅನಗತ್ಯ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ಗಳನ್ನು ಆದ್ಯತೆಯ ಮೇಲೆ ಹಂತಹಂತವಾಗಿ ತೆಗೆದುಹಾಕಬೇಕಾಗಿದೆ. ಗಮನಾರ್ಹ ಪ್ರಮಾಣದ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ಗಳು ಸಮಸ್ಯಾತ್ಮಕವಾಗಿವೆ. ಉದಾಹರಣೆಗೆ, ಬಹು-ಪದರದ ಪ್ಯಾಕೇಜಿಂಗ್, ಆ ಪ್ಲಾಸ್ಟಿಕ್‌ಗಳಿಗೆ ನಮ್ಮಲ್ಲಿ ಪರ್ಯಾಯಗಳಿಲ್ಲ ಎಂಬ ತರ್ಕದ ಆಧಾರದ ಮೇಲೆ ಇನ್ನೂ ಬಳಕೆಗೆ ಅನುಮತಿಸಲಾಗಿದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ನಿರ್ದೇಶನದ ಅಡಿಯಲ್ಲಿ ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (ಡಿಸಿಪಿಸಿ) ರಚಿಸಿರುವ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಕುರಿತ ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಹಂತಹಂತವಾಗಿ ಕೊನೆಗೊಳಿಸಬೇಕಾದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಗುರುತಿಸುವಿಕೆಯನ್ನು ಮಾಡಲಾಗಿದೆ. ಒಂದು ನಿರ್ದಿಷ್ಟ ರೀತಿಯ ಏಕ-ಬಳಕೆಯ ಪ್ಲಾಸ್ಟಿಕ್‌ನ ಉಪಯುಕ್ತತೆ ಸೂಚ್ಯಂಕ ಮತ್ತು ಅದು ಪರಿಸರದ ಮೇಲೆ ಬೀರುವ ಪ್ರಭಾವ ಎಂಬ ಎರಡು ಅಂಶಗಳನ್ನು ಮುಂದಿಟ್ಟುಕೊಂಡು ತಜ್ಞರ ಸಮಿತಿ ವರದಿ ತಯಾರಿಸಿದೆ. ಆದರೆ, ವರದಿಯಲ್ಲಿ ಉಪಯುಕ್ತತೆ ಸೂಚ್ಯಂಕದಲ್ಲಿ ಕಡಿಮೆ ಮತ್ತು ಪರಿಸರ ಪ್ರಭಾವದ ಮೇಲೆ ಹೆಚ್ಚು ಪರಿಣಾಮ ಬೀರುವ ಕೆಲವು ಪ್ಲಾಸ್ಟಿಕ್ ವಸ್ತುಗಳನ್ನು ಹಂತಹಂತವಾಗಿ ತೆಗೆದುಹಾಕಲು ಪರಿಗಣಿಸಲಾಗಿಲ್ಲ.
ಇಯರ್ ಬಡ್ಸ್, ಬಲೂನ್‌ಗಳಿಗೆ ಅಂಟಿಸುವ ಪ್ಲಾಸ್ಟಿಕ್ ಸ್ಟಿಕ್ಸ್, ಪ್ಲಾಸ್ಟಿಕ್ ಬಾವುಟ, ಕ್ಯಾಂಡಿ ಸ್ಟಿಕ್ಸ್, ಐಸ್‌ಕ್ರೀಂ ಕಡ್ಡಿಗಳು, ಪಾಲಿಸ್ಟೈರೇನ್ (ಥರ್ಮೊಕೋಲ್), ಪ್ಲಾಸ್ಟಿಕ್ ತಟ್ಟೆ, ಲೋಟಗಳು, ಪ್ಲಾಸ್ಟಿಕ್ ರೂಪದ ಗಾಜುಗಳು, ಫೋರ್ಕ್‌ಗಳು, ಚಮಚಗಳು, ಸ್ಟ್ರಾಗಳು, ಟ್ರೇಗಳು, ಚಾಕುಗಳು, ಸಿಹಿತಿನಿಸುಗಳ ಡಬ್ಬಿಗಳಲ್ಲಿ ಬಳಸುವ ಪ್ಯಾಕೇಜಿಂಗ್ ಫಿಲಂಗಳು, ಆಹ್ವಾನಪತ್ರಿಕೆಗಳು, ಸಿಗರೇಟು ಪ್ಯಾಕೇಟ್‌ಗಳು, 100 ಮೈಕ್ರಾನ್‌ಗಿಂತ ಕಮ್ಮಿ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು ಮತ್ತು ಸ್ಟಿಕರ್‌ಗಳನ್ನು ಏಕ ಬಳಕೆಯ ಪ್ಲಾಸ್ಟಿಕ್ ಎಂದು ಪರಿಗಣಿಸಿ ನಿಷೇಧಿಸಲಾಗಿದೆ.
ಭಾರತದಲ್ಲಿ ನಿಷೇಧಿತ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳ ವಾರ್ಷಿಕ ಪಾಲು ವರ್ಷಕ್ಕೆ ಸರಿಸುಮಾರು 0.6 ಮಿಲಿಯನ್ ಟನ್‌ಗಳು. ಈ ಮೂಲಕ ಯುಎಸ್ ಮತ್ತು ಚೀನಾ ಬಳಿಕ ಭಾರತ ಅತೀಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುವ ರಾಷ್ಟ್ರವೆನಿಸಿದೆ. ಬಹುತೇಕ ಪ್ಯಾಕೇಜಿಂಗ್ ಉತ್ಪನ್ನಗಳನ್ನು ಒಳಗೊಂಡಿರುವ ಉಳಿದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳು 2022ರಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (MOEFCC)ಸಚಿವಾಲಯವು ಪರಿಚಯಿಸಿದ Extended Producer Responsibility(EPR)ನೀತಿಯ ಅಡಿಯಲ್ಲಿ ಬರುತ್ತದೆ. ಈ ನೀತಿ ನಿಷೇಧಿಸಿದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ ಮತ್ತು ಮರುಬಳಕೆ ಮತ್ತು ವಿಲೇವಾರಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯ ತಯಾರಕರ ಸೂಚ್ಯಂಕ 2019ರ ವರದಿ ಪ್ರಕಾರ, ಭಾರತವು ಜಾಗತಿಕವಾಗಿ ಏಕ-ಬಳಕೆಯ ಪ್ಲಾಸ್ಟಿಕ್ ಪಾಲಿಮರ್ ಉತ್ಪಾದನೆಯಲ್ಲಿ ಹದಿಮೂರನೇ ಅತಿದೊಡ್ಡ ಪಾಲುದಾರಿಕೆಯನ್ನು ಹೊಂದಿದೆ. ಭಾರತದ ರಿಲಯನ್ಸ್ ಇಂಡಸ್ಟ್ರೀಸ್ – 3 ಮಿಲಿಯನ್ ಟನ್ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದಿಸುತ್ತಿದೆ. ಈ ಮೂಲಕ ಜಾಗತಿಕ ಪಾಲಿಮರ್‌ಗಳನ್ನು ಉತ್ಪಾದಿಸುವ ಕಂಪನಿಗಳ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಭಾರತದಲ್ಲಿನ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವು ಏಕ-ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ಸರಿಸುಮಾರು 11 ಪ್ರತಿಶತ ಪರಿಹರಿಸುತ್ತದೆ ಎಂದು ವರದಿಗಳು ಹೇಳಿವೆ.
ಭಾರತದಲ್ಲಿ ತಪ್ಪಾದ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP)ದೇಶವಾರು ಪ್ಲಾಸ್ಟಿಕ್ ಡೇಟಾವು ಭಾರತವು ತನ್ನ ಪ್ಲಾಸ್ಟಿಕ್ ತ್ಯಾಜ್ಯದ 85 ಪ್ರತಿಶತವನ್ನು ತಪ್ಪಾಗಿ ನಿರ್ವಹಿಸುತ್ತಿದೆ ಎಂದು ಬಹಿರಂಗಪಡಿಸಿದೆ. ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ರಸ್ತೆ ಬದಿ ಸುರಿಯಲಾಗುತ್ತಿದೆ ಅಥವಾ ಸುಡಲಾಗುತ್ತಿದೆ. ಚರಂಡಿಗೆ ಸುರಿಯುವ ಪ್ಲಾಸ್ಟಿಕ್ ತ್ಯಾಜ್ಯ ನದಿ ಮೂಲಕ ಸಮುದ್ರ ಸೇರುತ್ತಿದೆ. ಇದು ಸಮುದ್ರ ಜೀವಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಹಾನಿಯುಂಟುಮಾಡುತ್ತಿದೆ. ತಿಂಗಳುಗಳು, ವರ್ಷಗಳ ನಂತರ ಸೂಕ್ಷ್ಮ ಮತ್ತು ನ್ಯಾನೊ-ಗಾತ್ರದ ಕಣಗಳಾಗಿ ಪರಿವರ್ತನೆಯಾಗುತ್ತಿವೆ. ಇನ್ನು ಭಾರತದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಉತ್ಪಾದನೆ, ಬಳಕೆ ಮತ್ತು ವಿಲೇವಾರಿ ಕೂಡ ದೇಶದ ಪರಿಸರವನ್ನು ಕೆಡಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ.
ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿಷೇಧ
2015ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 40 ಮೈಕ್ರಾನ್ ಕೆಳಗಿರುವ ಎಲ್ಲಾ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಷೇಧಿಸಿತು. ಒಂದು ವರ್ಷದ ನಂತರ, ಅಂದರೆ, ಮಾರ್ಚ್ 2016 ರಲ್ಲಿ, ಸರ್ಕಾರವು ಮೈಕ್ರಾನ್ ಅಥವಾ ದಪ್ಪ ಲೆಕ್ಕಿಸದೆ ಎಲ್ಲಾ ಪ್ಲಾಸ್ಟಿಕ್ ಮತ್ತು ಥರ್ಮಾಕೋಲ್ ಉತ್ಪನ್ನಗಳ ಬಳಕೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿತು.
ಈ ಅಧಿಸೂಚನೆ ಪ್ರಕಾರ, ಪ್ಲಾಸ್ಟಿಕ್ ಉತ್ಪಾದಿಸುವುದು, ಸಂಗ್ರಹಿಸುವುದು, ಸರಬರಾಜು ಮಾಡುವುದು ಮತ್ತು ಸಾಗಿಸುವುದನ್ನು ನಿಷೇಧಿಸಿದೆ. ಆದರೆ, ಅಧಿಸೂಚನೆಯಲ್ಲಿ ಮೂರು ವಿನಾಯಿತಿಗಳನ್ನು ನೀಡಲಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪ್ಯಾಕ್ ಮಾಡಲು, ನರ್ಸರಿ ಮತ್ತು ತೋಟಗಾರಿಕೆಯಲ್ಲಿ ಬಳಸಲು ಮತ್ತು ವಿಶೇಷ ಆರ್ಥಿಕ ವಲಯಗಳಲ್ಲಿ ರಫ್ತು ಉದ್ದೇಶಗಳಿಗಾಗಿ ಪ್ಲಾಸ್ಟಿಕ್ ಬಳಸಲು ಅವಕಾಶ ನೀಡಲಾಗಿದೆ.
ಪ್ಲಾಸ್ಟಿಕ್ ನಿಷೇಧವನ್ನು ಘೋಷಿಸಿದ ಕೂಡಲೇ, ಅಧಿಕಾರಿಗಳು ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲು ಅನೇಕ ಅಂಗಡಿಗಳಿಗೆ ದಾಳಿಗಳನ್ನು ನಡೆಸಿದ್ದರು. ಉತ್ಪಾದಕರು ಮತ್ತು ಮಾರಾಟಗಾರರನ್ನು ಗುರಿಯಾಗಿಸಿಕೊಂಡಿದ್ದರು. ಆದರೆ, ಇದು ಕೆಲ ದಿನಗಳವರೆಗೆ ಮಾತ್ರ ಮುಂದುವರಿಯಿತು. ಆ ಬಳಿಕ ಮಾರಾಟಗಾರರಿಂದ ಹಿಡಿದು ವೈಯಕ್ತಿಕ ಗ್ರಾಹಕರತನಕ ಪ್ಲಾಸ್ಟಿಕ್ ಚೀಲಗಳ ತಯಾರಿಕೆ ಮತ್ತು ಬಳಕೆ ಅತಿರೇಕವಾಗಿ ಮುಂದುವರಿಯಿತು. ಅಧಿಕಾರಿಗಳು ಮತ್ತು ಪ್ಲಾಸ್ಟಿಕ್ ತಯಾರಕ ಮಾಫಿಯಾ ನಡುವಿನ ಒಳಒಪ್ಪಂದ ಸರ್ಕಾರದ ಆದೇಶ ಹಳ್ಳ ಹಿಡಿಯುವಂತೆ ಮಾಡಿದೆ ಎಂಬ ಆರೋಪವಿದೆ.
2018ರಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸ ತಂತ್ರಜ್ಞಾನದ ಸಹಾಯದಿಂದ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಘೋಷಿಸಿತು. ನಿಯಮ ಅನುಷ್ಠಾನದ ಉಸ್ತುವಾರಿ ವಹಿಸಿದ್ದ ಅಧಿಕಾರಿಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಸುವ ವ್ಯಕ್ತಿಗಳ ಫೋಟೋ ಮತ್ತು ಸ್ಥಳವನ್ನು ಸೆರೆಹಿಡಿಯುವ ಸಾಧನಗಳನ್ನು ನೀಡಲಾಗಿತ್ತು. ಅಲ್ಲಿಯವರೆಗೆ ನೀಡಲಾಗುತ್ತಿದ್ದ ಕೈಪಿಡಿ ರಸೀದಿಗಳ ಬದಲಿಗೆ, ಸ್ಮಾರ್ಟ್ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಬಳಸಿ ಸಿಕ್ಕಿಬಿದ್ದವರಿಗೆ ಸ್ಥಳದಲ್ಲೇ ದಂಡ ವಿಧಿಸಿ ರಸೀದಿ ನೀಡುವ ವ್ಯವಸ್ಥೆ ತರಲಾಯಿತು. ಬಳಿಕ ಅದೂ ತೆರೆಗೆ ಸರಿಯಿತು.
ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಷನ್ ನೀಡಿದ ಮಾಹಿತಿ ಅನುಸರಿಸಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP)ಮಾಡಿರುವ ವರದಿಯಲ್ಲಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ 4000 ಟನ್‌ಗಳಷ್ಟು ಘನತ್ಯಾಜ್ಯದಲ್ಲಿ 20% ಪ್ಲಾಸ್ಟಿಕ್ ಆಕ್ರಮಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ನಗರದಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ಅಂದಾಜು 16 ಕೆ.ಜಿ ಪ್ಲಾಸ್ಟಿಕ್ ಬಳಸುತ್ತಾರೆ ಎಂದು ಹೇಳಿದೆ.
31 ಆಗಸ್ಟ್ 2018 ರಂದು, ಪ್ಲಾಸ್ಟಿಕ್ ಘಟಕಗಳ ಕಾರ್ಮಿಕರು ಮತ್ತು ಮಾಲೀಕರು, ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಷನ್ ಹೆಸರಿನಲ್ಲಿ ಒಗ್ಗೂಡಿ ಪ್ಲಾಸ್ಟಿಕ್ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರದ ನಿಷೇಧ ಆದೇಶ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಸಹಾಯಕವಾಗಿದೆ. ಆದರೆ, ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಗಧಾಪ್ರಹಾರ ಮಾಡುತ್ತಿದೆ. ನಿಷೇಧದಿಂದ ’ಏಕ-ಬಳಕೆಯ ಪ್ಲಾಸ್ಟಿಕ್’ ಬಳಕೆ ಕಡಿಮೆಯಾದರೂ, ಬಹುಪದರದ ಪ್ಲಾಸ್ಟಿಕ್ ಬಹಿರಂಗವಾಗಿ ಮಾರಾಟವಾಗುತ್ತಿದೆ ಎಂದು ಪ್ರತಿಪಾದಿಸಿದ್ದರು.
ಕೇಂದ್ರ ಸರ್ಕಾರ 2021ರಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿದರೆ, ಕರ್ನಾಟಕ 2015ರಲ್ಲೇ ನಿಷೇಧ ಮಾಡಿತ್ತು ಎಂಬುದು ಗಮನಾರ್ಹ.
ಕೆಲ ವರದಿಗಳ ಪ್ರಕಾರ, ಕರ್ನಾಟಕದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಳಿಕ 1,000 ಪ್ಲಾಸ್ಟಿಕ್ ತಯಾರಿಕಾ ಘಟಕಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಉದ್ಯಮಕ್ಕೆ 350 ಕೋಟಿ ರೂಪಾಯಿಗಳಿಗಿಂತ ಹೆಚ್ಚು ನಷ್ಟವಾಗಿದೆ. ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಒಂದೇ ಬಾರಿ ಬಳಸಿದ ಪ್ಲಾಸ್ಟಿಕ್‌ಗಳ ಪ್ರಮಾಣ ಹತ್ತು ಪಟ್ಟು ಕಡಿಮೆಯಾಗಿದೆ. ಆದಾಗ್ಯೂ, ಚಿಪ್ಸ್ ಮತ್ತು ಬಿಸ್ಕತ್ತು ಪ್ಯಾಕೆಟ್‌ಗಳು, ಶಾಂಪೂ ಸ್ಯಾಚೆಟ್‌ಗಳು, ಪಿಇಟಿ ಬಾಟಲಿಗಳು, ಕಾರ್ಬೊನೇಟೆಡ್ ಪಾನೀಯ ಬಾಟಲಿಗಳು ಮತ್ತು ಜ್ಯೂಸ್ ಕಾರ್ಟನ್‌ಗಳ ಬಳಕೆಯಲ್ಲಿ ಯಾವುದೇ ಪರಿಣಾಮ ಬೀರಿಲ್ಲ.
ಕರ್ನಾಟಕದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧವಾದರೂ, ಅದು ಯಾವುದೇ ಪರಿಣಾಮ ಬೀರಿಲ್ಲ. ಆರಂಭದಲ್ಲಿ ಮಾತ್ರ ಅಧಿಕಾರಿಗಳು ಕೆಲ ಸಣ್ಣಪುಟ್ಟ ಪ್ಲಾಸ್ಟಿಕ್ ಮಾರಾಟಗಾರರ ಮೇಲೆ ದಾಳಿ ನಡೆಸಿದ್ದರು. ಬಳಿಕ ಅವರು ಸುಮ್ಮನಾಗಿದ್ದಾರೆ. ಅಧಿಕಾರಿಗಳ ಮೌನದ ಹಿಂದೆ ಪ್ಲಾಸ್ಟಿಕ್ ಮಾಫಿಯಾದ ಕೈವಾಡವೂ ಇದೆ ಎಂಬ ಆರೋಪವಿದೆ.
ರಾಜ್ಯದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಿದಂತೆ ಬಹುಪದರ ಪ್ಲಾಸ್ಟಿಕ್ ಕೂಡ ನಿಷೇಧ ಮಾಡಬೇಕು. ಏಕೆಂದರೆ, ಅದರ ವಿಲೇವಾರಿಗೆ ಯಾವುದೇ ವ್ಯವಸ್ಥೆಗಳಿಲ್ಲ. ಎಲ್ಲೆಂದರಲ್ಲಿ ಎಸೆಯುವುದು, ಸುಟ್ಟು ಹಾಕುವುದರಿಂದ ಪರಿಸರ ಮಲಿನವಾಗುತ್ತಿದೆ.
ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಈ-ಕಾಮರ್ಸ್ ಕೊಡುಗೆ
ಮಲೇಶಿಯಾದ ಮೊನಾಶ್ ವಿಶ್ವವಿದ್ಯಾನಿಲಯದ ಶಫೀಕ್ ಅಹ್ಮದ್ ಸೈಯದ್ ಅಲಿ ಮತ್ತು ಡಾ ಸಮನ್ ಇಲಂಕೋನ್ ಜಂಟಿಯಾಗಿ ಭಾರತದ ಇ-ಕಾಮರ್ಸ್ ವಲಯದ ಪ್ಯಾಕೇಜಿಂಗ್ ತ್ಯಾಜ್ಯದ ಕುರಿತು ಪ್ರಬಂಧವೊಂದನ್ನು ಮಂಡಿಸಿದ್ದಾರೆ. ಅದರಲ್ಲಿ ಅವರು, ಭಾರತದ ಯಾವುದೇ ಸಂಸ್ಥೆಯು ಇ-ಕಾಮರ್ಸ್ ಸಂಸ್ಥೆಗಳು ಅವು ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಟ್ರ್ಯಾಕ್ ಮಾಡುತ್ತಿಲ್ಲ. ಆದರೂ, ಒಂದು ಅಂದಾಜಿನ ಪ್ರಕಾರ, 2021ರಲ್ಲಿ ಇ-ಕಾಮರ್ಸ್ ಉದ್ಯಮ 98,000 ಟನ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯವನ್ನು ಉತ್ಪಾದಿಸಿದೆ. ಇದು 2020ರಲ್ಲಿ ಉತ್ಪಾದನೆಯಾದ ತ್ಯಾಜ್ಯಕ್ಕಿಂತ 3 ಪಟ್ಟು ಹೆಚ್ಚು ಎಂದು ಹೇಳಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧೀನದಲ್ಲಿ ಕಾರ್ಯಾಚರಿಸುವ EPR (Extended Producer Responsibility) ಪೋರ್ಟಲ್ ಪ್ರಕಾರ, 2022ರಲ್ಲಿ ಇಪಿಆರ್ ಪೋರ್ಟಲ್ ಪ್ರಾರಂಭಗೊಂಡ ನಂತರ ಅಮೆಜಾನ್ ಇಂಡಿಯಾದಿಂದ 17,643 ಟನ್ ಪ್ಲಾಸ್ಟಿಕ್ ತ್ಯಾಜ್ಯ ಮಾರುಕಟ್ಟೆಗೆ ಬಂದಿದೆ. ಅದೇ ರೀತಿ, ಫ್ಲಿಪ್‌ಕಾರ್ಟ್‌ನಿಂದ 16,639 ಟನ್, ರೆಸ್ಟೋರೆಂಟ್‌ಗಳಿಗೆ ದಿನಸಿ ವಸ್ತುಗಳನ್ನು ಪೂರೈಸುವ ಝೊಮಾಟೊ ಕಂಪನಿಯ ಝೊಮಾಟೊ ಹೈಪರ್‌ಪ್ಯೂರ್‌ನಿಂದ 2,285 ಟನ್ ತ್ಯಾಜ್ಯ ಮಾರುಕಟ್ಟೆ ಪ್ರವೇಶಿಸಿದೆ. (ಈ ಅಂಕಿಅಂಶಗಳನ್ನು ಮೇಲೆ ಉಲ್ಲೇಖಿಸಿದ ಕಂಪನಿಗಳು ಇಪಿಆರ್ ವೆಬ್‌ಸೈಟ್‌ನಲ್ಲಿ ಘೋಷಿಸಿದ ಮರುಬಳಕೆ ಗುರಿಗಳನ್ನು ಲೆಕ್ಕಹಾಕಿ ಬರೆಯಲಾಗಿದೆ ಎಂದು citizenmatters.in ವೆಬ್‌ಸೈಟ್ ಹೇಳಿದೆ.)
ಇ-ಕಾಮರ್ಸ್ ದೈತ್ಯ ಸಂಸ್ಥೆಗಳು ಒಂದು ಕಡೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (Corporate Social Responsibility-CSR) ನಿಧಿಯ ಮೂಲಕ ಕೆಲವೊಂದು ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಮಾಡಿದರೆ, ಮತ್ತೊಂದೆಡೆ ಅವುಗಳೇ ಪರಿಸರ ಹಾಳುಗೆಡವುದಕ್ಕೆ ದೊಡ್ಡ ಕೊಡುಗೆ ಕೊಡುತ್ತಿವೆ ಎಂಬ ಚರ್ಚೆಗಳು ಸಾಮಾನ್ಯವಾಗಿಯೇ ಇದೆ. ಆದರೆ, ಈ ಸಂಸ್ಥೆಗಳು, ’ಇಲ್ಲ ನಾವು ಇತ್ತೀಚೆಗೆ ಪರಿಸರಕ್ಕೆ ಹಾನಿಯಾಗುವ ಪ್ಯಾಕೇಜಿಂಗ್ ಮಾಡುತ್ತಿಲ್ಲ. ನಮ್ಮ ಪಾಲುದಾರರಿಗೂ ಈ ಬಗ್ಗೆ ಹೇಳಿದ್ದೇವೆ. ಪ್ಲಾಸ್ಟಿಕ್ ಬಳಸದೆ ಪ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅನಗತ್ಯವಾಗಿ ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿದ್ದೇವೆ; ಎನ್ನುತ್ತಿವೆ.
ಇ-ಕಾಮರ್ಸ್‌ಗಳ ಜೊತೆ ಆಹಾರ ವಿತರಣಾ ವೇದಿಕೆಗಳ ಮೇಲೆಯೂ ಪರಿಸರಕ್ಕೆ ಪ್ಲಾಸ್ಟಿಕ್ ಸುರಿಯುತ್ತಿರುವ ಆರೋಪವಿದೆ. ಇದಕ್ಕೆ ಉದಾಹರಣೆ ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿದೆ. ಅಮೆಜಾನ್, ಸ್ವಿಗ್ಗಿಯಂತಹ ವೇದಿಕೆಗಳಲ್ಲಿ ನಾವು ಆಹಾರ ಆರ್ಡರ್ ಮಾಡಿದರೆ, ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಕಂಟೈನರ್ ಬಳಸುತ್ತಾರೆ. ಅದರ ಜೊತೆ ಪ್ಲಾಸ್ಟಿಕ್ ಕೈಚೀಲದಲ್ಲಿ ಹಾಕಿ ಕೊಡುತ್ತಾರೆ. ಇದು ಆಯಾ ಹೋಟೆಲ್, ರೆಸ್ಟೋರೆಂಟ್‌ನವರ ತಪ್ಪು ಎಂದು ಆಹಾರ ವಿತರಣ ವೇದಿಕೆಗಳು ಕೈತೊಳೆದುಕೊಳ್ಳಬಹುದು. ಆದರೆ, ಈ ತ್ಯಾಜ್ಯದಲ್ಲಿ ಅವುಗಳ ಪಾಲು ಇಲ್ಲ ಎನ್ನಲಾಗದು. ಒಟ್ಟಿನಲ್ಲಿ ಪ್ಲಾಸ್ಟಿಕ್‌ನಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಎಷ್ಟೇ ಎಷ್ಟು ಚರ್ಚಿಸಿದರೂ ಮುಗಿಯದು.
ಹವಾಮಾನ ಬದಲಾವಣೆ, ಪ್ಲಾಸ್ಟಿಕ್ ಸಮಸ್ಯೆ ಈ ಜಗತ್ತಿನ ಸಕಲ ಜೀವರಾಶಿಗಳು ಮತ್ತು ನಿರ್ಜೀವ ವಸ್ತುಗಳಿಗೂ ಸಂಬಂಧಪಟ್ಟ ಸಮಸ್ಯೆಯಾಗಿದೆ. ನಮ್ಮ ಪ್ರತಿದಿನದ ಜೀವನದಲ್ಲಿ ಈ ಎರಡೂ ವಿಷಯಗಳು ನಮಗೇ ಗೊತ್ತಿಲ್ಲದ ರೀತಿ ಸಂಬಂಧಿಸಿದೆ. ಸಮಸ್ಯೆ ಗಂಭೀರವಾದದ್ದಾದರೂ, ವಿಶ್ವಸಂಸ್ಥೆಯ ಪ್ರಮುಖರು, ವಿವಿಧ ರಾಷ್ಟ್ರಗಳ ಮುಖ್ಯಸ್ಥರು, ಪರಿಸರ ವಿಜ್ಞಾನಿಗಳು ಸೇರಿದಂತೆ ಒಂದಷ್ಟು ಜನರಿಗೆ ಮಾತ್ರ ಇವುಗಳನ್ನು ಚರ್ಚಿಸುತ್ತಿದ್ದಾರೆ ಎಂಬಂತಹ ವಾತಾವರಣ ಈಗಿದೆ. ಹೀಗಾಗಬಾರದು, ಹವಾಮಾನ ಬದಲಾವಣೆ, ಪ್ಲಾಸ್ಟಿಕ್ ಸಮಸ್ಯೆಗಳ ಕುರಿತು ಪ್ರತಿಯೊಬ್ಬರೂ ಚಿಂತಿತರಾಗಬೇಕು. ವೈಜ್ಞಾನಿಕ ರೀತಿಯಲ್ಲಿ ಇವುಗಳ ಪರಿಹಾರ ಅಥವಾ ತಡೆಗೆ ಶ್ರಮಿಸಬೇಕು. ಒಂದಷ್ಟು ಜನರು ಕುಳಿತು ಚರ್ಚೆ ಮಾಡುವುದರಿಂದ ಈ ಸಮಸ್ಯೆಗಳು ಪರಿಹಾರವಾಗದು. ಇದಕ್ಕೆ ಒಮ್ಮತದ ಹೋರಾಟ ಬೇಕಿದೆ. ಸಮಸ್ಯೆಗಳನ್ನು ವ್ಯವಸ್ಥೆಯ ಮಟ್ಟದಲ್ಲಿ ಪರಿಹರಿಸಬೇಕಿದೆ.
ದೇವಿದಯಾಳ್ ಅವರ ’ಡಾ. ಬಾಬಾಸಾಹೇಬ್ ಅಂಬೇಡ್ಕರ್ ದಿನಚರಿ’ ಪುಸ್ತಕದ ಕನ್ನಡಾನುವಾದದಿಂದ ಆಯ್ದ ಅಧ್ಯಾಯ