ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ವಿವಿಧ ರಾಷ್ಟ್ರಗಳಿಗೆ ತೈಲ ರಫ್ತು ಮಾಡುವ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದು. ಇರಾನ್ ದೇಶದ ಆಕ್ರಮಣಕಾರಿ ನೀತಿಯನ್ನು ತಡೆಯದಿದ್ದರೆ, ಸಮಸ್ಯೆ ಉಲ್ಬಣಗೊಳ್ಳಲ್ಲಿದ್ದು ಹಿಂದೆಂದೂ ಕಾಣದ ರೀತಿಯಲ್ಲಿ ತೈಲಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಸೌದಿ ಅರೆಬಿಯಾದ ರಾಜ ಮಹಮ್ಮದ್ ಬಿನ್ ಸಲ್ಮಾನ್ ಕಳವಳ ವ್ಯಕ್ತಪಡಿಸಿದ್ದಾರೆ.
60 ನಿಮಿಷದ ಸಿಬಿಎಸ್ ಕಾರ್ಯಕ್ರಮದ ಸಂದರ್ಶನದಲ್ಲಿ ಮಾತನಾಡಿದ ಸೌದಿ ಅರೆಬಿಯಾ ರಾಜ ಮಹಮ್ಮದ್, ವರ್ಷದ ಹಿಂದೆ ಸೌದಿ ಕಾರ್ಯಕರ್ತರಿಂದ ಪತ್ರಕರ್ತ ಜಮಾಲ್ ಖುಶೋಗಿ ಹತ್ಯೆಯಾಗಿರುವುದರ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆ ಆದರೆ ಖುಶೋಗಿ ಅವರ ಹತ್ಯೆಗೆ ನಾನು ಆದೇಶಿಸಿದ್ದೆ ಎಂಬ ಸುದ್ದಿ ಸತ್ಯಕ್ಕೆ ದೂರ ಎಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಖುಶೋಗಿ ಹತ್ಯೆ ತಮ್ಮ ಖ್ಯಾತಿಗೆ ಧಕ್ಕೆ ತಂದಿದೆ ಎಂದು ಹೇಳಿದರು.
ಈಗ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆ ಒಂದು ಸಮಸ್ಯೆಯಾಗಿದೆ. ಸೆಪ್ಟಂಬರ್ 14ರಂದು ಸೌದಿ ತೈಲೋದ್ಯಮದ ಹೃದಯ ಭಾಗದ ಮೇಲೆ ನಡೆದ ದ್ರೋನ್ ದಾಳಿಯ ನಂತರ ಇದು ಮತ್ತಷ್ಟು ವಿಸ್ತಾರಗೊಂಡಿದೆ. ಜಾಗತಿಕ ಮಟ್ಟದಲ್ಲಿ ವಿವಿಧ ರಾಷ್ಟ್ರಗಳು ಒಂದಾಗಿ ಇರಾನ್ ದೇಶದ ತೈಲ ಪ್ರತಿಗಾಮಿ ನೀತಿಯನ್ನು ತಡೆಯದಿದ್ದರೆ, ಸಮಸ್ಯೆ ಉಲ್ಬಣಗೊಳ್ಳಲಿದೆ. ಇದು ತೈಲ ಸರಬರಾಜಿಗೆ ಹೆಚ್ಚು ಅಪಾಯಕಾರಿ. ಹಾಗಾದಲ್ಲಿ ನಮ್ಮ ಜೀವಿತಾವಧಿಯಲ್ಲಿ ಹಿಂದೆಂದೂ ಕಾಣದ ಮಟ್ಟಿಗೆ ತೈಲಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.
ಸೌದಿ ತೈಲೋದ್ಯಮದ ಮೇಲೆ ಸೆಪ್ಟಂಬರ್ 14ರಂದು ಹೌಥಿ ಮಿಲಿಟೆಂಟ್ ಗುಂಪುಗಳು ನಡೆಸಿದ ದ್ರೋನ್ ದಾಳಿಯಿಂದ ತೈಲೋಧ್ಯಮದಲ್ಲಿ ಶೇಕಡಾ 5ಕ್ಕಿಂದ ಹೆಚ್ಚು ಪ್ರಮಾಣದ ನಷ್ಟಕ್ಕೆ ಕಾರಣವಾಗಿದೆ ಎಂದು ಅಮೆರಿಕದ ಕಾರ್ಯದರ್ಶಿ ಮೈಕ್ ಪೊಂಪಿಯೋ ಹೇಳಿಕೆಯನ್ನು ಸೌದಿ ರಾಜಕುಮಾರ ಒಪ್ಪಿಕೊಂಡಿದ್ದಾರೆ. ಇದು ಇರಾನ್ ವಿರುದ್ಧ ಯುದ್ಧದ ಮುನ್ಸೂಚನೆ ನೀಡುತ್ತಿದೆ. ಆದರೆ ಇರಾನ್ ವಿರುದ್ಧ ಯುದ್ಧ ಮಾಡುವುದೊಂದೇ ಸಮಸ್ಯೆಗೆ ಪರಿಹಾರವಲ್ಲ. ಶಾಂತಿಯುತವಾಗಿ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಒಂದು ವೇಳೆ ಸೌದಿ ಅರೆಬಿಯಾ ಹಾಗೂ ಇರಾನ್ ಮಧ್ಯೆ ಯುದ್ಧವಾದರೆ ಅದು ಜಾಗತಿಕ ಆರ್ಥಿಕ ಅಭಿವೃದ್ಧಿ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮಿಲಿಟರಿ ಶಕ್ತಿ ಬಳಕೆಗಿಂತ ಶಾಂತಿಯುತ ಚರ್ಚೆಯೇ ಇದಕ್ಕೆ ಪರಿಹಾರ ನೀಡಬಲ್ಲದು ಎಂದು ಅಭಿಪ್ರಾಯಪಟ್ಟರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಅಧ್ಯಕ್ಷ ಹಸನ್ ರೋಹಾನಿ ಅವರನ್ನು ಭೇಟಿಯಾಗಿ ತೆಹ್ರನ್ ನ್ಯೂಕ್ಲಿಯರ್ ಪ್ರೋಗ್ರಾಮ್ ಬಗ್ಗೆ ಹೊಸ ಒಪ್ಪಂದ ಮಾಡಿಕೊಳ್ಳಬೇಕು. ಮಧ್ಯ ಹಾಗೂ ಪೂರ್ವ ಏಷ್ಯಾ ಭಾಗದಲ್ಲಿ ಇದರ ಪ್ರಭಾವ ಬೀರುವಂತಾಗಬೇಕು ಎಂದು ಹೇಳಿದರು.