Homeಕರ್ನಾಟಕಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

ಮೋದಿ-ಶಾರನ್ನು ಬಗ್ಗಿಸಿ ಸಿಎಂ ಆದ ಮೊದಲ ವ್ಯಕ್ತಿ ಯಡಿಯೂರಪ್ಪ

- Advertisement -
- Advertisement -

ಜುಲೈ 23ರ ಮಂಗಳವಾರ ರಾತ್ರಿ ಎಚ್.ಡಿ ಕುಮಾರಸ್ವಾಮಿ ವಿಶ್ವಾಸಮತ ಸೋತಕೂಡಲೇ ಯಡಿಯೂರಪ್ಪ ನಾಳೆಯಿಂದ ಅಭಿವೃದ್ದಿಪರ್ವ ಎಂದು ಹೇಳಿಕೆ ಕೊಟ್ಟರು. ಅಂದರೆ ನಾಳೆಯೇ ನಾವು ಸರ್ಕಾರ ರಚಿಸುತ್ತೇವೆ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಜುಲೈ 23ರ ಬುಧವಾರ ಅಂತಹ ಯಾವುದೇ ಘಟನೆಗಳು ನಡೆಯಲಿಲ್ಲ.

ಅಂದರೆ ಸರ್ಕಾರ ರಚನೆಗೆ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆ ಹೈಕಮಾಂಡ್ ತಡೆವೊಡ್ಡಿತ್ತು. ತಾನು ಮುಖ್ಯಮಂತ್ರಿ ಆಗಿಯೇ ತೀರಬೇಕು ತಾಳ್ಮೆಯಿಂದ ಕಾಯುತ್ತಿದ್ದ ಯಡಿಯೂರಪ್ಪನವರಿಗೆ ಇದು ಪ್ರತಿಕ್ಷಣವೂ ತಾಳಲಾರದ ನೋವಾಗಿತ್ತು. ಕಷ್ಟಪಟ್ಟು ಮೈತ್ರಿ ಸರ್ಕಾರ ಉರುಳಿಸಿದರೂ ತನಗೆ ಹೈಕಮಾಂಡ್ ಪಟ್ಟ ಕಟ್ಟಲು ಹಿಂದೇಟು ಹಾಕುತ್ತಿರುವುದು ಅವರಿಗೆ ಸಿಟ್ಟು ತರಿಸಿತ್ತು.
ಈ ನಡುವೆ ಪೂರ್ಣ ಬಹುಮತ ಇಲ್ಲದ ಕಾರಣಕ್ಕೆ ಈಗಲೇ ಸರ್ಕಾರ ರಚಿಸುವುದು ಬೇಡ, ರಾಷ್ಟ್ರಪತಿ ಆಡಳಿತ ತರೋಣ ಎಂಬ ಚರ್ಚೆಗಳು ಶುರುವಾದವು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಖ್ಯ ಕಾರಣರಾಗಿದ್ದರು ಎಂದು ಹೇಳಲಾಗುತ್ತಿತ್ತು.

ನಂತರ ಯಡಿಯೂರಪ್ಪ ಕೋಪಿಸಿಕೊಂಡು ಒಂದು ತಂಡವನ್ನು ದೆಹಲಿಗೆ ಕಳಿಸಿದರು. ಅಮಿತ್ ಶಾರನ್ನು ಭೇಟಿಯಾಗುವುದು ಈ ನಿಯೋಗದ ಕೆಲಸವಾಗಿತ್ತು. ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಮಾಧುಸ್ವಾಮಿ, ವಿಜಯೇಂದ್ರ ಇಷ್ಟು ಜನ ನಿಯೋಗದಲ್ಲಿದ್ದರು. ಅಂದು ಬೆಳಿಗ್ಗೆ ಲೋಕಸಭೆಗೆ ಹೊರಡುವ ಮುನ್ನ ನಿಯೋಗವನ್ನು ಭೇಟಿ ಮಾಡಿದ ಅಮಿತ್ ಶಾ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಸಂಜೆ ಬರುತ್ತೇನೆ ಕಾಯಿರಿ ಎಂದು ಹೇಳಿಹೋದವರು ಸಂಜೆ ಬರಲೇ ಇಲ್ಲ.

ಅಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ಸೇರಿ ಅತೃಪ್ತರನ್ನು ಮನವೊಲಿಸುವ ಅಂತಿಮ ಪ್ರಯತ್ನ ಮಾಡುವ ನಿರ್ಣಯವಾಯಿತು. ಆ ಪ್ರಕಾರ ಈಶ್ವರ್ ಖಂಡ್ರೆ ಅತೃಪ್ತರನ್ನು ಭೇಟಿಯಾಗಲು ಅವರು ಪೂನಾದಲ್ಲಿದ್ದಾರೆ ಎಂಬ ಮಾಹಿತಿಯ ಮೇರೆಗೆ ಪೂನಾಗೆ ಹೊರಟರೆ, ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದ ಅತೃಪ್ತ ಶಾಸಕರನ್ನು ಭೇಟಿ ಮಾಡಿ, ಅವರು ಕೇಸ್ ವಾಪಸ್ ಪಡೆದರೆ ಹೇಗೆ ಎಂದು ಚರ್ಚಿಸುವ ಉದ್ದೇಶದಿಂದ ಡಿ.ಕೆ ಶಿವಕುಮಾರ್ ದೆಹಲಿಗೆ ಹೊರಟರು.

ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಎಂಟಿಬಿ ನಾಗರಾಜ್, ಸುಧಾಕರ್ ಮತ್ತು ಗೋಪಾಲಯ್ಯ ಮತ್ತೆ ವಾಪಸ್ ಮೈತ್ರಿ ಸರ್ಕಾರಕ್ಕೆ ಬರಲು ರೆಡಿ ಇದ್ದಾರೆ ಎನ್ನುವ ಮಾಹಿತಿ ಓಡಾಡಿತು. ಅತೃಪ್ತರ ಪೈಕಿ ಈ ಆರು ಜನರ ಮೇಲೆಯೇ ಬಿಜೆಪಿಗೂ ಡೌಟ್ ಇತ್ತು. ಇವರಲ್ಲಿ ಸುಧಾಕರ್ ಮತ್ತು ಗೋಪಾಲಯ್ಯ ಹಿಂದೆಯೂ ತಮ್ಮ ಪಕ್ಷಗಳ ವಿರುದ್ಧ ಮಾತಾಡಿದ್ದರು. ಉಳಿದ ನಾಲ್ಕು ಜನ ರಾಜೀನಾಮೆ ನೀಡಬಹುದು ಎಂಬ ನಿರೀಕ್ಷೆ ಮೊದಲು ಬಿಜೆಪಿಗೇ ಇರಲಿಲ್ಲ ಇಷ್ಟು ಜನ ಶಾಸಕರಿಗೆ ಕಾಂಗ್ರೆಸ್ ಒಂದು ಆಫರ್ ಸಹ ನೀಡಿತ್ತು. ಅದು ಡಿ.ಕೆ.ಶಿವಕುಮಾರ್ ಅಥವಾ ರಾಮಲಿಂಗಾರೆಡ್ಡಿ ಸಿಎಂ ಆಗುತ್ತಾರೆ ಎನ್ನುವ ಆಫರ್ ಅದಾಗಿತ್ತು. ಇದಕ್ಕೆ ಕೆಲವರಿಗೆ ಸಹಮತ ಸಹ ಇತ್ತು ಎನ್ನಲಾಗುತ್ತಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಎಚ್ಚೆತ್ತುಕೊಂಡರು.

ಗುರುವಾರ ರಾತ್ರಿ ಅತೃಪ್ತರ ಜೊತೆ ಮಾತನಾಡಿದ ಯಡಿಯೂರಪ್ಪ ಒಂದು ಹೊಸ ದಾಳ ಉರುಳಿಸಿದರು. ಅತೃಪ್ತರ ಹತ್ತಿರ ‘ಸ್ಪೀಕರ್ ನಮ್ಮನ್ನು ಯಾವಾಗ ಅನರ್ಹಗೊಳಿಸುತ್ತಾರೆ ಹೇಳಲಿಕ್ಕೆ ಬರುವುದಿಲ್ಲ. ಹಾಗಾಗಿ ಅದಕ್ಕೂ ಮುಂಚೆ ಹೊಸ ಸರ್ಕಾರ ರಚಿಸಿಬಿಡಬೇಕು, ಇಲ್ಲದಿದ್ದರೆ ನಮ್ಮ ಪಾಡನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಹೇಳಿಸಿದರು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಪರವಾದ ನಿಯೋಗ ಜೆ.ಪಿ ನಡ್ಡಾ ಮನೆಗೆ ಹೋಯಿತು. ಶೆಟ್ಟರ್ ಮೂಲಕ ಅತೃಪ್ತ ಶಾಸಕರು ಜೆ.ಪಿ ನಡ್ಡಾರನ್ನು ಬ್ಲಾಕ್‍ಮೇಲ್ ಮಾಡಿದರು. ನಾಳೆ ಬೆಳಿಗ್ಗೆ ಒಳಗೆ ಯಡಿಯೂರಪ್ಪನವರು ಸಿಎಂ ಆಗಿಬಿಡಬೇಕು ಇಲ್ಲದಿದ್ದರೆ ನಾವು ವಾಪಸ್ ಹೋಗುತ್ತೇವೆ ಎಂದು ಬೆದರಿಕೆ ಹಾಕಿದರು.
ತದನಂತರವಷ್ಟೇ ಹೆದರಿದ ಬಿಜೆಪಿ ಹೈಕಮಾಂಡ್ ಶುಕ್ರವಾರ ಮಧ್ಯಾಹ್ನದ ವೇಳೆಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಘೋಷಿಸಬೇಕಾಯ್ತು. ಅಂದರೆ ಮೊದಲ ಬಾರಿಗೆ ಹೈಕಮಾಂಡ್ ಅನ್ನು ಬಗ್ಗಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕ್ಯಾಬಿನೆಟ್ ವಿಸ್ತರಣೆ ಮಾತ್ರ ಹೈಕಮಾಂಡ್ ಕೈಯಲ್ಲಿದೆ.

ಇದುವರೆಗೂ ಮೋದಿ-ಅಮಿತ್ ಶಾರನ್ನು ಬಗ್ಗಿಸಿ ಸಿಎಂ ಆದವರು ಯಾರು ಇರಲಿಲ್ಲ. ಮಾಸ್ ಫಾಲೋವರ್ಸ್ ಇಲ್ಲದವರನ್ನು ಮೋದಿ ಅಮಿತ್ ಶಾ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್, ಗುಜರಾತಿನಲ್ಲಿ ವಿಜಯ್ ರೂಪಾಣಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಜಾರ್ಖಂಡ್‍ನಲ್ಲಿ ಆದಿವಾಸಿಯಲ್ಲದವರು ಸಿಎಂ, ಹರಿಯಾಣದಲ್ಲಿ ಪಂಜಾಬ್‍ನ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಿತ್ತು, ಆದರೆ ಈಗ ಯಡಿಯೂರಪ್ಪ ಮಾತ್ರ ಅದಕ್ಕೆ ಬಗ್ಗಿಲ್ಲ.

ಪ್ರಾದೇಶಿಕವಾಗಿ ಪ್ರಬಲ ಮಾಸ್ ಲೀಡರ್ ಇರಬಾರದು ಎಂಬುದು ಸಾಮಾನ್ಯವಾಗಿ ದೆಹಲಿ ನಾಯಕರುಗಳ ಇರಾದೆಯಾಗಿರುತ್ತದೆ. ಈ ಸದ್ಯ ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರಗಳನ್ನು ಉರುಳಿಸುವುದು ಬಿಜೆಪಿಗೆ ಕಷ್ಟವೇನಲ್ಲ. ಅದರಲ್ಲೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸಿಗೆ ಸರಳ ಬಹುಮತವೂ ಇಲ್ಲ. ಆದರೆ, ಇಂತಹ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಿದರೆ, ಪ್ರಾದೇಶಿಕವಾಗಿ ಪ್ರಬಲವಾಗಿರುವ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಸಮಕಾಲೀನರಾಗಿರುವ ಶಿವರಾಜ್ ಚೌಹಾಣ್ ಮತ್ತು ವಸುಂದರರಾಜೇ ಸಿಂಧಿಯಾ ಅವರನ್ನೇ ಸಿಎಂಗಳನ್ನಾಗಿಸಬೇಕಾಗುತ್ತದೆ. ಅದು ಬೇಡ ಎಂಬ ಕಾರಣಕ್ಕೂ ಅಲ್ಲಿ ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುತ್ತಿಲ್ಲ.

ಕರ್ನಾಟಕದಲ್ಲಿ ಯಡಿಯೂರಪ್ಪನವರು ಅಷ್ಟು ಕಾಯಲು ಸಿದ್ಧರಿಲ್ಲ. ಜೊತೆಗೆ ದಕ್ಷಿಣ ಭಾರತದ ಒಂದು ರಾಜ್ಯದಲ್ಲಾದರೂ ಸರ್ಕಾರ ಇರುವುದು ಬಿಜೆಪಿಗೂ ಬೇಕು. ಹೀಗಾಗಿ ಕರ್ನಾಟಕ ಸರ್ಕಾರ ಉರುಳಿಸಿ ಚುನಾವಣೆಗೆ ಹೋಗೋಣ ಎಂಬ ಬಗ್ಗೆ ದೆಹಲಿ ನಾಯಕರು ಯೋಚಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅತೃಪ್ತರ ಮೂಲಕ ಯಡಿಯೂರಪ್ಪನವರು ಒಂದು ಷಾಕ್ ಟ್ರೀಟ್‍ಮೆಂಟ್ ಕೊಟ್ಟಿದ್ದಲ್ಲದೇ ಇನ್ನೂ ಖಚಿತವಾದ ಸಂದೇಶವನ್ನೂ ನೀಡಿದರು ಎನ್ನಲಾಗುತ್ತದೆ.

ಅಲ್ಲಿಂದಾಚೆಗೆ ಅಮಿತ್ ಶಾಗೆ ಹೆಚ್ಚಿನ ಸಾಧ್ಯತೆಗಳಿರಲಿಲ್ಲ. ಗವರ್ನರ್ ಮತ್ತು ಯಡಿಯೂರಪ್ಪ ಇಬ್ಬರಿಗೂ ಗೋ ಅಹೆಡ್ ಎಂಬ ಸೂಚನೆಯನ್ನು ರವಾನಿಸಿದರು. ಆದರೆ, ಅಲ್ಲಿಂದ ಮುಂದಕ್ಕೆ ಎಲ್ಲಾ ವಿಚಾರಗಳೂ ಯಡಿಯೂರಪ್ಪ ಹೇಳಿದಂತೆ ನಡೆಯಲು ಬಿಡಬಾರದು ಅಂತಲೂ ತೀರ್ಮಾನಿಸಿದರು. ಹಾಗಾಗಿಯೇ ಯಡ್ಡಿ ಒಬ್ಬರನ್ನೇ ಪ್ರಮಾಣವಚನ ಸ್ವೀಕರಿಸಲು ಹೇಳಿದರು. ಸ್ಪೀಕರ್ ರಮೇಶ್‍ಕುಮಾರ್ ರಾಜೀನಾಮೆ ನೀಡಿದ ನಂತರ, ಆ ಸ್ಥಾನಕ್ಕೆ ಬೋಪಯ್ಯನವರನ್ನು ತರಬೇಕು ಎಂಬ ಯಡಿಯೂರಪ್ಪನವರ ಇರಾದೆಗೂ ಸೊಪ್ಪು ಹಾಕಲಿಲ್ಲ. ಸಂಘಪರಿವಾರಕ್ಕೆ ನಿಷ್ಠರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಯಡಿಯೂರಪ್ಪನವರ ಆಯ್ಕೆಯಾಗಿರಲಿಲ್ಲ.

ಹೊಸ ಮುಖ್ಯಮಂತ್ರಿಗೆ ಇನ್ನು ಮುಂದೆ ಅಡಿಗಡಿಗೂ ತೊಡಕುಂಟಾಗಲಿರುವುದು ವಿರೋಧ ಪಕ್ಷಗಳಲ್ಲ. ಬದಲಿಗೆ ಬಿಜೆಪಿ ಹೈಕಮಾಂಡ್ ಮತ್ತು ಅದರ ದಾಳಗಳಾಗಿ ಕರ್ನಾಟಕದಲ್ಲಿ ಬಳಕೆಯಾಗಲಿರುವ ಬಿಜೆಪಿ ನಾಯಕರುಗಳು. ಇದನ್ನು ಬಲ್ಲ ಯಡ್ಡಿ, ಅಗತ್ಯಕ್ಕಿಂತಲೂ ಹೆಚ್ಚೇ ವಿರೋಧ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಮಾತುಗಳನ್ನು ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ಆಡಿದರು. ದ್ವೇಷದ ಕ್ರಮಗಳಿಗೆ ತಾನು ಮುಂದಾಗುವುದಿಲ್ಲ ಎಂತಲೂ ಹೇಳಿದರು.

ಆದರೆ ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಮಾತ್ರ ವಿರೋಧ ಪಕ್ಷಗಳ ಹಿತಾಸಕ್ತಿಗಳನ್ನು ಸಿಟ್ಟಿಗೇಳಿಸುವ ರೀತಿಯೇ ಇದೆ. ಇನ್ನೂ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ, ಹಿಂದಿನ ಸರ್ಕಾರದ ಆದೇಶಗಳನ್ನು ಪೆಂಡಿಂಗ್ ಇರಿಸಿದರು; ಕುಮಾರಸ್ವಾಮಿಯವರ ಬಜೆಟ್‍ಗೆ ಮೂರು ತಿಂಗಳ ಲೇಖಾನುದಾನ ಮಾತ್ರ ಪಡೆದುಕೊಂಡು, ಇನ್ನೊಂದು ಬಜೆಟ್ ಮಂಡಿಸುವ ಸುಳಿವು ನೀಡಿದ್ದಾರೆ. ಇನ್ನೂ ಸಚಿವ ಸಂಪುಟ ರಚನೆಯಾಗುವ ಮೊದಲೇ, ಸಚಿವ ಸಂಪುಟದ ತೀರ್ಮಾನವಾಗಿ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದಾರೆ. ಕೆಜೆಪಿಗೆ ಹೋದಾಗ ಟಿಪ್ಪು ಟೋಪಿಯನ್ನು ಹಾಕಿಕೊಂಡು, ಖಡ್ಗ ಹಿಡಿದುಕೊಂಡು ಮಿಂಚಿದ್ದ ಯಡಿಯೂರಪ್ಪನವರ ಮೇಲೆ ಬಿಜೆಪಿಯ ಬೇರೆ ಶಕ್ತಿಗಳ ಒತ್ತಡದ ಪರಿಣಾಮವೂ ಇವಾಗಿರುವ ಸಾಧ್ಯತೆ ಇದೆ.

ಈ ಸಾರಿ ಆಪರೇಷನ್ ಮಾಡಿದ್ದು ಯಡ್ಡಿಯೇ
ಸ್ಥಳೀಯ ಬಿಜೆಪಿಗೆ ಗೊತ್ತಿಲ್ಲದೆಯೇ ಡೀಲ್ ನಡೆದಿದೆಯಂತೆ, ಹೈಕಮಾಂಡೇ ಎಲ್ಲರನ್ನೂ ಸಂಪರ್ಕಿಸಿ ಬುಟ್ಟಿಗೆ ಹಾಕಿಕೊಂಡಿದೆಯಂತೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಆದರೆ ಇದು ಯಡಿಯೂರಪ್ಪ ಮತ್ತು ಹೈಕಮಾಂಡ್ ಜೊತೆ ಸೇರಿ ನಡೆಸಿದ ಆಪರೇಷನ್ ಆಗಿತ್ತು. ಅರವಿಂದ ಲಿಂಬಾವಳಿ, ಯಡ್ಡಿ ಪಿ.ಎ. ಸಂತೋಷ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಯೋಗೇಶ್ವರ್ ಮತ್ತು ಆರ್.ಅಶೋಕ್ ಅವರುಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಫೈನಾನ್ಸ್ ಡೀಲ್ ಮಾಡಿದ್ದು ಪಿಯೂಷ್ ಗೋಯೆಲ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಹೈಕಮಾಂಡ್ ನೇರವಾಗಿ ಇಳಿದು ಕಾರ್ಯಾಚರಣೆ ನಡೆಸಲಾರಂಭಿಸಿದ್ದು, ರಾಜೀನಾಮೆಗಳ ನಂತರವೇ. ರಾಜೀನಾಮೆಯ ನಂತರ ಮಹಾರಾಷ್ಟ್ರಕ್ಕೆ ಬರುವುದು ಮತ್ತು ಅಲ್ಲಿ ಬೇಕಾದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದು ಕೇಂದ್ರ ಬಿಜೆಪಿ – ಸ್ಥಳೀಯ ಸರ್ಕಾರದ ನೆರವಿನೊಂದಿಗೆ. ಅಲ್ಲಿಂದಾಚೆಗೆ ಆ ಎಲ್ಲಾ ಶಾಸಕರೂ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಭರವಸೆ ಬಿಜೆಪಿಗೇ ಇರಲಿಲ್ಲ. ಆಗ ಶಾಸಕರಿಗೆ ಪರೋಕ್ಷವಾಗಿ ಇಡಿ-ಐಟಿಯ ಭಯವನ್ನು ಹುಟ್ಟಿಸಲಾಯಿತು. ಅದರಲ್ಲೂ ಹೈಕಮಾಂಡ್‍ನ ನೇರ ಭಾಗವಹಿಸುವಿಕೆ ಇತ್ತು. ಎಂಟಿಬಿ ನಾಗರಾಜ್‍ರ ವಿಚಾರದಲ್ಲೂ ಬಿಜೆಪಿಯ ಕೇಂದ್ರ ನಾಯಕರ ಪಾತ್ರವಿತ್ತು (ಕಳೆದ ಸಂಚಿಕೆಯಲ್ಲಿ ಈ ಕುರಿತು ಬರೆಯಲಾಗಿದೆ)
ಇದೆಲ್ಲಾ ಏನೇ ಇದ್ದರೂ, ಈ ಸಾರಿಯ ಆಪರೇಷನ್‍ನ ಮೂಲ ಸೂತ್ರಧಾರಿ ಸ್ವತಃ ಯಡಿಯೂರಪ್ಪನವರೇ ಆಗಿದ್ದರು. ಆಪರೇಷನ್ ನಡೆಯಲಿ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್‍ದಾಗಿತ್ತಾದರೂ, ಕೂಡಲೇ ಬಿಜೆಪಿ ಸರ್ಕಾರ ರಚಿಸಬೇಕೇ ಎಂಬ ಕುರಿತು ಅಂತಿಮ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯಡಿಯೂರಪ್ಪನವರನ್ನು ಈಗಲೇ ಪಕ್ಕಕ್ಕೆ ಸರಿಸುವುದು ಕಷ್ಟ; ಆದರೆ ಅವರನ್ನೇ ಕರ್ನಾಟಕದ ಬಲಿಷ್ಠ ನಾಯಕನನ್ನಾಗಿ ಬಿಂಬಿಸಬಾರದು ಎಂಬುದು ಅವರ ಲೆಕ್ಕಾಚಾರವಿದ್ದಂತೆ ತೋರುತ್ತದೆ.

ವಿರೋಧ ಪಕ್ಷದ ನಾಯಕ ಯಾರು?
ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಮಾಡುವಾಗ, ಉಪಸಭಾಧ್ಯಕ್ಷರ ಪಕ್ಕದ ಸೀಟು – ಅಂದರೆ ವಿರೋಧ ಪಕ್ಷದ ನಾಯಕರ ಸೀಟು – ಯಾರಿಗೆ ಎಂಬುದು ನಿರ್ಧಾರವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಅದು ತನಗೇ ಮೀಸಲಾದದ್ದು ಎಂಬ ರೀತಿಯಲ್ಲಿ ಅಲ್ಲಿ ಕೂತರು. ವಿರೋಧ ಪಕ್ಷದ ನಾಯಕನಿಗಿಂತಲೂ ತಾನೇ ಮುಖ್ಯಮಂತ್ರಿ ಎಂಬ ರೀತಿಯಲ್ಲಿ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಮತ್ತು ನಡವಳಿಕೆ ಇತ್ತು. ಒಮ್ಮೆ ಯಡಿಯೂರಪ್ಪನವೂ ಬಾಯಿ ತಪ್ಪಿ, ‘ಮಾನ್ಯ ಮುಖ್ಯಮಂತ್ರಿಗಳೇ’ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದರು.

ಸರ್ಕಾರ ಉಳಿಯುವವರೆಗೆ ಸಿದ್ದರಾಮಯ್ಯನವರನ್ನು ವಿರೋಧಿಸದಿದ್ದ, ಇತರ ಕಾಂಗ್ರೆಸ್ ನಾಯಕರು ಇದೀಗ ‘ಸರ್ಕಾರ ಉರುಳಲು ಸಿದ್ದರಾಮಯ್ಯನವರು ತಮ್ಮ ಆಪ್ತರನ್ನು ಹಿಡಿದಿಟ್ಟುಕೊಳ್ಳದಿದ್ದುದೂ ಕಾರಣ’ ಎಂದು ಪಕ್ಷದ ವಲಯಗಳೊಳಗೆ ಮಾತಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಈಗಾಗಲೇ ‘ಪಕ್ಷ ಹೇಳಿದರೆ, ಸದನದಲ್ಲಿ ಪಕ್ಷವನ್ನು ಮುನ್ನಡೆಸುತ್ತೇನೆ’ ಎಂದೂ ಹೇಳಿಯಾಗಿದೆ.

ಶಾಸಕರು ರಾಜೀನಾಮೆ ಕೊಟ್ಟ ನಂತರ, ಸರ್ಕಾರ ಬೀಳುವವರೆಗೆ ಅಪೂರ್ವ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್-ಜೆಡಿಎಸ್ ನಾಯಕರ ಮುಂದಿನ ನಡವಳಿಕೆ ಹೇಗಿರುತ್ತದೆ ಎಂಬುದನ್ನು ಈಗಲೇ ಹೇಳಲಾಗದು. ಆದರೆ, ಆ ಒಂದು ವಾರದ ಒಗ್ಗಟ್ಟಂತೂ ಉಳಿಯುವುದಿಲ್ಲ ಎಂಬುದಕ್ಕೆ ಸೂಚನೆಗಳು ಈಗಾಗಲೇ ಸಿಕ್ಕಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...