Homeಕರ್ನಾಟಕಯಮಕನಮರಡಿ: ವಿಚಾರವಾದಿ ರಾಜಕಾರಣಿ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಸ್ಕೆಚ್!

ಯಮಕನಮರಡಿ: ವಿಚಾರವಾದಿ ರಾಜಕಾರಣಿ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಸ್ಕೆಚ್!

- Advertisement -
- Advertisement -

ಯಮಕನಮರಡಿ ವಿಧಾನಸಭಾ ಕ್ಷೇತ್ರ ಪಶ್ಚಿಮಘಟ್ಟದ ತಪ್ಪಲಲ್ಲಿ ಮೈಚಾಚಿಕೊಂಡಿರುವ ಗುಡ್ಡಗಾಡು ಪ್ರದೇಶ. ಕೃಷಿ ಕಾಯಕದಿಂದ ಬದುಕುಕಟ್ಟಿಕೊಂಡಿರುವ ಈ ರೈತಾಪಿ ವರ್ಗದ ಸೀಮೆ ಬಂಧುತ್ವ ವರ್ಸೆಸ್ ಹಿಂದುತ್ವದ “ಧರ್ಮಯುದ್ಧ”ದಿಂದಾಗಿ ರಾಜ್ಯದ ಗಮನ ಸೆಳೆದಿರುವ ಪ್ರತಿಷ್ಠೆಯ ರಣಕಣವಾಗಿದೆ. ಸೋಗಲಾಡಿ ಸನಾತನ ಸಂಪ್ರದಾಯ ಆಚರಣೆಯ ಅಪಾಯದ ಅರಿವು ಮೂಡಿಸುತ್ತಿರುವ ವಿಚಾರವಾದಿ ರಾಜಕಾರಣಿ ಎಂಬ ಹೆಗ್ಗಳಿಕೆಯ ಸತೀಶ್ ಜಾರಕಿಹೊಳಿ ಸಹಜವಾಗಿಯೇ ಹಿಂದುತ್ವವಾದಿ ಪಡೆಯ ಕಣ್ಣುರಿಗೆ ಕಾರಣರಾಗಿದ್ದಾರೆ. “ಮಾನವ ಬಂಧುತ್ವ ವೇದಿಕೆ” ಕಟ್ಟಿಕೊಂಡು ಪುರೋಹಿತಶಾಹಿ ಶೋಷಣೆ ಮತ್ತು ಮೂಢನಂಬಿಕೆ ವಿರುದ್ಧ ಸಮರ ಸಾರಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ-ಶಾಸಕ ಸತೀಶ್ ಜಾರಕಿಹೊಳಿ ಸೋಲಿಸಲು ಸಂಘ ಪರಿವಾರ ಟೊಂಕಕಟ್ಟಿ ನಿಂತಿದೆ.

ವೈದಿಕ, ಜ್ಯೋತಿಷ್ಯ ಸಂಪ್ರದಾಯದಲ್ಲಿ ಅಶುಭ-ಅನಿಷ್ಟವೆಂದು ಪರಿಗಣಸಲ್ಪಟ್ಟಿರುವ “ರಾಹುಕಾಲ”ದಲ್ಲಿಯೇ ಕಠಿಣ ಕೆಲಸಕ್ಕೆ ಕೈಹಾಕುವುದು ಮತ್ತು ಸ್ಮಶಾನದಲ್ಲಿ ಜತೆಗಾರರೊಂದಿಗೆ ರಾತ್ರಿ ವಾಸ್ತವ್ಯ ಮಾಡುವಂಥ ವೈಚಾರಿಕ-ಕ್ರಾಂತಿಕಾರಕ ಮತ್ತು ಸಹಿಷ್ಣುತೆ-ಸಹಬಾಳ್ವೆ ಪ್ರೇರೇಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಸತೀಶ್ ಜಾರಕಿಹೊಳಿ ಇತ್ತೀಚಿನ ವರ್ಷದಲ್ಲಿ ಅಮಾಯಕರಲ್ಲಿ ಧಾರ್ಮಿಕ ಭಯಬಿತ್ತಿ ಹೊಟ್ಟೆಹೊರೆದುಕೊಳ್ಳುವ ಪುರೋಹಿತಶಾಹಿ ಪಂಗಡಕ್ಕೆ ತಲೆನೋವಾಗಿದ್ದಾರೆ. ಈಚೆಗೆ ಸತೀಶ್ ಜಾರಕಿಹೊಳಿ ‘ಹಿಂದೂ ಶಬ್ದ ಪರ್ಷಿಯನ್ ಮೂಲದ್ದು; ಅದಕ್ಕೆ ಅಶ್ಲೀಲ ಎಂಬರ್ಥವಿದೆ’ ಎಂದು ನಿಪ್ಪಾಣಿಯ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದು ಹಿಂದುತ್ವ ‘ಲೋಕ’ದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತ್ತು!

ಇದನ್ನೂ ಓದಿರಿ: ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

ಮಹಾರಾಷ್ಟ್ರ ಕಡೆಯ ಅತ್ಯುಗ್ರ ಕಾವಿಧಾರಿಗಳಾದಿಯಾಗಿ ಸನಾತನ ಸಂಘಟನೆಯ ಹಲವು ಪ್ರಚೋದನಾತ್ಮಕ ಮಾತುಗಾರರು ಯಮಕನಮರಡಿಗೆ ಬಂದು ಜಾರಕಿಹೊಳಿಯನ್ನು 2023ರ ಅಸೆಂಬ್ಲಿ ಚುನಾವಣೆಯಲ್ಲಿ ಹಿಮ್ಮೆಟ್ಟಿಸುವ ಭೀಷಣ ಭಾಷಣ ಬಿಗಿದುಹೋಗಿದ್ದರು; ಹಿಂದುತ್ವ ಹೀರೋ ಆಗುವ ಭರದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಾರೆಂದು ಆರೋಪಿತರಾಗಿರುವ ಬಸನಗೌಡ ಪಾಟೀಲ್ ಯತ್ನಾಳರಂಥವರು ಯಮಕನಮರಡಿಯಲ್ಲಿ ನಖಶಿಖಾಂತ ಉರಿದುಬಿದ್ದಿದ್ದರು. ಆ ಮೂಲಕ ಹಿಂದುತ್ವಕ್ಕೆ ಪ್ರಬಲ ತೊಡಕಾಗಿರುವ ಸತೀಶ್ ಜಾರಕಿಹೊಳಿಯನ್ನು ಕಟ್ಟಿಹಾಕುವ ಧರ್ಮಕಾರಣದ ಸರಣಿ ತಂತ್ರಗಾರಿಕೆಗಳು ಆರೆಂಟು ತಿಂಗಳುಗಳಿಂದ ಕ್ಷೇತ್ರದಲ್ಲಿ ಬಹಿರಂಗ-ರಹಸ್ಯವಾಗಿ ನಡೆಯುತ್ತಲೇ ಇದೆ. ಹಿಂದುಳಿದ ವರ್ಗದ ಕಾಳಜಿಯ ಕಾರ್ಯವೈಖರಿಯ ನೆಲೆಯಲ್ಲಿ ಅಹಿಂದ ವರ್ಗವನ್ನು ಪ್ರಭಾವಿಸುವ ಸತೀಶ್ ಜಾಕಿಹೊಳಿಯನ್ನು ಹಿಂದೂ ವಿರೋಧಿಯೆಂದು ಬಿಂಬಿಸಿ ಮಣಿಸುವ ಸಂಘ ಪರಿವಾರದ ಹಿಕಮತ್ತಿನ ಹಿನ್ನಲೆಯಲ್ಲಿ ಯಮಕನಮರಡಿ ಚುನಾವಣಾ ಕದನ ಕುತೂಹಲಕರವಾಗಿದೆ.

ಪಿಚ್ ಹೇಗಿದೆ?

ಘಟಪ್ರಭಾ, ಹಿರಣ್ಯಕೇಶಿ ಮತ್ತು ಮಾರ್ಕಾಂಡೇಯ ಯಮಕನಮರಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೀವ ನದಿಗಳು. ಕೃಷಿ ಆಧಾರಿತ ಆರ್ಥಿಕತೆಯ ಈ ಪ್ರದೇಶದಲ್ಲಿ ಮುಖ್ಯವಾಗಿ ಕಬ್ಬು, ಹತ್ತಿ, ಕಡಲೆ ಮತ್ತು ತರಕಾರಿ ಬೆಳೆಯಲಾಗುತ್ತಿದೆ. ಉದ್ಯೋಗ ಮತ್ತು ಶಿಕ್ಷಣ ಅರಸುತ್ತ ಯುವಸಮೂಹ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೆಲವು ನಗರಗಳತ್ತ ಗುಳೆಹೋಗುತ್ತಿದೆ. ಕೃಷಿ, ಶಿಕ್ಷಣ ಮತ್ತು ಔದ್ಯೋಗಿಕ ವಲಯದಲ್ಲಿ ಸಮಸ್ಯೆ ತಾಂಡವಾಡುತ್ತಿದೆ. ಜಿಲ್ಲೆಯಲ್ಲಿ ತೀರಾ ಹಿಂದುಳಿದ ಪ್ರದೇಶವಾಗಿರುವ ಯಮಕನಮರಡಿಯಲ್ಲಿ ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿರುವ ಹಳ್ಳಿಗಳಿವೆ; ಖರೀದಿಸಿ ನೀರು ಕುಡಿಯವ ಪರಿಸ್ಥಿತಿ ಇದೆ. ಕಳೆದ ಹದಿನೈದು ವರ್ಷದಿಂದ ಕ್ಷೇತ್ರವನ್ನು ಪ್ರಗತಿಯ ಹಳಿಗೇರಿಸಿರುವ ಸತೀಶ್ ಜಾರಕಿಹೊಳಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ; ಆದರೆ ನೀರಾವರಿ ಯೋಜನೆಗಳನ್ನು ಆದ್ಯತೆಯಿಂದ ಮಾಡಿಮುಗಿಸಬೇಕಿದೆ ಎಂದು ಜನರು ಹೇಳುತ್ತಾರೆ. ಕ್ಷೇತ್ರದೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿರುವ “ಸತೀಶ್ ಸಾಹುಕಾರ್” ಎಂದರೆ ಬಹಪಾಲು ಜನರಿಗೆ ಅಚ್ಚುಮೆಚ್ಚು; ಆದರೆ ಹೋಬಳಿ ಮಟ್ಟದ ಹಿಂಬಾಲಕರ ಹುಚ್ಚಾಟದಿಂದ ಜಾರಕಿಹೊಳಿಗೆ ಕೆಟ್ಟಹೆಸರು ಬಂದಿದೆ ಎಂಬ ಮಾತು ಕೇಳಿಬರುತ್ತಿದೆ.

2007ರಲ್ಲಿ ಮಾಡಲಾದ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಕ್ಷೇತ್ರ ಯಮಕನಮರಡಿ. ಹುಕ್ಕೇರಿ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಯಮಕನಮರಡಿಯ ಸುತ್ತಲಿನ ಗ್ರಾಮಾಂತರ ಪ್ರದೇಶಗಳೊಂದಿಗೆ ಬೆಳಗಾವಿಯ ಕೆಲವು ಹಳ್ಳಿಗಳನ್ನು ಸೇರಿಸಿ ಹೊಸ ಕ್ಷೇತ್ರ ರಚಿಸಲಾಯಿತು. ಅದುವರೆಗೆ ಸತೀಶ್ ಜಾರಕಿಹೊಳಿ ಅವರ ಅಣ್ಣ ರಮೇಶ್ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದ ಗೋಕಾಕ್‌ನ ಪರಿಶಿಷ್ಟ ಪಂಗಡ ಮೀಸಲಾತಿ ತೆಗೆದು ಸಾಮಾನ್ಯ ಕ್ಷೇತ್ರವಾಗಿ ಮಾರ್ಪಡಿಸಲಾಯಿತು; ಆ ಎಸ್ಟಿ ಮೀಸಲಾತಿಯನ್ನು ಯಮಕನಮರಡಿಗೆ ನಿಗದಿ ಪಡಿಸಲಾಯಿತು.

ಯಮಕನಮರಡಿ ಹುಟ್ಟಿದಾರಭ್ಯ ವ್ಯಕ್ತಿನಿಷ್ಠ ಕ್ಷೇತ್ರವಾಗಿದೆ. ಎಸ್ಸಿ-ಎಸ್ಟಿ ಪ್ರಥಮ ಬಹುಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಮೇಲ್ವರ್ಗದ ಜಾತಿ ಪ್ರತಿಷ್ಠೆಯ “ಆಟ” ನಡೆಯದು. ಅಹಿಂದ ಮತಗಳನ್ನು ಕ್ರೋಢೀಕರಿಸುವ ಚಾಕಚಕ್ಯತೆಯ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರ ಉದಯವಾದಂದಿಂದ ಶಾಸಕನಾಗಿ ಪ್ರತಿನಿಧಿಸುತ್ತಿದ್ದಾರೆ. ಯಮಕನಮರಡಿಯಲ್ಲಿ ಒಟ್ಟು 1,90,339 ಮತದಾರರಿದ್ದಾರೆ; ಇದರಲ್ಲಿ ಎಸ್ಸಿ-ಎಸ್ಟಿ-70,000, ಮರಾಠ-40,000, ಲಿಂಗಾಯತ-20,000, ಮುಸ್ಲಿಮ್-15,000, ಜೈನ್-10,000, ನೇಕಾರ ಮತ್ತು ಬ್ರಾಹ್ಮಣರು ತಲಾ 6,000 ಜತೆಗೆ ಇತರ ಒಬಿಸಿಗಳು 20,000 ಇರಬಹುದೆಂದು ಅಂದಾಜಿಸಲಾಗಿದೆ.

ಸಾಹುಕಾರ್ ಸಾಮ್ರಾಜ್ಯ

ಹ್ಯಾಟ್ರಿಕ್ ದಿಗ್ವಿಜಯ ಸಾಧಿಸಿರುವ ಸತೀಶ್ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಮನುಷ್ಯ ಸಂಬಂಧಗಳನ್ನು ಜತನದಿಂದ ಕಾಪಾಡಿಕೊಂಡಿದ್ದಾರೆಂಬ ಮಾತು ಎಲ್ಲೆಡೆ ಕೇಳಿಬರುತ್ತದೆ; ಬಸವ-ಬುದ್ಧ-ಅಂಬೇಡ್ಕರ್ ತತ್ವ-ಸಿದ್ಧಾಂತದ ಮಂತ್ರ ಪಠಿಸುತ್ತ ಬೆಳಗಾವಿ ಜಿಲ್ಲಾ ರಾಜಕಾರಣದ ಆಯಕಟ್ಟಿನ ಪ್ರಭಾವಿ-ಮಹತ್ವದ ರಾಜಕಾರಣಿಯಾಗಿ ರೂಪುಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸಕ್ಕರೆ ಉದ್ಯಮ ಲಾಬಿಯ ಮೃದು ಸ್ವಭಾವದ ಚತುರ ರಾಜಕಾರಣಿ ಎಂದು ಚಿರಪರಿಚಿತರಾಗಿರುವ ಸತೀಶ್ ಜಾರಕಿಹೊಳಿ ಮತ್ತವರ ಸುದ್ದಿ-ಸದ್ದು ಮಾಡುತ್ತಿರುವ ಅಣ್ಣ ರಮೇಶ್ ಜಾರಕಿಹೊಳಿ ನಡೆ-ನಡಿಯಲ್ಲಿ ಅಜಗಜಾಂತರ ವ್ಯತ್ಯಾಸ. ಅಣ್ಣನದು ಸ್ವಪ್ರತಿಷ್ಠೆ ಗೊಂದಲದ ರಾಜಕಾರಣವಾದರೆ, ತಮ್ಮನದು ಸೈದ್ಧಾಂತಿಕ ಸ್ಪಷ್ಟತೆಯ ನೀತಿ-ನಿಲುವು ಎಂದು ಜಾರಕಿಹೊಳಿ ಬ್ರದರ್ಸ್ “ಪರ್ವ”ವನ್ನು ಹತ್ತಿರದಿಂದ ಕಂಡ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಸತೀಶ್ ಜಾರಕಿಹೊಳಿ ಅಧಿಕಾರ ರಾಜಕಾರಣ ಶುರುವಾಗಿದ್ದು ಜನತಾ ಪರಿವಾರದ ಮೂಲಕ; ಅಂದಿನಿಂದಲೂ ಸಿದ್ದರಾಮಯ್ಯರ ನಿಷ್ಠಾವಂತ ಅನುಯಾಯಿಯಾಗಿದ್ದ ಸತೀಶ್ ಜಾರಕಿಹೊಳಿ ಅಣ್ಣ ರಮೇಶ್ ಜಾರಕಿಹೊಳಿ ವಿಧಾನಸಭೆ ಪ್ರವೇಶಿಸುವುದಕ್ಕಿಂತ ಕೊಂಚ ಮೊದಲೇ ವಿಧಾನ ಪರಿಷತ್‌ಗೆ ಪಾದಾರ್ಪಣೆ ಮಾಡಿದ್ದರು. 1998ರಿಂದ 2008ರ ತನಕ ಎಮ್ಮೆಲ್ಸಿಯಾಗಿದ್ದ ಸತೀಶ್ ಜಾರಕಿಹೊಳಿ ಅಣ್ಣನಿಗಿಂತ ಮುಂಚೆಯೆ ಮಂತ್ರಿಯೂ ಆಗಿದ್ದರು. ಧರ್ಮಸಿಂಗ್(ಕಾಂಗ್ರೆಸ್)- ಸಿದ್ದರಾಮಯ್ಯ(ಜೆಡಿಎಸ್) ಸರಕಾರದಲ್ಲಿ ಜವಳಿ ಸಚಿವರಾಗಿದ್ದರು. ಸಿದ್ದರಾಮಯ್ಯರ ಸಂಗಡ ಕಾಂಗ್ರೆಸ್ ಸೇರಿದ್ದ ಸತೀಶ್ 2008ಲ್ಲಿ ಜೆಡಿಎಸ್‌ನ ಬಾಳಗೌಡ ಪಾಟೀಲ್‌ರನ್ನು 16,961 ಮತಗಳಿಂದ ಮಣಿಸಿ ಮೊದಲ ಬಾರಿ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಎಮ್ಮೆಲ್ಲೆಯಾದರು; 2013ರಲ್ಲಿ ಬಿಜೆಪಿಯ ಮಾರುತಿ ಅಷ್ಟಗಿ ವಿರುದ್ಧ ಭರ್ಜರಿ 24,350 ಮತದಂತರದಿಂದ ವಿಜಯಿಯಾದರು. ಸಿದ್ದರಾಮಯ್ಯನವರ ಸರಕಾರದಲ್ಲಿ ಅಬಕಾರಿ ಮಂತ್ರಿಯಾಗಿದ್ದ ಸತೀಶ್ ತನಗೆ ಆ ಇಲಾಖೆ ಹೊಂದಿಕೆಯಾಗುವುದಿಲ್ಲ; ಬೇರೆ ಖಾತೆ ಕೊಡಿಯೆಂದು ತಗಾದೆ ತೆಗೆದು ಸಂಪುಟದಿಂದ ಹೊರನಡೆದರು. ಸತೀಶ್ ಖಾಲಿ ಮಾಡಿದ್ದ “ಜಾರಕಿಹೊಳಿ ಫ್ಯಾಮಿಲಿ ಕೋಟಾ”ವನ್ನು ರಮೇಶ್ ಜಾರಕಿಹೊಳಿಗೆ ಮಂತ್ರಿ ಮಾಡುವ ಮೂಲಕ ಸಿದ್ದು ತುಂಬಿಕೊಂಡಿದ್ದರು.

ರಾಹುಕಾಲಕ್ಕೆ ಸೆಡ್ಡು!

ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯದ ವಿರುದ್ಧ ಜನ ಜಾಗೃತಿ ಮೂಡಿಸುತ್ತಿರುವ ಸತೀಶ್ ಜಾರಕಿಹೊಳಿ ಕಂದಾಚಾರವನ್ನು ಸಾರ್ವಜನಿಕವಾಗಿಯೇ ಧಿಕ್ಕರಿಸಿ ತಾವೇ ಮಾದರಿಯಾಗುತ್ತಿದ್ದಾರೆ. 2018ರ ಚುನಾವಣೆ ಹೊತ್ತಲ್ಲಿ ಸತೀಶ್ ಜಾರಕಿಹೊಳಿ ವೈದಿಕ ಸಂಪ್ರದಾಯದ ಪ್ರಕಾರ ಕೇಡುಗಾಲವೆಂದು ಪರಿಗಣಿತವಾಗಿರುವ “ರಾಹುಕಾಲ”ದಲ್ಲಿ ನಾಮಪತ್ರ ಸಲ್ಲಿಸಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲ ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರಚಾರ ಮಾಡದೇ ಗೆಲ್ಲಬಹುದೆಂಬ ಯಶಸ್ವಿ ಪ್ರಯೋಗವನ್ನೂ ಮಾಡಿದ್ದರು. ನಾಮಪತ್ರ ಸಲ್ಲಿಸಿದ ನಂತರ ನೇರ ಸಿದ್ದರಾಮಯ್ಯ ಸ್ಪರ್ಧಿಸಿದ್ದ ಬಾದಾಮಿಗೆ ಹೋಗಿದ್ದ ಸತೀಶ್ ಜಾರಕಿಹೊಳಿ ಬಂದಿದ್ದು ಮತದಾನದ ದಿನ; ಆ ಚುನಾವಣೆಯಲ್ಲಿ ತೀರಾ ಸಣ್ಣ ಅಂತರದಿಂದ (2,850) ಬಚಾವಾಗಿದ್ದರು! ಇದು ರಾಹುಕಾಲದ ಮಹಿಮೆಯೆಂದು ಕರ್ಮಠರು ಡಂಗುರ ಸಾರಿದ್ದರು. “ನಾನು ಕ್ಷೇತ್ರದಲ್ಲಿ ಇಲ್ಲದಿದ್ದುದರಿಂದ ಹಿನ್ನಡೆಯಾಗಿದೆ; ಮುಂದಿನ ಬಾರಿ ಹೆಚ್ಚು ಲೀಡ್‌ನಲ್ಲಿ ಗೆದ್ದು ತೋರಿಸ್ತೇನೆ” ಎಂದು ಸತೀಶ್ ಹೇಳಿದ್ದರು.

ಈ ಬಾರಿಯೂ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲಿಯೇ ನಾಮಪತ್ರ ಸಲ್ಲಿಸಿದ್ದಷ್ಟೇ ಅಲ್ಲ, ಸ್ಮಶಾನದಿಂದ ಪ್ರಚಾರ ಪ್ರಾರಂಭಿಸಿದ್ದಾರೆ. ಕ್ಷೇತ್ರದ ಉದ್ದಗಲಕ್ಕೆ ಓಡಾಡುತ್ತ ದಾಖಲೆಯ ಮತದಿಂದ ಗೆಲ್ಲುವ ಸ್ಕೆಚ್ ಹಾಕಿದ್ದಾರೆಂಬ ಮಾತು ಕೇಳಿಬರುತ್ತಿದೆ. ಅಪ್ಪನ ಪ್ರತಿಷ್ಠೆ ಉಳಿಸಲು ಮಗಳು ಮತ್ತು ಮಗ ಆಖಾಡಕ್ಕೆ ಇಳಿದಿದ್ದಾರೆ. ರಾಜಕೀಯದಲ್ಲಿ ಅಸಕ್ತಿಯಿರುವ ಮಗಳು ಪ್ರಿಯಾಂಕ ಚುನಾವಣೆಗೆ ಮೊದಲಿನಿಂದ ಯಮಕನಮರಡಿ ಕ್ಷೇತ್ರದಲ್ಲಿ ಸಂಪರ್ಕ ಸಾಧಿಸಿದ್ದಾರೆ. ಸತೀಶ್ ಜಾರಕಿಹೊಳಿ ಪ್ರಭಾವ ಕುಗ್ಗಿಸಲು ಸಂಘಿ ಪಡೆ ಹಿಂದುತ್ವದ ದಾಳ ಉರುಳಿಸುತ್ತಿದೆ. ನಿಪ್ಪಾಣಿ ಸಭೆಯಲ್ಲಿ ಸತೀಶ್ ಹಿಂದೂ- ಹಿಂದುತ್ವ ಪದದ ಒಂದು “ಅರ್ಥ” ಹೇಳಿದ್ದೇ ಬಿಜೆಪಿಗರಿಗೆ “ಅಸ್ತ್ರ”ವಾಗಿದೆ. ಹಿಂದುತ್ವದ ಫೈರ್ ಬ್ರಾಂಡ್-ಯುಪಿ ಸಿಎಂ ಆದಿತ್ಯನಾಥ್ ಆರ್ಭಟಿಸಿ ಹೋಗಿದ್ದಾರೆ.

ಬಿಜೆಪಿಗೆ ಮೂರನೆ ಸ್ಥಾನ?

ಬಿಜೆಪಿ ಭೂಪರು ಮತ್ತು ಸಂಘಿ ಸರದಾರರು ಅದೆಷ್ಟೇ ಜೋರಾಗಿ ಓಡಾಡಿದರೂ ಸತೀಶ್ ಜಾರಕಿಹೊಳಿ ಬೆನ್ನು ಹಿಡಿಯಲಾಗುತ್ತಿಲ್ಲ. ಮತ ಧ್ರುವೀಕರಣ ತಂತ್ರಗಾರಿಕೆ ಪ್ರಯೋಜನಕ್ಕೆ ಬರುತ್ತಿಲ್ಲ. ಕ್ಷೇತ್ರದಲ್ಲಿ ಜಾರಕಿಹೊಳಿ ಬಗ್ಗೆ ಒಲವಿದೆ; ಕೆಲಸಗಾರ, ಜನಸಾಮಾನ್ಯರಿಗೆ ಸ್ಪಂದಿಸುತ್ತಾರೆ ಎಂಬ ಅಭಿಪ್ರಾಯವಿದೆ. ಜಾರಕಿಹೊಳಿಯ ಪ್ರಭಾವಳಿಯ ಪ್ರಖರತೆಗೆ ಬಿಜೆಪಿ ಕ್ಯಾಂಡಿಡೇಟ್ ಬಸವರಾಜ್ ಹುಂದ್ರಿ ಬಸವಳಿಯುತ್ತಿದ್ದಾರೆ. ಬಿಜೆಪಿ ಒಡೆದ ಮನೆಯಾಗಿದೆ. ಕಳೆದ ಬಾರಿ ಪ್ರಬಲ ಪೈಪೋಟಿ ಕೊಟ್ಟಿದ್ದ ಬಿಜೆಪಿಯ ಮಾರುತಿ ಅಷ್ಟಗಿ ತನ್ನ ತಾಕತ್ತಿನಿಂದಲೇ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿದ್ದವರು. ಆದರೆ ಅಷ್ಟಗಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಅಷ್ಟಗಿ ಅಳುತ್ತಾ ಬಿಜೆಪಿಗೆ ವಿದಾಯ ಹೇಳಿ ಜೆಡಿಎಸ್ ಹುರಿಯಾಳಾಗಿದ್ದಾರೆ. ಗುಡ್ಡಗಾಡು ಭಾಗದಲ್ಲಿ ಜಾರಕಿಹೊಳಿಗಿರುವ ಹಿಡಿತ ತಪ್ಪಿಸುವ ಲೆಕ್ಕಾಚಾರದಿಂದ ಬಿಜೆಪಿ ಜಿಲ್ಲಾ ಮುಖಂಡರು ಬಸವರಾಜ್ ಹುಂದ್ರಿ ಹೆಸರು ಶಿಫಾರಸ್ಸು ಮಾಡಿದ್ದರೆನ್ನಲಾಗುತ್ತಿದೆ. ಹುಂದ್ರಿ ಗುಡ್ಡಗಾಡು ಪ್ರದೇಶದವರು. ಆದರೆ ಉಳಿದೆಡೆ ಅಪರಿಚಿತ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಾರೆೆ.  ಕಾರ್ತಕರ್ತರ ದೊಡ್ಡ ಪಡೆ ಕಟ್ಟಿಕೊಂಡು ಹೋಗಿರುವುದು ಬಿಜೆಪಿ ಪ್ರಚಾರಕ್ಕೆ ತೊಡಕಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿರಿ: ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ಯಮಕನಮರಡಿಯಲ್ಲಿ ತ್ರಿಕೋನ ಕಾಳಗ ಏರ್ಪಟ್ಟಿದೆ; ಬಿಜೆಪಿಗೆ ಸೆಡ್ಡು ಹೊಡೆದು ಜೆಡಿಎಸ್‌ನಿಂದ ಅಖಾಡಕ್ಕೆ ಧುಮುಕಿರುವ ಅಷ್ಟಗಿ ಬಿಜೆಪಿ ಮತದ ಬುಟ್ಟಿಗೆ ಕೈಹಾಕಿ ಕುಂತಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಬಿಟ್ಟು ಬೇರೆ ಮತಗಳನ್ನು ಸ್ವಂತ ತಾಕತ್ತಿನಿಂದ ಸೆಳೆಯಲು ಚುನಾವಣಾ ಯುದ್ಧಕ್ಕೆ ಹೊಸಬರಾದ ಹುಂದ್ರಿಯಿಂದ ಆಗುತ್ತಿಲ್ಲ. ಭರಾಟೆ ಜೋರಾಗುತ್ತಿರುವ ರಣಕಣದಲ್ಲಿ ಜಾತಿ ಸಮೀಕರಣವಾಗಲಿ, ಧರ್ಮಕಾರಣವಾಗಲಿ ವರ್ಕ್ಔಟ್ ಆಗುತ್ತಿಲ್ಲ. ವ್ಯಕ್ತಿ ವರ್ಚಸ್ಸು ಮತ್ತು ಪ್ರಗತಿಯ ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಸಮರ ನಡೆಯುತ್ತಿದೆ. ಐಎಎಸ್, ಕೆಎಎಸ್, ಸೈನಿಕ, ಪೊಲೀಸ್, ಕಲೆ ಮತ್ತು ಜೀವನೋಪಾಯದ ವಿವಿಧ ಕೌಶಲ್ಯ ತರಬೇತಿಯನ್ನು ಯುವಜನರಿಗೆ ಉಚಿತವಾಗಿ ನೀಡುವ ತರಬೇತಿ ಕೇಂದ್ರ ಅಲ್ದಾಳ್ ಗೆಸ್ಟ್ ಹೌಸ್ ಮತ್ತು ಘಟಪ್ರಭಾ ಸೇವಾದಳವನ್ನು ಸತೀಶ್ ಫೌಂಡೇಶನ್‌ನಿಂದ ನಡೆಸಲಾಗುತ್ತಿರುವುದು ಸತೀಶ್ ಜಾರಕಿಹೊಳಿಯವರ ಮತ ಕೊಯ್ಲಿಗೆ ಅನುಕೂಲಕರವಾಗಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.

ಸತತ ಮೂರು ಬಾರಿ ಗೆದ್ದು ಪಿಚ್ ಮರ್ಮ ಅರಿತಿರುವ ಬಲಾಢ್ಯ ಸತೀಶ್ ಜಾರಕಿಹೊಳಿ ಹಿಂದಿಕ್ಕಲು ದುರ್ಬಲ ಪ್ರತಿಸ್ಪರ್ಧಿಗಳಿಗೆ ಸಾಧ್ಯವಾಗುತ್ತಿಲ್ಲ. ನಿರ್ಣಾಯಕವಾಗಿರುವ ಮರಾಠ ಮತದಾರರ ನಿಕಟ ಸಂಪರ್ಕವಿರುವ ಸತೀಶ್ ಜಾರಕಿಹೊಳಿ ಗೆಲ್ಲುವ ಸೂಚನೆಗಳು ಗೋಚರಿಸುತ್ತಿವೆ ಎಂದು ಚುನಾವಣಾ “ಹವಾಮಾನ” ವೀಕ್ಷಕರು ಅಭಿಪ್ರಾಯಪಡುತ್ತಾರೆ. ಜಾರಕಿಹೊಳಿಯ ಗೆಲುವಿನ ಲೀಡ್ ಎಷ್ಟಾದೀತು? ರನ್ನರ್ ಅಪ್ ಬಿಜೆಪಿಯೋ? ಬಿಜೆಪಿ ಬಂಡುಕೋರ ಜೆಡಿಎಸ್ ಅಭ್ಯರ್ಥಿಯೋ? ಎಂಬ ರಣರೋಚಕ ಚರ್ಚೆಗಳೀಗ ಯಮಕನಮರಡಿಯ ರಾಜಕೀಯ ಕಟ್ಟೆಯಲ್ಲಿ ಬಿರುಸಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...