Homeಅಂಕಣಗಳುಮುಂದೆ ಏನಾಗುತ್ತೆ ಅಂತ ನೋಡ್ತಾಯಿರಿ!

ಮುಂದೆ ಏನಾಗುತ್ತೆ ಅಂತ ನೋಡ್ತಾಯಿರಿ!

- Advertisement -
- Advertisement -

ರಸ್ತೆ ಉದ್ಘಾಟನೆ, ರೈಲುಗಳ ಉದ್ಘಾಟನೆಗೆ ಓಡೋಡಿ ಬರುವ ಪ್ರಧಾನಿ ಸಂಸತ್ ಭವನದ ಉದ್ಘಾಟನೆ ಬಿಟ್ಟಾರೆಯೇ! 20 ವಿರೋಧಪಕ್ಷಗಳು ವಿರೋಧಿಸಿದ್ದನ್ನೂ ಕೇರ್ ಮಾಡದ ಪ್ರಧಾನಿ ಸಾಧು ಸಂತರು, ಸಿದ್ದರು, ಸರ್ವ ಸಂಗ ಪರಿತ್ಯಾಗಿಗಳು ಎಂದು ಕರೆದುಕೊಳ್ಳುವವರನ್ನು ಕರೆಸಿ, ಪ್ರಧಾನಿ ಪೀಠಕ್ಕೆ ತೀರಾ ನಿಷ್ಠೆಯಿಂದಿರುವ ಶೃಂಗೇರಿ ಯತಿಗಳನ್ನು ಆಹ್ವಾನಿಸಿ ಸಂಸತ್ ಭವನದ ಉದ್ಘಾಟನೆಯನ್ನು ನೆರವೇರಿಸಿದರಲ್ಲಾ. ಇನ್ನ ನ್ಯಾಯೋಚಿತವಾಗಿ ಉದ್ಘಾಟನೆಯ ಹಕ್ಕು ಪಡೆದಿದ್ದ ದ್ರೌಪದಿ ಮುರ್ಮು ಅವರು, ತಮಗೆ ಒಲಿದ ರಾಷ್ಟ್ರಪತಿ ಹುದ್ದೆಯ ಖುಷಿಯಲ್ಲಿಯೇ ಇನ್ನೂ ಇರುವುದರಿಂದ ಪ್ರಧಾನಿ ಕೃತ್ಯವನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಭಾರತದ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್ ಇಂತಹ ಮಹಾಚೇತನಗಳು ಪ್ರಧಾನಿ ಹಠಕ್ಕೆ ಮರುಗುತ್ತಿರಬಹುದಲ್ಲವೆ? ಸಂಸತ್ತಿನ ಒಳಗಿನವರಿಂದಲೂ ಈ ದೇಶಕ್ಕೆ ಏನೂ ಆಗಲಾರದು ಎಂದಿದ್ದ ಗಾಂಧೀಜಿಯವರ ಮಾತು ನೆನಪಿಗೆ ಬರುತ್ತಿದೆಯಲ್ಲಾ, ಥೂತ್ತೇರಿ.

******

ನಮ್ಮ ವಿಧಾನಸೌಧದ ಸ್ಪೀಕರ್ ಸ್ಥಾನ ಅತ್ಯಂತ ಶ್ರೇಷ್ಠವಾದ ಪಕ್ಷಾತೀತ ಪೀಠ. ಅಲ್ಲಿ ಕುಳಿತಿದ್ದ ಕಾಗೇರಿ ನಾನು ಆರೆಸ್ಸೆಸ್ಸಿನವನು ಎಂದು ಹೆಮ್ಮೆಯಿಂದ ಹೇಳಿ ಈ ನಾಡನ್ನು ಬೆಚ್ಚಿಬೀಳಿಸಿದ್ದರು. ಇನ್ನ ಆ ಪಾರ್ಟಿಯ ವಿದ್ವಾಂಸರು, ಸೆಕ್ಯುಲರ್ ಅಂದರೇನು, ಆ ಪದದ ಒಳಾರ್ಥವೇನು, ಅದನ್ನು ಅನುಸರಿಸುವವರ ನಡವಳಿಕೆಯೇನು ಎಂಬುದನ್ನು ಕುವೆಂಪು ಯೂನಿವರ್ಸಿಟಿಯಿಂದ ಹಿಡಿದು ಬೆಲ್ಜಿಯಂ ಬಾಲನವರೆಗೂ ಕೇಳಿ ಚರ್ಚೆ ನಡೆಸುತ್ತಿರುವಾಗ, ಸ್ಪೀಕರ್ ಸ್ಥಾನಕ್ಕೇರಿದ ಖಾದರ್ ಮಹಾ ಸೆಕ್ಯುಲರ್, ಮಾನವತಾವಾದಿ ಜಾತ್ಯತೀತ ಮನಸ್ಸುಳ್ಳವರು ಎಂದು ಹೇಳಿದ ಬಿಜೆಪಿ ಎಮ್ಮೆಲ್ಲೆಗಳೇ ಬಿಜೆಪಿ ವಿದ್ವಾಂಸರಿಗೆ ಸೆಕ್ಯುಲರ್ ಅರ್ಥವನ್ನು ರವಾನಿಸಿದ್ದಾರಲ್ಲಾ. ನಿಜಕ್ಕೂ ಪ್ರಜಾಪ್ರಭುತ್ವದ ಯಕ್ಷಣಿ ಎಂದರೆ ಇದೇ ಇರಬೇಕು. ಪ್ರಮಾದಗಳನ್ನು ಮತ್ತು ವಕ್ರಬುದ್ಧಿಗಳನ್ನು ಸರಿಪಡಿಸುವ ಶಕ್ತಿ ಕಾಲಪುರುಷನಿಗೆ ಮಾತ್ರ ಇರುವಂಥದಲ್ಲಾ, ಥೂತ್ತೇರಿ.

******

ಭಾರತ ಮತ್ತು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಮಾಧ್ಯಮ ವಿರೋಧ ಪಕ್ಷಗಳನ್ನು ಪ್ರಶ್ನೆ ಮಾಡುತ್ತಾ, ಟೀಕಿಸುತ್ತಾ ಕಾಲ ಹಾಕಿದ್ದು ಇದೇ ಪ್ರಥಮ ಆದ್ದರಿಂದ ಇನ್ನ ಆಡಳಿತಕ್ಕೇರಿದ ವಿರೋಧ ಪಕ್ಷವನ್ನು ಬಿಡುತ್ತವೆಯೇ? ಎಂದಿನಂತೆ ಬಣ ಸೃಷ್ಟಿಸಿಕೊಂಡು ಮಂತ್ರಿಗಳಾಗದವರನ್ನು ಕೆಣಕುತ್ತ, ಇಂತಹವೆಲ್ಲಾ ಸಾಧ್ಯವೇ ಇಲ್ಲಾ ಅಂತ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಎಂದು ಬೊಬ್ಬೆಯಿಡುತ್ತಿವೆಯಲ್ಲಾ. ಇದನ್ನು ನೋಡಿದ ಕರ್ನಾಟಕದ ಜನಸ್ತೋಮ, ’ಈ ಮಾಧ್ಯಮದ ಮಂದಮತಿಗಳಿಗೆ ಕಳೆದ ಸರಕಾರದ ಹಗರಣಗಳು ಒಂದೂ ಕಾಣಲಿಲ್ಲ, ಮುಖ್ಯವಾಗಿ ನಲವತ್ತು ಪರಸೆಂಟ್ ಲಂಚ ಕಾಣಲಿಲ್ಲ, ಹಿಂದಿನ ಸರಕಾರ ಕರುಣಿಸಿದ್ದ ಹಲವು ಭಾಗ್ಯಗಳ ಪೈಕಿ ಇಂದಿರಾ ಕ್ಯಾಂಟಿನ್ ನಿಂತಿದ್ದು, ವಿದ್ಯಾರ್ಥಿಗಳಿಗೆ ಶೂಗಳನ್ನ ಕೊಡದಿದ್ದದು ಕಾಣಲೇ ಇಲ್ಲ’, ಈಗ ಗ್ಯಾರಂಟಿಗಳ ಮೇಲೆ ಬಿದ್ದಿರುವ ಬಿಜೆಪಿ ಬಾಯಿಬಡುಕರ ಜೊತೆ ತಾವೂ ಸೇರಿಕೊಂಡು ಎಬ್ಬಿಸುತ್ತಿರುವ ಗಲಭೆ ನೋಡಿ, ಬಿಜೆಪಿಗಳು ಸೋತಿರುವುದು ಏಕೆಂದು ಅವಕ್ಕಿನ್ನೂ ಗೊತ್ತಾಗಿಲ್ಲವಲ್ಲಾ ಎಂದು ನಗುತ್ತಿದ್ದಾರಲ್ಲಾ, ಥೂತ್ತೇರಿ.

******

ಕನಸು ಮನಸ್ಸಿನಲ್ಲೂ ನಿರೀಕ್ಷೆ ಮಾಡದ ಫಲಿತಾಂಶದಿಂದ ಕಂಗಾಲಾದಂತೆ ಏನೇನೊ ಮಾತಾನಾಡುತ್ತಿರುವ ಕುಮಾರಣ್ಣನನ್ನು ಮಾತನಾಡಿಸಿ ಸಮಾಧಾನ ಹೇಳುವುದು ನಮ್ಮ ಕರ್ತವ್ಯವೆಂದು ತಿಳಿದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್: ’ನೇಗಿಲ ಹಿಡಿದಾ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ ಹೋ..’

“ಹಲೋ ಯಾರು?”

“ನಾನು ಸಾರ್ ಯಾಹೂ.”

“ಎಲ್ಲಿದ್ದಿರಿ ಯಾಹು? ಬನ್ರಿ ಮಾತಾಡನ.”

“ಭಾಳ ದೂರದಲ್ಲಿದ್ದಿನಿ ಸಾರ್. ನಿಮ್ಮ ಮೊಬೈಲ್ ರಿಂಗ್ ಟೋನ್ ಚನ್ನಾಗ್ಯದೆ ಸಾರ್.”

“ಅದು ಕುವೆಂಪು ಬರದ ಪದ ಕಂಡ್ರಿ.”

“ಕವನ ಸಾರ್ ಅದು. ಸಿ. ಅಶ್ವತ್ಥ ಪದ ಮಾಡಿದ್ರು. ಆದ್ರು ಕಾಲ ಏನು ಮಾಡತ್ತೆ ನೋಡಿ, ಆ ಕವನದ ಆಶಯನೆ ಹಾಳಾಯ್ತಲ್ಲ ಸಾ.”

“ಎಲ್ಲಿ ಹಾಳಾಗಿದೆರಿ?”

ಇದನ್ನೂ ಓದಿ: ಚಿಕ್ಕಮಗಳೂರು ಜನಕ್ಕೆ ಈ ಸೋಲು ಬೇಕಿತ್ತು ಸಾರ್!

“ಕುವೆಂಪು ಆ ಕವನ ಬರದದ್ದು ವಲ ಉಳೊ ರೈತನ್ನ ನೋಡಿ. ಆವುನು ಉಕ್ಕೆ ಗೆರೆಗೆ ನೆಟ್ಟಿದ್ದ ದೃಷ್ಟಿ ನೋಡಿ ಯೋಗಿ ಅಂದುಬುಟ್ರು. ಈಗ ನೋಡಿದ್ರೆ ಟ್ರಾಕ್ಟರಲ್ಲಿ ವಲ ಉಳುತಾ ಅವುನೆ.”

“ಅದರಲ್ಲಿ ಆಶ್ಚರ್ಯ ಪಡತಕ್ಕಂತದ್ದೇನಿದೇರಿ? ಜನರ ಶ್ರಮ ಸ್ವಲ್ಪ ಕಡಮೆ ಆಗಿದೆ. ದನಗಳೂ ಇಲ್ಲ. ಅದ್ಕೆ ಟಾಕ್ಟ್ರಲ್ಲಿ ಉಳುಮೆ ಮಾಡತಕ್ಕಂತ ಕೆಲಸ ಏನಿದೆ ಅದನ್ನ ಮಾಡ್ತ ಇದಾನೆ. ನಮಗೆ ಜಾಸ್ತಿ ಸೀಟುಗಳನ್ನ ಕೊಟ್ಟು ಸಮ್ಮಿಶ್ರ ಸರಕಾರದ ರೂವಾರಿ ಮಾಡಿದ್ದ ಮತದಾರ ಇವತ್ತು ಆಶೆ ಅಮಿಷಕ್ಕೆ ಬಲಿಯಾಗಿ ನಮಗೆ ಕೇವಲ 19 ಸ್ಥಾನ ಕೊಟ್ಟಿದ್ದಾನೆ. ಏನು ಮಾಡಕ್ಕಾಗತ್ತೆ ಹೇಳಿ ಕಾಲ ಬದಲಾಗುತ್ತೆ.”

“ಇಂತ ಸೋಲಿಗೆ ನೀವು ಕಂಡುಕೊಂಡ ಉತ್ತರ ಏನು ಸಾರ್?”

“ಉತ್ತರ ಕಣ್ಣಿಗೆ ಕಾಣ್ತಯಿದೆಯಲ್ರೀ. ನನ್ನ ಪಂಚರತ್ನ ನೋಡಿ ಕಾಂಗ್ರೆಸ್ಸಿನವರು ಗ್ಯಾರಂಟಿ ಅನವುನ್ಸ್ ಮಾಡಿದ್ರು. ಅದೂಅಲ್ಲದೆ ಮೂರು ಸಾವುರ ಎರಡು ಸಾವುರ ಉಡುಗೊರೆ ಕೊಟ್ಟವರೆ ಬೇಕಿದ್ರೆ ತನಿಖೆ ಮಾಡಲಿ.”

“ನೀವು ಏನೂ ಕೊಡಲಿಲ್ವ ಸಾರ್?”

“ನಮ್ಮತ್ರ ದುಡ್ಡಿದ್ರೆ ತಾನೆ ಕೊಡದು?”

“ಸಾರ್ ಈ ಚುನಾವಣೆಲಿ ಯಲ್ರು ಯಲ್ಲಾನು ಕೊಟ್ಟವುರೆ. ನಾನೇ ನೋಡಿದಂಗೆ ನಿಮ್ಮ ಮತ್ತೆ ದೇವೇಗೌಡ್ರ ಸಭೆಗೆ ಜನ ತರೊದಕ್ಕೆ ನಿಮ್ಮ ಪಕ್ಷದ ಎಮ್ಮೆಲ್ಲೆ ಮತ್ತೆ ಲೀಡ್ರುಗಳು ಕೂಡ ಕೊಟ್ರು. ಇನ್ನ ಚುನಾವಣೆ ಹಿಂದಿನ ದಿನ ಮನೆ ಮನೆಗೆ ನುಗ್ಗಿ ಕೊಟ್ರು. ಕಾಂಗ್ರೆಸ್ಸು ಹಂಗೆ ನೋಡಿದ್ರೆ ಕಡಿಮೆ ಕೊಡ್ತು. ಇನ್ನ ಬಿಜೆಪಿಗಳಂತೂ ಲೆಕ್ಕವಿಲ್ಲದೆ ಕೊಟ್ರು. ಜನ ಯಲ್ಲಾರತ್ಲೂ ಈಸಗಂಡು ಮಾಡದ್ನೆ ಮಾಡಿದ್ರು.”

“ನಮ್ಮವರು ದುಡ್ಡು ಹಂಚಿಲ್ಲ ಕಂಡ್ರಿ.”

“ಸಾರ್ ನಮ್ಮನೆಲಿ ಏಳು ಓಟಿದ್ದೊ. ಏಳು ಓಟಿಗೆ ಹತ್ತುವರೆ ಸಾವುರ ಕೊಟ್ಟು ಹೋದ್ರು ಗೊತ್ತ ಸಾರ್?”

“ಅಂಗಾದ್ರೆ ನೀವೂ ದುಡ್ಡು ತಗಂಡರೇನ್ರಿ?”

“ನಾವು ತಗಂಡ್ರೆ ಬರಿಯಕ್ಕಾಗತ್ತ ಸಾರ್?”

“ನಾವು ಗಿಫ್ಟ್ ಕೊಟ್ಟಿಲ್ಲ, ಕೂಪನ್ನು ಕೊಟ್ಟಿಲ್ಲ.”

“ಹಿಂದೆ ಕೊಟ್ಟ ದಾಖಲೆ ಇದೆ ಸಾರ್. ಹಂಚಕ್ಕಾಗದೆ ಉಳದ ದಾಸ್ತಾನಿನ ಫೋಟೊ ಇದೆ.”

“ಅದು ಹಳೆದು, ಈಗಿನ ಕತೆ ಹೇಳ್ರಿ.”

“ಈಗಿನ ಕತೆ ಏನು ಅಂದ್ರೇ, ನೀವು ಕಾಂಗ್ರೆಸ್ ಮೇಲೆ ದಾಳಿ ಮಾಡದಕಿಂತ, ಐದು ವರ್ಷ ಭಯಾನಕ ಸರಕಾರ ನಡೆಸಿದೊರ ಮೇಲೆ ಕಣ್ಣಿಡಬೇಕಿತ್ತು. ಅವರ ಅಕ್ರಮ ಬಯಲು ಮಾಡಬೇಕಿತ್ತು. ಅದು ಬುಟ್ಟು ಕಾಂಗ್ರೆಸ್ ಮೇಲೆ ದಾಳಿ ಮಾಡಿದ್ರಿ ಸಾರ್. ಕಾಂಗ್ರೆಸ್ಸು ಅದು ಏನೇ ಆಗಿರ್ಲಿ ದೇವೆಗೌಡ್ರನ್ನ ಪ್ರಧಾನಿ ಮಾಡಿತ್ತು. ನಿಮ್ಮನಮ್ಮೆ ಮುಖ್ಯಮಂತ್ರಿ ಮಾಡಿತ್ತು. ಆದ್ರು ನೀವು ಕಾಂಗ್ರೆಸ್ಸನ್ನ ಟೀಕುಸ್ತಿರಿ, ಹೀಯಾಳುಸ್ತಿರಿ. ಈಗ್ಲು ನೋಡಿ ದೇಶದ ವಿರೋಧ ಪಕ್ಷಗಳೆಲ್ಲಾ ಒಂದಾಗಿ ಪಾರ್ಲಿಮೆಂಟ್ ಭವನದ ಉದ್ಘಾಟನೆ ಬಹಿಷ್ಕರಿಸಿ ದೂರ ಇದ್ರೆ, ದೇವೇಗೌಡ್ರು ಇಂತ ಸ್ಥಿತಿಲಿ ಹೋಗಿ ಭಾಗವಹಿಸಿದ್ರು. ನಿಮಗೆ 19 ಸೀಟು ಬಂದಿರಕ್ಕೆ ಇಲ್ಲೂ ಉತ್ತರ ಸಿಗತ್ತೇ ಅಲ್ವಾ ಸಾರ್.”

“ರೀ ನಮ್ಮ ತಂದೆ ಸರಿಯಾಗೆ ಹೇಳ್ಯವುರಲ್ಲವೇನ್ರಿ? ಈ ದೇಶದ ಪಾರ್ಲಿಮೆಂಟ್ ಕಟ್ಟದ ಏನಿದೆ ಅದು ಆರೆಸ್ಸೆಸ್ಸ್ ಕಚೇರಿಯಲ್ಲ, ಅದ್ಕೆ ಹೋಯ್ತಿನಿ ಅಂತ. ಹೋದ್ರು ಅದು ತಪ್ಪ?”

“ಆರೆಸ್ಸೆಸ್ ಕಚೇರಿಯಲ್ಲ ಸರಿ. ಆದ್ರೆ ಉದ್ಘಾಟಿಸಿದವರು ಆರೆಸ್ಸೆಸ್ಸಿನವರು. ಅಲ್ಲಿ ಪಾರ್ಲಿಮೆಂಟ್ ಸದಸ್ಯರಿಗಿಂತ ಜಗದ್ಗುರುಗಳು ಅನ್ನಿಸಿಕೊಂಡೋರು ಜಾಸ್ತಿ ಜಮಾಯಿಸಿದ್ರು. ಅಂದ್ರೇನು ನೀವು ದೇಶದ ಬಿಜೆಪಿಯ ಬಿ ಟೀಮು ಅಂತ ತೋರಿಸಿಗಂಡ್ರಲ್ಲವಾ ಸಾರ್? ಕಾಂಗ್ರೆಸ್ಸಿನ ಸಿ ಟೀಮಾಗಾದ್ರು ಕಾಣಸಿಗಂಡಿದ್ರೆ ಇನ್ನೊಸಿ ಸೀಟು ಬರವು.”

“ನೋಡ್ರಿ ಯಾಹೂ, ನಾವು ಯಾರಿಗೂ ಬಿ ಟೀಮು, ಸಿ ಟೀಮಾಗಿ ಕೆಲಸ ಮಾಡಲಿಲ್ಲ. ಪೂರ್ಣ ಪ್ರಮಾಣದಲ್ಲಿ ಮೆಜಾರಿಟಿಗೆ ಬರತಕ್ಕಂತ ಪ್ರಣಾಳಿಕೆ ತಯಾರು ಮಾಡಿ ಜನತೆ ಮುಂದೆ ಇಟ್ಟೊ. ಕಾಂಗ್ರೆಸ್ಸಿನ ಅಕ್ರಮದಿಂದ ಸೋತಿದ್ದಿವಿ. ಮುಂದೆ ಏನಾಗತ್ತೆ ನೋಡ್ತಾಯಿರಿ.”

“ಏನಾಗಬಹುದು ಸಾರ್?”

“ಅದನ್ನ ಈಗ್ಲೆ ಹೇಳಕ್ಕೆ ಬರಲ್ಲ. ಕೇವಲ 16 ಸೀಟು ಎಂ.ಪಿಗಳು ಗೆದ್ದಿದ್ದಕ್ಕೆ ದೇವೇಗೌಡ್ರನ್ನ ಕರದು ಈ ದೇಶದ ಪ್ರಧಾನಿ ಮಾಡಿದ್ರು. ಅದಕ್ಕೂ ಹಿಂದೆ ನಮ್ಮ ತಂದೆ ನಿಂತ ಎರಡೂ ಕ್ಷೇತ್ರದಲ್ಲಿ ಸೋತಿದ್ರು. ನಮ್ಮ ಭಾಗಕ್ಕೆ ಇನ್ನೇನು ಎಲ್ಲಾ ಮುಗುದೋಯ್ತು ಅಂತ ಭಾವನೆ ಪಡತಿದ್ದ ಕಾಲ ಅದು. ಮುಂದೆ ಏನಾಯ್ತು ನಿಮಗೆ ಗೊತ್ತಿದೆ.”

“ಸರಿ ನೀವು 19 ಸೀಟು ಮಡಿಕಂಡು ಏನಾಯ್ತಿರಿ?”

“ಮುಂದಿನ ಲೋಕಸಭಾ ಚುನಾವಣೆವರಿಗೆ ಮಾತ್ರ ಈ ಸರಕಾರ ಇರದು.”

“ಅಮ್ಯಾಲೇನಾಗುತ್ತೆ ಸಾರ್?”

“ಅದನ್ನು ಈಗ್ಲೆ ಹೇಳಕ್ಕೆ ಬರಲ್ಲ.”

“ನೀವು ಇಬ್ರಾಹಿಂ ಅವರನ್ನ ಅಧ್ಯಕ್ಷನನ್ನಾಗಿ ಮಾಡಬಾರದಿತ್ತು ಸಾರ್. ನೀವೇ ಆಗಿದ್ರೆ ಇನ್ನ ಜಾಸ್ತಿ ಸೀಟು ಬರ್ತಿದ್ದೊ.”

“ನಮ್ಮ ತಂದೆಗೇಳಿದೆ ಕಂಡ್ರಿ, ಅವುರು ಕೇಳಲಿಲ್ಲ. ಮುಸ್ಲಿಂ ಓಟು ಬತ್ತವೆ ಅಂದ್ರು, ಅವು ಬರಲಿಲ್ಲ.”

“ನಿಜ ಸಾರ್ ರಾಮನಗರದಲ್ಲಿ ನೋಡಿ ಒಂದು ಓಟೂ ಬರಲಿಲ್ಲ. ಅದ್ಕೆ ನಿಖಿಲ್ ಸೋತಿದ್ದು.”

“ರಾಮನಗರದಲ್ಲಷ್ಟೇ ಅಲ್ಲ, ಯಲ್ಲಾ ಕಡೆನು ಮುಸ್ಲಿಮರ ಓಟು ನಮಗೆ ಬರಲಿಲ್ಲ. ಅದ್ಕೆ 19 ಸೀಟು ಬಂದಿದ್ದು.”

“ಮತ್ತೆ ಕಾಂಗ್ರೆಸ್ ಅಕ್ರಮ ನಡಸ್ತು ಅಂದ್ರಿ?”

“ಅದೂ ನ್ಯಡಿತು.”

“ಇದ್ಯಾವುದೂ ನಿಜ ಅಲ್ಲ ಸಾರ್. ನಿಮಗೆ ಜನ ಯಾವತ್ತು ಮೆಜಾರಿಟಿ ಕೊಡಲ್ಲ. ಯಲ್ಲಾ ನಿಮ್ಮ ಭ್ರಮೆ. ಜನ ಈ ಸಾರಿ ಕಾಂಗ್ರೆಸ್ಸಿನವುರು ನಿಮ್ಮ ಮನೆ ಬಾಗಿಲಿಗೆ ಬರದಂಗೆ, ಬಿಜೆಪಿಗಳು ಆಪರೇಷನ್ ಮಾಡದಂಗೆ ಓಟು ಮಾಡ್ಯವುರೆ. ಅಲ್ವೆ ಸಾರ್?”

“ನೋಡ್ತಯಿರಿ ಮುಂದೆ ನೂರ ಹತ್ತೊಂಬತ್ತು ಬರಲಿಲ್ಲ ಅಂದ್ರೆ ನನ್ನ ಪಾರ್ಟಿನೆ ವಿಸರ್ಜನೆ ಮಾಡ್ತಿನಿ.”

“ಥೂತ್ತೇರಿ”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...