ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಕ್ಷಯ್ ಕುಮಾರ್ ದಾಖಲಿಸಿರುವ ಮಾನಹಾನಿ ನೋಟಿಸ್ ಅನ್ನು ಯೂಟ್ಯೂಬರ್ ರಶೀದ್ ಸಿದ್ದಿಕಿ ವಿರೋಧಿಸಿದ್ದಾರೆ. ತಮ್ಮ ವೀಡಿಯೊಗಳಲ್ಲಿ ಮಾನಹಾನಿಕರ ವಿಷಯ ಯಾವುದು ಇಲ್ಲ ಎಂದು ಅವರು ಪುನರುಚ್ಚಿಸಿದ್ದಾರೆ.
ಯೂಟ್ಯೂಬರ್ ರಶೀದ್ ಸಿದ್ದಿಕಿ, ಅಕ್ಷಯ್ ಕುಮಾರ್ ಅವರಿಗೆ ನೋಟಿಸ್ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನೋಟಿಸ್ ಹಿಂಪಡೆಯದಿದ್ದರೆ ರಶೀದ್ ಸಿದ್ದಿಕಿ ನಟನ ವಿರುದ್ಧ “ಸೂಕ್ತ ಕಾನೂನು ಕ್ರಮಗಳನ್ನು” ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತನ್ನ ವಿರುದ್ಧ “ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು” ಮಾಡಿದ್ದಕ್ಕಾಗಿ ಅಕ್ಷಯ್ ಕುಮಾರ್ ನವೆಂಬರ್ 17 ರಂದು ರಶೀದ್ ಸಿದ್ದಿಕಿ ವಿರುದ್ಧ 500 ಕೋಟಿ ರೂಪಾಯಿ ನಷ್ಟವನ್ನು ಕೋರಿ ಮಾನಹಾನಿ ನೋಟಿಸ್ ನೀಡಿದ್ದರು.
ಅಕ್ಷಯ್ ಕುಮಾರ್, ಕಾನೂನು ಸಂಸ್ಥೆ ಐಸಿ ಲೀಗಲ್ ಮೂಲಕ ಕಳುಹಿಸಿದ ನೋಟಿಸ್‌ನಲ್ಲಿ, ರಶೀದ್ ಸಿದ್ದಿಕಿ ತಮ್ಮ ಯೂಟ್ಯೂಬ್ ಚಾನೆಲ್ ಎಫ್‌ಎಫ್ ನ್ಯೂಸ್‌ನಲ್ಲಿ ಹಲವಾರು “ಮಾನಹಾನಿಕರ, ಅಪಮಾನಕರ ಮತ್ತು ಅವಹೇಳನಕಾರಿ” ವೀಡಿಯೊಗಳನ್ನು ಪ್ರಕಟಿಸಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಕೇರಳ ಮೂಲದ ಪತ್ರಕರ್ತ ಸಿದ್ದೀಕ್‌ಗೆ ವಕೀಲರ ಭೇಟಿಗೆ ಸುಪ್ರೀಂ ಅನುಮತಿ
ರಶೀದ್ ಸಿದ್ದಿಕಿ ಅವರು ಶುಕ್ರವಾರ ತಮ್ಮ ವಕೀಲ ಜೆ.ಪಿ.ಜಯ್ಸ್ವಾಲ್ ಅವರ ಮೂಲಕ ಕಳುಹಿಸಿದ ಉತ್ತರದಲ್ಲಿ, ಅಕ್ಷಯ್ ಕುಮಾರ್ ಮಾಡಿದ ಆರೋಪಗಳು “ಸುಳ್ಳು, ದುಃಖಕರ ಮತ್ತು ದಬ್ಬಾಳಿಕೆಯಾಗಿದೆ ಮತ್ತು ನನಗೆ ಕಿರುಕುಳ ನೀಡುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ” ಎಂದು ಹೇಳಿದ್ದಾರೆ.
’ಪ್ರತಿಯೊಬ್ಬ ಭಾರತೀಯ ಪ್ರಜೆಗೆ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿದೆ. ರಶೀದ್ ಸಿದ್ದಿಕಿ ಅಪ್‌ಲೋಡ್ ಮಾಡಿದ ವಿಷಯವನ್ನು ಮಾನಹಾನಿಕರವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಅವುಗಳನ್ನು ವಸ್ತುನಿಷ್ಠತೆಯ ದೃಷ್ಟಿಕೋನಗಳಾಗಿ ಪರಿಗಣಿಸಬೇಕು’ ಎಂದು ಹೇಳಿದೆ.
“ಸಿದ್ದಿಕಿ ವರದಿ ಮಾಡಿದ ಸುದ್ದಿ ಈಗಾಗಲೇ ಸಾರ್ವಜನಿಕ ವಲಯದಲ್ಲಿತ್ತು ಮತ್ತು ಅವರು (ಸಿದ್ದಿಕಿ) ಇತರ ಸುದ್ದಿ ವಾಹಿನಿಗಳನ್ನು ಸುದ್ದಿ ಮೂಲಗಳಾಗಿ ಅವಲಂಬಿಸಿದ್ದಾರೆ” ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ಈ ಹಿಂದೆಯೂ ರಶೀದ್ ಸಿದ್ದಿಕಿ ಮೇಲೆ, ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ ಮತ್ತು ಸಚಿವ ಆದಿತ್ಯ ಠಾಕ್ರೆ ವಿರುದ್ಧ ಮಾನಹಾನಿ, ಸಾರ್ವಜನಿಕ ಕಿಡಿಗೇಡಿತನ ಮತ್ತು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಿಜೆಐ ಬೋಬ್ಡೆ ವಿರುದ್ಧ ಟ್ವೀಟ್: ಕುನಾಲ್ ಕಮ್ರ ವಿರುದ್ಧ ಮತ್ತೊಂದು ನ್ಯಾಯಾಂಗ ನಿಂದನೆ ಪ್ರಕರಣ…
