Homeರಾಜಕೀಯಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ಫ್ರಾನ್ಸ್ ನಲ್ಲಿ ಪ್ರತಿರೋಧದ ಅಲೆ

ಅಧ್ಯಕ್ಷ ಮ್ಯಾಕ್ರೋನ್ ವಿರುದ್ಧ ಫ್ರಾನ್ಸ್ ನಲ್ಲಿ ಪ್ರತಿರೋಧದ ಅಲೆ

- Advertisement -
  • ಡಾ. ಸ್ವಾತಿ ಶುಕ್ಲಾ |
- Advertisement -

ಮೇ 25ರ ಶನಿವಾರ, ಫ್ರಾನ್ಸ್‍ನ ಬೀದಿಗಳಲ್ಲಿ ಲಕ್ಷಾಂತರ ಜನರ ‘ಜನಪ್ರಿಯ ಅಲೆ’ಯ ಪ್ರತಿರೋಧ. ಫ್ರಾನ್ಸ್‍ನ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್‍ರ ಕಾರ್ಮಿಕ ವಿರೋಧಿ ಸುಧಾರಣೆಗಳು ಆ ಜನರನ್ನು ಬೀದಿಗೆ ತಂದಿದ್ದವು. ಸಿಜಿಟಿ ಎಂಬ ಅಲ್ಲಿನ ಅತೀ ದೊಡ್ಡ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಈ ಪ್ರತಿಭಟನೆಗೆ ಕರೆ ಕೊಟ್ಟಿತ್ತು. ಅಧ್ಯಕ್ಷರ ಪ್ರಸ್ತಾಪಿತ ಜನವಿರೋಧಿ ಆರ್ಥಿಕ ಸುಧಾರಣೆಗಳ ವಿರುದ್ಧ ಶಿಕ್ಷಕರು, ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ನೌಕರರು ಪ್ರತಿಭಟಿಸುತ್ತಲೇ ಇದ್ದಾರೆ. ಕಳೆದ ಮೇನಲ್ಲಿ ಮ್ಯಾಕ್ರೋನ್ ಅಧಿಕಾರಕ್ಕೆ ಬಂದ ನಂತರ ಸರ್ಕಾರೀ ಸೇವೆಯಲ್ಲಿನ ನೌಕರರ ಮೂರನೇ ಅತೀ ದೊಡ್ಡ ಮುಷ್ಕರ ಇದಾಗಿದೆ.

ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯಲು ತಂದಿರುವ ಹೊಸ ನಿಯಮಗಳು, ವಲಸೆ ಕುರಿತ ಕಾನೂನುಗಳು ಮತ್ತು ಪೊಲೀಸರಿಗೆ ಹೆಚ್ಚು ಅಧಿಕಾರವನ್ನು ನೀಡುವ ನೀತಿಯ ವಿರುದ್ಧ ಶನಿವಾರದ ಪ್ರತಿಭಟನೆ ದನಿಯೆತ್ತಿತ್ತು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಸರ್ಕಾರೀ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವುದಕ್ಕೆ ಹೊಸ ನಿಯಮಗಳು ಅಡ್ಡಿಯಾಗಿದ್ದವು ಮತ್ತು ಪೊಲೀಸರಿಗೆ ನೀಡಲಾದ ಹೆಚ್ಚಿನ ಅಧಿಕಾರವು ಅಲ್ಲಿನ ಶೋಷಿತ ಸಮುದಾಯಗಳ ವಸತಿ ಪ್ರದೇಶಗಳಲ್ಲಿ ಪೊಲೀಸ್ ದೌರ್ಜನ್ಯವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಇದುವರೆಗಿನ ಕಾರ್ಮಿಕ ಕಾನೂನುಗಳು ಮತ್ತು ಕಾರ್ಮಿಕ ಸಂಘಗಳಿಂದ ಕಾರ್ಮಿಕರಿಗೆ ಸಿಗುವ ರಕ್ಷಣೆಯ ಕಾರಣದಿಂದಲೇ ಫ್ರಾನ್ಸ್‍ನಲ್ಲಿ ಹೆಚ್ಚು ಆರ್ಥಿಕ ವ್ಯವಹಾರವೂ ನಡೆಯುತ್ತಿಲ್ಲ ಮತ್ತು ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲವೆಂದು ಹೇಳುವ ಮ್ಯಾಕ್ರೋನ್ ಕಾರ್ಮಿಕಪರ ಕಾನೂನುಗಳನ್ನು ಕಿತ್ತುಹಾಕುವ ‘ಮಹತ್ವದ’ ಕ್ರಮಕ್ಕೆ ಮುಂದಾಗಿದ್ದಾರೆ. ಹೊಸ ನೀತಿಯ ಪ್ರಕಾರ, ಕಂಪೆನಿಗಳು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದುವರೆಗೆ ಇರುವ ಒಪ್ಪಂದಗಳನ್ನು ಪಾಲಿಸಬೇಕಿಲ್ಲ; ಹೊಸ ಆರ್ಥಿಕ ನೀತಿಯ ವಿಧಾನಗಳಾದ ಹೈರ್ & ಫೈರ್ – ಬೇಕೆಂದಾಗ ತೆಗೆದುಕೋ ಇಲ್ಲವಾದರೆ ಮನೆಗೆ ಕಳಿಸು – ನೀತಿಯನ್ನೂ, ಕೆಲಸದ ಸ್ಥಳದ ಸೌಲಭ್ಯಗಳನ್ನೂ ಮತ್ತು ಕೆಲಸದ ಅವಧಿಯನ್ನೂ ತಮಗೆ ಇಷ್ಟಬಂದ ರೀತಿಯಲ್ಲಿ ಬದಲಾಯಿಸಬಹುದು. ಏಕಪಕ್ಷೀಯವಾಗಿ ಕೆಲಸದಿಂದ ಕಿತ್ತು ಹಾಕಿದಾಗ ಕೊಡಬೇಕಿದ್ದ ಪರಿಹಾರದ ಮೊತ್ತವನ್ನೂ ಕಡಿಮೆ ಮಾಡಿರುವುದು ಯೂನಿಯನ್ನುಗಳಲ್ಲಿ ಆಕ್ರೋಶ ಮೂಡಿಸಿದೆ. ವಿದೇಶೀ ನೆಲೆಯ ಕಂಪೆನಿಗಳಲ್ಲೂ ಕಾರ್ಮಿಕರನ್ನು ಬೇಕಾಬಿಟ್ಟಿ ಕಿತ್ತು ಹಾಕುವುದಕ್ಕೆ ಇದು ಅವಕಾಶ ಮಾಡಿಕೊಟ್ಟಿದೆ. ಮ್ಯಾಕ್ರೋನ್ ಪ್ರಕಾರ ಇವೆಲ್ಲದರಿಂದ ಫ್ರಾನ್ಸ್‍ನ ಜಾಗತಿಕ ಸ್ಪರ್ಧಾ ಸಾಮಥ್ರ್ಯ ಹೆಚ್ಚಲಿದೆ.

ಪ್ಯಾರಿಸ್, ಮರ್ಸೆಲ್ಲಿ ಮತ್ತು ನ್ಯಾಂಟೆಸ್ ಒಳಗೊಂಡಂತೆ 160 ಕಡೆಗಳಲ್ಲಿ ಪ್ರತಿಭಟನೆಗಳು ನಡೆದವು. ಪ್ಯಾರಿಸ್ ಒಂದರಲ್ಲೇ 80,000 ಜನರು ಪಾಲ್ಗೊಂಡರು. ಪ್ರತಿಭಟನಾಕಾರರು ಹಿಂಸೆಗಿಳಿಯಬಹುದೆಂಬ ಸಂಶಯದ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದರು ಮತ್ತು ಅಶ್ರುವಾಯು ಸಿಡಿಸಿದರು. 43 ಜನರನ್ನು ಬಂಧಿಸಿ, 26 ಜನರನ್ನು ಇನ್ನೂ ತಮ್ಮ ವಶದಲ್ಲೇ ಇರಿಸಿಕೊಂಡಿದ್ದಾರೆ.

ಫ್ರಾನ್ಸ್‍ನ ಎಡ ಪಕ್ಷದ ನಾಯಕ ಜ್ಚಾನ್ -ಲು ಮೆಲೆನ್ಕೋ ದಕ್ಷಿಣದ ಬಂದರು ನಗರ ಮರ್ಸೆಲ್ಲಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಹೇಳಿದ ಮಾತುಗಳು ಹೀಗಿವೆ. ‘ಬಡವರ, ಶೋಷಿತರ, ಸೂರು ರಹಿತರ ಮತ್ತು ನಿರುದ್ಯೋಗಿಗಳ ಪರವಾಗಿ ನಾವಿಂದು ಹೇಳುವ ಮಾತು ಒಂದೇ. ಸಾಕು, ಸಾಕು, ಸಾಕು. ಈ ರೀತಿಯ ಜಗತ್ತು ನಮಗೆ ಸಾಕಾಗಿದೆ’.

ಈ ಮಧ್ಯೆ ಸರ್ಕಾರದ ನೀತಿಯ ವಿರುದ್ಧ ಫ್ರಾನ್ಸ್‍ನ ರೈಲು ಚಾಲಕರ ಮುಷ್ಕರ ಮೂರನೆಯ ತಿಂಗಳಿಗೆ ಕಾಲಿಟ್ಟಿದೆ. ಅವರ ಸೇವಾ ನಿಯಮಗಳನ್ನು ಬದಲಿಸುವ, ಬದುಕಿರುವ ಕಾಲ ಭದ್ರತೆ ಕಲ್ಪಿಸುತ್ತಿದ್ದ ಅನುಕೂಲ ಕಿತ್ತು ಹಾಕುವ ಮತ್ತು ಅವಧಿಪೂರ್ವವಾಗಿ ನಿವೃತ್ತಗೊಳಿಸುವ ನೀಯ ವಿರುದ್ಧ ಅವರು ಮುಷ್ಕರ ಹೂಡಿದ್ದಾರೆ. ಇತ್ತೀಚೆಗಿನ ಪ್ರತಿಭಟನೆಗಳಲ್ಲಿ ಅವರ ಜೊತೆ ಏರ್‍ಫ್ರಾನ್ಸ್‍ನ ಸಿಬ್ಬಂದಿ ವಿದ್ಯಾರ್ಥಿಗಳು ಮತ್ತು ಮ್ಯಾಕ್ರೋನ್‍ರ ನೀತಿಯನ್ನು ವಿರೋಧಿಸುವ ಇತರ ಕಾರ್ಮಿಕರೂ ಸಹಾ ಸೇರಿಕೊಂಡಿದ್ದಾರೆ.

ಫ್ರಾನ್ಸ್‍ನ ಇತಿಹಾಸದಲ್ಲೇ ಅತೀ ಕಿರಿಯ ಅಧ್ಯಕ್ಷರಾಗಿರುವ ಇಮ್ಯಾನ್ಯುಯಲ್ ಮ್ಯಾಕ್ರೋನ್ ಅವರಿಗೆ 40 ವರ್ಷ ವಯಸ್ಸು. ನಡುಪಂಥೀಯರಾದ ಅವರು, ಈ ಹಿಂದೆ ಬ್ಯಾಂಕಿಂಗ್ ಉದ್ದಿಮೆಯಲ್ಲಿದ್ದರು. ‘ಎಲ್ಲರಿಗೂ ಉದ್ಯೋಗ’ದ ಭರವಸೆ ಮತ್ತು ಆರ್ಥಿಕತೆಯ ಪುನಶ್ಚೇತನದ ಘೋಷಣೆಯೊಂದಿಗೆ ಅವರು ಅಧಿಕಾರಕ್ಕೆ ಬಂದರು. ಪ್ರಪಂಚದ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನಾಗಿ ಗುರುತಿಸಲ್ಪಡುತ್ತಿರುವ ಆತ, ಆಗಾಗ್ಗೆ ಇತರ ವಿಶ್ವ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ, ತನ್ನ ತವರಿನಲ್ಲೇ ದೊಡ್ಡ ಸವಾಲನ್ನು ಎದುರಿಸಬೇಕಾಗಿ ಬಂದಿದೆ. ನಿವೃತ್ತಿ ವೇತನ ಪಡೆಯುತ್ತಿರುವವರಿಗೆ ತೆರಿಗೆ ಹಾಕಿ ಸರ್ಕಾರೀ ಸಾಲವನ್ನು ತೀರಿಸಬೇಕೆಂದು ಹೇಳುವ ಆತ, ಶ್ರೀಮಂತರಿಗೆ ತೆರಿಗೆ ಕಡಿಮೆ ಮಾಡಬೇಕೆಂಬ ನೀತಿಯನ್ನು ಪ್ರತಿಪಾದಿಸುತ್ತಾರೆ. ಇವೆಲ್ಲದರಿಂದ ಆತನನ್ನು ‘ಶ್ರೀಮಂತರ ಅಧ್ಯಕ್ಷ’ ಎಂದು ಕರೆಯಲಾಗುತ್ತದೆ. ಕಾರ್ಮಿಕ ವಿರೋಧಿ ನೀತಿಗಳು ಮತ್ತು ವಿಶ್ವವಿದ್ಯಾಲಯಗಳಿಗೆ ದಾಖಲಾತಿಯನ್ನು ಕಷ್ಟವಾಗಿಸಿರುವುದರಿಂದ, ವಯಸ್ಸಾದವರು ಮತ್ತು ಯುವಜನರೆಲ್ಲರಿಂದ ವಿರೋಧ ಎದುರಿಸಬೇಕಾಗಿ ಬಂದಿದ್ದು, ಆತನ ಮಾನ್ಯತೆ ಕಡಿಮೆಯಾಗುತ್ತಿದೆ.

ಫ್ರಾನ್ಸ್‍ನ ಕಾರ್ಮಿಕ ಸಂಘಗಳೆಂದರೆ ಯಾರೂ ಮುಟ್ಟಲಾಗದ ಶಕ್ತಿಶಾಲಿ ಸಂಘಗಳಾಗಿ ದಶಕಗಳಿಂದ ಸ್ಥಾಪಿತವಾಗಿವೆ. 1995ರಲ್ಲಿ ಸಂಪ್ರದಾಯವಾದಿ ನಾಯಕತ್ವವು ತರಲು ಹೊರಟಿದ್ದ ಇದೇ ಬಗೆಯ ಜನವಿರೋಧಿ ನೀತಿಗಳನ್ನು ರಾಷ್ಟ್ರವ್ಯಾಪಿ ಮುಷ್ಕರಗಳು ಹಿಮ್ಮೆಟ್ಟಿಸಿದ್ದವು. 1968ರ ನಂತರ ನಡೆದ ಅತೀ ದೊಡ್ಡ ಸಾಮಾಜಿಕ ಹೋರಾಟ ಅದಾಗಿದ್ದು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಒಟ್ಟು ಸೇರಿ ಸರ್ಕಾರವನ್ನೇ ಕೆಳಗಿಳಿಸುವ ಮಟ್ಟ ತಲುಪಿದ್ದವು.

ಆದರೆ, ಈ ಸಾರಿಯ ಗೆಲುವಿನ ತಕ್ಕಡಿ ಮ್ಯಾಕ್ರೋನ್ ಕಡೆಗೇ ಬಾಗುವ ಸಾಧ್ಯತೆ ಇದೆ. ಏಕೆಂದರೆ, ಸತತ ಮುಷ್ಕರಗಳಿಂದ ಇತರ ಸಾರ್ವಜನಿಕರ ಬೆಂಬಲವು ಕಡಿಮೆಯಾಗುತ್ತಿದೆ ಮತ್ತು ಈಗಲೂ ಮ್ಯಾಕ್ರೋನ್ ಒಬ್ಬ ಒಳ್ಳೆಯ ಸುಧಾರಣಾವಾದಿ ಎಂದು ನಂಬುವವರ ಸಂಖ್ಯೆಯೂ ಸಾಕಷ್ಟಿದೆ. ಕಾರ್ಮಿಕ ಸಂಘಗಳೂ ಈ ಹಿಂದಿನಷ್ಟು ಸದೃಢವಾಗಿಲ್ಲ. 60 ವರ್ಷಗಳ ಹಿಂದೆ ಒಟ್ಟು ಕಾರ್ಮಿಕರಲ್ಲಿ ಮೂರನೇ ಒಂದು ಭಾಗದಷ್ಟು ಕಾರ್ಮಿಕ ಸಂಘಗಳ ಸದಸ್ಯತ್ವ ಪಡೆದುಕೊಂಡಿದ್ದರೆ, ಈಗದು ಬಹಳ ಕಡಿಮೆಯಾಗಿದೆ.

ಮ್ಯಾಕ್ರೋನ್ ಇವೆಲ್ಲದರಿಂದ ಅಲುಗಾಡಿದಂತಿಲ್ಲ ಮತ್ತು ‘ಈ ಆಂದೋಲನಗಳು ನನ್ನನ್ನು ತಡೆಯಲು ಸಾಧ್ಯವಿಲ್ಲ’ ಎಂದು ಘೋಷಿಸಿದ್ದಾರೆ. ಏನಾಗಬಹುದು ಎಂಬುದಕ್ಕೆ ಕಾಲವೇ ಉತ್ತರವನ್ನು ಹೇಳಬಲ್ಲದು….

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...