Homeಸಾಮಾಜಿಕಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

ಈ ನೆಲದ ಶೋಷಿತರು ಕಲಿಯಬೇಕಾದದ್ದು ಸಾಕಷ್ಟಿದೆ 

- Advertisement -
ನಗರಗೆರೆ ರಮೇಶ್ |
ಈ ಸಂಭಾಷಣೆಯ ತುಣುಕುಗಳನ್ನು ಗಮನಿಸಿ:
1) ನಮ್ಮ ಮನೆಯ ಮುಂದೆ ನಮ್ಮ ಬೀದಿಯಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದ ಗುಂಪು. ಅದರ ನಾಯಕ ಕೆಲವು ವರ್ಷಗಳ ಹಿಂದೆ ಜೆಡಿಎಸ್‍ನಲ್ಲಿದ್ದು ನಂತರ ಬಿಜೆಪಿ ಸೇರಿ ತನ್ನ ಪತ್ನಿಯನ್ನು ವಾರ್ಡಿನ ಕಾರ್ಪೊರೇಟರ್ ಆಗಿಸಿದ ಒಬ್ಬ ಪುಢಾರಿ.
`ನಮಸ್ಕಾರ ಸಾರ್!’
`ನಮಸ್ಕಾರ?’
ಕರಪತ್ರವನ್ನು ನನ್ನ ಕೈಗೆ ಕೊಡುತ್ತಾ, `ಈ ಬಾರಿ ಬಿಜೆಪಿಗೆ ಓಟ್ ಹಾಕಬೇಕು ಸಾರ್. ಈ ಏರಿಯಾದವರೆಲ್ಲಾ ನಮಗೇ ಓಟ್ ಹಾಕ್ತಾ ಇದಾರೆ.’
`ಆಯ್ತು, ಹಾಕೋಣ. ಆದ್ರೆ ಬಿಜೆಪಿಗೆ ಯಾಕೆ ಓಟ್ ಹಾಕಬೇಕು?’
`ನಮ್ಮ ಹಿಂದೂ ಧರ್ಮಕ್ಕೋಸ್ಕರ.’
`ಹಿಂದೂ ಧರ್ಮಕ್ಕೆ ಈಗ ಏನಾಗಿದೆ.’
`ಏನ್ಸಾರ್ ಹೀಗೆ ಹೇಳ್ತೀರ? ಅವರು ನೋಡಿ ಎಲ್ಲಾ ಕಡೆ ಹೇಗೆ ಬೆಳೀತಾ ಇದಾರೆ!’
`ಏನು, ಈ ದೇಶದಲ್ಲಿ ಬರೀ ಹಿಂದೂಗಳು ಮಾತ್ರ ಇರಬೇಕಾ? ನಿಮ್ಮ ಪಾಡಿಗೆ ನೀವು ಪೂಜೆ ಮಾಡಿ. ಅವರು ನಮಾಜೋ, ಮತ್ತೊಂದೋ ಮಾಡ್ಕೋತಾರೆ. ನಿಮಗೇನು ಕಷ್ಟ?’
`ಆದ್ರೂ, ನಾವು ಹುಷಾರಾಗಿರಬೇಕು ಅಲ್ವಾ ಸಾರ್! ದೇವೇಗೌಡ್ರು ನೋಡಿ, ಒಂದು ಸಲ ಹೇಳಿದ್ರು: ಮುಂದಿನ ಜನ್ಮ ಅನ್ನೋದಿದ್ರೆ ನಾನು ಮುಸ್ಲಿಮರ ಮನೇಲಿ ಹುಟ್ಟೋಕೆ ಬಯಸ್ತೀನಿ ಅಂತ.’
`ನೋಡ್ರಿ! ಕೆಲವು ವರ್ಷಗಳ ಹಿಂದೆ ನೀವು ಅವರ ಜತೆಯಲ್ಲಿದ್ರಿ. ಈಗ ಈ ರೀತಿ ಮಾತಾಡ್ತಾ ಇದೀರಲ್ರೀ! ಅಷ್ಟೇ ಅಲ್ಲದೆ ಒಂದು ಧರ್ಮದ ಹೆಸರಿನಲ್ಲಿ ಮತ ಕೇಳೋದು ತಪ್ಪು ಅಂತ ನಿಮಗೆ ಗೊತ್ತಿಲ್ವಾ?’
“ಅದು ಬಿಡಿ ಸಾರ್. ನಾವು ಅಭಿವೃದ್ಧಿ ಮಾಡ್ತಾ ಇದೀವಿ. ರೋಡುಗಳಿಗೆ ಟಾರ್ ಹಾಕಿಸ್ತಾ ಇದೀವಿ.”
“ಹೌದಾ! ಸ್ವಲ್ಪ ನಮ್ಮ ಬೀದಿ ಕಡೆ ನೋಡಿ. ಇಲ್ಲಿ ಟಾರ್ ಹಾಕಿ ಅದೆಷ್ಟೋ ಕಾಲ ಆಗ್ಹೋಗಿದೆ. ಇದು ಅಭಿವೃದ್ಧಿನಾ?”
“ನಿಮ್ಮಿಷ್ಟ ಸಾರ್, ಯಾರಿಗಾದ್ರೂ ಹಾಕ್ಕೊಳ್ಳಿ.”
ಎಂದ ಆ ವ್ಯಕ್ತಿ ಮತ್ತೊಂದು ಬಾರಿ ನಮಸ್ಕರಿಸಿ ತನ್ನ ಹಿಂಬಾಲಕರ ಜತೆ ಓಟ ಕಿತ್ತ.
* * * *
2) ದೂರವಾಣಿ ಸಂಭಾಷಣೆ:
“ನಮಸ್ಕಾರ ಸಾರ್! ರಮೇಶ್ ಅವರಾ?”
“ಹೌದು, ನೀವೂ?”
“ನಾನು ಈ ಏರಿಯಾದ ಬ್ರಾಹ್ಮಣ ಸಂಘದಿಂದ ಮಾತಾಡ್ತಾ ಇದೀನಿ ಈ ಬಾರಿ ಎಲೆಕ್ಷನ್‍ನಲ್ಲಿ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಓಟು ಹಾಕಬೇಕು.”
“ನಾನು ಆ ರೀತಿ ಯೋಚನೆ ಮಾಡೋನಲ್ಲ. ನೇರವಾಗಿ ಹೇಳ್ತೀನಿ ಕೇಳಿ. ನಾನು ಬಿಜೆಪಿ ವಿರೋಧಿ.”
“ತುಂಬಾ ಬೇಜಾರಾಯ್ತು ಸಾರ್, ನಿಮ್ಮ ಮಾತು ಕೇಳಿ!”
“ಯಾಕೆ?”
“ನಾನು ಬಿಜೆಪಿ, ಅರ್‍ಎಸ್‍ಎಸ್. ನೀವು ಬಿಜೆಪಿನ ವಿರೋಧಿಸ್ತೀನಿ ಅಂದ್ರಿ. ಅದಕ್ಕೇ ಬೇಜಾರು.”
“ನಾನೇನೂ ಮಾಡೋಕಾಗಲ್ಲ”
* * * *
3) ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ:
ಅಂಗಡಿಯವನನ್ನುದ್ದೇಶಿಸಿ: “ ನಾಳೆ ಎಲೆಕ್ಷನ್ ಅಲ್ವಾ! ಬಿಜೆಪಿಗೆ ಹಾಕ್ತಿರಿ ತಾನೇ!”
“ಹಾಕ್ಲೇ ಬೇಕಾಲ್ಲಾ ಇಲ್ದಿದ್ರೆ ನಾವು ಉಳಿಯೋದು ಹೇಗೆ?”
ಮಹಿಳೆ ಈಗ ನನ್ನನ್ನುದ್ದೇಶಿಸಿ;
“ಇಲ್ಲೆಲ್ಲಾ ಬಿಜೆಪಿಗೇ ಓಟು ಸಾರ್, ನೀವೇನಂತೀರಾ ಸಾರ್?”
“ಬಿಜೆಪಿಗೆ ಯಾಕೆ ಓಟು ಹಾಕಬೇಕಮ್ಮಾ?”
“ಯಾಕೆ ಸಾರ್? ಮೋದಿ ನೋಡಿ. ಪ್ರಪಂಚದಲ್ಲೆಲ್ಲಾ ಜನ ನಮ್ಮ ದೇಶನಾ ಗಮನಿಸೋತರ ಮಾಡಿದಾನೆ.”
“ಅಂದ್ರೆ ಅದಕ್ಕೆ ಮೊದಲು ಯಾರಿಗೂ ನಮ್ಮ ದೇಶದ ಬಗ್ಗೆ ಗೊತ್ತೇ ಇರಲಿಲ್ವಾ? ಗಾಂಧಿ, ನೆಹರೂ ಎಲ್ಲಾ ಇದ್ರಲ್ಲಾ!”
“ಇದ್ರು ಸಾರ್. ಆದ್ರೆ ಈಗ ಮೋದಿ ನಮ್ಮನ್ನ ಹೆಚ್ಚು ಫೇಮಸ್ ಮಾಡಿದಾನೆ”
“ಗಾಂಧಿನ ಕೊಂದ ಗುಂಪಿಗೆ ಸೇರಿದ ಮೋದಿಗೂ, ಇವರಿಗೂ ಹೋಲಿಕೆ ಇದೆಯೇನಮ್ಮಾ!”
“ಏನೋ ಸಾರ್! ಇಲ್ಲಿನ ಬ್ರಾಹ್ಮಣರಂತೂ ಎಲ್ಲಾ ಬಿಜೆಪಿನೇ. ಇಲ್ದೇ ಇದ್ರೆ ಇನ್ನು ಮುಂದೆ ಸಾಬರು ನಮ್ಮ ಮನೆಗಳಿಗೇ ನುಗ್ಗಿ ನಮಾಜ್ ಮಾಡ್ತಾರಷ್ಟೇ!”
“ನೋಡೀಮ್ಮಾ. ನಿಮಗಿಷ್ಟ ಆದ್ರೆ ಬಿಜೆಪಿಗೆ ಓಟು ಹಾಕ್ಕೋಳ್ಳಿ. ಆದರೆ, ಇಂಥ ಸುಳ್ಳುಗಳನ್ನು ತಲೀಲಿ ತುಂಬಿಕೊಂಡಿರಬೇಡಿ.”
ಮೇಲಿನ ಸಂಭಾಷಣೆಗಳ ತುಣುಕುಗಳು ಕಲ್ಪನೆಯಲ್ಲ. ಅವು ನನ್ನ ಮತ್ತು ಆ ಮೂವರು ವ್ಯಕ್ತಿಗಳ ನಡುವೆ ನಡೆದ ಮಾತುಗಳು.
ಸಂಘ ಪರಿವಾರದ ರಾಜಕೀಯ ಘಟಕವಾದ ಬಿಜೆಪಿಯ ಬೆಂಬಲದ ಮೂಲ (Support Base) ಪ್ರಮುಖವಾಗಿ ಯಾವುದು ಮತ್ತು ಆ ಬೆಂಬಲದ ಹಿಂದಿನ ಪ್ರಧಾನ ಕಾರಣಗಳು ಯಾವು ಅನ್ನುವುದು ಅವರುಗಳ ಮಾತುಗಳಿಂದ ಸ್ಪಷ್ಟವಾಗುತ್ತದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ದೇಶದ ಪ್ರಧಾನ ಸೇವಕ ಮತ್ತೆ ಮತ್ತೆ ಕೂಗಿಕೊಂಡರೂ, ಅದು ಎಷ್ಟು ಪೊಳ್ಳು ಎನ್ನುವುದು ಆತನಿಗೂ ಮತ್ತು ಆತನ ಆರಾಧಕರಿಗೂ ಗೊತ್ತು. ಬಿಜೆಪಿಯ ಹಲವರು ನಾಯಕರು, ಮಂತ್ರಿಗಳೂ ಸೇರಿದಂತೆ ನಿರ್ಭಿಡೆಯಿಂದ ಇಲ್ಲಿನ ಮುಸಲ್ಮಾನರ ವಿರುದ್ಧ ಕೆಂಡ ಕಾರುವುದನ್ನು, ಅದಕ್ಕೆ ಆಪ್ರಧಾನ ಸೇವಕ ಅಡ್ಡಿಪಡಿಸಿರುವುದನ್ನು ಕಂಡ ಯಾರಿಗಾದರೂ ಅವರೆಲ್ಲರೂ ತಮ್ಮ ಗುರೂಜಿಯ ‘ಚಿಂತನಗಂಗಾ’ದ ವಿಚಾರಧಾರೆಗೇ ಜೋತು ಬಿದ್ದಿರುವುದು ಸ್ಪಷ್ಟವಾಗಬೇಕು.
ಇನ್ನೂ ಬ್ರಾಹ್ಮಣರೆಲ್ಲಾ ಬಿಜೆಪಿಗೆ ಮತ ನೀಡಬೇಕು ಎನ್ನುವ ಮಾತಂತೂ ಆ ಪಕ್ಷ ತೋರಿಕೆಗಾಗಿಯಾದರೂ ಎಷ್ಟೇ ಹೆಣಗಿದರೂ ‘ಬ್ರಾಹ್ಮಣರ ಪಕ್ಷ’ ಎನ್ನುವ ಹಣೆ ಪಟ್ಟಿಯಿಂದ ದೂರಬರುವುದಂತೂ ಸಾಧ್ಯವೇ ಇಲ್ಲ. ಬ್ರಾಹ್ಮಣರೆನಿಸಿಕೊಂಡವರು ಒಂದು ಕಡೆ ಸೇರಿದಾಗ ವ್ಯಕ್ತವಾಗುವ ಅಭಿಪ್ರಾಯ ಅದು. ಯಾರಾದರೂ ಆ ಮಾತನ್ನು ಒಪ್ಪದಿದ್ದರೆ, ‘ತಲೆಕೆಟ್ಟವ’ ಎನ್ನುವ ಬಿರುದಿಗೆ ಸಿದ್ಧವಾಗಿರಬೇಕು. ಆದರೆ ಅಂಥವರಿಂದ ಬ್ರಾಹ್ಮಣರ ಬಿಜೆಪಿ ಒಲವಿಗೆ ಧಕ್ಕೆಯಾಗದು.
ಬಿಜೆಪಿ ನಮ್ಮ ದೇಶಕ್ಕೆ ಏನೋ ತಂದು ಕೊಡುತ್ತದೆ, ಅಭಿವೃದ್ಧಿ ಪಥದಲ್ಲಿ ನಡೆಸುತ್ತದೆ ಎಂದು ನಂಬುವ, ನಂಬಿದಂತೆ ನಟಿಸುತ್ತಿರುವ ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಕಲಿಯಬೇಕಾದದ್ದು ಸಾಕಷ್ಟಿದೆ. ಈ ಮಾತನ್ನು ಹೇಳಲು ಮುಖ್ಯ ಕಾರಣವೆಂದರೆ ಎಷ್ಟೇ ನಿದರ್ಶನಗಳು ನಮ್ಮ ಮುಂದಿದ್ದರೂ ಈಗಲೂ ಹಿಂದುಳಿದ ಜಾತಿಗಳ, ದಲಿತರ, ಸ್ವಲ್ಪಮಟ್ಟಿಗೆ ಅಲ್ಪಸಂಖ್ಯಾಂತರ ಬೆಂಬಲ ಬಿಜೆಪಿಗೆ ದೊರೆತಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಕಂಡುಬಂದಿದೆ. ಇನ್ನು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತ(ವೀರಶೈವರೂ ಸೇರಿ)ರ ಬಲವಂತೂ ಬಿಜೆಪಿಯ ಕಡೆಗೇ ಇದೆ ಎನ್ನುವುದಂತೂ ಸೂರ್ಯ ಸ್ಪಷ್ಟೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗಬೇಕೆಂಬ ಒತ್ತಾಯದ ನಡುವೆಯೂ, ಅವರ ಬಿಜೆಪಿ ಪ್ರೇಮ ಕುಂಠಿತಗೊಂಡಿಲ್ಲ. ಅಲ್ಪಸಂಖ್ಯಾತ ಹಣೆಪಟ್ಟಿಯೂ ಬೇಕು, ನಮ್ಮವನೇ ಮುಖ್ಯಮಂತ್ರಿಯೂ ಆಗಬೇಕು ಎನ್ನುವ ಧೋರಣೆ ಅವರದು.
ಪ್ರತಿದಿನವೂ ನಡೆಯುತ್ತಿರುವ ತಂತ್ರ-ಪ್ರತಿತಂತ್ರಗಳನ್ನು ಗಮನಿಸಿದರೆ ನಮ್ಮಾ ಸಮಾಜ ಪ್ರಜಾ ತಾಂತ್ರಿಕತೆ ಎಂದರೆ ಏನು ಎನ್ನುವುದರ ಬಗ್ಗೆ ಇನ್ನೂ ಪ್ರಾಥಮಿಕ ಪಾಠಗಳೇ ಕಲಿತಿಲ್ಲ ಎನ್ನುವುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ಜನರು ಮತ್ತು ಅವರಿಂದ ಆರಿಸಿಬಂದ ಜನಪ್ರತಿನಿಧಿಗಳು, ಅವರ ನಾಯಕರುಗಳು ಯಾರಿಗೂ ಪ್ರಜಾತಂತ್ರ, ಸಂವಿಧಾನ ಇವು ಯಾವುದರ ಬಗ್ಗೆಯೂ ಕಿಂಚಿತ್ತೂ ಕಾಳಜಿ ಇಲ್ಲ. ಅವೆಲ್ಲವೂ ಕೇವಲ ಜನರನ್ನು ಮರಳು ಮಾಡಲು ಬಳಸುವ ಪದಗಳು ಆ ವಿಷಯ ಜನರಿಗೂ ಗೊತ್ತು.
ಇಂಥ ಸನ್ನಿವೇಶದಲ್ಲಿಯೇ ಪ್ರಗತಿಪರವಾಗಿ, ಮೌಲ್ಯಗಳ ಬಗ್ಗೆ, ಅವುಗಳ ನಾಶದ ಬಗ್ಗೆ ಗಮನ ಹರಿಸುವವರ ಜವಾಬ್ಧಾರಿ ಇನ್ನೂ ಹೆಚ್ಚು. ಬಹಳ ಬೇಗ ಸಿನಿಕತನಕ್ಕೆ ನಮ್ಮನ್ನುದೂಡುವ ಇಂಥ ಬೆಳವಣಿಗೆಗಳನ್ನು ಅರ್ಥಮಾಡಿಕೊಂಡು ಸಮಾಜವನ್ನು ಸರಿಯಾದ ಮಾರ್ಗದ ಕಡೆ ಕರೆದೊಯ್ಯುವ ಪ್ರಯತ್ನಗಳು ನಡೆದರೆ ದೇಶಕ್ಕೆ ಸದ್ಗತಿ ಇಲ್ಲವೇ ದುರ್ಗತಿ.
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೆನಡಾದ ಸಾರ್ವತ್ರಿಕ ಚುನಾವಣೆಗೆ ಭಾರತದಿಂದ ‘ಆಯ್ಧ ಅಭ್ಯರ್ಥಿಗಳಿಗೆ’ ರಹಸ್ಯವಾಗಿ ಹಣಕಾಸಿನ ನೆರವು: ವರದಿ

0
2021ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಆಯ್ದ ಅಭ್ಯರ್ಥಿಗಳಿಗೆ ರಹಸ್ಯವಾಗಿ ಹಣಕಾಸಿನ ನೆರವು ನೀಡಲು ಭಾರತ ಸರ್ಕಾರವು ತನ್ನ ಪ್ರಾಕ್ಸಿ ಏಜೆಂಟ್‌ಗಳ ಮೂಲಕ ಪ್ರಯತ್ನಿಸಿರಬಹುದು ಎಂದು ಕೆನಡಾದಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ತನಿಖೆ ನಡೆಸುತ್ತಿರುವ ಕೆನಡಾದ...