Homeಮುಖಪುಟಅಮತ್ರ್ಯ ಸೇನ್ ಕುರಿತ ಸಂಘಿ ಕ್ರಿಮಿನಲ್‍ಗಳ ಅಪಪ್ರಚಾರ; ಸುಳ್ಳು ಪ್ರಚಾರಕ್ಕೆ ಹಿರಿಕಿರಿಯರೆಂಬುದಿಲ್ಲ...

ಅಮತ್ರ್ಯ ಸೇನ್ ಕುರಿತ ಸಂಘಿ ಕ್ರಿಮಿನಲ್‍ಗಳ ಅಪಪ್ರಚಾರ; ಸುಳ್ಳು ಪ್ರಚಾರಕ್ಕೆ ಹಿರಿಕಿರಿಯರೆಂಬುದಿಲ್ಲ…

- Advertisement -
- Advertisement -

| ಸಿರಿಮನೆ ನಾಗರಾಜ್ |

ಬಿಜೆಪಿ ಮತ್ತು ಸಂಘ ಪರಿವಾರದ ಅಪಪ್ರಚಾರದ ಯಂತ್ರವು ಹಗಲೂ-ರಾತ್ರಿ ಚಾಲೂ ಇರುತ್ತದೆ. ಮೋದಿಯ-ಬಿಜೆಪಿಯ ಅದಕ್ಷತೆ-ವಿಫಲತೆ-ದುರಾಡಳಿತಗಳನ್ನು, ಸಂಘ ಪರಿವಾರದ ಅನಾಚಾರಗಳನ್ನು, ಸಂಘಿ ಕ್ರಿಮಿ/ನಲ್‍ಗಳ ಅಕರಾಳ-ವಿಕರಾಳ ಕೃತ್ಯಗಳನ್ನು … ಇವೆಲ್ಲವನ್ನೂ ಸಕಾರಣವಾಗಿಯೇ ವಿರೋಧಿಸುವ ಅಥವಾ ಅವುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಎಲ್ಲರನ್ನೂ ಗುರಿಮಾಡಿ ಈ ಯಂತ್ರದ ಕಾಲಾಳುಗಳು ಕೆಲಸ ಮಾಡುತ್ತಾರೆ. ಅದಕ್ಕೆ ಗುರಿಯಾಗುತ್ತಿರುವವರು ನಿಜವಾದ ಗಣ್ಯರಿರಲಿ, ಎಂಥ ದೊಡ್ಡ ಸಾಧಕರೇ ಇರಲಿ, ಈ ದೇಶಕ್ಕೆ, ಸಮಾಜಕ್ಕೆ ಎಷ್ಟೇ ದೊಡ್ಡ ಕೊಡುಗೆ ನೀಡಿರಲಿ, ತಮ್ಮ ಸಾಧನೆಗಾಗಿ ರಾಷ್ಟ್ರೀಯ-ಅಂತರರಾಷ್ಟ್ರೀಯ ಗೌರವ ಮನ್ನಣೆ ಪಡೆದವರಿರಲಿ, ಯಾವುದೂ ಇವರಿಗೆ ಲೆಕ್ಕವಿಲ್ಲ. ಅವರ ಕುರಿತು ಅಸಭ್ಯ ಭಾಷೆಯಲ್ಲಿ ಬಯ್ಯುವುದು, ಅವರ ತೇಜೋವಧೆ ಮಾಡುವುದು, ಸುಳ್ಳಿನ ಸರಮಾಲೆ ಸೃಷ್ಟಿಸಿ ವ್ಯಾಪಕ ಅಪಪ್ರಚಾರ ಮಾಡುವುದು, ‘ಗಂಜಿ ಗಿರಾಕಿ’, ‘ಕಾಂಗಿ’, ‘ಟುಕಡೇ ಟುಕಡೇ ಗ್ಯಾಂಗ್’ ‘ಪಾಕಿ ಏಜೆಂಟ್’ ಇನ್ನೂ ಮುಂತಾಗಿ ವಿಕೃತ ಹೆಸರು ಕಟ್ಟಿ ಅವರ ಕುರಿತು ಜನಮಾನಸದಲ್ಲಿ ಅಪನಂಬಿಕೆ, ದ್ವೇಷ ಇತ್ಯಾದಿ ಹುಟ್ಟುಹಾಕುವುದು, ಅಷ್ಟೂ ಸಾಲದೆಂಬಂತೆ, ಮಹಿಳೆಯರಿಗಾದರೆ ರೇಪ್ ಬೆದರಿಕೆ, ಮಿಕ್ಕಂತೆ ಎಲ್ಲರಿಗೂ ಜೀವ ಬೆದರಿಕೆ ಒಡ್ಡುವುದು …

ಒಂದೆರಡಲ್ಲ ಈ ಯಂತ್ರಾಂಗದ ಕಾರ್ಯಭಾರ! ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರನ್ನು ಬಿಟ್ಟರೆ, ಗಾಂಧೀಜಿಯಿಂದ ಹಿಡಿದು ಇಂದಿನ ನಮ್ಮ ಎಚ್.ಎಸ್. ದೊರೆಸ್ವಾಮಿಯವರ ವರೆಗೆ, ನೊಬೆಲ್ ಪ್ರಶಸ್ತಿಯಿಂದ ಮೊದಲ್ಗೊಂಡು ಜ್ಞಾನಪೀಠ, ‘ಪದ್ಮ’, ‘ಭಾರತ ರತ್ನ’ ಪ್ರಶಸ್ತಿ ಪುರಸ್ಕøತರವರೆಗೆ ಯಾರೂ ಇವರಿಗೆ ದೊಡ್ಡವರಲ್ಲ, ಯಾರನ್ನೂ ಇವರು ಬಿಟ್ಟವರಲ್ಲ. ನೆಹರೂ, ಅಂಬೇಡ್ಕರ್, ಲೋಹಿಯ, ಪೆರಿಯಾರರಂಥವರಂತೂ ಇವರಿಗೆ ಲೆಕ್ಕವೇ ಅಲ್ಲ. ಈ ಯಂತ್ರಾಂಗದ ಯಾವುದೋ ಮೂಲೆಯ ಯಾರೋ ಒಬ್ಬರು ಒಂದು ಸುಳ್ಳು ಸುದ್ದಿ ಸೃಷ್ಟಿಸಿ – ಅವರು ಸೃಷ್ಟಿಸುವುದೆಲ್ಲ ಅಪ್ಪಟ ಸುಳ್ಳು ಮತ್ತು ಅಸಂಬದ್ಧವೇ – ಹರಿಬಿಟ್ಟರೆಂದರೆ ಅದು ಕ್ಷಣಾರ್ಧದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ, ಬಹುಭಾಷೆಗಳಲ್ಲಿ ಪ್ರಸಾರವಾಗುತ್ತ ಹೋಗುತ್ತದೆ; ದಿನ-ವಾರ-ತಿಂಗಳುಗಟ್ಟಲೆ ಶೇರ್-ಮರು ಶೇರ್ ಆಗಿ ಸಕ್ರ್ಯುಲೇಟ್ ಆಗುತ್ತಲೇ ಇರುತ್ತದೆ.

ಅದೇನೂ ಹೊಸದಲ್ಲ ಅನ್ನೋಣ. ಆದರೆ ಇಂಥ ನೀಚ ಕೃತ್ಯವನ್ನು ಈ ಯಂತ್ರಾಂಗದ ಸಾಮಾನ್ಯ ಸಂಬಳದ ಆಳುಗಳು ಮಾಡುವುದಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನದಲ್ಲಿರುವ ಮಾಧ್ಯಮಕರ್ತರೇ ಮಾಡಿದರೆ? ಅದು ಹಸಿ ಸುಳ್ಳು, ಪೂರ್ತಿ ನಿರಾಧಾರ ಎಂದು ಸಂಸತ್ತಿನ ಕಾರ್ಯಕಲಾಪದ ಮೂಲಕವೂ ಮೊದಲೇ ಪ್ರಚುರಗೊಂಡಿದ್ದರೂ – ಅಂದರೆ ತಾನೀಗ ಹೇಳಲು ಹೊರಟಿರುವುದು ಖಂಡಿತ ಸುಳ್ಳು ಎಂದು ಗೊತ್ತಿದ್ದರೂ – ಅದನ್ನು ಪ್ರಚುರಪಡಿಸಿ, ನಂತರ ವಿರೋಧ ಬಂದಾಗಲಾದರೂ ಅದರ ಬಗ್ಗೆ ಕ್ಷಮಾಪಣೆ ಹೋಗಲಿ, ಕನಿಷ್ಠ ಪಶ್ಚಾತ್ತಾಪ ಕೂಡ ವ್ಯಕ್ತಪಡಿಸದಿದ್ದರೆ? ಇಂಥ ದುಷ್ಟತನ, ನಿರ್ಲಜ್ಜತನ ಬಿಜೆಪಿ ಮತ್ತು ಸಂಘ ಪರಿವಾರದವರಲ್ಲಿ ಮಾತ್ರ ಕಾಣಲು ಸಾಧ್ಯ.
ಇದನ್ನೆಲ್ಲ ಬರೆಯಲು ಕಾರಣ – “ಅಮತ್ರ್ಯ ಸೇನ್ ಅಮೆರಿಕದಲ್ಲಿ ಕುಳಿತು ನರೇಂದ್ರ ಮೋದಿ ವಿರುದ್ಧ ಯಾವಾಗಲೂ ವಿಷ ಕಕ್ಕುತ್ತಿರುವುದಕ್ಕೆ ಕಾರಣವೇನು? … ನೋಡಿ, ಇಲ್ಲಿದೆ ಕಾರಣ. ಎಚ್ಚರಿಕೆಯಿಂದ ಓದಿರಿ” ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಏಪ್ರಿಲ್‍ನಿಂದ ಸುತ್ತು ಹಾಕುತ್ತಿರುವ ಒಂದು ಪೋಸ್ಟ್. ಇದಕ್ಕೆ ಮೂಲ – ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ಭಾರತಿ ಜೈನ್ ಎಂಬ ಬಹು ಹಿರಿಯ ಪತ್ರಕರ್ತೆ; ಆ ಪತ್ರಿಕೆಯ ‘ಆಂತರಿಕ ಭದ್ರತೆ’ ವಿಭಾಗದ ಸಂಪಾದಕಿ. ಆಕೆಯ ಟ್ವಿಟರ್ ಬಯೊ ಪ್ರಕಾರ ಆಕೆ ಆ ಪತ್ರಿಕೆಗೆ ‘ಕೇಂದ್ರ ಸರ್ಕಾರದ ಗೃಹ ಇಲಾಖೆ, ಭದ್ರತಾ ವ್ಯವಹಾರಗಳು, ಸಿಬ್ಬಂದಿ ಸಚಿವಾಲಯ, ಚುನಾವಣಾ ಆಯೋಗ ಹಾಗೂ ಸಂಸತ್ತಿನ ವ್ಯವಹಾರಗಳ ವಿಭಾಗದ ವರದಿಗಾರಿಕೆ ಮಾಡುತ್ತಾರೆ’.

ಇದನ್ನು ಓದಿ:  ಭಾರತೀಯ ಅಂದರೆ ಯಾರು ಎಂಬುದೇ ಅಸಲೀ ಪ್ರಶ್ನೆ

ಆಕೆ ಈ ವರ್ಷದ ಏಪ್ರಿಲ್ ಮಧ್ಯಭಾಗದಲ್ಲಿ ಜಾಗತಿಕ ಖ್ಯಾತಿಯ ಅರ್ಥಶಾಸ್ತ್ರಜ್ಞ, ತತ್ವಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಹಾಗೂ ‘ಭಾರತ ರತ್ನ’ ಪುರಸ್ಕøತರಾದ ಪ್ರೊ. ಅಮತ್ರ್ಯ ಸೇನ್ ವಿರುದ್ಧ ಹಿಗ್ಗಾಮುಗ್ಗಾ ಆರೋಪಗಳನ್ನು ಮಾಡಿ ಸರಣಿ ಟ್ವೀಟ್ ಮಾಡಿದ್ದರು. ‘ಪ್ರೊ. ಸೇನ್ ಅವರು ನಲಂದಾ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ (ಚಾನ್ಸಲರ್) ಅಗಾಧ ಪ್ರಮಾಣದ ಹಣಕಾಸು ಅವ್ಯವಹಾರ ಮತ್ತು ಸ್ವಜನ ಪಕ್ಷಪಾತ ಮಾಡಿದ್ದರು. 2014ರಲ್ಲಿ ಮೋದಿ ಪ್ರಧಾನಿಯಾದಾಗ ಇದೆಲ್ಲ ಗೊತ್ತಾಗಿ ಅವರನ್ನು ನಲಂದಾ ವಿವಿಯಿಂದ ಕಿತ್ತೊಗೆಯಲಾಯಿತು. ಮೋದಿಯ ಆರ್ಥಿಕ ಅಜೆಂಡಾಗಳ ವಿರುದ್ಧ ಪ್ರೊ. ಸೇನ್ ಕಟು ವಿಮರ್ಶೆ ಮಾಡುತ್ತಿರುವುದಕ್ಕೆ ಇದೇ ಕಾರಣ’ ಎಂಬುದು ಆಕೆಯ ಆರೋಪಗಳ ಸಾರವಾಗಿತ್ತು. ಯಾರೂ ಊಹಿಸಬಹುದಾದಂತೆ ಕ್ಷಣಾರ್ಧದಲ್ಲೇ ಅದು ವೈರಲ್ ಕೂಡ ಆಗಿತ್ತು.

 

Bharati

ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು, ಕ್ವೈರಿಗಳು ಎದುರಾದಾಗ ಆಕೆ ತಾನು “ಈ ಆರೋಪಗಳ ‘ಮೂಲ’ಗಳನ್ನು ಉಲ್ಲೇಖಿಸದಿದ್ದುದಕ್ಕೆ” ‘ಸಾರಿ’ ಎಂದಿದ್ದರು. ಆ ಮೂಲಗಳನ್ನು ಬಹಿರಂಗಪಡಿಸಲು ಒತ್ತಾಯ ಬಂದಾಗ ಅವು ‘ಸರ್ಕಾರಿ ಮೂಲಗಳು’ ಎಂದಷ್ಟೇ ತಿಳಿಸಿದ್ದರು. ‘ದ ಹಿಂದೂ’ ಪತ್ರಿಕೆಯ ಪೂಜಾ ಮೆಹರಾರಂತಹ ಹಿರಿಯ ಪತ್ರಕರ್ತರು “ಈ ಆರೋಪಗಳನ್ನೆಲ್ಲ ನಲಂದಾ ವಿವಿ ಈಗಾಗಲೇ ಅಲ್ಲಗಳೆದಿದೆಯಲ್ಲ. ನಿನ್ನ ‘ಮೂಲ’ಗಳನ್ನು ಸರಿಯಾಗಿ ಚೆಕ್ ಮಾಡಿದೀಯಾ ಭಾರತಿ?” ಎಂದೆಲ್ಲ ವಿಚಾರಿಸಿ, ಅದರ ಲಿಂಕ್‍ಗಳನ್ನೂ ನೀಡಿ ಟ್ವೀಟ್ ಮಾಡತೊಡಗಿದಂತೆ, ತನ್ನ ಬಣ್ಣ ಬಯಲಾಯಿತೆಂದು ಅರಿತ ಭಾರತಿ ಜೈನ್ ಸ್ವಲ್ಪ ಹೊತ್ತಿನಲ್ಲಿ ತನ್ನ ಟ್ವೀಟ್‍ಗಳನ್ನು ಅಳಿಸಿಹಾಕಿದ್ದರು. ಆದರೆ ಅಷ್ಟರಲ್ಲಾಗಲೇ ಆಕೆಯ ಉದ್ದೇಶ ಈಡೇರಿತ್ತು; ಸಂಘಿ ಅಪಪ್ರಚಾರ ಯಂತ್ರ ಆ ಸರಕನ್ನೆಲ್ಲ ಒಳಕ್ಕೆಳೆದುಕೊಂಡು ಕುಟ್ಟಿಕುಟ್ಟಿ ತೂರಿಬಿಡಲು ಆರಂಭಿಸಿಯಾಗಿತ್ತು!

ವಾಸ್ತವವೆಂದರೆ ಆಕೆಯ ಆರೋಪಗಳೆಲ್ಲ ಅದಕ್ಕೆ ಸ್ವಲ್ಪ ಮೊದಲೇ ವಾಟ್ಸ್ಯಾಪ್‍ನಲ್ಲಿ ಆಧಾರರಹಿತ ಅಪಪ್ರಚಾರದ ಭಾಗವಾಗಿ ಹರಿದಾಡುತ್ತಿದ್ದವು. ಅದರಲ್ಲಿ ‘ಸ್ವಾಯತ್ತತೆಯ ಹೆಸರಿನಲ್ಲಿ ಪ್ರೊ. ಸೇನ್‍ಗೆ ಸಮಸ್ತ ಅಧಿಕಾರ ನೀಡಲಾಗಿದೆ; ಎಷ್ಟರಮಟ್ಟಿಗೆಂದರೆ ಅವರು ಯಾವುದೇ ಖರ್ಚುವೆಚ್ಚದ ಲೆಕ್ಕವನ್ನೂ ಸರ್ಕಾರಕ್ಕೆ ಸಲ್ಲಿಸಬೇಕಿಲ್ಲ; ಮಿತಿಯಿಲ್ಲದಷ್ಟು ವಿದೇಶಿ ಪ್ರವಾಸಗಳನ್ನು ಸರಕಾರಿ ವೆಚ್ಚದಲ್ಲಿ ಮಾಡಬಹುದು; ಮನಮೋಹನ ಸಿಂಗ್ ಮತ್ತು ಅಮತ್ರ್ಯ ಸೇನರ ನಿಕಟ ಸಂಬಂಧಿಗಳು ಅಥವಾ ಆಪ್ತ ಸ್ನೇಹಿತರಾಗಿರುವ ಏಳು ಮಂದಿ ಮಾತ್ರ ಬೋಧಕ ಸಿಬ್ಬಂದಿಯಾಗಿದ್ದಾರೆ; ಕೇವಲ ಒಂದು ಕಟ್ಟಡವಿದೆ, ಅಬ್ಬಬ್ಬಾ ಎಂದರೆ 100 ವಿದ್ಯಾರ್ಥಿಗಳಿದ್ದಾರೆ; ಕುಲಾಧಿಪತಿಗೆ ಅಪರಿಮಿತ ಅಧಿಕಾರ ನೀಡಿ ಯಾವುದೇ ಉತ್ತರದಾಯಿತ್ವ ಇಲ್ಲದಂತೆ ಯುಪಿಎ ಸರ್ಕಾರವು ನಲಂದಾ ವಿವಿ ಕಾಯ್ದೆಯನ್ನು ರೂಪಿಸಿದೆ … ಮುಂತಾಗಿ ತಳಬುಡವಿಲ್ಲದ ಆರೋಪ ಮಾಡಿದ್ದಲ್ಲದೆ, ‘ಮೋದಿ ಸರ್ಕಾರವು (ಮಾಜಿ ಪ್ರಧಾನಿ) ಡಾ. ಮನಮೋಹನ ಸಿಂಗ್ ಮತ್ತು ಪ್ರೊ. ಸೇನ್ ಸೇರಿ ನಡೆಸಿದ್ದ ಈ ಎಲ್ಲ ವಂಚನೆಯನ್ನು ಪತ್ತೆಹಚ್ಚಿ, ಈ ಜಿಗಣೆಯನ್ನು ನಲಂದಾ ವಿವಿಯಿಂದ ಕಿತ್ತೊಗೆಯಿತು’ ಮುಂತಾಗಿ ಅವರಿಬ್ಬರ ವಿರುದ್ಧ, ಮುಖ್ಯವಾಗಿ ಪ್ರೊ. ಸೇನ್ ವಿರುದ್ಧ ವಾಚಾಮಗೋಚರವಾಗಿ ವಿಷ ಕಕ್ಕಲಾಗಿತ್ತು.

ಆದರೆ ಅದು ಸಾರ್ವಜನಿಕವಾಗಿ ಅಷ್ಟು ಗಮನ ಸೆಳೆದಿರಲಿಲ್ಲ. ಭಾರತಿ ಜೈನ್‍ಳಂಥ ಒಬ್ಬ ಹಿರಿಯ ಪತ್ರಕರ್ತೆ ತಾನೇನೋ ವಿಶೇಷವಾಗಿ ಪತ್ತೆಹಚ್ಚಿ ಬರೆದಂತೆ ಈ ಸುಳ್ಳುಗಳನ್ನೇ ಟ್ವೀಟ್ ಮಾಡಿದಾಗಲೇ ಅದಕ್ಕೆ ಮಹತ್ವ ಬಂದಿದ್ದು. ಆ ನಂತರದ ಪೋಸ್ಟ್‍ಗಳೆಲ್ಲವೂ ಈ ಸುದ್ದಿಗಳಿಗೆ ‘ಟೈಮ್ಸ್ ಆಫ್ ಇಂಡಿಯ’ದ ಭಾರತಿ ಜೈನ್ ಅವರನ್ನೇ ಮೂಲವಾಗಿ ಉಲ್ಲೇಖಿಸುತ್ತ ಅದಕ್ಕೆ ಗಂಭೀರವಾದ ವಿಶ್ವಾಸಾರ್ಹತೆಯನ್ನು ಹೊದೆಸುತ್ತ ಹರಿದಾಡುತ್ತಿವೆ!

ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುವ ಸುಳ್ಳುಸುದ್ದಿಗಳ ಸತ್ಯಾಸತ್ಯತೆಯನ್ನು ಸತತವಾಗಿ ಪತ್ತೆ ಮಾಡಿ ಬಯಲಿಗೆ ತರುತ್ತಿರುವ ‘ಆಲ್ಟ್ ನ್ಯೂಸ್’ ವೆಬ್‍ಸೈಟು ಭಾರತಿ ಜೈನ್ ಹೊರಗೆಡಹಿದ ಈ ‘ಸುದ್ದಿ’ಗಳನ್ನೂ ಬೆನ್ನುಹತ್ತಿತು. ನಲಂದಾ ವಿವಿಯ ಸ್ಪಷ್ಟೀಕರಣಗಳು, ಸಂಸತ್ ಕಾರ್ಯಕಲಾಪದ ಸಾಕ್ಷ್ಯಾಧಾರಗಳು ಮುಂತಾದುವನ್ನೆಲ್ಲ ಜಾಲಾಡಿದ್ದಲ್ಲದೆ, ಸ್ವತಃ ಪ್ರೊ. ಸೇನ್ ಅವರನ್ನೂ, ಆರೋಪಗಳಲ್ಲಿ ಉಲ್ಲೇಖಿಸಲಾಗಿದ್ದ ಇತರರನ್ನೂ ಸಂಪರ್ಕಿಸಿತು. ಆ ಮೂಲಕ ಆರೋಪದಲ್ಲಿನ ಒಂದೊಂದು ಅಂಶಕ್ಕೂ ವಿವರವಾದ ಸತ್ಯಾಂಶಗಳನ್ನು ಮುಂದಿಟ್ಟಿತು.

ಅವುಗಳನ್ನು ಆದಷ್ಟು ಸಂಗ್ರಹಿಸಿ ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. ಆದರೂ, ಆ ಆರೋಪಗಳೆಲ್ಲ ಇಂದಿಗೂ ಪ್ರಸಾರವಾಗುತ್ತಿರುವುದರ ಜೊತೆಗೆ, ಇಂತಹ ಹಸಿಹಸಿ ಸುಳ್ಳಿನ ಪ್ರಸಾರದಲ್ಲಿ ಭಾರತೀಯ ಮಾಧ್ಯಮ ರಂಗದ ಎಂತೆಂತಹ ದೊಡ್ಡದೊಡ್ಡ ಮಾಧ್ಯಮ ಸಂಸ್ಥೆಗಳು ಹಾಗೂ ಅವುಗಳಲ್ಲಿನ ಎತ್ತೆತ್ತರದ ವೃತ್ತಿನಿರತರು ಇನ್ವಾಲ್ವ್ ಆಗಿರುವುದು ಗಂಭೀರ ಮತ್ತು ಆತಂಕಕಾರಿ ಆಗಿರುವುದರಿಂದ ಅದರ ಕೆಲವು ವಿವರಗಳನ್ನಾದರೂ ಕೊಡುವುದು ಅನಿವಾರ್ಯವೆನ್ನಿಸಿದೆ.

ಆರೋಪ 1:

2007ರಲ್ಲಿ ಕಾಂಗ್ರೆಸ್ ಸರ್ಕಾರವು ಪ್ರೊ. ಸೇನ್‍ರನ್ನು ‘ನಲಂದಾ ಆಚಾರ್ಯ ಗಣ’ದ (Nalanda Mentor Group) ಅಧ್ಯಕ್ಷರನ್ನಾಗಿ ಹಾಗೂ 2012ರಲ್ಲಿ ಬಿಹಾರದ ರಾಜಗಿರ್‍ನಲ್ಲಿ ಸ್ಥಾಪಿಸಲಾದ ನಲಂದಾ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಾಧಿಪತಿಯಾಗಿ ನೇಮಿಸಿತು. ಅವರು ತಿಂಗಳಿಗೆ 5 ಲಕ್ಷ ರೂಪಾಯಿಗಳ ಸಂಬಳ, ತೆರಿಗೆ ವಿನಾಯ್ತಿ, ಅಗಣಿತವಾದ ವಿದೇಶಿ ಪ್ರವಾಸಗಳು, ಐಶಾರಾಮಿ ಹೋಟೆಲ್‍ಗಳಲ್ಲಿ ವಸತಿ, ವಿವಿಯ ನೇಮಕಾತಿ ಅಧಿಕಾರ … ಮುಂತಾದುವನ್ನು ಅನುಭವಿಸಿದರು.

 

ಆರೋಪ

ಸತ್ಯಾಂಶ: ಈ ವಿಚಾರವನ್ನು ಮೊಟ್ಟಮೊದಲಿಗೆ 2015ರ ಫೆಬ್ರವರಿಯಲ್ಲಿ ಎತ್ತಿದ ಬಿಜೆಪಿ ಎಂಪಿ ಡಾ. ಸುಬ್ರಮಣಿಯನ್ ಸ್ವಾಮಿ, ‘ಸೇನ್ ಅವರು ವಾರ್ಷಿಕ 50 ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ; ಅವರ ವಿರುದ್ಧ ಸಿಎಜಿ ವರದಿಯು ಭ್ರಷ್ಟಾಚಾರದ ಆರೋಪ ಮಾಡಿದೆ … ಮುಂತಾಗಿ ಎರ್ರಾಬಿರ್ರಿ ಆರೋಪಗಳನ್ನು ಮಾಡಿ, ಸರ್ಕಾರವು ಪ್ರೊ. ಸೇನ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದ್ದಲ್ಲದೆ, ತಾನು ಉಲ್ಲೇಖಿಸಿರುವ ‘ಈ ಎಲ್ಲ ಸಾಕ್ಷ್ಯಾಧಾರಗಳ ಆಧಾರದಲ್ಲಿ’ ಸಿಬಿಐ ಕೂಡಲೇ ಸೇನ್ ವಿರುದ್ಧ ಸ್ವಯಂಪ್ರೇರಿತ ಎಫ್‍ಐಆರ್ ದಾಖಲಿಸಬೇಕೆಂದೂ, ಇಲ್ಲವಾದರೆ ತಾನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿಯೂ ‘ಎಚ್ಚರಿಸಿ’ದ್ದರು.

ಅದಕ್ಕೆ ನಲಂದಾ ವಿವಿ ನೀಡಿದ್ದ ಸಮಜಾಯಿಷಿ ಹೀಗಿತ್ತು: ‘ಪ್ರೊ. ಸೇನ್ ಅವರು ಗೌರವ ಹುದ್ದೆಯಲ್ಲಿ (ಆನರರಿ ಪೊಸಿಶನ್‍ನಲ್ಲಿ) ಕೆಲಸ ಮಾಡಿದ್ದರು; ಅದಕ್ಕಾಗಿ ವಿವಿಯಿಂದ ಯಾವುದೇ ವೇತನ ಅಥವಾ ಪ್ರತಿಫಲವನ್ನಾಗಲಿ, ಭಕ್ಷೀಸು (perquisite))ಗಳನ್ನಾಗಲಿ ಪಡೆಯಲಿಲ್ಲ. ಅವರಿಗೆ ಉಚಿತ ಪ್ರಯಾಣದ ಪಾಸನ್ನು ನೀಡಿದ್ದು ಭಾರತ ಸರ್ಕಾರ; ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಪ್ರೊ. ಸೇನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದಿದ್ದರ ಗೌರವಾರ್ಥ ಈ ಪಾಸ್ ನೀಡಿದ್ದರು’. (ಡಾ. ಸ್ವಾಮಿಯ ಆರೋಪ ಮತ್ತು ವಿವಿ ಉತ್ತರದಲ್ಲಿ ಸ್ವಾಮಿಯ ಅಯೋಗ್ಯತೆಯನ್ನು ಬೆಳಕಿಗಿಡುವ ಇನ್ನೂ ಹಲವಾರು ಅಂಶಗಳಿವೆ.)

ಆರೋಪ 2:

ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಪ್ರೊ. ಸೇನ್ ಅವರು 9 ವರ್ಷಗಳ ಕಾಲ ಬಹುತೇಕ ವಿದೇಶಗಳಲ್ಲೇ ಇದ್ದುಕೊಂಡು ನಲಂದಾ ವಿವಿಯನ್ನು ‘ನಿರ್ವಹಿಸಿ’ ಏಳು ಮಂದಿ ಬೋಧಕರನ್ನು ನೇಮಿಸಿದ್ದರು; ವಿವಿಯನ್ನೊಂದು ಪಂಚತಾರಾ ಹೋಟೆಲನ್ನಾಗಿ ಮಾಡಿದ್ದರು.
ಸತ್ಯಾಂಶ: ವಿವಿಯ ಶೈಕ್ಷಣಿಕ ಮತ್ತು ಕಾರ್ಯನಿರ್ವಾಹಕ (ಅಕಾಡೆಮಿಕ್ ಮತ್ತು ಎಕ್ಸಿಕ್ಯೂಟಿವ್) ಹೊಣೆ ಕುಲಪತಿಯ (Vice Chancellor) ಕೆಲಸ; ಕುಲಾಧಿಪತಿಗಳದು ಗೌರವ (ಆನರರಿ) ಸ್ಥಾನ; ಅವರಿಗೆ ಅಲ್ಲಿ ನಿಯೋಜಿತ ನಿವಾಸವೂ ಇರುವುದಿಲ್ಲ. ಇದಕ್ಕೆ ಪೂರಕವಾಗಿ ತಮ್ಮ ಇ-ಮೇಲ್ ಪ್ರತಿಕ್ರಿಯೆಯಲ್ಲಿ ಪ್ರೊ. ಸೇನ್ ಅವರು, “ವಿವಿ ಆಡಳಿತ ಮಂಡಳಿಯ ಎಲ್ಲ ಸಭೆಗಳಲ್ಲೂ ಪಾಲ್ಗೊಂಡಿದ್ದೇನೆ; ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಸತತವಾಗಿ ಭೇಟಿ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.

“ನೇಮಕಾತಿ ನನ್ನ ಹೊಣೆಯಲ್ಲ. ಆದರೆ ಅತ್ಯುತ್ತಮ ಬೋಧಕ ಸಿಬ್ಬಂದಿಯನ್ನು ನೇಮಿಸುವಲ್ಲಿ ನೆರವಾಗುವುದು ನನ್ನ ಹೊಣೆಗಾರಿಕೆಯಲ್ಲಿ ಬರುತ್ತದೆ. ಅದನ್ನು ನಾನು ಸಾಧ್ಯವಿದ್ದಷ್ಟೂ ಉತ್ತಮವಾಗಿ ಮಾಡಿದ್ದೇನೆ” ಎಂದಿರುವ ಪ್ರೊ. ಸೇನ್, ‘ಪಂಚತಾರಾ ಹೋಟೆಲ್’ ಎಂಬ ಜೈನ್ ಅವರ ಮಾತಿನ ಅರ್ಥವೇನೋ! ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವಿವಿ ಭೇಟಿಯ ಸಮಯದಲ್ಲಿ ತನಗೂ ಸಹ ಮಂಡಳಿಯ ಇತರ ಸದಸ್ಯರಂತೆಯೇ ಹತ್ತಿರದ ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದಿದ್ದಾರೆ.

ಆರೋಪ 3:

ಏಳು ವರ್ಷಗಳಲ್ಲಿ ಪ್ರೊ. ಸೇನ್ ಸಾರ್ವಜನಿಕ ಖಜಾನೆಯಿಂದ 2729 ಕೋಟಿ ರೂ.ಗಳಷ್ಟು ಅಗಾಧವಾದ ವೆಚ್ಚ ಮಾಡಿದ್ದಾರೆ.
[ಇದೇ ರೀತಿ, ‘ಪ್ರೊ. ಸೇನ್ 3000 ಕೋಟಿ ರೂ.ಗಳಷ್ಟು ತೆರಿಗೆದಾರರ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡಿದ್ದಾರೆ’ಂದು ಸುಬ್ರಮಣಿಯನ್ ಸ್ವಾಮಿಯೂ 2015ರ ಫೆಬ್ರವರಿಯಲ್ಲಿ ಆರೋಪಿಸಿದ್ದರು. ಮನಸ್ಸಿಗೆ ಬಂದಂತೆ ಇನ್ನೂ ಹಲವು ಆರೋಪಗಳನ್ನೂ ಮಾಡಿದ್ದರು; ಸರ್ಕಾರದ ಮತ್ತು ವಿವಿಯ ಆಧಾರಸಹಿತವಾದ ಸ್ಪಷ್ಟೀಕರಣದಿಂದ ಅದೆಲ್ಲವೂ ಹಸೀ ಸುಳ್ಳೆಂದು ಸಾಬೀತಾದರೂ ಅವರೇನೂ ಕ್ಷಮಾಪಣೆ ಕೇಳಲಿಲ್ಲ, ವಿಷಾದವನ್ನೂ ಪ್ರಕಟಿಸಲಿಲ್ಲ.

ಸತ್ಯಾಂಶ: ಇದಕ್ಕೆ ಕೇಂದ್ರದ ಅಂದಿನ ವಿದೇಶಾಂಗ ಖಾತೆಯ ಸಹಾಯಕ ಮಂತ್ರಿ ಜI (ನಿವೃತ್ತ) ಡಾ. ವಿ.ಕೆ.ಸಿಂಗ್ ಅವರು 2015ರ ಏಪ್ರಿಲ್‍ನಲ್ಲಿ ನೀಡಿದ ಸ್ಪಷ್ಟನೆ ಹೀಗಿತ್ತು: “ಸರ್ಕಾರವು ನಲಂದಾ ವಿವಿ ಸ್ಥಾಪನೆಗೆಂದು ಒಟ್ಟು 2727.10 ಕೋಟಿ ರೂ.ಗಳ ಮೊತ್ತವನ್ನು ಅನುಮೋದಿಸಿದೆ; ಅದರಲ್ಲಿ ಈವರೆಗೆ 47.28 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.” ಡಾ. ಸ್ವಾಮಿಯ ಬೇಕಾಬಿಟ್ಟಿ ಆರೋಪಗಳಂತೆಯೇ ಸರ್ಕಾರದ ಮತ್ತು ವಿವಿಯ ಸ್ಪಷ್ಟೀಕರಣಗಳು ಸಹ ಎಲ್ಲ ಮಾಧ್ಯಮಗಳಲ್ಲೂ ವ್ಯಾಪಕವಾಗಿ ಪ್ರಸಾರಗೊಂಡವು.

ಆರೋಪ 4:

ಡಾ. ಗೋಪಾ ಸಭರ್ವಾಲ್, ಡಾ. ಅಂಜನಾ ಶರ್ಮ, ನಯನ್‍ಜೋತ್ ಲಾಹಿರಿ ಹಾಗೂ ಉಪೀಂದರ್ ಸಿಂಗ್ ಎಂಬ ನಾಲ್ವರು ಮಹಿಳೆಯರನ್ನು ಬೋಧಕ ಸಿಬ್ಬಂದಿಯೆಂದು ಪ್ರೊ. ಸೇನ್ ನೇಮಕ ಮಾಡಿದ್ದಾರೆ. ಉಪೀಂದರ್ ಸಿಂಗ್ ಅವರು ಮನಮೋಹನ ಸಿಂಗ್‍ರ ಹಿರಿಯ ಮಗಳು; ಮಿಕ್ಕ ಮೂವರು ಆಕೆಯ ಆಪ್ತ ಗೆಳತಿಯರು.

ಸತ್ಯಾಂಶ: ಹೆಸರಿಸಲಾದ ಎಲ್ಲರನ್ನೂ ಸಂಪರ್ಕಿಸಿದ ಆಲ್ಟ್ ನ್ಯೂಸ್ ವರದಿಯ ಪ್ರಕಾರ, ಡಾ. ಸಭರ್ವಾಲ್ ನಲಂದಾ ವಿವಿಯ ಕುಲಪತಿಯಾಗಿದ್ದರು, ಡಾ. ಶರ್ಮ ಅದರ ಶೈಕ್ಷಣಿಕ ಪ್ಲಾನಿಂಗಿನ ಡೀನ್ ಆಗಿದ್ದರು. ದೆಹಲಿ ವಿವಿಯಲ್ಲಿ ಬೋಧಕರಾಗಿರುವ ಪ್ರೊ. ಲಾಹಿರಿ ಮತ್ತು ಪ್ರೊ. ಉಪೀಂದರ್ ನಲಂದಾದಂತಹ ಪ್ರತಿಷ್ಠಿತ ವಿವಿಯ ಬೋಧಕರಾಗಲು ಎಲ್ಲ ಅರ್ಹತೆ ಹೊಂದಿದ್ದರಾದರೂ ಅವರು ಅದಕ್ಕೆ ಅರ್ಜಿ ಸಲ್ಲಿಸಲಿಲ್ಲ.

ಆರೋಪ 5:

ಮನಮೋಹನ ಸಿಂಗರ ಮಧ್ಯದ ಮತ್ತು ಕೊನೆಯ ಹೆಣ್ಮಕ್ಕಳಾದ ದಾಮನ್ ಸಿಂಗ್ ಮತ್ತು ಅಮೃತ್ ಸಿಂಗ್‍ರನ್ನೂ ಗೌರವ ಬೋಧಕರಾಗಿ ಪ್ರೊ. ಸೇನ್ ನೇಮಿಸಿದರು; ಅವರು ಅಮೇರಿಕದಲ್ಲಿ ಇದ್ದುಕೊಂಡೇ ನಲಂದಾದಿಂದ ವೇತನ ಪಡೆದರು.
ಸತ್ಯಾಂಶ: ಈ ಬಗ್ಗೆ ‘ದ ಹಿಂದೂ’ ಪತ್ರಿಕೆಯ ಹಿರಿಯ ಪತ್ರಕರ್ತೆ ಸುಹಾಸಿನಿ ಹೈದರ್ ಅವರು ‘ತಾನು ಪರಿಶೀಲಿಸಿದ ಪ್ರಕಾರ ಈ ಇಬ್ಬರೂ ನಲಂದಾದ ಸಿಬ್ಬಂದಿಯಾಗಿರಲಿಲ್ಲ; ಅವರಲ್ಲೊಬ್ಬರು ಅಮೇರಿಕದಲ್ಲಿ ನೆಲೆಸಿಲ್ಲ; ನಿನ್ನ ಸುದ್ದಿ ಮೂಲಗಳನ್ನೊಮ್ಮೆ ಸರಿಯಾಗಿ ಪರಿಶೀಲಿಸು ಭಾರತಿ’ ಎಂದು ಟ್ವೀಟ್ ಮಾಡಿದರು. ಭಾರತಿ ತನ್ನ ಟ್ವೀಟ್‍ಗಳನ್ನು ಅಳಿಸಲು ಇದೂ ಕಾರಣವಾಗಿತ್ತು; ಆದರೆ ಮಿಕ್ಕೆಲ್ಲ ಆರೋಪಗಳನ್ನೂ ಅಳಿಸಲಾಗಿದ್ದರೂ ಈ ಟ್ವೀಟ್ ಮಾತ್ರ ಇನ್ನೂ ಹಾಗೇ ಇದೆ. ಆಲ್ಟ್‍ನ್ಯೂಸ್ ಜೊತೆ ಮಾತಾಡಿದ ದಾಮನ್ ಸಿಂಗ್ ಕೂಡ ತನಗಾಗಲಿ ತನ್ನ ತಂಗಿಗಾಗಲಿ ಯಾವತ್ತೂ ನಲಂದಾ ಜೊತೆ ಯಾವುದೇ ಸಂಬಂಧವಿರಲಿಲ್ಲ ಎಂದಿದ್ದಾರೆ.

ಆರೋಪ 6:

2014ರಲ್ಲಿ ಮೋದಿಯ ಆಗಮನವಾದಾಗ ಈ ಎಲ್ಲ ವಂಚನೆಯನ್ನೂ ತಡೆಗಟ್ಟಿ, ಸೇನ್‍ರನ್ನು ಹೊರಗಟ್ಟಲಾಯಿತು. ಅಂದಿನಿಂದಲೇ ಅವರು ಮೋದಿಯ ಆರ್ಥಿಕ ಅಜೆಂಡಾ ವಿರುದ್ಧ ಕಟುವಾದ ವಿಮರ್ಶೆಗಳನ್ನು ಹರಿಬಿಡತೊಡಗಿದರು. ಆದರೆ ಜಾಗತಿಕ ಮಟ್ಟದಲ್ಲಿ ಬೇರಾವ ಆರ್ಥಿಕ ತಜ್ಞರನ್ನೂ ಪ್ರಭಾವಿಸಲು (ಇಂಪ್ರೆಸ್ ಮಾಡಲು) ಅವರಿಗೆ ಸಾಧ್ಯವಾಗಲಿಲ್ಲ.

ಸತ್ಯಾಂಶ: 2010ರ ನಲಂದಾ ವಿವಿ ಕಾಯ್ದೆಯ ಸೆ. 5(ಜಿ) ಪ್ರಕಾರ ಚಾನ್ಸಲರ್ ಅವಧಿ 3 ವರ್ಷ. 2012ರ ಜುಲೈಯಲ್ಲಿ ನೇಮಕಗೊಂಡಿದ್ದ ಸೇನ್‍ರ ಅವಧಿ 2015ರ ಜುಲೈಗೆ ಮುಗಿಯುವುದಿತ್ತು. ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸಬೇಕೆಂದು ವಿವಿ ಆಡಳಿತ ಮಂಡಳಿ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದರೂ ಕೇಂದ್ರ ಸರ್ಕಾರದಿಂದ ಅನುಮೋದನೆ ಇಲ್ಲದೆ ರಾಷ್ಟ್ರಪತಿಗಳು ಅಂತಹ ಆದೇಶ ಮಾಡುವಂತಿರಲಿಲ್ಲ. ತನ್ನ ಬಗ್ಗೆ ಮೋದಿ ಸರ್ಕಾರಕ್ಕೆ ಇರುವ ಕಡು ವಿರೋಧ ಸೇನ್ ಅವರಿಗೆ ಗೊತ್ತಿದ್ದುದು ಮಾತ್ರವಲ್ಲದೆ, ಬೌದ್ಧ ಮೂಲದ ಈ ಪುರಾತನ ವಿಶ್ವವಿದ್ಯಾಲಯದ ವಿಷಯದಲ್ಲಿ ಮೋದಿ ಸರ್ಕಾರ ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನೂ ಅವರು ಗಮನಿಸಿದ್ದ ಕಾರಣ ಇನ್ನೊಂದು ಅವಧಿಗೆ ಪರಿಗಣಿಸಲು ತಾನು ಲಭ್ಯನಿಲ್ಲ ಎಂದು ಅವರು ಬಹಿರಂಗವಾಗಿ ಘೋಷಿಸಿದ್ದರು. ಅವರ ಈ ಘೋಷಣೆಯನ್ನೇ ಆಧಾರವಾಗಿಟ್ಟು ಕೇಂದ್ರ ಸರ್ಕಾರ ಸಿಂಗಾಪುರದ ಮಾಜಿ ವಿದೇಶಾಂಗ ಮಂತ್ರಿಯಾಗಿದ್ದ ಜಾರ್ಜ್ ಯೇವೋ ಅವರನ್ನು ಚಾನ್ಸಲರ್ ಆಗಿ ನೇಮಿಸಿತು (ಪೂರ್ವ ಏಷ್ಯಾ ಶೃಂಗ ಬಣದಿಂದ ಅವರು 2006ರಲ್ಲಿ ನಲಂದಾ ಪ್ರಸ್ತಾಪವನ್ನು ಮುಂದಿಟ್ಟ ಮೊಟ್ಟಮೊದಲ ಗಣ್ಯರಾಗಿದ್ದರು.) ಈ ಕುರಿತು ಜ. ವಿ.ಕೆ.ಸಿಂಗ್ ಕೂಡ 13-8-2015ರಂದು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಮೇಲಿನಂಥ ಆರೋಪಗಳನ್ನು ತಳ್ಳಿಹಾಕಿದ್ದರು.

ನಲಂದಾ ವಿವಿಯಿಂದ ಹೊರಬಂದ ಮೇಲೇ ತಾನು ಮೋದಿಯ ಆರ್ಥಿಕ ನೀತಿಗಳನ್ನು ಟೀಕಿಸಲು ಆರಂಭಿಸಿದ್ದೆಂಬ ಭಾರತಿ ಜೈನ್ ಆರೋಪ ಕುರಿತು ಪ್ರೊ. ಸೇನ್, “ನರೇಂದ್ರ ಮೋದಿಯ ಆರ್ಥಿಕ ಚಿಂತನೆಯಲ್ಲಿದ್ದ ಬೃಹತ್ತಾದ ಬ್ಲಂಡರ್‍ಗಳನ್ನು ನಾನು ನಲಂದಾ ವಿವಿಯಿಂದ ಹೊರಬರುವುದಕ್ಕೂ ಬಹಳ ಮೊದಲಿನಿಂದಲೇ, ಅಷ್ಟೇಕೆ, ವಿವಿಯ ಚಾನ್ಸಲರ್ ಆಗುವುದಕ್ಕೂ ಬಹಳ ಮೊದಲಿನಿಂದಲೇ ಟೀಕಿಸುತ್ತ ಬಂದಿದ್ದೇನೆ” ಎಂದಿದ್ದಾರೆ. ಆಲ್ಟ್‍ನ್ಯೂಸ್ ವರದಿ ಹೇಳಿರುವಂತೆ, ಈ ಮಾತಿಗೆ ಜಾಲತಾಣದಲ್ಲಿ ಯಥೇಚ್ಛ ಉದಾಹರಣೆಗಳು ಯಾರು ಹುಡುಕಿದರೂ ಸಿಗುತ್ತವೆ.

ಹೀಗೆ, ಬಹು ಹಿರಿಯ ಪತ್ರಕರ್ತೆಯಾಗಿಯೂ ಸಂಪೂರ್ಣ ನಿರಾಧಾರವಾದ ಆರೋಪಗಳನ್ನು ಯಾವುದೇ ಪರಿಶೀಲನೆಯನ್ನೂ ಮಾಡದೆ ಹಸಿಹಸಿಯಾಗಿ ಹರಿಬಿಟ್ಟ ಭಾರತಿ ಜೈನ್ ಕುರಿತು ಪ್ರೊ. ಸೇನ್, “ಇಷ್ಟೊಂದು ದೊಡ್ಡವಾದ, ಅಸಹ್ಯವಾದ ತಪ್ಪುಗಳನ್ನು ಇಷ್ಟು ಕಮ್ಮಿ ಶಬ್ದಗಳಲ್ಲಿ ಪ್ಯಾಕ್ ಮಾಡಬಲ್ಲ ಆಕೆಯ ಸಾಮಥ್ರ್ಯದ ಬಗೆಗೆ ನಾನು ನಿಜವಾಗಿಯೂ ಇಂಪ್ರೆಸ್ ಆಗಿದ್ದೇನೆ.” ಎಂದು ತಮಾಷೆ ಮಾಡಿದ್ದಾರೆ.
ನಿಜ ಹೇಳಬೇಕೆಂದರೆ, ಆರ್ಥಿಕ ನೀತಿ ಎನ್ನುವ ಮಾತಿರಲಿ, ಆರ್ಥಿಕ ದುರಾಡಳಿತ ಎಂದು ಸಹ ಕರೆಯಲಾಗದ, ಆದರೂ ದೊಡ್ಡ/ಕಾರ್ಪೊರೇಟ್ ಬಂಡವಾಳಿಗರಿಗೆ ಮಾತ್ರ ಮಿತಿಯಿಲ್ಲದಷ್ಟು ದುರ್ಲಾಭ ಗಳಿಸಲು ಅವಕಾಶ ಮಾಡಿಕೊಡುವ, ಜನಸಾಮಾನ್ಯರ ಪಾಲಿಗೆ ವಿನಾಶಕಾರಿಯಾದ ಮೋದಿಯ ಆರ್ಥಿಕ ಬೇಕಾಬಿಟ್ಟಿತನವನ್ನು, ಬ್ಲಂಡರ್‍ಗಳನ್ನು ಟೀಕಿಸಲು ಅಮತ್ರ್ಯ ಸೇನ್‍ರಂತಹ ವಿಶ್ವಖ್ಯಾತಿಯ ಆರ್ಥಿಕ ತಜ್ಞರೇ ಬೇಕಾಗಿಲ್ಲ, ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಇಲ್ಲಿ ನಿಜವಾಗಿ ವಿಷ ಕಕ್ಕುತ್ತಿರುವುದು ಪ್ರೊ. ಸೇನ್ ಅಲ್ಲ. ಅವರ ವಿರುದ್ಧ, ಕಾಂಗ್ರೆಸ್ಸಿಗೆ ಸಂಬಂಧಿಸಿದ ಎಲ್ಲದರ ವಿರುದ್ಧ, ಜನಸಾಮಾನ್ಯರ ಪರ ವಹಿಸುವವರ ವಿರುದ್ಧ ಹಾಗೂ ಮೋದಿ/ಬಿಜೆಪಿಯನ್ನು ಸಕಾರಣವಾಗಿ ವಿರೋಧಿಸುವ ಎಲ್ಲರ ವಿರುದ್ಧವೂ ಸಂಘಿ ಕ್ರಿಮಿ/ನಲ್‍ಗಳು ವಿಷ ಕಾರುತ್ತಿರುವುದು ದೇಶಾದ್ಯಂತ ಕಾಣುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...