Homeಪ್ರಪಂಚಮನೆ, ಚರ್ಚು ಮತ್ತು ಸಿನೆಮಾ: ಮಾರ್ಕೋ ಬೆಲೂಚಿಯ

ಮನೆ, ಚರ್ಚು ಮತ್ತು ಸಿನೆಮಾ: ಮಾರ್ಕೋ ಬೆಲೂಚಿಯ

- Advertisement -
- Advertisement -

ರಾಜಶೇಖರ್ ಅಕ್ಕಿ |

ಇಟಲಿಯಲ್ಲಿ 30ರ ದಶಕದಲ್ಲಿ ಒಂದು ಕಟ್ಟುನಿಟ್ಟಿನ ಧಾರ್ಮಿಕತೆಯನ್ನು ಪಾಲಿಸುತ್ತಿರುವ ಕುಟುಂಬ. ಅಪ್ಪ ವಕೀಲ ಅಮ್ಮ ಶಾಲಾಶಿಕ್ಷಕಿ. ಧಾರ್ಮಿಕ ಕಟ್ಟುನಿಟ್ಟಳೆಗಳಲ್ಲೇ ಬೆಳೆದ ಅವರ ಒಬ್ಬ ಮಗ 60ರ ದಶಕದಲ್ಲಿ ಒಂದು ಚಿತ್ರವನ್ನು ನಿರ್ದೇಶಿಸುತ್ತಾನೆ. ಇಟಲಿಯ ಆಗಿನ ಕಾಲದ ಕುಟುಂಬ ವ್ಯವಸ್ಥೆಯ ವಿಷಯ ಹೊಂದಿದ ಆ ಚಿತ್ರವನ್ನು ನಿರ್ಮಿಸಲು ಆತನ ಹತ್ತಿರ ದುಡ್ಡಿರಲಿಲ್ಲ ಹಾಗಾಗಿ ಆತನ ಪೋಷಕರೇ ದುಡ್ಡು ಕೊಡುತ್ತಾರೆ. ತನ್ನ ಮನೆಯಲ್ಲಿಯೇ ಹೆಚ್ಚಿನ ಶೂಟಿಂಗ್ ಮಾಡುತ್ತಾನೆ. ಆ ಚಿತ್ರವೇ ‘ಫಿಸ್ಟ್ ಇನ್ ದಿ ಪಾಕೆಟ್’. ತಾಯಿ ತನ್ನ ನಾಲ್ಕು ಮಕ್ಕಳು ಮತ್ತು ಅವರೆಲ್ಲರ ಪರಸ್ಪರ ಜಟಿಲವಾದ ಸಂಬಂಧಗಳು. ಚಿತ್ರದ ಎಲ್ಲಾ ಪಾತ್ರಗಳೂ ಒಂದೊಂದು ಮಟ್ಟದಲ್ಲಿ ಮಾನಸಿಕ ತೊಳಲಾಟ, ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಹಿರಿಯ ಮಗ ಮಾತ್ರ ದುಡಿಯುತ್ತಿದ್ದಾನೆ. ಒಬ್ಬ ಮಗನಿಗೆ ಕುಟುಂಬದ ಈ ತೊಳಲಾಟಗಳನ್ನು ಕೊನೆಗಾಣಿಸಬೇಕಿದೆ. ಅವನು ಮಾಡಿದ ಎಕ್ಸ್ರೀಮ್ ನಿರ್ಣಯಗಳು, ನಂತರ ಅವನ ಉದ್ದೇಶವನ್ನೀಡೇರಿಸಲು ಅವನು ಮಾಡುವ ಕೃತ್ಯಗಳು ಇಟಲಿಯ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದವು. ಇಟಲಿಯ ಕುಟುಂಬ ವ್ಯವಸ್ಥೆಯ ಕಟುವಿಮರ್ಶೆಯಾದ ಆ ಚಿತ್ರ ನಿರ್ದೇಶಕ ಮಾರ್ಕೋ ಬೆಲುಚಿಯೋಗೆ ಅಂತರರಾಷ್ಟ್ರೀಯ ಖ್ಯಾತಿ ತಂದುಕೊಡುತ್ತದೆ. ಕುಟುಂಬ ವ್ಯವಸ್ಥೆಯ ಆ ಚಿತ್ರವನ್ನು ನೋಡಿದ ನಿರ್ದೇಶಕನ ಪೋಷಕರ ಪ್ರತಿಕ್ರಿಯೆ ಏನಿತ್ತು ಎನ್ನುವುದು ನಮಗೆ ತಿಳಿಯದು.
ಇಟಲಿಯ ಕುಟುಂಬ ವ್ಯವಸ್ಥೆ, ಕ್ಯಾಥೋಲಿಕ್ ಧರ್ಮಾಚರಣೆ ಮತ್ತು ರಾಜಕೀಯವನ್ನು ಪ್ರಶ್ನಿಸುತ್ತ ಬಂದ ಮಾರ್ಕೋ ಬೆಲುಚಿಯೋ ಬರೀ ಚಿತ್ರ ನಿರ್ದೇಶನಕ್ಕೆ ಸೀಮಿತಗೊಳ್ಳಲಿಲ್ಲ. ಅಲ್ಲಿಯ ಕಮ್ಯುನಿಸ್ಟ್ ಯೂನಿಯನ್‍ನ ಸದಸ್ಯರಾಗಿದ್ದ ಅವರು 2006ರಲ್ಲಿ ಲೋಕಸಭೆಗೂ ಸ್ಪರ್ಧಿಸಿದರು.
ಈತನ ಕಾಲದಲ್ಲೇ ಇಟಲಿಯ ಇನ್ನೊಬ್ಬ ನಿರ್ದೇಶಕ, ಈತನ ಸ್ನೇಹಿತ ಬರ್ಟಲೂಚಿ ಕೂಡ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿ ಅನೇಕ ಗ್ಲೋಬಲ್ ಚಿತ್ರಗಳನ್ನು ನೀಡಿದರು. ಆದರೆ ಮಾರ್ಕೋ ಬೆಲೂಚಿಯೋನ ಜೀವನದ ಹಾದಿಯು ಇತರೆ ಯಾವುದೇ ಚಿತ್ರನಿರ್ದೇಶಕರಂತಿದ್ದಿಲ್ಲ. ಕಳೆದ ಐದು ದಶಕಗಳಿಂದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದರೂ ಅವರ ಚಿತ್ರಗಳಲ್ಲಿ ಒಂದು ನಿರ್ದಿಷ್ಟ ಪ್ಯಾಟರ್ನ್ ಕಾಣಿಸಿಕೊಳ್ಳುವುದಿಲ್ಲ, ಆ ನಿಟ್ಟಿನಲ್ಲಿಯೂ ಅವರೊಬ್ಬ ಯಶಸ್ವೀ ನಿರ್ದೇಶಕನೆಂದೇ ಕರೆಯಬಹುದು.
ರಾಜಕೀಯದಲ್ಲಿಯ ಅವರ ಪಾತ್ರ, ರಾಜಕೀಯದ ಸೋಲು-ಗೆಲುವುಗಳು ಮಾರ್ಕೋ ಬೆಲುಚಿಯೋ ಅವರ ಚಿತ್ರಗಳಲ್ಲಿ ಇಣುಕುತ್ತಿದ್ದವು. 67 ರಲ್ಲಿ ಅವರು ನಿರ್ದೇಶಿಸಿದ ಚಿತ್ರ ‘ಚೈನಾ ಇಸ್ ನೀಯರ್’ನಲ್ಲಿ ಒಬ್ಬ ಪ್ರಾಧ್ಯಾಪಕ ಚುನಾವಣೆಗೆ ನಿಲ್ಲುವ ಅಂಶವನ್ನು ಒಳಗೊಂಡಿದ್ದರೆ, 72ರಲ್ಲಿ ಬಂದ ‘ಇನ್ ದಿ ನೇಮ್ ಆಫ್ ಫಾದರ್’ ಚಿತ್ರ ಅವರ ರಾಜಕೀಯ ನಿರಾಶಾವಾದವನ್ನು ತೋರಿಸುತ್ತದೆ.
ಮಾರ್ಕೋ ಬೆಲುಚಿಯೋ ಅವರ ಚಿತ್ರಗಳಲ್ಲಿ ಸಹಜವಾಗಿಯೇ ಪದೇ ಪದೇ ಕಾಣಿಸಿಕೊಳ್ಳುವ ಥಿಮ್‍ಗಳೆಂದರೆ, ಧರ್ಮ(ಚರ್ಚ್), ಡಿಸ್‍ಫಂಕ್ಷನಲ್ ಕುಟುಂಬಗಳು ಮತ್ತು ರಾಜಕೀಯ.
ಚರ್ಚ್‍ಗಳನ್ನು, ಅವುಗಳ ಕಾರ್ಯವೈಖರಿಯನ್ನು ಕಟುವಿಮರ್ಶೆ ಮಾಡುತ್ತ ಬಂದ ಮಾರ್ಕೋ ಬೆಲುಚಿಯೋ ‘ನಾನು ನನ್ನನ್ನು ನಾಸ್ತಿಕ ಎಂದು ಕರೆದುಕೊಳ್ಳುವುದಿಲ್ಲ, ಆದರೆ ನನಗೆ ನಂಬಿಕೆ ಇಲ್ಲದವನು (ನಾನ್‍ಬಿಲೀವರ್) ಎಂದು ಕರೆದುಕೊಳ್ಳುತ್ತೇನೆ’ ಎನ್ನುವ ಇವರು ಕ್ಯಾಥೋಲಿಕ್ ಧರ್ಮದ ಆಚರಣೆಗಳನ್ನು ಉದ್ದಕ್ಕೂ ಪ್ರಶ್ನಿಸುತ್ತಲೇ ಬಂದಿದ್ದಾರೆ.
ನಾನು ಮಾರ್ಕೋ ಬೆಲುಚಿಯೋ ಬಗ್ಗೆ ಬರೆಯಲು ಕಾರಣ, ‘ಮೈ ಮದರ್’ಸ್ ಸ್ಮೈಲ್’(L’ora di religione) ಎನ್ನುವ ಚಿತ್ರ. 2002ರಲ್ಲಿ ಬಂದ ಈ ಚಿತ್ರ ಮಾರ್ಕೋ ಬೆಲುಚಿಯೋ ಅವರ ಜೀವನವನ್ನು, ಚರ್ಚ್‍ಗಳ ರಾಜಕಾರಣವನ್ನು, ಜನರ ಸಣ್ಣತನಗಳನ್ನು ಯಶಸ್ವಿಯಾಗಿ ಮತ್ತು ಸಮಗ್ರವಾಗಿ ಸೆರೆಹಿಡಿಯುತ್ತದೆ. ಈ ಚಿತ್ರದ ನಾಯಕ ಅರ್ನೆಸ್ಟೋ ಒಬ್ಬ ಕಲಾವಿದ, ನಾಸ್ತಿಕ. ಅವನ ಎಂಟು ವರ್ಷದ ಮಗನಿಗೆ ದೇವರ ಬಗ್ಗೆ ತಲೆಯಲ್ಲಿ ಏನೇನೋ ತುಂಬಲಾಗಿದೆ. ಕಲಾವಿದನ ತಾಯಿಯನ್ನು ಇನ್ನೊಬ್ಬ ಮಗನೇ ಕೊಂದಿದ್ದಾನೆ. ಆ ತಾಯಿಗೆ ಕ್ಯಾಥೋಲಿಕ್ ‘ಸಂತ’ರ ಪಟ್ಟ ನೀಡಲು ಹಲವು ಚರ್ಚ್‍ಗಳು ಪೈಪೋಟಿ ನಡೆಸುತ್ತಿವೆ. ಆ ಪಟ್ಟ ನೀಡಬೇಕಾದರೆ ಕಲಾವಿದ ಅರ್ನೆಸ್ಟೋನ ಸಹಕಾರ ಬೇಕಾಗಿದೆ. ಪಾರ್ಟಿಯೊಂದರಲ್ಲಿ ಒಬ್ಬ ಗಣ್ಯ ವ್ಯಕ್ತಿ ಸರ್ವಾಧಿಕಾರದ ಬಗ್ಗೆ ಮಾತನಾಡಿದಾಗ ಅರ್ನೆಸ್ಟೋ ಮುಖದಲ್ಲಿ ಮೂಡುವ ‘ಕುಹಕ’ ಮುಗುಳ್ನಗೆಯೂ ಅವನನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ. ಇವೆಲ್ಲವುಗಳಲ್ಲಿ ಸಿಲುಕಿರುವ ಕಲಾವಿದ ತನ್ನ ಎಲ್ಲ ಸಂಬಂಧಿಕರನ್ನು, ಸ್ನೇಹಿತರನ್ನು, ವಿರೋಧಿಗಳನ್ನೂ ಸಂಧಿಸ ಬೇಕಾಗುತ್ತದೆ. ಕಾಫ್ಕಾಎಸ್ಕ್ ಎನ್ನಿಸುವ ಅರ್ನೆಸ್ಟೋನ ಆ ಎರಡು ದಿನಗಳ ದೀರ್ಘ ಪಯಣವು ಸಮಾಜದ, ಧರ್ಮದ ಹಿಪಾಕ್ರಸಿಯನ್ನು ಪ್ರಶ್ನಿಸುತ್ತಲ್ಲದೇ ಇದೊಂದು ಸರ್ರಿಯಲಿಸ್ಟ್ ಸಿನೆಮಾ ಆಗಿದ್ದು, ಒಂದು ಲೈಟನಿಂಗ್ ವೇಗದಲ್ಲಿ ಮುಂದುವರೆಯುತ್ತದೆ. ಧರ್ಮಾಂದತೆಯನ್ನು ಪ್ರಶ್ನಿಸುವ ಈ ಸಿನೆಮಾ ನೋಡಿದ ಮಾರ್ಕೋ ಬೆಲುಚಿಯೋನ ಒಬ್ಬ ಪಾದ್ರಿ ಮಿತ್ರ ಈ ಚಿತ್ರದಲ್ಲಿ ಮತ್ತು ಮಾರ್ಕೋ ಬೆಲುಚಿಯೋನಲ್ಲಿ ಒಂದು ಡಿವೈನ್ ಅಂಶವನ್ನು ಕಂಡರಂತೆ.
ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಾರ್ಟಿಯ ಇಟಲಿಯ ಮಾಜಿ ಪ್ರಧಾನಿ ಅಲ್ಡೋ ಮೋರೊ ಅವರನ್ನು ರೆಡ್ ಬ್ರಿಗೇಡ್ ಎನ್ನುವ ಉಗ್ರಗಾಮಿ ಎಡಪಂಥೀಯ ಗುಂಪೊಂದು ಅಪಹರಿಸಿ 55 ದಿನಗಳ ಕಾಲ ಬಂಧನದಲ್ಲಿಟ್ಟು ಹತ್ಯೆ ಮಾಡಿದ್ದರು. ಮಾರ್ಕೋ ಬೆಲುಚಿಯೋ 2003 ರಲ್ಲಿ ಇದರ ಮೇಲೆ ಚಿತ್ರವನ್ನು ನಿರ್ದೇಶಿಸಿದರು. ಅಪಹರಣ ಮತ್ತು ಹತ್ಯೆಯ ಸಿನೆಮಾಗಳಲ್ಲಿ ಕಂಡುಬರುವ ಥ್ರಿಲರ್ ಅಂಶಗಳನ್ನು ತೋರಿಸಲಿಲ್ಲ. ಯಾವುದು ಸರಿ ಯಾವುದು ತಪ್ಪು ಎನ್ನುವುದರ ಬಗ್ಗೆ ತೀರ್ಪು ನೀಡದೇ ಅಪಹರಣದ ನಂತರ ಅಪಹರಣಕಾರರಲ್ಲಿ ಒಬ್ಬಳಾದ ಯುವತಿಯ ಮನಸ್ಥಿತಿ ಹಾಗೂ ಅಪಹರಣಕ್ಕೊಳಗಾದ ಮಾಜಿ ಪ್ರಧಾನಿ ಮತ್ತು ಅಪಹರಣಕಾರರ ನಡುವೆ ಆಗುವ ಮಾತುಕತೆ, ಅವರ ಸಂಬಂಧಗಳಿಗೆ ಸೀಮಿತವಾಗಿಸಿದರು. 1995ರಲ್ಲಿ ಈ ಪ್ರಕರಣದ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದರು ಮಾರ್ಕೋ ಬೆಲುಚಿಯೋ.
1986ರಲ್ಲಿ ಬಂದ ಚಿತ್ರ ಡೆವಿಲ್ ಇನ್ ದಿ ಫ್ಲೆಷ್‍ನಲ್ಲಿ ಒಬ್ಬ ಹೈಸ್ಕೂಲಿನ ಹುಡುಗ ಮತ್ತು ಒಬ್ಬ ಸ್ಕ್ರಿಝೋಫೀನಿಕ್ ಯುವತಿಯ ಸಂಬಂಧದ ಮೂಲಕ ಸಮಾಜವನ್ನು ಪ್ರಶ್ನಿಸಿದರೆ, 2012 ರಲ್ಲಿ ಬಂದ ಡಾರ್ಮಂಟ್ ಬ್ಯೂಟಿ ಎನ್ನುವ ಚಿತ್ರದಲ್ಲಿ ಯುಥನೇಸಿಯಾ ಬಗ್ಗೆ ಚರ್ಚಿಸಿದ ಮಾರ್ಕೋ ಬೆಲುಚಿಯೋ ಅವರ ಸಿನೆಮಾಗಳು ಸುಲಭವಾಗಿ ಲಭ್ಯವಿಲ್ಲವಾದುದರಿಂದ ಅವರ ಎಲ್ಲ ಚಿತ್ರಗಳನ್ನು ನೋಡಲಾಗಲಿಲ್ಲ. ಹಾಗಾಗಿ ಈ ವ್ಯಕ್ತಿ ಚಿತ್ರಣ ಅಪೂರ್ಣವೆಂದೇ ಹೇಳಬೇಕು. ತನ್ನ ಎಂಬತ್ತನೇ ವಯಸ್ಸಿನಲ್ಲೂ ನಿರ್ದೇಶನವನ್ನು ಮುಂದುವರೆಸುತ್ತಿರುವ ಮಾರ್ಕೋ ಬೆಲುಚಿಯೋ ಅವರ ಸಂಪೂರ್ಣ ವ್ಯಕ್ತಿ ಚಿತ್ರಣ ಸಾಧ್ಯವಿಲ್ಲ.
ಸಿನೆಮಾ ಅನ್ನು ಒಂದು ಸವಾಲಿನಂತೆ ತೆಗೆದುಕೊಳ್ಳಬಾರದು, ಒಂದು ವಿಷಯವನ್ನು ಸಂಪೂರ್ಣವಾಗಿ ಅರಿಯಲು ಅನುವು ಮಾಡಿಕೊಡುವಂತಹ ಸಿನೆಮಾ ಮಾಡಲು ಪ್ರಯತ್ನಿಸಬೇಕು ಎಂದು ಹೇಳುವ ಬೆಲುಚಿಯೋ 2019ರಲ್ಲಿ ‘ದಿ ಟ್ರೇಟರ್’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಳೆದ ವರ್ಷ ಇಂಗ್ಲೆಂಡಿನ ಪ್ರತಿಷ್ಠಿತ ಬ್ರಿಟಿಷ್ ಫಿಲ್ಮ್ ಇನ್ಸ್‍ಟಿಟ್ಯೂಟ್‍ನಲ್ಲಿ ಮಾರ್ಕೋ ಬೆಲುಚಿಯೋ ಅವರ ಸಮಗ್ರ ಚಿತ್ರಗಳ ಪ್ರದರ್ಶನವಾಯಿತು. ಮೊದಲಬಾರಿ ಬ್ರಿಟಿಷರ ಮೇಲೆ ಅಸೂಯೆಪಟ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...