HomeUncategorized‘ಸಂಗೀತ ಮಾರಾಟದ ವಸ್ತು ಅಲ್ಲ’ : ಮುಕ್ತಿಯಾರ್ ಅಲಿ ಸಂದರ್ಶನ

‘ಸಂಗೀತ ಮಾರಾಟದ ವಸ್ತು ಅಲ್ಲ’ : ಮುಕ್ತಿಯಾರ್ ಅಲಿ ಸಂದರ್ಶನ

- Advertisement -
- Advertisement -

| ಕಲ್ಯಾಣಿ ಎಸ್. ಕುಮಾರ್ |

ಮುಕ್ತಿಯಾರ್ ಅಲಿಯವರು ರಾಜಸ್ತಾನದ ಜಾನಪದ ಸಂಗೀತದ ತಾನ, ಮಟ್ಟುಗಳನ್ನು ಶಾಸ್ತ್ರೀಯ ಗಾಯನಕ್ಕೆ ಒಗ್ಗಿಸಿಕೊಂಡು, ಮೀರಾ, ಕಬೀರರ ಕಾವ್ಯದ ಅಪೂರ್ವ ಸಂಯೋಜನೆಗಳನ್ನು ರೂಪಿಸುವ ಅಪರೂಪದ ಹಾಡುಗಾರರು. ‘ಮೀರಾಸಿ’ ಎಂಬ ಸಂಗೀತ ಸಮುದಾಯಕ್ಕೆ ಸೇರಿದ ಇವರ ವಿಶಿಷ್ಟ ಹಾಡುಗಾರಿಕೆ ಸಭಾ ಕಾರ್ಯಕ್ರಮಗಳು ಭಾರತ ಮತ್ತು ನೆರೆ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ, ಚೀನಾ, ಅಮೆರಿಕಾ ಯುರೋಪ್‍ಗಳಲ್ಲೂ ಆಗಾಗ ನಡೆಯುತ್ತಿರುತ್ತದೆ. ಇಂತಹ ಜನಪರ ಪ್ರತಿಭೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಗೌರಿ ಮೀಡಿಯಾ ಟ್ರಸ್ಟ್ ಜಂಟಿಯಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸೂಫಿಯಾನ ಕಾರ್ಯಕ್ರಮದಲ್ಲಿ ಹಾಡಲು ಬಂದಾಗ ಅವರ ಸಂದರ್ಶನ ನಡೆಸಲಾಯಿತು.

1. ಸಂಗೀತದ ಕಡೆಗೆ ನೀವು ನಡೆದುಬಂದದ್ದು ಹೇಗೆ?

ನಮ್ಮ ಸಂಗೀತ ಪರಂಪರೆ ಬಹಳ ಹಿಂದಿನ ಕಾಲದಿಂದ ನಡೆದುಬಂದಿದೆ. ನಮ್ಮ ಕಣ್ಣು ತೆರೆದಂತೆಯೇ ನನ್ನ ಸುತ್ತಲೂ ಸಂಗೀತಗಾರರೆ ನೆರೆದಿದ್ದರು. ನನ್ನ ತಂದೆ, ದೊಡ್ಡಪ್ಪ, ಚಿಕ್ಕಪ್ಪ, ತಾತ, ಮುತ್ತಾತ ಎಲ್ಲರೂ ಗಾಯಕರೆ. ನಾನು 26ನೇ ಪೀಳಿಗೆಯ ಗಾಯಕ. ನಮ್ಮ ಸಂಗೀತ ಪರಂಪರೆ 300-400 ವರ್ಷ ಪುರಾತನದ್ದು. ನಮ್ಮ ತಂದೆಯ ಕಾಲದಲ್ಲಿ ಭಾರತ ಸ್ವಾತಂತ್ಯ್ರ ಪಡೆಯಿತು. ಅಲ್ಲಿಯವರೆಗೂ ಎಲ್ಲವೂ ಸುಗಮವಾಗಿತ್ತು. ಸ್ವತಂತ್ರದ ತರುವಾಯ ಬಹಳಷ್ಟು ಬದಲಾವಣೆಗಳು ನಮ್ಮ ಸಂಸ್ಕೃತಿ, ಉಡುಪು, ಸಂಗೀತ ಎಲ್ಲವೂ ನಿಧಾನವಾಗಿ ಬದಲಾಗತೊಡಗಿತು. ಹಿಂದೆ ವಿನಿಮಯ ವ್ಯವಸ್ಥೆ (baster system)ಯಲ್ಲಿ ನಮಗೆ ಪೋಷಿಸಲು ಜನರು ನಮಗೆ ದವಸ, ಧಾನ್ಯಗಳನ್ನು ಹಾಗೂ ನಮ್ಮ ಮನೆಯನ್ನು ನಡೆಸಲುಬೇಕಾದ ದೈವಗಳನ್ನು ದಾನವಾಗಿ ನೀಡುತ್ತಿದ್ದು. ನಮ್ಮ ಮನೆಯ ಮದುವೆಗಳಲ್ಲಿ ಹಾಗೂ ಇತರ ಸಂದರ್ಭಗಳಲ್ಲಿ ತಮ್ಮ ಯೋಗದಾನವನ್ನು ಮಾಡುತ್ತಿದ್ದರು. ಒಬ್ಬರು ಊಟದ ವ್ಯವಸ್ಥೆ ಮಾಡಿದರೆ ಇನ್ನೊಬ್ಬರು ಬೆಳಕಿನ ವ್ಯವಸ್ಥೆ ಹೀಗೆ ಎಲ್ಲಾ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದರು. ಇದರ ಪ್ರತಿಯಾಗಿ ನಾವು ನಮ್ಮನ್ನು ಪೋಷಿಸಿದವರು ಹಾಗೂ ಅವರ ಮನೆಯ ಮಕ್ಕಳಿಗೆ ಸಂಗೀತ ಹೇಳಿಕೊಟ್ಟು ನಮ್ಮ ಗೌರವ ಸಲ್ಲಿಸುತ್ತಿದ್ದೆವು.

ಆದರೆ 80ನೇ ವರ್ಷದ ತರುವಾಯ ನಮ್ಮ ಸಂಗೀತಕ್ಕೆ ಹಾಗೂ ನಮ್ಮ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದವು. ಹೊಸದಾಗಿ ಬಂದ ವಿಸಿಆರ್ ಹಾಗೂ ಟಿವಿಯಿಂದ. ರೇಡಿಯೋ ಇದ್ದರೂ ನಮ್ಮ ವ್ಯವಹಾರಕ್ಕೆ ಪೆಟ್ಟು ಬಿದ್ದಿರಲಿಲ್ಲ. ಆದರೆ ಚಲನಚಿತ್ರ ಹಾಡುಗಳಿಂದ ನಮ್ಮ ಪಂಗಡದ ಹಾಡಿನ ಜನಪ್ರಿಯತೆ ನಿಧಾನವಾಗಿ ಇಳಿಯತೊಡಗಿತು. ಜನರು ಚಲನಚಿತ್ರದ ಕಡೆಗೆ ಮೋಹಗೊಂಡರು. ನಮ್ಮ ಸಂಗೀತ 1984ರಲ್ಲಿ ನಿಂತೆ ಹೋದಂತೆ ಕಾಣುತ್ತಿತ್ತು. ನಮ್ಮ ಸಂಗೀತದೊಂದಿಗೆ ನಮ್ಮ ಪಂಗಡದ ವೃತ್ತಿ ಬದಲಾಗತೊಡಗಿತು. ನಮ್ಮ ಪಂಗಡದ ಜನರು ವ್ಯವಸಾಯದ ಕಡೆಗೆ ವಾಲಲು ಆರಂಭಿಸಿದರು. ಕೆಲವರು ತಮ್ಮ ಜೀವನದ ಆದಾಯ ಪಡೆಯಲು ಬೇರೆ ಬೇರೆ ವೃತ್ತಿಗಳನ್ನು ಆಯ್ಕೆ ಮಾಡಿಕೊಂಡರು. ನಾನು ದರ್ಜಿ ಆಗಬೇಕೆಂದು ನಿರ್ಧರಿಸಿ ಕೆಲಸ ಕಲಿಯಲು ಆರಂಭಿಸಿದೆ. ನನಗೆ 1989ರಲ್ಲಿ ಮದುವೆಯಾಯಿತು. ಹೆಂಡತಿ ಮಕ್ಕಳ ಜವಾಬ್ದಾರಿ ಬಂದಿದ್ದ ಕಾರಣ ನಾನು ದರ್ಜಿ ಕೆಲಸದ ನಡುವೆ ಬೇರೆ ಬೇರೆ ವ್ಯವಹಾರ ಮಾಡಲಾರಂಭಿಸಿದೆ. ಈ ಜವಾಬ್ದಾರಿಗಳ ನಡುವೆ ನನ್ನ ಸಂಗೀತ 1984ರಿಂದ ನಿಂತೇಹೋಯಿತು ಎನ್ನಬಹುದು.

2. ನಿಮ್ಮ ಸಂಗೀತ ನಿಂತು ಹೋದಮೇಲೆ ಸಂಗೀತ ಕ್ಷೇತ್ರಕ್ಕೆ ನಿಮ್ಮ ಮರುಪ್ರವೇಶ ಹೇಗಾಯಿತು?

ಕಲಾವಿದರು ಬಹಳಷ್ಟು ಮಂದಿ ಅಶಿಕ್ಷಿತರು. ನಮಗೆ ಈ ಟಿವಿ ಹಾಗೂ ವಿಸಿಆರ್ ದಾಳಿಗೆ ನಮ್ಮ ತಿರುಮಂತ್ರ ಹೇಗಿರಬೇಕು ಎಂದು ಯೋಚಿಸಲು ಆಗದ ಸ್ಥಿತಿಯಲ್ಲಿ ಇದ್ದೆವು. ನಮ್ಮ ಹತ್ತಿರ ಹಣವೂ ಇರಲಿಲ್ಲ. ಸಾಲದ್ದಕ್ಕೆ ನಮ್ಮ ಪಂಗಡದವರ ಹತ್ತಿರ ಭೂಮಿ ಕೂಡ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾನು ಉರ್‍ಮೂಲ್ ಟ್ರಸ್ಟ್‍ನ ಸಂಪರ್ಕದಲ್ಲಿ ಶಾಜೀತ್ ಘೋಷ್ ಎಂಬಾತನನ್ನು ಕಂಡೆ. ಅವರ ಎನ್‍ಜಿಓ ಮೀಟಿಂಗ್‍ಗಳಲ್ಲಿ ಪಾಲ್ಗೊಂಡೆ.

ಎರಡು ವರ್ಷ ಹೀಗೆ ನಡೆಯುತ್ತಿರುವಾಗ ಎಲ್ಲರಿಗೂ ನನ್ನ ಸಂಗೀತದ ಮಹತ್ವ ಅವರಿಗೆ ತಿಳಿಯಿತು. ಅವರು ನನಗೆ ಅವರಿಗಾದಷ್ಟು ಹಣ ಸಹಾಯ ಮಾಡಿದರು. 1998ರಲ್ಲಿ ರಾಹುಲ್ ಘೈ ನನ್ನನ್ನು ಭೇಟಿ ಮಾಡಿದರು. ಅವರು ನನಗೆ ನೀವು ನಿಮ್ಮ ಸಂಗೀತ ನಿಲ್ಲಿಸಿ ಸಂಗೀತಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದರು. ಈ ಮಾತು ನನ್ನನ್ನು ಪ್ರಚಲಿತಗೊಳಿಸಿ ನನ್ನದೇ ಶೈಲಿಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿ, ನನ್ನ ಸಂಗೀತ ಸಂಶೋಧನೆ ಆರಂಭಿಸಿದೆ. ನವದೆಹಲಿಯಲ್ಲಿ ನನ್ನ ಗಾಯನವನ್ನು ಜನ ಮೆಚ್ಚಿದರು. ಆ ಸಭೆಯಲ್ಲಿ ನೆರೆದಿದ್ದ ಶಬ್ನಂ 2003ರಲ್ಲಿ ನನಗೆ ಕಬೀರನ ಗಾಯನ ಹಾಡಲು ಅವಕಾಶ ಮಾಡಿದರು. ಇತ್ತೀಚಿನ ಚಲನಚಿತ್ರ (ಫೈಂಡಿಂಗ್ ಫನ್ನಿ) ಹಾಡಿದ್ದೇನೆ. ಹೀಗೆ ನನ್ನ ಪಯಣ ಸಂಗೀತದಲ್ಲಿ ಹಾಗೂ ಸಂಗೀತದೊಡನೆ ಸಾಗುತ್ತಿದೆ.

3. ನಿಮ್ಮ ಕನಸಿನ ಭಾರತ ಯಾವುದು? ಅದು ಬರೀ ಕನಸಾಗಿ ಉಳಿಯುವ ಅಪಾಯ ಇದೆಯೇ?

ಭಾರತವನ್ನು ನಾನು ಬಂದು ಬೃಹತ್ ಆಲದಮರಕ್ಕೆ ಹೋಲಿಸುತ್ತೇನೆ. ಅದರಲ್ಲಿ ಚಿಕ್ಕ ಪಕ್ಷಿಗಳು, ದೊಡ್ಡ ಪಕ್ಷಿಗಳು ವಾಸಿಸುತ್ತವೆ. ಎಲ್ಲಾ ಜೀವಜಂತುಗಳು ಸಹಬಾಳ್ವೆ ನಡೆಸುತ್ತವೆ. ಇದನ್ನು ನೋಡಿದರೆ ನನಗೆ ಒಂದು ಸುಂದರ ಚಿತ್ರದ ತರಹ ಕಾಣಿಸುತ್ತದೆ. ಅದೇ ನನ್ನ ದೃಷ್ಟಿಯಲ್ಲಿ ಭಾರತ. ಎಲ್ಲಾ ಪ್ರಾಂತ್ಯದ ಜನರು ಸಹಬಾಳ್ವೆಯನ್ನು ನಂಬಿ ಬದುಕುತ್ತಿದ್ದರು. ಈಗ ನನಗೆ ಕೆಲವು ವಿಷಾದಗಳಿವೆ.

ಕಲಾವಿದರನ್ನು ನೋಡುವ ಕಣ್ಣುಗಳಲ್ಲಿ ಸಂಶಯ, ಅಸೂಯೆ ಹಾಗೂ ಅಹಂ ಎಲ್ಲಾ ಕಂಡುಬರುತ್ತಿದೆ. ಕಲಾವಿದರೇ ಆಗಲಿ ಅಥವಾ ಸಹಜ ಮನುಷ್ಯನೇ ಆಗಲಿ ಸಹಬಾಳ್ವೆಯ ಅಂಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಎಲ್ಲರೂ ವಿದ್ಯಾವಂತರು, ಆದರೂ ನಮ್ಮ ಭಾರತ ಹೀಗಿದೆ ಎಂದು ನನಗೆ ಬಹಳ ಬೇಸರವಾಗುತ್ತದೆ. ನಮ್ಮ ಭಾರತದಲ್ಲಿ ಸುಮಾರು ಪೀಳಿಗೆಯಿಂದಲೂ ವಿದ್ವಾಂಸರಿದ್ದರು. ಅವರ ಯೋಚನೆ ಇಂದಿನ ವಿದ್ಯಾವಂತರಿಗಿಂತ ಮಿಗಿಲಾದದ್ದು ಎಂದು ನಾನು ಭಾವಿಸಿದ್ದೇನೆ. ಅವರ ವಿಚಾರಗಳು, ಮಾತನಾಡುವ ಸ್ವಭಾವ, ಧರ್ಮಗಳನ್ನು ಜೊತೆಗಿಡುವ ವಿಧಾನವೆಲ್ಲಾ ತಿಳಿದಿತ್ತು. ನಾವು ಇದನ್ನು ತಿಳಿದುಕೊಳ್ಳುವುದು ಅಗತ್ಯ. ಇಂದಿನ ವಿದ್ಯಾವಂತರು ಮಾತಾಡಿದರೆ ನನಗೆ ಬಹಳ ಭೀತಿಯುಂಟಾಗುತ್ತದೆ. ಇದು ಬದಲಾಗಬೇಕು.

4. ಸೌಹಾರ್ದ ಭಾರತದ ನಿರ್ಮಾಣಕ್ಕೆ ಸಂಗೀತದ ಅಗತ್ಯ ಮತ್ತು ಸ್ವರೂಪದ ಬಗ್ಗೆ ವಿವರಿಸಿ

ನಮ್ಮ ಜನ ಸಂಗೀತವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಹಿಂದು ಸಂಗೀತ, ಇದು ಮುಸ್ಲಿಂ ಸಂಗೀತ, ಇದು ಸಿಖ್ ಹಾಡುಗಳು ಎಂದು ವಿಂಗಡಿಸಿದ್ದಾರೆ. ನಮ್ಮ ಸಂಗೀತ ವಿಂಗಡಣೆಗೆ ಚಲನಚಿತ್ರದ ಗಾಯನವು ಕಾರಣ ಎನ್ನಬಹುದು. ಹಿಂದೆ 60ರ ದಶಕದಲ್ಲಿ ಇರುವ ಸಂಗೀತ ನೋಡಿದರೆ ಎಲ್ಲಾ ಹಾಡುಗಳು ರಾಗದ ಆಧಾರಿತವಾಗಿವೆ. ಇಂದು ಎಲ್ಲಾ ಮೀಟರ್ ತಕ್ಕಂತೆ ಹಾಡುವುದು ವಾಡಿಕೆಗೆ ಬಂದಿದೆ. ಸಂಗೀತಗಾರರು ಎಲ್ಲರೂ ಕೂತು ಅವರ ಪರಸ್ಪರ ಆಲೋಚನೆ, ರಾಗದ ಸಮ್ಮಿಲನ ಸಂಗೀತ ಎನಿಸಿಕೊಳ್ಳುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ನಾನು ನೊಡಿಯೇ ಇಲ್ಲ. ಒಬ್ಬೊಬ್ಬರು ಬಂದು ತಮ್ಮ ಭಾಗ ಹಾಡಿ ಹೋಗುವರು. ಇದರಲ್ಲಿ ನಾವು ಕಲಾವಿದರ ಮನೋಧರ್ಮ ನಿರೀಕ್ಷಿಸುವುದು ಕಷ್ಟ. ಇದನ್ನು ಬ್ಯುಸಿನೆಸ್ ಮಾಡಿದ್ದಾರೆ. “ಸಂಗೀತ ಮಾರಾಟದ ವಸ್ತು ಅಲ್ಲ”. ಕಲಾವಿದ ಹಾಗೂ ಅವರ ಸಂಗೀತದ ಗೌರವ ಕಾಪಾಡಬೇಕು. ಇದನ್ನು ಮಾಡಿದರೆ ನಾವು ಸಹಬಾಳ್ವೆಯನ್ನು ಅರಿತುಕೊಳ್ಳಬಹುದು. ಕಲಾವಿದರು ಒಟ್ಟಿಗೆ ನಿಂತರೆ ಎಲ್ಲರಿಗೂ ಈ ತತ್ವ ಬೋಧಿಸಬಹುದು ಎಂದು ಭಾವಿಸುತ್ತೇನೆ.

5. ಭಾರತ ಒಡೆಯುವವರ ಶಕ್ತಿಗೆ ಎದುರಾಗಿ ಸಂಗೀತ ನಿಲ್ಲಬಹುದೇ?

ಸಂಗೀತ ಹಿಂದಿನ ಭಾರತದ ಸ್ವಾತಂತ್ರ್ಯದಿಂದ ಇಂದಿನವರೆಗೂ ನಮ್ಮನ್ನು ಬೆಂಬಲಿಸಿದೆ. ಸಂಗೀತ ಎಂದೆಂದಿಗೂ ಮಹಾಶಕ್ತಿಯಾಗಿ ಮುಂದಕ್ಕೂ ನಮ್ಮನ್ನು ಬೆಂಬಲಿಸಲಿದೆ. ಇದು ನಮ್ಮ ಒಗ್ಗಟ್ಟಿಗೆ ಮುಖ್ಯ ಕಾರಣವಾಗಲಿದೆ ಎನ್ನಬಹುದು.

6. ಕಬೀರರ ರಾಮ ಹಾಗೂ ಅಯೋಧ್ಯೆಯ ರಾಮ ಇಬ್ಬರ ನಡುವಿನ ಅಂತರವನ್ನು ನೀವು ಹೇಗೆ ನೋಡುವಿರಿ?

ಕಬೀರರ ರಾಮ ಹಾಗೂ ಅಯೋಧ್ಯೆಯ ರಾಮನಲ್ಲಿ ಬಹಳ ವ್ಯತ್ಯಾಸವಿದೆ. ಕಬೀರರ ರಾಮನಿಗೆ ಹುಟ್ಟು ಸಾವು ಇಲ್ಲ. ರಾಮ ಅಮರ. ರಾಮನಿಗೆ ತಂದೆ ತಾಯಿ ಇಲ್ಲ, ಆದಿಅಂತ್ಯವಿಲ್ಲ. ಆತನಿಗೆ ನಿರ್ದಿಷ್ಟ ದೇಹ, ರೂಪುರೇಷೆಯಿಲ್ಲ.

ಅಯೋಧ್ಯೆಯ ರಾಮನಿಗೆ ರೂಪ, ತಂದೆ-ತಾಯಿ ಎಲ್ಲವೂ ಇದೆ. ಕಬೀರರ ರಾಮ ಬ್ರಹ್ಮಾಂಡವನ್ನು ನಡೆಸುವವನು. ಆದರೆ ಅಯೋಧ್ಯೆಯ ರಾಮ ಐತಿಹಾಸಿಕ ರಾಮ. ಅಯೋಧ್ಯೆಗೆ ಅದರದ್ದೇ ಆದ ಇತಿಹಾಸವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...