ಮಧುಗಿರಿ : ಭೂಮಿ ವಸತಿ ವಂಚಿತರ ಹೋರಾಟಕ್ಕೆ ಕಡೆಗೂ ಜಯ

ಜಿಲ್ಲಾಡಳಿತ ಮಧುಗಿರಿ ತಾಲೂಕು ಬ್ಯಾಲ್ಯ ಗ್ರಾಮಠಾಣದಲ್ಲೇ ವಸತಿ ವಂಚಿತರಿಗೆ ನಿವೇಶನ ಕೊಡುವ ಪತ್ರ ನೀಡಿದ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು 14 ದಿನಗಳ ನಂತರ ವಾಪಸ್ ಪಡೆದಿದೆ. ಸ್ಥಳದಲ್ಲೇ ಅಡುಗೆ ಮಾಡಿಕೊಂಡು ಧರಣಿ ಕುಳಿತಿದ್ದ ಹೋರಾಟ ಸಮಿತಿಗೆ ಕೊನೆಗೂ ಹೋರಾಟಕ್ಕೆ ಜಯ ದೊರೆತಿರುವುದು ಸಂತಸಕ್ಕೆ ಕಾರಣವಾಗಿದೆ.

ಮಧುಗಿರಿ ತಾಲೂಕಿ ಬ್ಯಾಲ್ಯದ 70 ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವಂತೆ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ನಿರಂತರ 14 ದಿನಗಳು ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಹೋರಾಟಕ್ಕೆ ದಲಿತ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಬೆಂಬಲ ನೀಡಿದ್ದವು. ಬಡಜನರಿಗೆ ನಿವೇಶನ ನೀಡದೆ ಸ್ಥಳದಿಂದ ಕದಲುವುದಿಲ್ಲ ಎಂಬ ಧರಣಿನಿತರ ಪಟ್ಟಿಗೆ ಜಿಲ್ಲಾಡಳಿತ ಕೊನೆಗೆ ಸ್ಪಂದಿಸಿದೆ. ಗ್ರಾಮಠಾಣಾದ 30 ಕುಟುಂಬ ಜಮೀನಿನಲ್ಲಿ ನಿವೇಶನ ನೀಡುವ ಆದೇಶ ಪತ್ರವನ್ನು ನೀಡಿದ ನಂತರ ಧರಣಿ ಕೈಬಿಡಲಾಗಿದೆ.

ಧರಣಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಚಾಲನೆ ನೀಡಿದ್ದರು. ದೇಶದ ಪ್ರತಿಯೊಬ್ಬ ಬಸವರಿಗೆ  ಕೂಡ ವಸತಿ ಕಲ್ಪಿಸುವುದ ಸರ್ಕಾರ ಜವಾಬ್ದಾರಿ. ಬಡವರು ಗೌರವಯುತವಾಗಿ ಬದಕಲು ಸರ್ಕಾರ ಅವಕಾಶ ಮಾಡಿಕೊಡಬೇಕು. ವಸತಿ ಮತ್ತು ಭೂಮಿಯಿಂದ ಯಾರನ್ನೂ ವಂಚಿಸಬಾರದು ಎಂದು ತಾಕೀತು ಮಾಡಿ ಹೋಗಿದ್ದರು. ಆನಂತರ ಜಿಲ್ಲಾಧಿಕಾರಿಗಳು ಎರಡು ಬಾರಿ ಧರಣಿನಿರತರಲ್ಲಿಗೆ ಆಗಮಿಸಿ ನಿವೇಶನ ನೀಡಲು ಕ್ರಮ ಕೈಗೊಳ್ಳುತ್ತೇನೆ. ಧರಣಿ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ ಧರಣಿನಿರತರು ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದು ಕುಳಿತರು.

ಈ ನಡುವೆ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಿತಿಯ ಮಾರ್ಗದರ್ಶಕರಾದ ಎಚ್.ಎಸ್. ದೊರೆ ಸ್ವಾಮಿ ಅವರನ್ನು ಭೇಟಿಯಾಗಿ ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಿ ಬಂದರು. ಯಾವುದೇ ಕಾರಣಕ್ಕೂ ಸೂಕ್ತ ಪರಿಹಾರ ಕಾಣದೆ ಧರಣಿ ಕೈಬಿಡಬಾರದು ಎಂದು ಸೂಚಿಸಿದರು. ಅವರ ಮಾರ್ಗದರ್ಶನದಂತೆ ಧರಣಿ ಮುಂದುವರಿಸಲಾಯಿತು. ಧರಣಿಗೆ ಬೇರೆ ಬೇರೆ ಸಂಘಟನೆಗಳು ಬೆಂಬಲ ನಿಡಿದರು.

ಸರ್ಕಾರದ ವಿರುದ್ದ ಪದಗಳನ್ನು ಕಟ್ಟಿ ಹಾಡುವುದು ಹೋರಾಟದ ಹಾಡುಗಳನ್ನು ಹಾಡುವ ಮೂಲಕ ಧರಣಿಯನ್ನು ವಿಭಿನ್ನವಾಗಿ ನಡೆಸಿದರು. ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ತಮಟೆ ಚಳವಳಿ ಮಾಡಿದರು. ಪತ್ರಚಳವಳಿ ಕೈಗೊಂಡರು. ಆದರೂ ಜಿಲ್ಲಾಡಳಿತದ ಕಿವಿಗೆ ಬಡವರ ಕೂಗು ಮುಟ್ಟಲೇ ಇಲ್ಲ. ಧರಣಿ ಕೈಬಿಡಬಹುದೆಂಬ ಅಧಿಕಾರಿಗಳ ನಿರೀಕ್ಷೆ ಹುಸಿಯಾಯಿತು.

ಜಿಲ್ಲಾಧಿಕಾರಿಗಳು ಬ್ಯಾಲ್ಯಗ್ರಾಮದಿಂದ ಮೂರು ಕಿಲೋ ಮೀಟರ್ ದೂರದಲ್ಲಿ 4 ಎಕರೆ ಭೂಮಿ ನೀಡಿರುವುದಾಗಿ ಪತ್ರಿಕೆಗಳ ಮೂಲಕ ಪ್ರಕಟಿಸಿದರು. ಇದಕ್ಕೂ ಹೋರಾಟ ಸಮಿತಿ ಬಗ್ಗಲಿಲ್ಲ. ಜಿಲ್ಲಾಧಿಕಾರಿಗಳು ಸೂಚಿಸಿದ ಪ್ರದೇಶ ತಗ್ಗುದಿಬ್ಬಗಳಿಂದ ಕೂಡಿತ್ತು. ಗುಡ್ಡದ ಸಮೀಪ ತೋರಿಸಿದ್ದ ಭೂಮಿಯಲ್ಲಿ ಪೊದೆಗಳು ಬೆಳೆದಿದ್ವು. ಅಲ್ಲಿ ಚರತೆ ಮತ್ತು ಕರಡಿಗಳ ಕಾಟ ಅಧಿಕವಿತ್ತು ಎಂಬುದನ್ನು ಹೋರಾಟ ಸಮಿತಿ ಅಧಿಕಾರಿಗಳ ಗಮನ ಸೆಳೆಯಿತು. ಧರಣಿ ನಡೆಸುತ್ತಿದ್ದವರು ಎಷ್ಟೇ ಕಷ್ಟವಿದ್ದರೂ ಪಟ್ಟನ್ನು ಮಾತ್ರ ಸಡಿಸಲೇ ಇಲ್ಲ.

ಕೊನೆಗೂ ಜಿಲ್ಲಾಡಳಿತ ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿಯ ಧರಣಿಗೆ ಮಣಿಯಲೇ ಬೇಕಾಯಿತು. 70 ಕುಟುಂಬಗಳ ಸಮಸ್ಯೆ ಗಂಭೀರ ಸ್ವರೂಪದ್ದು ಎಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಹೋರಾಟ ಸಮಿತಿ ಯಶಸ್ವಿಯಾಯಿತು. ಪರಿಣಾಮ ಬ್ಯಾಲ್ಯ ಗ್ರಾಮದ ಗ್ರಾಮಠಾಣದಲ್ಲೇ ಇರುವ ಭೂಮಿಯಲ್ಲಿ ನಿವೇಶನಗಳನ್ನು ನೀಡಲು ಒಪ್ಪಿಕೊಂಡಿತು.

ಬ್ಯಾಲ್ಯ ಗ್ರಾಮದ ಗ್ರಾಮಠಾಣ ಜಾಗದಲ್ಲೇ 30 ಕುಂಟೆ ಜಾಗವನ್ನು ಗುರುತಿಸಿ ಒತ್ತುವರಿ ಜಾಗವನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲು ಪತ್ರ ಮುಖೇನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದೆ. ಈ ಸಂಬಂಧ ಇದರ ಪ್ರತಿಯನ್ನು  ನಮಗೆ ನೀಡಿದೆ. ನಮಗೆ ಇದರಿಂದ ತೃಪ್ತಿಯಾಗಿದೆ. ಈಗ ನೀಡಿರುವ ಜಾಗದಲ್ಲಿ ಕನಿಷ್ಠ 25 ರಿಂದ 30 ನಿವೇಶನಗಳು ವಿಂಗಡಣೆಯಾಗಲಿವೆ. ಈಗ ತುರ್ತು ಇರುವವರಿಗೆ ನೀವೇಶ ನೀಡುವುದು. 20830 ಅಡಿ ನಿವೇಶ ನೀಡಿದರೆ ಅನುಕೂಲವಾಗುತ್ತದೆ. ಇನ್ನುಳಿದವರಿಗೂ ನಿವೇಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇವೆ. ಜಾಗ ನೋಡಲು ತಿಳಿಸಿದ್ದು, ಮಾರಾಟ ಮಾಡಲು ಕೆಲವರು ಮುಂದೆ ಬಂದಿದ್ದಾರೆ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.  ಅದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ ಎಂದು ಹೋರಾಟ ಸಮಿತಿಯ ಮುಖಂಡ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.

ಧರಣಿ ಸ್ಥಳಕ್ಕೆ ಬಮದು ನಮ್ಮ ಮನವಿಗೆ ಸ್ಪಂದಿಸಿದ ಅಪರ  ಜಿಲ್ಲಾಧಿಕಾರಿ ಚನ್ನಬಸಪ್ಪ,,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್, ಮಧುಗಿರಿ ತಹಸಿಲ್ದಾರ್ ನಂದೀಶ್ ,ಜೆಸಿಬಿ ವೆಂಕಟೇಶ್,ಟಿ.ಸಿ.ರಾಮಯ್ಯ,ಭರತ್ ಕುಮಾರ್,ಮೋಹನ್ ಕುಮಾರ್,ಯೋಗೀಶ್ ಮೆಳೆಕಲ್ಲಹಳ್ಳಿ,ರಾಮಮೂರ್ತಿ,ಶಿವರಾಜು ಕರ್ನಾಟಕ ರಾಷ್ಟ್ರ ಸಮಿತಿ ಮಲ್ಲಿಕಾರ್ಜುನ್,ತಿಮ್ಮಯ್ಯ ಮೊದಲಾದವರ ಸಮ್ಮುಖದಲ್ಲಿ ಪತ್ರ ನೀಡಿದ ಬಳಿಕ ಧರಣಿ ಹಿಂತೆಗೆದುಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ವಸತಿ ಮತ್ತು ಭೂಮಿ ವಂಚಿತರು ಸಾಕಷ್ಟು ಮಂದಿ ಇದ್ದಾರೆ. ಎಲ್ಲರಿಗೂ ವಸತಿ ದೊರೆಯಬೇಕು.  ಸಾಮಾಜಿಕ ನ್ಯಾಯ ದೊರೆತರೆ ಅನುಕೂಲವಾಗುತ್ತದೆ. ಜಾತಿ, ಮತ, ಲಿಂಗ, ಧರ್ಮಗಳನ್ನು ಮೀರಿ ನಮ್ಮ ಹೋರಾಟ ಮುಂದುವರಿಯುತ್ತದೆ. ಗುಡಿಸಲಲ್ಲಿ ವಾಸಿಸುವವರಿಗು ಮನೆ ದೊರೆಯಬೇಕು. ಚಿಕ್ಕನಾಯಕನಹಳ್ಳಿ ಮತ್ತು ಗುಬ್ಬಿ ಸೇರಿದಂತೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ವಸತಿ ಇಲ್ಲದವರು ಇದ್ದಾರೆ. ಜಿಲ್ಲಾಡಳಿತ ಮತ್ತು ಸರ್ಕಾರ ಅವರಿಗೂ ನ್ಯಾಯ ಕೊಡಬೇಕು. ಎಲ್ಲ ಕುಟುಂಬಗಳು ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಉದ್ದೇಶ. ಧರಣಿಯನ್ನು ಬೆಂಬಲಿಸಿದ ಮುಖಂಡರು ಹಾಗೂ ಸುದ್ಧಿ ಮಾಧ್ಯಮಗಳಿಗೆ ಧನ್ಯವಾದಗಳನ್ನು ತಿಳಿಸುವುದನ್ನು ನಾಗಭೂಷಣ್ ಮರೆಯಲಿಲ್ಲ.

ಅಂತೂ ಧರಣಿ ಮುಕ್ತಾಯವಾಧರೂ ನಿವೇಶನ ಮತ್ತು ಭೂಮಿ ವಂಚಿತರಿಗೆ ನ್ಯಾಯ ದೊರೆಯಲಿ ಎಂಬುದು ಪತ್ರಿಕೆಯ ಆಶಯವಾಗಿದೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here