Homeಅಂಕಣಗಳುಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

ಪದಚ್ಯುತಿಯ ಹೊಸ್ತಿಲಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್

- Advertisement -
- Advertisement -

ಧಾರ್ಮಿಕ ಕಟ್ಟರ್‌ವಾದಿಗಳ ಜಿಹಾದಿ ಸಂಘಟನೆಗಳು ಮತ್ತು ಸರ್ವಶಕ್ತ ಪಾಕಿಸ್ತಾನಿ ಸೇನೆ ಹಾಗೂ ಅಮೆರಿಕೆಯ ಪರೋಕ್ಷ ನಿಯಂತ್ರಣಕ್ಕೆ ತುತ್ತಾಗಿರುವ ಪಾಕಿಸ್ತಾನದಲ್ಲಿ ’ಜನರು ಆರಿಸಿದ’ ಸರ್ಕಾರಗಳು ನಿಜವಾಗಿಯೂ ಅಸಹಾಯಕ ಎಂಬ ಮಾತು ಮತ್ತೊಮ್ಮೆ ರುಜುವಾತಾಗಿದೆ.

ಜಗದ್ವಿಖ್ಯಾತ ಕ್ರಿಕೆಟ್ ಆಟಗಾರನಾಗಿ ನಿವೃತ್ತರಾದ ನಂತರ ರಾಜಕಾರಣಕ್ಕೆ ಕಾಲಿಟ್ಟು ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಗದ್ದುಗೆ ಏರಿದ್ದರು ಇಮ್ರಾನ್ ಖಾನ್. ತೀವ್ರ ಆರ್ಥಿಕ ಸಂಕಟಕ್ಕೆ ಸಿಕ್ಕಿ ತೊಳಲಾಡಿರುವ ಪಾಕಿಸ್ತಾನ ಆಂತರಿಕ ಕ್ಷೋಭೆಗಳಲ್ಲಿ ಮುಳುಗಿದೆ. ಪ್ರತಿಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ತೋಳೇರಿಸಿ ನಿಂತಿವೆ. ಯುಕ್ರೇನ್ ಸಮರಕ್ಕೆ ಅಮೆರಿಕೆ ಮತ್ತು ಐರೋಪ್ಯ ಕೂಟವನ್ನು ದೂಷಿಸಿ ದಾಳಿ ನಡೆಸಿರುವ ಖಾನ್ ನಡೆ ಅಮೆರಿಕೆ ಮತ್ತು ಪಾಕ್ ಸೇನೆಯನ್ನು ಸಿಟ್ಟಿಗೆಬ್ಬಿಸಿದೆ.

ಕೈಗೊಂಬೆ ಪ್ರಧಾನಿಗಳನ್ನು ಕುರ್ಚಿ ಮೇಲೆ ಕೂರಿಸಿ ತನ್ನ ಇಚ್ಛೆಗೆ ಅನುಗುಣವಾಗಿ ಕುಣಿಸುವ ಪಾಕಿಸ್ತಾನಿ ಸೇನೆಗೆ ಇದೀಗ ಇಮ್ರಾನ್ ಖಾನ್ ಬೇಕಿಲ್ಲ.

ನವಾಜ್ ಷರೀಫ್

ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ (ಎನ್), ಆಸೀಫ್ ಅಲಿ ಝರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಹಾಗೂ ಮೌಲಾನಾ ಫಜ್ಲುರ್ ರೆಹಮಾನ್ ಅವರ ಜಮಾತ್ ಉಲೇಮಾ ಇಸ್ಲಾಮ್ (ಎಫ್) ಸೇರಿದಂತೆ ಪ್ರತಿಪಕ್ಷಗಳ ಒಕ್ಕೂಟವು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದೆ. ಇಮ್ರಾನ್ ಅವರ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಪಕ್ಷಗಳೂ ಹಿಂದೆ ಸರಿದಿವೆ. ತಮ್ಮದೇ ಪಕ್ಷ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷದ ಅನೇಕ ಸಂಸದರು ಕೂಡ ಇಮ್ರಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದೇ 28ರಂದು ಅವರು ನ್ಯಾಷನಲ್ ಅಸೆಂಬ್ಲಿಯಲ್ಲಿ (ಲೋಕಸಭೆ) ಅವಿಶ್ವಾಸ ನಿರ್ಣಯ ಎದುರಿಸಲಿದ್ದಾರೆ. ಬಹುಮತ ರುಜುವಾತು ಮಾಡಲು 12ರಿಂದ 24 ಮಂದಿ ಸದಸ್ಯರ ಕೊರತೆಯನ್ನು ಇಮ್ರಾನ್ ಪಕ್ಷ ಎದುರಿಸಿದೆ. ಅವಿಶ್ವಾಸ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳುವ ಹಿಂದಿನ ದಿನ ನ್ಯಾಷನಲ್ ಅಸೆಂಬ್ಲಿಯ ಹೊರಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಬಲಾಬಲ ಪ್ರದರ್ಶನಕ್ಕೆ ತೋಳೇರಿಸಿವೆ. ಭಾರೀ ಹಿಂಸಾಚಾರ ಮತ್ತು ರಕ್ತಪಾತದ ಶಂಕೆಯಿದೆ.

ತಮ್ಮ ಸರ್ಕಾರ ಮತ್ತು ಪಾಕಿಸ್ತಾನಿ ಸೇನೆಯ ನಡುವೆ ಒಮ್ಮತವಿರುವ ಕಾರಣ ತಮ್ಮ ಸರ್ಕಾರ ಸುಸ್ಥಿರವಾಗಿದ್ದು ಅಭಿವೃದ್ಧಿಯ ಮೇಲೆ ಹೆಚ್ಚಿನ ಗಮನ ಹರಿಸುತ್ತಿದೆ ಎಂಬ ಮಾತನ್ನು ಇಮ್ರಾನ್ ಖಾನ್ ಮೊದಲ ಒಂದೆರಡು ವರ್ಷ ಆಡಿದ್ದುಂಟು. ಖಾನ್ ಅವರ ಚುನಾವಣೆಗೆ ಸೇನೆ ಮತ್ತು ಐಎಸ್‌ಐ ಬಹುವಾಗಿ ಶ್ರಮಿಸಿದ್ದುಂಟು. ಆಸೀಫ್ ಝರ್ದಾರಿ ಮತ್ತು ನವಾಜ್ ಷರೀಫ್ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳನೇಕರನ್ನು ಇಮ್ರಾನ್ ಪಕ್ಷಕ್ಕೆ ಸೆಳೆದದ್ದುಂಟು.

ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ಒಟ್ಟು 342 ಸೀಟುಗಳ ಪೈಕಿ ಇಮ್ರಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇನ್ಸಾಫ್ ಪಕ್ಷ ಗೆದ್ದದ್ದು 155 ಸೀಟುಗಳು. ಮಿತ್ರಪಕ್ಷಗಳ ಬೆಂಬಲದಿಂದ ಸರಳ ಬಹುಮತವನ್ನೂ (176) ಒಟ್ಟುಗೂಡಿಸಿಕೊಂಡಿತ್ತು. ಈ ಕಸರತ್ತಿನ ಹಿಂದೆ ಸೇನೆಯ ಬೆಂಬಲವಿತ್ತು. ಮಿಲಿಟರಿಯ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂಬ ತಹತಹ ಇಮ್ರಾನ್ ಪಕ್ಷಕ್ಕೆ ಇರಲೇ ಇಲ್ಲ. ಆಡಳಿತ ಮತ್ತು ವಿದೇಶಾಂಗ ನೀತಿಯಲ್ಲಿ ಮಿಲಿಟರಿ ವಹಿಸಿದ್ದ ಸಕ್ರಿಯ ಪಾತ್ರ ಕುರಿತು ಪ್ರಧಾನಿಗೆ ಯಾವ ಕಿರಿಕಿರಿಯೂ ಇರಲಿಲ್ಲ.

ಇಮ್ರಾನ್ ಸರ್ಕಾರ ಎರಡೇ ವರ್ಷಗಳಲ್ಲಿ ಭ್ರಮನಿರಸನ ಮೂಡಿಸಿತು. ಸಾಲದ ಸುಳಿಗೆ ಸಿಕ್ಕಿರುವ ಪಾಕಿಸ್ತಾನ ಆಹಾರ ಮತ್ತು ಊರ್ಜೆಯ ಬಿಕ್ಕಟ್ಟು ಎದುರಿಸಿದೆ. ಪಾಕ್ ಸೇನೆಯ ಮುಂಚೂಣಿ ಅಧಿಕಾರಿಗಳ ವರ್ಗಾವಣೆಯಲ್ಲಿ ಮೂಗು ತೂರಿಸಿದ ಇಮ್ರಾನ್ ಸರ್ಕಾರವನ್ನು ಬೆಂಬಲಿಸುವ ಕುರಿತು ಸೇನೆಯಲ್ಲೇ ಭಿನ್ನಮತ ಮೂಡಿತು. ಇಮ್ರಾನ್ ಸರ್ಕಾರವನ್ನು ಹಣಿಯಲು ಇದೇ ಸರಿಯಾದ ಅವಕಾಶವೆಂದು ಪ್ರತಿಪಕ್ಷಗಳು ಒಟ್ಟಿಗೆ ಬಂದಿವೆ.

’ಹಮ್ ದೇಖೇಂಗೇ’ ಎಂಬುದು ಪಾಕಿಸ್ತಾನದ ಪ್ರಗತಿಪರ ಕವಿ ಫೈಜ್ ಅಹ್ಮದ್ ಫೈಜ್ ಅವರ ಕ್ರಾಂತಿಕಾರಕ ಕವಿತೆಯೊಂದರ ತಲೆಬರೆಹ. 80ರ ದಶಕದಲ್ಲಿ ಅಂದಿನ ಮಿಲಿಟರಿ ಸರ್ವಾಧಿಕಾರಿ ಜನರಲ್ ಝಿಯಾವುಲ್ ಹಖ್ ಆಡಳಿತದ ವಿರುದ್ಧ ಪ್ರತಿಭಟನೆಯ ಗೀತೆಯಾಗಿ ಪಾಕಿಸ್ತಾನದಲ್ಲಿ ಮಾರ್ದನಿಸಿತ್ತು. “..ರಾಜ್ಯಗಳಳಿಯಲಿ, ರಾಜ್ಯಗಳುಳಿಯಲಿ, ಹಾರಲಿ ಗದ್ದುಗೆ ಮುಕುಟಗಳು….” ಎಂಬ ನಮ್ಮ ಕ್ರಾಂತಿಕಾರಿ ಕವಿ ಕುವೆಂಪು ಅವರ ’ನೇಗಿಲಯೋಗಿ’ ಕವಿತೆಯ ಸಾಲನ್ನೇ ಹೋಲುವ ಪದಗಳು ಫೈಜ್ ಅವರ ಈ ಕವಿತೆಯಲ್ಲೂ ಇವೆ. “ಸಬ್ ತಾಜ್ ಉಛಾಲೇ ಜಾಯೇಂಗೇ…ಸಬ್ ತಖ್ತ್ ಗಿರಾಯೇ ಜಾಯೇಂಗೇ” (ತೂರಾಡಲಾದೀತು ಮುಕುಟಗಳನು ಗಾಳಿಗೆಸೆದು, ಕೆಡವಲಾದೀತು ಸಿಂಹಾಸನಗಳನ್ನು ಕುಟ್ಟಿ ನೆಲಕ್ಕೆ..) ಹೀಗೆ.

ಆಸೀಫ್ ಅಲಿ ಝರ್ದಾರಿ

ಪಾಕಿಸ್ತಾನದಲ್ಲಿ ಯಾರ ಗದ್ದುಗೆ ಮುಕುಟಗಳು ಹಾರಿದರೇನಂತೆ. ಅಲ್ಲಿನ ಸರ್ವಶಕ್ತ ಸೇನೆಯ ಗದ್ದುಗೆ ಮುಕುಟಗಳು ಸದಾ ಕಾಯಂ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಹೆಚ್ಚೂಕಡಿಮೆ ಅರ್ಧದಷ್ಟು ಕಾಲ ಪಾಕಿಸ್ತಾನವನ್ನು ಸೇನೆಯೇ ಆಳಿದೆ. ಜನರೇ ಆಯ್ಕೆ ಮಾಡಿದ ಸರ್ಕಾರದಿಂದ ಜನರಿಂದ ಆಯ್ಕೆಯಾದ ಮತ್ತೊಂದು ಸರ್ಕಾರಕ್ಕೆ ಅಧಿಕಾರದ ಶಾಂತಿಯುತ ಹಸ್ತಾಂತರ ನಡೆದಿರುವುದು ಎರಡೇ ಬಾರಿ. ಚುನಾವಣೆಯ ಮೂಲಕ ಆರಿಸಿ ಬಂದ ಹಲವು ಸರ್ಕಾರಗಳನ್ನು ಕೆಡವಿ ಅಧಿಕಾರ ಕಬಳಿಸಿದೆ ಪಾಕ್ ಸೇನೆ.

ನೆರೆಹೊರೆಯನ್ನು ಆಯ್ದುಕೊಳ್ಳುವುದು ಅಸಾಧ್ಯ ಎಂಬ ಮಾತೊಂದಿದೆ. ಹಿಂಸೆ, ರಕ್ತಪಾತ, ಭಯೋತ್ಪಾದನೆಗಳಲ್ಲೇ ಬದುಕಿರುವ ನಮ್ಮ ನೆರೆಯ ದೇಶ ಪಾಕಿಸ್ತಾನ ಸುಖಸಮೃದ್ಧಿ ಶಾಂತಿಯಿಂದ ಬದುಕಿದಷ್ಟೂ ಭಾರತಕ್ಕೆ ನೆಮ್ಮದಿ. ಇಲ್ಲವಾದರೆ ಅಲ್ಲಿನ ಉತ್ಪಾತಗಳು ಇಲ್ಲಿ ಕಂಪನ ಹುಟ್ಟಿಸುವುದನ್ನು ಕಾಣುತ್ತಲೇ ಬಂದಿದ್ದೇವೆ. ಅಲ್ಲಾಹು, ಆರ್ಮಿ ಹಾಗೂ ಅಮೆರಿಕ ಆಳಿಕೊಂಡು ಬಂದಿರುವ ಪಾಕಿಸ್ತಾನ ನಿರಂತರ ರಾಜಕೀಯ ಅಸ್ಥಿರತೆಗೆ ಸದಾ ಜೋಲಿ ಹೊಡೆದ ದೇಶ. ಕಳೆದ ಆರೂವರೆ ದಶಕಗಳ ತನ್ನ ಇತಿಹಾಸದಲ್ಲಿ ಈ ದೇಶದ ಜನತಂತ್ರ ಎಂಬ ಸಸಿ ಗಿಡವಾಗಿ ಮರವಾಗಿ ಹೂವು ಕಾಯಿ ಕಟ್ಟಿ ಹಣ್ಣು ಮಾಗಲೇ ಇಲ್ಲ.

ಪಾಕಿಸ್ತಾನ ಹುಟ್ಟಿದ ಒಂದೇ ವರ್ಷದಲ್ಲಿ ಆ ದೇಶದ ಜನಕನೆಂದೇ ಹೆಸರಾದ ಮೊಹಮ್ಮದಾಲಿ ಜಿನ್ನಾ ನಿಧನರಾಗುತ್ತಾರೆ. ಮೊದಲ ಒಂಬತ್ತು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಸಂವಿಧಾನವೇ ಇರಲಿಲ್ಲ. ಜಿನ್ನಾ ನಿಧನ ಅಧಿಕಾರ ಹಿಡಿಯುವ ಹಣಾಹಣಿಗೆ ದಾರಿ ಮಾಡುತ್ತದೆ. 1958ರ ಹೊತ್ತಿಗೆ ಮೊದಲ ಕ್ಷಿಪ್ರಕ್ರಾಂತಿ ನಡೆದು 1971ರ ತನಕ ಸೇನೆ ಅಧಿಕಾರ ಹಿಡಿಯುತ್ತದೆ. ತನ್ನ ಪಟ್ಟಭದ್ರ ಹಿತಾಸಕ್ತಿಗೆ ಅಡಚಣೆಗಳು ಒದಗಿದಾಗಲೆಲ್ಲ ಮಿಲಿಟರಿ ಜನರಿಂದ ಆಯ್ಕೆಯಾದ ಸರ್ಕಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತ ಬಂದಿದೆ. 1977ರಿಂದ 88 ಮತ್ತು 1999ರಿಂದ 2008ರ ತನಕ ಸೇನೆಯದೇ ನೇರ ಆಡಳಿತ. ಜನತಾಂತ್ರಿಕ ಆಡಳಿತವನ್ನು ಗಟ್ಟಿಗೊಳಿಸುತ್ತ ಬಂದಿದ್ದ ನವಾಜ್ ಷರೀಫ್ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ವಿರುದ್ಧ ದೇಶದ್ರೋಹದ ಆರೋಪ ಹೇರಲು ಮುಂದಾಗಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ’ಪನಾಮಾ ಪೇಪರ್‍ಸ್ ಆರ್ಥಿಕ ಹಗರಣ’ದ ನೆವದಲ್ಲಿ ಉರುಳಿಸಿ ಸೆರೆಗೆ ತಳ್ಳಲಾಯಿತು. ವಿರೋಧಿ ದೇಶ ಭಾರತ ಕುರಿತು ಮೆದು ಧೋರಣೆ ತಳೆದು ಗೆಳೆತನಕ್ಕೆ ಹಾತೊರೆಯುತ್ತಿದ್ದಾರೆ ಎಂದು ಆರೋಪ ಹೊರಿಸಲಾಯಿತು. ಸೇನೆಯನ್ನು ಬೆಂಬಲಿಸುವ ಮತ್ತು ಸೇನೆಯ ಮಾತು ಕೇಳುವ ಜನಪ್ರಿಯ ನಾಯಕ ಇಮ್ರಾನ್ ಅವರನ್ನು ಮುಂದೆ ತರಲಾಯಿತು.

ಪಾಕಿಸ್ತಾನದ ಉದ್ದಗಲದ ’ನೆಚ್ಚಿನ ಪ್ರಧಾನಿ ಅಭ್ಯರ್ಥಿ’ಯಾಗಿ ಇಮ್ರಾನ್ 2018ರ ಚುನಾವಣೆಗಳಲ್ಲಿ ಹೊರಹೊಮ್ಮಿದ್ದರು. ಈ ಹಿಂದೆ 70ರ ದಶಕಗಳಲ್ಲಿ ಇಂತಹ ಬೆಂಬಲ ದೊರೆತದ್ದು ಝುಲ್ಫಿಕರ್ ಅಲಿ ಭುಟ್ಟೋ ಅವರಿಗೆ. ಪಾಕಿಸ್ತಾನದ ರಾಷ್ಟ್ರೀಯ ಶಾಸನಸಭೆ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂಬುದು ಮತದಾನಕ್ಕೆ ಮೊದಲೇ ನಿರ್ಧಾರ ಆಗಿರುತ್ತದೆ. ಈ ನಿರ್ಧಾರವನ್ನು ಆಧರಿಸಿ ಫಲಿತಾಂಶಗಳು ಹೊರಬೀಳುತ್ತವೆ ಎಂಬುದು ಜನಜನಿತ ಭಾವನೆ. ಪಾಕಿಸ್ತಾನದ ಸೇನೆಯ ಆಶೀರ್ವಾದ ಇದ್ದವರೇ ಗೆಲ್ಲುತ್ತಾರೆ ಎಂಬುದೂ ನಿಶ್ಚಿತ. ಆದರೆ ಇಮ್ರಾನ್ ಗೆಲುವಿನ ಹಿಂದಿನ ಶಕ್ತಿ ಕೇವಲ ಪಾಕ್ ಸೇನೆ ಅಲ್ಲ, ವೈಯಕ್ತಿಕ ವರ್ಚಸ್ಸೂ ಕೆಲಸ ಮಾಡಿತ್ತು. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ ಪಕ್ಷಕ್ಕೆ ಸೇರಿದ ಗೆದ್ದೇ ಗೆಲ್ಲುವ 61 ಮಂದಿ ಅಭ್ಯರ್ಥಿಗಳು ಇಮ್ರಾನ್ ಪಕ್ಷ ಸೇರಿದ್ದೂ, ಮಾಜಿ ಕ್ರಿಕೆಟಿಗನ ಯಶಸ್ಸಿಗೆ ದಾರಿ ಮಾಡಿತ್ತು. ಅದೇ ಹಳೆಯ ಪಕ್ಷಗಳನ್ನು ನೋಡಿ ಬೇಸತ್ತಿರುವ ಜನರಿಗೆ ಬದಲಾವಣೆ ಬೇಕಿತ್ತು.

ಸೇನಾ ಜನರಲ್‌ಗಳು ಮನಸ್ಸು ಮಾಡದಿದ್ದರೆ ಇಮ್ರಾನ್ ಪ್ರಧಾನಿ ಹುದ್ದೆಯ ಸನಿಹ ಸರಿಯುವುದು ಕೂಡ ಶಕ್ಯವಿರಲಿಲ್ಲ. ಹೀಗಾಗಿ ಸೇನೆಯ ಇಷಾರೆಯನ್ನು ಮೀರಿ ಇಮ್ರಾನ್ ಮುಂದಿನ ಹೆಜ್ಜೆ ಇಡುವುದು ಅಸಾಧ್ಯವಿತ್ತು. ಭಾರತದೊಂದಿಗೆ ಗೆಳೆತನ-ಹಗೆತನ ಮತ್ತು ಕಾಶ್ಮೀರ ಕುರಿತ ನೀತಿ ನಿರ್ಧಾರಗಳು ಅವರ ಕೈಯಲ್ಲಿ ಇರುವುದಿಲ್ಲ. ಪಾಕ್ ಪ್ರಧಾನಿಗಳು ಏನನ್ನಾದರೂ ಹೇಳಲಿ, ನಡೆಯುವುದು ತನ್ನ ಮಾತೇ ಎಂಬ ಸಂದೇಶವನ್ನು ಅಲ್ಲಿನ ಮಿಲಿಟರಿ ಮುಖ್ಯಸ್ಥರು ತಾವು ಸಾಕಿಕೊಂಡಿರುವ ಜಿಹಾದಿಗಳು ಇಲ್ಲವೇ ಸೇನೆಯ ಬಂದೂಕಿನ ನಳಿಕೆಯ ಮೂಲಕ ಭಾರತಕ್ಕೆ ಸಾರಿ ಹೇಳಿದ್ದಾರೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಹಠಾತ್ತನೆ ಬಡಿದೆಬ್ಬಿಸಿದ ಕಾರ್ಗಿಲ್ ಯುದ್ಧ ಮತ್ತು ಸಂಸತ್ ಭವನದ ಮೇಲೆ ನಡೆದ ದಾಳಿ ಹಾಗೂ ಯುಪಿಎ ಅವಧಿಯಲ್ಲಿ ಮುಂಬಯಿ ಮೇಲೆ ಜಿಹಾದಿ ಭಯೋತ್ಪಾದಕರ ಲಗ್ಗೆಯ ಪ್ರಕರಣಗಳು ಈ ಮಾತಿಗೆ ಉದಾಹರಣೆಗಳು. ಈ ಎಲ್ಲ ಪ್ರಕರಣಗಳ ಸೂತ್ರಧಾರ ಪಾಕಿಸ್ತಾನದ ಸೇನೆಯೇ ವಿನಾ ಅಲ್ಲಿನ ಚುನಾಯಿತ ಸರ್ಕಾರಗಳು ಅಲ್ಲ. ಚುನಾಯಿತ ಸರ್ಕಾರಗಳಿಗೆ ಈ ದಾಳಿಗಳ ಪೂರ್ವ ಮಾಹಿತಿ ಕೂಡ ಇರಲಿಲ್ಲ.

ಪರ್ವೇಜ್ ಮುಷರಫ್

ಭಾರತಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರ ನೀತಿ ನಿರ್ಧಾರಗಳು ಕಳೆದ ಏಳು ದಶಕಗಳ ಅವಧಿಯಲ್ಲಿ ಅಲ್ಲಿನ ಸೇನೆಯ ಬಿಗಿಮುಷ್ಠಿಯಲ್ಲೇ ಉಳಿದಿವೆ. ಈ ಸ್ಥಿತಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಅಸಾಧ್ಯ.

ಪಕ್ಷಾಂತರ ಮಾಡುವ ಸಂಸದರನ್ನು ಅನರ್ಹಗೊಳಿಸುವ ಅವಕಾಶವಿರುವ ಪಾಕಿಸ್ತಾನೀ ಸಂವಿಧಾನದ 63-ಎ ಅನುಚ್ಛೇದವನ್ನು ವ್ಯಾಖ್ಯಾನಿಸುವಂತೆ ಸರ್ಕಾರ ಪಾಕಿಸ್ತಾನಿ ಸುಪ್ರೀಮ್ ಕೋರ್ಟಿಗೆ ಮನವಿ ಮಾಡಿದೆ. ನ್ಯಾಯಮೂರ್ತಿಗಳ ಪಂಚ ಸದಸ್ಯರ ಪೀಠವೊಂದು ಈ ಅಹವಾಲಿನ ವಿಚಾರಣೆಯನ್ನು ಮಾರ್ಚ್ 24ರಂದು ಮುಂದುವರೆಸಲಿದೆ.

ಸುಪ್ರೀಮ್ ಕೋರ್ಟ್ ತಮ್ಮ ನೆರವಿಗೆ ಬರುವುದೆಂಬ ನಿರೀಕ್ಷೆಯನ್ನು ಇಮ್ರಾನ್ ಇಟ್ಟುಕೊಂಡಿದ್ದಾರೆ. ಆದರೆ ಸದನದಲ್ಲಿ ಬಲಾಬಲ ಪರೀಕ್ಷೆಗೆ ಮುನ್ನವೇ ಕೋರ್ಟ್ ತೀರ್ಪು ಹೊರಬರುವ ಸಾಧ್ಯತೆ ವಿರಳ.


ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...