HomeUncategorizedಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

ಪಶ್ಚಿಮ ಬಂಗಾಳ: ಬಿಜೆಪಿಗೆ ಉಲ್ಟಾ ಹೊಡೆಯುತ್ತಾ ಗೋ-ಹತ್ಯೆ ನಿಷೇಧ ಕಾಯ್ದೆ?

- Advertisement -
- Advertisement -

ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬ ಹತ್ತಿರ ಬರುತ್ತಿದ್ದಂತೆ, ಪಶ್ಚಿಮ ಬಂಗಾಳದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಕೇವಲ ಧಾರ್ಮಿಕ ಕಾರಣಗಳಿಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ವ್ಯಾಪಾರಿಗಳು, ರೈತರು ಮತ್ತು ರಾಜಕೀಯ ನಾಯಕರು ಇದನ್ನು ಸಾವಿರಾರು ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಎಂದು ಬಣ್ಣಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಸಾಮಾಜಿಕ ಜಾಲತಾಣಗಳಲ್ಲಿ ಈಗ ಎಲ್ಲೆಲ್ಲೂ ಹಸುಗಳದ್ದೇ ಕಾರುಬಾರು. ಇತ್ತೀಚೆಗೆ ವೈರಲ್ ಆದ ವಿಡಿಯೋ ಒಂದರಲ್ಲಿ, ಮುಸ್ಲಿಂ ಯುವಕರು ಹಿಂದೂ ಧರ್ಮದ ದನಗಳ ವ್ಯಾಪಾರಿಗಳನ್ನು ತಡೆದು, ಅವರ ಹಸುಗಳೊಂದಿಗೆ ವಾಪಸ್ ಮನೆಗೆ ಕಳುಹಿಸುತ್ತಿದ್ದಾರೆ. “ನಿಮ್ಮ ತಾಯಿಯನ್ನು ಯಾಕೆ ಮಾರಾಟ ಮಾಡಲು ಹೊರಟಿದ್ದೀರಿ? ಅವಳನ್ನು ಮನೆಗೆ ಕರೆದುಕೊಂಡು ಹೋಗಿ ಸೇವೆ ಮಾಡಿ. ನೀವು ಹಸು ಮಾರಿ ದುಡ್ಡು ಮಾಡಿಕೊಳ್ಳುತ್ತೀರಿ, ಆದರೆ ಕೊನೆಗೆ ನಾವು ಜೈಲು ಪಾಲಾಗಬೇಕಾಗುತ್ತದೆ” ಎಂದು ಯುವಕರ ಗುಂಪು ಹೇಳುತ್ತಿರುವುದನ್ನು ಕೇಳಬಹುದು.

https://www.facebook.com/share/v/1CkQQFn62B

ದನಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದ ಮುಸ್ಲಿಂ ಯುವಕರು ಚಾಲಕರನ್ನು ಪ್ರಶ್ನಿಸುತ್ತಾ “ನಿಮ್ಮ ತಾಯಿಯನ್ನು ಹೀಗೆ ಮೃಗಗಳಂತೆ ಕಟ್ಟಿಹಾಕಿ ಸಾಗಿಸುತ್ತಿದ್ದೀರಲ್ಲ, ನಿಮಗೆ ಮಾನವೀಯತೆ ಇಲ್ವಾ? ಗೌರವಯುತವಾಗಿ ನಡೆಸಿಕೊಂಡು ಹೋಗಿ.” ಎನ್ನುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಇದೇ ಹೊತ್ತಿನಲ್ಲಿ, ಹಲವು ಮುಸ್ಲಿಂ ಇನ್‌ಫ್ಲುಯೆನ್ಸರ್‌ಗಳು ಈ ಬಾರಿಯ ಈದ್-ಉಲ್-ಅದ್ಹಾ (ಬಕ್ರೀದ್) ಹಬ್ಬಕ್ಕೆ ಯಾರೂ ಹಸುಗಳನ್ನು ಖರೀದಿಸಬೇಡಿ ಎಂದು ಬಹಿರಂಗವಾಗಿ ಮನವಿ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ, ಹಿಂದೂ ಸಮುದಾಯದ  ಹೈನು ಅವಲಂಬಿತ ರೈತರು, ಮಾರುಕಟ್ಟೆಗೆ ಕೊಂಡ್ಯೂದ ಹಸುಗಳನ್ನು ಮಾರಲಾಗದೆ, ಬಿಡಿಗಾಸು ಇಲ್ಲದೆ ಖಾಲಿ ಕೈಯಲ್ಲಿ ಮುಖ ಒಣಗಿಸಿಕೊಂಡು ಕಣ್ಣೀರು ಹಾಕುತ್ತಾ ಮನೆಗೆ ಮರಳುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

https://www.facebook.com/share/v/1ETYH1uocE

ಈ ಪರಿಸ್ಥಿತಿಗೆ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವನ್ನು ನೇರವಾಗಿ ಹೊಣೆ ಮಾಡುತ್ತಿದ್ದಾರೆ. ಇತ್ತ ನೆಟ್ಟಿಗರು (Gen Z) ಇದನ್ನು “ಅಂದರ್ ಬಾಹರ್ ಆಟ ” ಎಂದು ಕರೆಯುತ್ತಿದ್ದಾರೆ. ಅಂದರೆ ಯಾರೋ ಹೆಣೆದ ದಾಳ, ತಿರುಗಿ ಅವರಿಗೇ ಉಲ್ಟಾ ಹೊಡೆದಿದೆ ಎಂದು ಬಿಜೆಪಿ ಬೆಂಬಲಿಸಿದವರನ್ನು ಕಾಲೆಳೆಯುತ್ತಿದ್ದಾರೆ.

ಕಿಡಿ ಹೊತ್ತಿಸಿದ ಆ ಒಂದು ಸರ್ಕಾರಿ ಆದೇಶ!

ಮೇ 13 ರಂದು, ಹೊಸದಾಗಿ ರಚನೆಯಾದ ಬಿಜೆಪಿ ಸರ್ಕಾರವು ‘ಪಶ್ಚಿಮ ಬಂಗಾಳ ಗೋ ಹತ್ಯೆ ನಿಯಂತ್ರಣ ಕಾಯ್ದೆ, 1950’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಘೋಷಿಸಿತು. ಈ ಹೊಸ ಆದೇಶದ ಪ್ರಕಾರ:

  • ಹಸುಗಳಿಗೆ 14 ವರ್ಷ ತುಂಬಿರಬೇಕು ಅಥವಾ ಕೆಸಕ್ಕೆ ಯೋಗ್ಯವಲ್ಲ ಎಂಬ ಅಧಿಕೃತ ಪಶುವೈದ್ಯಕೀಯ ಪ್ರಮಾಣಪತ್ರವಿದ್ದರೆ ಮಾತ್ರ ಅವುಗಳನ್ನು ಕಟಾವು ಮಾಡಲು ಅನುಮತಿ ನೀಡಲಾಗುತ್ತದೆ.
  • ಕಟಾವು ಪ್ರಕ್ರಿಯೆಯನ್ನು ಕೇವಲ ಸರ್ಕಾರಿ ಅನುಮೋದಿತ ಕಸಾಯಿಖಾನೆಗಳಲ್ಲಿ ಮಾತ್ರ ಮಾಡಬೇಕು.
  • ಸಾರ್ವಜನಿಕವಾಗಿ ಪ್ರಾಣಿ ಬಲಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಈ ನಿಯಮವನ್ನು ಉಲ್ಲಂಘಿಸಿದರೆ ಆರು ತಿಂಗಳ ಜೈಲು ಶಿಕ್ಷೆ, ₹1,000 ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

ಈ ಆದೇಶ ಹೊರಬಿದ್ದ ಬೆನ್ನಲ್ಲೇ, ಹಿಂದೂ ರಾಷ್ಟ್ರವಾದಿ ಸಂಘಟನೆಗಳು ಮತ್ತು ಪೊಲೀಸರು ರಸ್ತೆಗಳಲ್ಲಿ ದನ ಸಾಗಿಸುವ ವಾಹನಗಳನ್ನು ತಡೆದು ಕಿರುಕುಳ ನೀಡಲು ಪ್ರಾರಂಭಿಸಿದರು. ಮೇ 16 ರಂದು ಹಿಂಗಲ್‌ಗಂಜ್‌ನ ಬಿಜೆಪಿ ಶಾಸಕಿ ರೇಖಾ ಪಾತ್ರಾ ಅವರು ದನಗಳ ಲಾರಿಯೊಂದನ್ನು ತಡೆದು, “ಹಸುಗಳ ಜನ್ಮ ಪ್ರಮಾಣಪತ್ರ (Birth Certificate)” ಕೇಳಿದ ಘಟನೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮುಸ್ಲಿಂ ಸಂಘಟನೆಗಳು ಹಸುಗಳ ಖರೀದಿಯನ್ನು ಬಹಿಷ್ಕರಿಸಲು ಕರೆ ನೀಡಿದವು. ಆ ಕ್ಷಣದಿಂದಲೇ ಬಂಗಾಳದ ಹಿಂದೂ ದನಗಳ ವ್ಯಾಪಾರಿಗಳಲ್ಲಿ ಆತಂಕದ ನೆರಳು ಆವರಿಸಿತು.

ಕೋಲ್ಕತ್ತಾದ ಐತಿಹಾಸಿಕ ‘ನಾಖೋದಾ ಮಸೀದಿ’ಯ ಮುಖ್ಯ ಇಮಾಮ್ ಆದ ಮೌಲಾನಾ ಮೊಹಮ್ಮದ್ ಶಫೀಕ್ ಖಾಸ್ಮಿ ಅವರು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಮಾಡದಂತೆ ಸಾರ್ವಜನಿಕವಾಗಿ ಮನವಿ ಮಾಡಿದ್ದಾರೆ.

ಹಸುವಿನ ಬದಲಿಗೆ ಆಡನ್ನು ಕುರ್ಬಾನಿ (ತ್ಯಾಗ) ನೀಡುವಂತೆ ಅವರು ಸಲಹೆ ನೀಡಿದ್ದಾರೆ. “ವಿವಿಧ ಧರ್ಮ ಹಾಗೂ ಸಂಸ್ಕೃತಿಗಳಿರುವ ನಮ್ಮ ಸಮಾಜದಲ್ಲಿ ಇತರರ ಭಾವನೆಗಳಿಗೆ ಧಕ್ಕೆ ತರುವುದನ್ನು ಮುಸ್ಲಿಮರು ತಪ್ಪಿಸಬೇಕು” ಎಂದು ಅವರು ಹೇಳಿದ್ದಾರೆ. “ದಯವಿಟ್ಟು ಯಾರೂ ಗೋಹತ್ಯೆ ಮಾಡಬೇಡಿ. ಇನ್ಮುಂದೆ ಎಂದಿಗೂ ಗೋಮಾಂಸವನ್ನು ಸೇವಿಸಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.

ತಿನ್ನುವವರು ಮುಸ್ಲಿಮರು, ಸಾಕುವವರು ಹಿಂದೂಗಳು!

ಪಶ್ಚಿಮ ಬಂಗಾಳದ ಗೋ ಸಂಪತ್ತಿನ ಆರ್ಥಿಕತೆಯ ಹಿಂದೆ ಒಂದು ವಿಚಿತ್ರವಾದ ಸಾಮಾಜಿಕ ವಿರೋಧಾಭಾಸವಿದೆ. ಅಲ್ಲಿ ಮಾಂಸದ ವ್ಯಾಪಾರ ಮಾಡುವವರು ಮತ್ತು ಅದನ್ನು ಸೇವಿಸುವವರು ಹೆಚ್ಚಾಗಿ ಮುಸ್ಲಿಮರಾಗಿದ್ದರೆ, ಆ ಹಸುಗಳನ್ನು ಸಾಕಿ, ಬೆಳೆಸಿ ಮಾರಾಟ ಮಾಡುವವರಲ್ಲಿ ಸಿಂಹಪಾಲು ಹಿಂದೂಗಳದ್ದೇ ಆಗಿದೆ. ಅದರಲ್ಲೂ ವಿಶೇಷವಾಗಿ ಬಂಗಾಳದ ಸಾಂಪ್ರದಾಯಿಕ ಹೈನುಗಾರಿಕೆ ಜಾತಿಯಾದ ‘ಘೋಷ್’ ಸಮುದಾಯದವರು ಈ ಉದ್ಯಮದಲ್ಲಿದ್ದಾರೆ.

ಇತಿಹಾಸವನ್ನು ನೋಡಿದರೆ, ಈ ಘೋಷ್ ಸಮುದಾಯದವರ ವಸತಿ ಪ್ರದೇಶಗಳು ಬಂಗಾಳದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಭದ್ರಕೋಟೆಗಳಾಗಿದ್ದವು. ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಗೆ ಒಂದು ಸೀಟು ಇಲ್ಲದ ಕಾಲದಲ್ಲೂ ಈ ಸಮುದಾಯ ಪಕ್ಷದ ಜೊತೆ ನಿಂತಿತ್ತು. ಈ ಹಿಂದೆ ನಡೆದ ಹಲವು ಕೋಮು ಸಂಘರ್ಷಗಳಲ್ಲೂ ಈ ಸಮುದಾಯ ಮುಂಚೂಣಿಯಲ್ಲಿರುತ್ತಿತ್ತು.

ಆದರೆ ವಿಪರ್ಯಾಸವೆಂದರೆ, ಬಿಜೆಪಿ ಸರ್ಕಾರ ತಂದ ಈ ಕಟ್ಟುನಿಟ್ಟಿನ ನಿಯಮ ಮೊದಲು ಹೊಡೆತ ಕೊಟ್ಟಿದ್ದೇ ಅವರದ್ದೇ ಆದ ಈ ಪರಮ ಬೆಂಬಲಿಗ ಸಮುದಾಯಕ್ಕೆ. ಮೇ 27-28 ರಂದು ಬಕ್ರೀದ್ ಹಬ್ಬ ಹತ್ತಿರ ಬರುತ್ತಿದ್ದರೂ, ಮುಸ್ಲಿಂ ಸಂಘಟನೆಗಳು ಹಸುವಿನ ಬದಲಿಗೆ ಕುರಿ ಅಥವಾ ಎಮ್ಮೆಗಳನ್ನು ಬಲಿ ಕೊಡಿ ಎಂದು ಪ್ರಚಾರ ಮಾಡುತ್ತಿವೆ. ಇದರಿಂದಾಗಿ ಸಾವಿರಾರು ಹಿಂದೂ ಹಸು ಸಾಕಾಣೆದಾರರು ಬೀದಿಗೆ ಬೀಳುವ ಭೀತಿಯಲ್ಲಿದ್ದಾರೆ.

ಹಬ್ಬದ ಸೀಸನ್‌ನಲ್ಲೂ ಬಿಕ್ಕೋ ಎನ್ನುತ್ತಿದೆ ದನದ ಮಾರುಕಟ್ಟೆಗಳು

ಸಾಮಾನ್ಯವಾಗಿ ಬಕ್ರೀದ್ ಹಬ್ಬಕ್ಕೆ ಮುಂಚಿತವಾಗಿ ಬಂಗಾಳದ ದನಗಳ ಮಾರುಕಟ್ಟೆಗಳು (ಹಾತ್‌ಗಳು) ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ನೂರಾರು ಹಸು, ಎಮ್ಮೆಗಳನ್ನು ಸಾಲಾಗಿ ಕಟ್ಟಿ ನಿಲ್ಲಿಸಿ, ರಾತ್ರಿಯಿಡೀ ಚೌಕಾಶಿ ವ್ಯಾಪಾರ ನಡೆಯುತ್ತಿತ್ತು. ಆದರೆ ಈ ವರ್ಷ ಮಾರುಕಟ್ಟೆಗಳು ಸ್ಮಶಾನ ಮೌನಕ್ಕೆ ಶರಣಾಗಿವೆ ಎನ್ನುತ್ತಾರೆ ಸ್ಥಳೀಯರು.

ಸಾಮಾನ್ಯವಾಗಿ 200 ರಿಂದ 300 ದನಗಳು ಮಾರಾಟವಾಗುತ್ತಿದ್ದ ಭಾನುವಾರದ ಮಾರುಕಟ್ಟೆಯೊಂದರಲ್ಲಿ ಕೇವಲ ಎರಡು ಹಸುಗಳು ಮಾತ್ರ ಉಳಿದುಕೊಂಡಿದ್ದವು. ಮುಸ್ಲಿಂ ಗ್ರಾಹಕರು ಇತ್ತ ತಲೆಹಾಕಿಯೂ ಮಲಗುತ್ತಿಲ್ಲ. ಬದಲಿಗೆ, ಚಿಂತೆಗೀಡಾದ ಹಿಂದೂ ರೈತರು ಗುಂಪುಗೂಡಿ ತಮ್ಮ ಸಾಲಸೋಲಗಳ ಬಗ್ಗೆ ಚರ್ಚಿಸುತ್ತಾ ಕಣ್ಣೀರು ಹಾಕುತ್ತಿದ್ದಾರೆ.

“ನಾವು ಹಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದಿದ್ದರೆ ನಮ್ಮ ಕಥೆ ಮುಗಿದಂತೆ,” ಎನ್ನುತ್ತಾರೆ 42 ವರ್ಷದ ಹೈನುಗಾರ ಸುರಜಿತ್ ಘೋಷ್. “ನಮ್ಮ ಕುಟುಂಬ ತಲೆಮಾರುಗಳಿಂದ ಹಾಲಿನ ವ್ಯಾಪಾರ ನಂಬಿಕೊಂಡಿದೆ. ಹಸುಗಳು ಹಾಲು ಕೊಡುವುದನ್ನು ನಿಲ್ಲಿಸಿದ ತಕ್ಷಣ, ಅಂದರೆ 7-8 ವರ್ಷಗಳ ನಂತರ ನಾವು ಅವುಗಳನ್ನು ಮಾರಾಟ ಮಾಡುತ್ತೇವೆ. ಈಗ ಆ ಹಸುಗಳನ್ನು ಏನು ಮಾಡಬೇಕು? ನಾನು ಅವುಗಳನ್ನು ಮಾರದಿದ್ದರೆ ನನಗೆ 15 ರಿಂದ 16 ಲಕ್ಷ ರೂಪಾಯಿ ನಷ್ಟವಾಗುತ್ತದೆ. ತೀವ್ರ ಮಾನಸಿಕ ಒತ್ತಡದಲ್ಲಿದ್ದೇನೆ ಎನ್ನುತ್ತಾರೆ.”

ಮತ್ತೊಬ್ಬ ರೈತ ಬಿಸ್ವಜಿತ್ ಘೋಷ್ (35), “ಹಲವರು ಚಿನ್ನ ಅಡವಿಟ್ಟು, ಜಮೀನು ಮಾರಿ, ದುಬಾರಿ ಬಡ್ಡಿಗೆ ಸಾಲ ತಂದು ಹಸುಗಳನ್ನು ಸಾಕಿದ್ದಾರೆ. ನನ್ನ ಮೇಲೆಯೇ ₹1 ಕೋಟಿ ಬ್ಯಾಂಕ್ ಸಾಲವಿದೆ. ಪರಿಸ್ಥಿತಿ ತೀರಾ ಹದಗೆಟ್ಟಿದೆ,” ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು 22 ಹಸುಗಳ ಒಡೆಯ ಭಾಸ್ಕರ್ ಘೋಷ್ (33) ಅವರದ್ದೂ ಇದೇ ಕಥೆ: “ಹಾಲು ಕೊಡದ ಹಸುಗಳಿಗೆ ದಿನಕ್ಕೆ ₹300 ರಿಂದ ₹500 ರಂತೆ ತಿಂಗಳಿಗೆ ₹9,000 ದನಗಳ ಮೇವಿಗೇ ಖರ್ಚು ಮಾಡಬೇಕಾಗಿದೆ. ಈಗಾಗಲೇ ದನದ ಆಹಾರ ಮತ್ತು ಔಷಧದ ಅಂಗಡಿಯವನಿಗೆ ₹8 ಲಕ್ಷ ಬಾಕಿ ಕೊಡಬೇಕು. ಒಟ್ಟು ಸಾಲ ₹15 ಲಕ್ಷ ದಾಟಿದೆ. ಹೀಗೆಯೇ ಮುಂದುವರಿದರೆ ನಮಗೆ ಆತ್ಮಹತ್ಯೆಯೊಂದೇ ದಾರಿ.”

67 ವರ್ಷದ ಗೋಬಿಂದ ಘೋಷ್ ಅವರ ಬಳಿ 15 ಹಸುಗಳು ಮತ್ತು 150 ಎಮ್ಮೆಗಳಿವೆ. “ನನ್ನ ಮೇಲೆ ₹2 ಕೋಟಿ ಬ್ಯಾಂಕ್ ಸಾಲವಿದೆ. ನನ್ನ ಶೆಡ್‌ನಲ್ಲಿ 12 ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರಿಗೂ ₹22,000 ಸಂಬಳ ಮತ್ತು ಊಟ ಕೊಡಬೇಕು. ಇದಕ್ಕೆ ಏನಾದರೂ ಪರಿಹಾರ ಸಿಗದಿದ್ದರೆ ನಮ್ಮ ಇಡೀ ಕುಟುಂಬ ಸಾಯಬೇಕಾಗುತ್ತದೆ,” ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

ಗ್ರಾಮೀಣ ಭಾಗದಲ್ಲಿ ದನಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಪಶುವೈದ್ಯರ ತಪಾಸಣೆ ನಡೆಸಿ, ಗುರುತಿನ ಚೀಟಿಗಳನ್ನು ನೀಡಿ ಪ್ರಮಾಣಪತ್ರ ಪಡೆಯುವುದು ಅತ್ಯಂತ ಜಟಿಲವಾದ ಪ್ರಕ್ರಿಯೆಯಾಗಿದೆ. ಹಳ್ಳಿಗಳಲ್ಲಿ ಇಂಟರ್ನೆಟ್ ಸೌಲಭ್ಯವಾಗಲಿ ಅಥವಾ ಡಿಜಿಟಲ್ ಸಾಕ್ಷರತೆಯಾಗಲಿ ಇಲ್ಲ.

ಕೊಲ್ಕತ್ತಾದ ಹೊರವಲಯದಲ್ಲಿ ಕ್ಲಿನಿಕ್ ನಡೆಸುವ ಪಶುವೈದ್ಯ ಡಾ. ಸುಬೀರ್ ದಾಸ್ ಈ ಬಗ್ಗೆ ಮಾತನಾಡಿ, “ನನ್ನ ವೃತ್ತಿಜೀವನದಲ್ಲಿ ನಾನು ಸಾವಿರಾರು ಹಸುಗಳಿಗೆ ಚಿಕಿತ್ಸೆ ನೀಡಿದ್ದೇನೆ. ಆದರೆ ಯಾವುದೇ ರೈತ ಹಸುವನ್ನು 10 ವರ್ಷಕ್ಕಿಂತ ಹೆಚ್ಚು ಕಾಲ ತನ್ನ ಬಳಿ ಇಟ್ಟುಕೊಳ್ಳುವುದಿಲ್ಲ. ಸಾಮಾನ್ಯವಾಗಿ 4-5 ಬಾರಿ ಕರು ಹಾಕಿದ ನಂತರ ಮತ್ತು ಹಾಲಿನ ಪ್ರಮಾಣ ಕಡಿಮೆಯಾದಾಗ ರೈತರು ಅವುಗಳನ್ನು ಮಾರಾಟ ಮಾಡುತ್ತಾರೆ. ಸಾಮಾನ್ಯವಾಗಿ ವೈದ್ಯರು ಹಸುವಿನ ಆರೋಗ್ಯ ನೋಡಿ, ಮಾಲೀಕರು ಹೇಳುವ ವಯಸ್ಸನ್ನು ಆಧರಿಸಿ ಪ್ರಮಾಣಪತ್ರ ನೀಡುತ್ತಾರೆ,” ಎಂದು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.

ಈ ಕಾನೂನು ಗೊಂದಲ ಮತ್ತು ಕಿರುಕುಳದ ಭಯದಿಂದಾಗಿ ಮುಸ್ಲಿಂ ಗ್ರಾಹಕರು ಮಾರುಕಟ್ಟೆಯಿಂದ ದೂರ ಉಳಿದಿದ್ದಾರೆ. ತೊಂದರೆ ಬೇಡವೆಂದು ಹಲವರು ಹಸುವಿನ ಬದಲಿಗೆ ಕುರಿ ಅಥವಾ ಆಡುಗಳನ್ನು ಖರೀದಿಸುತ್ತಿದ್ದಾರೆ. ಮೌಲಾನಾ ಶಫೀಕ್ ಖಾಸ್ಮಿ ಮತ್ತು ಮೌಲಾನಾ ಶಬ್ಬೀರ್ ಮಿಸ್ಬಾಹಿ ಅವರಂತಹ ಧಾರ್ಮಿಕ ಮುಖಂಡರು ಸಹ ಕಾನೂನನ್ನು ಗೌರವಿಸುವಂತೆ ಮತ್ತು ಅಗತ್ಯವಿದ್ದರೆ ಹಸುವಿನ ಬದಲಿಗೆ ಕುರಿ/ಆಡುಗಳನ್ನು ಬಳಸುವಂತೆ ಮುಸ್ಲಿಂ ಬಾಂಧವರಿಗೆ ಕರೆ ನೀಡಿದ್ದಾರೆ.

’14 ವರ್ಷಗಳ ನಿಯಮ’ ರೈತರ ಪಾಲಿಗೆ ಮರಣಶಾಸನವೇಕೆ?

ಹಸುಗಳು ಸಾಮಾನ್ಯವಾಗಿ 7 ರಿಂದ 8 ವರ್ಷಗಳವರೆಗೆ ಮಾತ್ರ ಹಾಲು ನೀಡುತ್ತವೆ. ಹಾಲು ನಿಂತ ಮೇಲೆಯೂ ಆ ಹಸುವನ್ನು 14 ವರ್ಷ ತುಂಬುವವರೆಗೆ ಸಾಕುವುದೆಂದರೆ ಸುಮಾರು ₹7.5 ಲಕ್ಷ ಖರ್ಚಾಗುತ್ತದೆ. ಆದರೆ 14 ವರ್ಷದ ಮುದಿ ಹಸು ನಿಶ್ಯಕ್ತವಾಗಿ, ರೋಗಗ್ರಸ್ತವಾಗಿರುತ್ತದೆ. ಅದನ್ನು ಮಾಂಸಕ್ಕೂ ಯಾರೂ ಕೊಳ್ಳುವುದಿಲ್ಲ. ಹೀಗಾಗಿ, ಈ ನಿಯಮದ ಪ್ರಕಾರ ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ, ರೈತ ಅದನ್ನು ಮಾರುವಂತಿಲ್ಲ, ಸಾಕುವ ಶಕ್ತಿಯೂ ಅವನಿಗಿರುವುದಿಲ್ಲ ಎಂದು ಹಲವರು ಗೋಳು ಹೇಳಿಕೊಳ್ಳುತ್ತಾರೆ.

ಕಾಲಕ್ಕೆ ಒಗ್ಗದ ಹಳೇ ಕಾಯ್ದೆ

1950 ರ ಈ ಕಾಯ್ದೆಯನ್ನು ಆಗಿನ ಕೃಷಿ ಪದ್ಧತಿ ಮತ್ತು ಹಾಲಿನ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ತರಲಾಗಿತ್ತು. ಆದರೆ ಇಂದಿನ ಆಧುನಿಕ ಯುಗಕ್ಕೆ ಇದು ಒಗ್ಗುತ್ತಿಲ್ಲ ಎಂಬುದು ತಜ್ಞರ ವಾದ. ಸಿಪಿಎಂ ನಾಯಕ ರಶೀದ್ ಗಾಜಿ ಹೇಳುವಂತೆ, “ಇವತ್ತಿನ ದಿನಗಳಲ್ಲಿ ಎತ್ತುಗಳು, ಎತ್ತಿನ ಬಂಡಿಗಳು ಕಣ್ಮರೆಯಾಗಿವೆ. ಎಲ್ಲವೂ ಯಾಂತ್ರೀಕೃತಗೊಂಡಿದೆ. ಹಸು ಹಾಲು ಕೊಡುವುದು ನಿಲ್ಲಿಸಿದರೆ ಅದರ ಆರ್ಥಿಕ ಮೌಲ್ಯ ಮುಗಿಯಿತು. ಇನ್ನು ಹೋರಿಗಳು ಹಾಲನ್ನೂ ಕೊಡುವುದಿಲ್ಲ, ಅವುಗಳನ್ನು ರೈತರು ಏನು ಮಾಡಬೇಕು?” ಎಂದು ಪ್ರಶ್ನಿಸುತ್ತಾರೆ.

ಅಪಾಯದಲ್ಲಿ ಗ್ರಾಮೀಣ ಆರ್ಥಿಕತೆ

ಭಾರತವು ವಿಶ್ವದಲ್ಲೇ ಅತಿ ದೊಡ್ಡ ಮಾಂಸ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳದ ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ವ್ಯವಸ್ಥೆ ಇಲ್ಲದ ಬಡ ಕುಟುಂಬಗಳಿಗೆ ಈ ದನಗಳೇ ತಕ್ಷಣದ ಇನ್ಶೂರೆನ್ಸ್ ಇದ್ದಂತೆ. ಕಷ್ಟ ಬಂದಾಗ ಇವುಗಳನ್ನು ಮಾರಿ ಅವರು ಹಣ ಹೊಂದಿಸುತ್ತಿದ್ದರು. ಆದರೆ ಈಗ ಈ ವ್ಯವಸ್ಥೆಯೇ ಬುಡಮೇಲಾಗಿದೆ.

ಇದರ ಪರಿಣಾಮ ಕೇವಲ ಮಾಂಸದ ಮಾರುಕಟ್ಟೆಯ ಮೇಲಷ್ಟೇ ಅಲ್ಲ, ದನದ ಮೇವು ಸರಬರಾಜು ಮಾಡುವವರು, ಪಶು ವೈದ್ಯಕೀಯ ಔಷಧ ವ್ಯಾಪಾರಿಗಳು, ಚರ್ಮದ ಉದ್ಯಮ, ಹೋಟೆಲ್ ಉದ್ಯಮ ಮತ್ತು ಸಾರಿಗೆ ಕಾರ್ಮಿಕರ ಮೇಲೂ ತೀವ್ರವಾಗಿ ತಟ್ಟಲಿದೆ. ಬಂಗಾಳದ ಶೇ. 27 ರಷ್ಟಿರುವ ಮುಸ್ಲಿಮರು ದನದ ಮಾಂಸ ತಿನ್ನುವುದನ್ನು ಕಡಿಮೆ ಮಾಡಿದರೆ, ಚಿಕನ್, ಮಟನ್ ಮತ್ತು ಮೀನಿನ ಬೆಲೆಗಳು ಗಗನಕ್ಕೇರಲಿವೆ.

ಈ ಹೊಸ ಆದೇಶದ ಪ್ರಕಾರ, ಯಾವುದೇ ದನವನ್ನು ಕಟಾವು ಮಾಡುವ ಮುನ್ನ ಸ್ಥಳೀಯ ಪೌರಸಂಸ್ಥೆ ಅಥವಾ ಪಂಚಾಯತ್ ಅಧಿಕಾರಿಗಳು ಹಾಗೂ ಸರ್ಕಾರದ ಪಶುವೈದ್ಯರಿಂದ ಲಿಖಿತ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ. ಆ ಪ್ರಮಾಣಪತ್ರದಲ್ಲಿ “ಸದರಿ ಪ್ರಾಣಿಗೆ 14 ವರ್ಷ ತುಂಬಿದೆ ಅಥವಾ ಅದು ಶಾಶ್ವತವಾಗಿ ಅಂಗವಿಕಲಗೊಂಡಿದೆ/ಕೆಲಸಕ್ಕೆ ಅಸಮರ್ಥವಾಗಿದೆ” ಎಂದು ಧೃಡೀಕರಿಸಿರಬೇಕು.

ಸರ್ಕಾರದ ಈ ಕಟ್ಟುನಿಟ್ಟಿನ ನಿರ್ಬಂಧಗಳು ಈಗ ಬಂಗಾಳದ ಸಾಂಪ್ರದಾಯಿಕ ಹೈನುಗಾರಿಕೆ ಸಮುದಾಯವಾದ ‘ಗೌಡ’ (Goala) ಸಮುದಾಯವನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಏಕೆಂದರೆ, ಹಬ್ಬದ ಸೀಸನ್‌ನಲ್ಲಿ ಹಾಲು ಕೊಡದ ವಯಸ್ಸಾದ ಹಸುಗಳನ್ನು ಮುಸ್ಲಿಂ ಗ್ರಾಹಕರಿಗೆ ಮಾರಿ ಜೀವನ ನಡೆಸುವುದು ಇವರ ತಲತಲಾಂತರದ ಆದಾಯದ ಮೂಲವಾಗಿತ್ತು.

ಉಲ್ಟಾ ಹೊಡೆದ ರಾಜಕೀಯ ದಾಳ  

ಬಿಜೆಪಿ ನಾಯಕ ಅಬಾನಿ ಮೊಂಡಲ್ ಅವರು ರೈತರ ಆಕ್ರೋಶವನ್ನು ಒಪ್ಪಿಕೊಳ್ಳುತ್ತಲೇ, “ಇದು 1950ರ ಕಾನೂನು, ಹಿಂದಿನ ಸರ್ಕಾರಗಳು ಇದನ್ನು ಜಾರಿ ಮಾಡಿರಲಿಲ್ಲ. ನಾವು ಕಾನೂನನ್ನು ಪಾಲಿಸುತ್ತಿದ್ದೇವೆ, ಆರಂಭದಲ್ಲಿ ಕೆಲವು ಸಮಸ್ಯೆಗಳು ಬರುವುದು ಸಹಜ,” ಎಂದಿದ್ದಾರೆ.

ಮತ್ತೊಂದೆಡೆ ಐಎಸ್‌ಎಫ್ (ISF) ಶಾಸಕ ನೌಶಾದ್ ಸಿದ್ದಿಕಿ ಮತ್ತು ಸಿಪಿಐ(ಎಂ) ಶಾಸಕ ಮುಸ್ತಾಫಿಜುರ್ ರೆಹಮಾನ್ ರಾಣಾ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿಗೆ ಪತ್ರ ಬರೆದು, ಹಬ್ಬದ ಸಂದರ್ಭದಲ್ಲಿ ನಿಯಮ ಸಡಿಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆಶ್ಚರ್ಯವೆಂದರೆ, ಮುಸ್ಲಿಂ ನೆಟ್ಟಿಗರೇ ತಮ್ಮ ನಾಯಕರ ಈ ನಡೆಯನ್ನು ವಿರೋಧಿಸುತ್ತಿದ್ದಾರೆ! “ಇದು ಹೀಗೆಯೇ ಮುಂದುವರಿಯಲಿ. ನಮಗೆ ಹಸುವಿನ ಮಾಂಸ ಬೇಡವೇ ಬೇಡ, ಈಗಲಾದರೂ ಅವರಿಗೆ ಪರಿಸ್ಥಿತಿಯ ಅರಿವಾಗಲಿ,” ಎಂದು ಕಮೆಂಟ್ ಮಾಡುತ್ತಿದ್ದಾರೆ.

ಈಗಾಗಲೇ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಈ ಕಾಯ್ದೆಯ ಜಾರಿ ವಿರೋಧಿಸಿ 5 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL) ದಾಖಲಾಗಿವೆ.

ಬಂಗಾಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಮುಸ್ಲಿಂ ಸಮುದಾಯದ ದೊಡ್ಡ ವರ್ಗವೊಂದು ತಾವಾಗಿಯೇ ಗೋ ಹತ್ಯೆಯನ್ನು ಸ್ವಾಗತಿಸಿದೆ. ಆದರೆ ಬಲಪಂಥವನ್ನು ಬೆಂಬಲಿಸುತ್ತಿದ್ದ ಹಿಂದೂ ಹೈನುಗಾರರು ಮಾತ್ರ ಹೇಗಾದರೂ ಮಾಡಿ ಮುಸ್ಲಿಮರು ನಮ್ಮ ಹಸುಗಳನ್ನು ಖರೀದಿಸಲಿ ಎಂದು ದೇವರಿಗೆ ಕೈ ಮುಗಿಯುತ್ತಿದ್ದಾರೆ. ರಾಜಕೀಯದ ದಾಳ ಹೇಗೆ ಉಲ್ಟಾ ತಿರುಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.

ಗೋ-ಹತ್ಯೆ ನಿಷೇಧ ಕಾಯ್ದೆ ಜಾರಿಯ ಹಿಂದೆ ಬಿಜೆಪಿಗೆ ಹಸುಗಳ ಬಗ್ಗೆ ಇರುವ ಕಾಳಜಿಗಿಂತ, ರಾಜಕೀಯ ಧೃವೀಕರಣದಿಂದಾಗುವ ಲಾಭ ಮುಖ್ಯ. ಏಕೆಂದರೆ ಈ ಕಾಯ್ದೆ ಜಾರಿಯಾದರೆ ಸಹಜವಾಗಿ ಗೋ ಮಾಂಸ ಸೇವಿಸುವ ಅಲ್ಪಸಂಖ್ಯಾತ ಮುಸ್ಲಿಮರು ಇದರ ವಿರುದ್ದ ತಿರುಗಿ ಬೀಳುತ್ತಾರೆ ಆಗ ಸುಲಭವಾಗಿ ಅವರ ವಿರುದ್ದ ಹಿಂದೂಗಳನ್ನು ಎತ್ತಿಕಟ್ಟಬಹುದು ಎಂಬ ಗೇಮ್‌ ಪ್ಲಾನ್ ಇರುತ್ತದೆ. ಆದರೆ ಸಧ್ಯದ ಪಶ್ಚಿಮ ಬಂಗಾಳದ ಪರಿಸ್ಥಿತಿ ಭಿನ್ನವಾಗಿದ್ದು, ಮುಂದೆ ಇದರಿಂದ ಯಾರಿಗೆ ಎಷ್ಟು ಲಾಭ, ಯಾರಿಗೆ ನಷ್ಟ ಎಂಬುದನ್ನು ಕಾದು ನೋಡಬೇಕಿದೆ.

source : The Quint

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...