SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್ ನ ಅಂಬೇಡ್ಕರ್ ಸರ್ಕಲ್ ನಿಂದ ಆರಂಭವಾದ ಜಾಥಾವು ಬೀದರ್ ಜಿಲ್ಲೆಯಾದ್ಯಂತ ಸಂಚರಿಸಿ SIR ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಜಾಥಾ ಉದ್ಘಾನಟಿಸಿ ಮಾತನಾಡಿದ ಎದ್ದೇಳು ಕರ್ನಾಟಕದ ಮುಖಂಡ ವೀರಸಂಗಯ್ಯರವರು, ದೇಶದೆಲ್ಲೆಡೆ SIR ಜಾರಿ ಮಾಡುವ ಮೂಲಕ ಲಕ್ಷಾಂತರ ಅರ್ಹ ಮತದಾರರ ಸಾಂವಿಧಾನಿಕವಾದ ಮತದಾನದ ಹಕ್ಕಿನಿಂದ ವಂಚಿಸಲಾಗಿದೆ. ಕರ್ನಾಟಕದಲ್ಲಿ ಯಾವುದೇ ಒಬ್ಬ ಅರ್ಹ ಮತದಾರರನ್ನು ಕೈಬಿಡಬಾರದು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿ ಚುನಾವಣಾ ಆಯೋಗವು ದೇಶದೆಲ್ಲೆಡೆ ನಡೆಸಿದಂತೆ ಅವೈಜ್ಞಾನಿಕ ಲಾಜಿಕಲ್ ಡಿಸ್ಕ್ರಿಪ್ಷನ್ ಮಾನದಂಡವನ್ನು ಅನುಸರಿಸಬಾರದು. ಕರ್ನಾಟಕ ಸರ್ಕಾರವು ಗ್ರಾಮಸಭೆಗಳನ್ನು ನಡೆಸಿ ಯಾರೆಲ್ಲ ಅರ್ಹ ಮತದಾರರ ಬಳಿ ದಾಖಲೆಗಳಿಲ್ಲವೋ ಅಂತಹ ವ್ಯಕ್ತಿಗಳಿಗೆ ಕೂಡಲೇ ಅಗತ್ಯ ದಾಖಲೆಗಳನ್ನು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಬಸವಮಂಟಪದ ಸತ್ಯದೇವಿ ಮಾತಾಜ ಮಾತನಾಡಿ, ಮತದಾನವೆಂಬುದು ಡಾ ಬಿ ಆರ್ ಅಂಬೇಡ್ಕರ್ ಕೊಟ್ಟಿರುವ ಸಾಂವಿಧಾನಿಕ ಹಕ್ಕು, ಈ ಹಕ್ಕನ್ನು ಯಾರೋ ಕಸಿಯಲು ಬಿಡುವುದಿಲ್ಲ. ಕರ್ನಾಟಕವು ಬಸವನಾಡು, ಇಲ್ಲಿ ದ್ವೇಶಕ್ಕೆ ಜಾಗವಿಲ್ಲ, ಮತದಾನದ ಹಕ್ಕು ಕಸಿಯುವುದು ಬಸವ ಪರಂಪರೆಯ ಅನುಭವ ಮಂಟಪದ ಮಾದರಿಯನ್ನು ಅನುಸರಿಸಿ ಕಟ್ಟಿಕೊಂಡಿರುವ ಭಾರತದ ಪ್ರಜಾಪ್ರಭುತ್ವ ಮಾದರಿಗೆ ವಿರುದ್ದವಾಗಿದೆ. ಹಾಗಾಗಿ ಈ SIR ಅನ್ನು ಇಡೀ ಬಸವ ಪರಂಪರೆಯ ಎಲ್ಲರೂ ಖಂಡಿಸಬೇಕಿದೆ. ಅರ್ಹ ಮತದಾರರ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುವ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಜಾಥಾ ಉದ್ಘಾಟನೆಯಲ್ಲಿ ಓಂ ಪ್ರಕಾಶ್ ರೊಟ್ಟೆ, ಲಕ್ಷ್ಮಣ್ ಮಂಡಲಗೇರಾ, ಶ್ರೀಕಾಂತ್ ಸ್ವಾಮಿ, ಮಾರುತಿ ಬೌದ್ದೆ, ಮಹೇಶ್, ಗೊರನಾಳಕರ್, ಮಲ್ಲಿಕಾರ್ಜುನ್ ಸ್ವಾಮಿ, ಬಾಬು ಹೊನ್ನ, ಬಸವ ಮಂಟಪದ ಸತ್ಯದೇವಿ ಮಾತಾಜಿ, ನಿಜಾಮುದ್ದೀನ್, ರಾಜಶ್ರೀ ಸ್ವಾಮಿ, ಸಿದ್ದು ಪುಲಾರೆ ಸೇರಿದಂತೆ ಇತರರು ಹಾಜರಿದ್ದರು.
ಬೀದರ್ ಜಿಲ್ಲೆಯ ನಂತರ ಜಾಥಾವು ಕಲಬುರಗಿ ಜಿಲ್ಲೆಗೆ ತೆರಳಲಿದೆ.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


