ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಬಡವರ ಪಾಲಿನ ಕೊಲ್ಲುವ ಕತ್ತಿಯಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಎಸ್ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಶುಕ್ರವಾರ (ಸೆ.25) ತುಮಕೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಎಸ್ಐಆರ್ ಒಂದೊಂದು ಹಂತಗಳನ್ನು ಒಂದೊಂದು ರೀತಿ ಮಾಡಿದ್ದಾರೆ. ನೋಡುತ್ತಾ ನೋಡುತ್ತಾ 13 ಕೋಟಿ ಮತದಾರರ ಹೆಸರುಗಳನ್ನು ಡಿಲೀಟ್ ಪಟ್ಟಿಗೆ ಹಾಕಿದ್ದಾರೆ.
ಎಸ್ಐಆರ್ ನಡೆಸಿ ನುಸುಳುಕೋರರನ್ನು ಪತ್ತೆ ಹಚ್ಚುತ್ತೇವೆ, ಮತದಾರರ ಪಟ್ಟಿಗಳನ್ನು ಸ್ವಚ್ಚ ಮಾಡುತ್ತೇವೆ ಎಂದು ಚುನಾವಣಾ ಆಯೋಗ ಹೇಳಿಕೊಂಡು ಬಂದಿದೆ. ಹಾಗಾದರೆ, ಈಗ ಡಿಲೀಟ್ ಪಟ್ಟಿಗ ಹಾಕಿರುವ ಈ 13 ಕೋಟಿ ಮತದಾರರು ಬಾಂಗ್ಲಾದೇಶಿಗರ..? ನುಸುಳುಕೋರರ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಈ ಎಸ್ಐಆರ್ ನಿಂದಾಗಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರು ಇಲ್ಲದಂತಾಗಿದೆ. ಇರುವ ಶಿಕ್ಷಕರೆಲ್ಲ ಎಸ್ ಐಆರ್ ಕೆಲಸದಲ್ಲಿದ್ದಾರೆ. ಹೀಗಾದರೆ ಶಿಕ್ಷಣ ಕಥೆಯೇನು? ಮಕ್ಕಳ ಕಥೆಯೇನು? ಎಂದು ಕೇಳಿದರು.
ಎಸ್ಐ ಆರ್ ಮೂಲಕ ಮನೆಯಲ್ಲಿರುವ ಜನರನ್ನು ಸ್ಥಳಾಂತರಗೊಂಡಿದ್ದಾರೆ, ಜೀವಂತ ಇರುವವರನ್ನು ಎನ್ನುತ್ತಿದ್ದಾರೆ. ಸಣ್ಣಪುಟ್ಟ ಸ್ಪೆಲ್ಲಿಂಗ್ ಮಿಸ್ಟೇಕ್ ಗೆ ಜನರು ಮತದಾನದ ಹಕ್ಕು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ ಎಂದು ಪ್ರಶ್ನಿಸಿದರು.

ನಾವು ಇದುವರೆಗೆ ಹೇಳಿಕೊಂಡು ಬಂದಿರುವ ಎಸ್ ಐಆರ್ ಹಗರಣ ಇತ್ತೀಚೆಗೆ ಪ್ರಕಟಗೊಂಡ ಇಂಡಿಯನ್ ಎಕ್ಸ್ ಪ್ರೆಸ್ ತನಿಖಾ ವರದಿಯಿಂದ ನಿಜವಾಗಿದೆ. ಹಾಗಾಗಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ತಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಗ್ಯಾನೇಶ್ ಕುಮಾರ್ ನಿರ್ಧಾರ ತೆಗೆದುಕೊಂಡ ಎಲ್ಲಾ ಖಡತಗಳನ್ನು ಸುಪ್ರೀಂ ಕೋರ್ಟ್ ವಶಕ್ಕೆ ಪಡೆಯಬೇಕು. ಎಸ್ ಐಆರ್ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸಬೇಕು. ಹೊಸ ಕಮಿಟಿ ರಚಿಸಿ ಈಗ ಆಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪ್ರಕಾಶ್ ರಾಜ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್, ಮಹಮ್ಮದ್ ಯುಸುಫ್ ಕನ್ನಿ, ಇಂದಿರಮ್ಮ, ಜೆ.ಎಂ. ವೀರಸಂಗಯ್ಯ, ಸೈಯದ್ ಮಜೀಬ್, ರಾಮಕೃಷ್ಣಪ್ಪ, ಎನ್.ಕೆ. ಸುಬ್ರಮಣ್ಯ, ತಾಜುದ್ದೀನ್ ಷರೀಫ್, ಗೋವಿಂದರಾಜ್, ದೊರೈರಾಜು, ಬಾ.ಹ. ರಮಾಕುಮಾರಿ, ಸಿ, ಯತಿರಾಜು ಅಸರ್ ಅಹಮ್ಮದ್ ಮತ್ತಿತರರು ಹಾಜರಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


