ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರರನ್ನು ಗುರುಗ್ರಾಮ್ನ ಖಾಸಗಿ ಆಸ್ಪತ್ರೆ ಮೆಡಂತಾ ಮೆಡಿಸಿಟಿಗೆ ದಾಖಲಿಸಲಾಗಿದೆ ಎಂದು ಅಮರ್ ಉಜಾಲ ವರದಿ ಮಾಡಿದೆ.
ಸಂಬಿತ್ ಪಾತ್ರ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದು, ಅನೇಕ ಸುದ್ದಿ ಚಾನೆಲ್ಗಳಲ್ಲಿ ಬಿಜೆಪಿ ಪರವಾಗಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ತಮ್ಮ ಪಕ್ಷ ಮತ್ತು ಸರ್ಕಾರವನ್ನು ಗಟ್ಟಿಯಾಗಿ ಸಮರ್ಥಿಸುತ್ತಾರೆ.
ಇಂದು ಕೂಡಾ ಅವರು ಹಲವಾರು ಟ್ವೀಟ್ ಮಾಡಿದ್ದು ಕೊರೊನಾ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗುವ ಎರಡು ಗಂಟೆಗಳ ಮೊದಲು ಬಿಜೆಪಿ ನಾಯಕ ಸುಹೇಲ್ ಸೇಠ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಟ್ವೀಟ್ ಮಾಡಿದ್ದರು.
Happy Birthday to the indomitable elan @Suhelseth ??
— Sambit Patra (@sambitswaraj) May 28, 2020
ಅವರು ಒಡಿಶಾದ ಪುರಿಯಿಂದ 2019ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಆದರೆ ಬಿಜು ಜನತಾದಳದ ಪಿನಾಕಿ ಮಿಶ್ರಾ ವಿರುದ್ಧ ಸೋಲುಂಡಿದ್ದರು.
ಸಂಬಿತ್ ಪಾತ್ರ ಕುರಿತ ಸುದ್ದಿ ಹರಡುತ್ತಿದ್ದಂತೆ ಗುಣಮುಖರಾಗಿ ಬರುವಂತೆ ಹಲವಾರು ಮಂದಿ ಹಾರೈಸಿದ್ದಾರೆ. “ಶೀಘ್ರದಲ್ಲೇ ಗುಣಮುಖರಾಗಿ ಸಾಂಬಿತ್ ಪಾತ್ರ ಭಾಯ್” ಎಂದು ದೆಹಲಿ ಬಿಜೆಪಿ ನಾಯಕ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 4,531 ಕ್ಕೆ ಏರಿದೆ. 1,58,333 ಪ್ರಕರಣಗಳು ಈವರೆಗೂ ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 194 ಸಾವುಗಳು ಮತ್ತು 6,566 ಪ್ರಕರಣಗಳು ಹೆಚ್ಚಾಗಿದೆ. ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 86,110 ಆಗಿದೆ. ಇದುವರೆಗೂ 67,691 ಜನರು ಚೇತರಿಸಿಕೊಂಡಿದ್ದಾರೆ.
ಓದಿ: ಹಣ ಕೊಡದೇ ಬಸ್ ಬಿಡುವುದಿಲ್ಲ ಎಂದು ಮಧ್ಯರಾತ್ರಿಯಲ್ಲಿ ಹಠಹಿಡಿದ ರಾಜಸ್ತಾನ? ಸಂಬಿತ್ ಪಾತ್ರಾ ಹೊಸ ಸುಳ್ಳು