ನಾವು ಸಣ್ಣವರಿರುವಾಗ ಸಿನಿಮಾಗಳಲ್ಲಿ ಒಂದು ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಅದು, ಸಮಾಜದಲ್ಲಿ ಒಳ್ಳೆಯದನ್ನು ಮಾಡುತ್ತಿರುವ ಹೀರೋವನ್ನು ಅಥವಾ ಸಾಮಾಜಿಕ ಕಾರ್ಯಕರ್ತರನ್ನು ಹತ್ತಿಕ್ಕಲು, ಪೊಲೀಸರು ರಾತ್ರೋರಾತ್ರಿ ಬಂದು ಅವನ ಮನೆಗೆ ಬಂದು, ಏನನ್ನೋ ಹುಡುಕುವ ನೆಪದಲ್ಲಿ ಅಥವಾ ವಾಹನ ತಪಾಸಣೆ ಮಾಡುವ ನೆಪದಲ್ಲಿ, ನಿಷೇಧಿತ ಪದಾರ್ಥವಿದೆಯೆಂದೋ, ಸಂಚಿನ ಪತ್ರ ಇದೆಯೆಂದೋ ಅರೆಸ್ಟ್ ಮಾಡುತ್ತಿದ್ದ ದೃಶ್ಯ. ಬಹಿರಂಗವಾಗಿ ಪೊಲೀಸರೇ ಅಲ್ಲಿ ಆ ನಿಷೇಧಿತ ಪದಾರ್ಥ ಇಡುವುದು ಕೂಡ ಸಾಮಾನ್ಯ ದೃಶ್ಯವಾಗಿತ್ತು ಆ ಸಿನಿಮಾಗಳಲ್ಲಿ. ಕೆಲವೊಮ್ಮೆ ಸಿನೆಮ್ಯಾಟಿಕ್ ರೀತಿಯಲ್ಲಿ ಆ ಒಳಸಂಚನ್ನು ಅನಾವರಣಗೊಳಿಸುವ, ಹಿನ್ನೆಲೆ ಸೀನ್ ಒಂದನ್ನು ಸೃಷ್ಟಿಸಿ ಬಂಧನಗೊಳಗಾಗಿದ್ದ ಆ ವ್ಯಕ್ತಿಯನ್ನು ನಿರಪರಾಧಿ ಎಂದು ತೋರಿಸಲಾಗುತ್ತಿತ್ತು.

ಈ ರೀತಿಯ ಸಿನೆಮಾ ಕತೆಗಳ ದೃಶ್ಯಗಳು ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಇವೆ. ಏಕೆಂದರೆ ಜೀವನದಲ್ಲೂ ಅದೇ ರೀತಿಯ ಕಥೆಗಳು ಬಹಳ ಧಾರಾಳಗಾಗಿ ನೆಡೆದಿರುವ ಸಾವಿರಾರು ನಿದರ್ಶನಗಳಿವೆ. ಈಗ ಆಧುನಿಕ ಡಿಜಿಟಲ್ ಯುಗದಲ್ಲೂ ಈ ಚಾಳಿ ಮುಂದುವರೆದಿದೆ. ಭೀಮ ಕೋರೆಗಾಂವ್ ಮತ್ತು ಪ್ರಧಾನಮಂತ್ರಿ ಮೋದಿಯವರ ಕೊಲೆ ಸಂಚಿನ ಪತ್ರದ ಆರೋಪ ಕೂಡ ಇದೇ ರೀತಿಯ ಸಿನಿಮೀಯ ಸಂಚು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಟಾಬಯಲಾಗಿ ಚರ್ಚೆಯಾಗುತ್ತಿದೆ. ವಿಪರ್ಯಾಸವೆಂದರೆ ಪ್ರಭುತ್ವದ ಸಂಚನ್ನು ಎದುರಿಸುತ್ತಿರುವ 20ಕ್ಕೂ ಹೆಚ್ಚು ಮಂದಿ ಈಗಲೂ ಸೆರೆಮನೆಯಲ್ಲಿ ಬಂಧಿಗಳಾಗಿದ್ದಾರೆ.

ಪ್ರಭುತ್ವದ ಸಂಚಿಗೂ ಒಂದು ಕಾರಣವಿದೆ. ಭೀಮ ಕೋರೆಗಾಂವ್ ವಿಜಯ ಭಾರತದ ದಮನಿತರ ಇತಿಹಾಸದಲ್ಲೊಂದು ಮೈಲಿಗಲ್ಲು. 1818ರ ಜನವರಿ 1ರಂದು ಹೆಚ್ಚಾಗಿ ದಲಿತ ಸಮುದಾಯದ ಮಹರ್ ಸೈನಿಕರನ್ನು ಹೊಂದಿದ್ದ 500 ಸಂಖ್ಯೆಯ ಬ್ರಿಟಿಷ್ ಸೇನೆ ಅತ್ಯಂತ ನೀಚ ಜಾತಿವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದ್ದ ಪೇಶ್ವೆಯರನ್ನು ಒಂದೇ ಮಧ್ಯಾಹ್ನದೊಳಗೆ ಹಿಮ್ಮೆಟ್ಟಿಸಿತ್ತು. ಈ ವಿಜಯ ಮತ್ತು ವಿಜಯೋತ್ಸವ ಈಗಲೂ ಮಹಾರಾಷ್ಟ್ರದ ಪೇಶ್ವಾ ಪ್ರತಿಪಾದಕರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಇದರ ಒಳಸಂಚಿನ ಭಾಗವಾಗಿಯೇ ನವ ಪೇಶ್ವೆಯ ಪ್ರತಿಪಾದಕ, ದೇವೇಂದ್ರ ಫಡ್ನವಿಸ್ 2014ರಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗ, ಪ್ರತಿ ವರ್ಷ ಹೆಚ್ಚೆಚ್ಚು ಜನ ಸೇರುತ್ತಿದ್ದ, ದಲಿತರ ಸ್ವಾಭಿಮಾನದ ಪ್ರಜ್ಞೆಯನ್ನು ಎಚ್ಚರಿಸುವ ಈ ವಿಜಯೋತ್ಸವವನ್ನು ಹತ್ತಿಕ್ಕಲು ಕೋರೆಗಾಂವ್ ವಿಜಯೋತ್ಸವದ 200ನೆ ವಾರ್ಷಿಕೋತ್ಸವವನ್ನು ಗುರಿ ಮಾಡುತ್ತಾರೆ.

ಡಿಸೆಂಬರ್ 31 2017ರಂದು ವಿಜಯೋತ್ಸವಕ್ಕೆಂದು ತೆರಳುತ್ತಿದ್ದ ದಲಿತರ ಮೇಲೆ ಆಡಳಿತ ಬೆಂಬಲಿತ ಸ್ಥಳೀಯ ಹಿಂದುತ್ವ ಮುಖಂಡರಾದ ಮಿಲಿಂದ್ ಎಕ್ಬೋಟೆ ಮತ್ತು ಸಂಭಾಜಿ ಭಿಡೆ ನೇತೃತ್ವದಲ್ಲಿ ದಾಳಿ ನಡೆಯುತ್ತದೆ. ಪುಣೆಯಲ್ಲಿ ಜರುಗಿದ ಎಲ್ಗಾರ್ ಪರಿಷದ್ ಕಾರ್ಯಕ್ರಮದ ವಿರುದ್ಧ ಪಿತೂರಿ ನಡೆದು, ಅರ್ಬನ್ ನಕ್ಸಲರು ಎಂಬ ಆಡಳಿತ ವ್ಯವಸ್ಥೆಯ ಸಂಚು ಅನಾವರಣಗೊಳ್ಳುತ್ತದೆ. ಅದೇ ವರ್ಷದಲ್ಲಿ, ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹಲವಾರು ಕಾರ್ಯಕರ್ತರ ಕಂಪ್ಯೂಟರ್ ಲ್ಯಾಪ್‌ಟಾಪ್‌ಗಳನ್ನು ಪೊಲೀಸರು ಜಪ್ತಿ ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ರೋಣ ವಿಲ್ಸನ್ ಎಂಬ ಮಾನವ ಹಕ್ಕುಗಳ ಹೋರಾಟಗಾರನ ಲ್ಯಾಪ್‌ಟಾಪ್ ಕೂಡ ದೆಹಲಿಯ ಮುನಿರ್ಕಾ ಜಾಗದಲ್ಲಿ ಜಪ್ತಿಯಾಗುತ್ತದೆ. ಅದರಲ್ಲಿ ಪ್ರಧಾನಿ ಮೋದಿಯವರನ್ನು ರಾಜೀವ್ ಗಾಂಧಿಯ ಹಾಗೆ ಕೊಲ್ಲುವ ಸಂಚಿನ ಪತ್ರಗಳು ದೊರೆಯುತ್ತವೆ. ಈ ಸಾಕ್ಷಿಯಿಂದಲೇ, ಶೋಮಾ ಸೆನ್, ಸುಧೀಂದ್ರ ಗಾಡ್ಲಿಂಗ್, ಸುಧಾ ಭಾರದ್ವಾಜ್, ಸುಧೀರ್ ಧವಳೆ, ಮಹೇಶ್ ರಾವುತ್, ಆನಂದ್ ತೇಲ್ತುಂಬ್ಡೆ, ಸ್ಟಾನ್ ಸ್ವಾಮಿ ಸೇರಿದಂತೆ ಒಬ್ಬೊಬ್ಬರನ್ನೇ 15 ಮಂದಿಯನ್ನು ಬಂಧಿಸಲಾಗುತ್ತದೆ.

ಆದರೆ ಈ ಲ್ಯಾಪ್‌ಟಾಪ್‌ನೊಳಗಿನ ಮಾಹಿತಿಯ ಡಿಜಿಟಲ್ ಪ್ರತಿಯನ್ನು ರೋನ ವಿಲ್ಸನ್‌ರನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಮಿಹಿರ್ ದೇಸಾಯಿ ಕೇಳಿ ಪಡೆಯುತ್ತಾರೆ ಮತ್ತು ಅದನ್ನು ಅಮೆರಿಕಾದ ಮ್ಯಾಸಚೂಸೆಟ್ಸ್‌ನಲ್ಲಿರುವ ಪ್ರತಿಷ್ಠಿತ ಆರ್ಸೆನಲ್ ಕನ್ಸಲ್ಟಿಂಗ್ ಎಂಬ ಡಿಜಿಟಲ್ ಫೋರೆನ್ಸಿಕ್ ಸಂಸ್ಥೆಗೆ ಕಳುಹಿಸುತ್ತಾರೆ. ಇದೆ ಆರ್ಸೆನಲ್ ಕನ್ಸಲ್ಟಿಂಗ್ ಹಿಂದೆ ಹಲವಾರು ಪ್ರಕರಣಗಳಲ್ಲಿ ಕರಾರುವಾಕ್ಕಾಗಿ ಫಲಿತಾಂಶವನ್ನು ನೀಡಿರುವ ಸಂಸ್ಥೆಯಾಗಿದೆ. ಈ ಪ್ರತಿಯನ್ನು ಕೂಲಂಕಷವಾಗಿ ಭೇದಿಸಿರುವ ಈ ಸಂಸ್ಥೆ ಫೆಬ್ರವರಿ 2021ರಂದು ತನ್ನ ವರದಿಯನ್ನು ನೀಡುತ್ತದೆ. ಅದರ ಪ್ರಕಾರ, ರೋನ ವಿಲ್ಸನ್ ಲ್ಯಾಪ್‌ಟಾಪ್‌ಅನ್ನು ಹ್ಯಾಕರ್ ಮೂಲಕ ದಾಳಿಗೆ ಈಡುಮಾಡಲಾಗಿದೆ. ಈ ಹ್ಯಾಕರ್ ವರವರ ರಾವ್ ಅವರ ಈಮೇಲ್ ಹ್ಯಾಕ್ ಮಾಡಿ, ಅದನ್ನು ಉಪಯೋಗಿಸಿಕೊಂಡು ವಿಲ್ಸನ್ ಅವರರಿಗೆ ಒಂದರ ಮೇಲೊಂದರಂತೆ ಈಮೇಲ್ ಕಳುಹಿಸಿರುತ್ತಾರೆ ಮತ್ತು ಅದರಲ್ಲಿರುವ ಒಂದು ಅಟ್ಯಾಚ್ಮೆಂಟ್‌ಅನ್ನು ತೆರೆಯಿರಿ ಎಂದು ಪದೇಪದೆ ಸೂಚಿಸಿರುತ್ತಾರೆ. ಆಗ ವಿಲ್ಸನ್ ಅಟ್ಯಾಚ್ಮೆಂಟ್ ತೆರೆದು ಅದರಲ್ಲಿ ಏನು ಇಲ್ಲ ಎಂದು ಮೇಲ್ ಕಳುಹಿಸಿರುತ್ತಾರೆ. ಅವರು ಅಟ್ಯಾಚ್ಮೆಂಟ್ ತೆರೆದಾಗ ಹ್ಯಾಕರ್ ಒಂದು ಕೊಳಕು ಸಾಫ್ಟ್ವೇರ್ (ಮಾಲ್ವೇರ್) ಮೂಲಕ ಅವರ ಲ್ಯಾಪ್‌ಟಾಪ್‌ಅನ್ನು ಅವರ ಅರಿವಿಗೆ ಬಾರದಂತೆ ನಿಯಂತ್ರಿಸತೊಡಗುತ್ತಾರೆ.

ವಿಲ್ಸನ್ ಅವರನ್ನು ಬಂಧನ ಮಾಡುವ ಎರಡು ವರ್ಷಗಳ ಹಿಂದೆಯೇ, ಅವರಿಗೆ ಗೊತ್ತಿಲ್ಲದಂತೆಯೇ ಅವರ ಲ್ಯಾಪ್‌ಟಾಪ್‌ನಲ್ಲಿ ಹಿಡನ್ ಫೋಲ್ಡರ್ ಒಂದನ್ನು ಸೃಷ್ಟಿಸಿ ಅದರಲ್ಲಿ ’ಸಂಚಿನ ಪತ್ರಗಳನ್ನು ಅಡಗಿಸಲಾಗಿದೆ. ಈ ಸಂಚು ಎಷ್ಟು ಪೊಳ್ಳು ಎಂದರೆ ಅವರ ಲ್ಯಾಪ್‌ಟಾಪ್ ಜಪ್ತಿ ಮಾಡಿದ ದಿನ ಬೆಳಿಗ್ಗೆ 6 ಗಂಟೆಯಾದರೆ, ಸಂಚಿನ ಕೊನೆಯ ಪತ್ರವನ್ನು ಹಿಂದಿನ ದಿನ ಸಂಜೆ 4:30ಕ್ಕೆ ಅಲ್ಲಿ ಸೇರಿಸಿರುತ್ತಾರೆ. ಇದನ್ನು ತನಿಖೆ ಮಾಡಿರುವ ಸಂಸ್ಥೆಯ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ “ಈವರೆಗೂ ಎಷ್ಟೋ ಹ್ಯಾಕಿಂಗ್ ಪ್ರಕರಣಗಳನ್ನು ನಾವು ನೋಡಿದ್ದೇವೆ, ಆದರೆ ಇದರಲ್ಲಿನ ನೈಪುಣ್ಯತೆ ಮತ್ತು ಆತಂಕಕಾರಿ ಚಾಣಾಕ್ಷತೆ ನಾವು ಈವರೆಗೂ ಕಂಡಿಲ್ಲ ಎಂದು ವರದಿ ನೀಡಿದ್ದಾರೆ. ಈ ವರದಿಯಲ್ಲಿ ಇನ್ನೊಂದು ಮುಖ್ಯ ಸಾಕ್ಷಿಯೆಂದರೆ ಆ ಲ್ಯಾಪ್‌ಟಾಪ್‌ನಲ್ಲಿದ್ದ ಆ ಪತ್ರಗಳನ್ನು ವಿಲ್ಸನ್ ಎಂದೂ ತೆರೆದಿಲ್ಲ ಎಂಬುದು ಮತ್ತು ಆ ಪತ್ರಗಳು ಸೃಷ್ಟಿಯಾಗಿರುವುದೇ ವಿಂಡೋಸ್‌ನ ವರ್ಡ್ 2013 ಆವೃತ್ತಿಯಲ್ಲಿ, ಆದರೆ ವಿಲ್ಸನ್ ಉಪಯೋಗಿಸುತ್ತಿದ್ದು ವಿಂಡೋಸ್ 7 ಎಂದು ತಿಳಿದಿದೆ. ಆದ್ದರಿಂದ ವಿಲ್ಸನ್ ಉಪಯೋಗಿಸುತ್ತಿದ್ದ ಕಂಪ್ಯೂಟರ್‌ನಲ್ಲಿ ಆ ಪತ್ರಗಳು ಸೃಷ್ಟಿಯಾಗಿರುವುದಕ್ಕೆ ಸಾಧ್ಯವೇ ಇಲ್ಲ ಎಂಬುದು.

ಆಂಧ್ರ ಪ್ರದೇಶ, ಪಂಜಾಬ್ ಮತ್ತು ಕಾಶ್ಮೀರದಲ್ಲಿ ಡಿಜಿಟಲ್ ಯುಗದ ಮುಂಚೆಯ ಈ ರೀತಿಯ ಸಂಚುಗಳನ್ನು ನಮ್ಮ ಪ್ರಭುತ್ವ ಹೆಣೆದಿದೆ. ಹಾಗೆ ಹುಡುಕುತ್ತಾ ಹೋದರೆ ಪ್ರತಿ ರಾಜ್ಯದಲ್ಲೂ ಆದಿವಾಸಿ, ದಮನಿತ, ಮುಸಲ್ಮಾನ ಅಸ್ಮಿತೆಗಳಿಗೆ ಹೋರಾಡುತ್ತಿರುವ ಸಾವಿರಾರು ಮಂದಿಯನ್ನು ಪ್ರಭುತ್ವದ ವಿರೋಧಿಗಳೆಂದು ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಬಂಧಿಸಲಾಗಿದೆ. ಹಿಂದಿನ ರಾಜಪ್ರಭುತ್ವದ ಕಾಲದಿಂದಲೂ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದೆ ಈ ರೀತಿಯ ಸಂಚುಗಳನ್ನು ಸೃಷ್ಟಿಸುವುದರ ಮೂಲಕ ಎಂಬುದೇ ವಾಸ್ತವ.

ಈ ರೀತಿಯ ಸಂಚಿನ ಕಥಾನಕವನ್ನು ಸಮಾಜದಲ್ಲಿ ಸೃಷ್ಟಿಸುವುದೇ ದಮನಿತ ಸಮುದಾಯಗಳನ್ನು ಹತ್ತಿಕ್ಕುವುದಕ್ಕೆ ಅಥವಾ ಪ್ರಜಾಪ್ರಭುತ್ವದ ಸಮ ಸಮಾಜದ ಕನಸು ಕಾಣುತ್ತಿರುವ ಜನರನ್ನು ಹತೋಟಿಯಲ್ಲಿಡುವುದಕ್ಕೆ. ಅದು ಈಗ ಡಿಜಿಟಲ್ ಯುಗದಲ್ಲೂ ಸಾಗಿದೆ ಎಂದು ಈ ವರದಿ ನಿರೂಪಿಸಿದೆ.

ಭಾರತದಲ್ಲೇ ಅಲ್ಲ ವಿಶ್ವಾದ್ಯಂತ ಇದೇ ರೀತಿಯ ಪ್ರಕರಣಗಳು ಕಾಣಸಿಗುತ್ತವೆ. ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಆಕ್ಟಿವಿಸ್ಟ್‌ಗಳ ಮೇಲೆ ನಿಗಾ ಇಡಲು ಪ್ರತಿ ಸರಕಾರ ಯುದ್ಧಕ್ಕೆ ಬಳಸುವ ಬೇಹುಗಾರಿಕೆ ಸಾಫ್ಟ್ವೇರ್‌ಗಳನ್ನೂ ಬಳಸುತ್ತಿದೆ. ಹಾಗೆಯೇ ಟರ್ಕಿಯ ಸೌದಿ ರಾಯಭಾರ ಕಚೇರಿಯಲ್ಲಿಯೇ ಹತ್ಯೆಯಾದ ಜಮಾಲ್ ಖಶೋಗ್ಗಿ ಪ್ರಕರಣ ಕೂಡ ಇದೆ.

ಇಸ್ರೇಲಿನ ಬೇಹುಗಾರಿಕೆ ಸಾಫ್ಟ್ವೇರ್ ’ಪೆಗಾಸಸ್ ಈ ಕಾರಣಕ್ಕಾಗಿಯೇ ಕುಖ್ಯಾತವಾಗಿದೆ. ಇಸ್ರೇಲ್ ಇದನ್ನು ಭಯೋತ್ಪಾದನೆ ವಿರುದ್ಧವಷ್ಟೇ ಉಪಯೋಗಿಸುತ್ತೇವೆ ಎಂದರೂ ಈ ಬೇಹುಗಾರಿಕೆ ಸಾಫ್ಟ್‌ವೇರ್‌ಅನ್ನು ಭಾರತವು ಸೇರಿದಂತೆ ಅನೇಕ ದೇಶಗಳು ಪ್ರಜಾಸತ್ತಾತ್ಮಕ ಹೋರಾಟಗಾರರನ್ನು ಹತ್ತಿಕ್ಕಲು ಬಳಸಲಾಗುತ್ತಿದೆ. ವಾಟ್ಸಾಪ್‌ಅನ್ನು ಈಗ ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಶಸ್ತ್ರದ ರೀತಿಯಲ್ಲಿ ಬಳಸುತ್ತಿವೆ.

ಸದ್ಯಕ್ಕೆ ಈಗ ಸಿಕ್ಕಿರುವ ವರದಿಯನ್ನು ಬಳಸಿಕೊಂಡು ಈವರೆಗೂ ಬಂಧನವಾಗಿರುವವರ ಪರ ವಾದಿಸುತ್ತಿರುವ ನ್ಯಾಯವಾದಿಗಳು ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಕೋರಿಕೆ ಇಟ್ಟಿದ್ದಾರೆ. ಆದರೆ ಸಾಕ್ಷಿಯೇ ಇಲ್ಲದೆ, ಕ್ಷುಲ್ಲಕ ಕಾರಣಗಳಿಗೆ 21 ವರ್ಷದ ಹುಡುಗಿಯನ್ನು ಯಾವುದೇ ಶಿಷ್ಟಾಚಾರವಿಲ್ಲದೆ, ಸಂವಿಧಾನವನ್ನೂ, ಕಾನೂನನ್ನು ಗಾಳಿಗೆ ತೂರಿ ಬಂಧಿಸುತ್ತಿರುವ ಈ ನಿರಂಕುಶ ಆಡಳಿತ ವ್ಯವಸ್ಥೆಯ ಕಾಲಘಟ್ಟದಲ್ಲಿ ನ್ಯಾಯ ಕೇಳುವುದೇ ಅಪರಾಧವಾಗಿದೆ!

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಭರತ್ ಹೆಬ್ಬಾಳ್
+ posts

LEAVE A REPLY

Please enter your comment!
Please enter your name here