Homeಮುಖಪುಟವಾಲ್ಮೀಕಿ ರಾಮಾಯಣ ಕಾವ್ಯ ರಚನೆಯ ಕಾಲ; ಒಂದು ವಿಶ್ಲೇಷಣೆ

ವಾಲ್ಮೀಕಿ ರಾಮಾಯಣ ಕಾವ್ಯ ರಚನೆಯ ಕಾಲ; ಒಂದು ವಿಶ್ಲೇಷಣೆ

- Advertisement -
- Advertisement -

ನಮ್ಮ ದೇಶದಲ್ಲಿ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳು ಪವಿತ್ರ ಗ್ರಂಥಗಳೆಂದು ಪರಿಗಣಿತವಾಗಿವೆ. ಅದರಲ್ಲೂ ರಾಮಾಯಣದ ಕರ್ತೃವಾದ ವಾಲ್ಮೀಕಿ ಮಹರ್ಷಿಗಳೇ ಕಾವ್ಯದ ಒಂದು ಪಾತ್ರವಾದ್ದರಿಂದ ಅದು ತ್ರೇತಾಯುಗದಲ್ಲಿಯೇ ರಚನೆಯಾಗಿರಬೇಕೆಂದು ನಂಬುವ ಶ್ರದ್ಧಾವಂತರಿದ್ದಾರೆ. ಆದರೆ ವಾಲ್ಮೀಕಿ ರಚಿತವೆಂದು ಹೇಳಲಾಗುವ ಕಾವ್ಯದಲ್ಲಿಯೇ ಸೂಚಿತವಾದ ಕೆಲ ಆಧಾರಗಳನ್ನು ನೋಡುವದರ ಮೂಲಕ ಅದರ ಕಾಲದ ಬಗ್ಗೆ ಒಂದಿಷ್ಟು ಚರ್ಚಿಸಬಹುದು. ನಾನು ಇದಕ್ಕೆ ಭಾರತ ದರ್ಶನ ಪ್ರಕಾಶನದ ಕನ್ನಡದ ವಾಲ್ಮೀಕಿ ರಾಮಾಯಣವನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ.

1) ಅಯೋಧ್ಯಾ ಕಾಂಡದಲ್ಲಿ ಭರತನು ರಾಮನನ್ನು ಭೇಟಿಯಾದ ಸಂದರ್ಭದಲ್ಲಿ ಜಾಬಾಲಿಯೆಂಬ ನಾಸ್ತಿಕ ಬ್ರಾಹ್ಮಣರೊಬ್ಬರು ರಾಮನಿಗೆ ಶ್ರಾದ್ಧ, ಯಜ್ಞಗಳ ನಿಷ್ಫಲತೆಯನ್ನು ಹೇಳಿ ಅವೆಲ್ಲವೂ ಬ್ರಾಹ್ಮಣರ ದಾನಸ್ವೀಕಾರದ ವಶೀಕರಣ ವಿಧಾನಗಳು ಎಂದು ಹೇಳುತ್ತಾರೆ. ಇದನ್ನೊಪ್ಪದ ರಾಮನು ಅವರೆದುರಿಗೆ ಬುದ್ಧರನ್ನು-ನಾಸ್ತಿಕರನ್ನು ಹಳಿಯುತ್ತಾನೆ.

“ಯಥಾ ಹಿ ಚೋರಃ ಸ ತಥಾಹಿ ಬುದ್ಧಃ ತಥಾಗತಂ ನಾಸ್ತಿಕಮತ್ರ ವಿದ್ಧಿ|
ತಸ್ಮಾದ್ ಹಿ ಸಃ ಶಕ್ಯತಮಃ ಪ್ರಜಾನಾಂಸ ನಾಸ್ತಿಕೆ ನಾಭಿಮುಖೋಬುಧಃ||” (ಅಯೋಧ್ಯ ಕಾಂಡ 109/34)

“ಚೋರನು ಹೇಗೋ ಬುದ್ಧನು ಹಾಗೇ ಎಂದು ತಿಳಿ. ತಥಾಗತನು ನಾಸ್ತಿಕನೇ ಆಗಿದ್ದಾನೆ. ಪ್ರಜೆಗಳ ಮಧ್ಯದಲ್ಲಿ ನಾಸ್ತಿಕನೆಂಬ ಸಂದೇಹಕ್ಕೆ ಕಾರಣನಾಗುವವನನ್ನು ವಿದ್ವಾಂಸನಾದವನು ನೋಡಲೂಬಾರದು.”

ಇಲ್ಲಿ ಬುದ್ಧರನ್ನು ತಥಾಗತ ಎಂತಲೂ ಕರೆದಿರುವದರಿಂದ ಅವರು ಗೌತಮ ಬುದ್ಧರೇ ಆಗಿದ್ದಾರೆ. ಅಂದಮೇಲೆ ಈ ರಾಮಾಯಣವು ಬುದ್ಧರ ನಂತರದಲ್ಲಿ ಬರೆದದ್ದು ಎನ್ನುವದು ಸ್ಪಷ್ಟವಾಗಿದೆ.

2) ಇದು ಕಿಷ್ಕಿಂಧ ಕಾಂಡದಲ್ಲಿ ಬರುವ ಪ್ರಸಂಗ. ರಾಮನು ಸೀತೆಯನ್ನು ಹುಡುಕಿಕೊಂಡು ಕಿಷ್ಕಿಂಧೆಗೆ ಬರುತ್ತಾನೆ. ಅಲ್ಲಿ ಸುಗ್ರೀವ ಮತ್ತು ಹನುಮಂತರ ಸ್ನೇಹವಾಗುತ್ತದೆ. ಸುಗ್ರೀವನಿಗೆ ಸಹಾಯ ಮಾಡಲು ಆತನೊಡನೆ ರಾಮ ಸೇರಿಕೊಂಡು, ಸುಗ್ರೀವನ ಅಣ್ಣನೊಡನೆ ಕಾದಾಡುತ್ತಿದ್ದಾಗ ರಾಮ ಮರೆಯಲ್ಲಿ ನಿಂತು ವಾಲಿಗೆ ಬಾಣದಿಂದ ಹೊಡೆಯುತ್ತಾನೆ. ಸಾಯುವ ಸ್ಥಿತಿಯಲ್ಲಿ ವಾಲಿ ನೆಲಕ್ಕುರುಳುತ್ತಾನೆ. ಆ ಸ್ಥಿತಿಯಲ್ಲಿ ವಾಲಿಯು “ತಾನು ಯಾವ ಅಪಕಾರ ಮಾಡದಿದ್ದರೂ ತನ್ನನ್ನು ಹೀಗೆ ಕೊಲೆ ಮಾಡಲು ಕಾರಣವೇನು” ಎಂದು ರಾಮನಿಗೆ ಕೇಳುತ್ತಾನೆ. ಆಗ ರಾಮನು “ನೀನು ನಿನ್ನ ತಮ್ಮ ಬದುಕಿದ್ದಾಗಲೇ ಅವನ ಹೆಂಡತಿಯ ಜೊತೆ ಸಂಬಂಧ ಹೊಂದಿದ್ದಿಯಾ. ಇದು ಮನುಸ್ಮೃತಿಯ ಪ್ರಕಾರ ಅಫರಾದವಾಗಿದ್ದು. ನೀನು ವಧೆಗೆ ಅರ್ಹನಾಗಿದ್ದೀಯಾ” ಎಂದು ಹೇಳಿ ಮನುಸ್ಮೃತಿಯ ಎರಡು ಶ್ಲೋಕಗಳನ್ನು ಉಚ್ಚರಿಸುತ್ತಾನೆ.

“ರಾಜಭಿಧೃತ ದಂಡಾಸ್ತು ಕೃತ್ವಾ ಪಾಪಾನಿ ಮಾನವಾಃ|
ನಿರ್ಮಲಾಃ ಸ್ವರ್ಗಮಾಯಾಂತಿ ಸಂತಃ ಸುಕೃತಿನೋ ಯಥಾ||”
“ಶಾಸನಾದ್ವಾ ವಿಮೋಕ್ಷಾದ್ವಾ ಸ್ತೇನಃ ಸ್ತ್ರೇಯಾ ಪ್ರಮಚ್ಯತೆ|
ರಾಜಾ ತ್ವಶಾಸತ್ಪಾಪಸ್ಯ ತದವಾಪ್ನೋತಿ ಕಿಲ್ಬಿಷಮ್||” (ಕಿಷ್ಕಿಂದ ಕಾಂಡ 18-31/32)

“ಮನುಷ್ಯನು ಪಾಪಗಳನ್ನು ಮಾಡಿ ರಾಜನಿಂದ ಯಥೋಚಿತವಾದ ಶಿಕ್ಷೆಯನ್ನು ಪಡೆದು ಅನುಭವಿಸಿ ನಿರ್ಮಲರಾಗಿ (ಪಾಪದಿಂದ ಮುಕ್ತರಾಗಿ) ಸುಕೃತಿಗಳಾದ ಸಾದುಪುರುಷರಂತೆಯೇ ಸ್ವರ್ಗಕ್ಕೆ ಹೋಗುತ್ತಾರೆ.”

“ಕಳ್ಳತನವನ್ನು ಅಥವಾ ಯಾವುದೇ ಪಾಪಕರ್ಮಗಳನ್ನು ಮಾಡಿದವನು ರಾಜನು ಕೊಡುವ ಶಿಕ್ಷೆಯಿಂದಾಗಲಿ, ದೇಶಭ್ರಷ್ಟನನ್ನಾಗಿ ಮಾಡುವದರಿಂದಾಗಲಿ ಪಾಪದಿಂದ ಬಿಡುಗಡೆ ಹೊಂದುತ್ತಾನೆ. ಒಂದು ವೇಳೆ ರಾಜನು ಪಾಪಿಷ್ಟನನ್ನು ಶಿಕ್ಷಿಸದೇ ಹೋದರೆ ಪಾಪಿಷ್ಟನ ಪಾಪವನ್ನು ರಾಜನೇ ಪಡೆದುಕೊಳ್ಳುತ್ತಾನೆ.”

ಇವು ಮನುಸ್ಮೃತಿಯಿಂದ ನೇರವಾಗಿ ತೆಗೆದುಕೊಂಡ ಶ್ಲೋಕಗಳಾಗಿದ್ದು ಅನುಕ್ರಮವಾಗಿ ಮನುಸ್ಮೃತಿ ಅಧ್ಯಾಯ 8ರ 318 ಮತ್ತು 316ನೇ ಶ್ಲೋಕಗಳಾಗಿವೆ. ಇದರರ್ಥ ಸ್ಪಷ್ಟವಾಗಿದೆ. ಈ ರಾಮಾಯಣ ಮನುಸ್ಮೃತಿಯ ನಂತರ ಬರೆದದ್ದು ಎಂದು. ಎಲ್ಲ ಸ್ಮೃತಿ ಪುರಾಣಗಳನ್ನು ಬರೆದದ್ದೇ 8-9ನೇ ಶತಮಾನದ ನಂತರ.

3) ಕಿಷ್ಕಿಂಧ ಕಾಂಡದಲ್ಲಿ ಸುಗ್ರೀವನು ಸೀತೆಯನ್ನು ಹುಡುಕಲು ನಾಲ್ಕು ದಿಕ್ಕಿಗೆ ಒಬ್ಬೊಬ್ಬರ ಸಮರ್ಥ ನಾಯಕತ್ವದಲ್ಲಿ ನಾಲ್ಕು ತಂಡಗಳನ್ನು ಮಾಡಿ ಕಳಿಸುತ್ತಾನೆ. ಇದು ನಿಜಕ್ಕೂ ಆಸಕ್ತಿಕರ ಭಾಗವಾಗಿದೆ. ಇಡಿಯ ಜಂಬುದ್ವೀಪದ ವರ್ಣನೆಯನ್ನು ಆಶ್ಚರ್ಯವೆನ್ನಿಸುವಂತೆ ಮಾಡುತ್ತಾನೆ. ಅಲ್ಲಿನ ಕಾಡಿನ, ಮರಗಿಡಗಳ, ಪ್ರಾಣಿಗಳ ವಿವರವಾದ ವರ್ಣನೆ ಮಾಡುತ್ತಾನೆ. ಆದರೆ ಅದರಲ್ಲಿ ಜನಸಮುದಾಯಗಳ ವರ್ಣನೆಯಿಲ್ಲ. ಭೌಗೋಳಿಕ ವರ್ಣನೆಯಿದೆ. ಉತ್ತರಕ್ಕೆ ಶತಬಲನೆಂಬ ವೀರನನ್ನು ಕಳಿಸುತ್ತ ಅವನಿಗೆ ಅಲ್ಲಿನ ವಿವರಗಳನ್ನು ಕೊಡುತ್ತಾನೆ.

“ತತ್ರ ಮ್ಲೇಚ್ಛಾನ್ ಪುಲಿಂದಾಶ್ಚ ಶೂರಸೇನಾಂಸ್ತತೈವಚ|
ಪ್ರಸ್ಥಲಾನ್ ಭರತಾಂಶ್ಚೈವ ಕುರೂಂಶ್ಛ ಸಹ ಮದ್ರಕೈಃ||
ಕಾಂಬೋಜಾನ್ಯವನಾಂಶ್ಚೈವ ಶಕಾನಾ ರಟ್ಟಕಾನಪಿ|
ಬಾಹ್ಲಿಕಾ ನೃಷಿಕಾಂಶ್ಚೈ ವ ಪೌರವಾನಥ ಟಂಕಣಾನ್||
ಚೀನಾನ್ ಪರಮ ಚೀನಾಂಶ್ಚ ನಿಹಾರಾಂಶ್ಚ ಪುನಃ ಪುನಃ|
ಅನ್ವಿಷ್ಯ ದರದಾಂಶ್ಚೈವ ಹಿಮವಂತಂ ತಥೈವಚ|| (ಕಿಷ್ಕಿಂದ ಕಾಂಡ 43-11/12/13)

“ಮ್ಲೇಚ್ಛ, ಪುಲಿಂದ, ಶೂರಸೇನ ದೇಶಗಳನ್ನು, ಪ್ರಸ್ಥಲ ದೇಶಗಳನ್ನು, ಭರತ ದೇಶಗಳನ್ನು, ಕುರು, ಬಾಹ್ಲಿಕ, ಕಾಂಬೋಜ ದೇಶಗಳನ್ನು, ಯವನ-ಶಕ-ಬಾಹ್ಲಿಕ ದೇಶಗಳನ್ನು, ಋಷಿಕ-ಪೌರವ-ಟಂಕಣ ದೇಶಗಳನ್ನು, ಚೀನ-ಪರಮಚೀನ-ನಿಹಾರ ದೇಶಗಳನ್ನು, ದರದ ದೇಶಗಳನ್ನು ಹೊಕ್ಕು ಸೀತಾದೇವಿಯನ್ನು ಹುಡುಕುತ್ತಾ ಹಿಮವತ್ಪರ್ವತಕ್ಕೆ ಹೋಗಿ ಅಲ್ಲಿಯೂ ಹುಡುಕಿರಿ.”

ಇಲ್ಲಿ ಹೇಳಿದ ಶಕರು ಮಧ್ಯ ಏಷ್ಯಾ ಕಡೆಯಿಂದ ಬಂದು ಸುಮಾರು ಕ್ರಿಸ್ತಶಕದ ಪ್ರಾರಂಭದ ಸ್ವಲ್ಪ ಮುಂಚೆ ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಮಥುರೆಯವರೆಗೂ ಸುಮಾರು ಇನ್ನೂರು ವರ್ಷಗಳ ಕಾಲ ರಾಜ್ಯವಾಳಿದರು. ಅಲ್ಲಿಯವರೆಗೂ ಶಕರು ನಮಗೆ ಗೊತ್ತಿರಲಿಲ್ಲ.

ಇನ್ನು ಮ್ಲೇಚ್ಛರು ಎಂದರೆ ಮುಸ್ಲಿಮರು ಎಂದೇ ಅರ್ಥ. ಇಸ್ಲಾಂ ಧರ್ಮ ಪ್ರಾರಂಭವಾದದ್ದೇ ಕ್ರಿಸ್ತಶಕ 610ರ ಸಮಯದಲ್ಲಿ ಎನ್ನಲಾಗುತ್ತದೆ. ಅದಕ್ಕಿಂತ ಮುಂಚೆ ಅಲ್ಲಿನ ಎಲ್ಲಾ ಬೇರೆಬೇರೆ ಜನಾಂಗಗಳನ್ನು ಅರಬ್ಬರು ಎಂದೇ ಕರೆಯಲಾಗಿತ್ತಿತ್ತು. ಭಾರತದ ಮೇಲೆ ಮೊದಲ ಮುಸ್ಲಿಂ ದಾಳಿಯಾದದ್ದು ಕ್ರಿಸ್ತಶಕ 711ರಲ್ಲಿ, ಮಹಮ್ಮದ್ ಬಿನ್ ಕಾಸಿಂನಿಂದ. ಮುಸ್ಲಿಮರು ಇಲ್ಲಿ ರಾಜ್ಯ ಸ್ಥಾಪನೆ ಮಾಡಿದ್ದು ಕ್ರಿಸ್ತಶಕ 1206ರಲ್ಲಿ. ಹಾಗಾದರೆ ರಾಮಾಯಣದ ರಚನೆಯಾದದ್ದು 8ನೇ ಶತಮಾನದ ನಂತರವಷ್ಟೇ ಎಂದು ಹೇಳಬಹುದು.

4) ಯುದ್ಧಕಾಂಡದ ಕೊನೆಯಲ್ಲಿ ಕವಿಯು ಕಾವ್ಯದ ಪಾರಾಯಣದ ಫಲವನ್ನು ಹೇಳುತ್ತಾನೆ.

“ಧನ್ಯಂ ಯಶಸ್ಯ ಮಾಯುಷ್ಯಂ ರಾಜ್ಞಾಂಚ ವಿಜಯಾವಹಂ|
ಆದಿಕಾವ್ಯಮಿದಂ ತ್ವಾಷಂ ಪುರಾ ವಾಲ್ಮೀಕಿನಾ ಕೃತಾ||” (ಯುದ್ಧ ಕಾಂಡ 128-107)

“ಋಷಿಪ್ರೋಕ್ತವಾದ ಆದಿಕಾವ್ಯವಾದ ಈ ರಾಮಾಯಣವನ್ನು ಹಿಂದೆ ವಾಲ್ಮೀಕಿಗಳು ರಚಿಸಿದರು. ಇದರ ಪಾರಾಯಣವು ಧನ್ಯತೆ, ಯಶಸ್ಸು ಮತ್ತು ಆಯಸ್ಸುಗಳನ್ನು ವೃದ್ಧಿಗೊಳಿಸುತ್ತದೆ. ರಾಜರಿಗೆ ಇದು ವಿಜಯಪ್ರದಾಯಕ.”

“ಶೃಣೋತಿ ಯ ಇದಂ ಕಾವ್ಯಂ ಪುರಾ ವಾಲ್ಮೀಕಿನಾ ಕೃತಂ|
ಶ್ರದ್ಧದಾನೋ ಜಿತಕ್ರೋಧೋ ದುರ್ಗಾಣ್ಯತಿತ ರತ್ಯಸೌ||” (ಯುದ್ಧ ಕಾಂಡ 128-112)

ಇದನ್ನೂ ಓದಿ: ’ಬೌದ್ಧ ಧರ್ಮ- ಸಂಕ್ಷಿಪ್ತ ಇತಿಹಾಸ ಮತ್ತು ಧಮ್ಮಪದ’ ಪುಸ್ತಕದ ತಿರುಚಿದ ಇತಿಹಾಸ; ಬೌದ್ಧ ಧರ್ಮ ವೈದಿಕದ ಕವಲೇ? ವೈದಿಕ…

“ಹಿಂದೆ ವಾಲ್ಮೀಕಿ ಮಹರ್ಷಿಗಳು ರಚಿಸಿದ ಈ ಕಾವ್ಯವನ್ನು ಯಾವನು ಕ್ರೋಧವನ್ನು ಜಯಿಸಿ ಶ್ರದ್ಧಾಪೂರ್ವಕವಾಗಿ ಶ್ರವಣ ಮಾಡುವನೋ ಅವನು ದೊಡ್ಡದೊಡ್ಡ ಸಂಕಟಗಳಿಂದ ಪಾರಾಗುತ್ತಾನೆ.”

“ಸಮಾಗಮಂ ಪ್ರವಾಸಾಂತ್ಯೆ ರಮಂತೆ ಸಹಭಾಂಧವೈಃ|
ಶೃಣ್ವಂತಿ ಯ ಇದಂ ಕಾವ್ಯಂ ಪುರಾ ವಾಲ್ಮೀಕಿನಾ ಕೃತಂ|| (ಯುದ್ಧ ಕಾಂಡ 128-113)

“ಪೂರ್ವಕಾಲದಲ್ಲಿ ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಈ ಮಹಾಕಾವ್ಯವನ್ನು ಯಾರು ಕೇಳುತ್ತಾರೋ ಅವರು ಪ್ರವಾಸವನ್ನು ಸುಖವಾಗಿ ಮುಗಿಸಿಕೊಂಡು ಬಂದು ತಮ್ಮ ಬಂಧುಗಳೊಡನೆ ಆನಂದದಿಂದಿರುತ್ತಾರೆ.”

ಪುರಾ ವಾಲ್ಮೀಕಿನಾ ಕೃತಂ ಅಂದರೆ ಪೂರ್ವಕಾಲದಲ್ಲಿ ವಾಲ್ಮೀಕಿ ಋಷಿಗಳಿಂದ ರಚಿತವಾದದ್ದು ಎಂದರೆ ಇಲ್ಲಿ ಹೇಳುತ್ತಿರುವವರು ಬೇರೆ ಇನ್ನೊಬ್ಬ ಕವಿ. ವಾಲ್ಮೀಕಿ ರಾಮಾಯಣವನ್ನು ಮತ್ತೊಮ್ಮೆ ತನ್ನದೇ ರೀತಿಯಲ್ಲಿ ಹೇಳುತ್ತಿದ್ದಾನೆ. ದಯವಿಟ್ಟು ಗಮನಿಸಿ.

5) ಬೌದ್ಧ ಮಹಾಯಾನದ ಉಚ್ಛ್ರಾಯ ಕಾಲದಲ್ಲಿನ ಬೌದ್ಧ ಗ್ರಂಥಗಳಲ್ಲಿ ರಾಮಾಯಣದ ಉಲ್ಲೇಖ ಸಿಗುತ್ತದೆ. ಆದರೆ ಗ್ರಂಥ ಸಿಕ್ಕುವದಿಲ್ಲ. ವಸುಬಂಧು 5ನೇ ಶತಮಾನದ ಮಹಾಯಾನದ ಮಹಾನ್ ಪ್ರತಿಭೆ. ಜಪಾನಿನ ಬೌದ್ಧ ವಿದ್ವಾಂಸ ಟಕಾಕುಸು ಬರೆದ ವಸುಬಂಧುವಿನ ಜೀವನ ಚರಿತ್ರೆಯಲ್ಲಿ ಒಂದು ರೋಚಕ ಅಂಶ ಸಿಗುತ್ತದೆ. ಮಹಾವಿಭಾಷಾ ಮಹಾಯಾನದ ಸಾರ ಗ್ರಂಥದಲ್ಲಿ ರಾಮಾಯಣದ ಹೆಸರಿನ ಉಲ್ಲೇಖವಿದ್ದು ಅದು 12 ಸಾವಿರ ಶ್ಲೋಕದ ಗ್ರಂಥ ಎಂಬ ಮಾಹಿತಿ ಇದೆ. ಇದಕ್ಕೊಂದು ಕಥೆ ಇದೆ. ಅದು ಕಾಲ್ಪನಿಕವೇ ಇರಬಹುದು. ಮಹಾವಿಭಾಷ ಕೃತಿಯು ಕಾಶ್ಮೀರದಲ್ಲಿ ಸಂಕಲಿತವಾಗಿದ್ದು ಅದರ ಸೂತ್ರಗಳನ್ನು ಕಾಶ್ಮೀರದಿಂದ ಹೊರಗೆ ಯಾರಿಗೂ ಹೇಳುತ್ತಿರಲಿಲ್ಲ. ಆಗ ಓರ್ವ ಅಯೋಧ್ಯೆಯ ಪಂಡಿತನು ಹುಚ್ಚನಂತೆ ನಟಿಸುತ್ತ ಕಾಶ್ಮೀರಕ್ಕೆ ಬಂದು ರಾಮಾಯಣದ ಬಗ್ಗೆ ಕೇಳುತ್ತಾ ಇರುತ್ತಾನೆ. ಕೆಲ ತಿಂಗಳುಗಳು ಅಲ್ಲಿದ್ದು ವಿಭಾಷಾದ ಸೂತ್ರಗಳನ್ನು ಅರ್ಥ ಮಾಡಿಕೊಂಡು ಯಾರಿಗೂ ಗೊತ್ತಿಲ್ಲದಂತೆ ಅಯೋಧ್ಯೆಗೆ ಮರಳುತ್ತಾನೆ. ಇಷ್ಟೇ ಕಥೆಯಲ್ಲಿ ರಾಮಾಯಣದ ಹೆಸರು ಬರುತ್ತದೆ. ಗುಪ್ತರ ಆಳ್ವಿಕೆಯ ಕಾಲದಲ್ಲಿ ಆಗಿನ್ನೂ ಮಿಶ್ರ ಸಂಸ್ಕೃತ ಬಳಕೆಯಲ್ಲಿತ್ತು. ಗುಪ್ತರ ಎಲ್ಲ ಶಾಸನಗಳೂ ಧಮ್ಮ (ಬ್ರಾಹ್ಮಿ) ಲಿಪಿಯಲ್ಲಿಯೇ ಇವೆ ಮತ್ತು ಪಾಲಿ ಇಲ್ಲವೇ ಮಿಶ್ರ ಸಂಸ್ಕೃತದಲ್ಲೇ (ಬೌದ್ಧ ಸಂಸ್ಕೃತವೆಂತಲೂ ಕರೆಯುತ್ತಿದ್ದರು) ಸಿಕ್ಕಿವೆ. ಹಾಗಾಗಿ ಆ ರಾಮಾಯಣವೂ ಮಹಾಯಾನಿಗಳಿಂದಲೇ ಮಿಶ್ರ ಸಂಸ್ಕೃತದಲ್ಲೇ ರಚಿತಗೊಂಡಿರಬಹುದು. ಪಾಲಿ ಮತ್ತು ಪ್ರಾಕೃತ ಇಲ್ಲಿನ ಮೂಲನಿವಾಸಿಗಳ ಭಾಷೆಯಾಗಿದ್ದು ನಂತರ ಪಾಲಿ, ಪ್ರಾಕೃತಗಳು ಗ್ರೀಕ್ ಪರ್ಶಿಯನ್ ಮತ್ತು ಬ್ಯಾಕ್ಕ್ಟ್ರಿಯನ್ ಭಾಷೆಗಳೊಂದಿಗೆ ಸಂಕರಗೊಂಡು ಈ ಸಂಸ್ಕೃತ ಹುಟ್ಟಿಕೊಂಡಿದೆ. ಕ್ರಿ.ಪೂ 2ನೆ ಶತಮಾನದಿಂದ ಕ್ರಿಸ್ತಶಕ 4ನೇ ಶತಮಾನದ ಅವಧಿಯಲ್ಲಿ ಸಂಸ್ಕೃತ ಹುಟ್ಟಿ ಬೆಳೆಯಿತು. ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಈಗಿನ ರಾಮಾಯಣ ಇತ್ತೀಚಿನ ಸ್ವತಂತ್ರ ರಚನೆಯೇ ಆಗಿರಬಹುದು.

ಬೌದ್ಧ ಮಹಾಯಾನಿಗಳ ಇನ್ನೊಂದು ಅತಿ ಮುಖ್ಯವಾದ ಗ್ರಂಥ ಎಂದರೆ “ಲಂಕಾವತಾರ ಸೂತ್ರ”. ಇದರಲ್ಲಿ ರಾವಣನಿಗೆ ಬುದ್ಧರಲ್ಲಿ ಮತ್ತು ಬುದ್ಧ ಮಾರ್ಗದಲ್ಲಿ ಅಪಾರವಾದ ಶ್ರದ್ಧೆ. ರಾವಣ ಲಂಕೆಯಿಂದ ಪುಷ್ಪಕ ವಿಮಾನದಲ್ಲಿ ಜಂಬುದ್ವೀಪಕ್ಕೆ ಬಂದು ಬುದ್ಧರನ್ನು ಭೇಟಿಯಾಗಿ ಲಂಕೆಗೆ ಬಂದು ಧಮ್ಮೋಪದೇಶ ನೀಡಲು ಕೇಳಿಕೊಳ್ಳುತ್ತಾನೆ. (ಮಹಾಯಾನಿಗಳು ಕಲ್ಪನೆ ಮತ್ತು ಪವಾಡಗಳಿಂದ ತಮ್ಮ ಕಥೆಗಳನ್ನು ತುಂಬಿಬಿಡುತ್ತಾರೆ) ಬುದ್ಧರು ಅಲ್ಲಿಗೆ ಹೋಗಿ ಉಪದೇಶ ನೀಡುತ್ತಾರೆ. ಇದು ಲಂಕಾವತಾರ ಸೂತ್ರ. ಇಂಥ ಪರಮ ಧಾರ್ಮಿಕನಾದ ರಾವಣನ ಪಾತ್ರ ಜೈನ ಮತ್ತು ನಂತರದ ವೈದಿಕ (ವಾಲ್ಮೀಕಿ) ರಾಮಾಯಣಗಳಲ್ಲಿ ಖಳನಾಯಕನಂತೆ ಚಿತ್ರಿತವಾಗಿದೆ. ಲಂಕಾವತಾರ ಸೂತ್ರ ಕೂಡ 5-6ನೇ ಶತಮಾನದಲ್ಲಿ ರಚಿತವಾದದ್ದೆ.

ಬೌದ್ಧ ಜಾತಕ ಕಥೆಗಳನ್ನು ಓದುತ್ತಿದ್ದಂತೆ ನಮ್ಮ ಭಾರತೀಯ ಕಾವ್ಯ, ಪುರಾಣಗಳ ಮೂಲಗಳು ಗೊತ್ತಾಗುತ್ತ ಹೋಗುತ್ತವೆ. ದಶರಥ ಜಾತಕ ಇಲ್ಲಿ ಮಾತ್ರವಲ್ಲ, ಎಲ್ಲೆಲ್ಲಿ ಬೌದ್ಧಧಮ್ಮ ಪ್ರಸಾರವಾಯಿತೋ ಅಲ್ಲೆಲ್ಲ ರಾಮನ ಕಥೆ ಅಲ್ಲಿನ ಸಂಪ್ರದಾಯ, ನಂಬಿಕೆಗಳಿಗೆ ತಕ್ಕಂತೆ ಮರುಸೃಷ್ಟಿಗೊಂಡು ರಚಿತವಾಗಿವೆ. ಸುಮಾರು 15-16 ದೇಶಗಳಲ್ಲಿ ಹೀಗೆ ರಾಮಾಯಣದ ಕಥೆಗಳು ಸಿಗುತ್ತವೆ. ದಶರಥ ಜಾತಕ, ಸಾಮ ಜಾತಕ, ಮಹಾಕಪಿ ಜಾತಕ ಮತ್ತು ಲಂಕಾವತಾರ ಸೂತ್ರ ಇವುಗಳನ್ನು ಆಧರಿಸಿ ತಮ್ಮ ಅಜೆಂಡಾಗೆ ತಕ್ಕಂತೆ ಬದಲಾಯಿಸಿ ಈ ವಾಲ್ಮೀಕಿ ರಾಮಾಯಣ ನಮ್ಮ ಮುಂದಿದೆ.

ಇಷ್ಟೆಲ್ಲ ತಕರಾರುಗಳ ನಡುವೆಯೂ ನಾನು ರಾಮಾಯಣವನ್ನು ಇಷ್ಟಪಡುತ್ತೇನೆ, ಅದರಲ್ಲಿನ ಪ್ರೀತಿ ಮತ್ತು ತಾಳ್ಮೆಯ ಸಂಕೇತವಾದ ಮಹಾತಾಯಿ ಸೀತೆ, ಅದ್ಭುತವಾದ ಪ್ರಕೃತಿಯ ವರ್ಣನೆ ಮತ್ತು ಸುಂದರ ಕಾವ್ಯದ ಭಾಷೆ, ಮತ್ತೆಮತ್ತೆ ಓದುವಂತೆ ಮಾಡುತ್ತದೆ. ನೀವೂ ಓದಿ; ಪಾರಾಯಣ ಮಾಡಬೇಡಿ.

ಓದುಗ ಸ್ನೇಹಿತರಿಗೆ ಯಾವುದಾದರೂ ಭಿನ್ನಾಭಿಪ್ರಾಯಗಳಿದ್ದರೆ ಅಥವಾ ಹೊಸ ಅಂಶಗಳಿದ್ದರೆ ಹಂಚಿಕೊಳ್ಳಬೇಕು. ಈ ಲೇಖನ ಯಾರ ಭಾವನೆಗಳಿಗೂ ನೋವುಂಟು ಮಾಡಬೇಕೆಂಬ ಉದ್ದೇಶದ್ದಲ್ಲ. ಕೇವಲ ನಮ್ಮ ಅರಿವಿನ ಹರಹನ್ನು ಬೆಳೆಸುವ ಉದ್ದೇಶದಿಂದ ಈ ಚರ್ಚೆಯನ್ನು ಮಾಡಲಾಗಿದೆ.

ನಮೋ ಬುದ್ಧಾಯ.

ರಮಾಕಾಂತ ಪುರಾಣಿಕ

ರಮಾಕಾಂತ ಪುರಾಣಿಕ
ಮೂಲತಃ ವಿಜಯಪುರ ಜಿಲ್ಲೆಯವರು. BSNLನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೌದ್ಧ ಸಾಹಿತ್ಯ, ವಚನ ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ, ಓದು ಮತ್ತು ಬರಹ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...