ಭ್ರಷ್ಟಾಚಾರಕ್ಕೆ ಕಡಿವಾಣ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್‌ ಮುಚ್ಚಲೊರಟ ಬಿಜೆಪಿ & ಬಿಬಿಎಂಪಿ

ಬೆಂಗಳೂರು ನಗರಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ 15 ಲಕ್ಷ ಜನರು ಸ್ಲಂಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೆ ಸಾವಿರಾರು ಜನರು ರಸ್ತೆ ಬದಿಗಳಲ್ಲಿ ವಾಸಿಸುವಂತಹ ಸ್ಥಿತಿ ಇಂದಿಗೂ ನಗರದಲ್ಲಿದೆ. ಇಂತಹವರಿಗೆ ಸೂರು ನೀಡಲು ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಇವರ ಹಸಿವನ್ನು ನೀಗಿಸಲು ಮುಂದಾದರು. ಆ ಪ್ರಯತ್ನವೇ ಇಂದಿರಾ ಕ್ಯಾಂಟೀನ್‌ಗಳು. ನಿರಾಶ್ರಿತರು, ಬಡಜನರ ಹಸಿವನ್ನು ನೀಗಿಸುವ ಉತ್ತಮ ಯೋಜನೆ ಇಂದಿರಾ ಕ್ಯಾಂಟಿನ್ ಈಗ ಮುಚ್ಚುವ ಸ್ಥಿತಿ ತಲುಪಿದೆ.

ಇಂದಿರಾ ಕ್ಯಾಂಟಿನ್‍ ನಿರ್ವಹಣೆಗೆ ಈ ಹಿಂದೆ ಇದ್ದ ಮೈತ್ರಿ ಸರ್ಕಾರವೂ ಅನುದಾನವನ್ನಷ್ಟೇ ನೀಡಿತ್ತೇ ಹೊರತು, ಸಮರ್ಪಕವಾಗಿ ನಿಭಾಯಿಸುವುದಲ್ಲಿ ಹಿಂದೇಟು ಹಾಕಿತ್ತು. ಕಾಂಗ್ರೆಸ್—ಜೆಡಿಎಸ್‍ ಸರ್ಕಾರಗಳ ಯೋಜನೆಗಳನ್ನು ಬುಡಮೇಲು ಮಾಡುತ್ತಾ, ಹಲವು ಯೋಜನೆಗಳಿಗೆ ತಡೆಯೊಡ್ಡಿರುವ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನವೂ ಇಲ್ಲದೆ ಇಂದಿರಾ ಕ್ಯಾಂಟಿನನ್ನು ಮುಚ್ಚುವ ಸ್ಥಿತಿಗೆ ಬಂದು ನಿಂತಿದೆ. ಹಸಿದವರ ಹಸಿವು ನೀಗಿಸುವ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಸರ್ಕಾರ ಅನುದಾನ ನೀಡದೇ ಇದ್ದರೂ ಬಿಬಿಎಂಪಿ ಇಂದಿರಾ ಕ್ಯಾಂಟಿನ್‍ ಮುಂದುವರೆಸುತ್ತದೆ ಎಂದು ಮಾಜಿ ಮೇಯರ್ ಗಂಗಾಂಬಿಕೆ ಈ ಹಿಂದೆ ಹೇಳಿದ್ದರು.

ಇದೆಲ್ಲರ ನಡುವೆ ಇಂದಿರಾ ಕ್ಯಾಂಟಿನ್‍ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ. ಹಾಗಾಗಿ ತನಿಖೆ ನಡೆಸಲು ಆದೇಶ ನೀಡುವುದಾಗಿಯೂ, ಇಂದಿರಾ ಕ್ಯಾಂಟೀನ್ ಮುಚ್ಚುವುದಾಗಿಯೂ ಯಡಿಯೂರಪ್ಪನವರು ಪ್ರಸ್ತಾಪಿಸಿದ್ದರು. ತೀವ್ರ ವಿರೋಧ ಬಂದ ನಂತರ ಹೆಸರನ್ನೂ ಬದಲಾಯಿಸದೆ ಮುಂದೆವರೆಸುವುದಾಗಿ ಘೋಷಿಸಿದರು. ಯಾವುದೇ ಜನಪರ ಯೋಚನೆಯಲ್ಲಿ ಅಕ್ರಮಗಳು ಅಥವಾ ಹಗರಣಗಳು ನಡೆದರೆ ಹಗರಣ, ಅಕ್ರಮಗಳ ಬಗೆಗೆ ತನಿಖೆ ನಡೆಸಬೇಕೆ ಹೊರತು ಯೋಜನೆಯನ್ನೇ ರದ್ದುಗೊಳಿಸಬಾರದು ಎಂಬ ಸಾಮಾನ್ಯ ಜ್ಞಾನವೂ ರಾಜ್ಯದ ಮುಖ್ಯಮಂತ್ರಿಗಳಲ್ಲಿ ಇಲ್ಲದಂತಾಗಿದೆ.

ಬಿಬಿಎಂಪಿಯನ್ನೂ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಳ್ಳಲು ಹವಣಿಸುತ್ತಿದ್ದ ಬಿಜೆಪಿ ಕೊನೆಗೂ, ಬಿಬಿಎಂಪಿಯಲ್ಲೂ ಅಧಿಕಾರ ಗಿಟ್ಟಿಸಿಕೊಂಡಿದೆ. ಮೇಯರ್ ಗದ್ದುಗೆ ಹೇರಿರುವ ಗೌತಮ್‌ ಕುಮಾರ್ ಜೈನ್ ತನ್ನ ಮಂಗತನವನ್ನು ಆರಂಭದಲ್ಲೇ ಪ್ರದರ್ಶಿಸಿದ್ದಾರೆ. ಯಡಿಯೂರಪ್ಪನವರು ಅಕ್ರಮಗಳ ಕಾರಣವನ್ನಿಟ್ಟು ಇಂದಿರಾ ಕ್ಯಾಂಟೀನ್ ಮುಚ್ಚುವ ಮಾತನಾಡಿದರೆ. ಮೇಯರ್ ಮೋಹನ್ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅದರ ನಿರ್ವಹಣೆಯನ್ನು ಧಾರ್ಮಿಕ ಸಂಸ್ಥೆಗಳು, ಖಾಸಗಿ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಈಗಾಗಲೇ ಎಲ್ಲವನ್ನೂ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಬಿಜೆಪಿ ಬಡವರ ಹೊಟ್ಟೆಗೂ ಖಾಸಗೀಕರಣದ ಮೂಲಕ ನೇರವಾಗಿ ಕನ್ನ ಹಾಕಲು ಮುಂದಾಗಿದೆ. ಇಂದಿರಾ ಕ್ಯಾಂಟನ್‌ಗಳನ್ನೂ ಧಾರ್ಮಿಕ ಭಜನಾ ಮಂಡಳಿಗಳನ್ನಾಗಿ ಪರಿವರ್ತಿಸುವ ಮತ್ತು ನಿಧಾನಕ್ಕೆ ಅದನ್ನೂ ಮುಚ್ಚುವ ಹುನ್ನಾರವನ್ನು ಹೆಣೆಯುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಹೆಸರಿನಲ್ಲಿ ಧಾರ್ಮಿಕ ಸಂಸ್ಥೆಗಳ ಖಜಾನೆ ತುಂಬಿಸುವ ಮಸಲತ್ತು ಇದರ ಹಿಂದಿರುವುದನ್ನು ಗ್ರಹಿಸಲಾಗದೇ ಇರುವಂತದ್ದೇನೂ ಅಲ್ಲ. ಧಾರ್ಮಿಕ ಸಂಸ್ಥೆಗಳಿಗೆ ವಹಿಸುವುದರಿಂದ ಬಿಬಿಎಂಪಿ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತದೆ ಹೊರತು, ಮತ್ತೇನನ್ನೂ ಸಾಧಿಸಲಾರದು.

ಸಾಮಾನ್ಯ ಜನರ ಪರವಾದ ಒಂದಾದರೂ ಯೋಜನೆಗಳನ್ನು ಜಾರಿಮಾಡದ, ನೆರೆಯಿಂದ ನೆಲೆ ಕಳೆದುಕೊಂಡವರ ಬದುಕನ್ನು ಕಟ್ಟಿಕೊಡಲಾಗದೆ ದರ್ಪದ ಮಾತುಗಳನ್ನಾಡುತ್ತಾ ಮೆರೆಯುತ್ತಿರುವ ಬಜೆಪಿ ನೇತೃತ್ವದ ಸರ್ಕಾರ ಮತ್ತು ಬಿಬಿಎಂಪಿ ಕನಿಷ್ಟ ಹಸಿದವರಿಗೆ ಅನ್ನ ಹಾಕುವ ಇಂದಿರಾ ಕ್ಯಾಂಟೀನ್‍ ಅನ್ನೂ ಮುಚ್ಚಲು ಹವಣಿಸುತ್ತಿರುವುದು ಈ ಬಿಜೆಪಿಗಳಿಗೆ ಜನರ ಬಗೆಗೆ ಯಾವುದೇ ಕಾಳಜಿ ಇಲ್ಲವೆಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here