ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ನಲ್ಲಿ ನಡೆದ ಹವಾಮಾನ ಶೃಂಗಸಭೆಗೆ ತೆರಳಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟನೆ ನೀಡಿದ್ದಾರೆ. ಡೆನ್ಮಾರ್ಕ್ ನಲ್ಲಿ ನಡೆವ ಸಭೆ ಮೇಯರ್ ಲೆವೆಲ್ ದ್ದಾಗಿದೆ. ಹೀಗಾಗಿ ಕೇಜ್ರಿವಾಲ್ ಅವರ ಪ್ರಯಾಣಕ್ಕೆ ಅನುಮತಿ ನೀಡಲಿಲ್ಲ ಎಂದು ಹೇಳಿದ್ದಾರೆ.

ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ನಲ್ಲಿ ನಡೆದ ಹವಾಮಾನ ಶೃಂಗಸಭೆಗೆ ಎಂಟು ಸದಸ್ಯರ ನಿಯೋಗ ಭಾರತದಿಂದ ತೆರಳಿದೆ. ಅದರಲ್ಲಿ ಅರವಿಂದ್ ಕೇಜ್ರಿವಾಲ್ ಕೂಡ ತೆರಳಬೇಕಿತ್ತು. ಅವರಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಆದರೆ ಪಶ್ಚಿಮ ಬಂಗಾಳ ಮಂತ್ರಿ ಫರ್ಹಾದ್ ಹಕೀಮ್ ಅವರಿಗೆ ಅವಕಾಶ ನೀಡಲಾಗಿದೆ.

ಹಕೀಮ್ ಅವರಿಗೆ ಅವಕಾಶ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾವ್ಡೇಕರ್, ಮಂತ್ರಿಗಳನ್ನು ರಾಜಕೀಯ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗ ಅದಕ್ಕೆ ಬೇರೆಯದೇ ಪ್ರೊಟೋಕಾಲ್ ಇರುತ್ತದೆ ಎಂದಿದ್ದಾರೆ. ಏಷಿಯಾದ ಹಲವು ರಾಷ್ಟ್ರಗಳಿಂದ 100 ಮೇಯರ್ ಗಳು ಸಭೆಗೆ ಹಾಜರಾಗುತ್ತಾರೆ ಎಂದಿದ್ದಾರೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಿದ್ದು ಹೇಗೆ ಎಂಬುದರ ಕುರಿತು ಮಾತನಾಡಲು ಕೇಜ್ರಿವಾಲ್ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ದೆಹಲಿಯಲ್ಲಿ ಶೇ. 25ರಷ್ಟು ವಾಯುಮಾಲಿನ್ಯ ಕಡಿಮೆ ಮಾಡಲು ಕೇಜ್ರಿವಾಲ್‌ ನೇತೃತ್ವದ ಆಪ್‌ ಸರ್ಕಾರ ಪ್ರಯತ್ನಿಸಿ ಯಶಸ್ವಿಯಾಗಿತ್ತು.

ಕೇಜ್ರಿವಾಲ್‌ಗೆ ಅವಕಾಶ ನೀಡದ್ದನ್ನು ಹಲವಾರು ಗಣ್ಯರು ಖಂಡಿಸಿದ್ದಾರೆ. ಮೋದಿಯವರ ಈ ನಡೆ ಸರ್ವಾಧಿಕಾರಿತನದ್ದು ಎಂದು ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ. ಪಕ್ಷವನ್ನು ಹಣಿಯುವ ಹುನ್ನಾರ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

LEAVE A REPLY

Please enter your comment!
Please enter your name here