Homeಆರೋಗ್ಯಕೊರೊನಾ ವೈರಸ್ ಹಾಸ್ಯಾಸ್ಪದ ಮತ್ತು ಅತಾರ್ಕಿಕ ಸಮೂಹ ಸನ್ನಿ

ಕೊರೊನಾ ವೈರಸ್ ಹಾಸ್ಯಾಸ್ಪದ ಮತ್ತು ಅತಾರ್ಕಿಕ ಸಮೂಹ ಸನ್ನಿ

- Advertisement -
- Advertisement -

ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ಪ್ರೊಫೆಸರ್ ಗಗನ್‍ದೀಪ್ ಕಾಂಗ್ ಅವರು ಅಂತರ್ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳನ್ನೆದುರಿಸುವ ಸಿದ್ಧತೆಗಳ ಆವಿಷ್ಕಾರ ಕೇಂದ್ರದ ಉಪ ಮುಖ್ಯಸ್ಥರೂ ಆಗಿದ್ದಾರೆ. ಅಂತಹವರೂ ಸೇರಿದಂತೆ ಜಗತ್ತಿನ ಹಲವು ತಜ್ಞರು ಈ ಸಮೂಹ ಸನ್ನಿ ಹಾಸ್ಯಾಸ್ಪದವೆಂಬುದನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳುತ್ತಿದ್ದಾರೆ. ಆದರೆ, ಎಲ್ಲಾ ಮಾತುಗಳಾಚೆ ಹೇಳುವ ಎಚ್ಚರಿಕೆಯ ಸೂಚನೆಗಳನ್ನೇ ಜನರು ಹೆಚ್ಚೆಚ್ಚು ಪ್ರಚಾರಕ್ಕೆ ತರುತ್ತಾರೆ; ಅದನ್ನು ಉತ್ಪ್ರೇಕ್ಷಿಸಿ ಹರಡಲು ಮಾಧ್ಯಮಗಳು ಕಾಯುತ್ತಿರುತ್ತವೆ.

ಈ ಲೇಖನ ಬರೆಯಲು ಶುರು ಮಾಡುವ ಹೊತ್ತಿಗೆ ಕೊರೊನಾ ವೈರಸ್ ಎಂಬುದು ಒಂದು ಅತ್ಯಂತ ಮಾರಣಾಂತಿಕ ಕಾಯಿಲೆಯೇನೋ ಎಂಬ ಭಾವನೆ ಹೆಚ್ಚಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು 5ನೇ ತರಗತಿಯವರೆಗಿನ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದ ಉಳಿದ ಅವಧಿಗೆ ರಜೆ ಘೋಷಿಸಿದೆ. ದೇಶದ ಯಾವುದೇ ಕಂಪೆನಿಯ ಮೊಬೈಲ್‍ಗೆ ಯಾರೇ ಫೋನ್ ಮಾಡಿದರೂ ಕೆಮ್ಮಿನ ಶಬ್ದ ಕೇಳುತ್ತಿದೆ. ಫೋನ್ ರಿಸೀವ್ ಮಾಡಿದವರದ್ದಲ್ಲ; ಕೊರೊನಾ ವೈರಸ್‍ನ ಕುರಿತು ಜಾಗೃತಿ ಮೂಡಿಸುವ ಸಂದೇಶದ ಭಾಗವಾಗಿ! ನಿನ್ನೆ ಮುಂಬೈ ಷೇರುಪೇಟೆ ದಾಖಲೆ ಪ್ರಮಾಣದ ಕುಸಿತ ಕಂಡಿದ್ದು, ಅದಕ್ಕೆ ಸೌದಿ ಅರೇಬಿಯಾ ಸರ್ಕಾರದ ನೀತಿಯಿಂದ ತೈಲ ಬೆಲೆ ಕುಸಿದಿದ್ದಕ್ಕಿಂತ ಕೊರೊನಾ ವೈರಸ್‍ನಿಂದ ಪ್ರಪಂಚದ ಆರ್ಥಿಕತೆಯೇ ಕುಸಿಯುವ ಭೀತಿ ಉಂಟಾಗಿರುವುದು ಕಾರಣ ಎಂದು ಬಹುತೇಕ ಪತ್ರಿಕೆಗಳು ಮುಖಪುಟದ ವರದಿ ಪ್ರಕಟಿಸಿವೆ.

ಸದ್ಯದ ಹೊತ್ತಿನಲ್ಲಿ ಇದಕ್ಕಿಂತ ಹಾಸ್ಯಾಸ್ಪದವಾದ ಮತ್ತೊಂದು ಸಂಗತಿ ಪ್ರಪಂಚದಲ್ಲಿ ಸಂಭವಿಸುತ್ತಿಲ್ಲ ಎಂದು ಕನಿಷ್ಠ ವೈದ್ಯಕೀಯ ಜ್ಞಾನ ಇರುವ ಯಾರು ಬೇಕಾದರೂ ಹೇಳಬಹುದಿತ್ತು. ಆದರೆ ವೈದ್ಯಕೀಯ ಮಾಹಿತಿಯನ್ನೂ ಮುಂದಿಟ್ಟುಕೊಂಡು ಹೆಚ್ಚೆಚ್ಚು ಆತಂಕವನ್ನು ಸೃಷ್ಟಿ ಮಾಡುವ ಕೆಲಸವನ್ನು ಮಾಧ್ಯಮಗಳು ಮಾತ್ರವಲ್ಲದೇ ಸರ್ಕಾರವೂ ಮಾಡುತ್ತಿದೆ.

ನಿಜವಾಗಲೂ ಈ ಸಂದರ್ಭದಲ್ಲಿ ಕೊರೊನಾ ವೈರಸ್‍ಗೆ ಸಂಬಂಧಿಸಿದ ದೊಡ್ಡದೊಂದು ರೋಗ ಪ್ರಪಂಚವನ್ನು ಆವರಿಸಿದೆ. ಅದು ಆತಂಕವನ್ನು ಹರಡುವ ರೋಗ. ವೈರಸ್ ಇದೆ; ನೆಗಡಿಯ ವೈರಸ್. ಇದುವರೆಗೆ ಇದ್ದ ಕೊರೊನಾ ವೈರಸ್ಸೇ ಸ್ವಲ್ಪ ಮ್ಯುಟೇಷನ್ ಆಗಿ (ಅಂದರೆ ಅದರ ಜೀನ್‍ನಲ್ಲಿ ವ್ಯತ್ಯಾಸ ಆಗಿ) ಹೊಸದೊಂದು ವೈರಸ್ ಸೃಷ್ಟಿಯಾಗಿದೆ. ಅದನ್ನು ಕೋವಿದ್ 19 ಎಂದು ಕರೆಯಲಾಗಿದೆ. ಹೊಸಾ ವೈರಸ್ ಆದ್ದರಿಂದ ಅದಕ್ಕೆ ಶಕ್ತಿ ಹೆಚ್ಚು. ಮನುಷ್ಯರು ಅದನ್ನು ಎದುರಿಸಲು ಸ್ವಲ್ಪ ಸಮಯ ಬೇಕು. ಹಾಗಂತ ಇದು ಬಹಳ ಮಾರಣಾಂತಿಕ ವೈರಸ್ ಅಲ್ಲ. ನಿಜ ಹೇಳಬೇಕೆಂದರೆ ಸಾರ್ಸ್, ಎಬೋಲಾಗಳಿಗಿಂತ ಕಡಿಮೆ ಶಕ್ತಿಯ ವೈರಸ್. ಶೇ.80ಕ್ಕೂ ಹೆಚ್ಚು ಸಾವುಗಳು ಆಗಿರುವುದು ಬಹಳ ವಯಸ್ಸಾದವರು, ಅದರಲ್ಲೂ ಬೇರೇನೋ ಕಾಯಿಲೆ ಇದ್ದವರು. ಫೆಬ್ರವರಿ ಕೊನೆಯ ಭಾಗದವರೆಗೆ ಸಣ್ಣ ಮಕ್ಕಳು ಈ ವೈರಸ್ ಸೋಂಕಿನಿಂದ ಸತ್ತ ಒಂದೂ ಪ್ರಕರಣ ವರದಿಯಾಗಿರಲಿಲ್ಲ.

ಆತಂಕವನ್ನು ಹರಡುವ ರೋಗದ ಕುರಿತು ಹೋಗುವ ಮುನ್ನ ಒಂದು ಮಾತನ್ನು ಹೇಳಬೇಕು. ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆ ಮನೆಯಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಯಾರಿಗಾದರೂ ಬಂದಿದೆ ಎಂದಿಟ್ಟುಕೊಳ್ಳಿ. ಆಗ ನೀವು ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ತಡೆಯಲು ಏನು ಮಾಡಬೇಕೆಂದು ವೈದ್ಯರನ್ನು ಕೇಳಿದರೆ ಅವರೇನು ಹೇಳುತ್ತಾರೆ? ಸೀನುವಾಗ ಎಚ್ಚರವಹಿಸಿ; ಬೇರೆಯವರಿಗೂ ಬಂದೀತು. ಅಕ್ಕಪಕ್ಕ ನೆಗಡಿ ಸೀನು ಇರುವವರಿದ್ದರೆ ಹುಷಾರು. ಸ್ವಲ್ಪ ದೂರ ನಿಲ್ಲಿ. ಅಕಸ್ಮಾತ್ತಾಗಿ ಅವರು ಸೀನಿರುವ ಜಾಗದಲ್ಲಿ ನೀವು ಮುಟ್ಟಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಕೈಗಳನ್ನು ಮೂಗು, ಬಾಯಿ, ಕಣ್ಣು ಒಟ್ಟಾರೆ ಮುಖದ ಸಮೀಪ ತೆಗೆದುಕೊಂಡು ಹೋಗಬೇಡಿ. ಕೈಗಳನ್ನು ಸರಿಯಾಗಿ ತೊಳೆದರೆ ವೈರಸ್ ಹೋಗಿಬಿಡುತ್ತದೆ. ಏನಾದರೂ ಒಳ್ಳೇ ಸೋಪಿನಿಂದ ತೊಳೆದರೆ ಉತ್ತಮ.
ಗಮನಿಸಿ, ಬಹುತೇಕ ಪರಿಣಿತ ವೈದ್ಯರು ಕೊರೊನಾ ವೈರಸ್ ಬಗ್ಗೆ ಹೇಳುತ್ತಿರುವುದು ಇಷ್ಟೇ. ಅಂದರೆ ಸಾಮಾನ್ಯ ನೆಗಡಿ, ಫ್ಲೂ ಬರದೇ ಇರಲು ಏನು ಮಾಡಬೇಕೋ ಅದನ್ನೇ. ಜೊತೆಗೆ ಏನೋ ಆಗಬಾರದ್ದು ಆಗಿ ಹೋಗಿದೆ ಎಂಬಂತೆ ಯಾವ ವೈದ್ಯರೂ ಹೇಳುತ್ತಿಲ್ಲ. ಹಾಗಾದರೆ ಆಗಬಾರದ್ದು ಆಗಿರುವುದು ಎಲ್ಲಿ? ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ.

ಇನ್ನೂ ಕೆಲವು ಅಂಕಿಅಂಶಗಳನ್ನು ಗಮನಿಸೋಣ. ಇದುವರೆಗೆ ಜಗತ್ತಿನಲ್ಲಿ ಈ ಸೋಂಕು ಪತ್ತೆಯಾಗಿರುವುದು 1,16,871 ಜನರಲ್ಲಿ. ಅವರಲ್ಲಿ ಸತ್ತಿರುವುದು 4,095 ಜನರಲ್ಲಿ. ಒಂದು ವಿಚಾರ ನೆನಪಿನಲ್ಲಿಡಿ. ಕೋವಿದ್ 19 ವೈರಸ್ ಪ್ರವೇಶ ಮಾಡಿರಬಹುದಾದ ಜನರು ಒಂದು ಲಕ್ಷ + ಅಷ್ಟೇನಾ? ಖಂಡಿತಾ ಅಲ್ಲವೇ ಅಲ್ಲ. ಕನಿಷ್ಠ ಇದರ 6-7ಪಟ್ಟು ಜನರಾದರೂ ಇದ್ದಾರು. 5ರಲ್ಲಿ ನಾಲ್ಕು ಜನಕ್ಕೆ ಸಣ್ಣ ನೆಗಡಿಗಿಂತ ಹೆಚ್ಚೇನೂ ಆಗದೇ ಸರಿ ಹೋಗಿಬಿಟ್ಟಿದ್ದಾರೆ. ಬಹಳ ಹೆಚ್ಚಾದವರಲ್ಲಿ ಕೆಲವರಿಗೆ ಗಂಟಲು ಅಥವಾ ಮೂಗಿನಲ್ಲಿ ಹತ್ತಿಯಿಂದ ಉಜ್ಜಿ (swab) ಪರೀಕ್ಷೆಗೆ (PCR/RTPCR) ಕಳಿಸಿದ್ದಾರೆ. ಅವರಲ್ಲಿ ಇಷ್ಟು ಜನರಲ್ಲಿ ಇದೆ ಎಂದು ಪತ್ತೆಯಾಗಿದೆ. ಇವುಗಳಲ್ಲಿ ಶೇ.98 ಕೇವಲ ನಾಲ್ಕು ದೇಶಗಳಲ್ಲಿ (ಚೈನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ) ಆಗಿದೆ.

ಭಾರತದಲ್ಲಿ ಈ ಲೇಖನ ಬರೆಯುವ ಹೊತ್ತಿಗೆ 56 ಕೇಸುಗಳು ಪತ್ತೆಯಾಗಿದ್ದು, ಒಂದೂ ಸಾವಾಗಿಲ್ಲ. ಆದರೆ, ದಿನದ 24 ಗಂಟೆ ಒಂದಲ್ಲಾ ಒಂದು ಚಾನೆಲ್ ಇದನ್ನು ಕಿಲ್ಲರ್ ವೈರಸ್ ಎಂದು ಕಿರುಚುತ್ತಿರುತ್ತದೆ. ಈ ಸಂದರ್ಭದಲ್ಲಿ ಮೀಡಿಯಾಗಳು ನಡೆದುಕೊಂಡ ರೀತಿಯ ಬಗ್ಗೆಯೇ ಕೆಲವು ಅಧ್ಯಯನಗಳಾಗಿವೆ. ಅವುಗಳ ಪ್ರಕಾರ ಬಿಬಿಸಿಯು ಪ್ರಕಟಿಸಿದ ‘ಕೊರೊನಾ ವೈರಸ್ ಸೋಂಕನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಲಾಗಿದೆ’ ಎಂಬುದು ಫೇಸ್‍ಬುಕ್‍ನಲ್ಲಿ ಅತ್ಯಂತ ಹೆಚ್ಚು ಷೇರ್ ಆದ ವರದಿಯಂತೆ. ಟೈಂ ಮ್ಯಾಗಜೀನ್ ನಡೆಸಿದ ಅಧ್ಯಯನದ ಪ್ರಕಾರ 2019ರಲ್ಲಿ ಎಬೋಲಾ ಸೋಂಕು ಹರಡಿದಾಗ ಬಂದ ಲೇಖನಗಳಿಗಿಂತ 23 ಪಟ್ಟು ಹೆಚ್ಚು ಲೇಖನಗಳು ಈ ಸಾರಿ ಬಂದಿವೆ. ಜಗತ್ತಿನಲ್ಲಿ ಅತೀ ಹೆಚ್ಚು ಪ್ರಸಾರವುಳ್ಳ 100 ಪತ್ರಿಕೆಗಳ ಅಧ್ಯಯನದಲ್ಲಿ ಕಂಡುಬಂದಿರುವುದೇನೆಂದರೆ 9,387 ವರದಿಗಳು ಇದರ ಬಗ್ಗೆ ಈ ಅವಧಿಯಲ್ಲಿ ಬಂದಿದ್ದು, ಅವುಗಳಲ್ಲಿ 1,066 ವರದಿಗಳು ‘ಭಯ, ಆತಂಕ’ ಎಂದು ಪದೇ ಪದೇ ಹೇಳಿವೆ. ಅದರಲ್ಲೂ 50 ಬರಹಗಳು ‘ಕಿಲ್ಲರ್ ವೈರಸ್’ ಎಂಬ ಪದಗಳನ್ನು ಬಳಸಿವೆ. ಡೆಡ್ಲಿ ಡಿಸೀಸ್ ಎಂಬುದು ಅಂತಹುದೇ ಇನ್ನೊಂದು ಹೆಚ್ಚು ಬಳಕೆಯಾದ ಪದ.

ಭಾರತದ ಸುಮಾರು 135 ಕೋಟಿ ಜನರಲ್ಲಿ 56 ಜನರಿಗೆ ನೆಗಡಿಗಿಂತ ಹೆಚ್ಚು ಗಂಭೀರವಾದ ಖಾಯಿಲೆಯೊಂದು ಬಂದಿರುವ ಕುರಿತು ಖಾತರಿಯಾಗಿದೆ. ಕೆಲವರಿಗೆ ಮಾತ್ರ ಸಮಸ್ಯೆ ತೀವ್ರವಾಗಿದ್ದು, ಹಲವರು ಈಗಾಗಲೇ ಗುಣಮುಖರಾಗಿದ್ದು ಒಬ್ಬರೂ ಸತ್ತಿಲ್ಲ ಎಂಬುದು ಖಚಿತವಿದ್ದರೂ ನಮ್ಮಲ್ಲೂ ಕಿಲ್ಲರ್ ವೈರಸ್ ಎಂಬ ಪದ ಧಾರಾಳವಾಗಿ ಬಳಕೆಯಾಗುತ್ತಿದೆ.

ಎರಡು ದಿನಗಳ ಹಿಂದೆ ಸ್ವತಃ ಪ್ರಧಾನಮಂತ್ರಿಯವರೇ ಈ ಕುರಿತು ಮಾತನಾಡಿದರು. ಪಾಶ್ಚಾತ್ಯ ದೇಶಗಳಲ್ಲಿಯಂತೆ ಕೈಕುಲುಕುವುದು ಬೇಡ; ಕೈ ಮುಗಿಯೋಣ ಎಂದೂ ಹೇಳಿದರು. ಅದರ ಜೊತೆಗೆ ಯಾರೂ ಆತಂಕ ಹುಟ್ಟಿಸುವುದು, ಸುಳ್ಳು ಸುದ್ದಿ ಹರಡುವುದು ಬೇಡ ಎಂದರು. ಅವರು ಅದನ್ನು ಹೇಳುತ್ತಿರುವಾಗಲೇ ಅದೇ ಟಿವಿಯಲ್ಲಿ ಕೆಳಗೆ ‘ಕಿಲ್ಲರ್ ವೈರಸ್‍ಗೆ ಇನ್ನೆಷ್ಟು ಬಲಿ?’ ಎಂದು ಸ್ಕ್ರೋಲ್ ಆಗುತ್ತಿತ್ತು. ಕರ್ನಾಟಕದ ಆರೋಗ್ಯ ಇಲಾಖೆಯ ಆಯುಕ್ತರಾದ ಅಮರ್‍ಕುಮಾರ್ ಪಾಂಡೆಯವರು ಈ ವೈರಸ್ ಕುರಿತು ಸುಳ್ಳು ಸುದ್ದಿ ಹರಡಿ ಆತಂಕ ಸೃಷ್ಟಿಸುವವರ ಮೇಲೆ ಕ್ರಿಮಿನಲ್‍ಕೇಸು ಹಾಕುತ್ತೇನೆಂದು ಹೇಳಿರುವುದು ಒಂದೆಡೆ ವರದಿಯಾಗಿದೆ. ಆದರೆ ಯಾವ ಮಾಧ್ಯಮದವರ ಮೇಲೂ ಕೇಸು ಹಾಕಿದ್ದು ಇದುವರೆಗೆ ಗೊತ್ತಾಗಿಲ್ಲ.

ಮಾಧ್ಯಮಗಳ ಸ್ಥಿತಿ ಹೀಗಿರುವಾಗ ಇನ್ನು ಸೋಷಿಯಲ್ ಮೀಡಿಯಾದ ಕಥೆಯಂತೂ ಕೇಳುವುದೇ ಬೇಡ. ಅದರಲ್ಲಿ ಭೀಕರ ವೈರಸ್ ಬಗ್ಗೆ ಮಾತ್ರವಲ್ಲದೇ, ಜನರ ಪರೋಪಕಾರದ ಭಾಗವಾಗಿ ಅದಕ್ಕೆ ಮನೆ ಮದ್ದುಗಳೂ ಧಾರಾಳವಾಗಿ ಸಿಗುತ್ತವೆ. ‘ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಲ್ಲಿ ಯಾರಿಗಾದರೂ ಉಪಯೋಗಕ್ಕೆ ಬರುತ್ತದೆ. ತಪ್ಪದೇ ಷೇರ್ ಮಾಡಿ. ಜೀವ ಉಳಿಸಿ’ ಅಂತ ಒಕ್ಕಣೆಯ ಜೊತೆಗೆ ಷೇರ್ ಆಗುತ್ತವೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಜೀವ ಉಳಿಸಲು ಕನಿಷ್ಠ ಷೇರ್ ಸಹಾ ಮಾಡದಷ್ಟು ಉಪಕಾರಿ ಗುಣದವರು ನೀವಾಗದಿದ್ದರೆ ಹೇಗೆ? ಷೇರ್ ಮಾಡಿ. ಅದರಲ್ಲಿ ಅಂತಹ ಅಪಾಯಕಾರಿಯಾದ ಮದ್ದೂ ಇಲ್ಲ, ಯಾರಿಗೂ ಹಣ ಮಾಡುವ ಉದ್ದೇಶವೂ ಇಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ, ಭಯವನ್ನು ಹರಡುವ ಕೆಲಸವಂತೂ ಆಗಿಯೇ ತೀರುತ್ತದೆ.

ಅಂತಿಮವಾಗಿ ವಿಶ್ವ ಆರೋಗ್ಯ ಸಂಸ್ಥೆಯೇ ಇದನ್ನೊಂದು ಜಾಗತಿಕ ತುರ್ತುಸ್ಥಿತಿ ಎಂದುಬಿಟ್ಟಿದೆ. ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ಪ್ರೊಫೆಸರ್ ಗಗನ್‍ದೀಪ್ ಕಾಂಗ್ ಅವರು ಅಂತರ್ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳನ್ನೆದುರಿಸುವ ಸಿದ್ಧತೆಗಳ ಆವಿಷ್ಕಾರ ಕೇಂದ್ರದ ಉಪ ಮುಖ್ಯಸ್ಥರೂ ಆಗಿದ್ದಾರೆ. ಅಂತಹವರೂ ಸೇರಿದಂತೆ ಜಗತ್ತಿನ ಹಲವು ತಜ್ಞರು ಈ ಸಮೂಹ ಸನ್ನಿ ಹಾಸ್ಯಾಸ್ಪದವೆಂಬುದನ್ನು ಬೇರೆ ಬೇರೆ ಮಾತುಗಳಲ್ಲಿ ಹೇಳುತ್ತಿದ್ದಾರೆ. ಆದರೆ, ಎಲ್ಲಾ ಮಾತುಗಳಾಚೆ ಹೇಳುವ ಎಚ್ಚರಿಕೆಯ ಸೂಚನೆಗಳನ್ನೇ ಜನರು ಹೆಚ್ಚೆಚ್ಚು ಪ್ರಚಾರಕ್ಕೆ ತರುತ್ತಾರೆ; ಅದನ್ನು ಉತ್ಪ್ರೇಕ್ಷಿಸಿ ಹರಡಲು ಮಾಧ್ಯಮಗಳು ಕಾಯುತ್ತಿರುತ್ತವೆ. ಎಲ್ಲವನ್ನೂ ಉತ್ಪ್ರೇಕ್ಷಿಸಿ (ಹಲವು ಸಾರಿ ಸುಳ್ಳುಗಳನ್ನೇ) ಪ್ರಸಾರ ಮಾಡುವ ಐಟಿ ಸೆಲ್‍ಗಳು ಸಾಮಾಜಿಕ ಜಾಲತಾಣಗಳ ನೀತಿ ಸಂಹಿತೆ ರೂಪಿಸಿರುವ ಕಾಲದಲ್ಲಿ ನಾವಿದ್ದೇವೆ. ಹಾಗಾಗಿ ಅಪಾಯ ಇನ್ನೂ ಹೆಚ್ಚಾಗಿದೆ.
ಈ ರೋಗಕ್ಕೆ ಮದ್ದು ಸುಲಭಕ್ಕೆ ಸಿಕ್ಕುವಂತೆ ಕಾಣುತ್ತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....