ಭಾರತ ಸಂವಿಧಾನದ ಪೀಠಿಕೆ – ಪುಟ್ಟ ಪರಿಚಯ

 

ಪೀಠಿಕೆಯ ಪೂರ್ವಸೂಚಿಗಳು

ಭಾರತ ಸಂವಿಧಾನದ ಪೀಠಿಕೆ, ಮೋತಿಲಾಲ್ ನೆಹರೂ ವರದಿ, ಪೂರ್ಣ ಸ್ವರಾಜ್ಯದ ಗೊತ್ತುವಳಿ, ಧ್ಯೇಯೋದ್ದೇಶ ಗೊತ್ತುವಳಿ ಹಾಗೂ ಅಂಬೇಡ್ಕರ್ ಅವರ ರಾಜ್ಯಗಳು ಮತ್ತು ಅಲ್ಪಸಂಖ್ಯಾತರು (ಸ್ಟೇಟ್ಸ್ ಅಂಡ್ ಮೈನಾರಿಟಿಸ್) ಕೃತಿಯಲ್ಲಿ ಪ್ರಸ್ತಾಪಿಸಲಾದ ಪೀಠಿಕೆ- ಇವುಗಳನ್ನೊಳಗೊಂಡಂತೆ ಭಾರತೀಯರ ಆಶೋತ್ತರಗಳು ಮತ್ತು ದೂರದೃಷ್ಟಿಯ ವಿವೇಕದ ಹಿಂದಿನ ಅಭಿವ್ಯಕ್ತಿಗಳಿಂದ ಪ್ರೇರಣೆ ಪಡೆದಿತ್ತು.

1. ಪೂರ್ಣ ಸ್ವರಾಜ್ಯ

ಭಾರತ ಸರ್ಕಾರ ಕಾಯಿದೆ, 1919ರ (Government of India Act, 1919) ಕಾರ್ಯವೈಖರಿಯನ್ನು ಪುನರ್‌ವಿಮರ್ಶಿಸಲು ಮತ್ತು ಸಾಂವಿಧಾನಿಕ ಸುಧಾರಣೆಗಳನ್ನು ಸೂಚಿಸಲು 1927ರಲ್ಲಿ ಸೈಮನ್ ಆಯೋಗವನ್ನು ನೇಮಿಸಲಾಯಿತು. ಆದರೆ ಈ ಆಯೋಗದಲ್ಲಿ ಭಾರತದ ಪ್ರತಿನಿಧಿಗಳಿರದ ಕಾರಣ ಭಾರತದ ಸ್ವಾತಂತ್ರ್ಯ ಚಳವಳಿಯ ನೇತಾರರು ಕುಪಿತರಾಗಿದ್ದರು. ಈ ಬಗ್ಗೆ ಬ್ರಿಟಿಷರನ್ನು ಪ್ರಶ್ನಿಸಿದಾಗ ಅವರು ನ್ಯೂನತೆಯನ್ನು ಸರಿಪಡಿಸಲು ನಿರಾಕರಿಸಿದರು. ಅಲ್ಲದೆ, ಬ್ರಿಟಿಷರ ಪ್ರಯತ್ನಗಳ ಬಗ್ಗೆ ಬೇಸರ ಇರುವುದಾದರೆ ತಮ್ಮದೇ ಸ್ವಂತ ಸಂವಿಧಾನದ ಕರಡನ್ನು ರೂಪಿಸಿಕೊಳ್ಳುವಂತೆ ಭಾರತದ ಮುಖಂಡರಿಗೆ ಸವಾಲೆಸೆದರು.

ಇದಕ್ಕೂ ಮುನ್ನ ಜನರ ಬೆಂಬಲವನ್ನು ಗಳಿಸುವ ಸಾಂವಿಧಾನಿಕ ಸುಧಾರಣೆಗಳ ಸಮಗ್ರ ಯೋಜನೆಯೊಂದನ್ನು ರೂಪಿಸಲು ಭಾರತೀಯರು ಅಸಮರ್ಥರು ಎಂಬ ಮಂತ್ರವನ್ನು ಸೈಮನ್ ಆಯೋಗದ ರಚನೆಗೆ ಕಾರಣರಾಗಿದ್ದ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ವಿದೇಶಾಂಗ ಸಚಿವ ಲಾರ್ಡ್ ಬರ್ಕೆನ್‌ಹೆಡ್ ಆಗಾಗ್ಗೆ ಜಪಿಸುತ್ತಲೇ ಇದ್ದ. ಈ ಸವಾಲುಗಳಿಗೆ ಉತ್ತರವಾಗಿಯೇ ಮೋತಿಲಾಲ್ ನೆಹರು ವರದಿಯನ್ನು ಹೊರತಂದಿದ್ದು, ಆ ವರದಿಯೇ ಮುಂದೆ ಸ್ಥಾಪನೆಗೊಳ್ಳಲಿದ್ದ ಭಾರತ ಗಣರಾಜ್ಯದ ಕರಡು ಸಂವಿಧಾನವಾಗಿತ್ತು. ’ಭಾರತೀಯ ಸಂವಿಧಾನದ ಬುನಾದಿಯು ಮೂಲಭೂತ ಹಕ್ಕುಗಳ ಘೋಷಣೆ ಹಾಗೂ ಸಮಾನತೆಯ ಹಕ್ಕು, ಬದುಕಿನ ಹಕ್ಕು, ವಿಚಾರ ಮತ್ತು ಧಾರ್ಮಿಕ ಆಯ್ಕೆಯ ಸ್ವಾತಂತ್ರ್ಯದ ಹಕ್ಕುಗಳನ್ನು ಖಚಿತಪಡಿಸುವಿಕೆ ಮತ್ತು ತಾರತಮ್ಯಗಳ ವಿರುದ್ಧ ರಕ್ಷಣೆಯ ಖಾತ್ರಿಗಳನ್ನು ಒಳಗೊಂಡಿರುವುದಾಗಿರಬೇಕು’ ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತು. ಅಲ್ಲದೆ ಅದು ಭಾರತವನ್ನು ಮತಧರ್ಮನಿರಪೇಕ್ಷ (ಸೆಕ್ಯುಲರ್) ರಾಷ್ಟ್ರವೆಂದು ಚಿತ್ರಿಸಿತ್ತು. ಆದರೆ ಆ ವರದಿಯು ರಾಜಾಡಳಿತದ ಅಡಿಯಲ್ಲಿ ಸ್ವತಂತ್ರ ರಾಜ್ಯಾಧಿಕಾರವನ್ನು (Dominion Status) ಆಯ್ಕೆ ಮಾಡಿಕೊಂಡಿತ್ತು. ಅಂದರೆ ಭಾರತವು ಬ್ರಿಟಿಷ್ ಅರಸೊತ್ತಿಗೆಗೆ ನಿಷ್ಠೆ ತೋರಬೇಕಿತ್ತು.

ಆದರೆ ರಾಜಾಡಳಿತದ ಅಡಿಯಲ್ಲಿ ಸ್ವತಂತ್ರ ರಾಜ್ಯಾಧಿಕಾರ ನಡೆಸುವ ಈ ಕ್ರಮದ ಬಗ್ಗೆ ಅಸಂತೋಷಗೊಂಡ ಜವಹರಲಾಲ್ ನೆಹರು, ಹಸರತ್ ಮೋಹನಿ ಮತ್ತು ಸುಭಾಷ್ ಬೋಸ್‌ರಂತಹ ನಾಯಕರು ಪೂರ್ಣ ಸ್ವರಾಜ್ಯ ಇಲ್ಲವೇ ಪೂರ್ಣ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿದರು. ಈ ದಿಶೆಯಲ್ಲಿ 1929ರ ಡಿಸೆಂಬರ್ 19ರಂದು ಕಾಂಗ್ರೆಸ್ ತನ್ನ ಲಾಹೋರ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯದ ಘೋಷಣೆಯನ್ನು ಅಂಗೀಕರಿಸಿತು. ಸಂಕ್ಷಿಪ್ತವಾಗಿ ಬರೆಯಲಾಗಿದ್ದ ನಿರ್ಣಯದ ಆರಂಭಿಕ ವಾಕ್ಯಗಳು ಹೀಗಿವೆ:

“ಸ್ವತಂತ್ರರಾಗಲು, ತಮ್ಮ ಶ್ರಮದ ಪ್ರತಿಫಲವನ್ನು ಸವಿಯಲು ಹಾಗೂ ಅಭಿವೃದ್ಧಿಯ ಸಂಪೂರ್ಣ ಅವಕಾಶಗಳನ್ನು ಬಳಸಿಕೊಳ್ಳಲು, ಬದುಕಿನ ಮೂಲಭೂತ ಅಗತ್ಯಗಳನ್ನು ಹೊಂದುವುದು, ಬೇರಾವುದೇ ಜನಸಮುದಾಯದಂತೆ ಭಾರತೀಯರ ಅವಿಚ್ಛಿನ್ನ ಹಕ್ಕಾಗಿದೆ ಎಂದು ನಾವು ನಂಬಿದ್ದೇವೆ. ಅಲ್ಲದೆ ಯಾವುದೇ ಜನತೆಯನ್ನು ಯಾವುದೇ ಸರ್ಕಾರವು ಈ ಹಕ್ಕುಗಳಿಂದ ವಂಚಿತರನ್ನಾಗಿಸಿ ಅವರ ಮೇಲೆ ದಬ್ಬಾಳಿಕೆ ಮಾಡಿದ್ದೇ ಆದಲ್ಲಿ ಆ ಸರ್ಕಾರವನ್ನು ಬದಲಿಸಲು ಅಥವಾ ಕೊನೆಗಾಣಿಸಲು ಆ ಜನರಿಗೆ ಅಧಿಕಾರವಿರುತ್ತದೆ ಎಂದೂ ನಾವು ನಂಬಿದ್ದೇವೆ. ಬ್ರಿಟಿಷ್ ಸರ್ಕಾರವು ಭಾರತದ ಜನತೆಯಿಂದ ಅವರ ಸ್ವಾತಂತ್ರ್ಯವನ್ನು ಕಸಿದುಕೊಂಡಿರುವುದಷ್ಟೇ ಅಲ್ಲ, ಜನರನ್ನು ಶೋಷಣೆ ಮಾಡುವುದರ ಮೂಲಕ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದೆ ಹಾಗೂ ಭಾರತವನ್ನು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಾಶಮಾಡಿದೆ. ಆದ್ದರಿಂದ ಭಾರತವು ಬ್ರಿಟಿಷರೊಂದಿಗಿನ ಸಂಪರ್ಕವನ್ನು ಕಡಿದುಹಾಕಿ ಪೂರ್ಣ ಸ್ವರಾಜ್ಯ ಅಥವಾ ಪೂರ್ಣ ಸ್ವಾತಂತ್ರ್ಯವನ್ನು ಗಳಿಸತಕ್ಕದ್ದು.”

ಇನ್ನು ಮುಂದೆ ಜನವರಿ 26ರಂದು ಪೂರ್ಣ ಸ್ವಾತಂತ್ರ್ಯದ ದಿನವೆಂದು ಆಚರಿಸಬೇಕಾಗಿ ಅಧಿವೇಶನವು ತೀರ್ಮಾನಿಸಿತು. ಅದರಂತೆ 1930ರ ಜನವರಿ 26ರಂದು ದೇಶಾದ್ಯಂತ ಬೃಹತ್ ಸಮಾವೇಶಗಳನ್ನು ಮತ್ತು ಸಭೆಗಳನ್ನು ಹಮ್ಮಿಕೊಳ್ಳಲಾಯಿತು. ಅಲ್ಲಿ ಸಂಪೂರ್ಣ ಸ್ವರಾಜ್ಯ ಘೋಷಣೆಯನ್ನು ಸಾಮೂಹಿಕವಾಗಿ ಓದಿ, ಹೋರಾಟ ನಡೆಸಲು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯವೇ ಏಕೈಕ ಗೌರವಾನ್ವಿತ ಗುರಿ ಎಂದು ಪ್ರಮಾಣೀಕರಿಸಲಾಯಿತು. ಭಾರತದ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಲ್ಲಿ ಇದೊಂದು ಮಹತ್ವಪೂರ್ಣ ಸಂದರ್ಭವಾಗಿದೆ, ಏಕೆಂದರೆ ಮೊಟ್ಟಮೊದಲ ಬಾರಿಗೆ ದೇಶದ ಜನತೆ ಸ್ವತಂತ್ರ ಭಾರತದ ತಮ್ಮ ದೂರದೃಷ್ಟಿಯನ್ನು ರೂಪಿಸಿದ್ದರಲ್ಲದೇ ಅದನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಗೊಳಿಸಿದ್ದರು.

1947ರಲ್ಲಿ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವವರೆಗೂ ಕಾಂಗ್ರೆಸ್ ಈ ದಿನವನ್ನು ಸಂಪೂರ್ಣ ಸ್ವಾತಂತ್ರ್ಯ ದಿನವೆಂದು ಆಚರಿಸುತ್ತಿತ್ತು. ಈ ದಿನದಂದು ಪೂರ್ಣ ಸ್ವರಾಜ್ಯ ಘೋಷಣೆಯನ್ನು ಸಾರ್ವಜನಿಕಗೊಳಿಸಿದ ನೆನಪಿನಲ್ಲಿ ಭಾರತದ ಸಂವಿಧಾನವನ್ನು 1950ರ ಜನವರಿ 26ರಂದೇ ಅಂಗೀಕರಿಸಲಾಯಿತು.

ಧ್ಯೇಯೋದ್ದೇಶ ಗೊತ್ತುವಳಿ

1946ರ ಡಿಸೆಂಬರ್ 13ರಂದು ಸಂವಿಧಾನ ರಚನಾ ಸಭೆಯಲ್ಲಿ ಐತಿಹಾಸಿಕ ಧ್ಯೇಯೋದ್ದೇಶ ಗೊತ್ತುವಳಿಯನ್ನು ಮಂಡಿಸಿದ ಜವಹರಲಾಲ್ ನೆಹರು, ಸಂವಿಧಾನ ರಚನಾ ಸಭೆಯು ಯಾವ ಮೌಲ್ಯಗಳನ್ನಾಧರಿಸಿ ಭಾರತದ ಸಂವಿಧಾನವನ್ನು ರಚಿಸಬೇಕಿದೆ ಎನ್ನುವುದನ್ನು ವಿವರಿಸಿದರು. ಭಾರತವು ಸ್ವತಂತ್ರವಾದ ಸಾರ್ವಭೌಮ ಗಣರಾಜ್ಯವಾಗಲಿದೆ ಮತ್ತು ಈ ಗಣರಾಜ್ಯದೊಳಗೆ ಬರುವ ಎಲ್ಲಾ ಪ್ರದೇಶಗಳೂ ಸ್ವಾಯತ್ತ ಘಟಕಗಳಾಗಿರಲಿವೆ ಎಂದು ಆ ಗೊತ್ತುವಳಿಯಲ್ಲಿ ತಿಳಿಸಲಾಗಿತ್ತು. ಅದು ಭಾರತದ ಜನತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಭರವಸೆಯನ್ನು; ಸ್ಥಾನಮಾನ, ಅವಕಾಶಗಳು ಮತ್ತು ಕಾನೂನಿನ ಸಮಾನತೆಯನ್ನು; ಕಾನೂನು ಮತ್ತು ಸಾರ್ವಜನಿಕ ನೈತಿಕತೆಯ ಷರತ್ತಿಗೆ ಒಳಪಟ್ಟಂತೆ ವಿಚಾರ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಪೂಜಿಸುವ ಸ್ವಾತಂತ್ರ್ಯದ ಭರವಸೆಯನ್ನು; ವೃತ್ತಿ ಆಯ್ಕೆಯ, ಸಂಘ ಕಟ್ಟಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು.

ಈಗ ಸಂವಿಧಾನದ ಒಂದು ಭಾಗವಾಗಿರುವ ಪೀಠಿಕೆಯ ಪ್ರಾಥಮಿಕ ಪಠ್ಯವು ನೆಹರು ಅವರ ಧ್ಯೇಯೋದ್ದೇಶ ಗೊತ್ತುವಳಿಯಿಂದ ಪ್ರೇರಣೆ ಪಡೆದಿತ್ತು ಎನ್ನುವುದು ಗೊತ್ತುವಳಿಯನ್ನು ಒಮ್ಮೆ ಓದಿದರೆ ತಿಳಿಯುತ್ತದೆ.
ಗೊತ್ತುವಳಿಯಲ್ಲಿ ಹೀಗೆ ಹೇಳಲಾಗಿದೆ

(1) “ಭಾರತವನ್ನು ಸ್ವತಂತ್ರ ಸಾರ್ವಭೌಮ ಗಣರಾಜ್ಯವನ್ನಾಗಿ ಘೋಷಣೆ ಮಾಡಲು ಮತ್ತು ಭಾರತದ ಭವಿಷ್ಯದ ಆಡಳಿತಕ್ಕಾಗಿ ಒಂದು ಸಂವಿಧಾನವನ್ನು ರಚಿಸಲು ಈ ಸಂವಿಧಾನ ರಚನಾ ಸಭೆಯು ತನ್ನ ಅಚಲವಾದ ದೃಢ ನಿಶ್ಚಯವನ್ನು ಘೋಷಿಸುತ್ತದೆ.
[…]

(4) ಸಾರ್ವಭೌಮ ಸ್ವತಂತ್ರ ಭಾರತವನ್ನು, ಅದರ ಅಧಿಕಾರವನ್ನು ಹಾಗೂ ಸಾಂವಿಧಾನಿಕ ವಿಭಾಗಗಳು ಮತ್ತು ಸರ್ಕಾರದ ಅಂಗಗಳನ್ನು, ಜನರಿಂದ ಪಡೆಯಲಾಗಿದೆ ಮತ್ತು

(5) ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು; ಸ್ಥಾನಮಾನದ ಸಮಾನತೆಯನ್ನು, ಅವಕಾಶಗಳಲ್ಲಿನ ಸಮಾನತೆಯನ್ನು ಮತ್ತು ಕಾನೂನಿನಲ್ಲಿ ಸಮಾನತೆಯನ್ನು; ಕಾನೂನು ಮತ್ತು ಸಾರ್ವಜನಿಕ ನೈತಿಕತೆಯ ಷರತ್ತಿಗೆ ಒಳಪಟ್ಟಂತೆ ವಿಚಾರ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ನಂಬಿಕೆ, ಶ್ರದ್ಧೆ ಮತ್ತು ಪೂಜಿಸುವ ಸ್ವಾತಂತ್ರ್ಯವನ್ನು, ವೃತ್ತಿ ಆಯ್ಕೆಯ ಮತ್ತು ಸಂಘ ಕಟ್ಟಿಕೊಂಡು ಕೆಲಸ ಮಾಡುವ ಸ್ವಾತಂತ್ರ್ಯವನ್ನು ಭಾರತದ ಎಲ್ಲ ಜನರಿಗೂ ಖಾತ್ರಿಪಡಿಸಲಾಗುವುದು ಮತ್ತು ಭದ್ರಪಡಿಸಲಾಗುವುದು; ಹಾಗೂ

(6) ಅಲ್ಪಸಂಖ್ಯಾತರಿಗೆ, ಹಿಂದುಳಿದ ಮತ್ತು ಬುಡಕಟ್ಟು ಪ್ರದೇಶಗಳಿಗೆ ಹಾಗೂ ದಮನಿತ ಮತ್ತಿತರ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕಲ್ಪಿಸಲಾಗುವುದು; ಮತ್ತು

(7) ನಾಗರಿಕ ರಾಷ್ಟ್ರಗಳ ನ್ಯಾಯ ಮತ್ತು ಕಾನೂನಿಗೆ ಅನ್ವಯವಾಗುವಂತೆ ಗಣರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನೂ ಮತ್ತು ಭೂಪ್ರದೇಶ, ಸಮುದ್ರ ಮತ್ತು ವಾಯುಪ್ರದೇಶದ ಮೇಲೆ ಅದರ ಸಾರ್ವಭೌಮ ಹಕ್ಕುಗಳನ್ನು ಕಾಯ್ದುಕೊಳ್ಳಲಾಗುವುದು; ಹಾಗೂ

(8) ಈ ಪುರಾತನ ಭೂಮಿಯು ವಿಶ್ವದಲ್ಲೇ ತನಗೆ ಯೋಗ್ಯವಾದ ಮತ್ತು ಗೌರವಯುತವಾದ ಸ್ಥಾನವನ್ನು ಗಳಿಸಿ ವಿಶ್ವ ಶಾಂತಿ ಮತ್ತು ಮಾನವಕುಲದ ಕಲ್ಯಾಣವನ್ನು ಉತ್ತೇಜಿಸಲು ಇಚ್ಚಾಪೂರ್ವಕವಾಗಿ ತನ್ನ ಪೂರ್ಣ ಕೊಡುಗೆ ನೀಡುತ್ತದೆ.”

ರಾಜ್ಯಗಳು ಮತ್ತು ಅಲ್ಪಸಂಖ್ಯಾತರು: ಡಾ. ಬಿ.ಆರ್. ಅಂಬೇಡ್ಕರ್

ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಕಾರ್ಯಕಾರಿ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಒದಗಿಸಬೇಕಾದ ರಕ್ಷಣಾತ್ಮಕ ಕ್ರಮಗಳ ಬಗ್ಗೆ ಸಂವಿಧಾನ ರಚನಾ ಸಭೆಗೆ ನಿವೇದನಾ ಪತ್ರವೊಂದನ್ನು ಸಲ್ಲಿಸಬೇಕಿದ್ದು ಅದನ್ನು ಬರೆದುಕೊಡುವಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇಳಿಕೊಂಡಾಗ ಅವರು ’ರಾಜ್ಯಗಳು ಮತ್ತು ಅಲ್ಪಸಂಖ್ಯಾತರು’ ಕೃತಿಯನ್ನು ರಚಿಸಿದರು. ಈ ಕೃತಿಯನ್ನು ಸಂವಿಧಾನದ ಅನುಚ್ಛೇದಗಳ ರೂಪದಲ್ಲಿ ಬರೆಯಲಾಗಿದ್ದು, ಇದು ಬಹುತೇಕ ’ರಾಜ್ಯಗಳ ಒಕ್ಕೂಟವಾದ ಭಾರತ’ಕ್ಕೆ ರೂಪಿಸಲಾದ
ಕಿರು-ಸಂವಿಧಾನದಂತಿತ್ತು.

ಈ ನಿವೇದನಾ ಪತ್ರವು ಕೇವಲ ಅಲ್ಪಸಂಖ್ಯಾತರಿಗೆ ಕಲ್ಪಿಸಬೇಕಾದ ರಕ್ಷಣಾತ್ಮಕ ಕ್ರಮಗಳಿಗೆ ಸೀಮಿತವಾದ ದಸ್ತಾವೇಜಾಗಿರಲಿಲ್ಲ. ಅದು ಪ್ರಜೆಗಳ ಮೂಲಭೂತ ಹಕ್ಕುಗಳು ಹಾಗೂ ಈ ಹಕ್ಕುಗಳ ಮೇಲಿನ ದಾಳಿಗಳಿಗೆ (ಅಸಮಾನವಾಗಿ ನಡೆಸಿಕೊಳ್ಳುವುದು, ತಾರತಮ್ಯ ಮಾಡುವುದು, ಆರ್ಥಿಕ ಶೋಷಣೆ, ಇತ್ಯಾದಿ ಸೇರಿದಂತೆ) ಪರಿಹಾರಗಳನ್ನು ಸೂಚಿಸುವ ಬಗ್ಗೆ ವಿಸ್ತೃತವಾಗಿ ಗಮನ ಹರಿಸಿತ್ತು. ಹಾಗೂ, ಈ ಎಲ್ಲ ಹಕ್ಕುಗಳೊಂದಿಗೆ, ಬದುಕುವ ಹಕ್ಕು, ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಸಮಾನತೆಯ ಹಕ್ಕುಗಳನ್ನು ಕಲ್ಪಿಸಿತು. ಭಾರತ ಸಂಯುಕ್ತ ಸಂಸ್ಥಾನವು ಈ ಕೆಳಗಿನ ನೋಟಗಳನ್ನು ಹೊಂದಿರಬೇಕು ಎಂದು ಅದರಲ್ಲಿ ಹೇಳಲಾಗಿತ್ತು:

(1) ರಾಜ್ಯಗಳ ಒಕ್ಕೂಟವಾದ ಭಾರತ, ನಮಗೂ ಮತ್ತು ನಮ್ಮ ಮುಂದಿನ ತಲೆಮಾರುಗಳಿಗೂ ಸ್ವಯಂ-ಆಡಳಿತ ಮತ್ತು ಒಳ್ಳೆಯ ಸರ್ಕಾರಗಳ ಅನುಗ್ರಹವನ್ನು ಪಡೆಯಬೇಕು,

(2) ಪ್ರತಿಯೊಬ್ಬ ಪ್ರಜೆಯ ಬದುಕಿನ ಹಕ್ಕು, ಸ್ವಾತಂತ್ರ್ಯದ ಹಕ್ಕು, ಸಂತೋಷದ ಹಕ್ಕು ಹಾಗೂ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಧರ್ಮಾಚರಣೆಯ ಸ್ವಾತಂತ್ರ್ಯದ ಹಕ್ಕನ್ನು ಕಾಯ್ದುಕೊಳ್ಳಬೇಕು,

(3) ತುಳಿತಕ್ಕೊಳಗಾದ ವರ್ಗಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆಯನ್ನು ತೊಡೆದುಹಾಕಬೇಕು,

(4) ಪ್ರತಿಯೊಬ್ಬ ಪ್ರಜೆಯೂ ಕೊರತೆಯಿಂದ, ಭೀತಿಯಿಂದ ಮುಕ್ತರಾಗಲು ಸಾಧ್ಯವಾಗಬೇಕು; ಹಾಗೂ

(5) ಆಂತರಿಕ ಅವ್ಯವಸ್ಥೆಯ ಮತ್ತು ಬಾಹ್ಯ ಆಕ್ರಮಣದ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯಗಳ ಒಕ್ಕೂಟವಾದ ಭಾರತ ಈ ಸಂವಿಧಾನವನ್ನು ಅನುಷ್ಠಾನಗೊಳಿಸಬೇಕು.

ಜನತೆಯಾದ ನಾವು…

ಯಾರ ಹೆಸರಿನಲ್ಲಿ ಭಾರತದ ಸಂವಿಧಾನವನ್ನು ಆರಂಭಿಸಬೇಕು ಎಂಬ ಪ್ರಶ್ನೆ ಎದುರಾದಾಗ ಅದನ್ನು ಸರ್ವಾನುಮತದಿಂದ ನಿರ್ಧರಿಸಲಾಗಲಿಲ್ಲ. ಅದರ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ತೀವ್ರ ವಾಗ್ವಾದಗಳು ನಡೆದವು. ’ಈ ಸಂವಿಧಾನದ ಬೇರುಗಳು, ಅಧಿಕಾರ, ಸಾರ್ವಭೌಮತ್ವ ಎಲ್ಲವೂ ಜನರಿಂದಲೇ ಪ್ರಾಪ್ತವಾಗಿರುತ್ತವೆ ಎಂದು ಪೀಠಿಕೆಯಲ್ಲಿರುತ್ತದೆ’ ಎಂದು ಅಂಬೇಡ್ಕರ್ ಅವರು ಅದಾಗಲೇ ಘೋಷಿಸಿದ್ದರು. ’ದೇವರು’ ಅಥವಾ ’ಗಾಂಧಿ ಎಂಬ ಪದಗಳನ್ನು ಅಥವಾ ಇವೆರಡರ ಸಂಯೋಜನೆಯನ್ನು, ’ಜನತೆಯಾದ ನಾವು’ ಎಂಬ ಪದಗಳ ಬದಲಿಗೆ ಅಥವಾ ಅವುಗಳಿಗೆ ಮೊದಲು ಹಾಕಲು ಸಂವಿಧಾನ ರಚನಾ ಸಭೆಯ ಅನೇಕ ಸದಸ್ಯರು ಪ್ರಸ್ತಾಪಿಸಿದ್ದಕ್ಕೆ ಪ್ರತ್ಯುತ್ತರವಾಗಿ ಅಂಬೇಡ್ಕರ್ ಮೇಲಿನ ಮಾತುಗಳನ್ನು ಹೇಳಿದ್ದರು. ಸಂವಿಧಾನವು ಕೇವಲ ರಾಜಕೀಯ ಅಥವಾ ಸಾಮಾಜಿಕ ದಸ್ತಾವೇಜಲ್ಲ, ಅದೊಂದು ಆಧ್ಯಾತ್ಮಿಕ ದಸ್ತಾವೇಜು ಎಂಬ ವಾದವನ್ನು ಮುಂದಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನವನ್ನು ದೇವರ ಮತ್ತು ರಾಷ್ಟ್ರಪಿತನ ಹೆಸರಿನಲ್ಲಿ ಬರೆಯುವುದೇ ಸರಿ ಎಂಬುದು ಹಲವು ಸದಸ್ಯರ ಅಭಿಪ್ರಾಯವಾಗಿತ್ತು.

ಆದರೆ, ಸಂವಿಧಾನ ರಚನಾ ಸಭೆಯ ಇತರ ಸದಸ್ಯರು ಈ ಆಲೋಚನೆಯನ್ನು ತೀವ್ರವಾಗಿ ವಿರೋಧಿಸಿದರು. ಏಕೆಂದರೆ ದೇವರನ್ನು ಉಲ್ಲೇಖಿಸಿದರೆ ಅದು ಸಂವಿಧಾನ ಸಭೆಯ ದೃಷ್ಟಿಕೋನವನ್ನು ಜನರ ಮೇಲೆ ಹೇರಿದಂತೆ ಆಗುತ್ತದೆ, ಹಾಗೂ ಸಂವಿಧಾನದ ಪೀಠಿಕೆಯು ಭರವಸೆ ನೀಡುವ ಸ್ವಾತಂತ್ರ್ಯಗಳ- ವಿಚಾರ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಶ್ರದ್ಧೆ ಮತ್ತು ಪೂಜೆಯ ಸ್ವಾತಂತ್ರ್ಯಗಳ- ಉಲ್ಲಂಘನೆಯಾಗುತ್ತದೆ. ಹಾಗೆಯೇ, ಗಾಂಧಿಯ ಹೆಸರನ್ನು ಸೇರಿಸುವುದಕ್ಕೆ ಸಂಬಂಧಿಸಿದಂತೆ ಬಂದ ಸೂಚನೆಯ ಕುರಿತೂ ಚರ್ಚೆ ನಡೆದು, ನಮ್ಮ ಸಂವಿಧಾನವು ಗಾಂಧಿವಾದಿ ಸಂವಿಧಾನವಲ್ಲದ ಕಾರಣ ಇಲ್ಲಿ ಗಾಂಧಿಯ ಹೆಸರನ್ನು ಸೇರಿಸುವುದು ಸರಿಯಾಗುವುದಿಲ್ಲವೆಂದು ತೀರ್ಮಾನಿಸಿ ಅದನ್ನು ಹಿಂಪಡೆಯಲಾಯಿತು.

ಅಂತಿಮವಾಗಿ ಸಂವಿಧಾನ ರಚನಾ ಸಭೆ ಅಂಗೀಕರಿಸಿದ ಪೀಠಿಕೆಯನ್ನು ಗಮನಿಸಿದರೆ, ಈ ಸಂವಿಧಾನವು ’ಜನತೆಯಾದ ನಾವು’ ’ಅಂಗೀಕರಿಸಿ, ಜಾರಿಗೊಳಿಸಿ ನಮಗೆ ನಾವೇ ಕೊಟ್ಟುಕೊಳ್ಳುವ’ ಆಧಾರದ ಮೇಲೆ ಸ್ಥಾಪನೆಗೊಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಭಾರತ ದೇಶದ ಸಂಸ್ಥಾಪನಾ ಕ್ಷಣದ ಸಾರವಿರುವುದು ಈ ವಾಸ್ತವಾಂಶದಲ್ಲೇ. ಅದು ಮಬ್ಬಾಗಿರುವ ಗತಕಾಲಕ್ಕೆ ಜೋತುಬೀಳದೆ, ಈ ದೇಶದ ಜನರು ತಮಗೆ ತಾವೇ ಈ ಸಂವಿಧಾನವನ್ನು ಕೊಟ್ಟುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಭದ್ರವಾಗಿ ನೆಲೆನಿಂತಿದೆ.

ಸಂವಿಧಾನ ರಚನಾ ಸಭೆಯು, ತಮಗೆ ತಾವೇ ಒಂದು ’ಸಾರ್ವಭೌಮ, ಪ್ರಜಾಪ್ರಭುತ್ವವಾದಿ, ಗಣರಾಜ್ಯವನ್ನು ಕೊಟ್ಟುಕೊಳ್ಳಲು ಪ್ರತಿಜ್ಞೆಗೈದ ’ಪ್ರಜೆಗಳ’ ಪ್ರಾತಿನಿಧಿಕ ಸಭೆ ಮಾತ್ರ ಆಗಿತ್ತು ಎನ್ನುವುದು ಪೀಠಿಕೆಯ ಪಠ್ಯ ಮತ್ತು ಧೋರಣೆಗಳಲ್ಲಿ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಅಧಿಕಾರದ ಮೂಲ ಪ್ರಜೆಗಳಾಗಿರುತ್ತಾರೆಯೇ ವಿನಃ ರಾಜನಲ್ಲ ಎಂಬ ಗಣರಾಜ್ಯದ ಚಿಂತನೆಯನ್ನು ಸಂವಿಧಾನವು ತನ್ನ ಮೂಲದಲ್ಲೇ ತಿಳಿಸುತ್ತದೆ. ಆಡಳಿತ ನಡೆಸುವ ವಿಚಾರಗಳನ್ನು ಮತ್ತು ನಮ್ಮ ಬದುಕನ್ನು ಆವರಿಸಿಕೊಂಡಿರುವ ಆಡಳಿತಾತ್ಮಕ ಸಂಸ್ಥೆಗಳನ್ನು ದೈವಿಕ ವಿಧಿವಿಧಾನಗಳು ನಿರ್ದೇಶಿಸಿಲ್ಲ, ಅವುಗಳನ್ನು ’ಪ್ರಜೆಗಳಾದ ನಾವು’ಗಳೇ ರೂಪಿಸಿಕೊಂಡಿದ್ದೇವೆ.

ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ

ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯೋದ್ದೇಶ ಗೊತ್ತುವಳಿಯನ್ನು ಮಂಡಿಸಿದ ಜವಹರಲಾಲ್ ನೆಹರು ಅವರು, ಈ ಸಭೆಯು ’ಸ್ವತಂತ್ರ, ಸಾರ್ವಭೌಮ, ಗಣರಾಜ್ಯವನ್ನು ನಿರ್ಮಿಸಲು ನೆರವಾಗಬೇಕು ಎಂದು ಪ್ರಸ್ತಾಪಿಸಿದರು. ಆದರೆ ಕರಡು ರಚನಾ ಸಮಿತಿಯು ಅದನ್ನು ಚರ್ಚೆಗೆಂದು ಕೈಗೆತ್ತಿಕೊಂಡಾಗ ಅದು ಮಹತ್ವದ ಬದಲಾವಣೆಗಳನ್ನು ಕಂಡಿತು. ’ಸಾರ್ವಭೌಮ’ ಮತ್ತು ’ಸ್ವತಂತ್ರ ಎರಡೂ ಒಂದೇ ಅರ್ಥವನ್ನು ನೀಡುತ್ತವೆಂದು ಅಭಿಪ್ರಾಯಪಟ್ಟ ಸಮಿತಿಯು ಅದರ ಬದಲಿಗೆ ’ಸಾರ್ವಭೌಮ, ಪ್ರಜಾಸತ್ತಾತ್ಮಕ, ಗಣರಾಜ್ಯ ಎಂದು ಅಂಗೀಕರಿಸಿತು. ಇಲ್ಲಿ ಸಾರ್ವಭೌಮತೆಯು ಜನರಿಂದ ತನ್ನ ಅಧಿಕಾರವನ್ನು ಪಡೆಯುತ್ತದೆ. ಇದು ಅರಸೊತ್ತಿಗೆಗೆ ಅಸಂಗತವಾದ ವಿಚಾರವಾಗಿದೆ. ಇದು ಸ್ವಯಂ ಆಡಳಿತ ನಡೆಸುವ ಭಾರತದ ಜನರ ಹಕ್ಕನ್ನು ಎತ್ತಿಹಿಡಿಯುತ್ತದೆ.

ನೆಹರು ಕಲ್ಪಿಸಿಕೊಂಡ ಭಾರತವು ರಾಜಮನೆತನದ ಆಳ್ವಿಕೆಯಿಂದ ದೂರಸರಿದ ಗಣರಾಜ್ಯವಾಗಿತ್ತು. ’ಪ್ರಜಾಸತ್ತಾತ್ಮಕ’ ಎಂಬ ಪದ ಇಲ್ಲದಿದ್ದಾಗ ಅವರು ಹೇಳಿದ್ದು ಹೀಗೆ: “… ನಾವು ’ಪ್ರಜಾಸತ್ತಾತ್ಮಕ’ ಎಂಬ ಪದವನ್ನು ಏಕೆ ಬಳಸಿಲ್ಲವೆಂದರೆ ’ಗಣರಾಜ್ಯ ಎಂಬ ಪದದಲ್ಲೇ ಸ್ವಾಭಾವಿಕವಾಗಿ ಆ ಪದವೂ ಇದೆ ಎಂದು ನಮಗನ್ನಿಸಿದ್ದರಿಂದ ಅನಗತ್ಯ ಪದಗಳನ್ನು ಬಳಸುವುದು ನಮಗೆ ಬೇಕಿರಲಿಲ್ಲ [..]”

ಎಲ್ಲ ಗಣರಾಜ್ಯಗಳೂ ಅಗತ್ಯವಾಗಿ ಪ್ರಜಾಸತ್ತಾತ್ಮಕವಾಗಿರುವುದಿಲ್ಲ. ಹಾಗಾಗಿ ಗಣರಾಜ್ಯ ಎಂಬುದರ ಬಗ್ಗೆ ನೆಹರು ಅವರದ್ದು ತಪ್ಪು ಗ್ರಹಿಕೆಯಾಗಿತ್ತು. ಆದರೆ ಅವರಿಗೆ ಭಾರತದ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಬಗ್ಗೆ ಅಚಲ ವಿಶ್ವಾಸವಿತ್ತು. ’ನಾವು ಪ್ರಜಾಸತ್ತಾತ್ಮಕ ಸಂಸ್ಥೆಗಳ ಪರವಾಗಿ ನಿಲ್ಲುತ್ತೇವೆ ಎಂಬುದಕ್ಕೆ ನಮ್ಮ ಇಡೀ ಗತಕಾಲವೇ ಸಾಕ್ಷಿಯಾಗಿರುವುದರಿಂದ ಪ್ರಜಾಪ್ರಭುತ್ವದ ಬಗ್ಗೆ ಒತ್ತಿ ಹೇಳುವುದು ಅನಗತ್ಯ ಎಂದು ನೆಹರು ಹೇಳಿದರು.

ಭಾರತದ ಪ್ರಜಾಪ್ರಭುತ್ವದ ಗುಣಲಕ್ಷಣಗಳ ಬಗ್ಗೆ ನೆಹರು ಅವರ ದೃಷ್ಟಿಕೋನವು ಗಮನಾರ್ಹವಾದದ್ದು:

“ಈ ಹಿಂದೆ ಪ್ರಜಾಪ್ರಭುತ್ವವನ್ನು ಮುಖ್ಯವಾಗಿ ರಾಜಕೀಯ ಪ್ರಜಾಪ್ರಭುತ್ವ ಎಂದು ಕರೆಯಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಒಂದು ಮತದ ಅರ್ಹತೆ ಇರುವುದೇ ಪ್ರಜಾಪ್ರಭುತ್ವದ ಗುರುತಾಗಿತ್ತು. ಆದರೆ ಒಬ್ಬ ನಿರ್ಗತಿಕ ವ್ಯಕ್ತಿಗೆ, ಹಸಿವೆಯಿಂದ ಬಳಲುತ್ತಿರುವವರಿಗೆ ಒಂದು ಮತವು ಹೆಚ್ಚಿನದೇನನ್ನೂ ದೊರಕಿಸಿಕೊಡುವುದಿಲ್ಲ. ರಾಜಕೀಯ ಪ್ರಜಾಪ್ರಭುತ್ವವನ್ನು ಕ್ರಮೇಣವಾಗಿ ಆರ್ಥಿಕ ಪ್ರಜಾಪ್ರಭುತ್ವ, ಸಮಾನತೆ, ಸಮಾನವಾದ ಹಂಚಿಕೆ ಹಾಗೂ ಒಟ್ಟಾರೆ ಅಸಮಾನತೆಗಳ ನಿರ್ಮೂಲನೆಯನ್ನು ಹಂತಹಂತವಾಗಿ ಸಾಧಿಸಲು ಬಳಸಿಕೊಳ್ಳಬಹುದೇ ಹೊರತಾಗಿ ರಾಜಕೀಯ ಪ್ರಜಾಪ್ರಭುತ್ವವೊಂದೇ ಸಾಕಾಗುವುದಿಲ್ಲ.” ಹಾಗಾಗಿ, ಪೀಠಿಕೆಯಲ್ಲಿ ಹೇಳಿರುವಂತೆ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸಮಾಜವನ್ನು ನಿರ್ಮಾಣ ಮಾಡುವುದರಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಅಡಗಿದೆಯೇ ಹೊರತು ಸಾರ್ವತ್ರಿಕ ವಯಸ್ಕ ಮತದಾನದ ಪರಿಕಲ್ಪನೆಯೊಂದೇ ಪ್ರಜಾಪಭುತ್ವ ಆಗುವುದಿಲ್ಲ ಎನ್ನುವುದನ್ನು ಗಮನಿಸಬೇಕು.

ಪ್ರಜಾಪ್ರಭುತ್ವದ ಸಾಂವಿಧಾನಿಕ ಕಲ್ಪನೆಗೆ ಅಂಬೇಡ್ಕರ್ ಒಂದು ಪ್ರಮುಖ ಆಯಾಮವನ್ನು ಸೇರಿಸುತ್ತಾರೆ. ಸಾಮಾನ್ಯವಾಗಿ ಪ್ರಜಾಪ್ರಭುತ್ವವನ್ನು ಬಹುಸಂಖ್ಯಾತರ ಅಭಿಪ್ರಾಯ ಎಂದು ಬಿಂಬಿಸಲಾಗುತ್ತದೆ. ಆದರೆ, ಬಹುಸಂಖ್ಯಾತರ ಅಭಿಪ್ರಾಯವನ್ನಷ್ಟೇ ಆಧರಿಸಿದ ಪ್ರಜಾಪ್ರಭುತ್ವದ ಲೋಪದೋಷಗಳು ಭಾರತದ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ’ಕೋಮುವಾದಿ ಬಹುಸಂಖ್ಯಾತ’ರೆಂದು ಅಂಬೇಡ್ಕರ್ ಅವರಿಂದ ಕರೆಯಲ್ಪಟ್ಟ ಇವರು ಇಂದು ಪ್ರಾಬಲ್ಯ ಹೊಂದಿದ್ದಾರೆ. ಜಾತಿ, ಧರ್ಮ, ಪಂಗಡಗಳನ್ನು ಆಧರಿಸಿ ಮತ ಚಲಾವಣೆ ಮಾಡುವ ಪ್ರಜಾಪ್ರಭುತ್ವದಲ್ಲಿ ಕೋಮುವಾದಿ ಬಹುಸಂಖ್ಯಾತರೇ ಅಧಿಕಾರದಲ್ಲಿ ಇರುತ್ತಾರೆ. ಇದಕ್ಕೆ ಪ್ರತಿಯಾಗಿ ರಾಜಕೀಯ ಕಾರ್ಯಕ್ರಮಗಳನ್ನು, ಸಿದ್ಧಾಂತವನ್ನು ಆಧರಿಸಿ ಜನರು ಮತ ಚಲಾವಣೆ ಮಾಡಿದರೆ ಆಗ ರಾಜಕೀಯ ಬಹುಸಂಖ್ಯಾತರ ಪ್ರಜಾಪ್ರಭುತ್ವ ನಿರ್ಮಾಣಗೊಳ್ಳುತ್ತದೆ. ಆಗ ಸಿದ್ಧಾಂತ ಮತ್ತು ಕಾರ್ಯಕ್ರಮಗಳು ಬದಲಾದಂತೆ ರಾಜಕೀಯ ಆಡಳಿತವೂ ಬದಲಾಗುತ್ತಾ ಹೋಗುತ್ತದೆ. ಇಲ್ಲದೇಹೋದಲ್ಲಿ ಕೋಮುವಾದಿ ಬಹುಸಂಖ್ಯಾತರು ಆಡಳಿತದ ಚುಕ್ಕಾಣಿಯನ್ನು ಶಾಶ್ವತವಾಗಿ ಹಿಡಿದುಕೊಳ್ಳುತ್ತಾರೆ. ಅಂತಹ ಸಮಾಜಗಳು ಬಹುಸಂಖ್ಯಾತರ ಪ್ರಜಾಪ್ರಭುತ್ವಗಳಾಗಿಬಿಡುತ್ತವೆ; ಆದರೆ ಭಾರತ ಒಂದು ಸಾಂವಿಧಾನಿಕ ಪ್ರಜಾಪ್ರಭುತ್ವ ಆಗಬೇಕು ಎನ್ನುವುದು ಅಂಬೇಡ್ಕರ್‌ರ ಕಲ್ಪನೆಯಾಗಿತ್ತು.

ಹಾಗಾದರೆ ಭಾರತದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಹುಟ್ಟುಹಾಕುವುದಾದರೂ ಹೇಗೆ?

ಮೊದಲನೆಯದಾಗಿ ಭಾರತದ ಪ್ರಜಾಪ್ರಭುತ್ವವು ಮೂಲಭೂತ ಹಕ್ಕುಗಳ ಅಧ್ಯಾಯದ ಮೂಲಕ ಬಹುಸಂಖ್ಯಾತರ ಅಧಿಕಾರಕ್ಕೆ ಕೆಲವು ಮಿತಿಗಳನ್ನು ವಿಧಿಸುತ್ತದೆ. ’ತಿರಸ್ಕೃತರಾದ ಮತ್ತು ಜನಾನುರಾಗಿಗಳಲ್ಲದ ಅಲ್ಪಸಂಖ್ಯಾತರ’ ಮೂಲಭೂತ ಹಕ್ಕುಗಳನ್ನು ಬಹುಸಂಖ್ಯಾತರ ಪೂರ್ವಾಗ್ರಹಕ್ಕೆ ಬಲಿ ಕೊಡದಂತೆ ಖಾತ್ರಿಪಡಿಸುವುದು ನ್ಯಾಯಾಂಗದ ಕರ್ತವ್ಯವಾಗಿದೆ. ಅಂತಹ ಅಲ್ಪಸಂಖ್ಯಾತರ ಪೈಕಿ ಲೈಂಗಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ (LGBTQI) ಸಮುದಾಯವೂ ಒಂದು. ಈ ಅಲ್ಪಸಂಖ್ಯಾತ ಸಮುದಾಯವು ಭಾರತೀಯ ದಂಡಸಂಹಿತೆ 1860ರ ಕಲಂ 377ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಹುಸಂಖ್ಯಾತವಾದದ ಆಧಾರದ ಮೇಲೆ ಅಲ್ಪಸಂಖ್ಯಾತರ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ತರ್ಕವನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯವು, ’ಪ್ರೌಢರ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆಗೆ ಕಲಂ 377 ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

“ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿ ಘನತೆಯ ವಿಷಯವನ್ನು ಬಹುಸಂಖ್ಯಾತ ಸರ್ಕಾರಗಳ ಹಿಡಿತದ ವ್ಯಾಪ್ತಿಯಿಂದಾಚೆ ಇರಿಸುವುದೇ ಭಾರತ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಅಧ್ಯಾಯದ ಉದ್ದೇಶವಾಗಿದೆ. ಆ ಮೂಲಕ, ಇತರ ಹಕ್ಕುಗಳ ಜೊತೆಗೆ ’ದ್ವೀಪದಂತೆ ಪ್ರತ್ಯೇಕವಾಗಿರುವ’ ಅಲ್ಪಸಂಖ್ಯಾತರ ಹಕ್ಕುಗಳನ್ನೂ ಜಾರಿಗೊಳಿಸಲು ಸಾಂವಿಧಾನಿಕ ನೈತಿಕತೆಯನ್ನು ಅನ್ವಯ ಮಾಡಲು ಸಾಧ್ಯವಾಗಿದೆ. ಈ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕುಗಳ ಸಂರಕ್ಷಕನಾಗಿರುವುದರಿಂದ ಅಂತಹದ್ದೊಂದು ಅಲ್ಪಸಂಖ್ಯಾತ ಸಮುದಾಯವು ಈ ನ್ಯಾಯಾಲಯದ ಕದ ತಟ್ಟಿದೆ. ಈ ಮೂಲಭೂತ ಹಕ್ಕುಗಳು ಚುನಾವಣಾ ಫಲಿತಾಂಶಗಳನ್ನು ಆಧರಿಸಿರುವುದಿಲ್ಲ. ಸಾಮಾಜಿಕ ನೈತಿಕತೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ಯಾವುದು ಸಾಂಪ್ರದಾಯಿಕ ಎಂದು ನಿರ್ಧರಿಸುವುದನ್ನು ಬಹುಸಂಖ್ಯಾತ ಸರ್ಕಾರಗಳ ವ್ಯಾಪ್ತಿಗೆ ಬಿಟ್ಟಿರುವುದಿಲ್ಲ. ಭಾರತದಲ್ಲಿ ಸಂವಿಧಾನವಾದ ಎಂಬ ಬ್ರಹ್ಮಾಂಡದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯವು ಧ್ರುವತಾರೆ ಇದ್ದಂತೆ. ಯಾರಾದರೂ ಒಂದು ನಿರ್ದಿಷ್ಟ ಸಾಮಾಜಿಕ ನೈತಿಕತೆಯ ದೃಷ್ಟಿಕೋನವನ್ನು ಹೇರಲು ಯತ್ನಿಸಿದರೆ ವಿವಿಧ ಬಹುಸಂಖ್ಯಾತ ಆಳ್ವಿಕೆಗಳನ್ನು ಕದಲಿಸುವ ಮೂಲಕ ಅದನ್ನು ಸಾಂವಿಧಾನಿಕ ನೈತಿಕತೆ ಹೊಡೆದುರುಳಿಸುವುದು ಸರ್ವೇಸಾಮಾನ್ಯ.”

ಎರಡನೆಯದಾಗಿ, ಪ್ರಜಾಪ್ರಭುತ್ವವು ನಿಯತಕಾಲಿಕ ಚುನಾವಣೆಗಳನ್ನು ಮೀರಿ ಒಂದು ಜೀವನಶೈಲಿಯಾಗಬೇಕು. ಅಂಬೇಡ್ಕರ್ ಹೇಳುವಂತೆ, “ಪ್ರಜಾಪ್ರಭುತ್ವವು ಕೇವಲ ಒಂದು ಮಾದರಿಯ ಸರ್ಕಾರವಷ್ಟೇ ಅಲ್ಲ. ಮೂಲತಃ ಅದೊಂದು ಸಹಜೀವನದ ಕ್ರಮ, ಸಂಯೋಜಿತ ಸಂವಹನದ ಅನುಭವ. ಅದು ಅಗತ್ಯವಾಗಿ ಸಹಜೀವಿಗಳ ಬಗೆಗಿನ ಗೌರವದ ಮತ್ತು ಆದರದ ಧೋರಣೆಯಾಗಿದೆ.”

’ಸಹಜೀವನ’ ಮತ್ತು ’ಸಂಯೋಜಿತ ಸಂವಹನದ ಅನುಭವ’ ಎಂದರೆ ಅಂಬೇಡ್ಕರ್ ಏನೆಂದು ಅರ್ಥೈಸಿರಬಹುದು? ಅಂಬೇಡ್ಕರ್‌ರ ಗ್ರಹಿಕೆಯಲ್ಲಿ ಪ್ರಜಾಪ್ರಭುತ್ವ ಎಂದರೆ ಒಟ್ಟಿಗೆ ಬದುಕುವುದರಿಂದ ಹುಟ್ಟುವ ಸಮಾನ ಅನುಭವವನ್ನು ಪೋಷಿಸುವುದಾಗಿದೆ. ಜಾತಿಮತಗಳಿಂದ ಛಿದ್ರವಾಗಿರುವ ಸಮಾಜದಲ್ಲಿ ವಾಸ್ತವವಾಗಿ ಜನರು ಪ್ರತ್ಯೇಕ ಕೇರಿಗಳಲ್ಲಿ(ಘೆಟ್ಟೋಗಳಲ್ಲಿ) ಬದುಕುತ್ತಿದ್ದು, ’ಸಹಜೀವನ’ ಎನ್ನುವುದು ಇಲ್ಲವಾಗಿದೆ. ಜನರು ಜಾತಿಮತಗಳ ಗಡಿಗಳಾಚೆ ಒಟ್ಟಿಗೆ ಬದುಕಿ, ಒಟ್ಟಿಗೆ ಕೆಲಸ ಮಾಡಿದಾಗ ಮಾತ್ರ ಸಂಯೋಜಿತ ಅನುಭವಗಳು ದಕ್ಕಲು ಸಾಧ್ಯವಿದೆ. ಅಂತಿಮವಾಗಿ ಕೇವಲ ರಾಜಕೀಯ ಪ್ರಜಾಪ್ರಭುತ್ವಕ್ಕಿಂತ ಆಳವಾದ ಬೇರುಗಳುಳ್ಳ ಪ್ರಜಾಪ್ರಭುತ್ವವು ’ಸಂಯೋಜಿತ ಸಹಜೀವನ’ವನ್ನು ಅವಲಂಬಿಸುತ್ತದೆ. ಹಾಗಾದಾಗ ಅದು ಪ್ರಭುತ್ವದ ಕೇವಲ ಒಂದು ಯೋಜನೆಯಂತಾಗದೆ ಪ್ರಜೆಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದಂತಹ ವ್ಯವಸ್ಥೆಯಾಗುತ್ತದೆ.

ನೆಹರು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಒಟ್ಟಿಗೆ ಪರಿಗಣಿಸಿ ಹೇಳುವುದಾದರೆ, ಪ್ರಜಾಪ್ರಭುತ್ವ ಎನ್ನುವುದು ನಿರ್ದಿಷ್ಟ ಸಮಯಕ್ಕೆ ನಡೆಯುವ ಚುನಾವಣೆಗಳಿಗಿಂತ ಮಹತ್ತರವಾದದ್ದು. ಅದನ್ನು ಬಹುಸಂಖ್ಯಾತ ಅಭಿಮತಕ್ಕೆ ಸರಳವಾಗಿ ಸಮೀಕರಿಸಲೂ ಸಾಧ್ಯವಿಲ್ಲ; ಪ್ರಜಾಪ್ರಭುತ್ವವನ್ನು ಪೋಷಿಸಿ ಬೆಳೆಸುವ ಯೋಜನೆಯನ್ನು ಸಂವಿಧಾನ ರಚನಾಕಾರರು ನಮ್ಮ ಮೇಲೆ ಹೊರಿಸಿರುವ ಕರ್ತವ್ಯವೆಂದು ನಾವು ಪರಿಗಣಿಸಬೇಕು. ಅಂಬೇಡ್ಕರ್ ಹೇಳಿರುವಂತೆ:

“ಸಾಂವಿಧಾನಿಕ ನೈತಿಕತೆಯು ಹಾಗೆ ತನ್ನಿಂದತಾನೆ ಪಸರಿಸುತ್ತದೆ ಎಂದು ಭಾವಿಸಬಹುದೇ ಎಂಬ ಪ್ರಶ್ನೆ ಇದೆ. ಸಾಂವಿಧಾನಿಕ ನೈತಿಕತೆ ಎನ್ನುವುದು ಸಹಜ ಭಾವನೆಯಲ್ಲ. ಅದನ್ನು ಪೋಷಿಸಿ ಬೆಳೆಸಬೇಕು. ನಮ್ಮ ಜನರು ಅದನ್ನಿನ್ನೂ ಕಲಿಯಬೇಕಿದೆ ಎಂಬುದನ್ನು ನಾವು ಅರಿಯಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಎಂದರೆ ಅಪ್ರಜಾಸತ್ತಾತ್ಮಕವಾದ ನಲದ ಮೇಲೆ ಮಾಡಲಾಗಿರುವ ಸಿಂಗಾರವಷ್ಟೇ”.

[ಇದು ಪರ್ಯಾಯ ಕಾನೂನು ವೇದಿಕೆ (ಎಎಲ್‌ಎಫ್) ಹೊರತಂದಿರುವ ’ಸಂವಿಧಾನ ಪೀಠಿಕೆ – ಒಂದು ಪುಟ್ಟ ಮುನ್ನುಡಿ’ ಹೊತ್ತಿಗೆಯಿಂದ ಆಯ್ದ ಭಾಗ. ಅರವಿಂದ್ ನಾರಾಯಣ್ ಮತ್ತು ಪೂರ್ಣ ರವಿಶಂಕರ್ ಅವರು ರಚಿಸಿರುವ ಈ ಪಠ್ಯ, ಪುಸ್ತಕ ರೂಪದಲ್ಲಿ ಈಗಾಗಲೇ ಇಂಗ್ಲಿಷ್‌ನಲ್ಲಿ ಲಭ್ಯವಿದೆ. ಸತ್ಯಾ. ಎಸ್ ಅನುವಾದಿಸಿರುವ ಕನ್ನಡ ಪಠ್ಯ, ಪುಸ್ತಕ ರೂಪದಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ]


ಇದನ್ನೂ ಓದಿ: ಮಹಿಳಾ ಮೀಸಲಾತಿ ಪುಸ್ತಕದೊಳಗಿನ ಗಂಟು ಎಂದು ತೋರಿಸಿಕೊಟ್ಟ ಗ್ರಾಮ ಪಂಚಾಯ್ತಿ ಚುನಾವಣೆ

LEAVE A REPLY

Please enter your comment!
Please enter your name here