Homeಪುಸ್ತಕ ವಿಮರ್ಶೆಅರಿತರೆ ಒಳಗಿರುವವನೆ ದೇವ; ತೀರ್ಥಯಾತ್ರೆ ದೂರದ ಹುಲ್ಲಿನ ಹಸಿರ ಪ್ರೀತಿಸಿದಂತೆ; ಎಲ್ಲ ಎಲ್ಲೆ ಮೀರಿ ಪ್ರಸ್ತಾವನೆಯಿಂದ...

ಅರಿತರೆ ಒಳಗಿರುವವನೆ ದೇವ; ತೀರ್ಥಯಾತ್ರೆ ದೂರದ ಹುಲ್ಲಿನ ಹಸಿರ ಪ್ರೀತಿಸಿದಂತೆ; ಎಲ್ಲ ಎಲ್ಲೆ ಮೀರಿ ಪ್ರಸ್ತಾವನೆಯಿಂದ ಆಯ್ದ ಭಾಗ

- Advertisement -
- Advertisement -

(ಇತ್ತೀಚೆಗೆ ಬಿಡುಗಡೆಯಾದ ಸಂಗಾತ ಪುಸ್ತಕ ಪ್ರಕಟಿಸಿರುವ “ಎಲ್ಲ ಎಲ್ಲೆ ಮೀರಿ: ಕಾಶ್ಮೀರಿ ಸಾಹಿತ್ಯದ ಮೊದಲ ಕವಿ ಲಾಲ್ ದೇಡ ಕವಿತೆಗಳು” ಪುಸ್ತಕದ ಪ್ರಸ್ತಾವನೆಯಿಂದ ಒಂದು ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.)

ಲಾಲ್ ದೇಡ ಕಾಶ್ಮೀರದ ಒಬ್ಬ ಅಪರೂಪದ ಅನುಭಾವಿ ಕವಿಯಾಗಿದ್ದಾಳೆ. ಲೋಕದ ಹಂಗು ತೊರೆದು ಅನುಭಾವದ ಮಾರ್ಗದಲ್ಲಿ ನಡೆದು ಸಿದ್ಧಿಯನ್ನು ಸಾಧಿಸಿದ ಸಂತಳಾಕೆ. ದೈವತ್ವದ ಹುಡುಕಾಟವನ್ನು, ಭಕ್ತಿಯ ಪರವಶತೆಯನ್ನು ತನ್ನ ಕವಿತೆಗಳಲ್ಲಿ ಕಟ್ಟಿಕೊಡುತ್ತಾಳೆ. ಬಾಹ್ಯದ ಆಚರಣೆಗಳಿಗಿಂತ ಅಂತರಂಗದ ಅರಿವಿಗೆ ಮಹತ್ವ ನೀಡುವ ಲಾಲ್ ದೇಡ ಕಾಶ್ಮೀರದಲ್ಲಿ ಮನೆಮಾತಾಗಿದ್ದಾಳೆ. ಹಿಂದೂಗಳಿರಲಿ, ಮುಸ್ಲಿಮರಿರಲಿ, ಲಾಲ್ ದೇಡಳ ಕವಿತೆಗಳು ಕಾಶ್ಮೀರದ ಜನರ ನೆನಪಿನಲ್ಲಿ ಇಂದಿಗೂ ಹಸಿರಾಗಿವೆ. ಅವಳ ಕವಿತೆಗಳ ಪ್ರಥಮ ಸಂಪಾದಕರಾದ ಗ್ರಿಯರಸನ್ ಮತ್ತು ಬಾರ್ನೆಟ್ ತಮ್ಮ ಪ್ರಸ್ತಾವನೆಯಲ್ಲಿ, “ಲಾಲ್ ದೇಡಳನ್ನು ಗೌರವದಿಂದ ಸ್ಮರಿಸದ, ಅವಳ ಕೆಲವಾದರೂ ಸಾಲುಗಳು ನಾಲಿಗೆಯ ತುದಿಯಲ್ಲಿರದ ಒಬ್ಬ ಕಾಶ್ಮೀರಿ ಹಿಂದೂ ಅಥವಾ ಮುಸ್ಲಿಂನಿಲ್ಲ” ಎನ್ನುತ್ತಾರೆ (ಲಲ್ಲಾ ವಾಖ್ಯಾನಿ, ಪುಟ 1). ಗಾದೆಮಾತುಗಳ ರೂಪದಲ್ಲಿ ಅವು ಜನರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಸಂಸಾರದ ಜಂಜಡಗಳ ದಾಟಿ ಆತ್ಮದ ಅನುಸಂಧಾನಕ್ಕೆ ಹಾತೊರೆಯುವ ಲಾಲ್ ದೇಡ ಹಿರಿಯ ಅನುಭಾವಿಗಳ ಸಾಲಿನಲ್ಲಿ ನಿಲ್ಲುತ್ತಾಳೆ.

ಅವಳು ಹದಿನಾಲ್ಕನೆ ಶತಮಾನಕ್ಕೆ ಸೇರಿದವಳೆಂದು ಹೇಳಲಾಗಿದ್ದು ಅನೇಕ ಸಂತ ಪುರಾಣಗಳಲ್ಲಿ, ಸಂತರ ಚರಿತ್ರೆಗಳಲ್ಲಿ ಆಕೆಯ ಬಗ್ಗೆ ಉಲ್ಲೇಖಗಳಿದ್ದರೂ, ಅವಳ ಜನನ ಹಾಗೂ ಮರಣಗಳ ಕುರಿತು ನಿಖರವಾದ ಐತಿಹಾಸಿಕ ದಾಖಲೆಗಳು ಸಿಗುವುದಿಲ್ಲ. ಅವಳು ಶ್ರೀನಗರದ ಹತ್ತಿರದ ಪಾಂದ್ರೆಂಥಾನ ಎಂಬ ಹಳ್ಳಿಯಲ್ಲಿ ಜನಿಸಿದ್ದು, 1373ರ ಸುಮಾರಿಗೆ ಮರಣಹೊಂದಿರಬಹುದೆಂದು ನಂಬಲಾಗಿದೆ. ಖ್ವಾಜಾ ಮಹಮ್ಮದ ಅಜಮ್ ದೇದಾಮಾರಿ ಎನ್ನುವವರು ತಮ್ಮ 1746ರ ಗ್ರಂಥವೊಂದರಲ್ಲಿ ಹೀಗೆ ಬರೆಯುತ್ತಾರೆ: “ಲಲ್ಲಾ ಆರಿಫಾ ಎನ್ನುವ ಅತ್ಯಂತ ಉನ್ನತ ಮಟ್ಟದ ಅನುಭಾವಿಯಾದ ಸಂತಳು ಸುಲ್ತಾನ ಅಲ್ಲಾವುದ್ದೀನನ ಕಾಲದಲ್ಲಿ (1344-55) ಜೀವಿಸಿದ್ದಳು. ತನ್ನ ಜೀವನದ ಪೂರ್ವ ಭಾಗದಲ್ಲಿ ವಿವಾಹದ ಬಂಧನದಲ್ಲಿದ್ದು, ಕೌಟುಂಬಿಕ ಮನೆಗೆಲಸಗಳಲ್ಲಿ ಬಂಧಿಯಾಗಿದ್ದರೂ, ದೈವದ ಹಂಬಲ ಆಕೆಯಲ್ಲಿ ತುಂಬಿತ್ತು.

ಸಾಂಸಾರಿಕ ಜಂಜಡಗಳಿಂದ ನಿವೃತ್ತಿ, ನಿರ್ಲಿಪ್ತತೆಗಳನ್ನು ಸಾಧಿಸಿ, ಜನರಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಆಕೆ ಸುಲ್ತಾನ ಶಿಹಾಬುದ್ದೀನನ ಆಳ್ವಿಕೆಯ ಕಾಲದಲ್ಲಿ (1355-73) ತೀರಿಕೊಂಡಳು.” (ಜಯಲಾಲ ಕೌಲ, ಪು. 4) ಗ್ರಿಯರಸನ್ ಮತ್ತು ಬಾರ್ನೆಟ್‌ರು, ಹೆಚ್ಚಿನ ಉಲ್ಲೇಖಗಳೆಲ್ಲ ಅವಳು, ಕಾಶ್ಮೀರದಲ್ಲಿ ಇಸ್ಲಾಮಿನ ಪ್ರಸಾರಕನಾದ ಪ್ರಸಿದ್ಧ ಸಂತ ಸಯ್ಯದ್ ಅಲಿ ಹಮದಾನಿಯ ಸಮಕಾಲೀನಳೆಂದು ಪ್ರತಿಪಾದಿಸುತ್ತವೆ ಎನ್ನುತ್ತಾರೆ. (ಲಲ್ಲಾ ವಾಖ್ಯಾನಿ, ಪು. ಬಿ) ಲಾಲ್ ದಡಳನ್ನು ಹಿಂದೂಗಳು ಲಲ್ಲಾ ಯೋಗೇಶ್ವರಿ, ಲಲ್ಲೇಶ್ವರಿ ಅಥವಾ ಲಲ್ಲಾ ಯೋಗಿಣಿ ಎಂದು ಗುರುತಿಸಿದರೆ, ಮುಸ್ಲಿಂರಿಗೆ ಆಕೆ ಲಲ್ಲಾ ಆರಿಫಾ ಎಂದು ಹೆಸರಾಗಿದ್ದಳು. ಆಕೆಯ ಇಂದಿನ ಬಹು ಪ್ರಚಲಿತ ಹೆಸರು ಲಾಲ್ ದೇಡ, ಅಂದರೆ ಕಾಶ್ಮೀರಿಯಲ್ಲಿ ’ಲಾಲ್ ಅಜ್ಜಿ’ ಎಂದಾಗುತ್ತದೆ. ತನ್ನ ಕೆಲವು ಪದ್ಯಗಳಲ್ಲಿ ಆಕೆ ತನ್ನನ್ನು ’ಲಲ್ಲಾ ಎಂದು ಕರೆದುಕೊಳ್ಳುತ್ತಾಳೆ.

ಅವಳ ಪದ್ಯಗಳನ್ನು ’ವಾಖ್’ಗಳೆಂದು ಕರೆಯಲಾಗಿದೆ. ’ವಾಖ್’ ಪದವು ಸಂಸ್ಕೃತದ ’ವಾಕ್’ ಅಥವಾ ’ವಾಕ್ಯ’ಕ್ಕೆ ಹತ್ತಿರವಿರುವುದಲ್ಲದೆ ಕನ್ನಡದ ಶಿವಶರಣರು ರಚಿಸಿದ ’ವಚನ’ವನ್ನು ಹೋಲುತ್ತದೆ. ’ವಾಖ್’ ಪದವನ್ನು ನುಡಿ ಅಥವಾ ಉಕ್ತಿ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಲಾಲ್ ದೇಡಳ ವಾಖ್‌ಗಳನ್ನು ಕಾಶ್ಮೀರಿ ಭಾಷೆಯ ಮೊದಲ ಸಾಹಿತ್ಯಿಕ ರೂಪಗಳೆಂದು ಪ್ರತಿಪಾದಿಸಲಾಗಿದೆ. ಹಿಂದೆ ಪ್ರಾಕೃತವು ಪ್ರಚಲಿತವಿದ್ದ ಈ ಭಾಗದಲ್ಲಿ ಅದರ ಪ್ರಭಾವದಿಂದ ಹೊರಬಂದು ಕಾಶ್ಮೀರಿ ಭಾಷೆ ಆಧುನಿಕ ಭಾಷೆಯಾಗಿ ಬೆಳೆಯಲು ಪ್ರಾರಂಭಿಸಿದ ಕಾಲಘಟ್ಟವನ್ನು ಅವು ಸೂಚಿಸುತ್ತವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಕಾಶ್ಮೀರಿ ಸಾಹಿತ್ಯದ ಮೂಲ ರೂಪಗಳೆಂದು ಇವು ಹೆಸರಾಗಿವೆಯಲ್ಲದೆ, ಕಾಶ್ಮೀರಿಗರ ಜನಮಾನಸದಲ್ಲಿ ಹದಿನಾಲ್ಕನೆ ಶತಮಾನದಿಂದ ಇಂದಿನ ತನಕ ಹಾಡು, ಪ್ರಾರ್ಥನೆ ಹಾಗೂ ಗಾದೆಮಾತುಗಳ ರೂಪದಲ್ಲಿ ಲಾಲ್ ದೇಡಳ ವಾಖ್‌ಗಳು ಜೀವಂತ ಇವೆ.

ಮೌಖಿಕ ರೂಪದಲ್ಲಿ ಕಾಲದಿಂದ ಕಾಲಕ್ಕೆ ರವಾನೆಯಾಗಿರುವ ಈ ವಾಖ್‌ಗಳು ಮುಂದಿನ ಬೇರೆ ಬೇರೆ ಕಾಲಘಟ್ಟಗಳಲ್ಲಿ ಭಾಷಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಗೆ ಒಳಗಾಗಿರುವುದಲ್ಲದೆ, ಅನೇಕ ಪ್ರಕ್ಷಿಪ್ತ ಭಾಗಗಳು ಸೇರಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ವಾಖ್‌ಗಳು ಮೊದಲ ಬಾರಿಗೆ ಪ್ರಕಟಣೆಗೆ ಒಳಪಟ್ಟಿದ್ದು ಇಪ್ಪತ್ತನೆಯ ಶತಮಾನದಲ್ಲಿ. ಲಾಲ್ ದೇಡ ವಾಖ್‌ಗಳ ಮೊದಲ ಇಂಗ್ಲಿಷ್ ಅನುವಾದವನ್ನು ಮಾಡಿದವರು ಬ್ರಿಟಿಷ್ ವಿದ್ವಾಂಸರಾದ ಗ್ರಿಯರಸನ್ ಮತ್ತು ಬಾರ್ನೆಟ್. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯ ಭಾಷೆಗಳ ಸಮೀಕ್ಷಾ ಅಧಿಕಾರಿಯಾಗಿದ್ದ ಗ್ರಿಯರಸನ್ ಒಂದು ಸಲ ಹಿಂದೆ ತನ್ನ ಸಹೋದ್ಯೋಗಿಯಾಗಿದ್ದ ಮುಕುಂದ ರಾಮ ಶಾಸ್ತ್ರಿಯನ್ನು ಲಾಲ್ ದೇಡಳ ಪದ್ಯಗಳ ಕೈಬರಹದ ಪ್ರತಿಯೊಂದನ್ನು ಹುಡುಕಿಕೊಡಲು ಕೇಳಿಕೊಂಡನಂತೆ.

ಎಷ್ಟು ಪ್ರಯತ್ನಿಸಿದರೂ ಅಂಥ ಪ್ರತಿ ಸಿಗದೇ ಹೋದಾಗ ಮುಕುಂದ ರಾಮ ಶಾಸ್ತ್ರಿಯು ತನ್ನ ಪರಿಚಯದ ಧರ್ಮದಾಸ ದರವೇಷ ಎಂಬ ಮುಪ್ಪಿನ ಕತೆಗಾರ ಮತ್ತು ಹಾಡುಗಾರನನ್ನು ವಿಚಾರಿಸಿದನಂತೆ. ಆಗ ದರವೇಷನು 109 ಲಲ್ಲೇಶ್ವರಿಯ ಪದ್ಯಗಳನ್ನು ತಾನೇ ಕಂಠಪಾಠದಿಂದ ಹೇಳಿದಾಗ ಶಾಸ್ತ್ರಿಯು ಅವುಗಳನ್ನು ಬರೆದುಕೊಂಡ. ತಾನು ಬರೆದಿಟ್ಟ ಪ್ರತಿಯ ಜೊತೆಗೆ ತನ್ನ ವ್ಯಾಖ್ಯಾನದೊಂದಿಗೆ ಗ್ರಿಯರಸನನಿಗೆ ಕಳಿಸಿಕೊಟ್ಟ. ಇದಕ್ಕಿಂತ ಪೂರ್ವದಲ್ಲಿ ಒರೆಲ್ ಸ್ಟೈನ ಎಂಬ ವಿದ್ವಾಂಸನು ಸಂಗ್ರಹಿಸಿದ ಎರಡು ಪ್ರತಿಗಳಿದ್ದವು. ಅವನ್ನು ಸ್ಟೈನ ’ಎ’ ಪ್ರತಿ ಮತ್ತು ಸ್ಟೈನ ’ಬಿ’ ಪ್ರತಿ ಎಂದು ಗುರುತಿಸಲಾಗಿತ್ತು. ’ಎ’ ಪ್ರತಿಯಲ್ಲಿ ನಲವತ್ಮೂರು ಪದ್ಯಗಳಿದ್ದು, ಪಂಡಿತ ರಾಜಾನಕ ಭಾಸ್ಕರನು ಮಾಡಿರುವ ಪದ್ಯಗಳ ಸಂಸ್ಕೃತ ಅನುವಾದಗಳನ್ನು ಹೊಂದಿದೆ. ’ಬಿ’ ಪ್ರತಿಯಲ್ಲಿ ನಲವತ್ತೊಂಬತ್ತು ಲಲ್ಲಾ ಪದ್ಯಗಳ ಜೊತೆಗೆ ಬೇರೆ ಬೇರೆ ಪಾಠಾಂತರಗಳು ಕೂಡಾ ಇವೆ.

ಗ್ರಿಯರಸನ್‌ನು ಮತ್ತೊಬ್ಬ ಹಿಂಟನ್ ನೋಲ್ಸ ಎಂಬ ಜಾನಪದ ವಿದ್ವಾಂಸ ಸಂಪಾದಿಸಿದ್ದ “ಡಿಕ್ಷನರಿ ಆಫ್ ಕಾಶ್ಮೀರಿ ಪ್ರೋವರ್ಬ್ಸ್ ಅಂಡ್ ಸೇಯಿಂಗ್ಸ್”(1885) ಕೃತಿಯಲ್ಲಿ ಲಲ್ಲಾಳ ಅನೇಕ ಹೇಳಿಕೆಗಳಿರುವುದನ್ನು ಗುರುತಿಸಿದ್ದ. ಇವೆಲ್ಲವುಗಳನ್ನು ಅಭ್ಯಸಿಸಿ, ಹೋಲಿಸಿ ನೋಡಿ, ತಮ್ಮ ಟಿಪ್ಪಣಿಗಳು, ಭಾಷೆ, ಛಂದಸ್ಸು, ಯೋಗ ಮೊದಲಾದ ವಿಷಯಗಳ ಮೇಲೆ ಲೇಖನಗಳೊಂದಿಗೆ ಗ್ರಿಯರಸನ ಮತ್ತು ಬಾರ್ನೆಟ್ “ಲಲ್ಲಾ ವಾಖ್ಯಾನಿ: ಕಾಶ್ಮೀರದ ಅನುಭಾವಿ ಕವಿಲಾಲ್ ದೇಡಳ ವಿವೇಕಪೂರ್ಣ ನುಡಿಗಳು” ಎನ್ನುವ ಶೀರ್ಷಿಕೆಯೊಂದಿಗೆ ಒಂದು ವಿದ್ವತ್‌ಪೂರ್ಣ ಆವೃತ್ತಿಯನ್ನು 1920ರಲ್ಲಿ ಪ್ರಕಟಿಸಿದರು. ಇದೇ ಲಾಲ್ ದೇಡಳ ಮೊದಲ ಪ್ರಕಟಿತ ಸಂಕಲನ ಎಂದು ಪ್ರಸಿದ್ಧಿ ಪಡೆದಿದೆ. ಈ ಆವೃತ್ತಿಯ ನಂತರ ಅನೇಕ ಭಾರತೀಯ ಹಾಗೂ ಪಾಶ್ಚಿಮಾತ್ಯ ವಿದ್ವಾಂಸರು ಲಾಲ್ ದೇಡ ಪದ್ಯಗಳ ಅನುವಾದಗಳನ್ನು ಪ್ರಕಟಿಸಿದ್ದಾರೆ.

ಎಲ್ಲ ಸಂತರ ಜೀವನದ ಸುತ್ತ ದಂತಕತೆಗಳು ಹುಟ್ಟಿಕೊಳ್ಳುವಂತೆ ಲಾಲ್ ದೇಡ ಕುರಿತು ಸಾಕಷ್ಟು ಪುರಾಣ ಕತೆಗಳು, ಪವಾಡ ಕತೆಗಳು ಹುಟ್ಟಿಕೊಂಡಿವೆ. ಬ್ರಾಹ್ಮಣ ಕುಟುಂಬವೊಂದರಲ್ಲಿ ಹುಟ್ಟಿದ ಅವಳ ಬಾಲ್ಯ ಧಾರ್ಮಿಕ ಶ್ರದ್ಧೆಯ ಪರಿಸರದಲ್ಲಿ ಕಳೆಯಿತು. ಅವಳಿಗೆ ತಕ್ಕಮಟ್ಟಿನ ಶಿಕ್ಷಣ ದೊರೆತಿತ್ತಲ್ಲದೆ, ಮುಂದೆ ಗುರು ಸಿದ್ಧ ಶ್ರೀಕಾಂತರ ಪ್ರಭಾವ ಅವಳ ಮೇಲೆ ಆಯಿತು. ಅಂದಿನ ಸಂಪ್ರದಾಯದ ಪ್ರಕಾರ ಅವಳ ಹನ್ನೆರಡನೆಯ ವಯಸ್ಸಿಗೆ ಅವಳನ್ನು ಪಾಂಪೋರ ಎಂಬ ಊರಿನ ಯುವಕನೊಂದಿಗೆ ವಿವಾಹ ಮಾಡಲಾಗಿತ್ತು. ಅವಳ ಅತ್ತೆ ಮತ್ತು ಗಂಡ ಅವಳನ್ನು ಅತಿ ಕ್ರೂರವಾಗಿ ನಡೆಸಿಕೊಂಡರೆನ್ನುವುದಕ್ಕೆ ಅನೇಕ ಉಲ್ಲೇಖಗಳಿವೆ. ಅವಳ ಅತ್ತೆ ಅವಳನ್ನು ಉಪವಾಸವಿಟ್ಟರೆ, ಅವಳ ಗಂಡ ಅವಳ ಅಧ್ಯಾತ್ಮದ ಒಲವನ್ನು ಅರ್ಥಮಾಡಿಕೊಳ್ಳದೆ, ಸಂಶಯದ ಕಾರಣದಿಂದ ಹಿಂಸಿಸುತ್ತಿದ್ದ. ಬಹು ಜನಪ್ರಿಯ ಕಾಶ್ಮೀರಿ ಗಾದೆ ಮಾತಾದ “ಅವರು ಟಗರು ಕೊಲ್ಲಲಿ, ಕುರಿ ಕೊಲ್ಲಲಿ, ಲಲ್ಲಾಳಿಗೆ ಊಟಕ್ಕೆ ಕಲ್ಲು ಮಾತ್ರ” ಎನ್ನುವುದು ಇದೇ ಸಂಗತಿಯನ್ನು ಉಲ್ಲೇಖಿಸುತ್ತದೆ. ಅವಳ ಅತ್ತೆ ಅವಳ ಊಟದ ತಟ್ಟೆಯಲ್ಲಿ ಒಂದು ಕಲ್ಲು ಗುಂಡು ಇಟ್ಟು, ಅದರ ಮೇಲೆ ಅನ್ನ ಬಡಿಸಿ, ನೋಡುವವರಿಗೆ ತಟ್ಟೆ ತುಂಬ ಅನ್ನ ಕಾಣುವಂತೆ ಮಾಡುತ್ತಿದ್ದಳಂತೆ. ಅತ್ತೆ ಮತ್ತು ಗಂಡನ ಕ್ರೌರ್ಯಕ್ಕೆ ಒಳಗಾದರೂ ಲಾಲ್ ದೇಡ ತನ್ನ ಭಕ್ತಿಯನ್ನು ಬಿಡಲಿಲ್ಲ.

ಒಂದು ಪ್ರಚಲಿತ ಪುರಾಣ ಕತೆಯ ಪ್ರಕಾರ ಪ್ರತಿ ದಿನ ಅವಳು ನೀರು ತರಲು ನದಿಗೆ ಕೊಡ ತೆಗೆದುಕೊಂಡು ಹೋಗುತ್ತಿದ್ದಳು. ಹಾಗೆ ಹೋದಾಗ ಅವಳು ನದಿ ದಾಟಿ ನದಿಯಾಚೆಯ ನಟಕೇಶವ ಭೈರವ ಮಂದಿರದ ಶಾಂತ ಪರಿಸರದಲ್ಲಿ ತನ್ನ ಧ್ಯಾನ ಮುಗಿಸಿ ನಂತರ ನೀರಿನ ಕೊಡದೊಂದಿಗೆ ಮನೆಗೆ ಮರಳುತ್ತಿದ್ದಳು. ದಿನವೂ ತಡವಾಗಿ ಬರುವ ಅವಳ ಮೇಲೆ ಕ್ರೋಧಿತನಾದ ಅವಳ ಗಂಡ ಒಂದು ದಿನ ಅವಳು ತಲೆ ಮೇಲೆ ನೀರಿನ ಕೊಡದೊಂದಿಗೆ ಮರಳಿದಾಗ ಕೋಲಿನಿಂದ ಅವಳ ತಲೆಯ ಮೇಲಿನ ಕೊಡವನ್ನು ಒಡೆದ. ಮಣ್ಣಿನ ಕೊಡ ಪುಡಿ ಪುಡಿಯಾಗಿ ಬಿದ್ದರೂ ಅವಳ ತಲೆ ಮೇಲೆ ನೀರು ಮಾತ್ರ ಮಂಜಿನ ಗಡ್ಡೆಯ ರೂಪದಲ್ಲಿ ಹಾಗೆಯೇ ಉಳಿದಿತ್ತು. ಅದರಿಂದ ಲಾಲ್ ದೇಡ ಮನೆಯ ಪಾತ್ರೆಗಳಲ್ಲಿ ನೀರು ತುಂಬಿ ಉಳಿದ ನೀರನ್ನು ಹೊರಗೆ ಚೆಲ್ಲಿದಳು. ಹಾಗೆ ಚೆಲ್ಲಿದಾಗ, ನೀರು ಬಿದ್ದ ಆ ಸ್ಥಳದಲ್ಲಿ ದೊಡ್ಡ ಕೊಳವೊಂದು ನಿರ್ಮಾಣವಾಯಿತೆನ್ನುವ ಪ್ರತೀತಿಯಿದೆ.

ಪಂಡಿತ ಆನಂದ ಕೌಲ 1930ರ ದಶಕದಲ್ಲಿ ಬರೆದ “ಲಲ್ಲಾ ಯೋಗೇಶ್ವರಿ” ಎಂಬ ಗ್ರಂಥದಲ್ಲಿ, “ಈ ಕೊಳವು ಇವತ್ತಿಗೂ ಅಸ್ತಿತ್ವದಲ್ಲಿದ್ದು, ಅದನ್ನು ’ಲಾಲ್ ತ್ರಾಗ್’ ಎಂದು ಕರೆಯಲಾಗಿದೆ” ಎನ್ನುತ್ತಾರೆ. (ಜಯಲಾಲ ಕೌಲ, ಪು.11) ಸುಮಾರು ಇಪ್ಪತ್ತಾರನೆಯ ವಯಸ್ಸಿಗೆ ಗಂಡನ ಮನೆಯನ್ನು ತ್ಯಜಿಸಿ ಹೋದ ಲಲ್ಲೇಶ್ವರಿಯು ಶೈವ ಸಂತರಾದ ಸಿದ್ಧ ಶ್ರೀಕಾಂತರಲ್ಲಿ ಶಿಷ್ಯಳಾಗಿ, ಅವರಿಂದ ಅಧ್ಯಾತ್ಮ ಸಾಧನೆಯ ಮಾರ್ಗದರ್ಶನ ಪಡೆದುಕೊಂಡಳು. ನಂತರ ಅವಳು ಒಂದು ಸ್ಥಳದಲ್ಲಿ ನಿಲ್ಲದ ಪರಿವ್ರಾಜಕಳಾಗಿ ಜನರ ನಿಂದನೆ, ಹೀಯಾಳಿಕೆಗಳಿಗೆ ಗಮನವೀಯದೆ, ಎಲ್ಲ ಕಷ್ಟ-ನೋವುಗಳನ್ನು ಸಹಿಸುತ್ತ ತನ್ನ ಸಾಧನೆಯನ್ನು ಮುಂದುವರೆಸಿದಳು. ಹದಿನಾಲ್ಕನೆ ಶತಮಾನದಲ್ಲಿ ಹರೆಯದ ಹೆಂಗಸೊಬ್ಬಳು ಗಂಡನ ಮನೆ ಬಿಟ್ಟು, ಪರಿವ್ರಾಜಕಳಾಗಿರುವುದು ಸುಲಭದ ಮಾತಾಗಿರಲಿಲ್ಲ ಎನ್ನುವ ಸಂಗತಿಯನ್ನು ಅವಳ ವಾಖ್‌ವೊಂದರಲ್ಲಿ ಕಾಣುತ್ತೇವೆ:

ಸಾವಿರ ನಿಂದನೆಗಳ ಮಾಡಿದರೂ ಅವರು
ನನಗದರಿಂದ ನೋವಿಲ್ಲ ಶಿವನಿಗೊಲಿದವಳು ನಾನು
ಬೂದಿ ಬಿತ್ತೆಂದು
ಕನ್ನಡಿ ಕೆಡುವುದೆ?
ಬೂದಿಯಿಂದಲೆ ಅಲ್ಲವೆ
ಕನ್ನಡಿ ಶುಭ್ರ?

ಯಾವ ಅಡೆತಡೆಗಳಿಂದಲೂ ವಿಚಲಿತಳಾಗದೆ, ಅನುಭಾವದ ಪಕ್ವತೆಯನ್ನು ಸಾಧಿಸುವ ಮಾರ್ಗದಲ್ಲಿ ನಿಜವಾದ ಅನ್ವೇಷಕಳಾಗಿ ಕಾಣಿಸುವ ಲಾಲ್ ದೇಡಳಿಗೆ ನಿಂದಿಸುವ ಜನರಾಗಲಿ, ರೂಢಿಗತ ಪರಂಪರೆಯ ಪದ್ಧತಿಗಳಾಗಲಿ ಮುಖ್ಯವಾಗಲಿಲ್ಲ. ಆಕೆಯ ವಾಖ್‌ಗಳು ಅನುಭಾವದ ದಾರಿಯಲ್ಲಿ ಅವಳು ಬೆಳೆದ ಬಗೆಯ ಚಿತ್ರಣ ನೀಡುತ್ತವೆ.

ವಿಜಯಾ ಗುತ್ತಲ
ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿಜಯಾ ಅವರು ಗ್ರೀಕ್ ಭಾಷೆ ಮತ್ತು ಸಾಹಿತ್ಯದ ಮೇಲೆ ಆಳವಾದ ಅಧ್ಯಯನ ಮಾಡಿದ್ದಾರೆ. ಹಲವು ಅನುವಾದಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ’ಒರೆಸ್ತಿಯಾ’ ನಾಟಕ ತ್ರಿವಳಿಯನ್ನೂ ಕನ್ನಡಕ್ಕೆ ತಂದಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...