ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ನಾಲ್ಕನೇ ತಿಂಗಳಿಗೆ ಕಾಲಿಟ್ಟುದೆ. ಸರ್ಕಾರ ಹೋರಾಟವನ್ನು ಒಡೆಯಲು ಬೇಕಾಗಿ ದಿನಕ್ಕೊಂದು ಸಂಚು ರೂಪಿಸಿದಂತೆ ಆಂದೋಲನ ತೀವ್ರಗೊಳ್ಳುತ್ತಿದ್ದು, ಗುರುವಾರ ಗಾಜಿಪುರ, ಟಿಕ್ರಿ ಮತ್ತು ಸಿಂಗು ಗಡಿಗಳಲ್ಲಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ದೆಹಲಿ ಪೊಲೀಸರು ಈ ಪ್ರದೇಶಗಳ ಸಮೀಪದ ವಾಹನ ಸಂಚಾರವನ್ನು ಬೇರೆಡೆಗೆ ತಿರುಗಿಸಿದ್ದಾರೆ. ಇದರಿಂದಾಗಿ ಪೀಕ್ ಅವರ್‌ಗಲ್ಲಿ(ಎಲ್ಲರೂ ಸಮಾನ್ಯವಾಗಿ ಸಂಚಾರ ಮಾಡುವ ಸಮಯ/ಸಂಜೆ ಅಥವಾ ಬೆಳಿಗ್ಗೆ) ಭಾರಿ ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಗಾಜಿಪುರ-ಗಾಜಿಯಾಬಾದ್ (ಯುಪಿ ಗೇಟ್) ಗಡಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರುವುದರಿಂದ ದೆಹಲಿ ಮತ್ತು ಗಾಜಿಯಾಬಾದ್ ಪೀಕ್ ಅವರ್‌ಗಳಲ್ಲಿ ಭಾರಿ ಸಂಚಾರ ದಟ್ಟಣೆಯನ್ನು ಎದುರಿಸುತ್ತದೆ ಎಂದು ದೆಹಲಿ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯುಪಿ ಗೇಟ್ ಗಡಿಗೆ ಹಾಕಿರುವ ದಿಗ್ಬಂಧನದಿಂದಾಗಿ ದೆಹಲಿ-ಮೀರತ್, ರಾಷ್ಟ್ರೀಯ ಹೆದ್ದಾರಿ-9 ಮತ್ತು ರಾಷ್ಟ್ರೀಯ ಹೆದ್ದಾರಿ -24 ರ ಎಲ್ಲಾ ಆರು ಪಥಗಳನ್ನು ಮುಚ್ಚಲಾಗಿದೆ.
ಇದನ್ನೂ ಓದಿ: ಭಾರತದ ರೈತ ಹೋರಾಟಕ್ಕೆ ಅಮೆರಿಕದ 87 ಸಂಘಟನೆಗಳ ಬೆಂಬಲ
ಗಾಜಿಯಾಬಾದ್‌ನಿಂದ ದೆಹಲಿಗೆ ಪ್ರವೇಶಿಸುವ ವಾಹನಗಳನ್ನು ಪರ್ಯಾಯ ಗಡಿ ಮಾರ್ಗಗಳಾದ ಆನಂದ್ ವಿಹಾರ, ಸೂರ್ಯ ನಗರ, ಅಪ್ಸರಾ, ಭೋಪ್ರಾ , ಲೋನಿ, ಕೊಂಡ್ಲಿ, ಚಿಲ್ಲಾ, ನ್ಯೂ ಅಶೋಕ್ ನಗರ, ಡಿಎನ್‌ಡಿ, ಮತ್ತು ಕಾಳಿಂದಿ ಕುಂಜ್ ಮೂಲಕ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಗಾಜಿಯಾಬಾದ್‌ನಿಂದ ಘಾಜಿಪುರ ವೃತ್ತದ ಮೂಲಕ ದೆಹಲಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-24 ಅನ್ನು ಮುಕ್ತವಾಗಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಗಡಿಗಳ ಸುತ್ತಲು ರೈತರು ನಡೆಸುತ್ತಿರುವ ಹೋರಾಟ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಕೇಂದ್ರ ಸರ್ಕಾರದೊಂದಿಗೆ ರೈತರು ಇದುವರೆಗೂ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದರೂ ಎಲ್ಲವು ಮುರಿದು ಬಿದ್ದಿದೆ. ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ತನಕ ಹೋರಾಟ ಮುಂದುವೆಯುತ್ತದೆ ಎಂದು ಹೇಳಿದ್ದಾರೆ.
ರೈತರ ಹೋರಾಟ ಇದೀಗ ಕೇವಲ ದೆಹಲಿ ಕೇಂದ್ರವಾಗಿ ಮಾತ್ರ ಉಳಿದಿಲ್ಲ. ಹರಿಯಾಣ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನಗಳಲ್ಲಿ ಬೃಹತ್ ರೈತ ಮಹಾಪಂಚಾಯತ್‌ಗಳು ನಡೆಯುತ್ತಿದ್ದು ಉತ್ತರ ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ದ ರೈತರನ್ನು ಸಂಘಟಿಲಾಗುತ್ತಿದೆ. ಅಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಲಕ್ಷಾಂತರ ಜನರು ಸೇರುತ್ತಿದ್ದು, ಆಂದೋಲನ ತಳ ಮಟ್ಟದಿಂದಲೇ ಗಟ್ಟಿಗೊಳ್ಳುತ್ತಿದೆ.
ಇದನ್ನೂ ಓದಿ: ರೈತ ಹೋರಾಟ: ಜಾತಿ ಕಟ್ಟುಪಾಡುಗಳನ್ನು ಮುರಿಯುತ್ತಿರುವ ಮಹಾಪಂಚಾಯತ್!
