ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ಹೊರಟಿದ್ದ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ (FFC)’ದ ನೆರವು ಹಡಗು ‘ಮದ್ಲೀನ್’ನ ಅನ್ನು ಇಸ್ರೇಲ್ ಅಂತಾರಾಷ್ಟ್ರೀಯ ಜಲ ಪ್ರದೇಶದಿಂದ ಅಪಹರಿಸಿತ್ತು. ಇದೀಗ ಹಡಗಿನಲ್ಲಿದ್ದ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಮಂಗಳವಾರ ಅಲ್‌ಜಝೀರಾ ವರದಿ ಮಾಡಿದೆ. ಗಾಝಾ – ಮದ್ಲೀನ್
ಗ್ರೆಟಾ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ಹೇಳಿದ ನಂತರ, ಅವರು ವಿಮಾನದಲ್ಲಿ ಇರುವ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ. ಮದ್ಲೀನ್ ಹಡಗಿನಲ್ಲಿದ್ದ 12 ಜನರಲ್ಲಿ ಗ್ರೇಟಾ ಕೂಡ ಒಬ್ಬರು, ಪ್ಯಾಲೆಸ್ತೀನ್‌ನ ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್ ಹಾಕಿದ್ದ ನೌಕಾ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸುವಾಗ ಅದರ ಸೇನೆ ಅವರನ್ನು ವಶಪಡಿಸಿಕೊಂಡಿತ್ತು.
ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್, ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಮತ್ತು ಅಲ್ ಜಜೀರಾ ಪತ್ರಕರ್ತ ಒಮರ್ ಫಯಾದ್ ಸೇರಿದಂತೆ ಮದ್ಲೀನ್‌ನ 12 ಸಿಬ್ಬಂದಿಯನ್ನು ಇಸ್ರೇಲ್ ಬಂಧಿಸಿತ್ತು. ಇದರ ನಂತರ ಮದ್ಲೀನ್ ಹಡಗನ್ನು ಆಕ್ರಮಿತ ಪ್ಯಾಲೆಸ್ತೀನ್‌ನ ಅಶ್ಡೋಡ್ ಬಂದರಿಗೆ ಎಳೆದೊಯ್ಯಲಾಗಿತ್ತು ಎಂದು ಅಲ್ ಜಝೀರಾ ವರದಿ ಮಾಡಿದೆ.
ಗಾಜಾದ ಮೇಲಿನ ಇಸ್ರೇಲ್‌ನ ಅಕ್ರಮ ದಿಗ್ಬಂಧನವನ್ನು ಮುರಿಯುವ ಗುರಿ ಕೂಡಾ ಹೊಂದಿದ್ದ ಈ ಹಡಗನ್ನು ವಸಾಹತುಗಾರ ಇಸ್ರೇಲಿ ಕಮಾಂಡೋಗಳು ಗಾಝಾ ತೀರದಿಂದ ಸುಮಾರು 100 ನಾಟಿಕಲ್ ಮೈಲುಗಳ (185 ಕಿಮೀ) ಅಂತರರಾಷ್ಟ್ರೀಯ ಜಲ ಪ್ರದೇಶದಿಂದ ವಶಪಡಿಸಿಕೊಂಳ್ಳಲಾಗಿತ್ತು. ಈ ವೇಳೆ ಹಡಗಿನಲ್ಲಿದ್ದ 11 ಹೋರಾಟಗಾರರು ಮತ್ತು ಪತ್ರಕರ್ತರನ್ನು ಟೆಲ್ ಅವೀವ್‌ನ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಹೇಳಿಕೆ ನೀಡಿದ್ದ ಇಸ್ರೇಲಿ ವಿದೇಶಾಂಗ ಸಚಿವಾಲಯ, ಶೀಘ್ರದಲ್ಲೇ ಅವರನ್ನು ಗಡೀಪಾರು ಮಾಡಲಾಗುತ್ತಿದೆ ಎಂದು ಹೇಳಿತ್ತು.
ಇದಕ್ಕೂ ಮೊದಲು ಫ್ರೀಡಂ ಪ್ಲೋಟಿಲ್ಲಾ ಒಕ್ಕೂಟವು, ಇಸ್ರೇಲ್ ಅಪಹರಿಸುವಾಗ ನಡೆದ ಘಟನೆಯ ವೀಡಿಯೊವನ್ನು ಬಿಡುಗಡೆ ಮಾಡಿತ್ತು. ಈ ವಿಡಿಯೊದಲ್ಲಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್, ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಸೇರಿದಂತೆ ಇತರ ಹೋರಾಟಗಾರರು ಕೈಗಳನ್ನು ಮೇಲಕ್ಕೆತ್ತಿರುವ ದೃಶ್ಯಗಳು ಮತ್ತು ಇಸ್ರೇಲಿ ಪಡೆಗಳು ಹಡಗನ್ನು ಹತ್ತಿ ಅವರನ್ನು “ಅಪಹರಿಸಿದ” ದೃಶ್ಯವನ್ನು ತೋರಿಸಲಾಗಿದೆ.
ಹೋರಾಟಗಾರರನ್ನು ಪ್ರತಿನಿಧಿಸುವ ಪ್ಯಾಲೆಸ್ತೀನಿಯನ್ ಕಾನೂನು ಕೇಂದ್ರವಾದ ಅದಾಲಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಗಡೀಪಾರು ಮಾಡುವ ಮೊದಲು ಅವರನ್ನು ಬಂಧನ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿದ್ದ ಹಡಗನ್ನು ಸ್ವಾಧೀನಪಡಿಸಿಕೊಳ್ಳಲು ಇಸ್ರೇಲ್‌ಗೆ “ಯಾವುದೇ ಕಾನೂನು ಅಧಿಕಾರ” ಇಲ್ಲ ಎಂದು ಅದು ಹೇಳಿದೆ. ಅವರು ಹೊರಟಿದ್ದು ಇಸ್ರೇಲ್‌ಗೆ ಅಲ್ಲ, ಬದಲಾಗಿ “ಪ್ಯಾಲೆಸ್ತೀನ್ ದೇಶದ ಪ್ರಾದೇಶಿಕ ಜಲಪ್ರದೇಶ”ಕ್ಕೆ ಹೋಗುತ್ತಿದ್ದ ಹಡಗು ಅದಾಗಿತ್ತು” ಎಂದು ಅದಾಲಾ ಹೇಳಿತ್ತು. 12 ನಿರಾಯುಧ ಹೋರಾಟಗಾರರ ಬಂಧನಗಳು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ಸೋಮವಾರ ಮುಂಜಾನೆ ಬಂಧಿಸಲ್ಪಟ್ಟಾಗಿನಿಂದ ಹೋರಾಟಗಾರರೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು FFC ಸಂಘಟಕರಾದ ಹುವೈದಾ ಅರಾಫ್ ಅಲ್ ಜಝೀರಾಗೆ ತಿಳಿಸಿದ್ದಾರೆ. “ಇಂದು ರಾತ್ರಿ – ಸಾಧ್ಯವಾದಷ್ಟು ಬೇಗ ಅವರನ್ನು ಸಂಪರ್ಕಿಸಲು ಒತ್ತಾಯಿಸಲು ನಾವು ವಕೀಲರನ್ನು ಸಿದ್ಧಪಡಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಮದ್ಲೀನ್ ಯುನೈಟೆಡ್ ಕಿಂಗ್‌ಡಮ್ ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದಾಗ, ಇಸ್ರೇಲಿ ಕಮಾಂಡೋಗಳು ಅದನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ಇಸ್ರೇಲ್ ಸೇನೆ ಅಂತರರಾಷ್ಟ್ರೀಯ ಜಲ ಪ್ರದೇಶಕ್ಕೆ ಹೋಗಿ ಸಾರ್ವಭೌಮ ಯುಕೆ ಹಡಗನ್ನು ಆಕ್ರಮಿಸಿತು. ಇದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ. ಯುನೈಟೆಡ್ ಕಿಂಗ್‌ಡಮ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಅವರಿಂದ ನಾವು ಖಂಡನೆಯನ್ನು ನಾವು ನಿರೀಕ್ಷಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಗಾಝಾದ ಆರೋಗ್ಯ ಸಚಿವಾಲಯದ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಕನಿಷ್ಠ 54,927 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಮತ್ತು 126,615 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್‌ನಲ್ಲಿ ಅಂದಾಜು 1,139 ಜನರು ಸಾವನ್ನಪ್ಪಿದ್ದಾರೆ ಮತ್ತು 200 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ.
ಈ ನಡುವೆ, ಗಾಝಾದ ದಕ್ಷಿಣ ರಫಾದಲ್ಲಿರುವ ಅಮೆರಿಕ ಬೆಂಬಲಿತ ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್‌ನ (GHF) ನೆರವು ಕೇಂದ್ರದ ಬಳಿ ಕನಿಷ್ಠ 14 ಜನರು ಸೇರಿದಂತೆ ಗಾಝಾದಲ್ಲಿ ಕನಿಷ್ಠ 60 ಪ್ಯಾಲೆಸ್ತೀನಿಯನ್ನರನ್ನು ಸೋಮವಾರ ಇಸ್ರೇಲ್ ಪಡೆಗಳು ಕೊಂದಿವೆ ಎಂದು ವರದಿಯಾಗಿವೆ.
ವಸಾಹತುಗಾರರು ಆಕ್ರಮಿಸಿರುವ ಪ್ಯಾಲೆಸ್ತೀನ್‌ನ ಗಾಝಾಕ್ಕೆ ಆಹಾರ, ನೀರು ಮತ್ತು ವೈದ್ಯಕೀಯ ಸಾಮಗ್ರಿಗಳೊಂದಿಗೆ ‘ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ’ದ ನೆರವು ಹಡಗು ‘ಮದ್ಲೀನ್’ ಇಟಲಿಯ ಸಿಸಿಲಿಯಿಂದ ಜೂನ್ 1ರ ಭಾನುವಾರ ಹೊರಟಿತ್ತು. ಹಡಗಿನಲ್ಲಿ ಸ್ವೀಡಿಷ್ ಮೂಲದ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಅವರೊಂದಿಗೆ ಜರ್ಮನಿಯ ಯಾಸೆಮಿನ್ ಅಕಾರ್, ಬ್ರೆಜಿಲ್‌ನ ಥಿಯಾಗೊ ಅವಿಲಾ, ಫ್ರಾನ್ಸ್‌ನ ಒಮರ್ ಫಯಾದ್, ರಿಮಾ ಹಸನ್, ಬ್ಯಾಪ್ಟಿಸ್ಟ್ ಆಂಡ್ರೆ, ಪ್ಯಾಸ್ಕಲ್ ಮೌರಿಯರಾಸ್, ಯಾನಿಸ್ ಮಹಮ್ದಿ, ಟರ್ಕಿಯ ಶುವಾಯ್ಬ್ ಒರ್ಡು, ರೆವಾ ವಿಯಾರ್ಡ್, ಸ್ಪೇನ್‌ನ ಸೆರ್ಗಿಯೊ ಟೊರಿಬಿಯೊ ಮತ್ತು ನೆದರ್ಲ್ಯಾಂಡ್ಸ್‌ನ ಮಾರ್ಕೊ ವ್ಯಾನ್ ರೆನ್ನೆಸ್ ಹಡಗಿನಲ್ಲಿ ಇದ್ದರು.
ಹಡಗಿನಲ್ಲಿ ಬೇಬಿ ಫಾರ್ಮುಲಾ, ನ್ಯಾಪ್‌ಕಿನ್, ಹಿಟ್ಟು, ಅಕ್ಕಿ, ನೈರ್ಮಲ್ಯ ಉತ್ಪನ್ನಗಳು, ನೀರಿನ ಫಿಲ್ಟರ್‌ಗಳು ಮತ್ತು ವೈದ್ಯಕೀಯ ಸರಬರಾಜುಗಳು ಇದ್ದವು. ಜೊತೆಗೆ ಈ ಹಡಗು ಗಾಝಾದ ಮೇಲೆ ವಸಾಹತುಗಾರ ಇಸ್ರೇಲ್‌ನ ಎರಡು ದಶಕಗಳ ನೌಕಾ ದಿಗ್ಬಂಧನವನ್ನು ಮುರಿಯುವ ಉದ್ದೇಶ ಕೂಡಾ ಹೊಂದಿತ್ತು. ಹಡಗನ್ನು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟವು ಗಾಝಾಗೆ ಅಂತರರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಆಯೋಜಿಸಿತ್ತು.
ಈ ಹಿಂದೆ ಕೂಡಾ ಫ್ರೀಡಂ ಫ್ರೋಟಿಲ್ಲಾ ಒಕ್ಕೂಟದ ನೆರವಿನೊಂದಿಗೆ ಹೊರಟಿದ್ದ ಹಡಗಿನ ಮೇಲೆ ಮೆಡಿಟರೇನಿಯನ್ ಸಮುದ್ರದಲ್ಲಿ ಡ್ರೋನ್ ದಾಳಿಗಳಾಗಿದ್ದವು. ಹಾಗಾಗಿ, ಈ ಬಾರಿ ಟ್ರ್ಯಾಕರ್‌ನೊಂದಿಗೆ ತನ್ನ ‘ಮದ್ಲೀನ್’ ಹಡಗನ್ನು ಕಳುಹಿಸಿತ್ತು.
“2014 ರಲ್ಲಿ ಗಾಝಾದ ಮೊದಲ ಮತ್ತು ಏಕೈಕ ಮೀನುಗಾರ ಮಹಿಳೆಯಾದ ‘ಮದ್ಲೀನ್’ ಅವರ ಹೆಸರನ್ನು ಹಡಗಿಗೆ ಇಡಲಾಗಿದ್ದು, ಪ್ಯಾಲೆಸ್ತೀನಿ ಹೋರಾಟದ ಅವಿಶ್ರಾಂತ ಮನೋಭಾವ ಮತ್ತು ಇಸ್ರೇಲ್‌ನ ಸಾಮೂಹಿಕ ಶಿಕ್ಷೆ ಮತ್ತು ಉದ್ದೇಶಪೂರ್ವಕ ಹಸಿವು ನೀತಿಗಳ ಹೇರಿಕೆಗಳ ವಿರುದ್ಧ ಬೆಳೆಯುತ್ತಿರುವ ಜಾಗತಿಕ ಪ್ರತಿರೋಧವನ್ನು ಇದು ಸಂಕೇತಿಸುತ್ತದೆ” ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಹೇಳಿತ್ತು.
ಗಾಝಾ ಪ್ರದೇಶದ ಸುಮಾರು 20 ಲಕ್ಷ ನಿವಾಸಿಗಳು ಹಸಿವನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಸಹ ಸಂಸ್ಥೆಗಳು ಮತ್ತು ಪ್ರಮುಖ ಮಾನವೀಯ ಸಂಸ್ಥೆಗಳು ಗಾಝಾದಲ್ಲಿನ ಭೀಕರ ಪರಿಸ್ಥಿತಿಗಳನ್ನು ವರದಿ ಮಾಡುತ್ತಲೇ ಇವೆ. ವಸಾಹತುಗಾರ ಇಸ್ರೇಲಿ ನಿರ್ಬಂಧಗಳು, ನಾಗರಿಕ ಸುವ್ಯವಸ್ಥೆಯಲ್ಲಿನ ಕುಸಿತ ಮತ್ತು ವ್ಯಾಪಕ ಲೂಟಿಯು ನೆರವು ವಿತರಣೆಗೆ ಪ್ರಾಥಮಿಕ ಅಡೆತಡೆಗಳಾಗಿ ಅವರು ಉಲ್ಲೇಖಿಸಿದ್ದಾರೆ.ಗಾಝಾ – ಮದ್ಲೀನ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: #AllEyesOnDeck | ಗಾಝಾಗೆ ಹೊರಟ ‘ಮದ್ಲೀನ್’ಗೆ 4ನೇ ಬೆಳಗು; ಗ್ರೀಸ್ ತೀರದ ಬಳಿ ಡ್ರೋನ್ ಹಾರಾಟ
#AllEyesOnDeck | ಗಾಝಾಗೆ ಹೊರಟ ‘ಮದ್ಲೀನ್’ಗೆ 4ನೇ ಬೆಳಗು; ಗ್ರೀಸ್ ತೀರದ ಬಳಿ ಡ್ರೋನ್ ಹಾರಾಟ!