Homeಅಂಕಣಗಳುಸಾರ್ವಜನಿಕವಾಗಿ ಜಾತಿ ಸಂವಾದಕ್ಕೆ ತೆರೆದುಕೊಳ್ಳುವ ಬಗ್ಗೆ..

ಸಾರ್ವಜನಿಕವಾಗಿ ಜಾತಿ ಸಂವಾದಕ್ಕೆ ತೆರೆದುಕೊಳ್ಳುವ ಬಗ್ಗೆ..

- Advertisement -
- Advertisement -

ಸೆಪ್ಟಂಬರ್ 18ರಂದು ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಭೆಯಲ್ಲಿ ಅದರ ಅಧ್ಯಕ್ಷರು “ಬ್ರಾಹ್ಮಣರ ಶೋಷಣೆ ಸಹಿಸೆವು” ಎಂದು ಹೇಳಿರುವುದು ವರದಿಯಾಗಿದೆ. ಅಷ್ಟು ಸಾಲದು ಎಂಬಂತೆ ತಾವೂ ವೈಯಕ್ತಿಕವಾಗಿ ಶೋಷಣೆಗೆ ಒಳಗಾಗಿ, ಬ್ರಾಹ್ಮಣನಾಗಿರುವ ಕಾರಣಕ್ಕೆ ತನಗೆ ಹೈಕೋರ್ಟ್ ನ್ಯಾಯಾಧೀಶನ ಸ್ಥಾನವನ್ನು ನಿರಾಕರಿಸಲಾಯಿತು ಎಂದಿದ್ದಾರೆ (ಪ್ರಜಾವಾಣಿ). ಜ್ಞಾನಕ್ಕೆ ತೆರೆದುಕೊಳ್ಳದೆ, ತಾರತಮ್ಯ ಬೋಧಿಸುವ ಶಾಸ್ತ್ರಗಳನ್ನು ಮಕ್ಕಿಕಾಮಕ್ಕಿ ಅನುಸರಿಸಿ, ಜಾತಿ ಶ್ರೇಷ್ಠತೆಯನ್ನು ಪ್ರತಿಪಾದಿಸುವ ಹಂತದಿಂದ, ಸಮಾನತೆ ಸಾಧಿಸಲು ಶೋಷಿತ ಸಮುದಾಯಗಳಿಗೆ ನೀಡಲಾದ ಮೀಸಲಾತಿಯನ್ನು ತಿಳಿದೂತಿಳಿದೂ ವಿರೋಧಿಸಿದ ಹಂತಕ್ಕೆ ಬಂದು ನಿಂತು, ಈಗ ತಾವೇ ಶೋಷಿತರು ಎಂದು ಹೇಳಿಕೊಳ್ಳುವ ಮಟ್ಟಕ್ಕೆ ಬೆಳೆದಿರುವುದು ಕ್ರೌರ್ಯದ ಪರಮಾವಧಿಯೇ ಸರಿ. ಸ್ವತಂತ್ರ ಭಾರತದಲ್ಲಿ ಸಂವಿಧಾನ ಕೊಡಮಾಡಿದ ಸಮಾನ ಹಕ್ಕುಗಳ ಕಾರಣಕ್ಕೆ ಸಾಧ್ಯವಾದ ತುಸು ಪ್ರಗತಿಯನ್ನು ಮತ್ತು ಅವಕಾಶವಂಚಿತ ಸಮುದಾಯಗಳಿಗೆ ಸಿಕ್ಕ ಕೆಲವು ಸವಲತ್ತುಗಳನ್ನೂ ಸಹಿಸಿಕೊಳ್ಳಲಾಗದ ಶೋಷಕ ಸಮುದಾಯ ಈಗ ತಾನೇ ಸಂತ್ರಸ್ತ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರತಿಕ್ರಾಂತಿಯ ಕುತಂತ್ರಕ್ಕೆ ಮರುಳಾಗುವವರಿಲ್ಲ ಎಂದು ಮರುಕಪಡುವಂತೆಯೂ ಇಲ್ಲ; ಏಕೆಂದರೆ ಈಗಿನ ಪ್ರಭುತ್ವ ಅವರ ಬೆನ್ನಿಗೇ ನಿಂತು ಮನುಧರ್ಮ ಶಾಸ್ತ್ರವನ್ನು ಪ್ರತಿಷ್ಠಾಪಿಸಲು ಹವಣಿಸುತ್ತಿದೆ! ಮನುವಾದಿ ಮುಖ್ಯವಾಹಿನಿ ಮಾಧ್ಯಮಗಳು ಅದನ್ನು ನಂಬಿಸಲು ಹಗಲಿರುಳು ಶ್ರಮಿಸುತ್ತಿವೆ.

ಇಂಥ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಸಾಹಿತ್ಯದಲ್ಲೋ, ಸಿನಿಮಾದಲ್ಲೋ ಅಥವಾ ವಿಮರ್ಶೆಯಲ್ಲೋ ಜಾತಿ (ಆದರಲ್ಲೂ ಪ್ರಿವಿಲೆಜ್ ಹೆಚ್ಚಿರುವ) ಹೇಗೆ ಕೆಲಸ ಮಾಡುತ್ತಿದೆಯೆಂದು ತೋರಿಸಿ ಚರ್ಚಿಸಿದಾಗ, ’ಜಾತಿಯಿಂದ ಗುರುತಿಸುತ್ತಿದ್ದಾನೆಂದೋ, ಜಾತಿ ಚಹರೆಯನ್ನು ಬಲಪಡಿಸುತ್ತಿದ್ದಾನೆಂದೋ’ ಬಾಯಿಮುಚ್ಚಿಸಲು ಅಥವಾ ಉಳಿದವರು ಅಂತಹ ಚರ್ಚೆಯನ್ನು ಉಪೇಕ್ಷಿಸುವಂತೆ ಉತ್ತೇಜಿಸಲು ಒಂದು ದೊಡ್ಡ ಪಡೆಯೇ ಸನ್ನದ್ಧವಾಗಿರುತ್ತದೆ. ಅಂತಹದೊಂದು ಇತ್ತೀಚಿನ ಉದಾಹರಣೆಯನ್ನು ಗಮನಿಸಬಹುದು. ನಾಗೇಗೌಡ ಕೀಲಾರ ಶಿವಲಿಂಗಯ್ಯ ಕಳೆದ ವರ್ಷ ಬಿಡುಗಡೆಯಾದ ಮತ್ತು ಹತ್ತುಹಲವು ಮರುಮುದ್ರಣಗಳನ್ನು ಕಂಡಿರುವ ವಸುಧೇಂದ್ರರ ’ತೇಜೋ ತುಂಗಭದ್ರಾ’ ಕಾದಂಬರಿಯ ಬಗ್ಗೆ ತಾವು ಓದುಗರಾಗಿ ಅನುಭವಿಸಿದ ಸಮಸ್ಯೆಗಳನ್ನು ವಿವರಿಸಲು ವಾರ್ತಾಭಾರತಿ ಪತ್ರಿಕೆಯಲ್ಲಿ ಅದಕ್ಕೆ ವಿಮರ್ಶೆಯ ರೂಪ ನೀಡಿದ್ದರು. ಆ ವಿಮರ್ಶೆಯ ಮುಖ್ಯ ವಾದಗಳಲ್ಲಿ ಒಂದು: ಹೇಗೆ ಕಾದಂಬರಿ ಇಸ್ಲಮಾಫೋಬಿಯಾವನ್ನು ಪೋಷಿಸುತ್ತದೆಂಬುದು; ಮುಸಲ್ಮಾನ ಪ್ರಭುತ್ವದ ದೌರ್ಜನ್ಯದ ಬಗ್ಗೆ ಪುಟಗಟ್ಟಲೆ ಬರೆದು ಹೇಗೆ ಹಿಂದೂ ರಾಜರ ಕ್ರೌರ್ಯಗಳ ಬಗ್ಗೆ ಮೃದು ಧೋರಣೆ ತಳೆಯುತ್ತದೆಂಬುದು. ಇಂದಿನ ಕಾಲಘಟ್ಟದಲ್ಲಿ (ಎಂದಿಗೂ) ಇಂತಹ ಪಕ್ಷಪಾತಿ ಧೋರಣೆಯ ಕಥಾಹಂದರ ಓದುಗರನ್ನು ಹೇಗೆ ತಪ್ಪಾಗಿ ಪ್ರಭಾವಿಸಬಲ್ಲದು ಎಂಬುದನ್ನು ಅರಿತು, ಅದನ್ನು ಓದುಗರಿಗೆ ವಿಸ್ತರಿಸಬೇಕಿದ್ದ ವಿಮರ್ಶಕರಲ್ಲಿ (ಪುಸ್ತಕದ ಬಗ್ಗೆ ಅಭಿಪ್ರಾಯಗಳನ್ನು ನಮೂದಿಸಿರುವವರನ್ನು ಒಳಗೊಂಡಂತೆ) ಹೆಚ್ಚಿನ ಸಂಖ್ಯೆ ಬ್ರಾಹ್ಮಣರೇ ಇರುವುದರಿಂದ ಅವರಿಗದು ಸಾಧ್ಯವಾಗದೇ ಹೋಯಿತೇ ಎಂಬ ಪ್ರಶ್ನೆಯನ್ನು ನಾಗೇಗೌಡಎತ್ತಿದ್ದರು.

ಈ ಹಿಂದೆ ವಿಮರ್ಶಕ ಸುಭಾಷ್ ರಾಜಮಾನೆ ಮತ್ತೊಂದಿಬ್ಬರ ’ತೇಜೋ ತುಂಗಭಧ್ರಾ’ ಕಾದಂಬರಿಯ ಬಗ್ಗೆ ಇಂತಹ ಕೆಲವು ಸಕಾಲಿಕ ಪ್ರಶ್ನೆಗಳನ್ನು ಎತ್ತಿದ್ದರು. ನಾಗೇಗೌಡರ ಈ ವಿಮರ್ಶೆ, ಕಾದಂಬರಿ ಧ್ವನಿಸುವ ಧೋರಣೆಗಳು ಇಂದು ಬಿಗಡಾಯಿಸಿರುವ ರಾಜಕೀಯ-ಸಾಮಾಜಿಕ ಸನ್ನಿವೇಶಕ್ಕೆ ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ವಿವರವಾಗಿ ಚರ್ಚಿಸಿತ್ತು. ಇದು ವಿಶಾಲ ಚರ್ಚೆಗೆ ಎಡೆಮಾಡಿಕೊಡಬೇಕಿತ್ತು. ಆದರೆ ಕಾದಂಬರಿಕಾರರು ಮತ್ತು ಪ್ರಶ್ನಿಸಲಾದ ವಿಮರ್ಶಕರು ಚರ್ಚೆಯನ್ನು ಮುಂದುವರಿಸಲು ಮುಂದಾಗಿಲ್ಲ. ಒಂದು ರೀತಿಯ ಮೌನ ಆವರಿಸಿದೆ. ಎರಡನೇ ಬಗೆಯ ಪ್ರತಿಕ್ರಿಯೆಯಲ್ಲಿ, ನಾಗೇಗೌಡರು ’ವಿಮರ್ಶಕರ ಜಾತಿಯನ್ನು ಎತ್ತಿತೋರಿಸಿರುವ ಕಾರಣಕ್ಕಾಗಿ’ ಅವರೇ ಜಾತಿಗ್ರಸ್ತರು ಎಂಬ ಹೀಗಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದವು. ಇವರಲ್ಲಿ ಬಹುತೇಕರು, ಜಾತಿಯನ್ನು ಮರೆಮಾಚಿಕೊಳ್ಳುವ ಅದರೆ ಅದರಿಂದ ಸಿಗುವ ಪ್ರಿವಿಲೆಜ್‌ಗಳನ್ನು ಅನುಭವಿಸುವವರು ಮತ್ತು ಜಾತಿ ಸಾರ್ವಜನಿಕವಾಗಿ ಚರ್ಚೆಯಾದ ಕೂಡಲೇ ಬೆದರುವ ವರ್ಗಕ್ಕೆ ಸೇರಿದವರು. ಇಂತಹ ’ಕೃತಕ’ ಮರೆಮಾಚುವಿಕೆ ಜಾತಿವಿನಾಶಕ್ಕೆ ನಿಜವಾದ ಅಡೆತಡೆಯುಂಟುಮಾಡಿದೆ ಎಂಬುದು ಹಲವು ವರ್ಷಗಳಿಂದ ಚರ್ಚೆಯಲ್ಲಿರುವ ಸಂಗತಿ. ಬಹುಜನರೆನ್ನಿಸಿಕೊಳ್ಳುವ ವಿವಿಧ ಸಮುದಾಯಗಳ ಚಹರೆ ಅಥವಾ ಅಸ್ಮಿತೆಯನ್ನು ಬಲಪಡಿಸುವುದರಿಂದಲೇ ಜಾತಿವಿನಾಶ ಸಾಧ್ಯ ಎಂದು ’ದಲಿತ್ ವಾಯ್ಸ್’ ಪತ್ರಿಕೆ ಸಂಪಾದಿಸುತ್ತಿದ್ದ ವಿ ಟಿ ರಾಜಶೇಖರ್ ಅಂತಹವರು ವಾದಿಸಿದ್ದೂ ಕೂಡ ಇದೆ.

’ತೇಜೋ ತುಂಗಭಧ್ರಾ’ದ ವಿಮರ್ಶೆ ಪ್ರಕಟವಾದ ನಂತರದಲ್ಲಿ ಕಥೆಗಾರ-ವಿಮರ್ಶಕ-ಪತ್ರಕರ್ತ ಚ.ಹ ರಘುನಾಥ ಅವರ ಲೇಖನವೊಂದು ಪ್ರಕಟವಾಯ್ತು (ಇದು ವಿಮರ್ಶೆಗೆ ಪ್ರತಿಕ್ರಿಯಿಯೇನಲ್ಲ). ಅವರ ಪ್ರಜಾವಾಣಿಯ ಅಂಕಣ ’ಪಡಸಾಲೆ’ಯಲ್ಲಿ “ಕನ್ನಡದ ಓದುಗರು ಸಾಹಿತ್ಯ ಕೃತಿಯೊಂದನ್ನು ಒಕ್ಕೊರಲಿನಿಂದ ಸಂಭ್ರಮಿಸಿದ್ದು ಕೊನೆಯದಾಗಿ ಯಾವಾಗ” ಎಂಬ ಪ್ರಶ್ನೆಯೊಂದಿಗೆ ಪ್ರಾರಂಭಿಸಿ ಕೆಲವು ಜನರೈಲೇಶನ್‌ಗಳನ್ನು ಮಾಡುತ್ತಾ ಹೋಗುತ್ತಾರೆ. ಕೆಲವು ಲೇಖಕರ ಹೆಸರುಗಳನ್ನು ಮತ್ತು ಬರಹಗಳನ್ನು ನಮೂದಿಸುತ್ತಾ, ತಮ್ಮ ಸಮುದಾಯ ವರ್ಗಗಳನ್ನು ಮೀರಿ ಆ ಲೇಖಕರು ಮತ್ತು ಅವರ ಸಾಹಿತ್ಯಿಕ ಕೃತಿಗಳು ಎಲ್ಲರಿಗೂ ತಲುಪಿದ್ದವು ಎಂದು ಹೇಳುವ ಮಾತು ಅರ್ಧ ಸತ್ಯ ಮಾತ್ರದ್ದು. ಮಲೆಗಳಲ್ಲಿ ಮದುಮಗಳು ಆಗಲೀ ಕುಸುಮಬಾಲೆಯೇ ಆಗಲೀ ಆ ಕಾದಂಬರಿಗಳನ್ನು ಮತ್ತು ಅವುಗಳ ಲೇಖಕರನ್ನು ಕಡೆಗಣಿಸುವ ರಾಜಕೀಯ ಅವುಗಳು ರಚನೆಯಾದಾಗಿಲಿಂದಲೂ ಇದ್ದೇಇದ್ದುದನ್ನು ಮರೆಮಾಚಲಾದೀತೇ? ಅದರ ಹಿಂದೆ ಜಾತಿ ರಾಜಕೀಯ ಇದ್ದುದನ್ನು ಗುರುತಿಸಲಾಗುವುದಿಲ್ಲವೇ? ಇತ್ತೀಚೆಗೆ ’ಆರ್‌ಎಸ್‌ಎಸ್| ಆಳ ಮತ್ತು ಅಗಲ’ ಕೃತಿಯನ್ನು ಬರೆದಾಗ ದೇವನೂರ ಮಹದೇವರನ್ನು ಯಾವ ರೀತಿ ಹಳಿಯಲಾಯಿತು ಎಂಬುದರ ಹಿಂದೆ ಜೀವವಿರೋಧಿ ಸಿದ್ಧಾಂತ ಕೆಲಸ ಮಾಡುತ್ತಿಲ್ಲವೇ? ಅದರ ಹಿಂದೆ ಜಾತಿ ಪ್ರತಿಷ್ಠೆಯ ಪಿತೂರಿಯಿಲ್ಲವೇ?

ರಘುನಾಥರು ಮುಂದುವರಿದು “ಸಮಸ್ಯೆ ಇರುವುದು, ಗ್ರಹಿಕೆ ಮತ್ತು ಸ್ವೀಕಾರದ ಹಿನ್ನೆಲೆಯಲ್ಲಿ ಸಾಹಿತ್ಯದ ಮಾನವೀಯ ಸೆಲೆಗಳಿಗಿಂತಲೂ ಸಾಮಾಜಿಕ-ರಾಜಕೀಯ ಮುನ್ನಲೆಗೆ ಬರುತ್ತಿರುವುದರಲ್ಲಿ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಲಂಕೇಶ್ ಮತ್ತು ಅಡಿಗರು ಕೆಲಸ ಮಾಡುವುದು ಸಾಧ್ಯವಾಗುವುದು ಹಾಗೂ ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಕುವೆಂಪು ಹಾಗೂ ಮಾಸ್ತಿ ಪರಸ್ಪರ ಗೌರವ ಉಳಿಸಿಕೊಂಡಿದ್ದನ್ನು ಗಮನಿಸಬೇಕು” ಎನ್ನುತ್ತಾರೆ. ಸಾಮಾಜಿಕ-ರಾಜಕೀಯವನ್ನು ಹೊರತುಪಡಿಸಿದ ಮಾನವೀಯ ಸೆಲೆಗಳನ್ನು ಹುಡುಕುವುದು ಸಾಧ್ಯವೇ? ಮಾನವೀಯ ಸೆಲೆಗಳನ್ನು ಕಾಪಾಡಿಕೊಳ್ಳುವುದಕ್ಕಾಗಿಯೇ ಎಷ್ಟೋ ಸಾಮಾಜಿಕ-ರಾಜಕೀಯ ಹೋರಾಟಗಳು ಇಂದು ನಡೆಯುತ್ತಿವೆಯಲ್ಲವೇ? ಸಾಹಿತ್ಯದಲ್ಲಿ ರಾಜಕೀಯ-ಸಾಮಾಜಿಕ ಸಮಸ್ಯೆಗಳನ್ನು ಮುನ್ನಲೆಗೆ ತರಬಾರದು ಎಂಬುದು ಯಥಾಸ್ಥಿತಿಯನ್ನು ಬೋಧಿಸುವ, ಅಸಮಾನತೆಯಲ್ಲಿಯೇ ಸಾಮರಸ್ಯ ಸಾಧಿಸಬಹುದೆಂಬುವ ವೈದಿಕಶಾಹಿ ಪುರಾಣಗಳ ಕಂತೆಮಾತಿನಂತೆ ಕೇಳಿಸುವುದಿಲ್ಲವೇ?

ಭಿನ್ನಾಭಿಪ್ರಾಯಗಳ ನಡುವೆಯೂ ಇಬ್ಬರು ಸಾಹಿತಿಗಳು ಕೆಲಸ ಮಾಡಲು ಸಾಧ್ಯವಾಯಿತು ಎಂಬ ಜನರಲೈಸೇಷನ್ ಕುರಿತು ಹೇಳುವುದಾದರೆ, 70 ಮತ್ತು 80ರ ದಶಕ ಜಾತಿ ಮತ್ತು ಸಿದ್ಧಾಂತಗಳ ಕಾರಣಕ್ಕೆ ಹಲವು ಪ್ರಯೋಗಗಳನ್ನು ಮತ್ತು ಹಲವು ವಿವಾದಗಳನ್ನು ಕಂಡ ಕಾಲ. ಒಂದು ರೀತಿಯ ಅಶಾಂತತೆಯನ್ನು ಹುಟ್ಟುಹಾಕಿದ್ದ ಕಾಲ. ಬಸವಲಿಂಗಪ್ಪನವರ ’ಕನ್ನಡ ಸಾಹಿತ್ಯದಲ್ಲಿ ಹೆಚ್ಚಿನದು ಬೂಸಾ’ ಎಂಬ ಹೇಳಿಕೆಯಿಂದ ಕೆರಳಿ ಶೋಷಕ ಸಮುದಾಯದ ಜನರು ಸೃಷ್ಟಿಸಿದ ಗಲಭೆಗಳು ಮುಂದೆ ಬ್ರಾಹ್ಮಣರನ್ನು ಹೊರತುಪಡಿಸಿದ ’ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ’ಕ್ಕೆ ಕಾರಣವಾಯಿತು (ಅಲ್ಲಿಯವರೆಗೂ ಹೆಚ್ಚು ಕೇಳಿಬರುತ್ತಿದ್ದ ಬ್ರಾಹ್ಮಣೇತರ ಚಳವಳಿಗಳು ಸಕ್ರಿಯವಾಗಿದ್ದ ಕಾರಣಕ್ಕೂ). ಈ ಒಕ್ಕೂಟದ ಬಗ್ಗೆ ಸಾಹಿತಿ ಯು.ಆರ್ ಅನಂತಮೂರ್ತಿಯವರೂ ಸೇರಿದಂತೆ ಹಲವು ಬ್ರಾಹ್ಮಣ ಸಾಹಿತಿಗಳು ವ್ಯಕ್ತಪಡಿಸಿದ ಅಸಹನೆಯ ಅಭಿಪ್ರಾಯಗಳು ಹಲವು ಬಣ್ಣಗಳಿಂದ ಕೂಡಿದ್ದವು. ಅಂದರೆ ಎಲ್ಲವೂ ಅಂದು ಅನ್ಯೋನ್ಯವಾಗಿಯೇನೂ ಇರಲಿಲ್ಲ ಅನ್ನುವುದು ಸ್ಪಷ್ಟ. ಅನ್ಯೋನ್ಯವಾಗಿ ಇರುವ ಅವಶ್ಯಕತೆಯೂ ಇರಲಿಲ್ಲ. ಆದರೆ ಆ ಘರ್ಷಣೆಗಳಿಂದ ಹೊಮ್ಮಬೇಕಿದ್ದ ವಿವೇಕ ಮತ್ತು ತಿಳಿವಳಿಕೆ ಮುಂದಿನ ಪೀಳಿಗೆಗಳಿಗೆ ದಕ್ಕದಂತೆ ಮತ್ತೆ ವೈದಿಕ ಶಕ್ತಿಗಳು ಹೇಗೆ ಜಾಗೃತವಾದವು ಎಂಬುದನ್ನು ಇಂದು ಅವಲೋಕಿಸುವ ತುರ್ತು ಖಂಡಿತಾ ಇದೆ. ಇಲ್ಲದಿದ್ದರೆ ಬ್ರಾಹ್ಮಣ ಮಹಾಸಭಾದವರು ಅತ್ಯುಗ್ರತೆಯಿಂದ ತಾವು ಬಲಿಪಶುಗಳು ಎಂದು ಹೇಳುವ ಸುಳ್ಳಿನ ಪುನರಾವರ್ತನೆ ನಿಲ್ಲುವುದೇ ಇಲ್ಲ!

ಯು.ಆರ್ ಅನಂತಮೂರ್ತಿಯವರು ತಾವು ಪ್ರಾರಂಭಿಸಿದ ಋಜುವಾತು ಪತ್ರಿಕೆಯ ಮೊದಲನೇ ಸಂಚಿಕೆಯಲ್ಲಿಯೇ ಬರಹಗಾರರ ಒಕ್ಕೂಟವನ್ನು ಅಟ್ಯಾಕ್ ಮಾಡಲು ಸಂಪಾದಕೀಯವನ್ನು ಬಳಸಿಕೊಳ್ಳುತ್ತಾರೆ. ಋಜುವಾತು ಸಂಪಾದಕ ಮಂಡಲಿಯ 20 ಜನರಲ್ಲಿ 16 ಜನ ಬ್ರಾಹ್ಮಣರು ಇದ್ದುದ್ದನು ಲಂಕೇಶರು ಎತ್ತಿತೋರಿಸಿದ್ದರೆಂದು ಚಂಪಾ 1981ರಲ್ಲಿ ಬರೆದ ಸಂಕ್ರಮಣದ ಒಂದು ಸಂಪಾದಕೀಯದಲ್ಲಿ ದಾಖಲಿಸುತ್ತಾರೆ. ’ಮೇಜರ್-ಶ್ರೇಷ್ಠ-ಮುಖ್ಯ’ ಎಂಬ ಗುಣವಿಶೇಷಣಗಳನ್ನು ಬಳಸಿ ಹೇಗೆ ಬ್ರಾಹ್ಮಣ ಜಾತಿಯ ಕವಿವರ್ಗ ಅವರವರನ್ನೇ ಬಿಂಬಿಸಿಕೊಂಡಿತು ಮತ್ತು ಶೂದ್ರ-ದಲಿತ ಬರಹಗಾರರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿತು ಎಂಬುದನ್ನೂ ಚಂಪಾ ಬರೆಯುತ್ತಾರೆ. ಗೋಪಾಲಕೃಷ್ಣ ಅಡಿಗರ ಎಷ್ಟೋ ಪದ್ಯಗಳು ಪ್ರಜಾಪ್ರಭುತ್ವ ವಿರೋಧಿ ಮತ್ತು ಸನಾತನ ’ಶ್ರೇಷ್ಠತೆ’ಯನ್ನು ಮೆರೆಯುವಂತಹವು ಹಾಗೂ ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು ತಮ್ಮ ಸಾಹಿತ್ಯದಲ್ಲಿಯೂ ಅದೇ ಧೋರಣೆ ಹೊಂದಿದ್ದರು ಎಂಬಂತಹ ವಿಷಯಗಳನ್ನು ತೇಜಸ್ವಿ-ಚಂಪಾರಂತಹವರು ಚರ್ಚಿಸಿದ್ದರೂ, ಅವರ ಸಾಹಿತ್ಯವನ್ನು ಬಗೆದು ನೋಡದೆ, ಮುಂದಿನ ಪೀಳಿಗೆಗೆ ಅದರ ಸಮಸ್ಯೆಗಳನ್ನು ತಿಳಿಯದಂತೆ ಅವರನ್ನು ’ಮೇಜರ್’ ಕವಿಯನ್ನಾಗಿಯೇ ಉಳಿಸಿಕೊಂಡ, ’ಸಾಹಿತ್ಯ ಮತ್ತು ಮಾಧ್ಯಮ ವಲಯ’ ಹೆಚ್ಚು ಯಾರ ಹಿಡಿತದಲ್ಲಿದೆ ಎಂಬುದನ್ನು ಇಂದಾದರೂ ತಿಳಿಯಬೇಕಲ್ಲವೇ? ಹಿಂದೆ ಎಲ್ಲವೂ ರಮ್ಯವಾಗಿತ್ತೆಂಬ ಕಲ್ಪನೆಯನ್ನು ಬದಿಗೊತ್ತಿ, ಅಡಿಗರು ತಮ್ಮ ಪದ್ಯಗಳಲ್ಲಿ ತಂದಿರುವ ರಾಜಕೀಯವನ್ನು ಎಳೆಎಳೆಯಾಗಿ ಬಿಡಿಸಿ ಇಂದಾದರೂ ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಹಲವು ಕಾಲಘಟ್ಟಗಳಲ್ಲಿ ಇದ್ದ ಓದಿನ ರಾಜಕೀಯದ ಬಗ್ಗೆ ಹೆಚ್ಚಿನ ಚರ್ಚೆಗಳಾಗಬೇಕಿದೆ. ಇದು ಯಾವುದೋ ಜಾತಿಯ ಬಗ್ಗೆ ಅಥವಾ ಒಂದು ನಿರ್ದಿಷ್ಟ ಜಾತಿಯ ಲೇಖಕರ ಬಗ್ಗೆ ಅಸಹನೆ ಮೂಡಿಸುವುದಕ್ಕಲ್ಲ. ಆದರೆ, ಅಂದು ಸಿಕ್ಕ ಪ್ರಿವಿಲೆಜ್ ಇಂದ ಯಾವ ಸಿದ್ಧಾಂತದ ರಾಜಕೀಯವನ್ನು ಅವರು ಪಸರಿಸಿದರು ಎಂಬುದನ್ನು ಡಿಸೆಕ್ಟ್ ಮಾಡಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಆಯಾಯ ಲೇಖಕರು ನೀಡಿರುವ ಕೊಡುಗೆಗಳನ್ನು ಮರೆಮಾಚುವ ಯಾವ ಉದ್ದೇಶವೂ ಇರುವುದಿಲ್ಲ.

ಯುಆರ್‌ಎ ಅವರು ತಮ್ಮ ಕೊನೆಗಾಲದಲ್ಲಿಯೂ ’ಹಿಂದುತ್ವ ಅಥವಾ ಹಿಂದ್ ಸ್ವರಾಜ್’ ಬರೆದು, ಹಿಂದುತ್ವದ ಶಕ್ತಿಗಳಿಗೆ ತೋರಿಸಿದ ಪ್ರತಿರೋಧವನ್ನು ಎಂದಿಗೂ ಮರೆಯುವಂತಿಲ್ಲ. ಅದೇ ರೀತಿಯಲ್ಲಿ ಇನ್ನೂ ಉನ್ನತವಾದ ವಿವೇಕ ನಮ್ಮ ಸಮಾಜಕ್ಕೆ ದಕ್ಕಬೇಕಾದರೆ, ಅದರ ಪೂರ್ವದಲ್ಲಿ ತಾರಕದಲ್ಲಿದ್ದ ಚರ್ಚೆಗಳನ್ನೂ, ಅವು ಸಾಹಿತ್ಯಕ್ಕೆ ಸಂಬಂಧಿಸಿದವಾದರೂ ರಾಜಕೀಯ-ಸಾಮಾಜಿಕ-ಸೈದ್ಧಾಂತಿಕ ನೆಲೆಯಲ್ಲಿ ಅವಲೋಕಿಸುವುದು ಮುಖ್ಯವಾಗಿದೆ.

ಸಾಹಿತ್ಯದ ಹಿನ್ನೆಲೆಯಲ್ಲಿ ಈ ಸಂಗತಿಗಳನ್ನು ಚರ್ಚಿಸಲಾಯಿತಾದರೂ, ಸಮಾಜದಲ್ಲಿ ಜಾತಿ ಹಿಡಿತ ಎಷ್ಟು ಬಲವಾಗುತ್ತಿದೆ ಎಂಬುದನ್ನು ಬ್ರಾಹ್ಮಣ ಮಹಾಸಭಾದ ಸಭೆ ಎತ್ತಿ ತೋರಿಸಿದೆ. ಬ್ರಾಹ್ಮಣ ಸಮುದಾಯದ ಮಟ್ಟಕ್ಕಲ್ಲದಿದ್ದರೂ ಒಂದು ಕಾಲಕ್ಕೆ ಹಾವನೂರು ವರದಿ ನೀಡಿದ್ದ ಮೀಸಲಾತಿಯ ವಿರುದ್ಧ ನಿಂತಿದ್ದ ಲಿಂಗಾಯತ ಸಮುದಾಯ ಇಂದು ಹೆಚ್ಚಿನ ಮೀಸಲಾತಿಗೆ ಬೇಡಿಕೆಯೊಡ್ಡುತ್ತಿದೆ. ಒಕ್ಕಲಿಗರ ಸಮಾವೇಶಗಳೂ ಆ ನಿಟ್ಟಿನಲ್ಲಿ ನಡೆದಿವೆ. ಅಂದರೆ ಜಾತಿ ಸೂಚಕ ಹೆಸರುಗಳನ್ನು ವ್ಯಕ್ತಿಗತವಾಗಿ ಮರೆಮಾಚಿದ್ದು ಸಾಮುದಾಯಿಕವಾಗಿ ಜಾತಿವಿನಾಶಕ್ಕೆ ದೊಡ್ಡ ಕೊಡುಗೆಯೇನನ್ನೂ ನೀಡದಿರುವುದು ಸ್ಪಷ್ಟವಾಗಿದೆ. ಭಾರತದಂತಹ ದೇಶದಲ್ಲಿ ಸಾರ್ವಜನಿಕ ಪ್ರದೇಶಗಳನ್ನು ಜಾತಿಮುಕ್ತಗೊಳಿಸಿದ್ದು ಒಂದು ಕ್ರಾಂತಿಕಾರಕ ಕಾರ್ಯಕ್ರಮವಾಗಿದ್ದರೂ, ಜಾತಿಯ ಜೊತೆಗೆ ಬೆಸುಗೆ ಹೊಂದಿದ್ದ ಸವಲತ್ತುಗಳು ಉದ್ಯಮ, ಶಿಕ್ಷಣ ಹಾಗೂ ಇನ್ನಿತರ ವಲಯಗಳಲ್ಲಿ ಬೇರೆಬೇರೆ ರೀತಿಯಲ್ಲಿ ಅವ್ಯಾಹತವಾಗಿ ಮುಂದುವರಿದಿವೆ. ಈ ನಿಟ್ಟಿನಲ್ಲಿ ಇಂದು ಜಾತಿಯನ್ನು ಬಹಿರಂಗವಾಗಿ ಕಾಣದಂತೆ ಮುಚ್ಚಿಟ್ಟು ಸಾಮಾಜಿಕ ಆಗಿಹೋಗುಗಳನ್ನು ಅವಲೋಕಿಸುವ ಸಂದರ್ಭಕ್ಕೆ ನಾವಿನ್ನೂ ಬಂದುನಿಂತಿಲ್ಲ.

ಈ ಹಲವು ಚರ್ಚೆಗಳ ಹಿನ್ನೆಲೆಯಲ್ಲಿ ಜಾತಿಯ ಬಗೆಗೆ ಸಾರ್ವಜನಿಕವಾಗಿ ಮಾತನಾಡಬೇಕಾದ ಅವಶ್ಯಕತೆ ಇಂದು ಹೆಚ್ಚಾಗಿದೆ. ಅದು, ಜಾತಿ ಪ್ರತಿಷ್ಠೆಯನ್ನು ಮೆರೆಯುವ ಅಥವಾ ವರ್ಣಾಶ್ರಮದಲ್ಲಿ ಮೇಲು-ಕೀಳಿರಲಿಲ್ಲ ಎಂಬ ತಥಾಕಥಿತ ಸುಳ್ಳನ್ನು ಪುನರಾವರ್ತಿಸುವ ರೀತಿಯಲ್ಲಲ್ಲ. ತಮ್ಮ ಜಾತಿ ಸಲುವಾಗಿ ಸಿಕ್ಕಿರುವ ವೈಯಕ್ತಿಕ-ಔದ್ಯೋಗಿಕ-ಸಾಮಾಜಿಕ ಸವಲತ್ತುಗಳನ್ನು ನಾವೆಲ್ಲರೂ ಇನ್ನಷ್ಟು ತೀಕ್ಷ್ಣ ವಿಮರ್ಶೆಯ ದೃಷ್ಟಿಯಿಂದ ನೋಡಿಕೊಳ್ಳಬಹುದೇ? ಜಾತಿಯನ್ನು ಮೀರುವ ಬಗೆಗೆ ಇಲ್ಲಿಯವರೆಗೂ ಕಟ್ಟಿಕೊಂಡಿದ್ದ ಕಲ್ಪನೆಗಳನ್ನು ವಿಮರ್ಶೆಗೆ ಒಡ್ಡಿಕೊಳ್ಳಬಹುದೇ? ಒಂದು ಸಮುದಾಯಕ್ಕೆ ಸೇರಿರುವವರಾಗಿ ಅನುಭವಿಸಿರಬಹುದಾದ ಶೋಷಣೆಯ ಜತೆಜತೆಗೇ ತಮ್ಮ ಸಮುದಾಯ ಶೋಷಕನಾಗಿ ವರ್ತಿಸಿರುವ-ವರ್ತಿಸುತ್ತಿರುವ ವಿದ್ಯಮಾನಗಳನ್ನು ಮತ್ತೆ ಅವಲೋಕಿಸಿಕೊಳ್ಳಬಹುದೇ? ತಾನು ಮಾಡುತ್ತಿರುವ ಶೋಷಣೆಯ ಕಾರಣಗಳಿಂದ ತಾನು ಕಳೆದುಕೊಳ್ಳುತ್ತಿರುವ ವಿವೇಕ-ಶಾಂತಿ-ಸಹಬಾಳ್ವೆ ಮುಂತಾದ ಕಲ್ಪನೆಗಳ ಬಗ್ಗೆ ತಿಳಿಯದೆ ಶೋಷಕನೂ ಕೂಡ ’ಸಮಸ್ಯೆ’ಯಲ್ಲಿದ್ದಾನೆ ಎಂಬ ಅರಿವಿನ ಬೆಳಕಿನಲ್ಲಿ ಹೊಸ ಪರಿಹಾರಗಳ, ಹೊಸ ದಾರಿಗಳ ಶೋಧನೆಗೆ ತೊಡಗಿಕೊಳ್ಳಬಹುದೇ? ಇಂತಹ ಒಳನೋಟಗಳು ದಕ್ಕಿದಾಗ ಹುಟ್ಟುವ ವೈರುಧ್ಯವನ್ನು ಬಗೆಹರಿಸಿಕೊಳುವ ದಾರಿಗಳನ್ನು ಕಂಡುಹಿಡಿಯಲು ಮುಂದಾಗಬಹುದೇ? ಇಂತಹ ಮತ್ತು ಈ ರೀತಿಯಲ್ಲಿ ಆರೋಗ್ಯಪೂರ್ಣ ಮತ್ತು ಪ್ರಗತಿದಾಯಕವಾಗಿ ಬೆಳೆಸಬಹುದಾದ ಪ್ರಶ್ನೆಗಳೊಂದಿಗೆ ಜಾತಿ ಬಗ್ಗೆ ಸಾರ್ವಜನಿಕವಾಗಿ ಸಂವಾದಿಸುವ-ಚರ್ಚಿಸುವ ಸಲುವಾಗಿ ನ್ಯಾಯಪಥ ಪತ್ರಿಕೆ ವೇದಿಕೆಯಾಗಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಕೆಲವು ಆಹ್ವಾನಿತ ಬರಹಗಳ ಜೊತೆಗೆ ಓದುಗರೂ ಸಂವಾದದಲ್ಲಿ ತೊಡಗಿಕೊಳ್ಳಲು ಮುಕ್ತ ಆಹ್ವಾನವಿದೆ. ಈ ಸಂವಾದ ನಡೆಸುವ ಬಗೆಗಿನ ನಿಮ್ಮ ಅನಿಸಿಕೆಗಳನ್ನ, ಮತ್ತು ಸಂವಾದದಲ್ಲಿ ಪಾಲ್ಗೊಳ್ಳಲು ಈಮೇಲ್ ಬರೆಯುತ್ತೀರಲ್ಲವೇ?


ಇದನ್ನೂ ಓದಿ: ಸದನದಲ್ಲಿ ಹಗರಣಗಳ ಸದ್ದು; ’ಹಿಟ್ ಅಂಡ್ ರನ್’ ಇತಿಹಾಸ ಮರುಕಳಿಸುವುದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...