ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ತನ್ನ ಪ್ರತಿಕ್ರಿಯೆ ಅಥವಾ ಸ್ಥಿತಿಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಇಂದು(ಜೂ.10) ಅವಕಾಶ ನೀಡಿದೆ.
ಜೂನ್ 4ರಂದು ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು ಮತ್ತು 40ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸಂಬಂಧ ಜೂನ್ 5ರಂದು ಹೈಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಬಳಿಕ ವಿಚಾರಣೆಯನ್ನು ಇಂದಿಗೆ (ಜೂ.10) ಮುಂದೂಡಿತ್ತು.
ಇಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ಮುಂದುವರಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್ (ಎಜಿ) ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು “ನಮ್ಮ ಪ್ರತಿಕ್ರಿಯೆ ಸಲ್ಲಿಸಲಾಗಿಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದ್ದು, ಒಂದು ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳ ಜಾಮೀನು ಅರ್ಜಿಗಳು ಬಾಕಿ ಇದ್ದು, ಇಲ್ಲಿ ಹೇಳುವುದನ್ನು ಅವರು ಅಲ್ಲಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ” ಎಂದರು.
ಅದಕ್ಕೆ ಪೀಠವು “ನ್ಯಾಯಾಲಯದ ನಿರ್ದೇನಕ್ಕೆ ನೀವು ಪ್ರತಿಕ್ರಿಯೆ ಸಲ್ಲಿಸುವುದಿಲ್ಲ ಎಂದು ಹೇಳುತ್ತಿದ್ದೀರಾ?” ಎಂದಿತು. ಈ ವೇಳೆ ಎಜಿ ಅವರು “ದಯಮಾಡಿ ಈ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು. ಕೆಲವು ವಿಚಾರಗಳಿವೆ ಸ್ವಾಮಿ” ಎಂದರು.
ಆಗ ಮತ್ತೆ ಪೀಠವು “ಸಮಸ್ಯೆ ಏನಿದೆ?” ಎಂದು ಮರು ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ಮುಕ್ತ ನ್ಯಾಯಾಲಯದಲ್ಲಿ ಹೇಳುವುದರಿಂದ ಪೂರ್ವಾಗ್ರಹ ಉಂಟಾಗಲಿದೆ. ಸ್ವತಂತ್ರ ವಿಚಾರಣಾ ಆಯೋಗದಿಂದ ವರದಿ ಬರಲಿ. ನಾವು ಪಕ್ಷಪಾತಿಗಳಾಗಿದ್ದೇವೆ ಎನಿಸಬಾರದು. ಇದು ಒಂದು ತಿಂಗಳ ವಿಚಾರವಷ್ಟೆ” ಎಂದರು.
ಆಗ ಹೈಕೋರ್ಟ್ “ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ” ಎಂದಿತು. ಇದಕ್ಕೆ ಎಜಿ ಅವರು “ಕಳೆದ ವಿಚಾರಣೆಯಲ್ಲಿ ಪ್ರಕರಣವನ್ನು ಸಿಐಡಿಗೆ ನೀಡಲಾಗಿದೆ ಎಂದು ಹೇಳಿದ್ದೇನೆ. ಆ ದಿನವೇ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಇದನ್ನು ಆರೋಪಿಗಳು ಜಾಮೀನು ಅರ್ಜಿಯಲ್ಲಿ ಬಳಸಿಕೊಳ್ಳುತ್ತಾರೆ” ಎಂದರು. ಇದಕ್ಕೆ ಪೀಠವು “ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿ” ಎಂದಿತು.
ಮುಂದಿನ ವಿಚಾರಣೆ ಜೂನ್ 12ಕ್ಕೆ ನಿಗದಿಯಾಗಿದೆ
Credit: livelaw.in