Homeಚಳವಳಿತಳಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಬಂದಂತೆಲ್ಲಾ ಅದರ ಅನುದಾನ ಕಡಿತವಾಗುತ್ತಿದೆ..

ತಳಸಮುದಾಯದ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಹೆಚ್ಚು ಬಂದಂತೆಲ್ಲಾ ಅದರ ಅನುದಾನ ಕಡಿತವಾಗುತ್ತಿದೆ..

ಸರಕಾರವು ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣ ಮತ್ತು ವಾಣಿಜ್ಯೀಕರಣಕ್ಕೆ ಒತ್ತು ನೀಡುತ್ತಿದ್ದು, ಪ್ರಜೆಗಳಿಗೆ ಶಿಕ್ಷಣ ನೀಡಬೇಕಾದ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಅದರ ಅಂಗವಾಗಿ ಸಾರ್ವಜನಿಕ ರಂಗದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಷವರ್ಷವೂ ಅನುದಾನ ಕಡಿತ ಮಾಡುತ್ತಿದೆ. ಪರಿಣಾಮವಾಗಿ ಶಿಕ್ಷಣ ವ್ಯವಸ್ಥೆಯು ಸಂಪೂರ್ಣ ಕೊಳೆತಿದ್ದು, ಇದರ ಹೊರೆಯನ್ನು ಹೊರಬೇಕಾದ ಹೆತ್ತವರಿಗೆ ಪರಿಸ್ಥಿತಿಯ ಸಂಪೂರ್ಣ ಅರಿವಿಲ್ಲ. 

- Advertisement -
- Advertisement -

(ಪೀಪಲ್ಸ್ ಕಮೀಷನ್ ಆನ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ದೇಶದ ಶಿಕ್ಷಣ ಸಂಸ್ಥೆಗಳ ಮೇಲಿನ ಆಕ್ರಮಣಗಳ ಕುರಿತು ವಿಚಾರಣೆ ನಡೆಸಲು ಜನತಾ ನ್ಯಾಯಮಂಡಳಿಯೊಂದನ್ನು ಸಂಘಟಿಸಿತ್ತು. ಮಂಡಳಿಯಲ್ಲಿ ನ್ಯಾಯಮೂರ್ತಿ (ನಿವೃತ್ತ) ಹೊಸಬೆಟ್ ಸುರೇಶ್, ನ್ಯಾಯಮೂರ್ತಿ (ನಿವೃತ್ತ) ಬಿ.ಜಿ ಕೋಲ್ಸೆ-ಪಾಟೀಲ್, ಪ್ರೊ. ಅಮಿತ್ ಬಡೂರಿ, ಡಾ. ಉಮಾ ಚಕ್ರವರ್ತಿ, ಪ್ರೊ. ಟಿ.ಕೆ. ಊಮ್ಮನ್, ಪ್ರೊ. ವಸಂತಿ ದೇವಿ, ಪ್ರೊ. ಘನಶ್ಯಾಮ್ ಶಾ, ಪ್ರೊ. ಮೆಹರ್ ಇಂಜಿನಿಯರ್, ಪ್ರೊ. ಕಲ್ಪನಾ ಕಣ್ಣಬೀರನ್, ಪಮೇಲಾ ಫಿಲಿಪೋಸ್ ಅವರು ಸದಸ್ಯರಾಗಿದ್ದರು. ಅದರ ವರದಿ ಈಗ ಲಭ್ಯವಿದ್ದು, ಮಂಡಳಿಯ ಮುಂದೆ ನೀಡಲಾದ ಸಾಕ್ಷ್ಯದ ಲೇಖನ ರೂಪವಿದು.)

ಪ್ರೊ. ಕೃಷ್ಣ ಕುಮಾರ್: (ಮಾಜಿ ನಿರ್ದೇಶಕರು, ಎನ್‌ಸಿಇಆರ್‌ಟಿ ಮತ್ತು ಪ್ರಾಧ್ಯಾಪಕರು ದಿಲ್ಲಿ ವಿಶ್ವವಿದ್ಯಾಲಯ)

ನಿರೂಪಣೆ: ನಿಖಿಲ್ ಕೋಲ್ಪೆ 

ಭಾರತದಲ್ಲಿ ಉನ್ನತ ಶಿಕ್ಷಣದ ಈಗಿನ ಪರಿಸ್ಥಿತಿಯು ಇತಿಹಾಸದಲ್ಲಿ ಬೇರುಗಳನ್ನು ಹೊಂದಿದೆ. ಇದು ಕೇವಲ ಸ್ವಾತಂತ್ರ್ಯೋತ್ತರ ಅವಧಿಯ ಕುರಿತ ವಿಷಯ ಮಾತ್ರವಲ್ಲ. ಈ ಬೇರುಗಳು ವಸಾಹತುಶಾಹಿ ಅವಧಿಯಲ್ಲಿ ರೂಪಿಸಿದ ಧೋರಣಾತ್ಮಕ ಚೌಕಟ್ಟಿನಲ್ಲಿ ಅಡಗಿವೆ.

ಈಗಿನ ಬಿಕ್ಕಟ್ಟು ನಮಗೆ ನಮ್ಮ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ, ಸಾಂಸ್ಥಿಕವಾದ ಅವನತಿ, ನಾವು ಯೋಚಿಸಬೇಕಾದ ಸಾಂಸ್ಥಿಕ ಪುನಶ್ಚೇತನದ ಪ್ರಮಾಣದ ಅಗಾಧತೆಯನ್ನು ನೆನಪಿಸುತ್ತದೆ. ಪುನಶ್ಚೇತನದ ಹೊಸ ಪ್ರಕ್ರಿಯೆಯ ಆರಂಭಕ್ಕೆ ನಾವು ಒಗ್ಗೂಡಿಸಬೇಕಾಗಿರುವ ಸಾಮೂಹಿಕ ಮನಸ್ಸು ಮತ್ತು ಸಂಕಲ್ಪದ ಪ್ರಮಾಣ ಒತ್ತಟ್ಟಿಗಿರಲಿ, ಇಲ್ಲಿ ಪುನಶ್ಚೇತನ ಎಂಬುದು ಬಹುಶಃ ಸರಿಯಾದ ಪದವಲ್ಲ; ಏಕೆಂದರೆ, ವ್ಯವಸ್ಥೆಯನ್ನು ಹಿಂದೆ ಇದ್ದ, ಉದಾಹರಣೆಗೆ 30 ವರ್ಷಗಳ ಹಿಂದೆ ಇದ್ದ ಸ್ಥಿತಿಗೆ ಪುನಶ್ಚೇತನಗೊಳಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಇಷ್ಟು ಚಿಕ್ಕ ಅವಧಿಯಲ್ಲಿ ವ್ಯವಸ್ಥೆಯು ಅಷ್ಟರ ಮಟ್ಟಿಗೆ ಕೊಳೆತಿದೆ. ಆಗಲೂ ವ್ಯವಸ್ಥೆಯಲ್ಲಿ ಗಂಭೀರವಾದ ಸಮಸ್ಯೆಗಳಿದ್ದವು. ಆದುದರಿಂದ ಇದು ಕೇವಲ ಪುನಶ್ಚೇತನದ ಪ್ರಶ್ನೆಯಲ್ಲ; ಅದು ಪುನರ್ನಿರ್ಮಾಣದ ಪ್ರಶ್ನೆ ಕೂಡಾ ಹೌದು.

ನಮಗೆ, ನಮ್ಮ ದೇಶಕ್ಕೆ ಸರಿಹೊಂದುವ ಉನ್ನತ ಶಿಕ್ಷಣ ಬೇಕು. ಅದು ಇತ್ತೀಚಿನ ಸಮಯದಲ್ಲಿ ನಾವು ಕಂಡಿರುವ ಆಕ್ರಮಣಗಳ ಪರಿಣಾಮವಾಗಿ ಒಳಸೇರಿಕೊಂಡಿರುವ ದೌರ್ಬಲ್ಯಗಳು ಮತ್ತು ಕೊಳೆತಕ್ಕೆ ಸುಲಭದಲ್ಲಿ ತುತ್ತಾಗದಂತೆ ಇರಬೇಕು. ನನ್ನ ವಿಶ್ವವಿದ್ಯಾಲಯವಾದ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಯುವಜನರು ತೀರಾ ಇತ್ತೀಚೆಗೆ ವಿಚಲಿತರಾಗಿ, ಉಸಿರುಗಟ್ಟಿಟ್ಟಿಸುವ ಸ್ಥಿತಿಯಲ್ಲಿ ಇದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಅವರು ಈ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಉಂಟುಮಾಡಿದ ಘೋರ ಅನ್ಯಾಯಗಳ ವಿರುದ್ಧ ವಸ್ತುಶಃ ಬೀದಿಯಲ್ಲಿ ಕುಳಿತು ಪ್ರತಿಭಟಿಸಬೇಕಾಯಿತು. ದಿಲ್ಲಿ ವಿಶ್ವವಿದ್ಯಾಲಯವು ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಆರಂಭಿಸಿ, ನಂತರ ರಾಜಕೀಯ ಒತ್ತಡದ ಕಾರಣದಿಂದ ಹಿಂದೆ ಸರಿದುದರ ವಿರುದ್ಧ ಪ್ರತಿಭಟನೆ ನಡೆದಿತ್ತು.

ಒಬ್ಬ ಶಿಕ್ಷಕನಾಗಿ ನಾನು, ಆ ಸಮಯದಲ್ಲಿ ಈ ಹೋರಾಟವು ವಿದ್ಯಾರ್ಥಿಗಳ ನಡುವೆ ಒಗ್ಗಟ್ಟು ಮೂಡಿಸಬಹುದು ಎಂದು ಭಾವಿಸಿದ್ದೆ. ಅದು ನಮ್ಮ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಒಡೆದು ಹೋಗಿದ್ದ ವಿವಿಧ ರಾಜಕೀಯ ಬಣಗಳ ನಡುವೆ ಒಗ್ಗಟ್ಟು ಮೂಡಿಸಲು ಶಕ್ತವಾಗಿತ್ತು. ಇದೇ ರೀತಿಯಲ್ಲಿ ಯಾರೂ ಸಿದ್ಧರಾಗಿರದ ಸೆಮಿಸ್ಟರ್ ಪದ್ಧತಿಯ ವಿಷಯದಲ್ಲಿ ಎಲ್ಲಾ ಶಿಕ್ಷಕರೂ ತಮ್ಮ ಸಂಘಟನೆಯಾದ ದಿಲ್ಲಿ ವಿಶ್ವವಿದ್ಯಾಲಯ ಶಿಕ್ಷಕರ ಸಂಘ (ಡಿಯುಟಿಎ)ದ ಅಡಿಯಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲರೂ ಅದರ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಆದರೂ ಅದನ್ನು ಹಠಹಿಡಿದು ಅನುಷ್ಟಾನಗೊಳಿಸಲಾಯಿತು. ಈಗ ಅದರಿಂದ ಸರಿಪಡಿಸಲಾಗದಷ್ಟು ಹಾನಿಯಾಗಿಬಿಟ್ಟಿದೆ.

ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಾಗ, ಅದು ಉನ್ನತ ಶಿಕ್ಷಣದ ಇತಿಹಾಸದಲ್ಲಿಯೇ ನಿರ್ಣಾಯಕವಾದ ಬದಲಾವಣೆಯ ಗಳಿಗೆಯಾಗಬಹುದೆನಿಸಿತ್ತು. ಬಹುಶಃ ಸಾವಿರಾರು ಯುವಕ, ಯುವತಿಯರು ಈ ವ್ಯವಸ್ಥೆ ನಾರುತ್ತಿದೆ ಎಂದು ನಂಬಿದ್ದರು. ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಸಾಧ್ಯತೆ ಇರುವಂತಹ ಅದ್ಭುತವಾದ ದೃಷ್ಟಿಯಿದ್ದ ಯುವಕನೊಬ್ಬ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹೈದರಾಬಾದ್ ವಿಶ್ವವಿದ್ಯಾಲಯದ ಸುಂದರ ಕ್ಯಾಂಪಸ್‌ನಲ್ಲಿ ತನ್ನ ಜೀವನವನ್ನೇ ಕೊನೆಗೊಳಿಸಲು ನಿರ್ಧರಿಸಿದ. ಆ ಹೊತ್ತಿಗೆ ಎಲ್ಲರೂ ಈ ವ್ಯವಸ್ಥೆ ಈ ರೀತಿಯಲ್ಲಿ ಬೆಳೆಯಲು ಸಾಧ್ಯವಿಲ್ಲ ಮತ್ತು ಅದು ಇನ್ನೊಬ್ಬರ ಜೀವವನ್ನು ಬಲಿತೆಗೆದುಕೊಳ್ಳುವ ಮೊದಲು ಅದನ್ನು ಸುಧಾರಿಸಬೇಕು ಎಂದು ಭಾವಿಸಿದ್ದರು. ರೋಹಿತ್ ವೇಮುಲ ಆತ್ಮಹತ್ಯೆಯ ಬಳಿಕ ಆ ವಿಶ್ವವಿದ್ಯಾಲಯವು ಆಘಾತಗೊಳ್ಳುವುದು ಎಂದು ನಾನು ಭಾವಿಸಿದ್ದೆ. ಆದರೆ, ಕೆಲವೇ ಕೆಲವು ಪ್ರತಿಭಟನೆಗಳು, ಅದೂ ಹೈದರಾಬಾದಿನಲ್ಲಿ ಮಾತ್ರ ನಡೆದ ಬಳಿಕ ಎಲ್ಲವೂ ತಣ್ಣಗಾಯಿತು. ಬೇರೆ ಕ್ಯಾಂಪಸ್‌ಗಳಲ್ಲಿ ಏನೂ ನಡೆಯಲಿಲ್ಲ.

ಅದೇ ರೀತಿಯಲ್ಲಿ ಜೆಎನ್‌ಯುನಲ್ಲಿ ನಾನು ‘ಕನ್ನಯ್ಯ ಕುಮಾರ್ ವಿದ್ಯಮಾನ’ ಎಂದು ಕರೆಯಲಿಚ್ಛಿಸುವ ವಿದ್ಯಮಾನ ನಡೆಯಿತು. ಹೇಗೆ ಆತನ ಮೇಲೆ ನ್ಯಾಯಾಲಯದ ಆವರಣದಲ್ಲಿ ಮತ್ತು ನಂತರದಲ್ಲಿ ಬೇರೆಬೇರೆ ರೀತಿಗಳಲ್ಲಿ ದೌರ್ಜನ್ಯ ನಡೆಯಿತು ಎಂಬುದನ್ನು ಮರೆಯಬಾರದು. ಬಿಕ್ಕಟ್ಟು ದಾಖಲಾಯಿತಾದರೂ, ಎಲ್ಲವೂ ಮಾಮೂಲಿ ಸ್ಥಿತಿಗೆ ಬಂದವು. ಈ ಬಿಕ್ಕಟ್ಟಿನಲ್ಲಿನ ಸಾಂಸ್ಥಿಕ ಕೊಳೆತವನ್ನು ಸಂಬಂಧಿತ ಜನರು- ಮುಂದೆ ಏನಾದರೂ ಮಾಡಬೇಕೆಂದು ಹೇಳಬೇಕಾದವರು- ಸಾಕಷ್ಟು ಗಂಭೀರವಾಗಿ ಪರಿಗಣಿಸಲೇ ಇಲ್ಲ. ನನ್ನದೇ ವಿಶ್ವವಿದ್ಯಾಲಯದ 75 ಕಾಲೇಜುಗಳಲ್ಲಿರುವ 8,000 ಅಧ್ಯಾಪಕರಲ್ಲಿ 4,000ಕ್ಕೂ ಹೆಚ್ಚು ಮಂದಿ ಹೆಚ್ಚುಕಡಿಮೆ 15 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಷ್ಟೊಂದು ಮಂದಿಗೆ ಖಾಯಂ ಉದ್ಯೋಗವಿಲ್ಲ. ಅವರು ತಾತ್ಕಾಲಿಕ ನೆಲೆಯಲ್ಲಿಯೇ ಇದ್ದಾರೆ.

ತಮ್ಮ ಶಿಕ್ಷಕರು ಅಸಂತೋಷದ ಜೀವನ ನಡೆಸುತ್ತಿದ್ದಾರೆ. ಅವರಿಗೆ ವೃತ್ತಿಜೀವನದಲ್ಲಿ ಯಾವುದೇ ಭವಿಷ್ಯ ಕಾಣುವುದಿಲ್ಲ. ಅನೇಕರು ಹತಾಶೆಯಿಂದ ತುಂಬಿಹೋಗಿದ್ದಾರೆ. ಅತ್ಯುತ್ತಮ ಶಿಕ್ಷಕರಾಗಬಹುದಾಗಿದ್ದ ಅತ್ಯುತ್ತಮ ಬುದ್ಧಿಮತ್ತೆಯ ಹಲವಾರು ಜನರು ಕೆಲಸ ಬಿಟ್ಟಿದ್ದಾರೆ, ಕೆಲವರು ವಿದೇಶಗಳಿಗೆ ಹೋಗಿದ್ದಾರೆ, ಅನೇಕರು ಕಾರ್ಪೋರೇಟ್ ವಲಯ ಅಥವಾ ಸ್ವಯಂಸೇವಾ ಸಂಸ್ಥೆಗಳತ್ತ ಹೋಗಿದ್ದಾರೆ. ಅವರೆಲ್ಲರೂ ಯುವಜನರ ಮನದಲ್ಲಿ ವಿಚಾರದ ಕಿಡಿ ಹೊತ್ತಿಸಬಹುದಾದ ಶಿಕ್ಷಕ ವೃತ್ತಿಯ ಆಸೆ ತೊರೆದಿದ್ದಾರೆ.

ಮುಂಬಯಿ ವಿಶ್ವವಿದ್ಯಾಲಯವನ್ನು ನೋಡಿ. ಅಲ್ಲಿ ಉತ್ತರ ಪತ್ರಿಕೆಗಳನ್ನು ಸಾಫ್ಟ್ ಕಾಪಿಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಾಗುವಂತೆ ಮೊದಲಿಗೆ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದಾಗಿ ಪರೀಕ್ಷೆಯ ಫಲಿತಾಂಶ ಘೋಷಣೆಯಲ್ಲಿ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಅದೇ ರೀತಿ, ಕೆಟ್ಟದಾಗಿ ಯೋಜಿಸಿ ಅನುಷ್ಟಾನಗೊಳಿಸಲಾದ ಆಡಳಿತಾತ್ಮಕ ‘ಸುಧಾರಣೆ’ಗಳ ಬಗ್ಗೆ ಯೋಚಿಸಿ. ಉದಾಹರಣೆಗೆ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಮೊದಲಿಗೆ ಶಿಕ್ಷಕೇತರ ಸಿಬ್ಬಂದಿಗೆ, ನಂತರ ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಾತಿಯ ಅಳವಡಿಕೆ. ಶಿಕ್ಷಕರಿಗೆ ಇದಕ್ಕಿಂತ ಅವಮಾನಕಾರಿಯಾದುದು ಬೇರೇನಿದೆ? ಮೊದಲಿಗೆ ಇದು ಶಾಲೆಗಳಲ್ಲಿ ಆರಂಭವಾಯಿತು. ನಂತರ ಕಾಲೇಜುಗಳಲ್ಲಿ ಆರಂಭವಾಯಿತು. ಈಗ ಇದನ್ನು ವಿಶ್ವವಿದ್ಯಾಲಯಗಳಲ್ಲೂ ಆರಂಭಿಸಲಾಗಿದೆ.

ಜಾಗತಿಕ rankingನಲ್ಲಿ ನಾವೂ ಎಲ್ಲಿಯೂ ಇಲ್ಲ ಎಂಬ ಕಾರಣಕ್ಕಾಗಿ ನಾವೇ ಒಂದು ರಾಷ್ಟ್ರೀಯ ranking ಆರಂಭಿಸಿದರೆ ಒಳ್ಳೆಯದು ಎಂಬ ಸರಕಾರದ ಚಿಂತನೆಯ ಫಲವಾಗಿ ranking ವ್ಯವಸ್ಥೆಯನ್ನು ಪರಿಚಯಿಸಲಾಯಿತು. ವಿಶ್ವದ ಮೊದಲ 200ರಲ್ಲಿ ನಮ್ಮ ಯಾವುದೇ ವಿಶ್ವವಿದ್ಯಾಲಯಗಳಿಲ್ಲ ಎಂದು ಮಾಜಿ ರಾಷ್ಟ್ರಪತಿಯೊಬ್ಬರು ವಿಷಾದಿಸಿದ್ದರು. ಕುತೂಹಲಕಾರಿ ವಿಷಯವೆಂದರೆ, ನೀವು ಮೊದಲಿಗೆ ಎಲ್ಲಾ ಭಾರತೀಯ ವಿಶ್ವವಿದ್ಯಾಲಯಗಳನ್ನು ಉಪವಾಸ ಹಾಕಿ, ಅವುಗಳನ್ನು ಕಡೆಗಣಿಸುತ್ತೀರಿ. ಪ್ರತಿಯೊಂದು ಉತ್ತಮ ವಿಶ್ವವಿದ್ಯಾಲಯವೂ ಹೊಂದಿರಲೇಬೇಕಾದ ಉತ್ತಮ ಶಿಕ್ಷಣ, ಪುಸ್ತಕ ಭಂಡಾರ ಮತ್ತು ಇತರ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಿದ್ದೀರಿ. ಈ ರೀತಿಯಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟವಾದರೂ, ಯುಜಿಸಿಯು ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ರೂಪಿಸುವ ಮಾತುಗಳನ್ನು ಆಡುತ್ತಲೇ ಬಂದಿದೆ.

ಕಳೆದ 20 ವರ್ಷಗಳಲ್ಲಿ ಅವರು ಎಲ್ಲಾ ರೀತಿಯ ತಥಾಕಥಿತ ಆವಿಷ್ಕಾರಗಳನ್ನು ಮಾಡುತ್ತಾ ಬಂದಿದ್ದಾರೆ. ಯಾವುದೇ ಭಿನ್ನಧ್ವನಿಯನ್ನು ಕಡೆಗಣಿಸುವುದರ ಮೂಲಕ, ಶಿಕ್ಷಕರ ಮಾತುಗಳನ್ನು ಕೇಳದಿರುವ ಮೂಲಕ, ಯಾರೋ ರೂಪಿಸಿದ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಮಾಡುವುದರ ಮೂಲಕ  ಅವರು ಮೊದಲಿಗೆ ಶಿಕ್ಷಕರನ್ನು ಸಿಟ್ಟಿಗೆಬ್ಬಿಸಿದ್ದಾರೆ. ಇದರಲ್ಲಿ ಕೇಂದ್ರ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯವು ಖಳನಾಯಕ ಎಂದು ಯಾರೂ ಊಹಿಸಬಹುದು. ಸಚಿವಾಲಯದ ಪ್ರತಿನಿಧಿಗಳು ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ಯುಜಿಸಿಯನ್ನು ಬಲವಂತಪಡಿಸಿದ್ದಾರೆ. ಹಾಗಿದ್ದಲ್ಲಿ ನಮ್ಮ ಶಿಕ್ಷಣ ಕ್ಷೇತ್ರದ ಸ್ವಾಯತ್ತತೆಯನ್ನು ಹಾಳುಗೆಡವಿದವರು ಯಾರು? ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ.

ನಾವು ರಾಜ್ಯ ಸರಕಾರಗಳು ನಡೆಸುವ ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಸ್ವಾಯತ್ತತೆಯ ಸ್ಥಿತಿಯನ್ನು ಪರಿಶೀಲಿಸಬೇಕು. ಅವುಗಳಲ್ಲಿ ಸ್ವಾಯತ್ತತೆ ಎಂಬುದು ಅರ್ಥಹೀನವಾಗಿದೆ. ಪ್ರಾಂತೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ನಡುವಿನ ಅಂತರ ಬಹಳ ಕಾಲದಿಂದ ಬೆಳೆಯುತ್ತಿದೆ. ಈ ರೀತಿ ನಡೆಯಲಿದೆ ಎಂಬುದು ನಮಗೆ 65 ವರ್ಷಗಳಷ್ಟು ಹಿಂದೆಯೇ ಗೊತ್ತಿತ್ತು. ಆಗಲೇ ಕೇಂದ್ರೀಯ ವಿಶ್ವವಿದ್ಯಾಲಯವೊಂದಕ್ಕೆ ನೀಡಲಾಗುತ್ತಿದ್ದ ಅನುದಾನವು ರಾಜ್ಯ ವಿಶ್ವವಿದ್ಯಾಲಯವೊಂದಕ್ಕೆ ಮಂಜೂರಾಗುತ್ತಿದ್ದ ಅನುದಾನಕ್ಕಿಂತ ನಾಲ್ಕು ಪಟ್ಟು ಹೆಚ್ಚಿತ್ತು. ನಾವು ಸಮಭಾವದ ದೃಷ್ಟಿ ಹೊಂದಿದ್ದವರಾಗಿದ್ದರೆ, ಆಗಲೇ ಇದನ್ನು ಬಲವಾಗಿ ಪ್ರತಿಭಟಿಸಬೇಕಿತ್ತು; ಆದರೆ ನಾವು ಪ್ರತಿಭಟಿಸುವುದನ್ನೇ ಮರೆತುಬಿಟ್ಟೆವು. ನಾವು ಸ್ವಲ್ಪ ಕೆಳಹಂತಕ್ಕೆ ಹೋಗಿ ವಿಶ್ವವಿದ್ಯಾಲಯಗಳ ಕಾಲೇಜುಗಳನ್ನು ನೋಡಿದರೆ, ಅವು ಬಹುಮುಖ್ಯವಾದ ಆಧಾರ ಸ್ಥಂಭಗಳಾಗಿದ್ದವು. ಅವು 19ನೇ ಶತಮಾನದಿಂದಲೇ ಉನ್ನತ ಶಿಕ್ಷಣದ ಆಧಾರ ಸ್ಥಂಭಗಳಾಗಿರುವುದರ ಜೊತೆಗೆ ಭೌಗೋಳಿಕವಾಗಿ ವೈವಿಧ್ಯಮಯವಾಗಿದ್ದು ಹಾಗೂ ಸಾಮಾಜಿಕವಾಗಿ ಶ್ರೇಣೀಕರಣಗೊಂಡಿದ್ದವು. ಅವುಗಳ ಕೊಳೆಯುವಿಕೆಯು ಮೊದಲಾಗಿ ಆರಂಭವಾಯಿತು.

ನಾನು ಕಲಿಸುತ್ತಿದ್ದ ಕಾಲೇಜೊಂದರಲ್ಲಿ 1970ರ ಹೊತ್ತಿಗೆ ಅಲ್ಲಿದ್ದ ಪುಸ್ತಕ ಭಂಡಾರವು ಅತ್ಯುತ್ತಮ ಪುಸ್ತಕ ಭಂಡಾರಗಳಲ್ಲಿ ಒಂದಾಗಿತ್ತು. 1985ರಲ್ಲಿ ಅದನ್ನು ಕಿತ್ತುಕೊಳ್ಳಲಾಯಿತು. 1988ರ ಬಳಿಕದಿಂದ ಅಲ್ಲಿ ಯಾವುದೇ ಹೊಸ ನೇಮಕಾತಿ ನಡೆದಿಲ್ಲವಾದರೂ ಕಾಲೇಜು ಕಾರ್ಯಾಚರಿಸುತ್ತಿದೆ. ಒಟ್ಟು 665 ಶಿಕ್ಷಕರಲ್ಲಿ ಕೇವಲ 50 ಶೇಕಡಾ ಖಾಯಂ ಶಿಕ್ಷಕರಿದ್ದಾರೆ. ಉಳಿದವರು ಗುತ್ತಿಗೆ ಆಧಾರದ ‘ಕಾರ್ಮಿಕ’ರು. ಈ ಗುತ್ತಿಗೆ ಕಾರ್ಮಿಕರು 250ರಿಂದ 900 ರೂ. ದಿನಗೂಲಿಯಲ್ಲಿ ತಿಂಗಳಲ್ಲಿ 15-20 ದಿನ ದುಡಿಯುತ್ತಿದ್ದಾರೆ. ಇವರಲ್ಲಿ ಕೆಲವರು 50ರಿಂದ 55 ವರ್ಷ ವಯಸ್ಸಿನವರೆಗೆ ಇದೇ ರೀತಿಯಲ್ಲಿ ದುಡಿದವರಿದ್ದಾರೆ. ಇದು ಅಧೀನ ಕಾಲೇಜುಗಳ ದುಸ್ಥಿತಿ. ನಾವು ರಾಷ್ಟ್ರೀಯ ಜ್ಞಾನ ಆಯೋಗ (ಎನ್‌ಕೆಸಿ)ದ ವರದಿ ಅಥವಾ ಯುಜಿಸಿಯ ಇತರ ವರದಿಗಳನ್ನು ಪರಿಶೀಲಿಸಿದಲ್ಲಿ, ಈ ಅಧೀನ ಕಾಲೇಜುಗಳು ಶಿಕ್ಷಣದ ಗುಣಮಟ್ಟವನ್ನು ಕೆಳಗಿಳಿಸಿವೆ ಎಂಬ ಮಾತುಗಳನ್ನು ನೋಡಬಹುದು. ವಾಸ್ತವವಾಗಿ ಈ ಕಾಲೇಜುಗಳೇ ಮೊದಲ ತಲೆಮಾರಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪ್ರವೇಶಿಸುವುದಕ್ಕೆ ಕಾರಣವಾಗಿದ್ದವು. ಇದು ಕಳೆದ ಎಂಟು ಹತ್ತು ತಲೆಮಾರುಗಳ ತನಕ ಮುಂದುವರಿದಿದೆ. ಈ ಶಿಕ್ಷಣ ಸಂಸ್ಥೆಗಳು ಭಾರತೀಯ ಪ್ರಜಾಪ್ರಭುತ್ವವು ಹೆಚ್ಚು ಆಳವಾಗಿ ಬೇರೂರುವುದಕ್ಕೂ ಕಾರಣವಾಗಿವೆ.

ಇಲ್ಲಿ ನಾನು ಇಡೀ ವಿಷಯದ ಕೇಂದ್ರಕ್ಕೆ ಬರುತ್ತೇನೆ. ವಸಾಹತುಶಾಹಿಯ ಕಾಲದಲ್ಲಿ ರೂಪಿಸಲಾದ ಉನ್ನತ ಶಿಕ್ಷಣ ವ್ಯವಸ್ಥೆಯು ಜೆಎನ್‌ಯು ಮತ್ತು ದಿಲ್ಲಿ ವಿಶ್ವವಿದ್ಯಾಲಯದಂತಹ ಕೆಲವು ದ್ವೀಪಗಳನ್ನು ಹೊರತುಪಡಿಸಿದರೆ, ಹೆಚ್ಚುಕಡಿಮೆ ಯಾವುದೇ ಸುಧಾರಣೆ ಇಲ್ಲದೆ ಹಾಗೆಯೇ ಉಳಿದಿದೆ. ಅವು ಕೂಡಾ ಈಗ ಅವನತಿಯ ದಿಕ್ಕಿನಲ್ಲಿವೆ. ವ್ಯವಸ್ಥೆಯ ಒತ್ತು ಯಾವ ರೀತಿಯಲ್ಲಿ ಇತ್ತು ಎಂದರೆ, ಆಗಲೇ ಅದು ಶ್ರೇಣೀಕೃತವಾಗಿತ್ತು. ಸಂಘಟಿತ ಸಾಮಾಜಿಕ ವ್ಯವಸ್ಥೆಗೆ ಯಾವತ್ತೂ ಪ್ರಯೋಜನವಾಗದ ರೀತಿಯಲ್ಲಿತ್ತು.

ಬಹಳ ಕಾಲ ಈ ಬಿಕ್ಕಟ್ಟು ಅರಿವಿಗೆ ಬರಲಿಲ್ಲವೇಕೆಂದರೆ, ಪ್ರಾಥಮಿಕ ಹಂತದಲ್ಲಿಯೇ ಶಾಲೆ ಬಿಡುವ ವಿದ್ಯಾರ್ಥಿಗಳ ಪ್ರಮಾಣ ತೀರಾ ಹೆಚ್ಚಿತ್ತು. 1970ರ ವರದಿಯೊಂದರ ಪ್ರಕಾರ ಒಂದನೇ ತರಗತಿ ಸೇರಿದ ನೂರು ವಿದ್ಯಾರ್ಥಿಗಳಲ್ಲಿ ಐದನೇ ತರಗತಿ ತಲಪುವ ಹೊತ್ತಿಗೆ ಕೇವಲ 30 ವಿದ್ಯಾರ್ಥಿಗಳಷ್ಟೇ ಉಳಿದುಕೊಳ್ಳುತ್ತಿದ್ದರು. ಆ ಹೊತ್ತಿಗೆ ಇಡೀ ಭಾರತದ 90 ಶೇಕಡಾವನ್ನು ಒಳಗೊಂಡಿದ್ದ ಗ್ರಾಮೀಣ ಭಾರತದಲ್ಲಿ 100ರಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಉನ್ನತ ಶಿಕ್ಷಣದ ಮೆಟ್ಟಿಲೇರಲು ಶಕ್ತರಾಗುತ್ತಿದ್ದರು. ಇದರ ಅರ್ಥವೆಂದರೆ, ಉನ್ನತ ಶಿಕ್ಷಣವು ಕೇವಲ ಪ್ರತಿಷ್ಟಿತರ ನಿಯಂತ್ರಣದಲ್ಲಿದ್ದು, ಇಂಗ್ಲಿಷ್ ಭಾಷೆಯು ಕಲಿಕೆಯ ಮಾಧ್ಯಮವಾಗಿತ್ತು. ಇಂತಹಾ ಬಹುತೇಕ ವಿದ್ಯಾಸಂಸ್ಥೆಗಳು ಸಮಾಜದಿಂದ ಪ್ರತ್ಯೇಕವಾಗಿ ಉಳಿದಿರುತ್ತಿದ್ದವು.

ಐಐಟಿಗಳು ಮತ್ತು ಅಂತಹಾ ಇತರ ಪ್ರತಿಷ್ಟಿತ ವಿದ್ಯಾಸಂಸ್ಥೆಗಳು ರಾಷ್ಟ್ರನಿರ್ಮಾಣದ ಭಾಗವಾಗಿ ರೂಪುಗೊಂಡವುಗಳಾಗಿದ್ದು, ಹೊರಗಿನ ಸಮಾಜದ ಜೊತೆಯಲ್ಲಿ ಅವುಗಳಿಗೆ ಯಾವುದೇ ಸಂಬಂಧ ಇದ್ದಿರಲಿಲ್ಲ. ಇವು ವಿಶಾಲ ಸಮಾಜದಿಂದ ದೂರವಾಗಿ ಚಿಪ್ಪಿನೊಳಗಿದ್ದವು. ಉದಾಹರಣೆಗೆ ಐಐಟಿಗಳಿಗೆ ವಿದ್ಯಾರ್ಥಿಗಳು ಪ್ರಯೋಗಶಾಲೆಗಳಲ್ಲಿ ತರಬೇತಿ ಹೊಂದಲೆಂದು ಬರುತ್ತಾರೆ ಮತ್ತು ತಮ್ಮ ಗೇಟುಗಳ ಹೊರಗೆ ತಮ್ಮ ಜ್ಞಾನವನ್ನು ಕಾರ್ಯರೂಪಕ್ಕೆ ಇಳಿಸುವುದು ಹೇಗೆ ಎಂಬ ಕನಿಷ್ಟ ತಿಳುವಳಿಕೆಯೂ ಇಲ್ಲದೆ, ‘ಅರ್ಹತೆ ಹೊಂದಿದ’ ಇಂಜಿನಿಯರುಗಳಾಗಿ ಹೊರಬರುತ್ತಾರೆ. ಆದರೆ, 1990ರ ದಶಕದಿಂದೀಚೆಗೆ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳು ನಡೆಯುತ್ತಿವೆ. 2002ರಲ್ಲಿ ಸರ್ವ ಶಿಕ್ಷಣ ಅಭಿಯಾನ ಆರಂಭವಾಯಿತು. 2009ರಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್‌ಟಿಇ) ಅಂಗೀಕಾರಗೊಂಡಿತು. ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯೂ ದೊಡ್ಡ ಪ್ರಮಾಣದ ಬದಲಾವಣೆಗಳು ನಡೆದಿವೆ.

ಇಂದು ಭಾರತದ ನಾಗರಿಕತೆಯ ದೀರ್ಘ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಿಂದೆ ಉನ್ನತ ಶಿಕ್ಷಣದ ಕನಸನ್ನೂ ಕಾಣಲು ಸಾಧ್ಯವಿಲ್ಲದ ವರ್ಗಗಳು ಉನ್ನತ ಶಿಕ್ಷಣವನ್ನು ತಲಪುತ್ತಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳು ಎಲ್ಲಿಯಾದರೂ, ಕನಿಷ್ಟ ಪಕ್ಷ ವಿಶ್ವವಿದ್ಯಾಲಯಗಳ ಅಧೀನ ಕಾಲೇಜುಗಳಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದ ವಿಸ್ತರಣೆಯ ಮೊದಲ ಫಲ. ಇದರಲ್ಲಿ ಹೆಣ್ಣು ಮಗು, ಆದಿವಾಸಿ ಮಗು, ದಲಿತ ಮಗು, ಅಲ್ಪಸಂಖ್ಯಾತರು, ಸಮಾಜದಲ್ಲಿ ಅವಕಾಶವಂಚಿತರಾದ ಬಹುಜನರು ಸೇರಿದ್ದಾರೆ.

ಆದರೆ, ವಿಶ್ವವಿದ್ಯಾಲಯಗಳು ತಮ್ಮದೇ ನಿಧಿಯನ್ನು ತಾವೇ ಕ್ರೋಢೀಕರಿಸಬೇಕು ಎಂದು ಅಧಿಕೃತವಾಗಿ ಘೋಷಿಸಿದ ಅವಧಿಯೂ ಇದೇ ಆಗಿದೆ. ವಿಶ್ವವಿದ್ಯಾಲಯಗಳಿಗೆ ಅನುದಾನ ಕಡಿತ ಮಾಡಲಾಗುತ್ತಿದೆ. ಇದು ಇಡೀ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ಒಂದು ಕಡೆಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಹೆಚ್ಚಳವಾಗಿ, ಅದು ಸಾಮಾಜಿಕ ವೈವಿಧ್ಯವನ್ನು ಪ್ರತಿಫಲಿಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಹಣಕಾಸಿನ ಕಡಿತವು ದೂರಗಾಮಿಯಾಗಿ ಈ ವೈವಿಧ್ಯವನ್ನು ಪ್ರೋತ್ಸಾಹಿಸಲು ವಿಶ್ವವಿದ್ಯಾಲಯಗಳಿಗೆ ಕಷ್ಟಸಾಧ್ಯವನ್ನಾಗಿ ಮಾಡುತ್ತದೆ. ಇತ್ತೀಚೆಗೆ ಘೋಷಿಸಲಾದ ಶ್ರೇಣೀಕೃತ ಸ್ವಾಯತ್ತತೆಯು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಆದರೆ, ಇವೆಲ್ಲವೂ ಹೊಸದೇನೂ ಅಲ್ಲ. 1990ರ ದಶಕದ ಬಿರ್ಲಾ-ಅಂಬಾನಿ ವರದಿಯು, ಪ್ರಾಥಮಿಕ ಶಿಕ್ಷಣವನ್ನು ಬೆಂಬಲಿಸುವುದು ಸರಕಾರದ ಕರ್ತವ್ಯವಾಗಿದ್ದರೂ, ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡಿ, ಎಷ್ಟರಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಹಣಕಾಸಿನ ಸ್ವಾಯತ್ತತೆ ನೀಡಬೇಕು ಎಂದು ವಿವರವಾಗಿ ಪ್ರತಿಪಾದಿಸಿದೆ. ಇಂದು ಉನ್ನತ ಶಿಕ್ಷಣದಲ್ಲಿ ದಾಖಲುಗೊಂಡಿರುವವರಲ್ಲಿ 65 ಶೇಕಡಾ ಮಂದಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿರುವ ಪರಿಸ್ಥಿತಿಗೆ ಈಗಾಗಲೇ ತಲಪಿದ್ದೇವೆ. ವೃತ್ತಿಪರ ಶಿಕ್ಷಣ ಕ್ಷೇತ್ರದಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ.

ವಾಸ್ತವವಾಗಿ ವೃತ್ತಿಶಿಕ್ಷಣದ ಖಾಸಗೀಕರಣವು 1986ರಲ್ಲಿಯೇ ವೇಗ ಪಡೆದುಕೊಳ್ಳಲು ಆರಂಭಿಸಿತ್ತು. 1970 ಮತ್ತು 1980 ದಶಕದಲ್ಲಿ ವೃತ್ತಿಪರ ಶಿಕ್ಷಣಕ್ಕೆ ಕ್ಯಾಪಿಟೇಷನ್ ಶುಲ್ಕ ಪದ್ಧತಿಯ ಕಳಂಕ ತಟ್ಟಿತ್ತು.  1980ರ ನಂತರದ ಅವಧಿಯು ವೃತ್ತಿಪರ ಶಿಕ್ಷಣಸಂಸ್ಥೆಗಳಿಗೆ ಪರವಾನಿಗೆ ನೀಡುವ ಜವಾಬ್ದಾರಿ ಹೊತ್ತಿರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಐಎಂಸಿ), ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಮತ್ತು ಇತರ ಅಂತಹಾ ಮಂಡಳಿಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಯಿತು. ಶುಲ್ಕದ ಮೇಲೆ ಯಾವುದೇ ನಿಯಂತ್ರಣ ಇಲ್ಲದೆ, ಅಥವಾ ನೀಡಬೇಕಾದ ಸೌಲಭ್ಯಗಳ ಕುರಿತು ಯಾವುದೇ ನಿಬಂಧನೆಗಳಿಲ್ಲದೇ ಖಾಸಗಿ ಸಂಸ್ಥೆಗಳಿಗೆ ಪರವಾನಿಗೆ ನೀಡಲಾಯಿತು. ಹೆತ್ತವರು ಲಕ್ಷಾಂತರ ರೂ. ಖರ್ಚು ಮಾಡಿಯೂ, ಕೆಲವು ತಲೆಮಾರುಗಳ ವಿದ್ಯಾರ್ಥಿಗಳು ಸರಿಯಾದ ಶಿಕ್ಷಣವಿಲ್ಲದೇ ಇಂತಹಾ ಶಿಕ್ಷಣಸಂಸ್ಥೆಗಳಿಂದ ಹೊರಬರುವ ಒಂದು ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲಿ ಕೆಲವು ಅಪವಾದಗಳಿರಬಹುದು, ಆದರೆ ವೃತ್ತಿಪರ ಶಿಕ್ಷಣದ ಖಾಸಗೀಕರಣವು ಬಹುವಾಗಿ ವಾಣಿಜ್ಯೀಕರಣ ಮತ್ತು ಶೋಷಣೆಗೆ ಕಾರಣವಾಗಿದೆ.

ಇವೆಲ್ಲವುಗಳಿಗೆ ಹೊರತಾಗಿಯೂ ಖಾಸಗೀಕರಣದ ಮಾದರಿಯನ್ನು ಸಾರ್ವಜನಿಕ ವೃತ್ತಿಪರ ಶಿಕ್ಷಣಕ್ಕೂ ವಿಸ್ತರಿಸಬೇಕೆಂದು ವಾದಿಸಲಾಗುತ್ತಿದೆ. ಕೈಗಾರಿಕೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡೋ, ವಿದೇಶಗಳಲ್ಲಿ ಕ್ಯಾಂಪಸ್ ತೆರೆದೋ ಅಥವಾ ಇನ್ನಾವುದೋ ವಿಧಾನದಿಂದಲೋ ಸ್ವಯಂ ಹಣಕಾಸು ಒದಗಿಸುವ ಕೋರ್ಸುಗಳನ್ನು ಆರಂಭಿಸುವ ಮೂಲಕ ಹಣಕಾಸು ಕ್ರೋಢೀಕರಿಸಬೇಕು ಎಂಬ ಮಾತುಗಳು ನಡೆಯುತ್ತಿವೆ. ವ್ಯವಸ್ಥೆಯು ಖಾಸಗೀಕರಣ ಮಾದರಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲದಂತಹ ಹಂತವನ್ನು ನಾವು ತಲಪಿದ್ದೇವೆ. ನಾವು ಈ ಹಣಕಾಸಿನ ಕಡಿತದಿಂದ ಹೊರಬರುವುದು ಹೇಗೆಂಬುದನ್ನು ಯೋಚಿಸಬೇಕಾಗಿದೆ. ವಿಶ್ವವಿದ್ಯಾಲಯಗಳ 90 ಶೇಕಡಾ ಸಿಬ್ಬಂದಿ ಗುತ್ತಿಗೆಯ ಮೇಲೆ ಕೆಲಸಮಾಡುತ್ತಾ, ಅಭದ್ರತೆಯ ಬದುಕು ನಡೆಸುತ್ತಿರುವಾಗ, ಖಾಸಗೀಕರಣವು ಈ ಬಿಕ್ಕಟ್ಟನ್ನು ನಿವಾರಿಸುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಶಿಕ್ಷಣಕ್ಕೆ- ಅಂದರೆ, ಸಂಪೂರ್ಣ ಶಿಕ್ಷಣಕ್ಕೆ ಹಣಕಾಸು ಒದಗಿಸುವುದು ಸರಕಾರದ ಕರ್ತವ್ಯ. ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಎಂದು ಪ್ರತ್ಯೇಕಿಸುವುದರಲ್ಲಿ ಯಾವುದೇ ತರ್ಕವಿಲ್ಲ.

ಉನ್ನತ ಶಿಕ್ಷಣವು ವ್ಯವಸ್ಥೆಯ ಹೃದಯವಿದ್ದಂತೆ. ದೇಹದಲ್ಲಿ ಹೃದಯವು ಏನು ಮಾಡುತ್ತದೆ? ಅದು ಅಶುದ್ಧ ರಕ್ತವನ್ನು ಸ್ವೀಕರಿಸಿ, ಶುದ್ಧ ರಕ್ತವನ್ನು ಇಡೀ ದೇಹಕ್ಕೆ ಪೂರೈಸುತ್ತದೆ. ವ್ಯವಸ್ಥೆಯಲ್ಲಿ ಉನ್ನತ ಶಿಕ್ಷಣಕ್ಕೆ ಇಂತದ್ದೇ ಸ್ಥಾನವಿದೆ. ಅದು ಹೊಸ ಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪೋಷಿಸುತ್ತದೆ. ಹೃದಯವು ಸತ್ತರೆ ದೇಹ ಕೂಡಾ ಸಾಯುವುದು. ಉನ್ನತ ಶಿಕ್ಷಣವು ಸತ್ತರೆ, ಇಡೀ ವ್ಯವಸ್ಥೆಯೇ ಸಾಯುವುದು. ಈ ಸತ್ಯವನ್ನು ತಿಳಿಯಲು ಈ ಬಿಕ್ಕಟ್ಟಿನ ಸಮಯದ ಹೊರತು ಉತ್ತಮ ಸಮಯವಿಲ್ಲ. ಈ ಬಿಕ್ಕಟ್ಟನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಿಮ್ಮ ವಿಚಾರಗಳು ಕೇವಲ ಉನ್ನಾರಗಳು ಮಾತ್ರ. ಇಡೀ ಲೇಖನವನ್ನು ಅವಲೋಕಿಸಿದ ಮೇಲೆ ನಿಮ್ಮ ಅಜೆಂಡಾ ಏನು ಅಂತ ಗೊತ್ತಾಗುತ್ತದೆ.
    ಇಡೀ ಯುವಜನಾಂಗವನ್ನು, ಅವರ ವ್ಯಕ್ತಿತ್ವವನ್ನು ನಾಶಗೊಳಿಸಿ ಅವರನ್ನು ಕ್ರಾಂತಿ ಎಂಬ ಭ್ರಾಂತಿಗೆ ನೂಕಿ ನಿಮ್ಮ ಕಮ್ಯುನಿಸಮ್ ಸಿದ್ಧಾಂತವನ್ನು ಪ್ರಸರಿಸುವ ಆಸೆ ನಿಮ್ಮದು. ಈ ವಂಚಕ ಮಾರ್ಗ ಬೇಡ ಮಿ. ಪ್ರೊಪೆಸರ್, ಯುವಕರು ತಮ್ಮ ಭವಿಷ್ಯಕ್ಕಾಗಿ ವ್ಯಕ್ತಿತ್ವ ನಿರ್ಮಾಣ ಮತ್ತು ನೈತಿಕವಾಗಿ ಬದುಕುವಂತಹ ಅವಕಾಶಗಳ ಬಗ್ಗೆ ಹೇಳಿ. ಅವರೂ ಬದುಕಿ ಪ್ರಪಂಚಕ್ಕೂ ಒಳಿತು ಮಾಡಲಿ.

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...