ಭಾರತೀಯ ಪಡೆ ಇಂದು ಚೀನಾ ಸೈನಿಕನೊಬ್ಬನನ್ನು ಲಡಾಖ್ ಬಳಿ ಸೆರೆಹಿಡಿದಿದ್ದು, ಕಾರ್ಪೋರಲ್ ವಾಂಗ್ ಯಾ ಲಾಂಗ್ ಎಂದು ಗುರುತಿಸಲಾಗಿರುವ ಈತನನ್ನು ಚುಮರ್-ಡೆಮ್ಚೋಕ್ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ.
ಸೈನಿಕನಿಗೆ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆಗಳು ಸೇರಿದಂತೆ ಅಗತ್ಯ ವೈದ್ಯಕೀಯ ನೆರವು ನೀಡಲಾಗಿದೆ. ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿ ಪ್ರೋಟೋಕಾಲ್ ಪ್ರಕಾರ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕನನ್ನು ಚೀನೀ ಸೈನ್ಯಕ್ಕೆ ಹಿಂತಿರುಗಿಸಲಾಗುತ್ತದೆ ಎಂದು ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ನಾಪತ್ತೆಯಾದ ಸೈನಿಕ ಎಲ್ಲಿದ್ದಾನೆ ಎಂಬ ಬಗ್ಗೆ ಚೀನಾದ ಸೈನ್ಯದಿಂದ ಮನವಿ ಬಂದಿದ್ದು, ಔಪಚಾರಿಕ ಕಾರ್ಯಗಳು ಪೂರ್ಣಗೊಂಡ ನಂತರ ಅವರನ್ನು ಚುಶುಲ್-ಮೊಲ್ಡೊ ಮೀಟಿಂಗ್ ಪಾಯಿಂಟ್‌ನಲ್ಲಿ ಚೀನಾದ ಅಧಿಕಾರಿಗಳಿಗೆ ಹಿಂತಿರುಗಿಸಲಾಗುವುದು” ಎಂದು ಸೇನೆಯು ತಿಳಿಸಿದೆ.
ಸಿಕ್ಕಿಬಿದ್ದ ಸೈನಿಕ, ನಾಗರಿಕ ಮತ್ತು ಮಿಲಿಟರಿ ದಾಖಲೆಗಳನ್ನು ಹೊತ್ತೊಯ್ಯುತ್ತಿದ್ದನೆಂದು ಕೆಲವು ವರದಿಗಳು ಬಂದಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಚೀನಾ ಮತ್ತು ನಮ್ಮ ನಡುವೆ ನಡೆಯುತ್ತಿರುವ ಚರ್ಚೆ ಗೌಪ್ಯವಾದದ್ದು: ಭಾರತದ ವಿದೇಶಾಂಗ ಸಚಿವ!
ಗಾಲ್ವಾನ್ ಕಣಿವೆಯಲ್ಲಿ ಚೀನಿಯರೊಂದಿಗಿನ ಘರ್ಷಣೆಯಲ್ಲಿ ಕರ್ತವ್ಯದಲ್ಲಿದ್ದ 20 ಭಾರತೀಯ ಸೈನಿಕರು ಜೂನ್‌ನಲ್ಲಿ ಸಾವನ್ನಪ್ಪಿದ್ದರು. ಆಗ ಉಭಯ ದೇಶಗಳಲ್ಲಿ ಉದ್ವಿಗ್ನತೆ ಉತ್ತುಂಗಕ್ಕೇರಿತ್ತು. ಕಳೆದ ತಿಂಗಳು, ಪ್ಯಾಂಗೊಂಗ್ ತ್ಸೊದಲ್ಲಿ ಎರಡೂ ಪಡೆ ಮುಖಾಮುಖಿಯಾಗುತ್ತಿದ್ದಂತೆ ಒಂದಕ್ಕಿಂತ ಹೆಚ್ಚು ಬಾರಿ ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.
ಇತ್ತೀಚೆಗೆ ಭಾರತ-ಚೀನಾ ನಡುವಿನ ಸಂಬಂಧ ಚಿಂತಾಜನಕವಾಗಿದ್ದು, ಯಾವ ಸಂಧರ್ಭದಲ್ಲಿ ಏನುಬೇಕಾದರೂ ನಡೆಯಬಹುದು ಎಂಬ ಭೀತಿಯುಂಟಾಗಿದೆ. ಎರಡೂ ದೇಶಗಳೂ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿವೆ.
ಈ ಪ್ರಕ್ಷುಬ್ದ ವಾತಾವರಣಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿದ್ದು, ಚೀನಾ ವಿರುದ್ಧ ಕೇಂದ್ರ ಸರ್ಕಾರದ ಪ್ರತಿಯೊಬ್ಬರೂ ಒಂದೊಂದು ಮಾಹಿತಿ ನೀಡುತ್ತಿದ್ದಾರೆ. ಒಬ್ಬರು ಯಾವುದೇ ತೊಂದರೆಯಿಲ್ಲ ಎಂದರೆ, ಮತ್ತೊಬ್ಬರು ತೊಂದರೆಯಿದೆ ಎನ್ನುತ್ತಾರೆ. ಇನ್ನೊಬ್ಬರು ಭೂಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ ಎಂದರೆ, ಮತ್ತೊಬ್ಬರು ಆಕ್ರಮಿಸಿಕೊಂಡಿದೆ ಎನ್ನುತ್ತಾರೆ. ಒಬ್ಬರು ಗೌಪ್ಯ ಮಾತುಕತೆ ನಡೆಸುತ್ತಿದ್ದೇವೆ ಎನ್ನುತ್ತಾರೆ, ಮತ್ತೊಬ್ಬರು ಚೀನಾದೊಟ್ಟಿಗೆ ಯುದ್ಧ ಮಾಡಲು ಸಿದ್ಧ ಎನ್ನುತ್ತಾರೆ.
ಒಟ್ಟಾರೆಯಾಗಿ, ಕೇಂದ್ರ ಸರ್ಕಾರ ಪ್ರಜೆಗಳಿಂದ ಸತ್ಯವನ್ನು ಮುಚ್ಚಿಡುತ್ತಿದೆ ಎಂದು ಹಲವರು ಆರೋಪಿಸಿದ್ದು, ನರೇಂದ್ರ ಮೋದಿಯವರು ಚೀನಾ ಹೆಸರನ್ನು ಹೇಳಲು ಭಯಪಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಭಾರತ-ಚೀನಾ: ಗಡಿಯಲ್ಲಿ ಜಮಾವಣೆಗೊಂಡ ಚೀನಿ ಯುದ್ಧ ಟ್ಯಾಂಕ್‌ಗಳು
So bad