ಮಾರ್ಕ್ಸ್ ಹುಟ್ಟಿದ್ದು 203 ವರ್ಷಗಳ ಹಿಂದೆ. 150ಕ್ಕೂ ವರ್ಷಗಳ ಹಿಂದೆ ಅವರ ಪ್ರಮುಖ ಕೃತಿ ’ಕ್ಯಾಪಿಟಲ್’ (ಬಂಡವಾಳ) ಮೊದಲ ಸಂಪುಟ ಪ್ರಕಟವಾಯಿತು. ತನ್ನ ಜೀವನದ ಕೊನೆಗಾಲದಲ್ಲಿ ಅಲ್ಜೀರಿಯಾಗೆ ಆರೋಗ್ಯದ ಕಾರಣಕ್ಕೆ ಭೇಟಿ ನೀಡಿದ್ದನ್ನು ಬಿಟ್ಟರೆ ಅವರು ಎಂದೂ ಪಶ್ಚಿಮ ಯುರೋಪ್ ಬಿಟ್ಟು ಹೋಗಲಿಲ್ಲ ಹಾಗೂ ಯುರೋಪ್ ಕೇಂದ್ರಿತ ಚಿಂತನೆಗಳಿಂದ ಅವರು ಸಂಪೂರ್ಣವಾಗಿ ಮುಕ್ತವಾಗಿರಲಿಲ್ಲ. 1850ರ ದಶಕದಲ್ಲಿ ಭಾರತ ಅಭಿವೃದ್ಧಿಗೊಳ್ಳಲು ಬ್ರಿಟಿಷ್ ವಸಾಹತುಶಾಯಿಂದ ಮಾತ್ರವೇ ಸಾಧ್ಯ ಎನ್ನುವಂತೆ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದರು.

ಮಾರ್ಕ್ಸ್ ಅವರನ್ನು ಇಂದು ಏಕೆ ಓದಬೇಕು?

ಮಾರ್ಕ್ಸ್ ತಮ್ಮ ಜೀವನದುದ್ದಕ್ಕೂ ಹೊಸದನ್ನು ಕಲಿಯುವ ವ್ಯಕ್ತಿಯಾಗಿದ್ದರು. ಹೊಸ ಘಟನೆಗಳ ಮತ್ತು ಅನುಭವದ ಬೆಳಕಿನಲ್ಲಿ ಅವರು ತಮ್ಮ ರಾಜಕೀಯ ಮತ್ತು ವೈಜ್ಞಾನಿಕ ನಿಲುವುಗಳನ್ನು ಪ್ರಶ್ನಿಸಲು ಸದಾ ಸಿದ್ಧರಿದ್ದರು. 1860ರ ದಶಕದಲ್ಲಿ ಯುರೋಪ್ ಕೇಂದ್ರಿತ ಪರಿಕಲ್ಪನೆಗಳ ಪ್ರಭಾವದಿಂದ ಹೊರಬರಲು ಅವರಿಗೆ ಸಾಧ್ಯವಾಯಿತು. 1857ರಲ್ಲಿ ಆದ ಬಂಡಾಯದಿಂದ ಅವರ ಭಾರತದ ಚಿತ್ರಣದಲ್ಲಿ ಆಳವಾದ ಬದಲಾವಣೆಗಳು ಕಂಡುಬಂದವು.

ಬಂಡವಾಳದ (ಕ್ಯಾಪಿಟಲ್) ಮೇಲೆ ಅವರು ಮಾಡಿದ ಕೆಲಸವನ್ನು ಪರಿಗಣಿಸಿದರೆ, ನಿರಂತರ ಕಲಿಕೆಗಾಗಿ ಅವರಿಗಿದ್ದ ಅಗಾಧ ಸಾಮರ್ಥ್ಯವನ್ನು ಗುರುತಿಸಬಹುದು. 1860ರ ದಶಕದ ಮಧ್ಯಭಾಗದ ತನಕ ಕ್ಯಾಪಿಟಲ್‌ನ ಹಸ್ತಪ್ರತಿಗಳಲ್ಲಿ ಅಮೆರಿಕ ಅಥವಾ ರಷಿಯಾ ಪ್ರಮುಖ ಪಾತ್ರವನ್ನು ವಹಿಸಿದ್ದಿಲ್ಲ. 1867ರಲ್ಲಿ ಪ್ರಕಟವಾದ ಮೊದಲ ಸಂಪುಟದ ಮುನ್ನುಡಿಯಲ್ಲಿ ಇಂಗ್ಲೆಂಡ್ ಅನ್ನು ಬಂಡವಾಳಶಾಹಿಯ ’ಶಾಸ್ತ್ರೀಯ’ ಪ್ರದೇಶ ಎಂದು (ಕ್ಲಾಸಿಕಲ್ ಪ್ಲೇಸ್ ಆಫ್ ಕ್ಯಾಪಿಟಲಿಸಂ) ಪರಿಗಣಿಸಿದ್ದನ್ನು ನಮೂದಿಸಿದ್ದಾರೆ. ಆದರೆ 1860 ದಶಕದ ಕೊನೆಯ ಭಾಗದಲ್ಲಿ ರಷಿಯಾ ಮತ್ತು ಅಮೇರಿಕ ಆರ್ಥಿಕವಾಗಿ ಹೆಚ್ಚೆಚ್ಚು ಪ್ರಮುಖವಾಗಿದ್ದನ್ನು ಹಾಗೂ ಬಂಡವಾಳಶಾಹಿಯನ್ನು ವಿರೋಧಿಸುವುದರಲ್ಲೂ ಹೆಚ್ಚು ಮುಖ್ಯವಾಗಿದ್ದನ್ನು ಗುರುತಿಸಿದರು. 1860 ದಶಕದ ಕೊನೆಯಲ್ಲಿ ರಷಿಯಾದ ಆರ್ಥಿಕ ಅಧ್ಯಯನಗಳನ್ನು ಓದಲು ಮಾರ್ಕ್ಸ್ ರಷಿಯನ್ ಭಾಷೆಯನ್ನೂ ಕಲಿತರು. 1870ರ ಮೊದಲ ಭಾಗದಲ್ಲಿ ಕ್ಯಾಪಿಟಲ್‌ನ ಮೂರನೇ ಸಂಪುಟದ ಹಸ್ತಪ್ರತಿಯನ್ನು ಬದಲಾಯಿಸುವ ಯೋಜನೆಯನ್ನೂ ಹೊಂದಿದ್ದರು; ಬಡ್ಡಿ ಹೊಂದಿರುವ ಬಂಡವಾಳದ ವಿಭಾಗ ಮತ್ತು ಸಾಲದ ವ್ಯವಸ್ಥೆಯು ಬ್ರಿಟಿಷ್ ವ್ಯವಸ್ಥೆಯ ಬದಲಿಗೆ ಅಮೇರಿಕದ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಆಧಾರಿತವಾಗಿರಬೇಕೆಂದು ಹಾಗೂ ಭೂಮಿಯ ಬಾಡಿಗೆಯ ವಿಭಾಗದಲ್ಲಿ, ರಷಿಯಾದ ಭೂಒಡೆತನದವುಳ್ಳ ಆಸ್ತಿಯನ್ನು ಪರಿಗಣಿಸಬೇಕು ಎಂದು ಬಯಸಿದ್ದರು.

1870 ದಶಕದಲ್ಲಿ ಅವರ ವಿಶ್ಲೇಷಣೆಯ ಪರಿಮಿತಿಯು ಇನ್ನಷ್ಟು ವಿಸ್ತರಿಸಿತು. (ಇದನ್ನು ನಾವು ಅವರ ಪತ್ರಗಳು ಮತ್ತು ಅವರ ನೋಟ್‌ಬುಕ್ ನೋಡಿದರೆ ತಿಳಿಯಬಹುದು.): ಮಾರ್ಕ್ಸ್ ಸಾಲದ ಮತ್ತು ಬಿಕ್ಕಟ್ಟಿನ ಆಳವಾದ ವಿಶ್ಲೇಷಣೆ ನೀಡಬಯಸಿದ್ದರು ಹಾಗೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ‘ಮೆಟಬಾಲಿಸಂ‘ಗೆ (ಜೈವಿಕ ಪ್ರಚನಕ್ರಿಯೆ) ಹೆಚ್ಚಿನ ಗಮನ ಕೊಡಬೇಕೆಂದು ಬಯಸಿದ್ದರು. ಈಗ ಪರಿಸರ ವಿಜ್ಞಾನ (ಇಕಾಲಜಿ) ಎಂದು ಕರೆಯಲಾಗುತ್ತಿರುವುದಕ್ಕೆ ಮಾರ್ಕ್ಸ್ ಆ ರೀತಿ, ಮೆಟಬಾಲಿಸಂ ಎಂದು ಕರೆದಿದ್ದರು. ಮಾರ್ಕ್ಸ್ ತಮ್ಮ ನೋಟ್‌ಬುಕ್ಕಿನಲ್ಲಿ ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದರು, ಆದರೆ, ಕ್ಯಾಪಿಟಲ್‌ನ ಮುಂದಿನ ಹಸ್ತಪ್ರತಿಯಲ್ಲಿ ಅವುಗಳನ್ನು ಸೇರಿಸುವುದಕ್ಕಿಂತ ಮುಂಚೆಯೇ ತೀರಿಕೊಂಡರು. ಮಾರ್ಕ್ಸ್ ನಿಧನದ ನಂತರ ಏಂಜೆಲ್ಸ್ ಅವರು ಕ್ಯಾಪಿಟಲ್‌ನ ಎರಡನೆಯ ಮತ್ತು ಮೂರನೆಯ ಸಂಪುಟವನ್ನು ಸಂಪಾದಿಸಿದಾಗ, ಅವರಿಗೆ ಮಾರ್ಕ್ಸ್‌ನ ನೋಟ್‌ಬುಕ್ಕಿನಲ್ಲಿದ್ದ ಎಲ್ಲಾ ಯೋಜನೆಗಳು ಮತ್ತು ಮಾಹಿತಿಗಳನ್ನು ಬಳಸಲು ಸಾಧ್ಯವಾಗಲಿಲ್ಲ. ಹಸ್ತಪ್ರತಿಯಲ್ಲಿ ಮುಂಚೆಯೇ ಇದ್ದದ್ದನ್ನು ಮಾತ್ರ ಬಳಸಲು ಏಂಜೆಲ್ಸ್‌ಗೆ ಸಾಧ್ಯವಾಯಿತು.

ಆದಾಗ್ಯೂ, ಅಪೂರ್ಣವಾಗಿರುವ ‘ಕ್ಯಾಪಿಟಲ್’ ಕೂಡ ಬಂಡವಾಳಶಾಹಿ ವ್ಯವಸ್ಥೆಯ ಬಗ್ಗೆ ಇರುವ ಅತ್ಯಂತ ಆಳವಾದ ವಿಶ್ಲೇಷಣೆಯಾಗಿದೆ. ಇದು ಬ್ರಿಟಿಷ್ ಬಂಡವಾಳಶಾಹಿಯ ವಿಶ್ಲೇಷಣೆಯಲ್ಲ, ಇದು 19ನೇ ಶತಮಾನದ ಸ್ಪರ್ಧಾತ್ಮಕ ಬಂಡವಾಳಶಾಹಿಯ ವಿಶ್ಲೇಷಣೆಯೂ ಅಲ್ಲ. ಇದು ಎಲ್ಲಾ ರೀತಿಯ ಬಂಡವಾಳಶಾಹಿಯ ಮೂಲ ರಚನೆಗಳ ವಿಶ್ಲೇಷಣೆಯಾಗಿದೆ. ಮೂರನೆಯ ಸಂಪುಟದ ಕೊನೆಯಲ್ಲಿ, ಏಕೆ ಕೆಲವು ನಿರ್ದಿಷ್ಟ ವಿಷಯಗಳನ್ನು ಬಿಟ್ಟಿದ್ದು ಎಂಬುದರ ಬಗ್ಗೆ ಮಾರ್ಕ್ಸ್ ಹೇಳಿದಂತೆ; ಬಂಡವಾಳವು ಕೈಗಾರಿಕೆಯ ಚಕ್ರಗಳನ್ನು ವಿಶ್ಲೇಷಿಸುವುದಿಲ್ಲ ಅಥವಾ ವಿಶ್ವದ ಮಾರುಕಟ್ಟೆಯ ಬಿಕ್ಕಟ್ಟುಗಳನ್ನೂ ವಿಶ್ಲೇಷಿಸುವುದಿಲ್ಲ ಏಕೆಂದರೆ, ‘ತನ್ನ ಆದರ್ಶದ ಸರಾಸರಿಯಲ್ಲಿ’ ಉತ್ಪಾದನೆಯ ಬಂಡವಾಳಶಾಹಿ ವಿಧಾನವನ್ನು ವಿಶ್ಲೇಷಿಸುತ್ತದೆ. ಬಂಡವಾಳಶಾಹಿಗೆ ಅಗತ್ಯವಾಗಿ ಸಂಬಂಧಿಸಿದ ಎಲ್ಲಾ ಗಳಿಗೆಗಳ ವಿಚಾರಣೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ: ’ಶ್ರಮದ ಉತ್ಪನ್ನಗಳನ್ನು ವಸ್ತುಗಳಂತೆ, ಶ್ರಮದ ಶಕ್ತಿಯನ್ನು ವಿಶೇಷ ವಸ್ತು ಎಂಬಂತೆ, ಕಾರ್ಮಿಕರ ಶೋಷಣೆಯ ಫಲವಾಗಿ ಬಂದಿರುವ ಹೆಚ್ಚುವರಿ ಮೌಲ್ಯವನ್ನು ಬಂಡವಾಳವು ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಬಗ್ಗೆ, ಹೆಚ್ಚುವರಿ ಮೌಲ್ಯವನ್ನು ಹೆಚ್ಚಿಸಲು ಇರುವ ಮೂಲ ವಿಧಾನಗಳು ಹಾಗೂ ವರ್ಗ ಸಂಘರ್ಷಕ್ಕೆ ಅದರೊಂದಿಗೆ ಇರುವ ಸಂಬಂಧ, ಹೆಚ್ಚುವರಿ ಮೌಲ್ಯವನ್ನು ಲಾಭವಾಗಿ ಪರಿವರ್ತಿಸುವುದು ಹಾಗೂ ಆ ಲಾಭವನ್ನು ಸರಾಸರಿ ಲಾಭವನ್ನಾಗಿಸುವುದು, ಕ್ರೋಢಿಕರಣ ಮತ್ತು ಬಿಕ್ಕಟ್ಟಿನ ಟಿಪಿಕಲ್ ಬಂಡವಾಳಶಾಹಿ ನೀತಿಗಳು.’ ಈ ಎಲ್ಲ ವಿದ್ಯಮಾನಗಳನ್ನು ವಿಶ್ಲೇಷಿಸಲಾಗಿದೆ.

ಬಂಡವಾಳಶಾಹಿಯನ್ನು ವೈಜ್ಞಾನಿಕವಾಗಿ ಅರಿತುಕೊಳ್ಳಲು ನಮಗಿರುವ ಅತ್ಯುತ್ತಮ ದಾರಿ ‘ಕ್ಯಾಪಿಟಲ್’. ಶೋಷಣೆ, ಏರುತ್ತಿರುವ ಅಸಮಾನತೆ, ಪರಿಸರದ ವಿನಾಶ ಎಂಬುವುಗಳು ಆಕಸ್ಮಿಕ ಪರಿಣಾಮಗಳಲ್ಲದೇ ಇವುಗಳು ಬಂಡವಾಳಶಾಹಿ ವ್ಯವಸ್ಥೆಯ ಅಗತ್ಯವಾದ ಪರಿಣಾಮಗಳು ಎಂಬುದನ್ನು ತೋರಿಸಿಕೊಡಲು ಬಂಡವಾಳಶಾಹಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬೇಕು. ಬಂಡವಾಳಶಾಹಿಯ ವಿರುದ್ಧ ಹೋರಾಟ ಮಾಡಲು ಆ ವ್ಯವಸ್ಥೆಯ ವೈಜ್ಞಾನಿಕ ತಿಳುವಳಿಕೆಯ ಒಂದು ದೊಡ್ಡ ಆಯುಧ. ಆದರೆ ‘ಕ್ಯಾಪಿಟಲ್’ ಅನ್ನು ಓದುವುದಕ್ಕಿಂತ ಮುಂಚೆಯೇ ಪ್ರತಿ ವಾಕ್ಯವನ್ನೂ ನಂಬಿಬಿಡುವ ಆಸ್ತಿಕರಂತೆ ಅದನ್ನು ಓದಬಾರದು. ಮೊದಲನೇ ಸಂಪುಟದ ಮುನ್ನುಡಿಯಲ್ಲಿ ಮಾರ್ಕ್ಸ್ ಹೇಳುವುದೇನೆಂದರೆ, ‘ನಾನು ಪ್ರತಿಯೊಂದು ವೈಜ್ಞಾನಿಕ ವಿಮರ್ಶೆಯನ್ನು ಸ್ವಾಗತಿಸುತ್ತೇನೆ’ ಎಂದು. ಹಾಗೂ ಇದು ಒಂದು ಹಾರಿಕೆಯ ಟೊಳ್ಳು ಹೇಳಿಕೆಯಾಗಿರಲಿಲ್ಲ. ನಾವು ’ಕ್ಯಾಪಿಟಲ್’ ಅನ್ನು ವಿಮರ್ಶಾತ್ಮವಾಗಿ ಓದಬೇಕು, ಅದರಲ್ಲೂ ವಿಶೇಷವಾಗಿ ಈ ಪುಸ್ತಕದ ಅಪೂರ್ಣಗೊಂಡಿರುವ ಅಂಶವನ್ನು ಪರಿಗಣಿಸಿ ಅದನ್ನು ಓದಬೇಕು.

ಮಾರ್ಕ್ಸ್‌ನ ವಾರ್ಷಿಕೋತ್ಸವದಂದಾದರೂ, ಮಾರ್ಕ್ಸ್ ಅವರು ‘ಕ್ಯಾಪಿಟಲ್’ಅನ್ನು ಬರೆಯಲು ಅತ್ಯಂತ ದೊಡ್ಡ ಬೆಲೆಯನ್ನು ತೆರಬೇಕಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ತನ್ನ ಗೆಳೆಯನಿಗೆ ಬರೆದ ಪತ್ರದಲ್ಲಿ ಮಾರ್ಕ್ಸ್ ಹೀಗೆ ಬರೆಯುತ್ತಾರೆ,; ” ಈ ಕ್ಯಾಪಿಟಲ್ ಪುಸ್ತಕ್ಕೋಸ್ಕರ, ನನ್ನ ಆರೋಗ್ಯ, ಸಂತೋಷ ಮತ್ತು ಕುಟುಂಬವನ್ನು ತ್ಯಾಗ ಮಾಡಿದ್ದೇನೆ’ ಎಂದು. ಹಾಗೂ ಇದು ಅತಿಶಯೋಕ್ತಿಯೇನಾಗಿರಲಿಲ್ಲ. ಮಾರ್ಕ್ಸ್ ಕ್ಯಾಪಿಟಲ್ ಬರೆಯುತ್ತಿರುವ ಹೆಚ್ಚಿನ ಸಮಯದಲ್ಲಿ ಅವರು ಮತ್ತು ಅವರ ಕುಟುಂಬ ತೀವ್ರ ಸಮಸ್ಯೆಯಲ್ಲಿ ಮುಳುಗಿತ್ತು. ಅವರ ನಾಲ್ಕು ಮಕ್ಕಳು ಅದೇ ಸಮಯದಲ್ಲಿ ತೀರಿಕೊಂಡರು. ಸಮಯಕ್ಕೆ ಮುಂಚೆಯೇ ಮಾರ್ಕ್ಸ್ ಮತ್ತು ಅವರ ಹೆಂಡತಿ ವೃದ್ಧರಾದರು. ಆದಾಗ್ಯೂ, ತನ್ನ ದಾರಿಯಲ್ಲಿ ಮುಂದುವರೆಯಬೇಕು ಎಂಬುದರ ಬಗ್ಗೆ ಮಾರ್ಕ್ಸ್ ಅವರಿಗೆ ಸಂಪೂರ್ಣ ನಂಬಿಕೆಯಿತ್ತು. ತನ್ನ ಗೆಳೆಯನಿಗೆ ಬರೆದ ಪತ್ರದಲ್ಲಿ ಮುಂದುವರೆಸುತ್ತ, “ಈ ಪ್ರ್ಯಾಕ್ಟಿಕಲ್ ಜನರು ಮತ್ತು ಅವರ ವಿವೇಕದ ಬಗ್ಗೆ ನನಗೆ ನಗು ಬರುತ್ತೆ. ಯಾರೋ ಒಬ್ಬರು ತಾನು ಎತ್ತು ಆಗಲು ಬಯಸಿದರೆ ಖಂಡಿತವಾಗಿಯೂ ಆಗಬಹುದು, ಮಾನವೀಯತೆಯ ನೋವುಗಳಿಗೆ ಬೆನ್ನು ಮಾಡಿ, ತನ್ನ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ಆದರೆ, ನನ್ನ ಪುಸ್ತಕವನ್ನು ಪೂರ್ಣಗೊಳಿಸದೇ, ಕಡೇಪಕ್ಷ ಅದರ ಹಸ್ತಪ್ರತಿಯನ್ನಾದರೂ ಮುಗಿಸದೇ ಕೈಬಿಟ್ಟಿದ್ದರೆ, ನಾನು ನನ್ನನ್ನು ಪ್ರ್ಯಾಕ್ಟಿಕಲ್ ಅಲ್ಲದ ವ್ಯಕ್ತಿ ಎಂದು ಪರಿಗಣಿಸಬೇಕಾಗುತ್ತಿತ್ತು.”

ಮೈಕೆಲ್ ಹೈನ್ರಿಕ್

ಮೈಕೆಲ್ ಹೈನ್ರಿಕ್
ಮೈಕೆಲ್ ರಾಜಕೀಯ ಚಿಂತಕ. ಮಾರ್ಕ್ಸ್‌ನ ೩ ಸಂಪುಟಗಳ ಕ್ಯಾಪಿಟಲ್ ಬಗ್ಗೆ ಬರೆದಿರುವ ’ಆನ್ ಇಂಟ್ರೊಡಕ್ಷನ್ ಟು ಥ್ರೀ ವಾಲ್ಯೂಮ್ಸ್ ಆಫ್ ಮಾರ್ಕ್ಸ್‌ಸ್ ಕ್ಯಾಪಿಟಲ್ ಮತ್ತು ’ಕಾರ್ಲ್ ಮಾರ್ಕ್ಸ್ ಅಂಡ್ ಬರ್ಥ್ ಆರ್ಫ ಮಾಡರ್ನ್ ಸೊಸೈಟಿ’ ಅವರು ರಚಿಸಿರುವ ಪುಸ್ತಕಗಳಲ್ಲಿ ಕೆಲವು.

ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಬಾಬಾಸಾಹೇಬರ ಪುಸ್ತಕಗಳ ಪ್ರಕಟನೆಗೂ ಅವರ ಜೀವನದಷ್ಟೇ ಕಲ್ಲು ಮುಳ್ಳಿನ ಹಾದಿ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮೈಕೆಲ್ ಹೈನ್ರಿಕ್
+ posts

LEAVE A REPLY

Please enter your comment!
Please enter your name here