Homeಚಳವಳಿಸರ್ವಜನಾಂಗದ ಶಾಂತಿಯ ತೋಟದಲ್ಲಿ ಕೂಡುಬದುಕಿನ ನೆನಪು : ರಹಮತ್‌ ತರೀಕೆರೆ

ಸರ್ವಜನಾಂಗದ ಶಾಂತಿಯ ತೋಟದಲ್ಲಿ ಕೂಡುಬದುಕಿನ ನೆನಪು : ರಹಮತ್‌ ತರೀಕೆರೆ

ಅಮೀರಬಾಯಿ ಮತ್ತು ಗೋಹರಬಾಯಿ ಕರ್ನಾಟಕಿಯವರು ತಮ್ಮ ಬಾಳಿಡೀ ರಾಮ ಮತ್ತು ಕೃಷ್ಣರ ಗೀತೆಗಳನ್ನು ಹಾಡಿದರು. ಕರ್ನಾಟಕಕ್ಕೆ ಮತ್ತೆಮತ್ತೆ ಬರುವ ರಾಜಸ್ಥಾನದ ಸೂಫಿಗಾಯಕ ಮುಖ್ತಿಯಾರಲಿ, ತಮ್ಮ ಗೋಷ್ಠಿಯನ್ನು ಆರಂಭಿಸುವುದೇ ಅಮೀರ್‍ಖುಸ್ರೊರ ಹರಿಓಂ ರಚನೆಯ ಮೂಲಕ. ಇವೆಲ್ಲವೂ ಯಾರಿಗೂ ಹೆದರಿ ಅಥವಾ ಮೆಚ್ಚಿಸಲು ಮಾಡುವ ಕಸರತ್ತುಗಳಲ್ಲ. ವಿಧಿನಿಷೇಧದ ಅಂಕೆಯನ್ನು ಮೀರಿ ನಡೆಸುವ ಕಲಾಲೋಕದ ಸೀಮೋಲ್ಲಂಘನ.

- Advertisement -
- Advertisement -

ನಿಜ, ಭಾರತದಲ್ಲಿ ಮತೀಯ ದ್ವೇಷವನ್ನು ಹುಟ್ಟಿಸುವುದು ಸುಲಭ. ಮತೀಯವಾದ ನಂಜೇರಿ ಜನ ವಿಭಜನೆಗೊಳ್ಳುವುದು, ಬಡಿದಾಡುತ್ತಾರೆ. ಆದರೆ ಅವರು ತಮ್ಮ ಸಹಜ ಮಾನವ ಸಂಬಂಧಗಳ ಸ್ಥಿತಿಗೆ ಬೇಗನೆ ಮರಳುವರು; ಅದರಲ್ಲೂ ಅವರ ಅಸ್ತಿತ್ವವನ್ನು ಪ್ರಶ್ನಿಸುವ ಸನ್ನಿವೇಶ ಎದುರಾದಾಗ ಜಾತಿಮತ ಮೀರಿ ಒಗ್ಗೂಡುವರು. ಮತೀಯ ದ್ವೇಷವನ್ನು ದೀರ್ಘಕಾಲ ಜೀವಂತವಾಗಿ ಇಡಲಾಗದು. ಸಂಘರ್ಷಗಳು ತಾತ್ಕಾಲಿಕ; ಸಹಬಾಳುವೆ ನಿರಂತರ. ಇದಕ್ಕೆ ಕಾರಣ, ಈ ನೆಲದೊಳಗೆ ಜಾತಿಭೇದದ ಲಿಂಗಭೇದದ ಧರ್ಮದ್ವೇಷದ ಪಂಥಸಂಘರ್ಷದ ಚರಿತ್ರೆ ಇರುವಂತೆಯೇ, ಜಾತಿಲಿಂಗಧರ್ಮ ಪಂಥಗಳ ಬೇಲಿ ದಾಟಿ ಬಾಳನ್ನು ಕಟ್ಟಿಕೊಳ್ಳುವ ಸಂಸ್ಕೃತಿಯೂ ಬೆನ್ನಹಿಂದಿನ ಬೆಳಕಾಗಿರುವುದು.

ಪೌರತ್ವದ ಪ್ರಶ್ನೆಯನ್ನು ಇಟ್ಟುಕೊಂಡು ಭಾರತವೀಗ ಸಂಕಟದ ಸನ್ನಿವೇಶದಲ್ಲಿ ಹಾಯುತ್ತಿದೆ. ದೇಶವು ಎರಡು ಬಾರಿ ದೊಡ್ಡಮಟ್ಟದಲ್ಲಿ ಮತೀಯ ದಂಗೆಗಳಲ್ಲಿ ನೋವುಂಡಿತು. 1. ದೇಶವಿಭಜನೆಯ ಸನ್ನಿವೇಶದಲ್ಲಿ. 2. ಮಸೀದಿ-ಮಂದಿರ ಪ್ರಕರಣದಲ್ಲಿ. ಅದರಲ್ಲೂ ಈಚೆಗೆ ಸಂಘಫರಿವಾರವು ಭಾರತದ ಎಲ್ಲೆಡೆ ಅಧಿಕಾರ ಪಡೆದುಕೊಂಡ ಬಳಿಕ, ಮುಸ್ಲಿಮರನ್ನು ಮತ್ತು ಇಸ್ಲಾಮನ್ನು ಕುರಿತು ಜನಮಾನಸದಲ್ಲಿ ಗಾಢವಾದ ಅನುಮಾನ ದ್ವೇಷವನ್ನು ಬೇರೂರಿಸಲಾಗಿದೆ. ಸಾಬರನ್ನು ಹದ್ದುಬಸ್ತಿನಲ್ಲಿಡುವ ಮೋದಿ-ಶಾ ಅವರ ಕ್ರಮಗಳು ರಾಷ್ಟ್ರನಿರ್ಮಾಣದ ದಿಟ್ಟತನ ಎನಿಸಿಕೊಂಡಿವೆ. ಈ ದಿಟ್ಟತನದ ಭಾಗವಾಗಿಯೇ ಅವರು ಮತೀಯ ವಿಭಜನೆ ಮಾಡುವ, ಸಂವಿಧಾನದ ಮೂಲಭೂತ ತತ್ವಕ್ಕೆ ವಿರುದ್ಧವಾದಿ ಪೌರತ್ವ ತಿದ್ದುಪಡಿ ಕಾಯಿದೆ ತಂದರು. ಪೌರತ್ವ ನೊಂದಣಿ ಕಾನೂನನ್ನು ಜಾರಿಗೊಳಿಸಲು ಆಲೋಚಿಸುತ್ತಿರುವರು. ಪೌರತ್ವ ಸಾಬೀತುಪಡಿಸಲಾರದವರಿಗೆಂದು ಕೂಡುದೊಡ್ಡಿಗಳನ್ನು ಕಟ್ಟುತ್ತಿರುವರು. ಆದರೆ ಈ ವಿದ್ಯಮಾನವು ಅವರು ಊಹಿಸಿದ್ದಕ್ಕೆ ವಿರುದ್ಧವಾದ ತಿರುವನ್ನು ಪಡೆದುಕೊಂಡಿದೆ. ಜನ ಮತೀಯವಾಗಿ ಭಾಗವಾಗುವ ಬದಲು ಒಗ್ಗೂಡಿ ಬೀದಿಗಿಳಿದಿದ್ದಾರೆ. ಕಾರಣ, ಪೌರತ್ವ ಕಾಯಿದೆಯಿಂದ ಹೆಚ್ಚು ವೇದನೆಗೊಳಗಾಗುವವರು ಮುಸ್ಲಿಮರು. ಆದರೂ ಇದು ಎಲ್ಲ ಭಾರತೀಯರು ತಾವು ಈ ದೇಶಸ್ಥರು ಸಾಬೀತುಪಡಿಸಲು ದಾಖಲೆಪತ್ರ ಇಟ್ಟುಕೊಂಡು ಅಧಿಕಾರಿಗಳ ಎದುರು ಪಾಳಿನಿಲ್ಲುವಂತೆ ಮಾಡುತ್ತದೆ. ಇದರ ಕಲ್ಪನೆಯೇ ಜನರನ್ನು ಕೆರಳಿಸಿದೆ. ಹೀಗಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಒಗ್ಗೂಡಿದಂತೆ ಈಗ ಜನ ಧರ್ಮಾತೀತವಾಗಿ ಒಗ್ಗೂಡಿದ್ದಾರೆ. ಅದರಲ್ಲೂ ದಾಖಲೆ ಪತ್ರವಿಲ್ಲದ ಬಡವರು ಆದಿವಾಸಿಗಳು ಮಲೆತು ನಿಂತಿದ್ದಾರೆ.

ಇಂಥ ಚಾರಿತ್ರಿಕ ಸಂಕಟದ ಹೊತ್ತಲ್ಲಿ ಕರ್ನಾಟಕದ ಧರ್ಮ ಸಾಮರಸ್ಯದ ಪರಂಪರೆಯನ್ನು ಸ್ಮರಿಸುವುದು ಈ ಲೇಖನದ ಇರಾದೆ. ಈ ಪರಂಪರೆಯು ಸಾಹಿತ್ಯದಲ್ಲಿ, ಸಂಗೀತದಲ್ಲಿ, ಗುರುಪಂಥಗಳಲ್ಲಿ, ಜನಬದುಕಿನಲ್ಲಿ ನೆಲೆಸಿವೆ.

ಸಂಗೀತವು ಕೂಡುಬಾಳ್ವೆಯ ಮುಖ್ಯ ಕಲಾನಿದರ್ಶನ. ಭಾಷೆಗಿಂತ ನಾದವನ್ನು ನೆಚ್ಚುವ ಅದಕ್ಕೆ ಧರ್ಮಜಾತಿಗಳ ಸೀಮೆಗಳನ್ನು ಉಲ್ಲಂಘಿಸುವುದು ಸುಲಭ ಕೂಡ. ಅದರಲ್ಲೂ ಸಂಗೀತವನ್ನು ಹಿಂದುಮುಸ್ಲಿಮರ ಕೂಡುಬಾಳಿನ ಹಿನ್ನೆಲೆಯಿಲ್ಲದೆ ಅರಿಯಲಾಗದು. ಹಿಂದೂಸ್ತಾನಿ ಸಂಗೀತದ ಪ್ರಮಥ ಅಮೀರ್‍ಖುಸ್ರೋ ಸ್ವತಃ ಅಂತರ್ ಧರ್ಮೀಯ ದಂಪತಿಗಳ ಕೂಸು. ದೆಹಲಿಯ ಸೂಫಿ ನಿಜಾಮುದ್ದೀನ್ ಚಿಸ್ತಿಯವರ ಅನುಯಾಯಿ. ಅವನಿಂದ ಶುರುವಾದ ಈ ಸಂಗೀತ ಪರಂಪರೆ, ಭಾರತದ ಜಾತ್ಯತೀತ ಗುರುಶಿಷ್ಯರ ಪರಂಪರೆಗೆ ಮೂಲವಾಯಿತು.

ಕರ್ನಾಟಕದಲ್ಲಿ ಸರಸ್ವತಿ ಆರಾಧಕನಾಗಿದ್ದ ಬಿಜಾಪುರದ ಸುಲ್ತಾನ ಎರಡನೇ ಇಬ್ರಾಹಿಂ ತನ್ನ `ಕಿತಾಬೆನೌರಸ’ ಎಂಬ ಸಂಗೀತ ಕೃತಿಯನ್ನು ಗಣಪತಿ ಸ್ಮರಣೆಯೊಂದಿಗೆ ಆರಂಭಿಸುವುದು ಈ ಪರಂಪರೆಯ ಭಾಗವಾಗಿಯೇ. ಉಸ್ತಾದ್ ಅಬ್ದುಲ್ ಕರೀಂಖಾನರು ಕುಂದಗೋಳದ ಬ್ರಾಹ್ಮಣ ಹಿನ್ನೆಲೆಯ ಸವಾಯಿ ಗಂಧರ್ವರಿಗೆ (ಭೀಮಸೇನರ ಗುರುವಿಗೆ) ಸಂಗೀತ ಕಲಿಸಿದ್ದು; ಮಲ್ಲಿಕಾರ್ಜುನ ಮನಸೂರರು ಉಸ್ತಾದ್ ಬುರ್ಜಿಖಾನರಲ್ಲಿ ಕಲಿತಿದ್ದು ಇದರ ಮುಂದುವರಿಕೆಯೆ. ಸಾವಿರಾರು ಜನಪದ ಗಾಯಕರು/ನಟರು ಈ ಧರ್ಮಾತೀತ ಕಲಾಪರಂಪರೆಯನ್ನು ಮುಂದುವರೆಸಿದರು. ಅಪ್ಪಾಸಾಬ ನದಾಫರು ಕೃಷ್ಣಪಾರಿಜಾತ ರಂಗಭೂಮಿಯ ಅದ್ಭುತ ಗಾಯಕನಟರಾಗಿದ್ದರು. ಅಮೀರಬಾಯಿ ಮತ್ತು ಗೋಹರಬಾಯಿ ಕರ್ನಾಟಕಿಯವರು ತಮ್ಮ ಬಾಳಿಡೀ ರಾಮ ಮತ್ತು ಕೃಷ್ಣರ ಗೀತೆಗಳನ್ನು ಹಾಡಿದರು. ಕರ್ನಾಟಕಕ್ಕೆ ಮತ್ತೆಮತ್ತೆ ಬರುವ ರಾಜಸ್ಥಾನದ ಸೂಫಿಗಾಯಕ ಮುಖ್ತಿಯಾರಲಿ, ತಮ್ಮ ಗೋಷ್ಠಿಯನ್ನು ಆರಂಭಿಸುವುದೇ ಅಮೀರ್ ಖುಸ್ರೊರ ಹರಿಓಂ ರಚನೆಯ ಮೂಲಕ. ಇವೆಲ್ಲವೂ ಯಾರಿಗೂ ಹೆದರಿ ಅಥವಾ ಮೆಚ್ಚಿಸಲು ಮಾಡುವ ಕಸರತ್ತುಗಳಲ್ಲ. ವಿಧಿನಿಷೇಧದ ಅಂಕೆಯನ್ನು ಮೀರಿ ನಡೆಸುವ ಕಲಾಲೋಕದ ಸೀಮೋಲ್ಲಂಘನೆ.

ಮುಕ್ತಿಯಾರ್‌ ಅಲಿ ಗಾಯನ

ಅಧ್ಯಾತ್ಮ-ಅನುಭಾವಗಳು ಕೂಡುಬಾಳ್ವೆಯ ದಾರ್ಶನಿಕ ನಿದರ್ಶನಗಳಾಗಿವೆ. ಇವು ದೀಕ್ಷೆಕೊಡುವಾಗ ಅರಿವನ್ನು ಹಂಚುವಾಗ ಮತಜಾತಿಯ ಗೋಡೆಯನ್ನು ಮುರಿಯುತ್ತವೆ. ಇದಕ್ಕೆ ರಾಮದಾಸರ ಶಿಷ್ಯನಾದ ಕಬೀರ, ಸೂಫಿ ಚಾಂದ್ ಬೋಧಾಳೆಯವರ ಶಿಷ್ಯ ತುಕಾರಾಮ, ಕಳಸದ ಗೋವಿಂದಭಟ್ಟರ ಶಿಷ್ಯ ಶರೀಫ, ಕಡಕೋಳ ಮಡಿವಾಳಪ್ಪನ ಶಿಷ್ಯ ಮೋಟ್ನಳ್ಳಿ ಹುಸೇನಸಾಬ್, ಅಮೀನುದ್ದೀನ ಚಿಸ್ತಿಯವರ ಶಿಷ್ಯ ಶಿರಹಟ್ಟಿ ಫಕೀರೇಶ, ಗುಡೇಕಲ್ಲಿನ ಅಲ್ಲಿಪೀರಾರ ಶಿಷ್ಯ ಶಿಲವೇರಿ ಶಿವಪ್ಪ- ಹೀಗೆ ನೂರಾರು ನಿದರ್ಶನ ಕೊಡುತ್ತ ಹೋಗಬಹುದು. ಪ್ರೇಮತತ್ವವನ್ನು ತನ್ನ ಬುನಾದಿಯಾಗಿಸಿಕೊಂಡ ಸೂಫಿಪಂಥವು ಜಾತಿಮತಾತೀತವಾಗಿ ತನ್ನ ಕಾಣ್ಕೆಯನ್ನು ಸಮುದಾಯಗಳಲ್ಲಿ ಹಂಚಿತು. ಅವರಿಗೆ ನಡೆದುಕೊಳ್ಳುವ ಜನಸಮುದಾಯಗಳ ಇದು ಬಾಳತತ್ವವಾಗಿರುವುದನ್ನು ನೋಡಬಹುದು.

ತತ್ವಪದಕಾರರಲ್ಲಿ ಮತ್ತು ಅದರ ಹಾಡಿಕೆಯಲ್ಲಿ ಮುಸ್ಲಿಮರ ಸಂಖ್ಯೆ ಅಪಾರ. ದರ್ಗಾ ಪರಂಪರೆಯಲ್ಲಿ ಎಲ್ಲ ಮತಧರ್ಮದವರೂ ಕಾಣಸಿಗುವರು. ಸೂಫಿ ಪ್ರಭಾವಕ್ಕೆ ಒಳಗಾದ ಸಂತರ ಜಾತ್ರೆ ಉತ್ಸವಗಳಲ್ಲಿ ಸಹಬಾಳುವೆಯ ಸಂಕೇತಗಳಿವೆ. ತಿಂತಿಣಿಯ ಮೋನಪ್ಪನವರ ನಿತ್ಯದ ಪೂಜೆಯಲ್ಲಿ ಪಠಿಸುವ ಪರಾಕುಮಂತ್ರ ಸ್ವಾರಸ್ಯಕರವಾಗಿದೆ. “ಏಕಲಾಕ್ ಐಸೀಹಜಾರ್ ಪಾಂಚೋಪೀರ್ ಪೈಗಂಬರ್; ಜಿತಾಪೀರ್ ಮೌನುದ್ದೀನ್ ಕಾಶೀಪತಿ ಗಂಗಾಧರ ಮಹಾದೇವ”; ಮಹಮ್ಮದರ ಮುನ್ನ ಒಂದುಲಕ್ಷದ 80 ಸಾವಿರ ಜನ ಪ್ರವಾದಿಗಳು ಬಂದುಹೋದರೆಂದು ಕುರಾನು ಹೇಳುತ್ತದೆ. ಅವರಲ್ಲಿ ಮೌನುದ್ದೀನ್ ಕೂಡ ಒಬ್ಬರು ಎಂದು ಈ ಮಂತ್ರ ಹೇಳುತ್ತಿದೆ. ಎಲ್ಲ ಧರ್ಮಗ್ರಂಥಗಳ ಸಾರವನ್ನು ಅದರಲ್ಲೂ ಉಪನಿಷತ್ತು ಸೂಫಿಸಂ ಕುರಾನುಗಳಲ್ಲಿ ಸಮಾನತತ್ವವನ್ನು ಗುರುತಿಸುವ ಕೆಲಸವನ್ನು ಮೊದಲಿಗೆ ಮಾಡಿದವನು ಮೊಗಲ್ ರಾಜಕುಮಾರ ದಾರಾಶುಕೊ. ಅವನ ಪರಂಪರೆಯನ್ನು ಮದನಪಲ್ಲಿಯ ಶ್ರೀಎಂ (ಮಮ್ತಾಜಲಿಖಾನ್) ಹಾಗೂ ಮಹಾಲಿಂಗಪುರದ ಇಬ್ರಾಹಿಂ ಸುತಾರ ಮುಂತಾದ ಗುರುಪಂಥದ ಸಾಧಕರಲ್ಲಿ ಈಗಲೂ ಕಾಣಬಹುದು.

ಮೊಹರಂ ಆಚರಣೆ

ಕರ್ನಾಟಕದ ಅನೇಕ ಉತ್ಸವಗಳು ಧರ್ಮದ ಗಡಿಮೀರಿ ರೂಪುಗೊಂಡಿವೆ. ಅವುಗಳಲ್ಲಿ ಮೊಹರಂ ಸಹ ಒಂದು. ಪೈಗಂಬರರ ಮೊಮ್ಮಗನ ಹತ್ಯೆಯ ಶೋಕಾಚರಣೆಗೆ ಹುಟ್ಟಿಕೊಂಡ ಈ ಆಚರಣೆ, ಅಲಾವಿಕುಣಿತ. ಮೊಹರಂಪದ, ಸಕ್ಕರೆ ಓದಿಸುವಿಕೆ ಮುಂತಾದ ಪದ್ಧತಿಗಳಿಗೆ ಕಾರಣವಾಗಿದೆ. ನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಮೊಹರಂ ಕವಿಗಳಿದ್ದು, ಅವರು ಹಾಡುಗಳ ವಸ್ತು ಮಹಾಭಾರತ ರಾಮಾಯಣ ಶಿವಪುರಾಣ ಇಸ್ಲಾಂ ಚರಿತ್ರೆ ಪುರಾಣಗಳಿಂದ ತೆಗೆದಿದ್ದಾಗಿದೆ.
ಧರಮಕ ಸತ್ತವರಾ ಸಿಗತಾರ ಕೋಟಿಗೊಬ್ಬ ಜನರಾ |
ಮುಸಲಮಾನ ಮಂದ್ಯಾಗ ದೊರೀತಾರ ಹುಸೇನ ಸಾಹೇಬರಾ||
ಯಜೀದನವತಾರಾ ನಡೆಸಿತೊ ಅಧಿಕಾರ ಭರಪೂರಾ
ನೋಡಲಾಗದೆ ಎದುರಾಗಿ ನಿಂತಾರೊ ಹಜರತ ಹುಸೇನರಾ
ಲಡಾಯಿ ತಯ್ಯಾರಾ ಆದಾರ ಒಂಟೆ ಮ್ಯಾಲೆ ಸ್ವಾರಾ
ಹೊಂಟ ನಿಂತಾರೊ ಕರ್ಬಲಾ ಭೂಮಿಗೆ ಬಂಧುಬಳಗ ಪೂರಾ
ಆರಾಣ್ಯದಾಗವರಾ ಕಾಣದ ಮೂರ ದಿವಸ ನೀರಾ
ಕುಡದಾರೊ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ

ಮಹಾಭಾರತದ ಕರ್ಣ ಅಭಿಮನ್ಯುವಿನ ದುಃಖಕ್ಕೆ ಮಿಡಿದಂತೆಯೇ ಇದಿದೆ. ದೂರದೇಶದಲ್ಲಿ ಸಹಸ್ರಮಾನದ ಹಿಂದೆ ಕೊಲೆಗೊಂಡವರ ಸಾವಿನ ದುಗುಡವನ್ನು ತನ್ನದೆಂದು ಹಾಡುವ ಮನಸ್ಸು ಸುಂದರವಾದುದು. ಮಾನವೀಯವಾದುದು.

ಇಂಥ ಕಲೆ, ಅಧ್ಯಾತ್ಮ ಆಚರಣೆಗಳ ಲೋಕವನ್ನು ರೂಪಿಸಿರುವುದು ಜನರ ಕೂಡುಬದುಕು. ನಿತ್ಯ ಬದುಕಿನಲ್ಲಿ ಸುಖದುಃಖ ಹಂಚಿಕೊಂಡು ಬದುಕುವ ಅವರ ವರ್ತನೆಗಳು. ಸಾರಾ ಅಬೂಬಕರ್ ತಮ್ಮ ತಾಯಿಯ ಬಗ್ಗೆ ಹೇಳುವ ಕತೆಯಿಲ್ಲಿ ನೆನಪಾಗುತ್ತದೆ. ಅವರ ಪಕ್ಕದ ನಾಯರ್ ಮನೆಯಲ್ಲಿ ಗರ್ಭಿಣಿ ಪ್ರಸವದ ನೋವನ್ನು ತಿನ್ನುವಾಗ, ಸಾರಾರ ತಾಯಿ ಕುರಾನನ್ನು ತೆಗೆದುಕೊಂಡು ಹೋಗಿ ಅವರ ಮನೆಯಲ್ಲಿ ಕೂತು ಓದತೊಡಗುತ್ತಾರೆ. ಹಾಗೆ ಓದಿದರೆ ಹೆರಿಗೆ ಸಲೀಸಾಗುತ್ತದೆ ಎಂದು ಅವರ ನಂಬಿಕೆ. ಇಂಥ ಮಾನವೀಯ ಸನ್ನಿವೇಶಗಳನ್ನು ನಮ್ಮ ಸಾಹಿತ್ಯ ಜತನದಿಂದ ಕಟ್ಟಿಕೊಟ್ಟಿದೆ. ಹೀಗೆ ಕಟ್ಟಿಕೊಡುವುದು ನಾಡನ್ನು ಕಟ್ಟುವ ಕ್ರಮವೆಂದು ಅದು ಭಾವಿಸಿದೆ. ಕವಿ ಸನದಿಯವರು ಮುಂಬೈ ಬಿಟ್ಟು ನಿವೃತ್ತ ಜೀವನ ಕಳೆಯಲು ಕುಮುಟೆಗೆ ಬಂದರು. ದೊಡ್ಡ ಮನೆ ಖರೀದಿಸಿ ಅದನ್ನು ತಮಗೆ ಬೇಕಾದಂತೆ ಮಾರ್ಪಾಡಿಸಿಕೊಂಡರು. ಆದರೆ ಅಂಗಳದಲ್ಲಿದ್ದ ತುಳಸಿಕಟ್ಟೆಯನ್ನು ತೆಗೆಸಲಿಲ್ಲ. ಸಾಯುವ ತನಕವೂ ಅದಕ್ಕೆ ನೀರುಣಿಸುತ್ತಿದ್ದರು. ಅವರು ತುಳಸಿಪೂಜಕರಲ್ಲ. ಆದರೆ ಯಾರೊ ಶ್ರದ್ಧೆಯಿಂದ ಕಟ್ಟಿದ್ದನ್ನು ನಾವೇಕೆ ಕೆಡವಬೇಕು ಎಂಬ ಭಾವ.

ಇಂಥ ಭಾವಗಳೇ ಭಾರತವನ್ನು ಈಗಲೂ ಉಳಿಸಿರುವುದು. ಇಂತಹ ಸಾಮರಸ್ಯದ ಚರಿತ್ರೆ ನಮ್ಮ ವಿಷಮಯ ವರ್ತಮಾನವನ್ನು ಅರಿಯಲು ನೆರವಾಗುತ್ತದೆ. ಹಾಗೆ ಕಂಡರೆ ಮೇಲ್ಕಾಣಿಸಿದ ಬಹುತೇಕ ಸಂಗತಿಗಳು ಗತಿಸಿದ ಚರಿತ್ರೆಯಲ್ಲ. ಈಗಲೂ ನಾನಾರೂಪದಲ್ಲಿ ಜೀವಂತವಿರುವ ವರ್ತಮಾನವೇ ಆಗಿದೆ. ಮಂದಿ ವಿಭಿನ್ನ ಧರ್ಮ ಜಾತಿಗಳಲ್ಲಿ ಹುಟ್ಟಿರಬಹುದು. ಆದರೆ ಹೊಟ್ಟೆಪಾಡಿಗಾಗಿ ಅವರು ಮಾಡುವ ಕಾಯಕಗಳು ಅವರ ಮಾನವ ಸಂಬಂಧವನ್ನು ಬೆಸೆಯುತ್ತವೆ. ಅಸ್ತಿತ್ವದ ಪ್ರಶ್ನೆ ಬಂದಾಗ ಅವರನ್ನು ಜಾತಿ-ಮತ ಭಾಷೆ-ಪ್ರಾಂತೀಯತೆಗಳಿಂದ ಮೇಲೆದ್ದು ಮಿಡಿಯಲು ಒತ್ತಾಯಿಸುತ್ತವೆ. ಮತೀಯವಾದ-ಮೂಲಭೂತವಾದಗಳು ಅವರಲ್ಲಿ ನಂಜು ತುಂಬಬಹುದು. ಆದರೆ ನಂಜಿಳಿದು ಬದುಕು ಮತ್ತೆ ಸಹಜತೆಗೆ ಮರಳುತ್ತದೆ. ಜನ ಪರಸ್ಪರ ಮುಖನೋಡಿ ಮುಗುಳು ನಗುತ್ತಾರೆ. ಕೊಡುಕೊಳು ಆರಂಭಿಸುತ್ತಾರೆ. ಜನರ ಇಂಥ ಜಾತ್ಯತೀತ ಸಂಬಂಧಗಳ ಬುನಾದಿಯಿಲ್ಲದೆ ನೆಮ್ಮದಿಯ ನಾಡನ್ನು ಕಟ್ಟಲು ಸಾಧ್ಯವಿಲ್ಲ. ಎಂತಲೇ ಜನರನ್ನು ಧರ್ಮಜಾತಿಯಲ್ಲಿ ವಿಭಜಿಸುವ ಎಲ್ಲ ಸಂಪ್ರದಾಯ-ಕಾಯಿದೆಗಳನ್ನು ವಿರೋಧಿಸುವುದು ಅನಿವಾರ್ಯ. ಕಳೆದ ಹತ್ತುದಿನದ ಬೆಳವಣಿಗೆ ಕಂಡರೆ, ಭಾರತವು ಬ್ರಿಟಿಷರ ಕಾಲದಲ್ಲಿದ್ದ ಹೋರಾಟದ ಏಕತೆಯನ್ನೇ ತೋರುವಂತೆ ಕಾಣುತ್ತದೆ. ಇದಕ್ಕಾಗಿ ಭಾರತದ ಮುಸ್ಲಿಮರು ಮತೀಯ ಸೋಂಕಿಲ್ಲದ ಹಿಂದುಕ್ರೈಸ್ತ ಜೈನಬೌದ್ಧರ ಸ್ಪಂದನೆಯನ್ನು ಎಂದೂ ಮರೆಯುವಂತಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಅವರು ತಮ್ಮನ್ನು ಬಂಧಿಸಬಲ್ಲ ಧಾರ್ಮಿಕ ಮೂಲಭೂತವಾದದ ಕಟ್ಟುಗಳಿಂದ ಬಿಡಿಸಿಕೊಂಡು, ಜಾತ್ಯತೀತ ಕೂಡುಹೋರಾಟದ ಭಾಗವಾಗಬೇಕಿದೆ. ಇದೊಂದೇ ನಾಡನ್ನು ಎಲ್ಲರ ನೆಮ್ಮದಿಯ ತಾಣವಾಗಿ ಕಟ್ಟುವ ಉಪಾಯ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...